ಶನಿವಾರ, ಸೆಪ್ಟೆಂಬರ್ 19, 2015

ಮಹಾನ್ ಮಾನವತಾವಾದಿಯ ಮನುಕುಲದ ಚಿಂತನೆಗಳು



ತಮ್ಮ ಉದಾತ್ತ ಚಿಂತನೆಗಳಿಂದ ಭಾರತ ರತ್ನ ಪ್ರಶಸ್ತಿಯಿಂದ ಹಿಡಿದು ನೊಬೆಲ್ ಪ್ರಶಸ್ತಿಯವರೆಗೆ ಜಗತ್ತಿನ ಅತ್ಯುನ್ನುತ ಗೌರವಗಳನ್ನು ಪಡೆದ ಅಮಾರ್ತ್ಯ ಸೇನ್ ವರ್ತಮಾನ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಷರಲ್ಲಿ ಒಬ್ಬರು. ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಮಾನವೀಯತೆಯ ಸ್ಪರ್ಶವನ್ನು ನೀಡಿ, ಅದು ಕೇವಲ ಅಂಕಿ, ಅಂಶಗಳನ್ನು ಮಾತ್ರ ಒಳಗೊಳ್ಳದೆ, ರಾಜಕೀಯ, ಇತಿಹಾಸ, ಸಮಾಜಶಾಸ್ತ್ರವೂ ಸೇರಿದಂತೆ, ಪ್ರಾಚೀನ ಭಾರತದ ತತ್ವಶಾಸ್ತ್ರಗಳ ಚಿಂತನೆಗಳನ್ನು ಎರಕ ಹೊಯ್ದು ಅರ್ಥಶಾಸ್ತ್ರವನ್ನು ಮನುಕುಲದ ಒಳಿತಿಗಾಗಿ ನಿರ್ವಚಿಸುವ ಶಾಸ್ತ್ರವನ್ನಾಗಿ ಮಾಡಿದ ಕೀರ್ತಿ ಅಮಾರ್ತ್ಯ ಸೇನರದು.
ಪಶ್ಚಿಮ ಬಂಗಾಳದ ಜಾದವ್ ಪುರ್ ವಿ.ವಿ.ಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಕರಾಗಿ ನೇಮಕಗೊಂಡ ಸೇನರು, ನಂತರದ ದಿನಗಳಲ್ಲಿ ಅರ್ಧಶತಮಾನಗಳ ಕಾಲ ದೆಹಲಿಯ ಸ್ಕೂಲ್ ಆಫ್ ಎಕಾನಾಮಿಕ್ಸ್, ಇಂಗ್ಲೇಂಡಿನ ಲಂಡನ್ ಸ್ಕೂಲ್ ಎಕಾನಾಮಿಕ್ಸ್, ಆಕ್ಸ್ ಪರ್ಡ್ ವಿಶ್ವ ವಿದ್ಯಾಲಯ, ಕೇಂಬ್ರಿಡ್ಜ್ ವಿ.ವಿ.ಯ ಟ್ರಿನಿಟಿ ಕಾಲೇಜ್, ಅಮೇರಿಕಾದ ಹಾರ್ವಡ್ ವಿ.ವಿ. ಹೀಗೆ ಜಗತ್ತಿನ ಹಲವಾರು ವಿ.ವಿ.ಗಳಲ್ಲಿ ಅರ್ಥಶಾಸ್ತ್ರ ಮತ್ತು ತತ್ವ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜಗತ್ ಪ್ರಸಿದ್ಧ ಚಿಂತಕರಲ್ಲಿ ಒಬ್ಬರಾಗಿ ಹೊರ ಹೊಮ್ಮಿದವರು.
ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಗುನ್ನಾರ್ ಮಿರ್ಡಲ್ ರವರ ನಂತರ ಮಾನವೀಯ ಗುಣ ಮತ್ತು ಚಿಂತನೆಗಳನ್ನು ಬೆಸದ ಅಮಾರ್ತ್ಯ ಸೇನರು ಕಳೆದ ಐವತ್ತು ವರ್ಷಗಳಿಂದ ಲಿಂಗತಾರಮ್ಯನೀತಿಗಳು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಇವುಗಳ ಕುರಿತು ಚಿಂತಿಸುತ್ತಾ, ಬರೆಯುತ್ತಾ. ಜಿಡ್ಡುಗಟ್ಟಿ ಹೋಗಿದ್ದ  ಜಗತ್ತಿನ ಚಿಂತನೆಗಳಿಗೆ ಹೊಸ ವಾಖ್ಯಾನಗಳನ್ನು ಬರೆದವರು.
