ಸೋಮವಾರ, ಸೆಪ್ಟೆಂಬರ್ 2, 2013

ಪ್ರಧಾನಿ ಮನಮೌನ ಸಿಂಗ್ ಒಂದಿಷ್ಟು ನೆನಪುಗಳು

ಇತ್ತೀಚೆಗಿನ ದಿನಗಳಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಸದಾ ಸುದ್ಧಿಯಲ್ಲಿದ್ದಾರೆ. ಕಳೆದ ತಿಂಗಳಿನಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ , ಇದರ ಪರಿಣಾಮವಾಗಿ ವಿದೇಶಿ ವಿನಿಮಯದ ಚಾಲ್ತಿ ಖಾತೆಯಲ್ಲಿ ಕರಗುತ್ತಿರುವ ಡಾಲರ್ ಮೊತ್ತದ  ಠೇವಣಿ, ಹಾಗೂ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆ ಇವೆಲ್ಲವೂ ಮತ್ತೇ ಭಾರತವನ್ನು 1991 ರ ಪರಿಸ್ಥಿತಿಗೆ ಕೊಂಡೊಯ್ಯಬಹುದೆಂಬ ಆತಂಕ ಎಲ್ಲಾ ವಲಯಗಳಿಂದ ಕೇಳಿಬರುತ್ತಿದೆ.
ಭಾರತ ಎದುರಿಸುತ್ತಿರು ಈ ಆರ್ಥಿಕ ಸಂಕಟ  ಬಹತೇಕ ಏಷ್ಯಾರಾಷ್ಟ್ರಗಳನ್ನು ಒಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನೂ ಕಾಡುತ್ತಿದೆ. ಚೇತರಿಸಿಕೊಂಡ ಅಮೇರಿಕಾದ ಆರ್ಥಿಕ ಅಭಿವೃದ್ಧಿಯಿಂದಾಗಿ ಡಾಲರ್ ಎದುರು ಬಹುತೇಕ ರಾಷ್ಟ್ರಗಳ ಕರೆನ್ಸಿ ಮೌಲ್ಯ ಕುಸಿಯುತ್ತಿದೆ. ಇದು ಒಂದು ತಾತ್ಕಾಲಿ ಸ್ಥಿತಿ. ಮಾತ್ರ. ಕರೆನ್ಸಿ ಮೌಲ್ಯದ ಕುಸಿತವನ್ನು ತಡೆಗಟ್ಟಲು ಅನೇಕ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಇವುಗಳಲ್ಲಿ ಏಕಾಏಕಿ ವಿದೇಶಿ ಸಾಂಸ್ತಿಕ ಹೂಡಿಕೆದಾರರು ಶೇರು ಮಾರುಕಟ್ಟೆಯಲ್ಲಿ ಹೂಡಿರುವ  ತಮ್ಮ ಬಂಡವಾಳವನ್ನು ಹಿಂತೆಗೆಯುವ ಕ್ರಮದ ಮೇಲೆ ನಿರ್ಭಂಧ ಅಥವಾ ಮಿತಿ ಹೇರುವುದು, ಆಮದು ವಸ್ತುಗಳ ಮೇಲೆ ಮಿತಿ ಇಲ್ಲವೆ ಅಧಿಕ ಸುಂಕ ಹೇರುವುದರ ಮೂಲಕ ನಿಯಂತ್ರಿಸುವ ಕ್ರಮ ಎಲ್ಲಾ ರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಭಾರತದಲ್ಲಿ ಈಗಾಗಲೆ ವಿದೇಶಿ ಹೂಡಿಕೆದಾರರು ಈ ಮೊದಲು ಎರಡು ಲಕ್ಷ ಡಾಲರ್ ಹಣ ಹಿಂತೆಗೆಯಲು ಅವಕಾಶವಿತ್ತು. ಈಗ ಇದನ್ನು ಎಪ್ಪತ್ತು ಸಾವಿರ ಡಾಲರ್ ಗೆ ಮಿತಿ ಗೊಳಿಸಲಾಗಿದೆ. ಕಲರ್ ಟಿ.ವಿ.( ಎಲ್.ಸಿ.ಡಿ.ಟಿ.ವಿ.) ಇವುಗಳ ಮೇಲೆ ಶೇಕಡ 37ರಷ್ಟು ಅಧಿಕ ಶುಲ್ಕ ವಿಧಿಸಲಾಗುತ್ತಿದೆ. ಚಿನ್ನದ ಆಮದು ಮೇಲಿನ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ. ಹೀಗೆ ಆಮದು ಮಾಡಿಕೊಂಡ ವಸ್ತುಗಳಿಗೆ ಡಾಲರ್ ರೂಪದಲ್ಲಿ ಹಣ ಹರಿದುಹೋಗುತ್ತಿರುವುದನ್ನು ತಡೆಗಟ್ಟಲು ಅನೇಕ ಕ್ರಮಗಳು ಜಾರಿಯಲ್ಲಿವೆ, ಹಾಗಾಗಿ ಈಗ ಎದುರಾಗಿರುವ ಆರ್ಥಿಕ ಸಂಕಷ್ಟಗಳು ತಾತ್ಕಾಲಿಕ ಎಂದು ನಾವು ಸಮಾಧಾನ ಪಟ್ಟುಕೊಂಡರೂ ಸಹ ದೇಶದ ಜಿ.ಡಿ.ಪಿ. ಬೆಳವಣಿಗೆಯ ದರ 4.4 ಕ್ಕೆ ಕುಸಿದು ದೇಶದ ಒಟ್ಟು ಆರ್ಥಿಕ ಬೆಳವಣಿಗೆಯ ದರದ ಮೇಲೆ ಪರಿಣಾಮ ಬೀರಿದೆ.
ಇಡೀ ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ ನಾಯಕ ಎಂದು ಜಾಗತಿಕವಾಗಿ ಪ್ರಸಿದ್ದರಾಗಿರುವ ನಮ್ಮ ಪ್ರಧಾನಿ, ಡಾ ಮನಮೋಹನ್  ಸಿಂಗ್ ರವರೋ? ಅಥವಾ ಮನಮೌನಸಿಂಗರೋ ಎಂಬ ಗೊಂದಲ ಉಂಟಾಗುತ್ತಿದೆ. ವರ್ತಮಾನದ ಜಗತ್ತಿನಲ್ಲಿ ಆರ್ಥಿಕ ಸುಧಾರಣೆಗಳ ಹರಿದಾರ ಎಂಬ ಖ್ಯಾತಿಗೆ ಒಳಗಾಗಿರುವ, ಸ್ವತಃ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಙರಾಗಿರುವ ಮನಮೋಹನ್ ಸಿಂಗ್ ಬಹಳ ದಿನಗಳ ನಂತರ ಸಂಸತ್ತಿನಲ್ಲಿ ಮಾತನಾಡಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮೊಳಗಿನ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ. ಪ್ರಧಾನಿಯವರು ರಾಜ್ಯ ಸಭೆಯಲ್ಲಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ವೈಖರಿ ನಿಜಕ್ಕೂ ಅವರನ್ನು ಬಲ್ಲವರಿಗೆ ವಿಸ್ಮಯವನ್ನುಂಟು ಮಾಡುವಂತಹದ್ದು, ಇಂತಹದ್ದೆ ಸಾತ್ವಿಕ ಸಿಟ್ಟನ್ನು ಅವರು ತಮ್ಮ ನೇತೃತ್ವದ ಯು.ಪಿ.ಎ . ಸರ್ಕಾರದ ಕಲ್ಲಿದ್ದಲು ಹಗರಣ ಮತ್ತು 2 ಜಿ. ಹಗರಣ ಹಾಗೂ ರೈಲ್ವೆ ಸಚಿವರ ಭ್ರಷ್ಠಾಚಾರದ ಪ್ರಕರಣದಲ್ಲಿ ತೋರಿದ್ದರೆ, ಕಾಂಗ್ರೇಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಇಂತಹ ದಯನೀಯವಾದ ಸ್ಥಿತಿ ಬರುತ್ತಿರಲಿಲ್ಲ.
