ಶುಕ್ರವಾರ, ಮಾರ್ಚ್ 14, 2014

ನಕ್ಸಲ್ ಇತಿಹಾಸದ ಸಮರ್ಥ ಅನಾವರಣ

                      ನಕ್ಸಲ್ ಇತಿಹಾಸದ ಸಮರ್ಥ ಅನಾವರಣ.
                                                            ಡಾ. ಕಿರಣ್ ಎಂ. ಗಾಜನೂರು



                                            ಎಂದೂ ಮುಗಿಯದ ಯುದ್ಧ ( ಭಾರತದ ನಕ್ಸಲ್ ಇತಿಹಾಸದ ಕಥನ)
                                            ಲೇ: ಡಾ.ಎನ್.ಜಗದೀಶ್ ಕೊಪ್ಪ.
                                           ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು
                                           ಬೆಲೆ; 130/ ರೂಪಾಯಿಗಳು.

ಇಲ್ಲಿ ನನ್ನ ಸಹೋದರ/ತಣ್ಣಗೆ ನಿದ್ರಿಸುತ್ತಿದ್ದಾನೆ/ಭಾರವಾದ ಎದೆಯೊಳಗೆ/ಜೋಲು ಮೋರೆ ಹೊತ್ತು/ಅವನ ಬಳಿ ನಿಲ್ಲಬೇಡ/ಎಲ್ಲರ ಮುಖದಲ್ಲಿನ/ನಗುವಿಗಾಗಿ ಹಂಬಲಿಸಿ/ಪ್ರಾಣ ತೆತ್ತವನು ಅವನು.
ಹೂವಿನಿಂದ ಶರೀರವನ್ನು/ಅಲಂಕರಿಸಬೇಡ ಗೆಳೆಯ/ಹೂವಿಗೆಕೆ? ಹೂವಿನ/ಅಲಂಕಾರ?/ಸಾಧ್ಯವಾದರೆ, ಎದೆಯೋಳಗೆ/ಅವನನ್ನು ಹುಗಿದಿಟ್ಟುಕೊ/ನಿನ್ನ ಹೃದಯದ ಪಕ್ಷಿ/ರೆಕ್ಕೆ ಬಿಚ್ಚಿ ಹಾರುವುದನ್ನ,/ಮಲಗಿರುವ ನಿನ್ನಾತ್ಮ/ಎಚ್ಚರವಾಗುವುದನ್ನ/ನೀನು ಕಾಣುವೆ.
ಸಾಧ್ಯವಾದರೆ/ಒಂದು ಹನಿ ಕಣ್ಣಿರು/ಒಂದು ತೊಟ್ಟು ರಕ್ತವನ್ನು/ಇಲ್ಲಿ ಸುರಿಸು.
ಡಾ.ಜಗದೀಶ್ ಕೊಪ್ಪ ಅವರಎಂದೂ ಮುಗಿಯದ ಯುದ್ಧಎಂಬ ಭಾರತದ ನಕ್ಸಲ್ ಕಥನದ ಇತಿಹಾಸವನ್ನು ದಾಖಲಿಸುವ 204 ಪುಟಗಳ ಪುಸ್ತಕ ಪ್ರಾರಂಭವಾಗುವುದು 1972 ರಲ್ಲಿ ಭಾರತದ ನಕ್ಸಲ್ ಚಳುವಳಿಯ ಸಂಸ್ಥಾಪಕ, ಲಕ್ಷಾಂತರ ಅದಿವಾಸಿಗಳ ಬದುಕಿಗೆ ಹೋರಾಟದ ಮೂಲಕ ಬೆಳಕನ್ನು, ಭರವಸೆಯ ದಾರಿಯನ್ನು ತೋರಿಸಿದ ಚಾರು ಮಜಂದಾರ್ ಸಾವಿನ ನಂತರ ಕೊಲ್ಕತ್ತ ನಗರದ ಸೇರೆಮನೆಯಲ್ಲಿದ್ದ ಅವನ ಸಂಗಡಿಗರು ತಮ್ಮನ್ನು ಬಂಧಿಸಲ್ಪಟ್ಟ ಕೋಣೆಯ ಗೋಡೆಗಳ ಮೇಲೆ ಇದ್ದಿಲಿನಿಂದ ಬರೆದ ಮೇಲಿನ ಕವಿತೆಯೊಂದಿಗೆ. ಇದೊಂದು ಘಟನೆ ಸಾಕು ಭಾರತದ ನಕ್ಸಲ್ ಇತಿಹಾಸವೆಂಬ ರಕ್ತ ಸಿಕ್ತ ಅಧ್ಯಾಯ ಮತ್ತು ಚಳುವಳಿಯಲ್ಲಿ ಇದ್ದವರ ಬದ್ಧತೆ ಅರಿವಾಗಲು ಹಾಗಂದ ಮಾತ್ರಕ್ಕೆ  ಇಡೀ ಪುಸ್ತಕಕದ ಮೂಲ ಉದ್ದೇಶ ಭಾರತದ ನಕ್ಸಲ್ ಇತಿಹಾಸವನ್ನು ಉನ್ಮಾದದ ನೆಲೆಯಲ್ಲಿ ವಿವರಿಸುವ ಮತ್ತು ಸಮರ್ಥಿಸುವ ಪ್ರಯತ್ನ ಎಂದು ನಾವ್ಯಾರಾದರು ಯೋಚಿಸಿದರೆ ಅದು ಖಂಡಿತ ತಪ್ಪಾಗುತ್ತದೆ. ಇಂತಹ ಒಂದು  ಪುಸ್ತಕ ಬರೆಯಲು ಡಾ.