ಭಾರತದಲ್ಲಿ ಹಲವು ವರ್ಷಗಳಿಂದ, ಹಲವು ರೂಪಗಳಲ್ಲಿ ಅನ್ನದಾತರ
ಪಾಲಿಗೆ ಸಾವಿನ ಕುಣಿಕೆಯಂತೆ, ನೆತ್ತಿಯ ಮೇಲಿನ ತೂಗುಕತ್ತಿಯಂತೆ ಇದ್ದ ಭೂಮಿ ಸ್ವಾಧೀನ
ಪ್ರಕ್ರಿಯೆಗೆ ಸಂಬಂಧಿಸಿದ ಭೂಮಸೂದೆ ಇದೀಗ ಸಂಸತ್ತಿನಲ್ಲಿ ಅಂಗೀಕೃತವಾಗಿದೆ.ಚಿನ್ನದ ಹಿಂದಿನ ಮಸೂದೆಗೂ, ಈಗಿನ ಮಸೂದೆಗೂ ಇರುವ ವೆತ್ಯಾಸವೆಂದರೆ,
ಹಿಂದಿನದು ಕಬ್ಬಿಣದ ಕತ್ತಿಯಾಗಿತ್ತು, ಈಗಿನದು ಚಿನ್ನದ ಕತ್ತಿಯಾಗಿದೆ. ಆದರೆ, ಪರಿಣಾಮ ಮಾತ್ರ
ಒಂದೇ ರೀತಿಯದು.
ಈವರೆಗೆ ಇದ್ದ ಅಡ್ಡಿ ಆತಂಕಗಳನ್ನು ಸಡಿಲಗೊಳಿಸಿ, ಭೂಮಿ
ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡುವ, ಪುನರ್ವಸತಿ ಕಲ್ಪಿಸುವ ಹಾಗೂ ಕೈಗಾರಿಕೆಗಳಗೆ ಭೂಮಿ ನೀಡುವ ಕುರಿತ ಹಕ್ಕನ್ನು
ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ
ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುವವರಿಗೆ ಈ ಮಸೂದೆ ನೆರವಾಗಲಿದೆ ಎಂಬ ವ್ಯಾಖ್ಯಾನಗಳು ಮುಂದುವರಿದಿವೆ.
ಇನ್ನೊದೆಂಡೆ ಭೂ ಪರಿಹಾರ ಹೆಚ್ಚಾದ ಕಾರಣ ವಸತಿ ಕ್ರೇತ್ರದಲ್ಲಿ ಮನೆಗಳು ಮತ್ತು ನಿವೇಶನಗಳ ಬೆಲೆ
ಗಗನಕ್ಕೇರುತ್ತವೆ ಎಂಬ ಆತಂಕ ಸೃಷ್ಟಿಯಾಗಿದೆ. ಮಾಧ್ಯಮಗಳಲ್ಲಿ ತಮ್ಮ ಅನ್ನದಾತರಾದ ಕಾರ್ಪೊರೇಟ್
ಕಂಪನಿಗಳ ಪರವಾಗಿ, ಮತ್ತು ಕೈಗಾರಿಕೆಗಳ ಪರವಾಗಿ ಬೆಳವಣಿಗೆ ಅಡ್ಡಿಯಾಗ ಬಲ್ಲ ಮಸೂದೆ ಎಂಬ ಆತಂಕದ ಚರ್ಚೆ
ಎಗ್ಗಿಲ್ಲದೆ ಸಾಗಿದೆ.( ಈ ಲೇಖನ ಬರೆಯುತ್ತಿರುವ ವೇಳೆಯಲ್ಲಿ ಎನ್,ಡಿ.ಟಿ.ವಿ. ಯ ಪ್ರಾಫಿಟ್
ಛಾನಲ್ ನಲ್ಲಿ ಬೆಳಿಗ್ಗೆ 11 ರಿಂದ ಸತತ ಎರಡು ಗಂಟೆಗಳ ಕಾಲ ಚರ್ಚೆ ಸಾಗಿದೆ. )
ಕಾನೂನು, ಹಣ ಮತ್ತು ತೋಳ್ಬಲಗಳ ನೆರವಿನಿಂದ ಈ ದೇಶದ ರೈತರನ್ನು , ಸಣ್ಣ
ಹಿಡುವಳಿದಾರರನ್ನು ವಂಚಿಸಿದ ಕಥೆ, ಹಾಗೂ ಅವರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡ ವಿವರಗಳು ಭಾರತದ
ಹೀನ ಚರಿತ್ರೆಯೊಂದರ ಸಂಪುಟವಾಗಬಲ್ಲದು.
