ಶುಕ್ರವಾರ, ನವೆಂಬರ್ 2, 2018

ಮನುಷ್ಯನನ್ನು ದ್ವೀಪವಾಗಿಸುತ್ತಿರುವ ಸಾಮಾಜಿಕ ತಾಣಗಳು


ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಜಗತ್ತಿನ ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾದ ಕ್ಷಿಪ್ರಕ್ರಾಂತಿಯ ಫಲದಿಂದಾಗಿ ಮನುಷ್ಯ ಲೋಕದ ಸಂವಹನ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆಯಾಯಿತು. ಅಂತರ್ಜಾಲದ ಮೂಲಕ ಅವಿಷ್ಕಾರಗೊಂಡ -ಮೈಲ್ ಎಂದು ಕರೆಯಲಾಗುವ ಮಿಂಚಂಚೆ ಜಾರಿಗೆ ಬಂದ ಮೇಲೆ ಕ್ಷಣಾರ್ಧದಲ್ಲಿ ಏನನ್ನಾದರೂ ಕಳಿಸುವ ಅಥವಾ ಸ್ವೀಕರಿಸುವ ವ್ಯವಸ್ಥೆ ಜಾರಿಗೆ ಬಂದ ಮೇಲೆ ಇಡೀ ವಿಶ್ವದ ಕಲ್ಪನೆ ಬದಲಾಗಿ ಒಂದು ಹಳ್ಳಿಯ ಸ್ವರೂಪ ಪಡೆಯಿತು.
ಆನಂತರದ ದಿನಗಳಲ್ಲಿ ಇಪ್ಪತ್ತೊಂದನೆಯ ಶತಮಾನಕ್ಕೆ ಜಗತ್ತು ಕಾಲಿಡುತ್ತಿದ್ದಂತೆ ಬಳಕೆ ಬಂದ ಮೊಬೈಲ್ ಪೋನ್ಗಳು  ಮನುಷ್ಯರ ಸಂಪರ್ಕ ಸಾಧನಗಳಾಗುವುದವು.   ಇವುಗಳ ಉಪಯೋಗ ಹೆಚ್ಚುತ್ತಿದ್ದಂತೆ ನಡೆದ ನಿರಂತರ ಸಂಶೋಧನೆಗಳ ಫಲವಾಗಿ ಈಗ ಚಾಲ್ತಿಯಲ್ಲಿರುವ ಮೊಬೈಲ್ ಫೋನ್ ಗಳು ಕೇವಲ ಮಾತನಾಡುವ ಫೋನ್ಗಳಾಗಿರದೆ, ನಮ್ಮ ಅಂಗೈಯಲ್ಲಿರುವ ಭೂಮಂಡಲವಾಗಿ ಪರಿವರ್ತನೆ ಹೊಂದಿದವು. ರೇಡಿಯೋ, ದಿನಪತ್ರಿಕೆ, ಟೆಲಿವಿಷನ್, ಲೆಕ್ಕ ಹಾಕುವ ಕ್ಯಾಲಿಕೇಟರ್, ಚಿತ್ರಗಳನ್ನು ತೆಗೆಯುವ ಕ್ಯಾಮರಾ, ದಶದಿಕ್ಕುಗಳನ್ನು ಮಾತ್ರವಲ್ಲದೆ, ನಾವು ಚಲಿಸುವ ಮಾರ್ಗತೋರುವ ಗೈಡ್, ಶಬ್ದಕೋಶವಾಗಿ, ಭಾಷಾಂತರದ ಕೈಪಿಡಿಯಾಗಿ, ಹೀಗೆ ಮನುಷ್ಯನ ಬಹುತೇಕ ಅಗತ್ಯಗಳನ್ನು  ಪೂರೈಸುವ ಅಲ್ಲಾವುದ್ದೀನನ ಅದ್ಭುತ ದೀಪದೊಳಗಿಂದ ಎದ್ದು ಬಂದು ನಾವು ಹೇಳಿದ್ದನ್ನುಕೇಳಿದ್ದನ್ನು ಪೂರೈಸುವ  ಬೂತದಂತೆ ಕೆಲಸ ಮಾಡತೊಡಗಿದವು. ಇವುಗಳಿಗೆ ಪೂರಕವಾಗಿ ಹುಟ್ಟಿಕೊಂಡ ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಅಪ್, ಗೂಗಲ್ ಪ್ಲಸ್, ಮೆಸೆಂಜೆರ್ನಂತಹ ಹಲವಾರು ತಾಣಗಳು ಮತ್ತು ಅಂತರ್ಜಾಲದಲ್ಲಿ ಸೃಷ್ಟಿಯಾದ ವೆಬ್ ಸೈಟ್ ಹೆಸರಿನ ಮಾಹಿತಿ ಪುಟಗಳ ತಾಣಗಳು ನಾಗರೀಕರ ಪಾಲಿಗೆ ಜಗತ್ತಿನ ಜ್ಞಾನವನ್ನೂ ಒಳಗೊಂಡಂತೆ ಸರ್ವಸ್ವವನ್ನು ಬೆರಳ ತುದಿಗೆ ತಂದು ಕೂರಿಸಿದವು. ಕ್ರಿಸ್ತಪೂರ್ವದಲ್ಲಿ ಬದುಕಿದ್ದ ಗೌತಮ ಬುದ್ಧ ಕಿಸಗೌತಮಿಗೆ " ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ" ಎಂಬ ಮಾತು ಹೇಳಿದ್ದನು. ಈಗ ಆತ ಬದುಕಿದ್ದರೆ, "ಮೊಬೈಲ್ ಇಲ್ಲದ ಮನೆಯಲ್ಲಿ ಸಾಸಿವೆ ತಾ" ಎಂದು ಹೇಳುತ್ತಿದ್ದರಲ್ಲಿ ಆಶ್ಚರ್ಯವಿಲ್ಲಮನುಷ್ಯನೊಬ್ಬನ  ಮೂಲಭೂತ ಅಗತ್ಯಗಳು ಎಂದರೆ, ಅನ್ನ, ವಸತಿ, ವಸ್ತ್ರ ಎಂಬ ನಂಬಿಕೆ ಮತ್ತು ಪರಿಭಾಷೆ ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಈಗಿನ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಮೂಲಭೂತ ಅಗತ್ಯಗಳೆಂದರೆಮೊಬೈಲ್, ಅಂತರ್ಜಾಲ ಸಂಪರ್ಕ ಮತ್ತು ಸಾಮಾಜಿಕ ತಾಣಗಳು ಎಂಬ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ.
ಜಗತ್ತಿನ ಒಳಿತಿಗಾಗಿ ಕಂಡುಕೊಂಡ ವಿಜ್ಞಾನದ ಬಹುತೇಕ ಅವಿಷ್ಕಾರಗಳು ಮನುಷ್ಯನ  ಸ್ವಾರ್ಥದಿಂದ ದುರುಯೋಗವಾದಂತೆ  (ಉದಾಹರಣೆಗೆ ಅಣುಬಾಂಬ್) ತಂತ್ರಜ್ಞಾನದ ಅವಿಷ್ಕಾರಗಳು ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವುದರ ಜೊತೆಗೆ ಮನುಷ್ಯ ಮನುಷ್ಯರ ನಡುವೆ, ಸಮುದಾಯಗಳ ನಡುವೆ ಕಲಹಕ್ಕೆ ಕಾರಣವಾಗುತ್ತಿವೆ. ಇದು ಮಾತ್ರವಲ್ಲದೆ ಮನುಷ್ಯನ ಆಲೋಚನಾ ಶಕ್ತಿಯನ್ನು ಕುಗ್ಗಿಸುವುದರ ಮೂಲಕ ಅವನ/ಳನ್ನು ಮಿಥ್ಯಾ ವಾಸ್ತವ ಜಗತ್ತಿನಲ್ಲಿ ಬದುಕುವಂತೆ ಪ್ರೇರೇಪಿಸುತ್ತಿವೆ. ನಾವು ಬದುಕುತ್ತಿರುವ ವರ್ತಮಾನದ ಸಮಾಜದಲ್ಲಿ ಹೆಚ್ಚುತ್ತಿರುವ ಲೈಂಗಿಕ ಶೋಷಣೆಗಳು, ಅತ್ಯಾಚಾರಗಳು, ಅಸಹಿಷ್ಣುತೆ ಮತ್ತು ಜಾತಿ ಕಲಹ ಮತ್ತು ಹಿಂಸಾಚಾರದಂತಹ ಘಟನೆಗಳ ಹಿಂದೆ ಸಾಮಾಜಿಕ ತಾಣಗಳ ಪರೋಕ್ಷವಾದ ಪಾತ್ರವಿರುವುದನ್ನು ತಳ್ಳಿಹಾಕಲಾಗದು. ಮನುಷ್ಯನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯದಂತೆ ಮುಕ್ತವಾಗಿ ಅಂತರ್ಜಾಲದಲ್ಲಿ ಏನು ಬೇಕಾದರೂ ಹರಿಯಬಿಡಬಹುದು ಎಂಬ ಪರಿಕಲ್ಪನೆ  ಜಗತ್ತನ್ನು ಆವರಿಸಿಕೊಂಡ ನಂತರ ಅದು ನಮ್ಮನ್ನು  ಅನಾಗರೀಕತೆಯ ಜಗತ್ತಿನಡೆ ನಮಗೆ ಅರಿವಿಲ್ಲದೆ ಕೊಂಡೊಯ್ಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಆಧುನಿಕತೆಯ ನಾಗರೀಕ ಜಗತ್ತಿನ ಪಾಲಿನ ಹುಲಿಯ ಮೇಲಿನ ಸವಾರಿಯಾಗಿದೆ. ಕೆಳಕ್ಕೆ ಇಳಿಯಲಾಗದು ಜೊತೆಗೆ ಮೇಲೆ ಕುಳಿತು ನಿರಂತರ  ಸವಾರಿಯನ್ನೂ ಮಾಡಲಾಗದ ಇಬ್ಬಂದಿಯ ಸ್ಥಿತಿಯಲ್ಲಿ ನಾವು ಬದುಕಿದ್ದೇವೆ.

