ಭಾನುವಾರ, ಜೂನ್ 10, 2018

ಅಪರೂಪದ ಅನ್ವೇಷಣೆಯ ಕೃತಿಯ ಕುರಿತು



ಮೊದಲಿನ ಹಾಗೆ ಪುಸ್ತಕ ಕೊಳ್ಳುವ ಹಾಗೂ ಓದುವ ಶಕ್ತಿ ಕುಂದು ಹೋಗುತ್ತಿದೆ.  ಆರ್ಥಿಕ ಕೊರತೆಯ ನಡುವೆಯೂ ತಿಂಗಳಿಗೆ ಒಂದು ಪುಸ್ತಕವನ್ನು ಕೊಳ್ಳುವ  ಮತ್ತುಓದುವ ಪ್ರೀತಿ ಉಳಿಸಿಕೊಂಡಿದ್ದೀನಿ.  ಕಳೆದ  ಹದಿನೈದು ದಿನಗಳ  ದ ಹಿಂದು ಪತ್ರಿಕೆಯಲ್ಲಿ  ಪ್ರಕಟವಾಗಿದ್ದ  ವಿಮರ್ಶೆಯನ್ನು  ಓದಿದ ನಂತರ   ಸ್ಟೀವರ್ಟ್ ಗಾರ್ಡ್ ಮನ್ ಎಂಬ ಅಮೇರಿಕಾ ಮೂಲದ ಇತಿಹಾಸಕಾರ ಹಾಗೂ ಸಂಶೋಧಕ ನ ಅಧ್ಯಯನ ಕೃತಿ “ ದೇರ್ ಅಂಡ್ ಬ್ಯಾಕ್:  ಎಂಬ ಜಗತ್ತಿನ ಹನ್ನೆರೆಡು ಅನ್ವೇಷಣಾ ಮಾರ್ಗಗಳ ಕುರಿತು ಅಧ್ಯಯನವನ್ನು ಒಳಗೊಂಡಿರುವ ಕೃತಿಯನ್ನು ತರಿಸಿಕೊಂಡು ಓದಿದೆ.   ಈ ಕೃತಿಯನ್ನು ಓದಿದಾಗ  ಲೇಖಕರು ಎಂಬ ಮುಖವಾಡ ಹೊತ್ತ ನನ್ನಂತಹವರು ನೀರಿಲ್ಲದ ಬಾವಿಗೆ ತಲೆಕೆಳಕಾಗಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸು ಎನಿಸಿತು. . ಅಧ್ಯಯನದ ಗಂಧ ಗಾಳಿಯಿಲ್ಲದ ಹಾಗೂ  ಆಸಕ್ತಿಯಿಲ್ಲದೆ, ಕೇವಲ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಹಾಗೂ  ಟ್ವಿಟ್ಟರ್  ಎಂಬ ಸಾಮಾಜಿಕ ತಾಣಗಳಲ್ಲಿ ಗಾಳಿಯಲ್ಲಿ ಕತ್ತಿ ತಿರುವಿಸಿದ ಹಾಗೆ ಬರೆವಣಿಗೆಯಲ್ಲಿ ತೊಡಗಿರುಕೊಂಡಿರುವ ಲೇಖಕರು, ಚಿಂತಕರು, ಬುದ್ದಿಜೀವಿಗಳು ಎಂಬ ಆರೋಪ ಹೊತ್ತಿರುವವರು ಇಂತಹ  ಕೃತಿಗಳ ಮೇಲೆ ಒಮ್ಮೆ ಕಣ್ಣಾಡಿಸಬೇಕು. ( ಮತ್ತೋಂದು ಕೃತಿ ಇಂಗ್ಲೆಂಡ್ ಮೂಲದ   ರಾಯ್ ಮೋಕ್ಷ್ ಹಾಂ ಎಂಬಾತನ “ ಥೆಪ್ಟ್ ಆಫ್ ಇಂಡಿಯಾ) ನಮ್ಮ ಬೌದ್ಧಿಕ ದಾರಿದ್ರ್ಯ ಯಾವ ಹಂತ ತಲುಪಿದೆ ಎಂದರೆ, ಕರ್ನಾಟಕದಲ್ಲಿಇಪ್ಪತ್ತಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಿವೆ. ಆದರೆ,  ಇವುಗಳಲ್ಲಿ ವಿದ್ವಾಂಸರನ್ನು ಹುಡುಕುತ್ತಾ ಹೋದರೆ, ಅಂತಹವರ ಸಂಖ್ಯೆ ಅರ್ಧ ಡಜನ್ ದಾಟುವುದಿಲ್ಲ.  ಬಹುತೇಕ ವಿ.ವಿ.ಗಳಲ್ಲಿ ಸಂಶೋಧನೆ ಮತ್ತು ಪ್ರಕಟಣೆ ವಿಭಾಗಗಳು ಸ್ಥಗಿತಗೊಂಡು ದಶಕಗಳೇ ಉರುಳಿ ಹೋದವು.