ಬ್ರಿಟೀಷರು 1894 ರಲ್ಲಿ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ,
ಸ್ವಾತಂತ್ರ್ಯಾನಂತರದ 66 ವರ್ಷಗಳ ಕಾಲ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಈ ದೇಶದ
ಜನಪ್ರತಿನಿಧಿಗಳು, ಆಡಳಿತಗಾರರು ಜಾರಿಯಲ್ಲಿಟ್ಟಿದ್ದರು ಎಂಬ ಸಂಗತಿಯೇ ಅಪಮಾನಕಾರಿಯಾದುದು. ಒಂದೆಡೆ
ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ
ಹಕ್ಕನ್ನು ನೀಡಿ, ಮತ್ತೊಂದೆಡೆ, ಅವನ ಸರ್ವಸ್ವವನ್ನು ಕಿತ್ತುಕೊಳ್ಳುವ ಹಗಲು ದರೋಡೆಯ ಕೃತ್ಯಗಳು ನಿರಂತರವಾಗಿ
ಸಾಗುತ್ತಾ ಬಂದಿದೆ. ಇದು ಅಸಮಾನತೆಯ ಭಾರತವಷ್ಟೇ ಅಲ್ಲ, ಹಲವು ವೈರುಧ್ಯಗಳ ಭಾರತವೂ ಕೂಡ ಹೌದು.
1990 ರಲ್ಲಿ ಜಾಗತೀಕರಣ ವ್ಯವಸ್ಥೆಗೆ ಭಾರತ ಬಾಗಿಲು
ತೆರೆದುಕೊಂಡ ಪರಿಣಾಮವಾಗಿ ಗರಿಗೆದರಿದ ಆರ್ಥಿಕ ಚಟುವಟಿಕೆಗಳ ಫಲವಾಗಿ ಭಾರತದಲ್ಲಿ ಭೂಮಿಗೆ
ಇನ್ನಿಲ್ಲದ ಬೇಡಿಕೆ ಬಂದಿತು. ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು ಮಾರ್ಗ, ಬಂದರು ನಿರ್ಮಾಣ
ಸೇರಿದಂತೆ, ಕೈಗಾರಿಕೆಗಳಿಗಾಗಿ, ವಿಶೇಷ ಆರ್ಥಿಕ ವಲಯ ಮತ್ತು ವಸತಿ ಕ್ರೇತ್ರದಲ್ಲಿ ಮನೆಗಳ
ನಿರ್ಮಾಣ,ಹಾಗೂ ಬಡಾವಣೆಗಳು, ರಿಸಾರ್ಟ್ ಗಳಿಗಾಗಿ ಫಲವತ್ತಾದ ಕೃಷಿ ಭೂಮಿಗಳು ಬಲಿಯಾದವು. ಸ್ವತಃ
ಸರ್ಕಾರಗಳು ಮಧ್ಯವರ್ತಿಗಳಂತೆ ನಿಂತು, ಸಾರ್ವಜನಿಕ ಉದ್ದಿಮೆಗಳಿಗೆ, ಖಾಸಾಗಿ ಕಂಪನಿಗಳಿಗೆ ರೈತರ
ಭೂಮಿಯನ್ನು ವರ್ಗಾಯಿಸಿದವು. ಕೈಗಾರಿಕೋದ್ಯಮಿಗಳು ಮತ್ತು ಜನಪ್ರತಿನಿಧಿಗಳ ಅಪವಿತ್ರ
ಮೈತ್ರಿಯಿಂದಾಗಿ ಈ ನೆಲದ ಕಾನೂನುಗಳು ಗಾಳಿಗೆ ತೂರಲ್ಪಟ್ಟವು. ಇಂತಹ ಪರಿಸ್ಥಿತಿಗೆ ಪೂರಕವಾಗಿ,
