ಗುರುವಾರ, ಜೂನ್ 25, 2015

ಬಡತನ-ಹಸಿವು ಮತ್ತು ಕ್ರೌರ್ಯ




ಇದು ಸುಮಾರು ಏಳೆಂಟು ವರ್ಷಗಳ ಹಿಂದಿನ ಘಟನೆ. ಎಸ್.ಎಂ. ಕೃಷ್ಣ ರವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಮುಂಬೈ ರಾಜಭವನದಲ್ಲಿ ಏಕಾಂಗಿಯಾಗಿದ್ದ ಅವರ ಪಾಲಿಗೆ ರಾಜಕೀಯ ಮತ್ತು ಸಾರ್ವಜನಿಕ ಚಟುವಟಿಕೆಯಿಂದ ದೂರವಿರುವುದು ಅಸಹನೀಯವಾಗಿತ್ತು. ಬಾಲ್ಯದಿಂದಲೂ ನನ್ನನ್ನು ಬಲ್ಲ ಅವರಿಗೆ ನಾನು ಪುಸ್ತಕದ ಹುಳು ಎಂಬುದು ಸಹ ಗೊತ್ತಿತ್ತು. ಹಾಗಾಗಿ ಪ್ರತಿ ಹದಿನೈದು ದಿನಕ್ಕೆ ಮುಂಬೈ ಗೆ ಹೋಗಿ ಅವರಿಗೆ ನಾನು ಓದಿದ ಹೊಸ ಇಂಗ್ಲೀಷ್ ಕೃತಿಗಳನ್ನು ಕೊಟ್ಟು ಓದಿಸಿ ಬರುತ್ತಿದ್ದೆ. ರಾಜಭವನದಲ್ಲಿ ಆರಾಮವಾಗಿ ಅವರೊಂದಿಗೆ ಹರಟಬಹುದಾಗಿತ್ತು. ಒಮ್ಮೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಲೆಗಳಲ್ಲಿ ಪರಿಚಯಿಸಿದ ಬಿಸಿಯೂಟದ ಬಗ್ಗೆ ಕೇಳಿದ್ದೆ. ಅವರು ನೀಡಿದ್ದ ಉತ್ತರ ಹೀಗಿತ್ತು
" ಒಮ್ಮೆ ನಾನು ರಾಯಚೂರಿನಲ್ಲಿ ಕಾರ್ಯಕ್ರಮ ಮುಗಿಸಿ, ಯಾದಗಿರಿ ಮೂಲಕ ಗುಲ್ಬರ್ಗಾಕ್ಕೆ ಹಿಂತಿರುಗುತ್ತಿದ್ದೆ. ಅದು ಸಂಜೆ ಐದರ ಸಮಯ. ಹಳ್ಳಿಯ ಮಕ್ಕಳು ಬರಿಗಾಲಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ನನ್ನ ಕಾರಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಮಕ್ಕಳು ಮಧ್ಯಾಹ್ನ ಊಟ ಹೇಗೆ ಮಾಡ್ತಾರೆ? ಎಂದು ಕೇಳಿದೆ. ಅದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದ. "ಇಲ್ಲಾ ಸಾರ್, ಇವರೆಲ್ಲಾ ಬೆಳಿಗ್ಗೆ ಮನೆಯಿಂದ ಊಟ ಮಾಡಿ ಬಂದರೆ, ಮತ್ತೆ ಸಂಜೆ ಮನೆಗೆ ಹೋಗಿ ಊಟ ಮಾಡುವುದು". ನನಗೆ ಸಂಕಟವಾಯಿತು. ಎಂದೂ ನಾನು ಬಾಲ್ಯದಲ್ಲಿ ಬಡತನವನ್ನಾಗಲಿ, ಹಸಿವನ್ನಾಗಲಿ ಅನುಭವಿಸಿದವನಲ್ಲ. ಆದರೆ, ದಿನ ಮಕ್ಕಳು ನನಗೆ ಹಸಿವನ ವಿರಾಟ್ ದರ್ಶನವನ್ನು ಮನವರಿಕೆ ಮಾಡಿಕೊಟ್ಟರು. ಇದರಿಂದ ಪ್ರೇರಿತನಾಗಿ ಏನೇ ಬರಲಿ, ಎಷ್ಟೇ ಖರ್ಚು ಬರಲಿ, ಶಾಲೆಗಳಲ್ಲಿ ಮಕ್ಕಳಿಗೆ ಊಟ ಸಿಗಬೇಕೆಂದು ನಿರ್ಧರಿಸಿ, ಬಿಸಿಯೂಟ ಯೋಜನೆ ಆರಂಭಿಸಿದೆ" ಎಂದರು.


ನನಗೆ ಕ್ಷಣಕ್ಕೆ ತಮಿಳು ನಾಡಿನ ಕಾಮರಾಜ್ ನೆನಪಾದರು. ಅವರ ಸಾಹಸಗಾಥೆಯನ್ನು ಅವರಿಗೆ ವಿವರಿಸಿದೆ. ಒಮ್ಮೆ ಕಾಮರಾಜ್ ತಿರುನಾನ್ವೇಲಿ ಎಂಬ ಹಿಂದುಳಿದ ಜಿಲ್ಲೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಕ್ಕಳು ತಂದೆ ತಾಯಿಯರೊಂದಿಗೆ ಕೂಲಿ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟರು. ಶಾಲೆಗೆ ಏಕೆ ಕಳಿಸಿಲ್ಲ ಎಂದು ಫೋಷಕರನ್ನು ಕೇಳಿದಾಗ ಬಡತನದ ಅರಿವು ಅವರಿಗಾಯಿತು. ತಕ್ಷಣ ಇಡಿ ತಮಿಳುನಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಶಿಕ್ಷಣ, ಪಠ್ಯ ಮತ್ತು ಸಮವಸ್ತ್ರ ಯೋಜನೆಯನ್ನು ಜಾರಿಗೆ ತಂದರು. ಇದಕ್ಕಾಗಿ ಬ್ರಹ್ಮಚಾರಿಯಾಗಿದ್ದ ಅವರು ತಮ್ಮ ನಿವಾಸದಲ್ಲಿದ್ದ ಅಡುಗೆ ಭಟ್ಟನಿಗೆ ಇನ್ನು ಮುಂದೆ ನನಗೆ ಅಥವಾ ಅತಿಥಿಗಳಿಗೆ ಊಟದಲ್ಲಿ ಮೊಟ್ಟೆ ಇರಕೂಡದು. ಅದರ ಖರ್ಚಿನ ಹಣವನ್ನು ವಿದ್ಯಾ ಇಲಾಖೆಗೆ ರವಾನಿಸು ಎಂದು ಆದೇಶ ನೀಡಿದ್ದರು. ಹಾಗಾಗಿ ಇಂದು ತಮಿಳುನಾಡಿನಾದ್ಯಂತ ಮಕ್ಕಳ ಹೆಗಲ ಮೇಲೆ ಕೈ ಇಟ್ಟ ಕಾಮರಾಜರ ಪ್ರತಿಮೆಯನ್ನು ಕಾಣಬಹುದಾಗಿದೆ
ಒಂದು ಉದಾತ್ತ ಚಿಂತನೆಯೊಂದು ಹೇಗೆ ಎದೆಯಿಂದ ಎದೆಗೆ ಹರಿಯಬಲ್ಲದು ಎಂಬುದಕ್ಕೆ ಮೇಲಿನ ಎರಡು ಘಟನೆಗಳು ಸಾಕ್ಷಿಯಾಗಿವೆ. ಇಂದು ಅನ್ನ ಭಾಗ್ಯದ ಯೋಜನೆಯ ಕುರಿತು ತಮ್ಮ ನವರಂಧ್ರಗಳನ್ನು ತೆರದು ಬಡಿದುಕೊಳ್ಳುತ್ತಿರುವ ಪ್ರಕಾರ ಪಂಡಿತರು ಮತ್ತು ಪುರುಷೋತ್ತಮರಿಗೆ ನನ್ನ ಪ್ರಶ್ನೆ ಇಷ್ಟೇ.


ಹೌದು, ಅನ್ನ ಭಾಗ್ಯ ಆರ್ಥಿಕವಾಗಿ ಹೊರೆ ನಿಜ. ಆದರೆ, ನಮ್ಮ ದೇಶದದ ಸಂಸತ್ತನ್ನು ಪ್ರತಿನಿಧಿಸುತ್ತಿರುವ ಸಂಸದರು ಸದ್ದಿಲ್ಲದೆ ತಮ್ಮ ವೇತನವನ್ನು 50 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಏರಿಸಿಕೊಂಡರಲ್ಲ ಅದು ಹೊರೆಯಲ್ಲವೆ? ಜನಪ್ರತಿನಿಧಿಗಳು ವೇತನ ಮತ್ತು ಇತರೆ ಭತ್ಯೆಗಳು ಸೇರಿ ಮಾಸಿಕ ಎರಡು ಲಕ್ಷ ರೂಪಾಯಿ ಪಡೆಯುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದುಂಟೆ? 35 ವರ್ಷ ಸರ್ಕಾರದಲ್ಲಿ ಸೇವೆ ಸಲ್ಲಿಸಿ, ನಿವೃತ್ತನಾಗುವ ನೌಕರಿಗೆ 2006 ರಿಂದ ನಿವೃತ್ತಿ ವೇತನವನ್ನು ನಿಲ್ಲಿಸಿದ ನಮ್ಮನ್ನು ಆಳುವ ಸರ್ಕಾರಗಳು, ಕೇವಲ ಐದು ವರ್ಷಗಳ ಕಾಲ ಸಂಸದರಾಗಿ, ಶಾಸಕರಾಗಿ ಮಣ್ಣು ಹೊರುವ ಜನಪ್ರತಿನಿಧಿಗಳಿಗೆ ಜೀವನಪೂರ್ತಿ 50 ಸಾವಿರ ಮತ್ತು 25 ಸಾವಿರ (ಶಾಸಕರಿಗೆ) ನಿವೃತ್ತಿ ವೇತನ, ಆರೋಗ್ಯ ಭಾಗ್ಯ ಕರುಣಿಸಿದೆಯಲ್ಲಾ, ಇದು ದೇಶಕ್ಕೆ ಆರ್ಥಿಕ ಹೊರೆಯಲ್ಲವೆ? ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಅನುತ್ಪಾದಾನಾ ಆಸ್ತಿ ಅಂದರೆ ವಸೂಲಿಯಾಗದ ಸಾಲದ ಮೊತ್ತ ಎಷ್ಟು ನಿಮಗೆ ಗೊತ್ತೆ? ಸಾಲ ಪಡೆದ ವಿಜಯ ಮಲ್ಯ ನಂತಹ ಬಡವನ ಕುರಿತು ನಿಮಗೆ ಅನುಕಂಪವೆ? ಬಡತನ, ಹಸಿವು ಎಂಬ ಕ್ರೌರ್ಯಕ್ಕಿಂತ ನಿಮ್ಮ ವಿಕೃತಿಯ ಮನೋಭಾವ ನನಗೆ ಅತ್ಯಂತ ಕ್ರೌರ್ಯದಂತೆ ತೋರುತ್ತಿದೆ.