ಜಗದೀಶ್ ಕೊಪ್ಪ ಅವರಿಗಿದ್ದ ಮೂಲ ಉದ್ದೇಶ ಮತ್ತು ಪ್ರೇರಣೆ ಭಾರತದ ಸಮಕಾಲಿನ ಸಂದರ್ಭದಲ್ಲಿ ಬಡತನ ಮತ್ತು ಹಿಂಸೆಯ ನಡುವೆ ಸಂಬಂಧವಿರಬಹುದೆ? ಎಂಬ ಜಿಜ್ಞಾಸೆಯ ಪ್ರಶ್ನೆ. ಪ್ರಶ್ನೆಗೆ ಬಹುಮುಖ್ಯಕಾರಣ ಅವರೆ ನಮೂದಿಸುವಂತೆ ದೆಹಲಿಯ ಜವಹರಲಾಲ್ ನೆಹರೂ ವಿ.ವಿ. ಮತ್ತು ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು, ಇವರಲ್ಲಿ ವಿಶೇಷವಾಗಿ ಸ್ನಾತಕೋÀತ್ತರ ಪದವೀಧರರು ನಕ್ಸಲ್ ಸಂಘಟನೆಗಳಿಗೆ ಸೇರಿ ಕೈಗೆ ಬಂದೂಕ ಎತ್ತಿಕೊಂಡಿದ್ದು. ಹಾಗೆ ನೋಡುವುದಾದರೆ ನಕ್ಸಲ್ ಸಂಘಟನೆ ಧಾರ್ಮಿಕ ಸಂಸ್ಥೆಯಾಗಿರಲಿಲ್ಲ. ಜೊತೆಗೆ ಧರ್ಮದ ಅಮಲಾಗಲಿ ಅಥವಾ ಭಕ್ತಿಯ ಉನ್ಮಾದವಾಗಲಿ ಸಿಗುವ ತಾಣವೂ ಅದಾಗಿರಲಿಲ್ಲ. ನಕ್ಸಲ್ ಸಂಘಟನೆಗೆ ..ಎಸ್ ಮತ್ತು .ಪಿ.ಎಸ್ ನಂತಹ ಉನ್ನತ ಮಟ್ಟದ ಅಧಿಕಾರಿಗಳ ಮಕ್ಕಳು ಕೂಡ ಸೇರ್ಪಡೆಯಾಗಿದ್ದರು. ಅಂಶ ಅವರಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿ ಕೊನೆಗೆ ಅದು ಭಾರತದ ನಕ್ಸಲ್ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗುರುತಿಸುವಎಂದೂ ಮುಗಿಯದ ಯುದ್ಧಬರವಣಿಗೆಗೆ ಕಾರಣವಾಯಿತು. ಎಂದು ವಿವರಿಸುತ್ತಾರೆ ಮುಂದುವರಿದು ಅರಣ್ಯದ ಮಧ್ಯದ ಅದಿವಾಸಿಯಿಂದ ಹಿಡಿದು ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳನ್ನು ಚಳುವಳಿಗೆ ಸೂಜಿಗಲ್ಲಿನಂತೆ ಸೆಳೆದ ಅಂಶ ಯಾವುದು ಎಂಬುದನ್ನು ಹುಡುಕುತ್ತಾ ಹೊರಟರೆ, ಪಯಣ ನಮ್ಮನ್ನು ಅರಣ್ಯದಲ್ಲಿ ಮೂಕ ಪ್ರಾಣಿಗಳಂತೆ ಬದುಕುತ್ತಾ ಅರಣ್ಯಾಧಿಕಾರಿ, ಪೊಲೀಸರು, ಜಮೀನ್ದಾರರು ಮತ್ತು ಅರಣ್ಯ ಗುತ್ತಿಗೆದಾರರಿಂದ ನಿರಂತರ ಶೋಷಣೆಗಳಿಗೆ ಒಳಗಾದ ಅನಕ್ಷರಸ್ತ ಆದಿವಾಸಿಗಳ ಯಾತನಾದಾಯಕ ಬದುಕಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ ಎಂಬ ಅಂಶವನ್ನು ದಾಖಲಿಸುತ್ತಾರೆ.

