ಸೋಮವಾರ, ಸೆಪ್ಟೆಂಬರ್ 23, 2013

ಬೇಸಾಯವೆಂಬ ಬವಣೆಯ ಬದುಕು- ಅಂತಿಮ ಭಾಗ


1970 ದಶಕದಿಂದ ಭಾರತದ ಕೃಷಿರಂಗದಲ್ಲಾದ ಅನೇಕ ಪಲ್ಲಟಗಳು, ರೈತರ ಪಾಲಿಗೆ ಕೆಲವು ವಿಷಯಗಳಲ್ಲಿ ವರದಾನವಾಗಿ, ಮತ್ತೇ ಹಲವು ವಿಷಯಗಳಲ್ಲಿ ಶಾಪವಾಗಿ ಪರಿಗಣಿಸಿವೆ. ಇದಕ್ಕೊಂದು ಸುಧೀರ್ಘ ಇತಿಹಾಸ ಕೂಡ ಇದೆ. ದೇಶಿ ಬಿತ್ತನೆ ಬೀಜಗಳ ಮೂಲಕ ಕಡಿಮೆ ಇಳುವರಿ ನೀಡುತ್ತಿದ್ದ ಸಮಯದಲ್ಲಿ ಭಾರತಕ್ಕೆ 1968 ರಲ್ಲಿ ಅಮೇರಿಕಾದ ಕೃಷಿ ತಜ್ಙ ನಾರ್ಮನ್ ಬೋರ್ಲಾಗ್ ಅವಿಷ್ಕರಿಸಿದ ಹೈಬ್ರಿಡ್ ಗೋಧಿ ಬರುತ್ತಿದ್ದಂತೆ, ಕೃಷಿಯ ಚಿತ್ರಣವೇ ಬದಲಾಯಿತು. 1947 ಸಮಯದಲ್ಲಿ ಹೆಕ್ಟೇರ್ ಒಂದಕ್ಕೆ ಕೇವಲ 800 ಕೆ.ಜಿ. ಗೋಧಿ ಬೆಳೆಯುತ್ತಿದ್ದ ರೈತರು, ಹೈಬ್ರಿಡ್ ಗೋಧಿ ತಳಿಯಿಂದಾಗಿ ಅದೇ ಭೂಮಿಯಲ್ಲಿ 48 ಕ್ವಿಂಟಾಲ್ ಗೋಧಿ ಬೆಳೆಯಲು  ಶಕ್ತರಾದರು.  ಅಧಿಕ ಗೋಧಿ ಇಳುವರಿಯಿಂದ ಉತ್ತೇಜಿತರಾದ ನಮ್ಮ ರೈತರು, ಭಾರತದ ಖ್ಯಾತ ಕೃಷಿ ವಿಜ್ಙಾನಿ ಹಾಗೂ ತಮಿಳುನಾಡಿನ ಎಂ.ಎಸ್. ಸ್ವಾಮಿನಾಥನ್ ಮೂಲಕ ಪಿಲಿಫೈನ್ಸ್ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ ಭತ್ತದ ತಳಿಗಳನ್ನು ಆಮದು ಮಾಡಿಕೊಂಡು, ಅಧಿಕ ಇಳುವರಿ   ಭತ್ತ ಬೆಳೆಯಲ್ಲಿ ತೊಡಗಿಕೊಂಡರು. ಹೀಗೆ, ಪಂಜಾಬ್, ಹರ್ಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ, ಗೋಧಿ, ಹಾಗೂ  ಬಿಹಾರ್, ಮಧ್ಯಪ್ರದೇಶ ರಾಜ್ಯಗಳು ಸೇರಿದಂತೆ, ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಭತ್ತವನ್ನು ಬೆಳೆಯಲಾಯಿತು. ಏರುತ್ತಿದ್ದ ಜನಸಂಖ್ಯೆಯ ಅನುಗುಣವಾಗಿ ಆಹಾರ ಪೂರೈಸಲಾಗದ ಅಸಹಾಯಕತೆಯಲ್ಲಿದ್ದ ಭಾರತ ದೇಶ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ  ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಪಂಚವಾರ್ಷಿಕ ಯೋಜನೆಗಳಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ ಕಾರಣದಿಂದಾಗಿ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು


2011 ವೇಳೆಗೆ ಅಮೇರಿಕಾ ನಂತರ ಜಗತ್ತಿನ ಎರಡನೇ ಅತಿ ದೊಡ್ಡ ಕೃಷಿ ಉತ್ಪಾದನೆಯ ರಾಷ್ಟ್ರ ಎನಿಸಿಕೊಂಡ  ಬಾರತದಲ್ಲಿ ಒಟ್ಟು 39 ಕೋಟಿ, 46 ಲಕ್ಷ ಎಕರೆ ಪ್ರದೇಶ ಭೂಮಿ ಕೃಷಿ ಚಟುವಟಿಕೆಗೆ ಒಳಗೊಂಡಿತ್ತು. ಇದರಲ್ಲಿ 21 ಕೋಟಿ, 46 ಲಕ್ಷ ಎಕರೆ ಪ್ರದೇಶ, ಮಳೆ ಆಧಾರಿತ ಕೃಷಿಗೆ ಒಳಪಟ್ಟಿದ್ದರೆ, 21 ಕೊಟಿ, 56 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿತ್ತು. 1970 ದಶಕದಲ್ಲಿ ಭಾರತದ ಒಟ್ಟು ಆಂತರೀಕ ಉತ್ಪನ್ನದ ಪ್ರಮಾಣದಲ್ಲಿ( G.D.P.) ಶೇಕಡ 46 ರಷ್ಟು ಪಾಲು ಕೃಷಿ ಉತ್ಪನ್ನದ್ದಾಗಿತ್ತು. 2011 ವೇಳೆಗೆ ಭಾರತದ ಜಿ..ಡಿ.ಪಿ.ಯಲ್ಲಿ ಕೃಷಿಯ ಪಾಲು ಕೇವಲ ಶೇಕಡ 16 ರಷ್ಟು ಪ್ರಮಾಣಕ್ಕೆ ಕುಸಿಯಿತು.. ಇದರಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ, ಹಣ್ಣು, ತರಕಾರಿ, ಹೂವು, ಇವುಗಳ ಪ್ರಮಾಣವೇ ಶೇಕಡ ಹತ್ತರಷ್ಟಿತ್ತು..
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರವಾಗಿದ್ದ ಭಾರತದ ಕೃಷಿ ರಂಗ 1991 ರಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣದ ಫಲವಾಗಿ ಅನಾದರಕ್ಕೆ ಒಳಪಟ್ಟಿತು. ಆರಂಭದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಶೇಕಡ ಮುವತ್ತರಷ್ಟು ಪಾಲು ಪಡೆಯುತ್ತಿದ್ದ ಭಾರತದ ಕೃಷಿರಂಗ  2011 ವೇಳೆಗೆ ಶೇಕಡ ಹತ್ತು ಇಲ್ಲವೇ ಹನ್ನೊಂದರಷ್ಟು ಪಾಲಿಗೆ ಸೀಮಿತವಾಯಿತುಆಳುವ ಸರ್ಕಾರಗಳು, ಸೇವಾ ವಲಯ, ಮಾಹಿತಿ ತಂತ್ರಜ್ಞಾನ, ನಗರಾಭಿವೃದ್ಧಿ, ವಸತಿ ಕ್ಷೇತ್ರ, ಪ್ರವಾಸೋದ್ಯಮ ಹೀಗೆ ಉದಾರೀಕರಣ ಪ್ರೇರಿತ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಾ ಬಂದು, ಕೃಷಿ ಕ್ರೇತ್ರ ಹಾಗೂ  ಭಾರತದ ಹಳ್ಳಿಗಳ ಮೂಲಬೂತ ಸೌಕರ್ಯಗಳನ್ನು ಕಡೆಗಣಿಸುತ್ತಾ ಬಂದಿತು.
