Thursday, 14 December 2017

ತತ್ವ ಸಿದ್ಧಾಂತಗಳ ಮಸಣವಾದ ರಾಜಕೀಯ ರಂಗ


1992 ರ  ಡಿಸಂಬರ್ ಆರನೇ ದಿನಾಂಕದಂದು ಅಯೋಧ್ಯೆಯ ಬಾಬರಿ ಮಸೀದಿ ಪತನಗೊಂಡ ಘಟನೆ ಮತ್ತೆ ನೆನಪಾಯಿತು. ಏಕೆಂದರೆ, ಅಲ್ಲಿನ ಪ್ರಾರ್ಥನಾ ಮಂದಿರದ ಗೋಡೆಗಳು ಉರುಳಿ ಇಪ್ಪತ್ತೈದು ವರ್ಷಗಳಾದವು. ಅಲ್ಲಿ ಕೇವಲ ಮಂದಿರದ ಗೋಡೆಗಳು ಮಾತ್ರ ನೆಲಕ್ಕೆ ಉರುಳಲಿಲ್ಲ, ಅದರ ಜೊತೆಗೆ ಭಾರತದಂತಹ ಬಹುಸಂಸ್ಕತಿಯ ನೆಲದಲ್ಲಿ ಮನುಷ್ಯ-ಮನುಷ್ಯರ ನಡುವೆ ಅನೇಕ ಶತಮಾನಗಳಿಂದ ಬೆಳದಿದ್ದ ನಂಬಿಕೆಯ ಮತ್ತು  ಸೌರ್ಹದತೆಯ ಗೋಡೆಗಳೂ ಸಹ ಉರುಳಿಬಿದ್ದವು.
ಕಳೆದವಾರ ದೆಹಲಿಯ ಪ್ರೆಸ್ ಆಫ್ ಇಂಡಿಯಾ ಸಂಸ್ಥೆಯ ಆವರಣದಲ್ಲಿ ಬಾಬರಿ ಮಸೀದಿ ಧ್ವಂಸದ ಘಟನೆಗೆ ಸಾಕ್ಷಿಯಾಗಿದ್ದ ದೇಶದ ಹಿರಿಯ ಪತ್ರಕರ್ತರು ಒಟ್ಟಾಗಿ ಆ ದಿನ ಘಟನೆಯಲ್ಲಿ ಮಾಧ್ಯಮದ ಈ ತಲೆಮಾರಿನ ಪತ್ರಕರ್ತರಿಗೆ ವಿವರಿಸುತ್ತಿದ್ದರು. ಈ ಘಟನೆಯನ್ನು ಪ್ರಥಮಬಾರಿಗೆ ಬಿತ್ತರಿಸುವುದರ ಮೂಲಕ ಅಂದಿನ ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಮತ್ತು ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿ.ಜೆ.ಪಿ.ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇವರ ಮುಖವಾಡವನ್ನು ಕಳಚಿಹಾಕಿದ್ದ ಬಿ.ಬಿ.ಸಿ. ಸಂಸ್ಥೆಯ ಭಾರತದ ಮುಖ್ಯ ವರದಿಗಾರ ಮಾರ್ಕ್‍ಟುಲಿ ಕೂಡ ಇದ್ದರು.
ಅಯೋಧ್ಯೆಯಲ್ಲಿ ಮಂದಿರ ಧ್ವಂಸವಾದ ದಿನದಂದು ವೈಯಕ್ತಿಕವಾಗಿ  ನಾನು ಅನುಭವಿಸಿದ ತಳಮಳ ಹಾಗೂ ಮನಸ್ಸಿನೊಳಗೆ ನನ್ನಷ್ಟಕ್ಕೆ  ನಾನು ಮಾತನಾಡಿಕೊಂಡ ಮಾತುಗಳು ಇನ್ನೂ ಹಸಿ ಹಸಿಯಾಗಿವೆ. “ಇನ್ನೆಂದೂ ಈ ದೇಶದಲ್ಲಿ ಹಿಂದು-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಅಥವಾ ಸೌಹಾರ್ಧತೆ ಸಾಧ್ಯವಿಲ್ಲ” ಎಂದುಕೊಂಡಿದ್ದೆ. ದುರಂತವೆಂದರೆ, ಅದು ನನ್ನ ಪಾಲಿಗೆ ನಿಜವಾಗುತ್ತಾ ಬಂದಿತು. ಕರ್ನಾಟಕ ಪ್ರಜ್ಞಾವಂತರ ಜಿಲ್ಲೆಗಳೆಂದು ಪರುಗಣಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡುತ್ತಿರುವಾಗ ನಾವು ದ್ವೇಷವನ್ನು ಬಿತ್ತಿ ದ್ವೇಷದ ಫಸಲನ್ನು ತೆಗೆಯುತ್ತಿದ್ದೆವೆ ಎನಿಸಿತು. ವಿದ್ಯಾವಂತರ ಹಾಗೂ  ಪ್ರಜ್ಞಾವಂತ ನಾಗರೀಕರ ಇಂದಿನ ಭಾರತಕ್ಕಿಂತ ಅಂದಿನ ಅಶಿಕ್ಷಿತ ಮುಗ್ದಸಮಾಜದ ಭಾರತವು ಎಷ್ಟೋ ಉತ್ತಮವಾಗಿತ್ತು ಎಂದು  ಇತ್ತೀಚೆಗೆ ಅನಿಸತೊಡಗಿದೆ.
1992 ರಲ್ಲಿ ನಾನು ಪತ್ರಿಕೋದ್ಯಮ ತೊರೆದು ಊರಿನಲ್ಲಿ ವಾಸವಾಗಿದ್ದೆ. ಅದಕ್ಕೊಂದು ಪ್ರಭಲವಾದ ಕಾರಣವೂ ಇತ್ತು. ನಮ್ಮದು ಅವಿಭಕ್ತ ಬೇಸಾಯ ಕುಟುಂಬವಾದ್ದರಿಂದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಪತ್ನಿ ಆಗರ್ಭ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಾಗಿ, ನನ್ನನ್ನು ಇಷ್ಟಪಟ್ಟು  ಹದಿನಾಲ್ಕು ವರ್ಷಗಳ ಕಾಲ ಹೋರಾಟ ಮಾಡಡುವುದರೊಂದಿಗೆ ತನ್ನ ಕುಟುಂಬದವರನ್ನು ಒಪ್ಪಿಸಿ, 1989ರಲ್ಲಿ  ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ನನ್ನನ್ನು ಕೈ ಹಿಡಿದು ನನ್ನ ಮನೆಯ ಹೊಸ್ತಿಲು ತುಳಿದಿದ್ದಳು. ನಮ್ಮ ಸಾಮಾನ್ಯ ರೈತ ಕುಟುಂಬದಲ್ಲಿ ಸೊಸೆಗೆ ತೊಂದರೆಯಾಗಬಾರದೆಂದು ತೀರ್ಮಾನಿಸಿದ್ದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಮನೆಯಲ್ಲಿ ಸ್ಥಿರ ದೂರವಾಣಿ, ಬಿ.ಪಿ.ಎಲ್, ಸ್ಯಾನ್ಯೊ ಎಂಬ ಟೇಪ್ ರೆಕಾರ್ಡರ್ ಹಾಗೂ ಆಗ ತಾನೆ ನನ್ನೂರಿಗೆ ಕೇವಲ್ ಜಾಲದ ಕಾಲಿಟ್ಟಿದ್ದ ಟಿ.ವಿ. ಸಂಪರ್ಕದಿಂದಾಗಿ ಕಪ್ಪು ಬಿಳುಪಿನ ಫಿಲಿಪ್ಸ್ ಕಂಪನಿಯ ಪುಟ್ಟದಾದ ಟಿ.ವಿ. ಹಾಗೂ ಪುಸ್ತಕ ಭಂಡಾರವನ್ನು ಇಟ್ಟುಕೊಂಡಿದ್ದೆ. ಕೇಬಲ್ ನಲ್ಲಿ ಹೆಚ್ಚು ಛಾನಲ್ ಗಳು ಇರದಿದ್ದ ಕಾರಣ ದೂರದರ್ಶನ, ಕಾರ್ಟೂನ್ ನೆಟ್‍ವರ್ಕ್, ನ್ಯಾಷನಲ್ ಜಿಯಾಗ್ರಪಿ, ಡಿಸ್ಕವರಿ ಮತ್ತು ಬಿ.ಬಿ.ಸಿ ಛಾನಲ್‍ಗಳು ಮಾತ್ರ ದೊರೆಯುತ್ತಿದ್ದವು.