ಭಾರತದ ಕೃಷಿ ಕ್ರೇತ್ರ ಕೂಡ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ಒಂದು ಕಾಲದಲ್ಲಿ ಅಸಂಖ್ಯಾತ
ಕೃಷಿ ಕಾರ್ಮಿಕರಿಗೆ ಆಧಾರವಾಗಿದ್ದ ಕೃಷಿ ವಲಯ ಸ್ವತಃ ಭೂಮಾಲಿಕನಿಗೆ ಆಸರೆಯಾಗಿ ನಿಲ್ಲುವ ನಂಬಿಕೆ ಕುಸಿದು ಹೋಗಿರುವ ಸ್ಥಿತಿ ಇವೊತ್ತಿಗೂ
ಮುಂದುವರಿದಿದೆ. ಇದರಿಂದಾಗಿ ನಗರೀಕರಣದ ಬೆಳವಣಿಗೆ ಮತ್ತು ಕೈಗಾರಿಕೆ ಹಾಗೂ ವಸತಿ ಕ್ರೇತ್ರದಲ್ಲಿ
ತೆರೆದುಕೊಂಡ ಉದ್ಯೋಗದ ಅವಕಾಶಗಳು, ಜನರನ್ನು ಹಳ್ಳಿಗಳಿಂದ ನಗರದತ್ತ ವಲಸೆ ಹೋಗಲು ಪ್ರೆರೇಪಿಸಿದವು.
ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸರ್ಕಾರಗಳು
ನಿರ್ಧಿಷ್ಟ ಯೋಜನೆಗಿಂತ ಎರಡು ಅಥವಾ ಮೂರು ಪಟ್ಟು ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳತೊಡಗಿದವು.
ಶತಮಾನದಷ್ಟು ಹಳೆಯದಾದ ಭೂ ಸ್ವಾಧೀನ ಮಸೂದೆ ಸರ್ಕಾರಗಳ
ಕೈಗೆ ಸಿಕ್ಕ ಆಯುಧವಾಯಿತು. 1894 ರ ಪೆಬ್ರವರಿ 2 ರಂದು ಬ್ರಿಟೀಷರು, ಭಾರತದಲ್ಲಿ
ಭೂಸ್ವಾಧೀನ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತಂದಿದ್ದರು. ರಸ್ತೆ, ರೈಲು ಮಾರ್ಗ, ಸಾರ್ವಜನಿಕ
ಬಳಕೆಗೆ ಅವಶ್ಯಕ ಎನಿಸಿದರೆ, ಸರ್ಕಾರಗಳು ಖಾಸಾಗಿ ಭೂಮಿಯನ್ನು ನಿರ್ಧಿಷ್ಟ ಪರಿಹಾರ ನೀಡಿ
ವಶಪಡಿಸಿಕೊಳ್ಳಬಹುದಿತ್ತು. ಇಂತಹ ಭೂಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಯಾವೊಬ್ಬ ಭಾರತದ ನಾಗರೀಕನೂ
ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಇರಲಿಲ್ಲ.
ಬಹುತೇಕ ಯಥಾಸ್ಥಿತಿಯಲ್ಲಿ ಜಾರಿಯಲ್ಲಿದ್ದ ಈ ಮಸೂದೆಯನ್ನು 2003 ರಲ್ಲಿ ವಾಜಪೇಯಿ ನೇತೃತ್ವದ
ಎನ್.ಡಿ.ಎ. ಸರ್ಕಾರ ಹಲವು ತಿದ್ದುಪಡಿಯೊಂದಿಗೆ ಜಾರಿಗೆ ತರಲು ಪ್ರಯತ್ನಿಸಿ ವಿಫಲವಾಗಿತ್ತು.
