1972
ರಲ್ಲಿ ಗುಲ್ಬರ್ಗಾ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಶಾಸಕನಾಗಿ ವಿಧಾನ ಸಭೆ
ಪ್ರವೇಶಿಸುವುದರ ಮೂಲಕ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರು 46 ವರ್ಷಗಳ ತಮ್ಮ
ಸುಧೀರ್ಘ ರಾಜಕಾರಣದಲ್ಲಿ ನಲವತ್ತು ವರ್ಷಗಳ ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಮತ್ತು ಕೇಂದ್ರ ಸಚಿವ
ಸಂಪುಟದಲ್ಲಿ ಸಚಿವರಾಗಿ , ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಸುವುದರ ಮೂಲಕ ರಾಷ್ಟ್ರದ
ಗಮನ ಸ ಳೆದ ಹಿರಿಯ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಹೈದರಾಬಾದ್
ಕರ್ನಾಟಕದಲ್ಲಿ ಸುದೀರ್ಘ ರಾಜಕಾರಣದಲ್ಲಿದ್ದುಕೊಂಡು ಒಂಬತ್ತು ಬಾರಿ ರಾಜ್ಯ ವಿಧಾನಸಭೆಗೆ ಹಾಗೂ ಎರಡು
ಬಾರಿ ಲೋಕಸಭೆಗೆ ಆಯ್ಕೆಯಾಗುವುದರ ಮೂಲಕ ಖರ್ಗೆಯವರು ಸೋಲಿಲ್ಲದ ಸರದಾರರಾಗಿ ದಾಖಲೆ ನಿರ್ಮಿಸಿರುವುದು
ಸುಲಭದ ಸಂಗತಿಯಲ್ಲ. . ರಾಜಕಾರಣವೆಂದರೆ, ಅಧಿಕಾರವನ್ನು ಅನುಭವಿಸುವುದು ಎನ್ನುವ ಮಾತು ಚಾಲ್ತಿಯಲ್ಲಿರುವ ಈ ಕಾಲಘಟ್ಟದಲ್ಲಿ ಜನರ ಸೇವೆಯನ್ನು ಮತ್ತು ತನ್ನ ಕ್ಷೇತ್ರದ
ಅಭಿವೃದ್ಧಿಯನ್ನು ಕಾಯಕವೆಂದು ಭಾವಿಸಿ, ಅದನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಖರ್ಗೆಯ ಕರ್ತೃತ್ವ
ಶಕ್ತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಸದಾ
ಸುದ್ದಿಜಗತ್ತು ಮತ್ತು ಪ್ರಚಾರದಿಂದ ದೂರವಿರುವ ಮಲ್ಲಿಕಾರ್ಜುನ ಖರ್ಗೆಯವರು ಮೇಲುನೋಟಕ್ಕೆ ತೀರಾ ಗಂಭೀರವಾದ
ವ್ಯಕ್ತಿತ್ವದವರು ನಿಜ. ಆದರೆ, ಅಧಿಕಾರದ ಹಪಾಹಪಿತನವಿಲ್ಲದ,
ಎಂದಿಗೂ ಗುಂಪುಗಾರಿಕೆಯನ್ನು ಮಾಡದ ಅಥವಾ ತನ್ನ ಜಾತಿಯ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ಲಾಬಿ ಮಾಡದ
ಖರ್ಗೆಯವರ ಸ್ವಾಭಿಮಾನದ .ಗುಣಗಳ ಹಿಂದೆ ಅವರ ಅಪಾರ ಓದು, ತಿಳುವಳಿಕೆ, ವಿದ್ವತ್ತು ಹಾಗೂ ಡಾ.ಬಿ.ಆರ್.