1992 ರ ಡಿಸಂಬರ್ ನಾಲ್ಕರಂದು ಭಾರತೀಯ ಜನತಾ ಪಕ್ಷದ ನಾಯಕರಾದ ಎಲ್.ಕೆ.ಅಧ್ವಾನಿ, ಮುರಳಿಮನೋಹರ ಜೋಷಿ, ಉಮಾ ಭಾರತಿ ನೇತೃತ್ವದಲ್ಲಿ ನೆರೆಯ ರಾಜ್ಯಗಳಿಂದ ಅಯೋಧ್ಯೆಗೆ ಆಗಮಿಸಿದ್ದ ಸಾವಿರಾರು ಕರಸೇವಕರಿಂದ ಮಸೀದಿ ಧ್ವಂಸವಾಗುವ ಎಲ್ಲಾ ಸೂಚನೆಗಳು ದೊರೆತಿದ್ದವು. ಆಗಿನ ಕಾಂಗ್ರೇಸ್ ನಾಯಕರಾದ ಅರ್ಜುನ್ ಸಿಂಗ್ ಕೂಡ ಇದೇ ಸಂಶಯವನ್ನು ವ್ಯಕ್ತ ಪಡಿಸಿದ್ದರು. ( ಅವರು ಕೇಂದ್ರ ಗೃಹ ಸಚಿವರಾಗಿದ್ದರೆಂದು ನೆನಪು) ಆದರೆ, ಮಹಾ ಮೌನಕ್ಕೆ ಹೆಸರಾಗಿದ್ದ ಪ್ರಧಾನಿ ಪಿ.ವಿ.ನರಸಿಂಹರಾವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಣ್ ಅವರ ಮಾತನ್ನು ನಂಬಿ ಮೌನಕ್ಕೆ ಶರಣಾದರು. ಅವರ ನಡುವಳಿಕೆ ಮಸೀದಿ ಧ್ವಂಸಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಿತ್ತು. ಕೇಂದ್ರ ಸರ್ಕಾರವು  ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಿಷ್ಕ್ರಿಯಗೊಂಡಿದ್ದ ಕಾರಣದಿಂದ ಡಿಸಂಬರ್ 6 ರಂದು ಬಿ.ಜೆ.ಪಿ. ನಾಯಕರ ಕಣ್ಣೆದುರು ಪ್ರಾರ್ಥನಾ ಮಂದಿರದ ಸುತ್ತ ಹಾಕಲಾಗಿದ್ದ ರಕ್ಷಣಾ ಬೇಲಿಯನ್ನು ಕಿತ್ತು ಹಾಕಿದ ಕರಸೇವಕರು ಮಧ್ಯಾಹ್ನದ ವೇಳೆಗೆ ಮಸೀದಿಯ ಕಟ್ಟಡವನ್ನು ಸುತ್ತುವರಿದು ಸಂಜೆ ನಾಲ್ಕು ಗಂಟೆಯೊಳಗೆ ದ್ವಂಸಗೊಳಿಸಿದರು. ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಛಾಯಾಗ್ರಾಹಕರನ್ನು ಮತ್ತು ಪತ್ರಕರ್ತರನ್ನು ಪುರುಷ-ಮಹಿಳೆ ಎಂಬ ಬೇಧ ಭಾವವಿಲ್ಲದೆ ಮನ ಬಂದಂತೆ ಥಳಿಸಿದರು. ಅಯೋಧ್ಯೆಯಲ್ಲಿ ಏನೋ ದುರಂತ ಘಟನೆ ಸಂಭವಿಸುತ್ತಿದೆ ಎಂದು ಭಾರತದ ನಾಗರೀಕರಿಗೆ ಸುಳಿವು ದೊರೆತಿದ್ದರೂ ಸಹ ಕೇಂದ್ರ ಸರ್ಕಾರದ ಸ್ವಾಮ್ಯದ ಆಕಾಶವಾಣಿ ಮತ್ತು ದೂರದರ್ಶನಗಳು ವಿಷಯವನ್ನು ಮುಚ್ಚಿಟ್ಟು ಕಥೆ ಹೇಳತೊಡಗಿದ್ದವು. ಆದರೆ ಸಂಜೆ 5 ಗಂಟೆ ವೇಳೆಗೆ ಬಿ.