ಆನಂತರ 2007 ರಲ್ಲಿ ಕಾಂಗ್ರೇಸ್ ನೇತೃತ್ವದ ಯು.ಪಿ.ಎ ಸರ್ಕಾರ ಕೂಡ ಪರಿಹಾರ ಮತ್ತು ಪುನರ್ವಸತಿ
ಇವುಗಳ ವಿಷಯದಲ್ಲಿ ಹಲವು ಮಾರ್ಪಾಡು ಮಾಡಿ ಜಾರಿಗೆ ತರಲು ಯತ್ನಿಸಿದಾಗ ಹಲವು ವಾದ ವಿವಾದಕ್ಕೆ
ಗುರಿಯಾಗಿ ನೆನಗುದಿಗೆ ಬಿದ್ದಿತು. ಅಂತಿಮವಾಗಿ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯ ಅಂತಿಮ
ದಿನಗಳಲ್ಲಿ ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. 2010 ರಿಂದ ಮೂಲೆಗುಂಪಾಗಿದ್ದ ಭೂ
ಮಸೂದೆಗೆ 2013 ರ ಸೆಪ್ಟಂಬರ್ ಮೊದಲ ವಾರದಲ್ಲಿ
ಅಸ್ತಿತ್ವಕ್ಕೆ ಬರಲು ಅವಕಾಶ ದೊರೆತಿದೆ.
ಹೊಸ ಭೂಮಸೂದೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರ ಸಿಗುವಂತೆ ಅವಕಾಶ
ಮಾಡಿಕೊಡಲಾಗಿದೆ. ಈ ಅಂಶಗಳು ಈಗಾಗಲೇ ಬಂಡವಾಳಶಾಹಿ ಜಗತ್ತಿನ ನಿದ್ದೆ ಗೆಡಿಸಿದೆ.
ಇತ್ತೀಚೆಗಿನ ದಿನಗಳಲ್ಲಿ ಆಹಾರ ಮಸೂದೆ, ಭೂ ಮಸೂದೆ,
ಆಂಧ್ರಪ್ರದೇಶದ ವಿಭಜನೆ, ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನ 371 ತಿದ್ದುಪಡಿ ಅನ್ವಯ
ವಿಶೇಷ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವು ಇವುಗಳ ಹಿಂದೆ ಇರುವ ಓಲೈಕೆ ರಾಜಕಾರಣವನ್ನು ನಾವು ತಳ್ಳಿಹಾಕುವಂತಿಲ್ಲ.
ಆಳುವ ಸರ್ಕಾರಗಳು ಯಾವುದೇ ಪಕ್ಷಕ್ಕೆ ಸೇರಿರಲಿ, ಚುನಾವಣೆಗಳು ಹತ್ತಿರವಾದಂತೆ ಸರ್ಕಾರಗಳ ಇಂತಹ
ಸಹಾನುಭೂತಿಯ ನಡುವಳಿಕೆಗಳು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಇಂದಿನ ದಿನಗಳಲ್ಲಿ ಓಲೈಕೆ
ರಾಜಕಾರಣ ಕೋಮುವಾದದಷ್ಟೇ ಅಪಾಯಕಾರಿ ಎಂಬುದನ್ನು ನಾವು ಅರಿಯಬೇಕಿದೆ.
ಹೊಸ ಭೂ ಮಸೂದೆಯ ಪ್ರಕಾರ ನಗರ ಪ್ರದೇಶಗಳಲ್ಲಿ ಭೂಮಿಯ ಮಾರುಕಟ್ಟೆ
ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎರಡು ಪಟ್ಟು
ಹೆಚ್ಚಿನ ದರದಲ್ಲಿ ಪರಿಹಾರ ನೀಡುವಂತೆ
ಪ್ರಸ್ತಾಪಿಸಲಾಗಿದೆ. ವಾಸದ ಮನೆಗಳಿದ್ದರೆ, ಮನೆಗಳನ್ನು ಕಳೆದುಕೊಳ್ಳುವವರಿಗೆ 20 ವರ್ಷಗಳ ಕಾಲ
ಪ್ರತಿ ತಿಂಗಳು 2 ಸಾವಿರ ಮಾಸಾಶನ ಇಲ್ಲವೆ ಒಟ್ಟಿಗೆ 5 ಲಕ್ಷರೂಪಾಯಿ ಪರಿಹಾರ ನೀಡಲು ಕಾನೂನು