ಒಟ್ಟು 12 ಅಧ್ಯಾಯಗಳಿರುವ ಪುಸ್ತಕದ ಪ್ರತಿಯೊಂದು ಅಧ್ಯಾಯವು ಭಾರತದದ ನಕ್ಸಲ್ ಚಳುವಳಿಯನ್ನು ಅದಕ್ಕೆ ಕಾರಣವಾದ ಸಮಾಜಿಕ ಅಸಮಾನತೆಯನ್ನು ಸರ್ಕಾರದ ನಿಲುವುಗಳನ್ನು ಪೋಲಿಸರ ಕ್ರೌರ್ಯವನ್ನು ವಿವರಿಸುತ್ತಾ ಸಾಗುತ್ತದೆ ಭಾರತದ ಇತಿಹಾಸದ ಮುಖ್ಯವಾಹಿನಿಯ ದಾಖಲೆಗಳು ನಕ್ಸಲ್ ಚಳುವಳಿಯ ಪ್ರಾರಂಭವನ್ನು 1967 ಮೇ ತಿಂಗಳಿನಲ್ಲಿ ಸಿಲಿಗುರಿ ಪ್ರಾಂತ್ಯದ ನಕ್ಸಲ್ಬಾರಿ ಎಂಬ ಹಳ್ಳಿಯಲ್ಲಿ ನಡೆದ ರೈತರು, ಮತ್ತು ಕೃಷಿ ಕೂಲಿ ಕಾರ್ಮಿಕರು ಹಾಗೂ ಜಮೀನ್ದಾರರ ನಡುವೆ ನಡೆದ ಸಂಘರ್ಷದ ರೂಪದಲ್ಲಿ ಗುರುತಿಸುತ್ತವೆ. ಆದರೆ ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿವೆ. ಶ್ರೀಕಾಕುಳಂ ಜಿಲ್ಲೆಯ ಪಾರ್ವತಿಪುರ ಎಂಬ ತಾಲ್ಲೂಕು ಕೇಂದ್ರ  ದೇಶದಲ್ಲಿ ಪ್ರಪಥಮ ಬಾರಿಗೆ ನಕ್ಸಲ್ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967ರಲ್ಲಿ. ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನರು ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ನಂತರ ಪ್ರದೇಶಕ್ಕೆ ಬೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿ ಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬುವುದರ ಮೂಲಕ ಕ್ರಾಂತಿಗೆ ನಾಂದಿ ಹಾಡಿದ. ಎಂಬ ಅಂಶವನ್ನು ಡಾ.ಜಗದೀಶ್ ಕೊಪ್ಪ ಅವರು ತಮ್ಮ ಪುಸ್ತಕದಲ್ಲಿ ಗುರುತಿಸುತ್ತಾರೆ. ಕಾರ್ಲ್ಮಾಕ್ರ್ಸ್ ದುಡಿಯುವ ವರ್ಗದ ಬಗ್ಗೆ ಹೊಂದಿದ್ದ ಕಾಳಜಿಯಿಂದ ಪ್ರೇರಿತನಾಗಿದ್ದ ಚಾರು ತನ್ನ ಕಣ್ಣ ಮುಂದೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ತೀರ ಹತ್ತಿರದಿಂದ ಗಮನಿಸತೊಡಗಿದ ಮತ್ತು ಪ್ರತಿಭಟಿಸತೊಡಗಿದ. ಚಾರು 1962 ರಿಂದ 1966 ವರೆಗೆ ನಿರಂತರ ವರ್ಗ ತಾರತಮ್ಯವನ್ನು ಪ್ರತಿಭಟಿಸಿ ಹಲವಾರು ಬಾರಿ ಜೈಲು ಸೇರಬೇಕಾಯಿತು. ಒಮ್ಮೆ ಪಶ್ಚಿಮ ಬಂಗಾಳ ಸರ್ಕಾರ ಕಮ್ಯೂನಿಷ್ಟ್ ಪಕ್ಷÀವನ್ನು ನಿಷೇಧಿಸಿದಾಗ ಸರ್ಕಾರದ ನಿಲುವÀನ್ನು ಪ್ರತಿಭಟಿಸಿ ಜೈಲು ಸೇರಿದ ಮತ್ತೂಬ್ಬ ಪ್ರಭಾವಿ ಹೋರಾಟಗಾರ ಕನುಸನ್ಯಾಲ್ ಜಲುಪಗುರಿಯ ಸೆÀರೆಮನೆಯಲ್ಲಿ ಚಾರುಮುಜಂದಾರ್ನನ್ನು ಬೇಟಿಯಾಗುವುದರ ಮೂಲಕ ಭಾರತದ ನಕ್ಸಲ್ ಹೋರಾಟದ ಇತಿಹಾಸಕ್ಕೆ  ಹೊಸ ಆಯಾಮವೊಂದನ್ನು ದೊರಕಿತು

ಕಮ್ಯೂನಿಷ್ಟ್ ವಿಚಾರಧಾರೆ ಮತ್ತು ಸಿದ್ಧಾಂತಗಳಲ್ಲಿ ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡಿದ್ದ ಚಾರುಮುಜಂದಾರ್, ಕನುಸನ್ಯಾಲ್ ಗೆಳೆಯರಾದ ಮೇಲೆ ಕೃಷಿ ಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದರು. ಹತ್ತಾರು ವರ್ಷ ಕೇವಲ ಪ್ರತಿಭಟನೆ ಮತ್ತು ಬಂಧನದಿಂದ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನ ಮನಗಂಡ ಇಬ್ಬರು ಗೆಳೆಯರು ನೇರಕಾರ್ಯಾಚರಣೆ (iಡಿeಛಿಣ ಂಛಿಣioಟಿ) ನಡೆಸಲು ತೀರ್ಮಾನಿಸಿದರು. ಚಾರುವಿನ ಅವೇಶ ಹೇಗಿತ್ತು ಎಂದರೆವರ್ಗವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನದಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದಲಾರದ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು. ಚಾರುವಿನ ಮಾತುಗಳಿಂದ ಪ್ರೇರೆಪಿತರಾದ ಮಾವೂವಾದಿಗಳು ಘೋಷಿತ ಯುದ್ಧದಲ್ಲಿ ಶಸ್ತ್ರಾಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶ ಪ್ರಯೋಗಕ್ಕೆ ಇಳಿಸಿದರು ಮತ್ತು ಇದು ಮೊದಲ ಹಂತದ ನಕ್ಸಲ್ ಹೋರಾಟಕ್ಕೆ ನಾಂದಿಯನ್ನು ಹಾಡಿತು ಎಂಬ ಅಂಶವನ್ನು ಡಾ.ಜಗದೀಶ್ ಕೊಪ್ಪ ಅವರು ಪುಸ್ತಕದಲ್ಲಿ ಅಂತ್ಯಂತ ವಿವರವಾಗಿ ಚರ್ಚಿಸುತ್ತಾರೆ ಇದಲ್ಲದೆ ನಕ್ಸಲ್ ಹೋರಾಟದ ಹಾದಿಯಲ್ಲಿ ಒಟ್ಟಾರೆ ಚಳುವಳಿ ಕಂಡ ಎಳುಬಿಳುಗಳನ್ನು, ಸೈಂಧಾಂತಿಕ ಭಿನ್ನತೆಗಳನ್ನು, ಹೋರಾಟಗಾರರಲ್ಲಿಯೇ ನಿರ್ಮಾಣವಾದ ಗುಂಪುಗಳನ್ನು, ಸಾಂಸ್ಥಿಕ ವಿಂಗಡಣಿಗಳನ್ನು ಗುರುತಿಸುವ ಮೂಲಕ ಭಾರತದ ಮೊದಲ ಹಂತದ ನಕ್ಸಲ್ ಹೋರಾಟದ ಇತಿಹಾಸವನ್ನು ಕಟ್ಟಿಕೊಡುತ್ತಾರೆ.