ಮಂಗಳವಾರ, ಜೂನ್ 16, 2015

ಮಹಾರಾಷ್ಟ್ರದಲ್ಲಿ ಸಿಕ್ಕಿದ ಒಂದು ಮುತ್ತಿನ ಕಥೆ



ಮೊನ್ನೆ ಜೂನ್ 12 ರಂದು ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಪ್ರಮುಖ ಜಿಲ್ಲಾ ಕೇಂದ್ರವಾದ ಲಾತೂರ್ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಅಲ್ಲಿನ ರೈತರ ಆತ್ಮ ಹತ್ಯೆ ಕುರಿತಂತೆ ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುತ್ತಿದ್ದೆ. ನನ್ನ ಜೊತೆ ಪ್ರವಾಸ ಬಂದಿದ್ದ ನನ್ನ ಮಿತ್ರ ಹಾಗೂ ಕರ್ನಾಟಕ ಮುಜರಾಯಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಇದೇ ಮೇ 31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ದೇವು ನಿಂಬಾಳ್ ಜೊತೆಗಿದ್ದರು. “ ಜಗಣ್ಣಾ ನಿಮಗೆ ಒಬ್ಬ ಅಪರೂಪದ ಯುವ ಅಧಿಕಾರಿಯನ್ನು ಪರಿಚಯಿಸುತ್ತೇನೆ ಬನ್ನಿ” ಎನ್ನುತ್ತಾ ಒಂದು ಕಛೇರಿಗೆ ನನ್ನನ್ನು ಕರೆದೊಯ್ದರು. ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಹಾಗೂ ಅನಕ್ಷರಸ್ತ ವಡ್ಡರ ( ಕಲ್ಲು ಕುಟಿಗರ ಜಾತಿ) ಸಮುದಾಯದಿಂದ ಮೇಲೆದ್ದು ಬಂದಿದ್ದ ಶಶಿಕಾಂತ್ ಹೆರ್ಲೇಕರ್ ಎಂಬ 34 ವರ್ಷದ ಯುವ ಪ್ರತಿಭೆಯೊಂದು ಮರಾಠವಾಡ ಪ್ರಾಂತ್ಯದ ಏಳು ಜಿಲ್ಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿತ್ತು.  ಆ ಯುವಕ ತನ್ನ ಮಾತೃಭಾಷೆಯಾದ ಮರಾಠಿಯಲ್ಲಿ ಪೂರ್ತಿ ಶಿಕ್ಷಣ ಪಡೆದ ಫಲವಾಗಿ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ತನಗೆ ಸಾಧ್ಯವಿಲ್ಲವೆಂದು ಮುಚ್ಚು ಮರೆಯಿಲ್ಲದೆ ಒಪ್ಪಿಕೊಂಡ. ತದ ನಂತರ ಮರಾಠಿ ಭಾಷೆಯಲ್ಲಿ ತನ್ನ ಬಾಲ್ಯದ ಬದುಕನ್ನು, ತಂದೆ ತಾಯಿಗಳ ನೆನಪನ್ನು ಹಾಗೂ ತನ್ನ ಸಾಧನೆಯನ್ನು ನಮ್ಮೆದುರು ತಣ್ಣನೆಯ ಧ್ವನಿಯಲ್ಲಿ ತೆರದಿಟ್ಟ. ಆ ಯುವ ಅಧಿಕಾರಿಯ ಯಶೋಗಾಥೆಯನ್ನು ಆತನ ಮಾತುಗಳಲ್ಲಿ ಇಲ್ಲಿ ಹಿಡಿದಿಟ್ಟಿದ್ದೀನಿ.
“ ನಾನು 1981 ರಲ್ಲಿ ಕೊಲ್ಲಾಪುರ ಜಿಲ್ಲೆಯ ಹರ್ಲೇಕರ್ ಎಂಬ ಕುಗ್ರಾಮದಲ್ಲಿ  ಕಲ್ಲುಗಳನ್ನು ಹೊಡೆದು ಜಲ್ಲಿ ಕಲ್ಲುಗಳನ್ನಾಗಿ ಪರಿವರ್ತಿಸುವ ವಡ್ಡರ ಕುಟುಂಬದಲ್ಲಿ ಜನಿಸಿದೆ. ನನ್ನಪ್ಪ ಮತ್ತು ಅವ್ವ ಕೊಲ್ಲಾಪುರ, ಸಾಂಗ್ಲಿ, ಮೀರಜ್ ನಗರಗಳ ಮಧ್ಯ ಇರುವ ರಾಜ್ಯ ಹೆದ್ದಾರಿ ರಸ್ತೆಗಳಿಗೆ ಜಲ್ಲಿ ಕಲ್ಲುಗಳನ್ನು ಹೊಡೆದು ಸಿದ್ಧಪಡಿಸುತ್ತಿದ್ದರು. ಅವ್ವ  ತನ್ನ ಹರಕಲು ಸೀರೆಯೊಂದನ್ನು ರಸ್ತೆ ಬದಿಯ ಜಾಲಿ ಮರಕ್ಕೆ ಕಟ್ಟಿ, ಅದನ್ನು ತೊಟ್ಟಿಲಾಗಿ ಪರಿವರ್ತಿಸಿ, ಅದರೊಳಗೆ ನನ್ನನ್ನು ಕೂರಿಸಿ, ಇಲ್ಲವೆ ಮಲಗಿಸಿ ದಿನವಿಡಿ ಅಪ್ಪನ ಜೊತೆ ರಸ್ತೆ ಬದಿಯಲ್ಲಿ ಕುಳಿತು ಉರಿವ ಬಿಸಿನಲ್ಲಿ ಕಲ್ಲುಗಳನ್ನು ಹೊಡೆಯುತ್ತಿದ್ದಳು. ತಿಂಗಳಾನುಗಟ್ಟಲೆ  ರಸ್ತೆ ಬದಿಯಲ್ಲಿ  ಒಣಗಿದ ಜೋಳದ ಕಡ್ಡಿಗಳಿಂದ ಕಟ್ಟಿಕೊಂಡ ಪುಟ್ಟ ಗುಡಿಸಲಿನಲ್ಲಿ ನಾವು ವಾಸವಾಗಿರುತ್ತಿದ್ದೆವು. ಒಣಗಿದ ಜೋಳದ ರೊಟ್ಟಿಯನ್ನು ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿ ಜೊತೆ ತಿಂದು, ಹೊಟ್ಟೆ ತುಂಬಾ ನೀರು ಕುಡಿದು ನಾವು ದಿನಗಳನ್ನು ದೂಡುತ್ತಿದ್ದೆವು. ಅವ್ವ ಮತ್ತು ಅಪ್ಪ ಇಬ್ಬರೂ ಪಂಢರಾಪುರದ ವಿಠಲನ ಪರಮ ಭಕ್ತರಾಗಿದ್ದರು. ಹಾಗಾಗಿ ನಾವು ಹೋದ ಕಡೆಯಲ್ಲೆಲ್ಲಾ ನಮ್ಮ ಜೊತೆ ವಿಠಲನ ಪೋಟೊ ಜೊತೆಯಲ್ಲಿ ಇರುತ್ತಿತ್ತು. ಮರದ ಬುಡದಲ್ಲಿ ವಿಠಲನ ಫೋಟೊ ಇಟ್ಟುಕೊಂಡು, ಬೆಳಿಗ್ಗೆ ಎದ್ದ ತಕ್ಷಣ ಅವನಿಗೆ ಇಬ್ಬರೂ ಪೂಜೆ ಸಲ್ಲಿಸಿ ನಂತರ ತಮ್ಮ ಕಾಯಕ ಶುರುಮಾಡುತ್ತಿದ್ದರು.
ಒಮ್ಮೆ ರಸ್ತೆ ವೀಕ್ಷಣೆಗೆ ಬಂದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ( ಅವರೂ ಸಹ ವಿಠಲನ ಪರಮ ಭಕ್ತರು) ಅಪ್ಪ ಮತ್ತು ಅವ್ವನ ಕಾಯಕ ನಿಷ್ಟೆಗೆ ಮೆಚ್ಚಿ, ಅಪ್ಪನಿಗೆ ಸಾಂಗ್ಲಿಯ ಲೋಕೋಪಯೋಗಿ ಕಛೇರಿಯಲ್ಲಿ ರಾತ್ರಿ ಕಾವಲುಗಾರನ ಹುದ್ದೆಯನ್ನು ಕೊಡಿಸಿದರು. ನಂತರ ಸಾಂಗ್ಲಿ ಪಟ್ಟಣ ನಮ್ಮ ಖಾಯಂ ವಾಸ ಸ್ಥಾನವಾಯಿತು. ನಾನು ಸರ್ಕಾರಿ ಶಾಲೆಗೆ ದಾಖಲಾದೆ. ನನ್ನ ಹನ್ನೆರೆಡನೇ ವಯಸ್ಸಿನಲ್ಲಿ ಅಪ್ಪ ತೀರಿಕೊಂಡ. ಅವ್ವನಿಗೆ ಅಪ್ಪನ ಪಿಂಚಣಿ ಹಣ ತಿಂಗಳಿಗೆ ಸುಮಾರು 80 ರೂಪಾಯಿ ಬರುತ್ತಿತ್ತು. ಅದನ್ನು ನನ್ನ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ, ಮತ್ತೇ ಕೂಲಿ ಕೆಲಸಕ್ಕೆ ಹೊರಟಳು. ಅಪ್ಪ ಬದುಕಿದ್ದಾಗ, ಬಡವರು ವಾಸಿಸುತ್ತಿದ್ದ ಬಡಾವಣೆಯೊಂದರ ತಗಡಿನ ಛಾವಣಿಯ ಒಂದು ಕೊಠಡಿಯಲ್ಲಿ ನಾವು ವಾಸವಾಗಿದ್ದವು. ಅಪ್ಪನ ಸಾವಿನ ನಂತರ ನಾವಿಬ್ಬರೂ ಸಾಂಗ್ಲಿಯ ಕೊಳೆಗೇರಿಯ ಗುಡಿಸಲಿಗೆ ಸ್ಥಳಾಂತರಗೊಂಡೆವು. ಆ ಕೊಳೆಗೇರಿಯು ಕಳ್ಳಬಟ್ಟಿಯ ದಂಧೆಗೆ. ವೇಶ್ಯಾವಾಟಿಕೆಗೆ, ತಲೆ ಹಿಡುಕರಿಗೆ, ಜೇಬುಕಳ್ಳರಿಗೆ ಆಶ್ರಯ ತಾಣವಾಗಿತ್ತು. ಇಂತಹ ನರಕ ಸದೃಶ್ಯ ಲೋಕದಲ್ಲಿ, ಬದುಕುತ್ತಾ, ಗುಡಿಸಲಿನ ಚಿಮಣಿ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಎಲ್ಲಾ ತರಗತಿಗಳಲ್ಲೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದೆ.
ಎಸ್.ಎಸ್.ಎಲ್.ಸಿ. ನಂತರ ನನಗೆ ಸರ್ಕಾರದಿಂದ ಬರುತ್ತಿದ್ದ ವಿದ್ಯಾರ್ಥಿ ವೇತನದ ನೆರವಿನಿಂದ ಬಿ.ಎ. ಪಡೆದೆ. ಜೊತೆಗೆ ಮೂರು ವರ್ಷದ ಕಾನೂನು ಪದವಿಯನ್ನು ಪಡೆದು ವಕೀಲನಾದೆ. ವಕೀಲ ವೃತ್ತಿಯನ್ನು ಆರಂಭಿಸಿದ ನಂತರ ಬಹುತೇಕ ಬಡಜನರು, ದೀನ ದಲಿತರು ನನ್ನ ಕಕ್ಷಿದಾರರಾಗಿದ್ದರು. ಅವರು ತಮ್ಮ ಜೇಬಿನಿಂದ ಇಲ್ಲವೆ ರವಿಕೆಯಿಂದ ಹಣ ತೆಗೆದು ನನ್ನ ವಕೀಲಿ ಶುಲ್ಕವನ್ನು ನೀಡುವಾಗ, ಆ ನೋಟುಗಳು ಅವರ ಮೈ ಬೆವರಿನಿಂದ ಒದ್ದೆಯಾಗಿರುತ್ತಿದ್ದವು. ಅವರಿಂದ ಹಣ ಪಡೆಯುವಾಗ, ಬಡವರ ರಕ್ತವನ್ನು ಹೀರುವ ಶೋಷಕನಾಗುತ್ತಿದ್ದೀನಿ ಎಂಬ ಪಾಪ ಪ್ರಜ್ಞೆಯೊಂದು ನನ್ನನ್ನು ಕಾಡುತ್ತಿತ್ತು. ಆದರೆ ಜೀವನೋಪಾಯಕ್ಕೆ ವಕೀಲಿ ವೃತ್ತಿ ನನಗೆ ಅನಿವಾರ್ಯವಾಗಿತ್ತು. ಈ ವೃತ್ತಿಯನ್ನು ತ್ಯಜೆಸಿ, ಸರ್ಕಾರಿ ಹುದ್ದೆಗೆ ಸೇರಬೇಕೆಂದು ನಿಶ್ಚಯಿಸಿದೆ. ಮಹಾರಾಷ್ಟ್ರ ಸರ್ಕಾರ ನಡೆಸುವ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದೆ. ಆದರೆ ಮೊದಲ ಬಾರಿ ಮತ್ತು ಎರಡನೆಯ ಬಾರಿ ಪರೀಕ್ಷೆಯಲ್ಲಿ  ಫೇಲಾದೆ. ಮೂರನೆಯ ಬಾರಿಗೆ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದಾಗ, ನನ್ನವ್ವ ಕ್ಯಾನ್ಸರ್ ಕಾಯಿಲೆಗೆ ತುತ್ತಾದಳು. ಅವಳನ್ನ ಮೀರಜ್ ನ ಆಸ್ಪತ್ರೆಗೆ ಸೇರಿಸಿ, ರಾತ್ರಿಯ ವೇಳೆ ಆಸ್ಪತ್ರೆಯ ಹೊರಗಿನ ಮೆಟ್ಟಿಲುಗಳ ಮೇಲೆ ಕುಳಿತು ವಿದ್ಯುತ್ ದೀಪದ ಬೆಳಕಿನಲ್ಲಿ ಬೆಳಗಿನ ಜಾವ ಮೂರು ಗಂಟೆಯವರೆಗೆ ಓದಿ, ಅಲ್ಲಿಯೇ ಮಲಗುತ್ತಿದ್ದೆ. ಅವ್ವ ಆಸ್ಪತ್ರೆಯ ಹೆಂಗಸರ ವಾರ್ಡ್ ನಲ್ಲಿ ನೋವಿನಿಂದ ನರಳುವಾಗ, ನಾನು ವಾರ್ಡ್ ನ ಒಳಕ್ಕೆ ಹೋಗಿ ಅವಳನ್ನು ಸಂತೈಸಲಾಗದ ಅಸಹಾಯಕತೆಯಿಂದ ಮೆಟ್ಟಿಲುಗಳ ಮೇಲೆ ಮುಖವಿಟ್ಟು ಮೌನವಾಗಿ ಅಳುತ್ತಿದ್ದೆ. ಇಂತಹ ನೋವು, ನಿರಾಸೆ ಮತ್ತು ತಬ್ಬಲಿತನಗಳ ನಡುವೆ ನಾನು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಪಾಸಾಗಿ ಅಧಿಕಾರಿಯಾಗಿ ಆಯ್ಕೆಯಾದೆ. ಆದರೆ ಮಗನ ಸಾಧನೆಯನ್ನಾಗಲಿ, ಸಂಭ್ರಮವನ್ನಾಗಲಿ ನೋಡಲು ಅವ್ವ ನನ್ನ ಪಾಲಿಗೆ ಉಳಿಯಲಿಲ್ಲ. ಇಬ್ಬರನ್ನೂ ಕಳೆದುಕೊಂಡ ನೋವಿನ ನಡುವೆ ನಾನು 2012 ರಲ್ಲಿ ಮಹಾರಾಷ್ಟ್ರದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಜಂಟಿ ಆಯುಕ್ತನಾಗಿ ಸೇರ್ಪಡೆಗೊಂಡು, ಪ್ರೊಭೆಷನರಿ ಅವಧಿಯನ್ನು ಮುಗಿಸಿ, ಕಳೆದ ಏಳು ತಿಂಗಳಿನಿಂದ ಮರಾಠವಾಡ ಪ್ರಾಂತ್ಯದ ಜಂಟಿ ಆಯುಕ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಕೈ ಕೆಳಗೆ ಏಳು ಜಿಲ್ಲೆಗಳ  ಸಾವಿರಾರು ಶಿಕ್ಷಣ ಸಂಸ್ಥೆಗಳು, ಮಠಗಳು, ಆಸ್ಪತ್ರೆಗಳು, ದೇವಸ್ಥಾನಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವೂ ಟ್ರಸ್ಟ್ ಆಡಳಿತ ಮಂಡಲಿಯಿಂದ ನಡೆಯುವ ಸಂಸ್ಥೆಗಳಾಗಿರುವುದರಿಂದ, ಅವುಗಳ ಬೈಲಾ ತಿದ್ದುಪಡಿ, ಆಡಳಿತ ಮಂಡಳಿಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ, ಇತ್ಯಾದಿ ಇವುಗಳನ್ನು ಪರಿಹರಿಸುವ ಜವಾಬ್ದಾರಿ ನನ್ನದಾಗಿದೆ. ನನ್ನ ಅಧೀನದಲ್ಲಿ ನಾಲ್ವರು ಉಪ ವಿಭಾಗಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಅಧಿಕಾರವನ್ನು ಉಪಯೋಗಿಸಿಕೊಂಡು, ಪ್ರತಿ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷ ಹತ್ತು ಮಂದಿ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತೆ ಮನವೊಲಿಸುತ್ತಿದ್ದೇನೆ. ನನ್ನ ಮನವಿಯನ್ನು ಬಹತೇಕ ಶಿಕ್ಷಣ ಸಂಸ್ಥೆಗಳು ಪುರಸ್ಕರಿಸಿವೆ. ಜೊತೆಗೆ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ನಾನು ನನ್ನ ವೇತನದ ಅಲ್ಪ ಭಾಗವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿನಿಯೋಗಿಸುತ್ತಿದ್ದೇನೆ.