ಅಮೇರಿಕಾದ ಮಿಚಿಗನ್ ವಿ.ವಿ. ಯಲ್ಲಿ ಸೌತ್ ಏಷ್ಯಾ ಅಧ್ಯಯನ ಕೇಂದ್ರದ ನೆರವಿನಿಂದ ಸ್ವತಂತ್ರವಾಗಿ ಅಧ್ಯಯನ ನಡೆಸುತ್ತಿರುವ ಸ್ಟೀವರ್ಡ್ ನ  ಈ ಕೃತಿಯು ಈಗಾಗಲೇ ಬರೆದಿರುವ “ ವೆನ್  ಏಷ್ಯಾ ವಾಸ್ ದ ವರ್ಡ್”  ಕೃತಿಯ ಮುಂದುವರಿದ ಭಾಗವಾಗಿದೆ. ಚೀನಾ, ಭಾರತ, ಒಳಗೊಂಡಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಅಪಾರ ಪ್ರೀತಿ ಮತ್ತು ಗೌರವದ ಜೊತೆಗಿನ ಕುತೂಹಲದಿಂದ ಕಳೆದ ಹತ್ತು ವರ್ಷಗಳಿಂದ  ಅಧ್ಯಯನ ಮಾಡುತ್ತಿರುವ ಲೇಖಕನಿಗೆ ಈ ಹಿಂದೆ ಇದ್ದ ಸಿಲ್ಕ್ ರೂಟ್  ಎಂದು ಕರೆಯಲಾಗುತ್ತಿದ್ದ ರೇಷ್ಮೆ ಮಾರ್ಗ   ದಿಂದ ಆಸಕ್ತಿ ಉಂಟಾಗಿ ಮೆಕ್ಕಾ ಯಾತ್ರೆ ಮಾರ್ಗ, ನೈಲ್ ನದಿಯ ಮಾರ್ಗ, ಮಿಸಿಸಿಪ್ಪಿ ನದಿಯ ಮಾರ್ಗ, ಪೆರುವಿನ ಇಂಕಾ ಮಾರ್ಗ, ಹೀಗೆ  ಭೂ ಮಾರ್ಗ ಮತ್ತು ನದಿಮಾರ್ಗಗಳು, ಪುಣ್ಯ ಕ್ಷೇತ್ರಗಳ ಭೇಟಿಯ ಮಾರ್ಗಗಳು ಮತ್ತು ವ್ಯಾಪಾರದ ಮಾರ್ಗಗಳು ಎಂಬಂತೆ ವಿಂಗಡಿಸಿಕೊಂಡು ಅಧ್ಯಯನ ಮಾಡಿರುವ  ವೈಖರಿ ಹಾಗೂ  ಕಲೆ ಹಾಕಿರುವ ಮಾಹಿತಿಗಳು ಮತ್ತು ಹಳೆಯ ನಕ್ಷೆಗಳು ಓದುಗರಲ್ಲಿ ಬೆರಗು ಮೂಡಿಸುತ್ತವೆ. ಜೊತೆಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿರುವುದು ಒಬ್ಬ ಸಂಶೋಧಕನಿಗೆ ಇರಬೇಕಾದ ಬದ್ಧತೆಯನ್ನು ಸೂಚಿಸುತ್ತದೆ.