ನಂತರದ ಬೆಳವಣಿಗೆಯಲ್ಲಿ 1972 ಜುಲೈ 16 ರಂದು. ಕೊಲ್ಕತ್ತ ನಗರದ ರಹಸ್ಯ ಸ್ಥಳವೊಂದರಲ್ಲಿ ಚಾರುವನ್ನು ಬಂಧಿಸಿ ಲಾಲ್ಬಜಾರ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆಯ ನೆಪದಲ್ಲಿ ನಿರಂತರ 12 ದಿನಗಳ ಕಾಲ ಚಿತ್ರಹಿಂಸೆ ನೀಡಿ ಜುಲೈ 28 ಮಧ್ಯರಾತ್ರಿ ಒಂದುಗಂಟೆಗೆ ಆತನನ್ನು ಕೊಂದು ಹಾಕಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ 12 ದಿನಗಳ ಕಾಲ ವಕೀಲರಿಗಾಗಲಿ, ಚಾರುವಿನ ಗೆಳೆಯರಿಗಾಗಲಿ, ಅಥವಾ ಆತನÀ ಬಂಧುಗಳಿಗಾಗಲಿ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಜುಲೈ 28 ನಡುರಾತ್ರಿ ಚಾರುಮುಜಂದಾರ್ ಅಸುನೀಗಿದಾಗ, ಮರಣೋತ್ತರ ಶವ ಪರೀಕ್ಷೆಯನ್ನೂ ಸಹ ಮಾಡದೆ, ಅವನ ಬಂಧುಗಳನ್ನು ಠಾಣೆಗೆ ಕರೆಸಿದ ಪೊಲೀಸರು 29 ಬೆಳಗಿನ ಜಾವ ನಾಲ್ಕು ಗಂಟೆಯೊಳಗೆ ಹೊರ ಜಗತ್ತಿಗೆ ಸುದ್ಧಿಯಾಗದಂತೆ  ಅಂತ್ಯ ಕ್ರಿಯೆ ನೆರವೇರಿಸಿಬಿಟ್ಟರು. ಆಗರ್ಭ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿ, ಭೂರಹಿತ ಬಡವರಿಗಾಗಿ ಹೋರಾಟ ಮಾಡುತ್ತಾ, ಬಡವನಂತೆ ಬದುಕಿದ ಚಾರು ಮುಜಂದಾರ್ ತನ್ನ ಕೊನೆಯ ದಿನಗಳಲ್ಲಿ ಅನಾಮಿಕನಂತೆ ಪೊಲೀಸರ ಹಿಂಸೆಯ ನಡುವೆ ಮಧ್ಯರಾತ್ರಿಯಲ್ಲಿ ಕುಡಿಯಲು ಒಂದು ಲೋಟ ನೀರು ಸಿಗದೆ ಪ್ರಾಣ ಬಿಟ್ಟಿದ್ದು ನಕ್ಸಲ್ ಹೋರಾಟದ ವಿಪರ್ಯಾಸಗಳಲ್ಲಿ ಒಂದು. ವರ್ತಮಾನದಲ್ಲಿ ನಕ್ಸಲರು ಪೊಲೀಸರ ಮೇಲೆ ಮುಗಿಬಿದ್ದು ಏಕೆ ಅವರನ್ನು ನಿರ್ಧಯವಾಗಿ  ಕೊಲ್ಲುತಿದ್ದಾರೆ ಎಂದು ಪ್ರಶ್ನೆ ಕೇಳುವವರಿಗೆ, ಚಾರುವಿನ ಅಮಾನುಷವಾದ ಸಾವಿನಲ್ಲಿ ಕೂಡ ಉತ್ತರ ಅಡಗಿದೆ. ಎಂಬ ವಿಶ್ಲೇಷಣೆಯನ್ನು ಜಗದೀಶ್ ಕೊಪ್ಪ ಅವರು ನೀಡುತ್ತಾರೆ. ನಾಯಕರ ಹತ್ಯೆಯ ಮೂಲಕ ಚಳುವಳಿಯ ಬೇರು ಕಿತ್ತೊಗೆಯಬಹುದೆಂದು ನಿರೀಕ್ಷಿಸಿದ್ದ ಪೊಲೀಸರಿಗೆ ಮತ್ತು ಸರ್ಕಾರಗಳಿಗೆ ಭವಿಷ್ಯದಲ್ಲಿ ಗಂಡಾಂತರ ಕಾದಿತ್ತು. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಹೋರಾಟದ ಜ್ವಾಲೆ ಕ್ಷಣಕ್ಕೆ  ನಂದಿ ಹೋದಂತೆ ಗೋಚರಿಸಿದರೂ, ಅದು ಆರಿ ಹೋಗುವ ಮುನ್ನ ನೆರೆಯ ಬಿಹಾರ ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೆಶ ರಾಜ್ಯಗಳಿಗೆ ಅಗ್ನಿ ಸ್ಪರ್ಶ ನೀಡುವುದರ ಮೂಲಕ ಕಾಡ್ಗಿಚ್ಚಿನಂತೆ ಹರಡಲು ಸಹಾಯಕವಾಗಿತ್ತು.
ಒಂದು ಹಂತದಲ್ಲಿ ಚಾರು ಮುಜುಂದಾರನ ನಿಧನನಾನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980 ವರೆಗೆ ನಿರಂತ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ನಲುಗಿ ತನ್ನ ಶಕ್ತಿ ಮತ್ತು ಸಾಮಥ್ರ್ಯವನ್ನು ಕುಂದಿಸಿಕೊಂಡಿತು. ಆದರೆ,  1980 ದಶಕದಲ್ಲಿ ಮತ್ತೇ ಆಂಧ್ರ ಪ್ರದೇಶದಲ್ಲಿ ಪ್ರಜಾಸಮರ ದಳಂ (ಪೀಪಲ್ಸ್ ವಾರ್ ಗ್ರೂಫ್) ಎಂಬ ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೆಯ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಹೋರಾಟದ  ಪ್ರಮುಖ ನಾಯಕರೆಂದರೆ, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್ ,ಸಾಕೇತ್ ರಾಜನ್. ಸುನೀತ್ ಕುಮಾರ್ ಘೋಷ್, ಗಣಪತಿ, ರಾಮಕೃಷ್ಣ, ರಾಜ್ ಕುಮಾರ್ ಅಲಿಯಾಸ್ ಅಜಾದ್, ವೇಣು ಮುಂತಾದವರು ಎಂಬದನ್ನು ಲೇಖಕರು ಸಮರ್ಥವಾಗಿ ವಿವರಿಸುತ್ತಾರೆ.

ಭಾರತದ ಎರಡನೇಯ ಹಂತದ ನಕ್ಸಲ್ ಹೋರಾಟ ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ ಎಂಬ ಇಬ್ಬರು ಶಿಕ್ಷಕರಿಂದ 80 ದಶಕದಲ್ಲಿ ಪ್ರಜಾ ಸಮರ ದಳಂ ಹೆಸರಿನಲ್ಲಿ ನೆರೆಯ ಆಧ್ರಪ್ರದೇಶದಲ್ಲಿ ಆರಂಭವಾಯಿತು ಹೋರಾಟಕ್ಕೆ ಹಲವಾರು ಅಯಾಮಗಳು ಮತ್ತು ಕಾರಣಗಳನ್ನು ಅಂತ್ಯಂತ ವ್ಯವಸ್ಥಿತ ಮಾಹಿತಿಯೊಂದಿಗೆ ಲೇಖಕರು ಪುಸ್ತಕದಲ್ಲಿ ವಿವರಿಸಿದ್ದಾರೆ. ಉದಾಹರಣೆಗೆ  ಅರಣ್ಯವಾಸಿಗಳ ನಡುವೆಗಾಂಧಿವಾದಿಎಂದೆ ಪ್ರಸಿದ್ಧಿಯಾಗಿದ್ದ ಭಾರತದ ಪ್ರಮುಖ ನಕ್ಸಲ್ ನಾಯಕ 10ಕ್ಕೂ ಹೆಚ್ಚು ರಾಜ್ಯಗಳ ನಕ್ಸಲರ ಅರಾಧ್ಯ ದೈವ 76 ವರ್ಷದ ಕೊಬದ್ ಗಾಂಡಿಯನ್ನು ಆಂಧ್ರ ಮತ್ತು ದೆಹಲಿ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು. ಕರ್ನಾಟಕದ ಸಾಕೇತ್ ರಾಜನ್ ಅವರ ಪತ್ನಿಪ್ರಜಾವಿಮುಕ್ತಿಪತ್ರಿಕೆಯ ಸಂಪಾದಕಿಯು ಆಗಿದ್ದ ರಾಜೇಶ್ವರಿ ಅವರನ್ನು 2001 ಮಾರ್ಚ್ 20 ರಂದು ಆಂಧ್ರದ ಪೂರ್ವಗೋಧಾವರಿಯ ಅರಣ್ಯದಲ್ಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದದ್ದು ಮತ್ತು ನಕ್ಸಲ್ ಮತ್ತು ಪೋಲಿಸರ ಕಾದಾಟದಲ್ಲಿ ಅದಿವಾಸಿ ಮಹಿಳೆಯ ಸಾವು ಎಂದು ಸಮರ್ಥಿಸಿದ್ದು. ಅದಿವಾಸಿಗಳ ಯಾತನಾದಾಯಕ ಜೀವನ, ಆಂಧ್ರ ಪೋಲಿಸರ ಕ್ರೌರ್ಯ, ಮತ್ತು ಜಮಿನ್ದಾರರ ಹಿಂಸೆ ಮತ್ತು ಅತ್ಯಾಚಾರಗಳುಪ್ರಭುತ್ವದ ದಮನಕಾರಿ ನೀತಿಗಳು ಎರಡನೇ ಹಂತದ ನಕ್ಸಲ್ ಹೋರಾಟವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದವು ಎಂದು ವಿವರಿಸುವ ಲೇಖಕರು ನಕ್ಸಲ್ ಚಳುವಳಿಯ ಭಾಗವಾದ  ಪ್ರಥಮಬಾರಿಗೆ ಮೇಲ್ವರ್ಗದ ಜನಕ್ಕೆ ಬಹಿಷ್ಕಾರ ಹಾಕಿದಜಾಗ್ತಿಯಾಳ್ ಯಾತ್ರೆಆಂಧ್ರ ಪದೇಶದ ಇತಿಹಾಸದಲ್ಲಿ ದಾಖಲಾಗಿರುವುದನ್ನು ಗುರುತಿಸುತ್ತಾರೆ. 80 ದಶಕದಲ್ಲಿ ಆಂಧ್ರ ನೆಲವನ್ನು ಕೆಂದ್ರವಾಗಿಸಿಕೊಂಡ ಪ್ರಜಾ ಸಮರ ದಳಂ ಹೆಸರಿನ ನಕ್ಸಲ್ ಹೋರಾಟ ವ್ಯವಸ್ಥೆಯ ಭ್ರಷ್ಟತೆಯಲ್ಲಿ ಪಾಲುದಾರರಾದ ಗೋಧಾವರಿ ವ್ಯಾಪ್ತಿಯ ಜಿಲ್ಲೆಗಳ ಜಮಿನ್ದಾರು, ಪೋಲಿಸರು, ಅರಣ್ಯಾಧಿಕಾರಿಗಳು ಸರ್ಕಾರಿ ನೌಕರರನ್ನು ನಡುಗಿಸಿತ್ತು. ಇದರ ಪರಿಣಾಮ ಆಂಧ್ರ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಂತೆ ಭೂ-ಮಾಲಿಕರಿಂದ ವಶಪಡಿಸಿಕೊಂಡಿದ್ದ 80 ಸಾವಿರ ಎಕರೆ ಕೃಷಿ ಭೂಮಿಯನ್ನು ಮತ್ತು 1 ಲಕ್ಷ 20 ಸಾವಿರ ಎಕರೆ ಅರಣ್ಯ ಭೂಮಿಯನ್ನು ಭೂ-ರಹಿತ ದಲಿತರು ಕೃಷಿ ಕೂಲಿ ಕಾರ್ಮಿಕರಿಗೆ ಕಮ್ಯುನಿಷ್ಟ್ ಕಾರ್ಯಕರ್ತರು ಹಂಚಿದ್ದರು ಜೋತೆಗೆ ತೆಲಂಗಾಣ ಪ್ರಾಂತ್ಯದಲ್ಲಿ 15 ರೂಪಾಯಿ ಇದ್ದ ಕೂಲಿ ದರವನ್ನು 25 ರೂಪಾಯಿಗೆ ಹೆಚ್ಚಿಸುವಲ್ಲಿ ಕಾರ್ಮೆಡ್ಗಳು ಯಶಸ್ವಿಯಾಗಿದ್ದರು ಘಟನೆಗಳಿಂದ ಸಾಕಷ್ಟು ಜನ ಬೆಂಬಲಗಳಿಸಿದ ನಕ್ಸಲ್ ಹೋರಾಟ ಜನನಾಟ್ಯಮಂಡಳಿ ಮುಂತಾದ ಸಾಂಸ್ಕøತಿಕ ಸಂಘಟನೆಗಳ ಮೂಲಕ ಹೆಚ್ಚು ಜನ ಬೆಂಬಲವನ್ನು ಜೋತೆಗೆ ದಲಿತರ ಆದಿವಾಸಿಗಳ ನೋವನ್ನೆ ಹಾಡಾಗಿಸಿಕೊಂಡು ಮಾನ್ಯತೆ ಪಡೆದ ಗದ್ದಾರ್ರಂತಹ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಯಿತು ಎಂಬುದನ್ನು ಲೇಖಕರು ಅಂತ್ಯಂತ ಯಶಸ್ವಿಯಾಗಿ ವಿವರಿಸುತ್ತಾರೆ ಇದಲ್ಲದೆ ಕೊಂಡಪಲ್ಲಿ ಸೀತಾರಾಮಯ್ಯನವರು  ‘ಒಬ್ಬ ರೈತ ಹೊಲದಲ್ಲಿ ದುಡಿಮೆ ಮಾಡುವಾಗ ಅನಾವಶ್ಯಕವಾಗಿ ಬೆಳೆಗೆ ತೊಂದರೆ ಕೊಡುವ ಕಳೆಗಳನ್ನು ಕಿತ್ತು ಬಿಸಾಕುತ್ತಾನೆ. ವಿಷಕಾರಿಯಲ್ಲದ ಹಾವುಗಳು ಕಂಡು ಬಂದರೆ, ಅವುಗಳನ್ನು ಕೋಲಿನಿಂದ ಎತ್ತಿ ಹೊರಗೆ ಎಸೆಯುತ್ತಾನೆ ಆದರೆ, ತನ್ನ ಜೀವಕ್ಕೆ ಅಪಾಯಕಾರಿಯಾಗುವ ವಿಷಪೂರಿತ ಹಾವುಗಳನ್ನು ಕಂಡರೆ, ಕೂಡಲೇ ಕೊಂದು ಹಾಕುತ್ತಾನೆಈಗ ನಾವು ಅನುಸರಿಸಬೇಕಾದುದು ರೈತನ ಮಾರ್ಗವನ್ನು ಎಂಬ ರೂಪಕವನ್ನು ಎಷ್ಟು ಯಶಸ್ವಿಯಾಗಿ ಬಳಸುತ್ತಿದ್ದರು ಎಂಬುದನ್ನು ವಿವರಿಸುತ್ತಾರೆ. ಅಲ್ಲದೆ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪ್ರಭುತ್ವಗಳು ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಸೌಲಭ್ಯವನ್ನು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಭಾರತದ ಅರಣ್ಯಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಮೂಲನಿವಾಸಿಗಳಗೆ ನೀಡದಿರುವುದು ವ್ಯವಸ್ಥೆಯ ದುರಂತ ಎಂಬ ಲೇಖಕರ ವಿಶ್ಲೇಷಣೆ ನಕ್ಸಲ್ ಸಮಸ್ಯೆಯ ಆಳವನ್ನು ನಮಗೆ ಪರಿಚಯಿಸುತ್ತದೆ ಒಂದು ಅರ್ಥದಲ್ಲಿ ನಕ್ಸಲ್ ಹೋರಾಟದ ಕಥನವೆಂದರೆ ಪರೋಕ್ಷವಾಗಿ ಬಾಯಿಲ್ಲದವರ ಅರಣ್ಯ ಮತ್ತು ಅದರ ಅಂಚಿನಲ್ಲಿ ಬುಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ ಇದುವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಗಿರಿಜನರನ್ನು ನಿರಂತರವಾಗಿ ಶೋಷಿಸಲು ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೂಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ವರ್ಯವಾಗುತ್ತದೆ. ಎಂಬ ಲೇಖಕರ ವಿವರಣೆ ಸತ್ಯಕ್ಕೆ ಎಷ್ಟು ಹತ್ತಿರ ಎಂಬುದದ ಅರಿವು ನಮಗಾಗುತ್ತದೆ ಒಟ್ಟಾರೆ ಕನ್ನಡದ ಹೋರಾಟದ ಸಾಹಿತ್ಯಕ್ಕೆ  ಡಾ.ಜಗದೀಶ್ ಕೊಪ್ಪ ಅವರಎಂದೂ ಮುಗಿಯದ ಯುದ್ಧಪುಸ್ತಕ ಒಂದು ಹೊಸ ಸೆರ್ಪಡೆ ನಮ್ಮ ದೇಶದ ತಳಸಮುದಾಯಗಳ ಕುರಿತು ಅಲೋಚಿಸುವವರಿಗೆ ಸಂಶೋಧನೆ ಕೈಗೊಳ್ಳುವವರಿಗೆ ಪುಸ್ತಕ ಮುಂದೆ ಆಕರವಾಗಲಿದೆ. ಭಾರತದ ನಕ್ಸಲ್ ಇತಿಹಾಸವನ್ನು ಪರಿಚಯಿಸುವ ಪುಸ್ತಕ ಯಾವ ಭಾವೂದ್ವೆಗಗಳಿಗೆ ಒಳಗಾಗದೆ ಅಲೋಚಿಸುವ ವಸ್ಥು ವಿಷಯದ ಜೋತೆ ಒಂದು ಅಂತರವನ್ನು ಕಾಯ್ದುಕೊಂಡಿರುವುದು ಮತ್ತು ಅತಿಯಾದ ಎಡಪಂಥೀಯ ಅಥವಾ ಬಲಪಂಥೀಯ ವಿಚಾರವಾದಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿಕೊಂಡಿರುವ ಲೇಖಕರ ಗುಣ ಜೊತೆಗೆ ಭಾರತದ ನಕ್ಸಲ್ವಾದಿಗಳು ವಿಶೇಷವಾಗಿ ಮಾವೋ ಮತ್ತು ಲೆನಿನ್ ಚಿಂತನೆಗಳನ್ನು ಆರಾಧಿಸುವವರು ಚರಿತ್ರೆಯ ಭೂತಕಾಲ ಮತ್ತು ವರ್ತಮಾನದ ಬೆಳವಣಿಗೆಗಳ ಹಂಗಿಲ್ಲದೆ ಬದುಕುತ್ತಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಯಾವುದೋ ಒಂದು ಕಾಲಘಟ್ಟದಲ್ಲಿ ಮುಖ್ಯವಾಗಿದ್ದ ವಿಚಾರಗಳು ಅಥವಾ ಸಿದ್ಧಾಂತಗಳು ಇವೊತ್ತಿಗೂ ಪ್ರಸ್ತುತÉಂದು ನಂಬುವುದು ಮುಗ್ಧತನ ಎಂದು ಕರೆಯಲಾಗದು. ಜಾಗತೀಕರಣಕ್ಕೆ ತನ್ನ ಹೆಬ್ಬಾಗಿಲನ್ನು ತೆರೆದು ಲಾಭಕೋರತನದ ಎಲ್ಲಾ ಅವಕಾಶಗಳನ್ನು ಬಾಚುತ್ತಾ ಕೂತಿರುವ ಚೀನಾ ದೇಶಕ್ಕೆ ಮಾವೋ ಅಪ್ರಸ್ತುತನಾಗಿ ಎಷ್ಟೋ ವರ್ಷಗಳು ಕಳೆದುಹೋಗಿವೆ. ಅದೇ ರೀತಿ ಜಗತ್ತಿನಲ್ಲಿ ಅಮೇರಿಕಾದ ಎದುರು ಬಲಿಷ್ಠ ಶಕ್ತಿಯ ರಾಷ್ಟ್ರವಾಗಿದ್ದ ಸೋವಿಯತ್ ಒಕ್ಕೂಟ ಪತನವಾಗಿ ದಶಕವೇ ಕಳೆದು ಹೋಗಿದೆ ಆದರೆ, ಇನ್ನೂ ಮಾವೋ, ಲೆನಿನ್ ವಿಚಾರಧಾರೆಗಳ ಕುರಿತು ಕ್ರೈಸ್ತ ಪಾದ್ರಿಗಳ ಉಪನ್ಯಾಸದಂತೆ  ಮಾತನಾಡುವ  ನಕ್ಸಲ್ ಹೋರಾಟದ ಸಂಘಟನೆಗಳ ನಾಯಕರಿಗೆ ವರ್ತಮಾನದಲ್ಲಿ ಕ್ಷಿಪ್ರ ಗತಿಯಲ್ಲಿ ಜರಗುತ್ತಿರುವ ಜಾಗತಿಕ ಬದಲಾವಣೆಗಳ ಬಗ್ಗೆ ಸ್ಪಷ್ಟವಾದ ಅರಿವಿಲ್ಲ ಹಾಗಾಗಿ ಇವರುಗಳ ಸೈದ್ಧಾಂತಿಕ ವಿಚಾರಗಳ ಕೊರತೆಯಿಂದಾಗಿ ಕಣ್ಣೆದುರುಗಿನ  ಹಿಂಸೆಗೆ ನಾವು ಪರೋಕ್ಷ ಸಾಕ್ಷಿಯಾಗುತ್ತಿದ್ದೇವೆ ಎಂಬ ವಿವರಣೆ ಮತ್ತು ವಿಶ್ಲೇಷಣೆಗಳು ಪುಸ್ತಕದ ಗುಣಾತ್ಮಕ ಅಂಶಗಳಾಗಿವೆ

ಅದು ಅಲ್ಲದೆ ಭಾರತದ ಸಂದರ್ಭದಲ್ಲಿ ಮಾರ್ಕ್, ಲೇನಿನ್ ಮತ್ತು ಮಾವೋ ವಾದಗಳು ಚಟುವಟಿಕೆಯಿಂದ ಕೊಡಿದ ಸಿದ್ಧಾಂತವಾಗಿ ಕೆಲಸಮಾಡಿದಾಗ ಬದಲಾದ ಕಾಲದಲ್ಲಿ ಬದಲಾವಣೆಗಳನ್ನು ಸ್ವಿಕರಿಸಿ ಬೆಳೆಯಲು ಸಾಧ್ಯ ಮೂಲಕ ತಳ ಸಮುದಾಗಳನ್ನು ಬೆಳೆಸಲು ಸಾಧ್ಯ ಇಲ್ಲವಾದರೆ ಚಟುವಟಿಕೆಯಿಲ್ಲದ ಐಡಿಯಾಲಜಿಗಳಾಗಿ ಮಾರ್ಕ್, ಲೇನಿನ್ ಮತ್ತು ಮಾವೂ ವಾದಗಳು ಕೆಲಸಮಾಡಿದಾಗ ಹಿಂಸೆಯನ್ನೆ ಉತ್ಪಾದಿಸುವ ಪಟ್ಟಭದ್ರರ ಹಿತಾಸಕ್ತಿಗೆ ಬಳಕೆಯಾಗುವ ಅಪಾಯವನ್ನು ನಾವು ಗುರುಸಿಸಬೇಕಿದೆ ಎಂಬ ನಿಲುವುಗಳು ತಳಸಮುದಾಯಗಳ ನೋವಿಗೆ ಧ್ವನಿಯಾದ ಎಡಪಂಥಿಯ ಸಿದ್ಧಾಂತಗಳು ಇಂದು ಥಿಯರಿಗಳಾಗಿ ಕಲಿಯುವ ಮತ್ತು ಅವುಗಳನ್ನು ಬೆಳೆಸುವ ಅನಿವಾರ್ಯತೆಯನ್ನು ಸಮಕಾಲಿನ ಯುವಜನರ, ಹೋರಾಟಗಾರರ ಮುಂದೆ ಇಟ್ಟಿರುವ ಪುಸ್ತಕ ಸಮಕಾಲಿನ ಸಮಯಕ್ಕೆ ಒಂದು ಒಳ್ಳೆಯ ಓದು ಎಂಬುದರಲ್ಲಿ ಯಾವ ಸಂಶಯವು ಇಲ್ಲ. . . . .

                                               (2014 ಮಾರ್ಚ್ ತಿಂಗಳ ಸಂವಾದ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