ಅಂಬೇಡ್ಕರ್ ಮತ್ತು ಗೌತಮ ಬುದ್ಧನ ಪ್ರಭಾವಗಳಿವೆ. ಅತ್ಯಂತ ಮಾಗಿದ ಹಾಗೂ ಪ್ರಬುದ್ಧ ಚಿಂತನೆಗಳ ವ್ಯಕ್ತಿತ್ವದ
ಖರ್ಗೆಯವರ ಬಳಿ ಅರ್ಧ ಗಂಟೆ ಕುಳಿತು ಮಾತನಾಡಿದರೆ ಸಾಕು, ಅವರು ಎಂತಹ ಧೀಮಂತ ರಾಜಕಾರಣಿ ಎಂಬುವುದು
ನಮ್ಮ ಅನುಭವಕ್ಕೆ ಬರುತ್ತದೆ.
ಇದೀಗ
ಎಪ್ಪತ್ತೈದು ವರ್ಷಕ್ಕೆ ಕಾಲಿಟ್ಟಿರುವ ಮಲ್ಲಿಕಾರ್ಜುನ ಖರ್ಗೆಯವರ ಕುರಿತಾಗಿ ಗುಲ್ಬರ್ಗಾ ವಿಶ್ವ ವಿದ್ಯಾನಿಲಯದ
ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಟಿ. ಪೋತೆಯವರು ಬರೆದಿರುವ “ ಬಾಬಾ ಸಾಹೇಬರೆಡೆಗೆ”
ಎಂಬ ಜೀವನ ಕಥನ ನಮಗೆ ಮಲ್ಲಿಕಾರ್ಜುನ ಖರ್ಗೆಯವರು
ಬದುಕಿನ ಎಲ್ಲಾ ಮಗ್ಗುಲುಗಳನ್ನು ಸಮರ್ಥವಾಗಿ ಪರಿಚಯಿಸಿಕೊಡುವ ಮಹತ್ವದ ಕೃತಿಯಾಗಿದೆ. ಹಲವು ವರ್ಷಗಳಿಂದ ಖರ್ಗೆಯರು ಮತ್ತು ಅವರ ಕುಟುಂಬದ ಜೊತೆ
ಒಡನಾಡುತ್ತಾ ಬಂದಿರುವ ಪೋತೆಯವರು ಖರ್ಗೆಯವರ ಬಾಲ್ಯದ ಬಡತನ. ಅವರ ಅವರ ಓದಿನ ಆಕಾಂಕ್ಷೆ ಮತ್ತು ತನ್ನ
ಪುತ್ರನನನ್ನು ಓದಿಸಿ ಸಾಹೇಬನನ್ನಾಗಿ ಮಾಡಬೇಕೆಂಬ ಏಕೈಕ ಆಸೆಯಿಂದ ಬೀದರ್ ಜಿಲ್ಲೆಯ ಹಳ್ಳಿಯಿಂದ ಇಟ್ಟಿಗೆ
ತಯಾರಿಸುವವರ ಬಳಿ ಕೂಲಿ ಕಾರ್ಮಿಕರಾಗಿದ್ದ ಖರ್ಗೆಯವರ ತಂದೆ ಮಾಪಣ್ಣ ಖರ್ಗೆಯವರು ಗುಲ್ಬರ್ಗ ನಗರಕ್ಕೆ
ಬಂದು ಅಲ್ಲಿನ ಜವಳಿ ಮಿಲ್ ನಲ್ಲಿ ಕೂಲಿ ಕಾರ್ಮಿಕನಾಗಿ ಸೇರಿ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದ
ಕಥೆಯನ್ನು ಲೇಖಕರು ಹೃದಯಂಗಮವಾಗಿ ಚಿತ್ರಿಸಿದ್ದಾರೆ.