ಆಧುನಿಕ ಅಭಿವೃದ್ಧಿ ಎಂದರೆ, ನಗರಗಳು ಮತ್ತು ಮಾಹಿತಿ ತಂತ್ರಜ್ಙಾನ ಎಂದು ನಂಬಿರುವ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನಾಯಕರು ಅರಿಯಬೇಕಾದ ಕಟು ಸತ್ಯವೊಂದಿದೆ. ಭಾರತದಲ್ಲೀಗ ಉದ್ಯೋಗ ಸೃಷ್ಟಿಸುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಾಗಿ ಉದ್ದಿಮೆಗಳು ಸಂಕಷ್ಟದಲ್ಲಿವೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 2012ರಿಂದ 2022 ವರೆಗೆ ಪ್ರತಿ ವರ್ಷ 80 ರಿಂದ 90 ಲಕ್ಷ ಯುವಕರು ಉದ್ಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಕೃಷಿರಂಗದ ಬಗ್ಗೆ ವ್ಯಾಮೋಹ ಕಡಿಮೆಯಾಗಿ ಎಲ್ಲರೂ ನಗರಗಳತ್ತ ಮುಖ ಮಾಡುತ್ತಿದ್ದಾರೆ. 2022 ವೇಳೆಗೆ 20 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸ ಬೇಕಾದ ಹೊಣೆ ನಮ್ಮನ್ನಾಳುವ ಸರ್ಕಾರಗಳ ಮೇಲಿದೆ. ಈವರೆಗೆ ಆಶಾದಾಯಕವಾಗಿದ್ದ ಮಾಹಿತಿ ತಂತ್ರಜ್ಙಾನ ಕ್ರೇತ್ರಕ್ಕೆ ಎದುರಾಗಿರುವ ಜಾಗತಿಕ ಪೈಪೋಟಿ ಮತ್ತು ಅನಿಶ್ಚತತೆಯಿಂದಾಗಿ ಉದ್ಯೋಗ ಸೃಷ್ಟಿಯ ಅವಕಾಶಗಳು ಕ್ಷೀಣಿಸುತ್ತಿವೆ. ಅತ್ತ ಭಾರತದ ಕೈಗಾರಿಕೆಗಳ ಬೆಳವಣಿಗೆಯೂ ಆಶಾದಾಯಕವಾಗಿಲ್ಲ.
ನಗರಗಳ ಬೆಳವಣಿಗೆ ಆದ್ಯತೆ ನೀಡಿ, ಅವುಗಳನ್ನು ನರಕಗಳನ್ನಾಗಿ ಪರಿವರ್ತಿಸುವ ಮುನ್ನ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಹಸಿದ ಹೊಟ್ಟೆಗೆ ಅನ್ನ , ವಸತಿ , ಶಿಕ್ಷಣ ಇವುಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಡೆಗಣಿಸಲ್ಪಟ್ಟ ಕೃಷಿ ಮತ್ತು ರೈತರ ಬವಣೆಗಳನ್ನು ಆಲಿಸಿ, ಕೃಷಿ ಕ್ಷೇತ್ರವನ್ನು ಪುನರ್ ರೂಪಿಸಬೇಕಾಗಿದೆ. ಇಂದಿನ ಕೃಷಿ ಕ್ರೇತ್ರದ ದುರಂತಕ್ಕೆ , ರೈತನೂ ಒಳಗೊಂಡಂತೆ, ವಿಜ್ಙಾನಿಗಳು, ನಮ್ಮನ್ನಾಳುವ ಸರ್ಕಾರಗಳು ಎಲ್ಲರೂ ಭಾಗಿಯಾಗಿದ್ದಾರೆ. ಹಸಿರು ಕ್ರಾಂತಿಯ ಭ್ರಮೆ ಕಳಚಿಬಿದ್ದಿದ್ದರೂ ಕೂಡ  ಎರಡನೇ ಹಸಿರು ಕ್ರಾತಿಯ ಬಗ್ಗೆ ಮಾತನಾಡುವ ಮೂರ್ಖರು ನಮ್ಮಲ್ಲಿದ್ದಾರೆ
ಸ್ವತಃ ಭಾರತದ ಕೃಷಿ ಸಚಿವನಾಗಿರುವ ಶರದ್ ಪವಾರ್ ಎಂಬ ವ್ಯಕ್ತಿ ಕಳೆದ ಐದು ವರ್ಷಗಳಲ್ಲಿ ಆತ ಕೃಷಿ ಖಾತೆ ಯನ್ನು ನಿಭಾಯಿಸಿದ್ದಕ್ಕಿಂತ ಹೆಚ್ಚಾಗಿ ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಹಣ ಸಿಗುವ ವೃತ್ತಿ ಯಾವುದಾದರೂ ಸರಿಯೆ,, ವೈಶ್ಯಾವೃತ್ತಿಯ ದಳ್ಳಾಳಿತನಕ್ಕೆ ಸಿದ್ಧನಾಗಿರುವ ವ್ಯಕ್ತಿ ಇದೀಗ, ಮಾನ್ಸಂಟೊ ಕಂಪನಿಯ ಕುಲಾಂತರಿ ತಳಿಗಳನ್ನು ಭಾರತದಲ್ಲಿ ಪರಿಚಯಿಸಲು ಕೇಂದ್ರದಲ್ಲಿ ಲಾಭಿ ಮಾಡುತ್ತಿದ್ದಾನೆ. ಇಂತಹ ಅಯೋಗ್ಯರ ಕೈಗೆ ಭಾರತದ ಕೃಷಿ ಕ್ರೇತ್ರದ ಸೂತ್ರಗಳನ್ನು ನೀಡಲಾಗಿದೆ ಎಂದರೆ, ಇದಕ್ಕಿಂತ ದುರಂತ ಇನ್ನೊಂದು ಬೇಕೆ?