ರೂಪಿಸಲಾಗಿದೆ, ಜೊತೆಗೆ ಬಹು ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ( ಗ್ರಾಮ ಪಂಚಾಯಿತಿ) ಇವುಗಳ
ಅನುಮತಿಯಿಲ್ಲದೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಯುವಂತಿಲ್ಲ. ಹೊಸ ಮಸೂದೆಯ ಈ ಎಲ್ಲಾ ಅಂಶಗಳು ಸಮಾಧಾನಕಾರಿಯಾಗಿದ್ದರೂ
ಒಟ್ಟಾರೆ ಈ ಮಸೂದೆ “ಕೋಟೆಯನ್ನು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬ
ಗಾದೆಯಂತಿದೆ. ಕಳೆದ ಎರಡು ದಶಕದ ಅವಧಿಯಲ್ಲಿ ದೇಶದ ಕೋಟ್ಯಾಂತರ ಹೆಕ್ಟೇರ್ ಫಲವತ್ತಾದ ಕೃಷಿ ಭೂಮಿ
ಕೈಗಾರಿಗೆಳ ನೆಪದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಕೈ ಸೇರಿದೆ. ಇದಕ್ಕೆ ಈ ದೇಶದ ಬೇರೆ ರಾಜ್ಯದ
ಉದಾಹರಣೆ ಬೇಡ. ನಮ್ಮ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೂ ದಂಧೆಯ ವಿವರ ಹೀಗಿದೆ
ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಕರ್ನಾಟಕ
ಕೈಗಾರಿಕಾ ಅಭಿವೃದ್ದಿ ನಿಗಮವು, ಸಮೀಪದ ಗೊಕುಲ ಗ್ರಾಮದ 707 ಎಕರೆ ಭೂಮಿಯನ್ನು ಸ್ವಾಧಿನ
ಪಡಿಸಿಕೊಂಡಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ 599 ಎಕರೆ ಪ್ರದೇಶ
ನೀಡಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕರ್ನಾಟಕ ಸರ್ಕಾರ ಒಂದು ಎಕರೆಗೆ 26 ಲಕ್ಷ
ರೂಪಾಯಿಗಳಂತೆ ಪರಿಹಾರಿ ನೀಡಿ, ಒಟ್ಟು 707 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿತು. (
ಪ್ರಸ್ತುತ ಭೂಮಿಯ ಮಾರುಕಟ್ಟೆಯ ಮೌಲ್ಯ ಪ್ರತಿ ಎಕರೆಗೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ಕರ್ನಾಟಕ
ಸರ್ಕಾರದ ಕೆ.ಐ.ಡಿ.ಬಿ.ಕಾಯ್ದೆ 1966 ರ 28(8) ರ ಸೆಕ್ಷನ್ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗಾಗಿ
ವಶಪಡಿಸಿಕೊಂಡ ಜಮೀನು ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದ ಪಕ್ಷದಲ್ಲಿ ಆ ಜಮೀನನ್ನು ಮೂಲ
ಮಾಲೀಕರಿಗೆ ಒಪ್ಪಿಸಬೇಕು. ಆದರೆ, ಕರ್ನಾಟಕ ಕೈಗಾರಿಕಾ ಅಬಿವೃದ್ದಿ ನಿಗಮ ರೈತರಿಗೆ 26 ಲಕ್ಷ