ಜಗತ್ತಿನ ಐದು ಖಂಡಗಳ ಹಲವು ರಾಷ್ಟ್ರಗಳಲ್ಲಿ ಹರಡಿಕೊಂಡಿರುವ ಈ ಮಾರ್ಗಗಳ ಕುರಿತು ನೀಡಿರುವ ಇತಿಹಾಸವನ್ನು ಓದಿದಾಗ, ಮಾನವ ತನ್ನ ಇತಿಹಾಸದಲ್ಲಿ ಅಳವಡಿಸಿಕೊಂಡ ಅನ್ವೇಷಣಾ ಮತ್ತು ಸಾಹಸದ ಪ್ರವೃತಿ, ತಾನಿರುವ ನೆಲೆಯಾಚೆ ಇರಬಹುದಾದ ಇನ್ನೊಂದು ಜಗತ್ತಿನ ಕುರಿತು ತಿಳಿಯಲು ಅವನು ತುಳಿದ ಹಾದಿ, ಪ್ರತಿ ಹೆಜ್ಜೆಯಲ್ಲೂ ದಕ್ಕಿಸಿಕೊಂಡ ಅನುಭವ ನಿಜಕ್ಕೂ ರೋಮಾಂಚನಕಾರಿಯಾದುದು.
ಸಾಮ್ರಾಜ್ಯ ವಿಸ್ತರಣೆಗಾಗಿ ಸಾಮ್ರಾಟರು, ವ್ಯಾಪಾರದ ವಿಸ್ತರಣೆಗಾಗಿ ವ್ಯಾಪಾರಿಗಳು, ಸಂಸ್ಕೃತಿ ಹಾಗೂ ಧರ್ಮದ ವಿಸ್ತರಣೆಗಾಗಿ ಮಿಷನರಿಗಳು, ಇವರುಗಳ ಜೊತೆ  ಇಂತಹ  ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಅನುಭಾವಿ ಜಗತ್ತಿನ  ಸಾದು ಸಂತರು ನಡೆಸಿದ ಹುಡುಕಾಟದ ಫಲವಾಗಿ ಇಂದು ಜಗತ್ತಿನ ಹಲವು ಧರ್ಮ, ಸಂಸ್ಕೃತಿಗಳು ಹಾಗೂ ಭಾಷೆ, ಆಹಾರ ಪದ್ಧತಿ ಇವುಗಳೆಲ್ಲವೂ ಪರಸ್ಪರ ಮುಖಾಮುಖಿಯಾಗಿವೆ. ಜೊತೆಗೆ   ಕೊಡು ಕೊಳೆಯಲ್ಲಿ ನಿರತವಾಗಿವೆ.

ಖಂಡ-ಖಂಡಗಳ ನಡುವೆ, ರಾಷ್ಟ್ರ-ರಾಷ್ಟ್ರಗಳ ನಡುವೆ ವಿನಿಮಯವಾದ ವಸ್ತುಗಳು, ಗುಲಾಮರು, ಪ್ರಾಣಿ, ಪಕ್ಷಿಗಳು, ಸಾಂಬಾರ ಪದಾರ್ಥಗಳು, ರೇಷ್ಮೆ, ಹತ್ತಿ, ಪಿಂಗಾಣಿ ವಸ್ತುಗಳು, ದವಸ ಧಾನ್ಯಗಳು, ಬಿತ್ತನೆ ಬೀಜಗಳು, ಸಂಗೀತ, ಸಾಹಿತ್ಯ, ವಿಜ್ಞಾನ, ಧರ್ಮಗ್ರಂಥಗಳು, ಅವುಗಳ ವ್ಯಾಖ್ಯಾನಗಳು, ಮಹಿಳೆಯರು, ಮದ್ಯ ಹಾಗೂ ಅಮಲಿನ ಪದಾರ್ಥಗಳು, ಮದ್ದು-ಗುಂಡುಗಳು ಇವುಗಳ ಜೊತೆಗೆ ಯುದ್ಧ ನೀತಿಯ ಕ್ರೌರ್ಯಗಳು ಇಂತಹುಗಳ ಕುರಿತು ಅಧ್ಯಯನ ಮಾಡುತ್ತಾ ಹೊರಟರೆ ಒಬ್ಬ ಸಂಶೋಧಕನಿಗೆ ಅಥವಾ ವಿದ್ವಾಂಸನಿಗೆ ಒಂದು ಜನ್ಮದ ಆಯಸ್ಸು ಸಾಲದು ಎಂಬ ಭಾವನೆ   ಈ ಕೃತಿಯನ್ನು ಓದುವಾಗ  ನಮ್ಮೊಳಗೆ ಒಡಮೂಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