2018 ಸಮೀಕ್ಷೆಯ ಪ್ರಕಾರ ಭಾರತದ ಜನಸಂಖ್ಯೆ 135 ಕೋಟಿಯನ್ನು ಮುಟ್ಟಿದೆ. ಇದರಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ನೂರು ಕೋಟಿ ದಾಟಿದೆ. ಇವರಲ್ಲಿ ತಮ್ಮ ಮೊಬೈಲ್ಗಳಿಗೆ ಅಂತರ್ಜಾಲ ಸಂಪರ್ಕ ಹೊಂದಿರುವವರ ಸಂಖ್ಯೆ 82 ಕೋಟಿ ತಲುಪಿದೆ. ಇದರ ಪರಿಣಾಮವೆಂಬಂತೆ ನೆಟ್ ವ್ಯಸನಿಗಳ ಸಂಖ್ಯೆ ಕೂಡ ದಿನೇ ದಿನ ವೃದ್ಧಿಸುತ್ತಿದೆ. ಈವರೆಗೆ ಪ್ರಮುಖ ನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ವ್ಯಸನ ಮುಕ್ತ ಕೇಂದ್ರಗಳಿದ್ದವು. ಇದೀಗ ನೋಮೊಪೋಬಿಯಾ ಎಂಬ ಮಾನಸಿಕ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ನೆಟ್ ವ್ಯಸನಿಗಳಿಗೆ ವ್ಯಸನ ಮುಕ್ತ ಕೇಂದ್ರಗಳು ಆರಂಭವಾಗಿವೆ. ಈಗಾಗಲೇ ಭಾರತದ ಪ್ರಮುಖ ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತ, ಬೆಂಗಳೂರು ಮುಂತಾದ ನಗರಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮೊಬೈಲ್, ವೀಡಿಯೋ ಗೇಮ್, ಹಾಗೂ ಸದಾ ಸಾಮಾಜಿಕ ತಾಣಗಳಲ್ಲಿ ಮುಳುಗಿಹೋಗಿರುವ ಮಕ್ಕಳು ಮತ್ತು ಹದಿಹರೆಯದ ಯುವಕ-ಯುವತಿಯರಿಗೆ ಚಿಕಿತ್ಸೆ ನೀಡುತ್ತಿವೆ.. ಅಂತರ್ಜಾಲದ ಅಥವಾ ಸಾಮಾಜಿಕ ತಾಣದ ವ್ಯಸನ ಕೇವಲ ಮಕ್ಕಳು ಅಥವಾ ಯುವಜನಾಂಗದ ವ್ಯಸನವಾಗಿರದೆ ಸರ್ಕಾರಿ ಮತ್ತು ಖಾಸಾಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ಪಾಲಿಗೆ ಗೀಳಾಗಿ ಪರಿಣಮಿಸಿದೆ. ಇದರಿಂದಾಗಿ ಕಚೇರಿಯ ಕಾರ್ಯಚಟುವಟಿಕೆಯಲ್ಲಿ  ತೊಡಕನ್ನುಂಟುಮಾಡಿದೆ ಕಾರಣಕ್ಕಾಗಿ ಎಲ್ಲಾ ಕಚೇರಿಗಳು, ಬ್ಯಾಂಕುಗಳು ಹಾಗೂ ಇತರೆ ಖಾಸಾಗಿ ಸಂಸ್ಥೆಗಳಲ್ಲಿ ನೌಕರರ ಮೇಲೆ ಹದ್ದಿನ ಕಣ್ಣಿಡಲು ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ಹಾಕಲಾಗಿದೆ.