ಬೀಜ ಉತ್ಪಾದನೆ , ವಿನಿಮಯ. ಸೇರಿದಂತೆ ತನಗೆ ಬೇಕಾದ ಬೆಳೆಯನ್ನು ಬೆಳೆಯುತ್ತಿದ್ದ ರೈತ ಇಂದು ಬೀಜ ಕಂಪನಿಗಳ ಗುಲಾಮನಾಗಿ ತನ್ನ ಸಾರ್ವಭೌಮ ಹಕ್ಕನ್ನು ಕಳೆದುಕೊಂಡಿದ್ದಾನೆರೈತನ ತಲೆಯೊಳಕ್ಕೆ ಬಿತ್ತಿದ ಹಣದ ಥೈಲಿಯ ಕನಸುಗಳು ಇಂದು ಅವನನ್ನು ವಾಣಿಜ್ಯ ಬೆಳೆಗಳ ಮೂಲಕ ಬೀದಿಗೆ ತಂದು ನಿಲ್ಲಿಸಿವೆ, ಕಬ್ಬು, ಹತ್ತಿ, ಮೆಣಸಿನಕಾಯಿ, ಈರುಳ್ಳಿ , ಭತ್ತ, ತೆಂಗು, ಗೋಧಿ, ರಾಗಿ ಬೆಳೆದ ಯಾವೊಬ್ಬ ರೈತನೂ ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲವಾಗಿದೆ. ಪಲ್ಲಟಗಳನ್ನು ಲೇಖಕ ನರೇಂದ್ರ ರೈ ದೇರ್ಲ ಅವರು ತಮ್ಮ ಕೃತಿಯಲ್ಲಿ( ಹಸಿರು ಕೃಷಿಯ ನಿಟ್ಟುಸಿರುಗಳು) ಮಾರ್ಮಿಕವಾಗಿ, ರೂಪಕದ ಭಾಷೆಯಲ್ಲಿ ಹೀಗೆ ಬಣ್ಣಿಸಿದ್ದಾರೆ. “ ತುಳುನಾಡಿನ  ನಾಟಿ ಜನರು ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಒಂದು ಬಾಳಲೆಯ ಮೇಲೆ ಮುಷ್ಟಿ ಅಕ್ಕಿ ಇಲ್ಲವೆ ಭತ್ತ , ಅದರ ಮೇಲೆ ಒಂದು ತೆಂಗಿನಕಾಯಿ ಇಟ್ಟು ಅಕ್ಕ ಪಕ್ಕದಲ್ಲಿ ಕೆಂಪು ಅಡಿಕೆ ಮತ್ತು ವೀಳ್ಯದ ಎಲೆ ಇಡುತ್ತಾರೆ. ಗಣಪನ ಹಾಗೆ ಕಾಣುವ ಐದು ಬೆಳೆಗಳು ಮುಂಚೆ ದುಡ್ಡಿನ ಬೆಳೆಗಳಾಗಿರಲಿಲ್ಲ. ಜನರ ಬದುಕಿಗೆ ಬೇಕಿದ್ದ ಮೂಲದ ಬೆಳೆಗಳಾಗಿದ್ದವು. ಯಾವಾಗ ಬಾಳಲೆಯ ಮೇಲೆ ಒಂದು ಕಾಲು ರೂಪಾಯಿ ಬಿತ್ತೋ, ತುಳುನಾಡಿನ ಕೃಷಿ ಪಲ್ಲಟಕ್ಕೆ ಒಳಗಾಯಿತು. ಎಲ್ಲವೂ ದುಡ್ಡಿಗೆ ಆದಾಗ, ಗದ್ದೆಯ ಮೇಲೆ ಅಡಿಕೆ ಬಂತು, ಈಗ ಅಡಿಕೆಯ ಮೇಲೆ ರಬ್ಬರ್ ಕೂತಿದೆಇದು ನರೇಂದ್ರ ರೈ ಹೇಳುತ್ತಿರುವ ತುಳುನಾಡಿನ ದುರಂತ ಕಥೆಯಷ್ಟೇ ಅಲ್ಲ, ಭಾರತದ ಕೃಷಿಯ ದುರಂತವೂ ಕೂಡ ಹೌದು.


