ಶುಕ್ರವಾರ, ನವೆಂಬರ್ 17, 2023

ಬಡತನವೆಂಬ ಬೆನ್ನ ಹಿಂದಿನ ಮಸಿ


ಮೊನ್ನೆ ಅಯೋಧ್ಯೆ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಸರಯೂ ನದಿಯ ದಂಡೆಯ ಮೇಲೆ 24 ಲಕ್ಷಗಳ ದೀಪವನ್ನು ಹಚ್ಚಿ ಜಾಗತಿಕ ದಾಖಲೆ ನಿರ್ಮಿಸಿದ್ದೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಗಮನಿಸಿದೆ. ಐದು ವರ್ಷದ ಹಿಂದೆ ಇಡೀ ದಿನ  ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನಲೆಯುಳ್ಳ ಅಯೋಧ್ಯೆ ನಗರವನ್ನು ಕಾಲ್ನಡಿಗೆಯಲ್ಲಿ ಸುತ್ತಾಡಿ, ಸಂಜೆ ಐದುಗಂಟೆಯಿಂದ ಏಳು ಗಂಟೆಯವರೆಗೆ ಸರಯೂ ನದಿಯ ದಂಡೆಯ ಮೇಲೆ ಕಡಲೆ ಕಾಯಿ ತಿನ್ನುತ್ತಾ ಕುಳಿತಿದ್ದೆ.

ನದಿಯ ಹಿನ್ನಲೆಯಲ್ಲಿ ಕಾಣುತ್ತಿದ್ದ ಐತಿಹಾಸಿಕ ಕಟ್ಟಡಗಳನ್ನು ವೀಕ್ಷಿಸುತ್ತಾ ಕುಳಿತಿರುವಾಗ ನದಿಯ ಇಕ್ಕೆಲಗಳ ದಂಡೆಯ ಸೋಪಾನಗಳ ದುರಸ್ತಿ ಕಾರ್ಯ ಭರದಿಂದ ಸಾಗಿತ್ತು.  ಇಡೀ ನದಿಯ ತೀರವನ್ನು ಮತ್ತು ಮೆಟ್ಟಿಲುಗಳನ್ನು ಕೇಸರಿ ಬಣ್ಣದಿಂದ ಅಲಂಕರಿಸಲಾಗುತ್ತಿತ್ತು. ಇದು ಒಂದು ಐತಿಹಾಸಿಕ ನದಿಯ ಮೂಲ ಚಹರೆಯನ್ನು ಬದಲಾಯಿಸಿತ್ತು. ಎದೆಯೊಳಗಿನ ಸಂಕಟವನ್ನು ಯಾರಿಗೂ ಹೇಳಕೊಳ್ಳಲಾಗದೆ ಹತ್ತಿರದಲ್ಲಿದ್ದ ಬಸ್ ನಿಲ್ದಾಣದಿಂದ  ಎಂಟತ್ತು ಕಿಲೊಮೀಟರ್ ದೂರದ ಜಿಲ್ಲಾ ಕೇಂದ್ರವಾದ  ಪೈಜಾಬಾದ್ ನಗರಕ್ಕೆ ಬಂದು ಊಟ ಮಾಡಿ ಮಲಗಿದೆ.

ದೀಪೋತ್ಸವವನ್ನು ದೃಶ್ಯ ಮಾಧ್ಯಮಗಳಲ್ಲಿ ಜಾಗತಿಕ ಉತ್ಸವ  ಎಂಬಂತೆ ತೋರಿಸುತ್ತಿದ್ದಾಗ, ಕೆಲವರು ದ್ರೋಣ್ ಸಹಾಯದಿಂದ ದೃಶ್ಯವನ್ನು ಸೆರೆ ಹಿಡಿಯುವಾಗ ಬಡವರ ಮಕ್ಕಳು ದೀಪದಿಂದ ಎಣ್ಣೆಯನ್ನು ತಾವು ತಂದಿದ್ದ ಡಬ್ಬಗಳಿಗೆ ಸುರಿದುಕೊಂಡು ಓಡುತ್ತಿರುವ ದೃಶ್ಯಗಳೂ ಸಹ ಸೆರೆಯಾಗಿತ್ತು. ಅಂದರೆ, ಏಕಕಾಲಕ್ಕೆ ಭಾರತದ ಬಡತನ ಮತ್ತು ಧಾರ್ಮಿಕ ಪ್ರಭಾವದ ಆವೇಶ ಈ ಎರಡೂ ಅಂಶಗಳು ಜಗತ್ತಿಗೆ ಅನಾವರಣಗೊಂಡವು. ಭಾರತದ ಬಡತನವನ್ನು ಎಂತಹದ್ದೇ ಜಾಹಿರಾತು ಮತ್ತು ತಂತ್ರಗಾರಿಕೆಯ ಮಾತುಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದರೆ ಅದು ಯಾವುದಾದರೂ ಒಂದು ಸನ್ನಿವೇಶದಲ್ಲಿ ಮತ್ತು ಒಂದು ರೂಪದಲ್ಲಿ ಈ ಜಗತ್ತಿನೆದುರು ಅನಾವರಣಗೊಳ್ಳುತ್ತದೆ.