ನೀಡಿ ವಶಪಡಿಸಿಕೊಂಡಿದ್ದ ಹೆಚ್ಚವರಿ ಜಮಿನನ್ನು ತಲಾ ಎಕರೆಗೆ 50 ಲಕ್ಷ ರೂಪಾಯಿನಂತೆ ನಾರಾಯಣ
ಮೂರ್ತಿಯವರ ಇನ್ಪೋಸಿಸ್ ಸಂಸ್ಥೆಗೆ 50 ಎಕರೆ, ಮತ್ತು ನಾರಾಯಣ ಮುರ್ತಿಯವರ ಷಡ್ಡುಗ( ಸುಧಾ
ಮೂರ್ತಿಯವರ ತಂಗಿ ಜಯಶ್ರಿಯವರ ಪತಿ) ಅಮೇರಿಕಾದಲ್ಲಿರುವ ಖ್ಯಾತ ಐ.ಟಿ.ಉದ್ಯಮಿ ಗುರುರಾಜ್
ದೇಶಪಾಂಡೆ ನೇತೃತ್ವದ ದೇಶಪಾಂಡೆ ಪೌಂಡೇಶನ್ ಗೆ 12.26 ಎಕರೆ ಪ್ರದೇಶ ಮತ್ತು ಮಾಜಿ ಮುಖ್ಯಮಂತ್ರಿ
ಜಗದೀಶ್ ಶೆಟ್ಟರ್ ಅವರ ಬಾಲ್ಯದ ಸಹಪಾಠಿ ಹಾಗೂ ಹೋಟೆಲ್ ಉದ್ಯಮಿ ರಮೇಶ್ ಶೆಟ್ಟಿ ಎಂಬಾತನಿಗೆ
ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ 1.39 ಎಕರೆ ಪ್ರದೇಶವನ್ನು ಹಂಚಲಾಗಿದೆ. ಕೇವಲ ಒಂದು ವರ್ಷದ
ಅವಧಿಯೊಳಗೆ ರೈತರಿಗೆ 26 ಲಕ್ಷ ನೀಡಿ, ವಶಪಡಿಸಿಕೊಂಡಿದ್ದ ಜಮೀನನ್ನು, ಕಾನೂನನ್ನು ಗಾಳಿಗೆ
ತೂರಿ, ಎಕರೆಗೆ 50 ಲಕ್ಷರೂಪಾಯಿಗೆ ಮಾರಾಟ ಮಾಡಿದ ಕೆ.ಐ.ಡಿ.ಬಿ.ಯ ಈ ನಿರ್ಲಜ್ಜ ನಡುವಳಿಕೆಯನ್ನು
ಗಮನಿಸಿದರೆ, ಹೊಸ ಭೂ ಮಸೂದೆ ಕುರಿತು ನಂಬಿಕೆಯಾಗಲಿ, ವಿಶ್ವಾಸವಾಗಲಿ ಬರಲು ಸಾದ್ಯವೆ?
ಇದು ಕರ್ನಾಟಕದ ಕತೆಯಾದರೆ, ದೆಹಲಿ- ಆಗ್ರಾ ನಡುವಿನ
ಕಾರಿಡಾರ್ ರಸ್ತೆಗಾಗಿ43 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಮತ್ತು ಒರಿಸ್ಸಾದಲ್ಲಿ ಪೊಸ್ಕೊ
ಕಂಪನಿಗಾಗಿ 16 ಸಾವಿರ ಹೆಕ್ಟೇರ್ ಭೂಮಿ, ಹಾಗೂ ಜಾರ್ಖಾಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ
4.400 ಹೆಕ್ಟೇರ್ ಭೂಮಿಯನ್ನು ಮಿತ್ತಲ್ ಉಕ್ಕಿನ ಕಾರ್ಖಾನೆಗಾಗಿ ವಶಪಡಿಸಿಕೊಳ್ಳಲಾಗಿದೆ. ಕಳೆದ
ಎರಡು ದಶಕಗಳ ಅವದಿಯಲ್ಲಿ ದೇಶಾದ್ಯಂತ ಒಟ್ಟು ಐದು ಕೋಟಿ ರೈತರು, ಸಣ್ಣ ಹಿಡುವಳಿದಾರರು ಮತ್ತು
ಅರಣ್ಯದಲ್ಲಿದ್ದ ಆದಿವಾಸಿಗಳು ಭೂಮಿ ಕಳೆದುಕೊಂಡು ಅತಂತ್ರರಾಗಿದ್ದಾರೆ. ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿ
ನಕ್ಸಲ್ ಚಟುವಟಿಕೆ ಹೆಚ್ಚಾಗುತ್ತಿದೆ ಎಂಬ ವಾಸ್ತವ ಸತ್ಯವನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಜೈರಾಂ ರಮೇಶ್
ಒಪ್ಪಿಕೊಂಡಿದ್ದಾರೆ.