ಇದೀಗ ನನ್ನ ಬಳಿ ಎಲ್ಲವೂ ಇದೆ. ವಿದ್ಯೆ, ಉದ್ಯೋಗ, ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಉನ್ನತ ಅಧಿಕಾರಿ ಎಂಬ ಗೌರವ ಪ್ರಾಪ್ತಿಯಾಗಿದೆ ನಿಜ. ಆದರೆ, ನನ್ನನ್ನು ಈ ಸ್ಥಾನಕ್ಕೆ ತಂದು ಕೂರಿಸಲು ಕಾರಣರಾದ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 48 ಡಿಗ್ರಿ ಬಿಸಿಲಿನಲ್ಲಿ ಕುಳಿತು ಕಲ್ಲು ಹೊಡೆದ ಅಪ್ಪ, ಅಪ್ಪ ಸದಾ ನೆನಪಾಗುತ್ತಾರೆ.  ನಾನು ವಾಸಿಸುವ ಸರ್ಕಾರಿ ಬಂಗಲೆಯಲ್ಲಿ ಅವರನ್ನು ಇರಿಸಿಕೊಂಡು ಅವರಿಗೆ ಹೊಟ್ಟೆ ತುಂಬಾ ಊಟ, ಮೈ ತುಂಬಾ ಬಟ್ಟೆ ಕೊಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ ಎಂಬ ನೋವು ಸದಾ ನನ್ನನ್ನು ಕಾಡುತ್ತಿದೆ” ಎನ್ನುತ್ತಾ. ಶಶಿಕಾಂತ್,  ಜೇಬಿನಿಂದ ಕರ ವಸ್ತ್ರ ತೆಗೆದು ಕಣ್ಣೀರು ಒರೆಸಿಕೊಂಡರು.ಅವರ ಕಥೆಯನ್ನು ಕೇಳುತ್ತಿದ್ದ ನನಗೆ  ಮತ್ತು ಗೆಳೆಯರಿಗೆ ಕಣ್ಣು ಮತ್ತು ಎದೆ ಎರಡೂ ಒದ್ದೆಯಾಗಿ, ಮಾತುಗಳು ಎದೆಯೊಳಗೆ ಹೂತು ಹೋಗಿದ್ದವು. ಅವರು ನೀಡಿದ ಚಹಾ ಕುಡಿದು, ಅವರ ಕೈ ಕುಲುಕಿ, ಭುಜವನ್ನು ತಟ್ಟಿ ಸಾಂತ್ವನಗೊಳಿಸಿ ಕಛೇರಿಯಿಂದ ಹೊರ ಬಂದೆ.
( ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಭಾನುವಾರ, ಜೂನ್ 14, 2015