ಖರ್ಗೆಯವರ ಬಡವರ ಹಾಗೂ ಹಿಂದುಳಿದವರ ಮೇಲಿನ ಪ್ರೀತಿ ಮತ್ತು ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವವಿದೆ. ತಾನು
ಮತ್ತು ತನ್ನ ತಂದೆ ಒಂದೆ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದನ್ನು ಹಾಗೂ ತನ್ನನ್ನು ಅಪ್ಪ ಬೆಳಿಗ್ಗೆ
ಹೆಗಲ ಮೇಲೆ ಕೂರಿಸಿಕೊಂಡು ಹೋಗಿ ಶಾಲೆಗೆ ಬಿಟ್ಟು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಘಟನೆ ಮತ್ತು
ಆನಂತರ ಕೂಲಿ ಕೆಲಸ ಮುಗಿಸಿ ಬಂದು ಸಂಜೆ ಶಾಲೆಯಿಂದ
ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದದನ್ನು ಭಾವುಕರಾಗಿ ನೆನೆಯುವಾಗ ಮಲ್ಲಿಕಾರ್ಜುನ
ಖರ್ಗೆಯವರ ಕಣ್ಣಾಲಿಗಳು ಒದ್ದೆಯಾಗುತ್ತವೆ. 1972 ರಲ್ಲಿ ಪ್ರಥಮವಾಗಿ ವಿಧಾನ ಸಭೆಗೆ ಶಾಸಕರಾಗಿ ಪ್ರವೇಶ
ಮಾಡಿದ ದಿನದಿಂದ ಇಂದಿನವರೆಗೂ ಖರ್ಗೆಯವರು ಶಾಸಕರಾಗಿ, ಸಚಿವರಾಗಿ ಮತ್ತು ಲೋಕಸಭೆಯ ಸದಸ್ಯರಾಗಿ ಮಾಡಿರುವ
ಕೆಲಸಗಳನ್ನು ಲೇಖಕರು ಈ ಕೃತಿಯಲ್ಲಿ ಸವಿವರಾಗಿ ಅಂಕಿ ಅಂಶಗಳ ಸಮೇತ ದಾಖಲಿಸಿದ್ದಾರೆ. ಜೊತೆಗೆ ಕಳೆದ
ಒಂದು ದಶಕದಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಗುಲ್ಬರ್ಗಾ ನಗರವನ್ನು
ಅವರು ಪರಿವರ್ತಿಸಿರುವ ರೀತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಶ್ರೀ ಮಲ್ಲಿಕಾರ್ಜುನ
ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಸ್ತರಿಸಿದ
ರೈಲ್ವೆ ಯೋಜನೆಗಳು, ಅಲ್ಲಿಗೆ ತಂದ ಕಛೇರಿಗಳು ಮತ್ತು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗಾ
ನಗರಕ್ಕೆ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಅವುಗಳ ಭವ್ಯ ಕಟ್ಟಡ, ಬೆಂಗಳೂರು
ಮತ್ತು ಹುಬ್ಬಳ್ಳಿ ನಗರಗಳಲ್ಲಿ ಮೇಲ್ದರ್ಜೆಗೆ ಏರಿಸಲ್ಪಟ್ಟ ಆಸ್ಪತ್ರೆಗಳು, ಗುಲ್ಬರ್ಗಾ ನಗರದಲ್ಲಿ
ನಿರ್ಮಾಣವಾಗಿರುವ ರಿಂಗ್ ರಸ್ತೆ ಹಾಗೂ ಅಲ್ಲಿನ ವಿಶಾಲವಾದ ಮುಖ್ಯ ರಸ್ತೆಗಳು
ಇವೆಲ್ಲವೂ ಖರ್ಗೆಯವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಸ್ವತವಾಗಿ ದಾಖಲಾಗುವಂತೆ ಮಾಡಿವೆ. ಜೊತೆಗೆ
ಹೈದರಾಬಾದ್ ಕರ್ನಾಟಕದ ಹರಿಕಾರನನ್ನಾಗಿ ಮಾಡಿವೆ.
ಗುಲ್ಬರ್ಗಾ ನಗರವನ್ನು
ಪ್ರಸಿದ್ಧ ಪ್ರವಾಸಿ ತಾಣ ಮಾಡುವುದಲ್ಲಿ ಖರ್ಗೆಯವರ ಸಾಧನೆ ಅಪ್ರತಿಮವಾದುದು. ಸೇಡಂ ರಸ್ತೆಯಲ್ಲಿ ಗುಲ್ಬರ್ಗಾ
ವಿ.ವಿ. ಗೆ ಹೊಂದಿಕೊಂಡಿರುವ ಹದಿನೆಂಟು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಿದ್ಧಾರ್ಥ ವಿಹಾರ ಎಂಬ
ಬುದ್ಧ ದೇಗುಲವನ್ನು ನಿರ್ಮಿಸಿ, ಅದನ್ನು ದಕ್ಷಿಣ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದ ಅತ್ಯುತ್ತಮ
ಬುದ್ಧ ದೇಗುಲವನ್ನಾಗಿ ಮಾಡಿದ್ದಾರೆ. ಅಲ್ಲಿನ ಪ್ರಶಾಂತ ಮೌನ, ಸ್ವಚ್ಛತೆ ಮತ್ತು ಗಿಡಮರಗಳ ಹಸಿರು,
ಎಲ್ಲವೂ ಮನಸ್ಸಿಗೆ ಮುದನೀಡುತ್ತವೆ. ಒಂದು ಸಂಸ್ಥೆ ಅಥವಾ ಒಂದು ಸರ್ಕಾರ ಮಾಡಬಹುದಾದ ಕೆಲಸವನ್ನು ಇಚ್ಛಾ
ಶಕ್ತಿ ಇರುವ ಒಬ್ಬ ವ್ಯಕ್ತಿ ಕೂಡ ಮಾಡಬಲ್ಲ ಎಂಬುದನ್ನು ಈ ದೇಗುಲದ ಮೂಲಕ ಮಲ್ಲಿಕಾರ್ಜುನ ಖರ್ಗೆಯವರು
ತಮ್ಮೊಳಗಿನ ದೈತ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಬುದ್ಧನ ಕುರಿತಾಗಿ ಹಾಗೂ ಅಲ್ಲಿನ
ದೇಗುಲ ಕುರಿತಾಗಿ ಅವರು ಎಷ್ಟು ಆಳವಾಗಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆಂದರೆ, ಈ ವರ್ಷದ ಬುದ್ಧ
ಪೂರ್ಣಿಮೆಯ ದಿನದಂದು ಬೆಳಗಿನ ವೇಳೆ ಅವರೊಂದಿಗೆ ದೇಗುಲದ ಆವರಣದಲ್ಲಿ ನಾನು ಸುತ್ತಾಡುತ್ತಿದ್ದೆ.
ನೆಲಕ್ಕೆ ಹಾಸಿರುವ ಕಲ್ಲುಚಪ್ಪಡಿಯ ಮೇಲೆ ಬಿದ್ದಿದ್ದ ಒಣಗಿದ ಬೇವಿನ ಮರದ ಎಲೆಗಳನ್ನು ಒಂದೊಂದಾಗಿ
ಆಯ್ದು ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತಾ ಅವರು
ನಡೆಯುತ್ತಿದ್ದರು. ಬೇಸಿಗೆಯಲ್ಲಿ ನಲವತ್ತೈದು ಡಿಗ್ರಿ ಉಷ್ಣಾಂಶ ಇರುವ ಗುಲ್ಬರ್ಗಾ ನಗರದಲ್ಲಿ ಬೌದ್ಧ ವಿಹಾರದ
ಬಳಿ ಸೆಕೆ ಅಥವಾ ಬಿಸಿಲು ಎನಿಸುವುದಿಲ್ಲ.ಅಷ್ಟೊಂದು ಬೇವಿನ ಮರಗಳನ್ನು ಅವರು ಮಕ್ಕಳ ಹಾಗೆ ಜೋಪಾನ
ಮಾಡಿ ಬೆಳಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರನ್ನು ಕಳೆದ ಐದು ವರ್ಷದಿಂದೀಚೆಗೆ ಬಹಳ ಆಸಕ್ತಿಯಿಂದ ನಾನು ಗಮನಿಸುತ್ತಾ ಬಂದಿದ್ದೀನಿ. ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ
ನಾಯಕರಾಗಿ ಮೋದಿ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸುವ ರೀತಿಗೆ ಮತ್ತು ಅವರ ವಾಕ್ ಚಾತುರ್ಯಕ್ಕೆ ನಾನು ವಿಸ್ಮಯಗೊಂಡಿದ್ದೇನೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದ ನಂತರ, ಲೋಕಸಭೆಯಲ್ಲಿ ಖರ್ಗೆಯವರು ಸರ್ಕಾರದ ಸಾಧನೆಯನ್ನು
ಬಣ್ಣಿಸುತ್ತಾ “ ನಿಮ್ಮದು ಚಾರ್ ಆಣೆ ಕಾ ಮುರ್ಗಾ, ಬಾರ್ ಆಣೆ ಕಾ ಮಸಾಲ” ಎಂಬ ಉರ್ದು ಗಾದೆಯಂತೆ ನಾಲ್ಕಾಣೆ
ಕೋಳಿಗೆ ಹನ್ನೆರೆಡಾಣೆ ಮಸಾಲೆ ಅರೆಯುವ ಸರ್ಕಾರ ಎಂದು ಜರಿದಿದ್ದರು.ವಿಧಾನ ಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ
ಎಂದಿಗೂ ಅಸಂಸದೀಯ ಪದ ಬಳಕೆ ಮಾಡದ, ತುಟಿ ಮೀರಿ ಮಾತನಾಡದ
ಖರ್ಗೆಯವರು ಚರ್ಚೆಗೆ ಮುನ್ನ ನಿಖರವಾದ ಅಂಕಿ ಅಂಶಗಳನ್ನು ಎದುರಿಗೆ ಇಟ್ಟುಕೊಂಡು ವಾದ ಮಂಡಿಸುವ ಪರಿಗೆ
ಆಡಳಿತಾ ರೂಡ ಬಿ.ಜೆ.ಪಿ. ಪಕ್ಷದ ಎಲ್ಲಾ ನಾಯಕರಲ್ಲಿ ಖರ್ಗೆಯವರ ಕುರಿತಾಗಿ ಒಂದು ರೀತಿ ನೈತಿಕ ಭಯವಿದೆ..
ಇದು ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ತನ್ನ ಅಸ್ತಿತ್ವ
ಕಳೆದುಕೊಳ್ಳುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಖರ್ಗೆಯವರ ನಾಯಕತ್ವ ಮತ್ತು ಅವರ ನಡುವಳಿಕೆ ಹಾಗೂ ಮಾತುಗಾರಿಕೆಯಿಂದ
ಒಂದಿಷ್ಟು ಘನತೆ ಮತ್ತು ಮೌಲ್ಯ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು.
ಇಂತಹ ಹಿರಿಯ ಧೀಮಂತ
ರಾಜಕಾರಣಿ ಮತ್ತು ರಾಜಕೀಯ ಮುತ್ಸದಿಗೆ ರಾಜ್ಯದ ಮುಖ್ಯಮಂತ್ರಿ ಪದವಿ ಇದುವರೆಗೆ ಏಕೆ ದಕ್ಕಲಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿ. ಎಂದಿಗೂ
ಕೆಳಮಟ್ಟದ ರಾಜಕಾರಣಕ್ಕೆ ಇಳಿಯಲಾರದ ಅವರ ಘನತೆಯ ರಾಜಕಾರಣ ಇದಕ್ಕೆ ಕಾರಣವಿರಬಹುದು. ಇದನ್ನು ಮನಸ್ಸಿಗೆ
ಹಚ್ಚಿಕೊಳ್ಳದೆ ಅವರು ತನ್ನ ನೆಲ ಹಾಗೂ ಜನರ ಪರವಾಗಿ
ಅವರು ಸೇವೆ ಸಲ್ಲಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. ಇಂದಿಗೂ ಕೂಡ ತಾನು ಹುಟ್ಟಿ ಬೆಳೆದ ಬೀದರ್
ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮವನ್ನು ಅವರು ಮರೆತಿಲ್ಲ. ತಾವು ಪ್ರತಿನಿಧಿಸುವ ಲೋಕ
ಸಭಾ ಕ್ಷೇತ್ರಕ್ಕೆ ಅದು ಒಳಪಡದಿದ್ದರೂ ಸಹ, ಆ ಗ್ರಾಮವನ್ನು ಅವರು ಅಭಿವೃದ್ಧಿ ಪಡಿಸುರುವ ರೀತಿ ಪ್ರತಿಯೊಬ್ಬ
ಜನಪ್ರತಿನಿಧಿಗೆ ಮಾದರಿಯಾಗಿದೆ. ಹೈಸ್ಕೂಲು, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ
ಆಸ್ಪತ್ರೆ, ಕೃಷಿ ಸಲಹಾ ಕೇಂದ್ರ, ಕುಡಿಯುವ ನೀರು, ರಸ್ತೆ ಇವೆಲ್ಲವನ್ನು ಒಳಗೊಂಡಿರುವ ವರವಟ್ಟಿ ಗ್ರಾಮದ
ಜನತೆ ನಿಜಕ್ಕೂ ಪುಣ್ಯವಂತರು.ಏಕೆಂದರೆ, ಅವರು ಈ ನಾಡಿಗೆ ಒಬ್ಬ ಶ್ರೇಷ್ಠ ಜನಪ್ರತಿನಿಧಿಯನ್ನು ಹಾಗೂ
, ಸ್ವಾಭಿಮಾನದ ರಾಜಕೀಯ ನಾಯಕನನ್ನು ನಾಡಿಗೆ ನೀಡಿದ ಕೀರ್ತಿ ಆ ನೆಲಕ್ಕೆ ಸಲ್ಲುತ್ತದೆ.
ಹೆಚ್.ಟಿ. ಪೋತೆಯವರು
ಖರ್ಗೆಯವರ ಕುರಿತಾಗಿ ಮತ್ತು ಅವರ ಶ್ರೀಮತಿಯವರಾದ ರಾಧಾ ಬಾಯಿ ಯವರ ಮಾತೃವಾತ್ಸಲ್ಯ ಕುರಿತಾಗಿ ತುಂಬು
ಹೃದಯದಿಂದ ಈ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿದ್ದಾರೆ.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ರಾಧಾಬಾಯಿ ಅಮ್ಮ ನಮ್ಮೆದುರು
ಸಾಕ್ಷಿಯಾಗಿದ್ದಾರೆ. ತಮ್ಮ ಪತ್ನಿಯ ಸಹಕಾರವನ್ನು ಖರ್ಗೆಯವರು ಪ್ರತಿ ಸಂದರ್ಭದಲ್ಲಿಯೂ ಕೃತಜ್ಞತೆಯಿಂಸ
ಸ್ಮರಿಸುತ್ತಾರೆ. ಈ ಕೃತಿಯನ್ನು ಓದುತ್ತಿದ್ದಂತೆ ನಮಗೆ ಮಲ್ಲಿಕಾರ್ಜುನ ಖರ್ಗೆಯವರ ಮೇಲಿನ ಗೌರವ ಹೆಚ್ಚಾಗಿ
ಅವರು ಮತ್ತಷ್ಟು ಹತ್ತಿರವಾಗುತ್ತಾರೆ. ನಾಡಿನ ಧೀಮಂತ ರಾಜಕಾರಣಿಯೊಬ್ಬರ ಈ ಜೀವನಗಾಥೆಯ ಕೃತಿಯನ್ನು
ಕರ್ನಾಟಕ ಸರ್ಕಾರದ ವಿಧಾನಸಭಾ ಸಚಿವಾಲಯವು ಖರೀದಿಸಿ, ಪ್ರತಿಯೊಬ್ಬ ಶಾಸಕನಿಗೂ ಉಡುಗೊರಯಾಗಿ ನೀಡಬೇಕಿದೆ.
ಏಕೆಂದರೆ, ಮಲ್ಲಿಕಾರ್ಜುನ ಖರ್ಗೆಯ ಜೀವನದ ಹೋರಾಟದ
ಕಥನ ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂದು ತೋರಿಸಿಕೊಡುವುದರ
ಜೊತೆಗೆ ಜನಪ್ರತಿಗಳು ಒಂದಿಷ್ಟು ಸುಧಾರಿಸಬಹುದು .ಅಂತಹ ಮಹತ್ವದ ಕೃತಿ ಇದಾಗಿದೆ.