ಕನ್ನಡದ ಪುಸ್ತಕ ಪ್ರಕಟಣೆಯಲ್ಲಿ ಅತ್ಯಂತ ಹಿರಿಯದಾದ ಹಾಗೂ 75 ವರ್ಷಗಳನ್ನು ಪೂರೈಸಿರುವ ಹುಬ್ಬಳ್ಳಿಯ  ಸಾಹಿತ್ಯ ಭಂಡಾರದ ಮುಖ್ಯಸ್ಥರಾದ  ಶ್ರೀ ಸುಬ್ರಮಣ್ಯಂ ಇತ್ತೀಚೆಗೆ ನನ್ನೆದುರು ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟರು. ಪುಸ್ತಕಗಳ ಮಾರಾಟ ಹಾಗೂ ಓದುಗರ ಸಂಖ್ಯೆ ಕುರಿತಂತೆ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು ವರ್ಷಗಳಲ್ಲಿ ಶೇಕಡ ಮುವತ್ತರಷ್ಟು ಸಾಹಿತ್ಯ ಕೃತಿಗಳ ಮಾರಾಟ ಕಡಿಮೆಯಾಗಿದೆ ಎಂದರು. ಅವರ ಅನುಭವದಲ್ಲಿ  ಯುವಕರಿಗಿಂತ ಹೆಚ್ಚಾಗಿ ಐವತ್ತು ಮೀರಿದ ಹಿರಿಯ ನಾಗರೀಕರಲ್ಲಿ ಪುಸ್ತಕ ಕೊಳ್ಳುವ ಹವ್ಯಾಸ ಹೆಚ್ಚಾಗಿತ್ತು. ಆದರೆ, ಇತ್ತೀಚೆಗೆ  ಅವರೆಲ್ಲಾ ದಿನದ ಮೂರು ಅಥವಾ ನಾಲ್ಕು ಗಂಟೆಗಳ ಕಾಲ ವಾಟ್ಸ್ ಅಪ್ ತಾಣದಲ್ಲಿ ಸಿಗುವ ವೀಡಿಯೊ ತುಣುಕುಗಳನ್ನು, ಚಿತ್ರಗಳನ್ನು ಹಾಗೂ ಸಂದೇಶ ಇತ್ಯಾದಿಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದಾರೆ ಎಂದರು. ಅವರ ಮಾತು ವಾಸ್ತವಕ್ಕೆ ಹತ್ತಿರದ ಮಾತಾಗಿತ್ತು. ದಿನದ ಅನೇಕ ಚಟುವಟಿಕೆಗಳ ನಡುವೆ ಮಧ್ಯ ವಯಸ್ಸಿನವರು ಮತ್ತು ಹಿರಿಯನಾಗರೀಕರು   ಒಂದೆರೆಡು ಗಂಟೆಗಳ ಕಾಲ ತಮ್ಮ ಅಬಿರುಚಿಗೆ ತಕ್ಕಂತೆ ಪುಸ್ತPಗಳನ್ನು ಓದುತ್ತಿದ್ದವರು, ಇದರ ಜೊತೆಗೆ ತಾವು ವಾಸಿಸುತ್ತಿದ್ದ ಊರುಗಳಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು ಮತ್ತು  ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಅವರೆಲ್ಲರೂ ಕಾಣೆಯಾಗುತ್ತಿದ್ದಾರೆ. ಸಭಾಂಗಣಗಳು ಭಣಗುಡುತ್ತಿವೆ. ಸಾಮಾಜಿಕ ತಾಣಗಳ ವ್ಯಸನಕ್ಕೆ ವಯಸ್ಸು, ಲಿಂಗ, ಜಾತಿ, ಧರ್ಮ, ನಗರ, ಹಳ್ಳಿ, ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಬಲಿಯಾಗುತ್ತಿದ್ದಾರೆ. ಸಮುದ್ರಗಳು ಉಕ್ಕಿ ಹರಿಯುವ ನದಿಯನ್ನು ಸ್ವೀಕರಿಸುವ ರೀತಿಯಲ್ಲಿ ಸಾಮಾಜಿಕ ತಾಣಗಳು ಎಲ್ಲರನ್ನೂ ತಮ್ಮ  ತೆಕ್ಕೆಗೆ ತೆಗೆದುಕೊಳ್ಳುತ್ತಿವೆ. ಪೇಸ್ ಬುಕ್, ಟಿಟ್ಟರ್ ಅಥವಾ ವಾಟ್ಸ್ ಅಪ್ ಖಾತೆ ಇಲ್ಲದ ವ್ಯಕ್ತಿ ಕೀಳಮರಿಯಿಂದ ಬಳಲುವಂತೆ ಮಾಡಿವೆ.