ರೈತರ ಪಾಲಿಗೆ ಮಸಣದ ಮನೆಯಾದ ಮಹಾರಾಷ್ಟ್ರ



ನನ್ನ ಬಿಜಾಪುರದ ವಾಣಿಜ್ಯೋದ್ಯಮಿ ಮಿತ್ರ ಸೋಮಶೇಖರ್ ಅವರ ಹೋಂಡ ಸಿಟಿ ಕಾರಿನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಮಹಾರಾಷ್ಟದ ಏಳೆಂಟು ಜಿಲ್ಲೆಗಳಲ್ಲಿ ( ವಿಧರ್ಭ ಮತ್ತು ಮರಾಠವಾಡ ಪ್ರಾಂತ್ಯದ ) ಕಲೆ ಹಾಕಿದ ಚಿತ್ರಗಳು ಮತ್ತು ದಾಖಲೆಗಳನ್ನು ಜೊತೆಗಿಟ್ಟು ಕೊಂಡು ಅಧ್ಯಯನ ಲೇಖನ ಬರೆಯಲು ಕುಳಿತಿದ್ದೀನಿ. ರೈತರ ಆತ್ಮಹತ್ಯೆ ಕುರಿತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಅವರ ಪಾರಂಪರಿಕ ಕೃಷಿ ವ್ಯವಸ್ಥೆಯಲ್ಲಾದ ಪಲ್ಲಟಗಳು ಇವುಗಳ ಆಧಾರದ ಹದಿನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರ ಕಾರ್ಯ ನಡೆಸಿದೆ

ಇದನ್ನು ವ್ಯವಸ್ಥೆಯ ಕ್ರೌರ್ಯ ಎನ್ನಲೊ, ವ್ಯಂಗ್ಯ ಎನ್ನಲೋ ತಿಳಿಯುತ್ತಿಲ್ಲ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಅಂದರೆ 2004 ರಿಂದ 2014 ಡಿಸಂಬರ್ ವರೆಗೆ ಮಹಾರಾಷ್ಟ ರಾಜ್ಯವೊಂದರಲ್ಲಿ 32 ಸಾವಿರ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 2015 ಜನವರಿಯಿಂದ ಮೇ 30 ಐದು ತಿಂಗಳ ಅವಧಿಯಲ್ಲಿ 1088 ಮಂದಿ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ವರ್ದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 487 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 32 ಸಾವಿರ ರೈತರ ಪೈಕಿ ವಿಧರ್ಭ ಪ್ರಾಂತ್ಯದಲ್ಲಿ 20 ಸಾವಿರ ಮತ್ತು ಮರಾಠವಾಡ ಪ್ರಾಂತ್ಯದಲ್ಲಿ 12 ಸಾವಿರ ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ.


ಪ್ರದೇಶಗಳನ್ನು ಪ್ರತಿನಿಧಿಸಿದ ಹಾಗೂ ಪ್ರತಿ ನಿಧಿಸುತ್ತಿರುವ ಜನನಾಯಕರ ಪಟ್ಟಿ ಇಲ್ಲಿದೆ. ಸುಮ್ಮನೆ ಒಮ್ಮೆ ಕಣ್ಣಾಡಿಸಿ

1) ಪ್ರತಿಭಾ ಪಾಟೀಲ್ (ರಾಷ್ಟಪತಿಯಾಗಿದ್ದವರು) ಜಾಲ್ನ ಜಿಲ್ಲೆ, ವಿಧರ್ಭ ಪ್ರಾಂತ್ಯ.

2) ಫಡ್ನಾವಿಸ್ (ಮಹಾರಾಷ್ಟ್ರ ಮುಖ್ಯಮಂತ್ರಿ) ನಾಗಪುರ, ವಿಧರ್ಭ ಪ್ರಾಂತ್ಯ.

3) ವಿಲಾಸ್ ರಾವ್ ದೇಶ್ ಮುಖ್( ಮಾಜಿ ಮುಖ್ಯ ಮಂತ್ರಿ) ಲಾತೂರ್, ಮರಾಠವಾಡ ಪ್ರಾಂತ್ಯ

4) ಸುಶೀಲ್ ಕುಮಾರ್ ಶಿಂದೆ, (ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರಸಚಿವ) ಸೊಲ್ಲಾಪುರ, ಮರಾಠವಾಡ

5) ಗೋಪಿನಾಥ್ ಮುಂಡೆ ( ಮಾಜಿ ಸಚಿವ) ಬೀಡ್ ಜಲ್ಲೆ ( ಮರಾಠವಾಡ ಪ್ರಾಂತ್ಯ.