ಮಾನ್ಯರೇ, ಮೂಲದಲ್ಲಿ ನೀವು ಸಹ ರೈತನ ಮಗನಾಗಿರುವುದರಿಂದ ರೈತರ ಕಷ್ಠ ಏನೆಂಬುದನ್ನು ವಿವರವಾಗಿ ಓದುಗರ ಮುಂದೆ ಬಿಚ್ಚಿಟ್ಟಿದ್ದೀರಿ. ಆದರೆ, ರೈತರ ಪರ ಯೋಚನೆ ಮಾಡುವವರು ಯಾರು? ವ್ಯವಸಾಯವನ್ನೇ ನಂಬಿ ಬದುಕುವ ರೈತನಿಗೆ ೨೦-೩೦ ವರುಷಗಳ ಹಿಂದೆ ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ಹಾಗೆಯೇ ಬೆಳೆಯೂ ಕೈಗೆ ಸಿಗುತ್ತಿತ್ತು. ಸರಳವಾಗಿ ಸಂತೃಪ್ತ ಜೀವನ ಸಾಗಿಸುತ್ತಿದ್ದ ರೈತನಿಗೆ ನಾಗರಿಕತೆಯ ಹೆಸರಿನಲ್ಲಿ ಅಭಿವೃದ್ದಿ ಮಾಡುತ್ತೇವೆಂದು ಹೇಳಿಕೊಂಡು ಹಂತಹಂತವಾಗಿ ಇರುವ ಪ್ರಕೃತಿ ಸಂಪತ್ತು ಕೊಳ್ಳೆ ಹೊಡೆಯುತ್ತಾ ಕನಿಷ್ಠ ಸೌಲಭ್ಯಗಳನ್ನು ನಾಶಮಾಡಿದ್ದರಿಂದ ದುಡಿಯುವ ರೈತನ ಕೈಗಳಿಗೆ ಕೆಲಸವಿಲ್ಲವಾಯಿತು. ಕೃಷಿಯನ್ನು ನಂಬಿದವನು ದುಡಿದರೂ ಉದ್ಪಾದನೆ ಇಲ್ಲವಾಯಿತು. ಪ್ರಕೃತಿ ಸಹ ಮುನಿಸಿಕೊಂಡು ಕಾಲಕಾಲಕ್ಕೆ ಮಳೆ ಇಲ್ಲದಂತೆ ಮಾಡಿತು.ಯವಕರೆಲ್ಲಾ ಅಲ್ಪ ಸುಖಕ್ಕೆ ಬಲಿಯಾಗಿ ಅಡ್ಡ ಹಾದಿ ಹಿಡಿದು ಸೋಮಾರಿಗಳಾದರು. ನಗರಗಳಲ್ಲೂ ಸಹ ಇದ್ದ ಬೃಹತ್ ಕೈಗಾರಿಗಳು, ಬಾಗಿಲು ಮುಚ್ಚಿದವು ಚಿಕ್ಕಪುಟ್ಟ ಕೈಗಾರಿಕೆಗಳು ಬೆರಳಣೆಕೆಯಷ್ಟಿವೆ ಇದ್ದರೂ ನಷ್ಟದಲ್ಲಿ ನಡೆಯುತ್ತಿವೆ. ಹಳ್ಳಿಯಿಂದ ಕೂಲಿಗಾಗಿ ಬಂದರೂ ಕೆಲಸವಿಲ್ಲದಂತಾಗಿದೆ. ಬಹುತೇಕ ರೈತರ ಮಕ್ಕಳಾದ, ನಮ್ಮ ಆರ್ಥಿಕ ತಜ್ಣರು, ಸಂಸದರು, ಶಾಸಕರು ವಿಶೇಷ ಗಮನಹರಿಸಿ, ರೈತಾಪಿ ಜನರನ್ನು ಉಳಿಸಿ, ಕೃಷಿ ಭೂಮಿ ಉಳಿಯುವಂತೆ ಮಾಡಿ, ಸಾಧ್ಯವಾದಷ್ಟು ಕೆರೆಗಳನ್ನು ಉಳಿಸಿ ಅಭಿವೃದ್ದಿ ಮಾಡಿ, ನೀರಾವರಿ ಸೌಲಭ್ಯಗಳ ಕಡೆ ಹೆಚ್ಚಿನ ಗಮನಹರಿಸುವುದು ಸೂಕ್ತ. ಆಹಾರಕ್ಕಾಗಿ ಭಾರತೀಯರು ಪರಾವಲಂಭಿಗಳಾಗದಂತೆ, ಕ್ರಮ ತೆಗೆದುಕೊಳ್ಳುವುದು ಸೂಕ್ತ.
ಪ್ರತ್ಯುತ್ತರಅಳಿಸಿ