ಖ್ಯಾತ ಮನೋವಿಜ್ಞಾನಿ ಸಿಗ್ಮಂಡ್ ಪ್ರಾಯ್ಡ್ ಮನುಷ್ಯನ ಮನಸ್ಸನ್ನು ವಿಶ್ಲೇಸಿಸುತ್ತಾ. "ಮಾನವನ ಮನಸ್ಸು ಮೂಲಭೂತವಾಗಿ ಎಷ್ಟೇ ಪ್ರಶಾಂತವಾಗಿದ್ದರೂ, ಅದರೊಳಗೆ ವಿಕೃತಿಯ ಹಾಗೂ ವಿಕ್ಷಿಪ್ತ ಭಾವನೆಗಳು ಸುಪ್ತ ಪ್ರಜ್ಞೆಯ ಭಾಗವಾಗಿ ಮನೆ ಮಾಡಿಕೊಂಡು ಹೊರಬರಲು ಹಾತೊರೆಯುತ್ತವೆ. ಆದರೆ, ಸಂಘ ಜೀವಿಯಾದ ಮಾನವನಿಗೆ ಉತ್ತಮ ನಡುವಳಿಕೆಗಾಗಿ ಸಮಾಜ ಮತ್ತು ಪ್ರಭುತ್ವ ರೂಪಿಸಿರುವ ಚೌಕಟ್ಟು ಮತ್ತು ವಿಧಿಸಿರುವ ಕಾನೂನು ಹಾಗೂ ನಿಯಮಗಳು ಅಂತಹ ಭಾವನೆಗಳನ್ನು ನಿಗ್ರಹಿಸುವಂತೆ ಮಾಡಿವೆ" ಎಂದು ವ್ಯಾಖ್ಯಾನಿಸಿದ್ದನು. ಆತನ ಮಾತಿನ ಹಿನ್ನಲೆಯಲ್ಲಿ  ಈಗಿನ ಜಗತ್ತನ್ನು ಅವಲೋಕಿಸಿದಾಗ ನೆಟ್ ಹಾಗೂ ಡಿಜಿಟಲ್  ಯುಗದಲ್ಲಿನ ಎಲ್ಲಾ ಸಂಪರ್ಕ ಸಾಧನಗಳು ಮತ್ತು ಸೌಲಭ್ಯಗಳು ಮನುಷ್ಯನ ವಿಕಾರವನ್ನು ಉದ್ದೀಪಿಸುವ ಸಾಧನಗಳಾಗಿವೆ ಎಂದು ಹೇಳಬಹುದು. ಇದರ ಪರಿಣಾವೆಂಬಂತೆ ಅತ್ಯಾಚಾರದಂತಹ ದುಷ್ಕøತ್ಯಗಳನ್ನು ಚಿತ್ರಿಸಿ ಅಂತರ್ಜಾಲದಲ್ಲಿ ಬಿಡುವುದು, ನಮ್ಮ ಕಣ್ಣ ಮುಂದೆ ಅಪಘಾತ ಸಂಭವಿಸಿದಾಗ  ಸಾವು ನೋವಿನ ನಡುವೆ ರಸ್ತೆಯಲ್ಲಿ ಬಿದ್ದು ಹೊರಳಾಡುವ ನತದೃಷ್ಟರ ನೆರವಿಗೆ ಧಾವಿಸಿದೆ, ಅಮಾನವೀಯವಾಗಿ ಅವರ ನರಳಾಟವನ್ನು ಚಿತ್ರಿಸಿಕೊಂಡು ವಾಟ್ಸ ಅಪ್ ಮತ್ತು ಫೇಸ್ ಬುಕ್ ತಾಣಗಳಲ್ಲಿ ಹಂಚಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಈಗ ಎಲ್ಲೆಡೆ ಹಬ್ಬಿದೆಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ಗರಗ ಎಂಬ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬಳ ಪತಿ ಮಹಾಶಯನೊಬ್ಬ  ತನ್ನ ಪತ್ನಿಯ ಜೊತೆಗಿನ ಖಾಸಾಗಿ ಕ್ಷಣಗಳನ್ನು ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರಸಿಕೊಂಡು ನಂತರ ಅದನ್ನು ಕುಡಿದ ಅಮಲಿನಲ್ಲಿ ತನ್ನ ಗೆಳೆಯರಿಗೆಲ್ಲಾ ರವಾನಿಸಿದ್ದನು  ಹಸಿ ಬಿಸಿ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಪರಿಣಾಮವಾಗಿ ಇಂದಿಗೂ ಹೆಣ್ಣು ಮಗಳು ಮನೆಯಿಂದ ಹೊರಬಾರದ ಸ್ಥಿತಿಯಲ್ಲಿ ಅವಮಾನದಿಂದ ಕುಗ್ಗಿ ಹೋಗಿದ್ದಾಳೆ. ಸಾಮಾಜಿಕ ತಾಣಗಳನ್ನು ಕುರಿತಂತೆ ಮತ್ತು  ಅವುಗಳ ಒಳಿತು, ಕೆಡುಕು ಕುರಿತು ವಿವೇಚನೆಗಳಿಲ್ಲದ ಅವಿವೇಕಿಗಳ ಕೈಗೆ ಈಗಿನ ಅಗ್ಗದ ಅಂತರ್ಜಾಲ ವ್ಯವಸ್ಥೆ ಸಿಕ್ಕಿರುವುದು ಮಂಗನ ಕೈಗೆ ಮಾಣಿಕ್ಯ ದೊರೆತಂತಾಗಿದೆ.

ನಿಜಕ್ಕೂ ಜ್ಞಾನದ ಭಂಡಾರವಾಗಿ, ಮಾಹಿತಿಯ ಅಗಣಿತ ಗಣಿಯಂತಿರುವ ಅಂತರ್ಜಾಲವು ಮನುಷ್ಯನ ಜ್ಞಾನ ವಿಕಾಸಕ್ಕೆ ದೊರೆತ ಹಾಗೂ ದುಬಾರಿಯಲ್ಲದ ಕ್ರಾಂತಿಕಾರಿ ವ್ಯವಸ್ಥೆ. ಇದರ ಬಗ್ಗೆ ಎರಡು ಮಾತಿಲ್ಲ. ಆದರೆ, ವವ್ಯಸ್ಥೆಯು ಉಪಯೋಗಕ್ಕಿಂತ ದುರುಪಯೋಗವಾಗುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಪರೋಕ್ಷವಾಗಿ ಸಾಮಾಜಿಕ ತಾಣಗಳು ಕೈ ಜೋಡಿಸಿರುವುದನ್ನು ತಳ್ಳಿಹಾಕುವಂತಿಲ್ಲ. ಜ್ಞಾನ ಪ್ರಸಾರ ಹಾಗೂ ಪರಸ್ಪರ ವಿನಿಮಯಕ್ಕೆ ಸಂವಹನದ ಮಾಧ್ಯಮವಾಗಬೇಕಿದ್ದ ಸಾಮಾಜಿಕ ತಾಣಗಳು ಪರಸ್ಪರ ದ್ವೇಷಕ್ಕೆ, ವ್ಯಕ್ತಿ ಹಾಗೂ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿವೆ. ಇಂದಿನ ಯುವಪೀಳಿಗೆ ಸೆಲ್ಪಿ ಎಂಬ ಸ್ವ-ಭಾವಚಿತ್ರಗಳ ಮೋಹಕ್ಕೆÉ್ಕ ಬಲಿಬಿದ್ದಿದ್ದಾರೆ. ಇದರಿಂದಾಗಿ ರೈಲುಗಳಲ್ಲಿ, ಸಮುದ್ರದ ದಂಡೆಗಳಲ್ಲಿ ಮತ್ತು ನದಿ ತೀರಗಳಲ್ಲಿ ಕಾಲುಜಾರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಸಹ  ಪ್ರತಿ ದಿನ ಪ್ರತಿ ಕ್ಷಣ ಪೋಟೊಗಳನ್ನು ಕ್ಲಿಕ್ಕಿಸುವುದು, ನಂತರ ತಕ್ಷಣ ಅವುಗಳನ್ನು ಸಾಮಾಜಿಕ ತಾಣಗಳಿಗೆ ಹಾಲಿ ಲೈಕು ಮತ್ತು ಕಾಮೆಂಟುಗಳಿಗೆ ಎದುರು ನೋಡುತ್ತಾ ಕೂರುವುದು ಯುವಜನಾಂಗದ ಹವ್ಯಾಸವಾಗಿದೆ. ಕೆಲವು ಯುವಕ-ಯುವತಿಯರು ಫೇಸ್ ಬುಕ್ ಮತ್ತು ವಾಟ್ಸ್ ಅಪ್ ತಾಣಗಳಿಗಾಗಿ ತಮ್ಮ ಬದುಕಿನ ಕ್ರಮವನ್ನು ಮೀಸಲಾಗಿಟ್ಟಿರುವುದರ ಜೊತೆಗೆ ಬದಲಾಯಿಸಿಕೊಂಡಿದ್ದಾರೆ. ಇದರ ಮುಂದುವರಿದ ಹುಚ್ಚಿನಂತೆ ಕೆಲವರು  ತಾಣಗಳನ್ನು ಪೋಟೊ ಅಲ್ಬಂಗಳಾಗಿ ಪರಿವರ್ತಿಸಿಕೊಂಡಿದ್ದಾರೆ.
ತಮ್ಮದೇ ಆದ ಪ್ರತ್ಯೇಕ ಗುಂಪುಗಳನ್ನು ಕಟ್ಟಿಕೊಂಡು ಜಗಳವಾಡುವುದು, ತಾಣದಲ್ಲಿ ಕೆಟ್ಟ ಹಾಗೂ ನಿಂದನೆಯ ಬರಹಗಳನ್ನು ಬರೆದು ಸೇಡು ತೀರಿಸಿಕೊಳ್ಳುವುದು ಇಲ್ಲವೆ, ಖಿನ್ನತೆಗೆ ಒಳಗಾಗುವುದು ಇವೆಲ್ಲವೂ ಇತ್ತೀಚೆಗಿನ ಸಾಮಾಜಿಕ ಪಿಡುಗಿನಂತೆÉ ಎಲ್ಲೆಡೆ ಹರಡುತ್ತಿದೆ. ಇವೆಲ್ಲವುಗಳ ಒಟ್ಟು ಪರಿಣಾಮ ಎಂಬಂತೆ ದೇಶದ ಬಹುದೊಡ್ಡ ಮಾನವ ಸಂಪನ್ಮೂಲ ಎಂದು ಪರಿಗಣಿಸಲ್ಪಟ್ಟ ಯುವಶಕ್ತಿಯ ಚೇತನವು ಸಾಮಾಜಿಕ ತಾಣಗಳಲ್ಲಿ ವ್ಯರ್ಥವಾಗಿ ಕರಗಿ ಹೋಗುತ್ತಿದೆ. ಸುಳ್ಳು ಸುದ್ಧಿಗಳನ್ನು ಹರಡುವುದರ ಮೂಲಕ ಕೋಮು ಪ್ರಚೋದನೆಗೆ ಪ್ರೋತ್ಸಾಹಿಸುವುದು, ತನಗೆ ಇಷ್ಟವಿಲ್ಲದ ಅನ್ಯ ಧರ್ಮಿಯರು ಮತ್ತು ದೇವರು ಹಾಗೂ ಧಾರ್ಮಿಕ ಮುಖಂಡರನ್ನು ಕೆಟ್ಟದಾಗಿ ಚಿತ್ರಿಸುವುದಕ್ಕೆ ಅಥವಾ ನಿಂದಿಸುವುದಕ್ಕೆ ಸಾಮಾಜಿಕ ತಾಣಗಳು ವೇದಿಕೆಗಳಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಇಪ್ಪತ್ತೊಂದನೆಯ ಶತಮಾನದಲ್ಲಿ ಅಕ್ಷರಸ್ಥರ ಯುಗದಲ್ಲಿ ಕಳೆದ ಒಂದು ವರ್ಷದಿಂದ ಸಾಮಾಜಿಕ ತಾಣದಲ್ಲಿ ಮಕ್ಕಳು ಕಳ್ಳರ ಕುರಿತಂತೆ ಹರಡಿದ ವದಂತಿಯ ಫಲವಾಗಿ ದೇಶಾದ್ಯದಂತ ನೂರಾರು ಅಮಾಯಕರು, ಮಾನಸಿಕ ಅಸ್ವಸ್ಥರು, ತಮ್ಮ ತಲೆಯ ಮೇಲೆ ಬುಟ್ಟಿ ಅಥವಾ ಬಟ್ಟೆಯ ಗಂಟುಗಳನ್ನು ಹೊತ್ತಿ ಹಳ್ಳಿ ಹಳ್ಳಿ ತಿರುಗಿ ಸಣ್ಣ ವ್ಯಾಪಾರ ಮಾಡುತ್ತಿದ್ದ ಬಡವರು ಅಮಾನುಷವಾಗಿ ಹತ್ಯೆಯಾದರು. ಸಾಮಾಜಿಕ ತಾಣಗಳಲ್ಲಿ ನಮಗೆ ಬಂದ ಸುದ್ದಿಯ ಮೂಲ ಯಾವುದುಅದಕ್ಕೆ ಆಧಾರವಾಗಿರುವ ಮಾಹಿತಿ ಏನು? ಅಥವಾ  ಘಟನೆ ಘಟಿಸಿದ ದಿನಾಂಕ ಅಥವಾ ಸ್ಥಳ ಯಾವುದು? ಇವುಗಳನ್ನು ಪರಾಮರ್ಶಿಸದೆ ಒಬ್ಬರಿಂದ ಮತ್ತೊಬ್ಬರಿಗೆ ದಾಟಿಸುವ  ಧಾವಂತವನ್ನು ಗಮನಿಸಿದರೆ, ಭವಿಷ್ಯದ ಭಾರತದ ಬಗ್ಗೆ ಭಯವಾಗತೊಡಗಿದೆ. ಅಧಿಕಾರದ ಗದ್ದುಗೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂಬುದನ್ನು  ಗುರಿಯಾಗಿರಿಸಿಕೊಂಡ ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳ ಪರವಾಗಿ ಇಲ್ಲವೆ ವಿರೋಧವಾಗಿ ಬಡಿದಾಡುವ ಗುಂಪುಗಳು ಸಾಮಾಜಿಕ ತಾಣಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಕ್ರಿಯವಾಗಿವೆ. ಆಳುವ ಸರ್ಕಾರಗಳ ಭವಿಷ್ಯ ಬರೆಯಲು ಪ್ರಜಾ ಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ರಾಷ್ಟ್ರದಲ್ಲಿ ಮತದಾನದಂತಹ ಪ್ರಕ್ರಿಯೆ ಅಸ್ತಿತ್ವದಲ್ಲಿದೆ. ಭಾರತದ ಪ್ರತಿಯೊಬ್ಬ ಮತದಾರನೂ ನಿರ್ಣಾಯಕ ಪ್ರಭುವಾಗಿರುವಾಗ, ಜವಾಬ್ದಾರಿಯನ್ನು ಮರೆತು ಸಾಮಾಜಿಕ ತಾಣಗಳಲ್ಲಿ ಬೆಂಬಲಿಗರ ಹೆಸರಿನಲ್ಲಿ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದರೆ, ಎಂತಹ ಪ್ರಜ್ಞಾವಂತ ನಾಗರೀಕರಿಗೆ ಸಾಮಾಜಿಕ ತಾಣಗಳ ಕುರಿತು ಗೌರವ ಉಂಟಾಗದು.
ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳು ಮೊದಲು ಅಜ್ಜ ಅಜ್ಜಿಯರ ಜೊತೆ ಮತ್ತು ನೆರೆಮನೆಯ ಮಕ್ಕಳ ಜೊತೆ ಆಟವಾಡುತ್ತಾ ಕಾಲಕಳೆಯುತ್ತಾ ಜಗತ್ತನ್ನು ಗ್ರಹಿಸುತ್ತಿದ್ದವು. ಇಂದಿನ ಪೋಷಕರು ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟು ಅವುಗಳನ್ನು ಹುಟ್ಟಿನಿಂದ ಸಾಯುವವರೆಗೂ ಗ್ಯಾಜೆಟ್ ಗುಲಾಮರಾಗಿ ಬದುಕುವಂತೆ ಪ್ರೊತ್ಸಾಹಿಸುತ್ತಿದ್ದಾರೆ. ಪ್ರತಿಯೊಂದು ಕುಟುಂಬದಲ್ಲಿಯೂ ಸದಸ್ಯರು ತಮ್ಮದೇ ಆದ ಜಗತ್ತಿನಲ್ಲಿ ವಹರಿಸುತ್ತಾ ದ್ವೀಪಗಳಾಗಿ ಬದುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಗತ್ತನ್ನು ಕಾಡಿದ ಏಡ್ಸ್ ಕಾಯಿಲೆಯಂತೆ ನಮ್ಮ ಮಕ್ಕಳನ್ನು ಮತ್ತು ಯುವಜನತೆಯನ್ನು ನೋಮೊ ಪೋಬಿಯಾ ಕಾಡಿದರೆ ಆಶ್ಚರ್ಯವೇನಿಲ್ಲ.
( ವಿಜಯವಾಣಿ ದಿನಪತ್ರಿಕೆಯ2018 ರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