ಬಿ.ಸಿ. ಛಾನಲ್ ಮಸೀದಿ ಧ್ವಂಸವಾಗುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿ ಭಾರತದ ದುರಂತದ ಕಥೆಯನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಆ ಘಟನೆಯ ಕುರಿತು ಬಿ.ಬಿ.ಸಿ.ಛಾನಲ್ ಗೆ ವರದಿ ನೀಡುತ್ತಿದ್ದ ಮುಖ್ಯವರದಿಗಾರರಾಗಿದ್ದ ಮಾರ್ಕ್‍ಟುಲಿಯವರು “ ಈ ದಿನ ಉತ್ತರ ಪ್ರದೇಶದ ಅಯೋಧ್ಯೆ ಎಂಬ ಧಾರ್ಮಿಕ ಸ್ಥಳದಲ್ಲಿ ಬಾಬರಿ ಮಸೀದಿ ಧ್ವಂಸಗೊಳ್ಳುವುದರ ಜೊತೆಗೆ ಬಹುಮುಖಿ ಭಾರತದ ಆತ್ಮವು ಸಹ ಕುಸಿದು ಬಿದ್ದಿತು” ಎಂದು ಆಡಿದ ಮಾತುಗಳು ಈಗಲೂ ನನ್ನ ಕಿವಿಯೊಳಗೆ ಅನುರಣಿಸುತ್ತಿವೆ.
ಮಸೀದಿ ಧ್ವಂಸದ ದೃಶ್ಯಗಳನ್ನು ನೋಡಿ ದಿಗ್ಭ್ರಾಂತನಾದ ನಾನು ನನ್ನ ಎರಡೂವರೆ ವರ್ಷದ ಮಗನನ್ನು ಎತ್ತಿಕೊಂಡು ಬಂದು ಮನೆಯ ಮುಂಬಾಗಿಲಿನ ಮೆಟ್ಟಿನ ಮೇಲೆ ತೊಡೆಯ ಮೇಲೆ ಕೂರಿಸಿಕೊಂಡು  ಕುಳಿತಿದ್ದೆ. ಆಗ ಸಂಜೆ ಆರೂವರೆ ಸಮಯ. ಅದು ಡಿಸಂಬರಿನ ಚಳಿಗಾಲವಾದ್ದರಿಂದ ಬೇಗನೆ ಕತ್ತಲು ಆವರಿಸಿಕೊಳ್ಳುತ್ತಿತ್ತು.  ಆಗತಾನೆ ಗದ್ದೆಯ ಕೂಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣ ಗುದ್ದಲಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ನಿಧಾನವಾಗಿ ಕಾಲೆಳೆಯುತ್ತಾ ಬರುತ್ತಿದ್ದ. ಮನೆ ಬಾಗಿಲ ಬಂದವನು ನನ್ನನ್ನು ಉದ್ದೇಶಿಸಿ “ ಜಗಣ್ಣಾ ಸಂತೆ ಮೈದಾನದಲ್ಲಿ ಜನ ಗುಂಪು ಸೇರಿ ಏನೇನೊ ಮಾತನಾಡ್ತಾ ಅವ್ರೆ, ಮಸೀದಿ ಬಿದ್ದೋಯ್ತುಂತೆ ಅಂತಾ ನಿಜವಾ?” ಎಂದು ಕೇಳಿದ. ಅವನಿಗೆ ಅವನಿಗೆ ಅಯೋಧ್ಯೆಯ ಹಳೆಯ ಮಸೀದಿಯೊಂದನ್ನು ಕೆಡವಿ ಹಾಕಿದ ವಿಷಯ ತಿಳಿಸಿದೆ. “ ಬುಡಣ್ಣಾ, ದೇವರು ಇರುವ ನಮ್ಮೂರು ಮಸೀದಿಗೆ ನಾನು ಒಂದು ದಿನಾನೂ ಹೋಗ್ಲಿಲ್ಲ, ಇನ್ನು ದೇವರಿಲ್ಲದ ಮಸೀದಿ ಕೆಡವಿದ್ರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು?” ಎನ್ನುತ್ತಾ ಸಂತನೊಬ್ಬ ಆಡುವಂತಹ ಮಾತನ್ನು ನನ್ನ ಮುಂದೆ ಬಿಸಾಡಿ, ಏನೂ ಆಗದವನಂತೆ ನಡೆದು ಹೋದ. ನಾನು ಬೆಳೆದು ಬುದ್ದಿ ಕಂಡ ದಿನಗಳಿಂದಲೂ ಕೂಲಿ ಮಾಡಿ ಬದುಕುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣನಿಗೆ ( ವಜೀರ್ ಸಾಬ್) ಇದ್ದ ಪ್ರಜ್ಞೆ ನಮ್ಮ ಹಿಂದೂ ದೇಶ ಭಕ್ತರಿಗೆ ಇದ್ದಿದ್ದರೆ, ಈ ದೇಶ ಮತ್ತು ಈ ಜಗತ್ತು ಇಂದು ಭಯೋತ್ಪಾದನೆಯ ಹೆಸರಿನ ರಕ್ತದೋಕುಳಿಯಲ್ಲಿ ಮೀಯಬೇಕಾದ ಪ್ರಸಂಗ ಉದ್ಭವವಾಗುತ್ತಿರಲಿಲ್ಲ ಎಂದು ಆ ಕ್ಷಣದಲ್ಲಿ ಅನಿಸತೊಡಗಿತು.

ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಉನ್ಮಾದಗೊಳಿಸುವುದು ಸುಲಭ. ಆದರೆ, ಅದೇ ಉನ್ಮಾದವನ್ನು ಅಥವಾ ಆವೇಶವನ್ನು ಸದಾ ಕಾಯಿಟ್ಟುಕೊಳ್ಳುವುದು ಕಷ್ಟ. ಜನರ ತಲೆಗೇರಿಸಿದ ಅಮಲು ಇಳಿಯದಂತೆ ಸದಾ ಸುಳ್ಳಿನ ಸರಮಾಲೆಯನ್ನು ಹೆಣೆಯಬೇಕಾಗುತ್ತದೆ. ಈಗ ಐವತ್ತಾರು ಇಂಚು ಎದೆಯಳತೆಯ ಪ್ರಧಾನಿ ನರೇಂದ್ರಮೋದಿಯವರು ಮಾಡುತ್ತಿರುವುದು  ಇದೇ ಕೆಲಸವಲ್ಲದೆ ಬೇರೇನಲ್ಲ. ಅವರ ಸಚಿವ ಸಂಪುಟದ ಸಹೋದ್ಯೋಗಿ ಅನಂತ ಕುಮಾರ ಹೆಗ್ಡೆ ಎಂಬ ಕೇಂದ್ರ ಸಚಿವ ಕೂಡ ತನ್ನ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ಒಬ್ಬ ಅವಿವೇಕಿ ಮನುಷ್ಯನಂತೆ ಬೆಂಕಿಯುಗುಳುವುದರ ಮೂಲಕ ತಾನು ಹೋದ ಕಡೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತನಾಗಿದ್ದಾರೆ. ಒಬ್ಬ ಜನಪ್ರತಿನಿಧಿಯ ಸಾರ್ವಜನಿಕ ಬದುಕಿಗೆ ಇರಬೇಕಾದ  ಸಂಯಮವಾಗಲಿ, ಲಜ್ಜೆಯಾಗಲಿ ಇದ್ದಂತಿಲ್ಲ. ಇಂತಹ ವ್ಯಕ್ತಿಯನ್ನು  ಜಾತಿ ಅಥವಾ ಧರ್ಮದ ಕಾರಣಕ್ಕಾಗಿ ನಿರಂತರವಾಗಿ ಸಂಸದನಾಗಿ ಆಯ್ಕೆ ಮಾಡಿಕೊಳಿಸುತ್ತಿರುವ ಕೆನರಾ ಕ್ಷೇತ್ರದ ಮತದಾರರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವುದು ಒಳಿತು.