ಹೂಸನ್ನು ಪರಿಮಳ ಎಂದು ಬಣ್ಣಿಸುವುದು ಸುಲಭ ಆದರೆ, ಅದರ ಕೆಟ್ಟ ಮತ್ತು ನೈಜ ವಾಸನೆಯನ್ನು ತಡೆದುಕೊಳ್ಳುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ ನಡಾವಳಿಗಳು. ಇಂದಿನ ದಿನಗಳಲ್ಲಿ ಒಂದು ಕೆ.ಜಿ.ಅಕ್ಕಿ ಅರವತ್ತು ರೂಪಾಯಿ, ಒಂದು ಲೀಟರ್ ಸಾಮಾನ್ಯ ಅಡುಗೆ ಎಣ್ಣೆ ನೂರ ನಲವತ್ತು ರೂಪಾಯಿ, ಒಂದು ಕೇಜಿ ತೊಗರಿ ಬೇಳೆ ನೂರ ತೊಂಬತ್ತು ರೂಪಾಯಿ. ತರಕಾರಿ ಬೆಲೆಯಲ್ಲಿ ಯಾವೊಂದು ತರಕಾರಿಯು ಕೆ.ಜಿ.ಐವತ್ತು ರೂಪಾಯಿಗಿಂತ ಕಡಿಮೆ ಇಲ್ಲ. ಇಂತಹ  ದುರಿತ ಕಾಲದಲ್ಲಿ ಎರಡು ಮಕ್ಕಳನ್ನು ಹೊಂದಿರುವ ಒಬ್ಬ ಬಡಕೂಲಿ ಕಾರ್ಮಿಕನಿಗೆ ತನ್ನ ಕುಟುಂಬ ನಿರ್ವಹಣೆಗೆ ದಿವೊಂದಕ್ಕೆ ಕನಿಷ್ಠ ಮುನ್ನೂರು ರೂಪಾಯಿ ಬೇಕು. ಅಂದರೆ ತಿಂಗಳಿಗೆ ಒಂಬತ್ತು ಸಾವಿರ ನಿಗದಿತ ಆದಾಯ ಅವನಿಗೆ ಎಂದು ನಾವು ನಂಬಲು ಸಾಧ್ಯವೆ?

ಅಧಿಕಾರಸ್ಥರ ತುತ್ತೂರಿಗಳಾಗಿರುವ ಮಾಧ್ಯಮಗಳು ರಾಜಕೀಯ ನಾಯಕರು ಹೇಳುವ ಮಾತುಗಳಿಗೆ ಒಗ್ಗರಣೆ ಮತ್ತು ಮಸಾಲೆ ಹಾಕಿ ಅತ್ಯಂತ ರೋಚಕವಾಗಿ ಓದುಗರಿಗೆ ಮತ್ತು ವೀಖ್ಷಕರಿಗೆ ತಲುಪಿಸುತ್ತಿವೆ. ನಾವು ಅವುಗಳನ್ನು ನಂಬಿ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ರಾಜಕೀಯ ನಾಯಕರಿಗೆ ಜಗದೇಕವೀರನ ಪಟ್ಟ ಕಟ್ಟಿ ಕೊಂಡಾಡುತ್ತೇವೆ. ಏಕೆಂದರೆ, ನಮಗೆ ಮನೆಯಿದೆ.ಕಾರುಗಳಿವೆ. ನಿಗದಿತ ಆದಾಯವಿದೆ ಜೊತೆಗೆ ಸದಾ ನಮ್ಮನ್ನು ಮೈಮರೆಸುವಂತಹ ಕ್ರಿಕೇಟ್ ಪಂದ್ಯಗಳಿವೆ. ಬಿಗ್ ಬಾಸ್ ನಂತಹ ರೋಚಕ ಕಾರ್ಯಕ್ರಮಗಳಿವೆ ಇವೆಲ್ಲಕ್ಕಿಂತ ಹೆಚ್ಚಾಗಿ ಓ.ಟಿ.ಟಿ. ವೇದಿಕೆಯಲ್ಲಿ ಸೂಪರ್ ಸ್ಟಾರ್ ಗಳ ಸಿನಿಮಾಗಳಿವೆ. ದಿನ ನಿತ್ಯ ಸಾಯುವರ ಬಗ್ಗೆ ಯೋಚಿಸಲು ನಮಗೆ ಸಮಯವಿಲ್ಲ.