1991 ರ ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆ ಮಾರಿನ ಬಹುತೇಕ ಮಂದಿಗೆ  ಗೊತ್ತಿಲ್ಲದ ವಿಷಯ.
ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ರಾಜಕೀಯಕ್ಕೆ ಬಂದದ್ದೂ ಕೂಡ ತೀರಾ ಆಕಸ್ಮಿಕ. ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಮಹಮದ್ ಯೂನಸ್ ಇವರಿಗಿಂತ ಮುಂಚೆ ಈ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಇವರಿಗೆ ಇತ್ತು. 20 ಮತ್ತು 21 ನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರು ಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ. (ಇದೇ ರೀತಿ ಮಲೇಷಿಯಾದ ಮಾಜಿ ಪ್ರಧಾನಿ ಡಾ. ಮಹತೀರ್ ಕೂಡ ಇಂತಹ ಪ್ರಶಂಸೆಗೆ ಭಾಜನರಾಗಿದ್ದರು)
ಅತ್ಯಂತ ಕಡಿಮೆ ಮಾತನಾಡುವ ಹಾಗೂ ಸೌಮ್ಯ ಸ್ವಭಾವದ ಸಿಂಗರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಅವರ ಅನುಭವ ಮತ್ತು ವಿದ್ಯೆಯ ಹಿನ್ನಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲೆಂಡಿನ ಕೇಂಬ್ರಿಡ್ಜ್  ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ.ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ವ್ಯಕ್ತಿ ಡಾ. ಮನಮೋಹನ್ ಸಿಂಗ್ ರವ ರು.
ಹಲವಾರು ವರ್ಷಗಳ ಕಾಲ ಭಾರತದ ಹಲವು ವಿ.ವಿ.ಗಳು ಮತ್ತು ದೆಹಲಿಯ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯಲ್ಲಿ ಪ್ರೊಪೆಸರ್ ಆಗಿದ್ದ ಸಿಂಗರು 1972 ರಿಂದ 1976 ರವರೆಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ, 1982ರಿಂದ 85 ರವರೆಗೆ ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿ, 1985ರಿಂದ 1987 ರ ವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸಿ, ನಂತರ 1991ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು. ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಇದೊಂದೆ.  ಏಕೆಂದರೆ, ಅದೇ ವರ್ಷದ( 1991) ಮೇ ತಿಂಗಳಿನ 21 ರಿಂದ 30 ರವರೆಗೆ ಭಾರತ ಸರ್ಕಾರ 67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್ ( 47 ಟನ್ ) ಮತ್ತು ಲಂಡನ್ ನಗರದ  ಸ್ವಿಟ್ಜರ್ ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು  ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು. 1990 ರಲ್ಲಿ ಕಾಂಗ್ರೇಸ್  ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರ  ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991ರ ಮಾರ್ಚ್ ತಿಂಗಳಲ್ಲಿ  ಬಹುಮತ ಕಳೆದುಕೊಂಡು ಪತನಗೊಂಡಿತು. ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ  ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿಅಂಚಿಗೆ ದೂಡಿತ್ತು. 1991ರ ಜೂನ್ ನಲ್ಲಿ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.


ಎಂದೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತ ವಾಗಿ ಈ ಹುದ್ದೆಯೂ ಒಲಿದು ಬಂತು. 2004 ರಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.ಎ. ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ ( ವಿದೇಶಿ ಮಹಿಳೆ ಮತ್ತು ತಡವಾಗಿ ಅಂದರೆ, 1984ರ ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು. ಆ ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪ ಸಂಖ್ಯಾತ ಸಮುದಾಯದಿಂದ ಬಂದ (ಮುಸ್ಲಿಂ ಮತ್ತು ಸಿಖ್) ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಅಬ್ದುಲ್ ಕಲಾಂ ಮತ್ತು ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.
2004 ರಿಂದ 2009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ಆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು, ಬುಶ್ ಮತ್ತು ಬರಾಕ್ ಒಬಾಮರಂತಹವರು  ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಬಾರತದ   ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರಾಷ್ಟ್ರೀಯ ಹಣಕಾಸು ನಿಧಿ( ಐ.ಎಂ.ಎಫ್0) ಸಾಲನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು ( Structarul Adjestments) ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.
ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು. ಮೂಲತಃ ಸಿಂಗ್ ರವರು ಇಬ್ಬರು ವಿಭಿನ್ನ ವಿಚಾರ ಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ  ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದರು. ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 2004ರಿಂದ 2010 ರ ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.

ಸಿಂಗ್ ರವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷ, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ಈ ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಇವರ ಸಚಿವ ಸಂಪುಟದಲ್ಲಿ ಸಚಿವರಾದರು. ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೇಸ್ ಭಟ್ಟಂಗಿಗಳು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2.ಜಿ. ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು. ಯು.ಪಿ.ಎ. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಭಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಟ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012 ರ ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆ ಭಾರತದ “ವಿಫಲ ನಾಯಕ” ಎಂದು ಬಣ್ಣಿಸಿತು.

ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು, ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನುತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ) ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999ರ ಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗರು ಸಾಲ ಪಡೆದಿದ್ದರು. ಅಸ್ಸಾಂ ನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನ ಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಡಾ. ಮನಮೊಹನ ಸಿಂಗ್ ರವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಈ ಕಾರಣಕ್ಕಾಗಿ. ಒರ್ವ ಶಾಸಕನ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಸಂದರ್ಭದಲ್ಲಿ  ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ  ದುರಂತ ನಾಯಕನ ಇಮೇಜಿನ ನಡುವೆಯೂ  ಗೌರವ ಮೂಡುತ್ತದೆ..

1 ಕಾಮೆಂಟ್‌: