ಮಂಗಳವಾರ, ಅಕ್ಟೋಬರ್ 17, 2023

ಯುದ್ಧದೆದುರು ಮಂಡಿಯೂರಿದ ವಿಶ್ವ (ಅಂಗವಿಕಲ) ಸಂಸ್ಥೆ

 


ಕಳೆದ ಕಲವು ವಾರಗಳಿಂದ ನಡೆಯುತ್ತಿರುವ  ಇಸ್ರೇಲ್ ಪ್ಯಾಲೆಸ್ತೇನ್ ನಡುವಿನ ಯುದ್ಧ ಜಗತ್ತಿನ ಪ್ರಜ್ಞಾವಂತ ನಾಗರೀಕರ ನಿದ್ದೆಗೆಡಿಸಿದೆ. ಮತಿಗೆಟ್ಟವರ ಈ ಯುದ್ಧದ ಹಿಂಸೆಯಿಂದ ಮಕ್ಕಳು ಮತ್ತು ಮಹಿಳೆಯರು ಅಮಾಯಕರಾಗಿ ಅಸು ನೀಗುತ್ತಿರುವುದನ್ನು ನೋಡಿದರೆ ಮನಸ್ಸು ಮುದುಡಿ ಹೋಗುತ್ತದೆ.

ಈ ಯುದ್ಧ ಕುರಿತಾಗಿ ಭಾರತದಲ್ಲಿ ಎರಡು ಬಣಗಳಾಗಿ ಸಿಡಿದು ಹೋಗಿರುವ  ಕೆಲವರು ಇಸ್ರೇಲ್ ಪರವಾಗಿ ನಿಂತರೆ, ಮತ್ತೇ ಹಲವರು ಪ್ಯಾಲೆಸ್ತಾನ್ ಪರವಾಗಿ ನಿಂತು ತಬ್ಬಲಿಗಳಾದ ಪ್ಯಾಲೆಸ್ತೆನಿಯರು ಎಂದು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಸ್ರೇಲ್ ಪ್ಯಾಲೆಸ್ತೇನ್ ಯುದ್ಧ ಇತಿಹಾಸ ಈ ಜಗತ್ತಿಗೆ ಹೊಸದೇನಲ್ಲ. ಆದರೆ, ಕಳೆದ ಹತ್ತು ವರ್ಷಗಳಿಂದ ತಣ್ಣಗಿದ್ದ ಈ ಯುದ್ಧವನ್ನು ಪ್ಯಾಲೆಸ್ತೇನ್ ಗಾಜಾ ಪಟ್ಟಿ ಎಂಬ ಪ್ರದೇಶದಲ್ಲಿ ಹಮಾಸ್ ಎಂಬ ಬಂಡುಕೋರರು ಮೂರು ವಾರಗಳ ಹಿಂದೆ ಇಸ್ರೇಲ್ ಮೇಲೆ ಏಕಾಏಕಿ ಐನೂರು ರಾಕೇಟ್ ಗಳ ಮೂಲಕ ದಾಳಿ ಮಾಡಿ 298 ನಾಗರೀಕರನ್ನು ಹತ್ಯೆಗೈಯ್ಯುವುದರ ಮೂಲಕ ಬಡಿದೆಬ್ಬಿಸಿದರು.

ಕಳೆದ ಮೂರು ದಶಕಗಳಲ್ಲಿ ಇಸ್ರೇಲ್ ಪುಟ್ಟ ರಾಷ್ಟ್ರವಾಗಿದ್ದರೂ ಅದು ಆಧುನಿಕ ತಂತ್ರಜ್ಞಾನದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ಕನಸಿನ ಕೂಸಾಗಿ ಬೆಳೆದಿರುವ  ಇಸ್ರೇಲ್ ರಾಷ್ಟ್ರವನ್ನು ಇಂದು ಪ್ಯಾಲೆಸ್ತೇನ್ ಮಾತ್ರವಲ್ಲ, ಮಧ್ಯ ಪ್ರಾಚ್ಯದ ಯಾವ ರಾಷ್ಟ್ರಗಳು ಮಣಿಸುವುದು ಅಷ್ಟು ಸುಲಭವಲ್ಲ.  ಈ ವಾಸ್ತವ ಸಂಗತಿ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಹಮಾಸ್ ಉಗ್ರರನ್ನು ಸಾಕಿ ಸಲಹುತ್ತಿರುವ ಪ್ಯಾಲೆಸ್ತೇನ್ ಸರ್ಕಾರಕ್ಕೆ ಗೊತ್ತಿಲ್ಲವೆ? ಪ್ಯಾಲೆಸ್ತೇನಿಯರ ಮೂರ್ಖತನದಿಂದಾಗಿ ಇಂದು ಸಾವಿರಾರು ಅಮಾಯಕ ನಾಗರೀಕರು ಜೀವ ಬಲಿಕೊಡಬೇಕಿದೆ. ವಸ್ತು ಸ್ಥಿತಿ ಹೀಗಿರುವಾಗ ಇಸ್ರೇಲ್ ಅಥವಾ ಪ್ಯಾಲೆಸ್ತೇನ್ ಪರವಾಗಿ ನಿಂತು ವಾದಿಸುವುದು ಅವಿವೇಕದ ಪರಮಾವಧಿ. ಮನುಕುಲಕ್ಕೆ ಅನಿಷ್ಠವಾಗಿ ಪರಿಣಮಿಸಿರುವ ಯುದ್ಧ ಮತ್ತು ಹಿಂಸೆಯ ಕುರಿತಾಗಿ ನಾವು ಮಾತನಾಡಬೇಕಿದೆ.

ಆಗಿ ಹೋದ ಇತಿಹಾಸವನ್ನು ಕೆದುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಅಮೇರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರಿಗೆ ಮರಳಿ ಅಮೇರಿಕಾವನ್ನು ದೊರಕಿಸಿಕೊಡಲಾಗದು. ಈ ಇಪ್ಪತ್ತೊಂದನೆಯ ಶತಮಾನದ ಜಗತ್ತು ಅತ್ಯಾಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಆತ್ಮಹತ್ಯೆಯ ಮಾರ್ಗದಲ್ಲಿ ಶರವೇಗದಲ್ಲಿ ಚಲಿಸುತ್ತಿದೆ. ಮುಂದಿನ ಮೂರು ದಶಕಗಳ ಅವಧಿಯಲ್ಲಿ ಅಂದರೆ, 2050 ರ ಅವಧಿಗೆ ಈ ಭೂಮಂಡಲದ ಬಹು ಭಾಗ ಇರುತ್ತದೆ  ಎಂಬುವುದರ ಬಗ್ಗೆ ಹವಾಮಾನ ಹಾಗೂ ಭೂ ಗರ್ಭ ಶಾಸ್ತ್ರದ ತಜ್ಞರಿಗೆ ನಂಬಿಕೆಯಿಲ್ಲ. ಹವಾಮಾನ ಬದಲಾವಣೆಯಿಂದ ಬತ್ತಿ ಹೋದ ನದಿಗಳು, ಅಕಾಲಿಕ ಮಳೆಯಿಂದ ಅನಿರೀಕ್ಷಿತವಾಗಿ ತುಂಬಿ ಹರಿಯುವ ನದಿಗಳು, ನಿರಂತರವಾಗಿ ಜಗತ್ತಿನಾದ್ಯಂದ ಕಾಡ್ಗಿಚ್ಚಿನಿಂದಾಗಿ ಹತ್ತಿ ಉರಿಯುತ್ತಿರುವ ಅರಣ್ಯಗಳು, ಕರಗುತ್ತಿರುವ ಹಿಮಗುಡ್ಡೆಗಳು, ದಿನೇ ದಿನೇ ಸಂಭವಿಸುತ್ತಿರುವ ಭೂಕಂಪ  ಇವೆಲ್ಲವೂ ಭವಿಷ್ಯದ ಜಗತ್ತಿನ ಇತಿಹಾಸದ ಬಗ್ಗೆ ಈಗಾಗಲೇ ಸೂಚನೆ ನೀಡಿವೆ.


ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಸಮಸ್ಯೆಗಳು ಉದ್ಭವವಾದಾಗ  ಶಾಂತರೀತಿಯಲ್ಲಿ ಪರಿಹರಿಸಿಕೊಳ್ಳಲು ಸೃಷ್ಟಿಯಾದ ವಿಶ್ವಸಂಸ್ಥೆ ಎಂಬ ಸಂಘಟನೆ ಈಗ  ಅಂಗವಿಕಲ ಕೂಸಿನಂತಾಗಿದೆ. ಕಳೆದ  ಐವತ್ತು ವರ್ಷಗಳ ಇತಿಹಾಸದಲ್ಲಿನಾನು ಬಲ್ಲ ಹಾಗೆ ಒಂದೇ ಒಂದು ಸಮಸ್ಯೆಯನ್ನು ಬಗೆಹರಿಸಿಲ್ಲ. ಯಾವ ಯುದ್ಧಗಳನ್ನೂ ತಡೆಗಟ್ಟಲು ಇದರಿಂದ ಸಾಧ್ಯವಾಗಿಲ್ಲ. ಅಂತರಾಷ್ಟ್ರೀಯ ನ್ಯಾಯಾಲಯ ಎಂಬ ಭಾಗವು ವಿಶ್ವ ಸಂಸ್ಥೆಯಲ್ಲಿದ್ದು ಅಲ್ಲಿ ಅಣಕು ನ್ಯಾಯಾಲಯ ನಡೆಯುತ್ತದೆ. 1972 ರಲ್ಲಿ ಅಮೇರಿಕಾವು ವಿಯಟ್ನಾಂ ಮೇಲೆ ಯುದ್ಧ ಸಾರಿದ ಘಟನೆ, 2002 ರಲ್ಲಿ ಕುವೈತ್ ಮೇಲೆ ಇರಾಕ್ ದಾಳಿ ಮಾಡಿತು ಎಂ ಬ ಏಕೈಕ ಕಾರಣದಿಂದ ಮಾರಕಾಸ್ತ್ರಗಳನ್ನು ಹೊಂದಿರವ ರಾಷ್ಟ್ರ ಎಂದು  ಇರಾಕ್ ರಾಷ್ಟ್ರವನ್ನು ಘೋಷಿಸುವುದರ ಮೂಲಕ ಅಲ್ಲಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅನ್ನು  ಅಮೇರಿಕಾ ಸದೆ ಬಡಿಯಿತು. ಆದರೆ, ಇರಾಕ್ ನಲ್ಲಿ ಯಾವುದೇ ರಸಾಯನಿಕ ಮಾರಕಾಸ್ತ್ರಗಳು ಪತ್ತೆಯಾಗಲಿಲ್ಲ. ಈ ಬಗ್ಗೆ ವಿಶ್ವ ಸಂಸ್ಥೆ ತುಟಿ ಬಿಚ್ಚಲಿಲ್ಲ. ನಮ್ಮ ನೆರೆಯ ಬರ್ಮಾ ರಾಷ್ಟ್ರದಲ್ಲಿ ಸೇನಾಧಿಕಾರಿಯ ಆಢಳಿತವಿದ್ದು, ಬೌದ್ಧ ಧರ್ಮದ ಬಂಡುಕೋರರಿಂದ ಲಕ್ಷಾಂತರ ಮಂಡಿ ರೋಹಿಂಗ್ಯಾ ಮುಸ್ಲಿಂ ಸಮುದಾಯದ ಜನತೆ ದೇಶ ಬಿಟ್ಟು ಬರಬೇಕಾಯಿತು. ಈ ಕುರಿತು ವಿಶ್ವ ಸಂಸ್ಥೆಯಲ್ಲಿ ಚರ್ಚೆಯಾಗಲಿಲ್ಲ. ಅಷ್ಟೇ ಏಕೆ? ಆಧುನಿಕ ಸರ್ವಾಧಿಕಾರಿ ಮತ್ತು ಹಿಟ್ಲರನ ಪ್ರತಿ ರೂಪದಂತೆ ಕಾಣುತ್ತಿರುವ ವ್ಲಾದಿಮೀರ್ ಪುಟಿನ್ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಗೆ ಕಾರಣನಾಗುತ್ತಿದ್ದಾನೆ. ಇದಕ್ಕೂ ವಿಶ್ವ ಸಂಸ್ಥೆಯಲ್ಲಿ ಪರಿಹಾರವಿಲ್ಲ.


ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂಬ ದೃಷ್ಟಿಕೋನದಿಂದ 1942 ರ ಲ್ಲಿ ಅಮೇರಿಕಾ. ರಷ್ಯಾ. ಇಂಗ್ಲೇಂಡ್ ಮತ್ತು ಪ್ರಾನ್ಸ್ ಹಾಗೂ ಚೀನಾ ರಾಷ್ಟçಗಳು ಒಪ್ಪಂಧಕ್ಕೆ  ಬಂದ ಫಲವಾಗಿ ರಾಷ್ಟçಗಳ ನಡುವಿನ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. 1943 ರ ಡಿಸಂಬರ್ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಮತ್ತು ಅಮೇರಿಕಾ ಅಧ್ಯಕ್ಷ ಪ್ರಾಂಕ್ಲಿನ್ ರೂಸ್ ವೆಲ್ಟ್ ಇರಾನಿನ ರಾಜಧಾನಿ ಟೆಹರಾನ್ ನಗರದಲ್ಲಿ ಪರಸ್ಪರ ಭೇಟಿಯಾಗಿ ಸಹಿ ಹಾಕಿದರು. ಇದರ ಫಲವೆಂಬಂತೆ  1945 ರ ಅಕ್ಟೋಬರ್ ತಿಂಗಳಿನಲ್ಲಿ ಐವತ್ತು ರಾಷ್ಟçಗಳ ಸದಸ್ಯತ್ವದೊಂದಿಗೆ ಅಮೇರಿಕಾದಲ್ಲಿ ವಿಶ್ವಸಂಸ್ಥೆ ಆರಂಭಗೊಂಡಿತು. ಸಹಜವಾಗಿ ಭದ್ರತಾಮಂಡಳಿಯ ಸದಸ್ಯ ರಾಷ್ಟçಗಳಾಗಿ ಐದು ಶಕ್ತಿ ರಾಷ್ಟçಗಳಾದ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಪ್ರಾನ್ಸ್ ಮತ್ತು ಚೀನಾ ಆಯ್ಕೆಯಾದವು. ಈಗ ವಿಶ್ವಸಂಸ್ಥೆಯಲ್ಲಿ 193 ಸದಸ್ಯರಾಷ್ಟçಗಳಿದ್ದರೂ ಸಹ ಎಲ್ಲಾ ಅಂತಿಮ ತೀರ್ಮಾನವು ಈ ಐದು ರಾಷ್ಟಗಳ ನಿರ್ಧಾರವನ್ನು ಅವಲಂಬಿಸಿದೆ. ವಿಶ್ವಸಂಸ್ಥಾಪನೆಯ ಉದ್ದೇಶಗಳಿಗೂ ಅದರ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ.  ಇಡೀ ಜಗತ್ತಿನಲ್ಲಿ ಯುದ್ಧ ಶಸ್ತಾçಸ್ರಗಳನ್ನು ಈ ಐದು ರಾಷ್ಟçಗಳು  ಮಾತ್ರ ಉತ್ಪಾದಿಸುತ್ತಿದ್ದು. ಇತರೆ ದೇಶಗಳಿಗೆ ಮಾರಾಟ ಮಾಡುವುದು ಇವುಗಳ ಮುಖ್ಯ ಗುರಿಯಾಗಿದೆ. ಹಾಗಾಗಿ ಯಾವ ರಾಷ್ಟಗಳು ನೆಮ್ಮದಿಯಿಂದ ಇರುವುದು ಅಥವಾ ಜನತೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಈ ರಾಷ್ಟçಗಳಿಗೆ ಬೇಕಾಗಿಲ್ಲ. ಈ ಕಾರಣದಿಂದಾಗಿ ಇವುಗಳ ಕನಸಿನ ಕೂಸುಗಳಾದ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಬಹುತೇಕ ಜಾಗತಿಕ ಸಂಸ್ಥೆಗಳು ಅಮೇರಿಕಾ ಸೇರಿದಂತೆ ಪ್ರಬಲ ರಾಷ್ಟçಗಳ ಕಣ್ಣಳತೆಯಲ್ಲಿ ಕಾರ್ಯ ನಿರ್ವಹಿಸುವ ಗುಲಾಮಗಿರಿ ಸಂಸ್ಥೆಗಳಾಗಿವೆ.

ಈ ಸಂದರ್ಭದಲ್ಲಿ ನಾವು ಧ್ವನಿ ಎತ್ತಬೇಕಾಗಿರುವುದು ಯಾವುದೋ ಒಂದು ರಾಷ್ಟ್ರದ ಪರವಾಗಿ ಅಲ್ಲ. ಯುದ್ಧ ಮತ್ತು ಹಿಂಸೆಯ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಬೃಹತ್ತಾದ ಕಹಳೆ ಇಂದಿನ ಅಗತ್ಯವಾಗಿದೆ.

ಚಿತ್ರ ಸೌಜನ್ಯ- ಸುಜಿತ್ ಕುಮಾರ್ ( ಡೆಕ್ಕನ್ ಹೆರಾಲ್ಡ್) ಮತ್ತು ಅಲೋಕ್ ( ಮುಂಬೈ) ಹಾಗೂ ರಾಯಿಟರ್ಸ್ ಸುದ್ದಿ ಸಂಸ್ಥೆ.

 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