ಮಕ್ಕಳ ದಿನಾಚರಣೆ ಎಂದರೆ, ಭಾರತದ ಮೊದಲ ಪ್ರಧಾನಿ ನೆಹರೂ ಅವರ ಜನ್ಮದಿನಾಚರಣೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ.  ಆ ಪುಣ್ಯಾತ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ಅವರ ಮುಂದೆ ಎರಡು ಸವಾಲುಗಳಿದ್ದವು. ಒಂದು ಕೋಮು ಸಂಘರ್ಷವನ್ನು ತಡೆಗಟ್ಟುವುದು ಮತ್ತು  ಎರಡನೆಯದು ಭಾರತೀಯರ ಬಡತನ ಮತ್ತು ಅನಕ್ಷರತೆಯನ್ನು ತೊಡೆದು ಹಾಕುವುದು ಜೊತೆಗೆ ಉದ್ಯೋಗ ಸೃಷ್ಟಿ ಮಾಡಬೇಕಾದ ಅನಿವಾರ್ಯ. ಈ ಕಾರಣದಿಂದ ಅವರು ಗಾಂಧೀಜಿಯವರ ವಿರೋಧವನ್ನು ಕಟ್ಟಿಕೊಂಡು, ಗಾಂಧಿಜಿಯವರ ಗುಡಿಕೈಗಾರಿಕೆಯ ಸಿದ್ಧಾಂತವನ್ನು ಬದಿಗೊತ್ತು ಮಹಾಲನೋಬಸ್ ಎಂಬ ಅರ್ಥಶಾಸ್ತ್ರಜ್ಞರ ನೆರವಿನಿಂದ ಸಣ್ಣ ಮತ್ತು ಭಾರಿ ಕೈಗಾರಿಕೆಗಳಿಗೆ ಒತ್ತು ನೀಡುವ ಆರ್ಥಿಕತೆಯನ್ನು ಜಾರಿಗೆ ತಂದರು.

ಇದರ ಪರಿಣಾಮವಾಗಿ ಹೆಚ್.ಎಲ್, ಐ.ಟಿ.ಐ.( ಇಂಡಿಯನ್ ಟೆಲಿಪೋನ್ ಇಂಡಸ್ತ್ರೀಸ್)  ಬಿ.ಇ.ಎಲ್. ಹೀಗೆ ಭಾರಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ಪೂರಕವಾಗಿ ಐ.ಟಿ.ಐ. ವಿದ್ಯಾಸ್ಥೆಗಳು ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಮೆಡಿಕಲ್ ಕಾಲೇಜುಗಳು ಅಸ್ತಿತ್ವಕ್ಕೆ ಬಂದವು. ಇಂದು ಸಾಮಾಜಿಕ ತಾಣಗಳಲ್ಲಿ ನೆಹರೂ ಕುರಿತಂತೆ ವಿಷ ಕಕ್ಕುತ್ತಿರುವ ಮಿಡಿನಾಗರಗಳಿಗೆ ನಮ್ಮ ಅಪ್ಪಂದಿರು  ನೆಹರೂ ಸೃಷ್ಟಿಸಿದ ಕೈಗಾರಿಕೆಗಳಿಂದ ಬದುಕು ಕಟ್ಟಿಕೊಂಡವರು ಮತ್ತು ಮಕ್ಕಳನ್ನು ಓದಿಸಿದವರು ಎಂಬುದು ಮರೆತು ಹೋಗಿದೆ.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರು ವ ಕೇರಳ ಮೂಲದ ಸುಜಿತ್ ಕುಮಾರ್ ಅವರ ಈ ಚಿತ್ರವನ್ನು ನೋಡಿ ಹಳೆಯ ನೆನಪುಗಳು ಮರುಕಳಿಸಿದವು.

ಜಗದೀಶ್ ಕೊಪ್ಪ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