ಇದು ಕೇವಲ ಅನಂತಕುಮಾರ ಹೆಗ್ಡೆ ಗೆ ಮಾತ್ರ ಸೀಮಿತವಾದ ಮಾತಲ್ಲ, ಬಿ.ಜೆ.ಪಿ. ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಕಾಂಗ್ರೆಸ್ ಪಕ್ಷದ ವಿ.ಎಸ್.ಉಗ್ರಪ್ಪ, ಹೆಚ್.ಆಂಜನೇಯ, ಮಾಲಿಕಯ್ಯ ಗುತ್ತೆದಾರ್,  ಜಿ.ಡಿ.ಎಸ್. ಪಕ್ಷದ ಹೆಚ್.ಡಿ.ಕುಮಾರಸ್ವಾಮಿ, ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ , ಜಮೀರ್ ಅಹಮ್ಮದ್ ಇವರಿಗೂ ಸಹ ಅನ್ವಯವಾಗುತ್ತದೆ.
ತತ್ವ ಸಿದ್ಧಾಂತಗಳ ನೆಲೆಯಿಲ್ಲದ ಅಧಿಕಾರವು ಮಂಜಿನ ಅರಮನೆ ಎಂಬುದನ್ನು  ರಾಜಕೀಯ ಪಕ್ಷಗಳು ಮತ್ತು ಅವುಗಳ ನೇತಾರರು  ಅರಿಯಬೇಕು. ಖಾಲಿಯಾದ ಕೊಡಗಳು ಹೆಚ್ಚು ಸದ್ದು ಮಾಡುತ್ತವೆ ಎನ್ನುವ ಹಾಗೆ ಇವರಾಡುವ ಮಾತುಗಳು ಇವರೊಳಗಿನ ಖಾಲಿತನವನ್ನು ತೋರುತ್ತಿವೆ. ಇಂತಹವರನ್ನು ನಿಯಂತ್ರಣದಲ್ಲಿಡಬೇಕಾದ ಮಾಧ್ಯಮಗಳು ನಿಶ್ಯಕ್ತಗೊಂಡಿದ್ದರೆ, ಕಿವಿ ಹಿಂಡಿ ಬುದ್ದಿ ಹೇಳಬೇಕಾದ ಲೇಖಕರು, ಚಿಂತಕರು ಮತ್ತು ಬುದ್ದಿಜೀವಿಗಳು ಎಂದು ಸಾರ್ವಜನಿಕವಾಗಿ ಆರೋಪ ಹೊತ್ತವರು ಆಳುವವರ ಆಸ್ಥಾನದಲ್ಲಿ ನಿದ್ದೆ ಹೋಗಿದ್ದಾರೆ. ಇಂದು ಮಂಗಳೂರು, ಹೊನ್ನಾವರ, ಕುಮಟಾ, ಶಿರಸಿ ನಗರಕ್ಕೆ ಬೆಚ್ಚಿ ಹಚ್ಚಲಾಗಿದೆ. ನಾಳೆ ಯಾವ ಊರಿಗೆ? ಯಾವ ಪಟ್ಟಣಕ್ಕೆ?  ಯಾರಿಗೂ ಗೊತ್ತಿಲ್ಲ.  ತತ್ವ ಮತ್ತು ಸಿದ್ಧಾಂತಗಳಿಲ್ಲದ ರಾಜಕೀಯ ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು ನೆನದರೆ ಭಯವಾಗುತ್ತದೆ.


No comments:

Post a Comment