ಅಧಿಕ ಇಳುವರಿ ತೆಗೆಯುವ ಭರಾಟೆಯಲ್ಲಿ ನಮ್ಮ ಭೂಮಿಗೆ ಮಿತಿಯಿಲ್ಲದೆ ಸುರಿದ ರಸಾಯನಿಕ ಗೊಬ್ಬರದಿಂದಾಗಿ ಭೂಮಿಯ ಫಲವತ್ತತೆ ನಾಶವಾಯಿತು, ಹೈಬ್ರಿಡ್ ತಳಿಗಳ ಜೊತೆ ಹಲವಾರು ದೈತ್ಯ ಕಳೆಗಳೂ ಸಹ ದೇಶಕ್ಕೆ ಕಾಲಿಟ್ಟವು, ಕೀಟ ಮತ್ತು ಕಳೆ ನಾಶಕ್ಕೆ ಸಿಂಪಡಿಸಿದ ರಸಾಯನಿಕ ಔಷದಿಗಳ ಫಲದಿಂದಾಗಿ ನೀರು ವಿಷಮಯವಾಗುವುದರ ಜೊತೆಗೆ ಕೃಷಿಯ ಜೊತೆ ತಳಕು ಹಾಕಿಕೊಂಡಿದ್ದ ಜೀವ ಜಾಲಕ್ಕೂ ನಾವು ಎರೆವಾದವು. ಇಷ್ಟೇಲ್ಲಾ ಸಾಧನೆಯ ನಡುವೆ ರೈತ ಸುಖವಾಗಿದ್ದಾನಾ? ಅದೂ ಇಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಯೊಂದಕ್ಕೆ 60 ರೂಪಾಯಿನಿಂದ 70 ರೂಪಾಯಿವರೆಗೆ ಇದೆ. ಕಳೆದ ಶುಕ್ರವಾರ ( ಸೆಪ್ಟಂಬರ್20) ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದ ಈರುಳ್ಳಿ ಗೆ ವರ್ತಕರು ಕೇಜಿ ಒಂದಕ್ಕೆ 18 ರೂಪಾಯಿನಿಂದ 20 ರೂಪಾಯಿ ಬೆಲೆ ನಿರ್ಧರಿಸಿದರು. 20 ರೂಪಾಯಿಗೆ ಕೊಂಡ ಈರುಳ್ಳಿ , ಗ್ರಾಹಕನಿಗೆ ಮಾರುಕಟ್ಟೆಯಲ್ಲಿ 70 ರೂಪಾಯಿಗೆ ಮಾರಾಟವಾಗುತ್ತದೆ. ಇದರಲ್ಲಿ ದಕ್ಕಿದ 50 ರೂಪಾಯಿ ಲಾಭ ಯಾರಿಗೆ ಸೇರುತ್ತದೆ ಎಂಬ ಸತ್ಯವನ್ನು ಗ್ರಹಿಸಲಾರದಷ್ಟು ನಮ್ಮ ವ್ಯವಸ್ಥೆ ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆಯಾ? ಇಂತಹ ಸ್ಥಿತಿಯಲ್ಲಿ ಕೃಷಿ ವೃತ್ತಿ ಯಾರಿಗೆ ತಾನೆ ಬೇಕಾಗಿದೆ.
                                                             ( ಮುಗಿಯಿತು)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