ಕಳೆದ ತಿಂಗಳು ದೆಹಲಿಯ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆಯಿಂದ  ಪ್ರಕಟವಾಗಿರುವ ಅವರ ಹೊಸ ಕೃತಿ “The Country Of First Boys  ಎಂಬ ಪ್ರಬಂಧಗಳ ಕೃತಿಯಲ್ಲಿ ಅವರ ಮಾಗಿದ ಮನಸ್ಸಿನ ಚಿಂತನೆಗಳು, ಅನುಭವಗಳು ಅನುಭಾವದ ಮಾತಿನಂತೆ ಹೊಹೊಮ್ಮಿವೆ. ಒಂದು ಸ್ವತಂತ್ರ್ಯವಾದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವೊಂದು, ತನ್ನ ಆಂತರೀಕ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ಆದರೆ.  ಅವುಗಳಿಗೆ ಸ್ಪಷ್ಟವಾದ ವಿಶ್ಲೇಷಣೆ ಹಾಗೂ ವಿಮರ್ಶೆಗಳಿಲ್ಲದೆ ಯಾವೊಂದು ಸಮಸ್ಯೆಯೂ ಪರಿಹಾರವಾಗುವುದಿಲ್ಲ ಎಂದು ನಂಬಿರುವ ಅಮಾರ್ತ್ಯ ಸೇನರು, ಇಂತಹ ಸಮಸ್ಯೆಗಳಿಗೆ ಅವರು ನಮ್ಮ ಪ್ರಾಚೀನ ಭಾರತದ ಸಂಸ್ಕೃತ ಪಠ್ಯಗಳಲ್ಲಿ, ವೇದಗಳಲ್ಲಿನ ಕೆಲವು ಅಂಶಗಳನ್ನು ಎತ್ತಿ ತೋರಿಸಿ ಪರಿಹಾರ ಸೂಚಿಸುವುದು ಅಶ್ಚರ್ಯವಾಗುತ್ತದೆ. ಅವರ ಈವರೆಗಿನ ಮಹತ್ವದ ಕೃತಿಯಾದ  ಹಾಗೂ ನೊಬೆಲ್ ಪ್ರಶಸ್ತಿಗೆ ಪಾತ್ರವಾದ The Idea Of justice ಕೃತಿಯ ನಂತರ ಬಂದ  ಅತಿ ಶ್ರೇಷ್ಟ ಕೃತಿಗಳಲ್ಲಿ ಇದು ಒಂದಾಗಿದೆ.

ಮಹಾತ್ಮ ಗಾಂಧಿಯವರ ಮೊಮ್ಮಗ  ಗೋಪಾಲ ಕೃಷ್ಣ ಗಾಂಧಿಯವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಈ ಕೃತಿಯಲ್ಲಿ ಒಟ್ಟು ಹನ್ನೊಂದು ಸುಧೀರ್ಘವಾದ ಪ್ರಬಂಧಗಳಿದ್ದು, ಇವುಗಳಲ್ಲಿ ಹಸಿವಿನ ಕುರಿತು ಬರೆದಿರುವ ಪ್ರಬಂಧ, ರವೀಂಧ್ರ ನಾಥ ಟ್ಯಾಗೂರ್ ಹಾಗೂ ನಳಂದ ವಿಶ್ವ ವಿದ್ಯಾಲಯ ಕುರಿತ ಪ್ರಬಂಧಗಳು ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲವು. ಹಸಿವು ಕುರಿತಾತ ಪ್ರಬಂಧಕ್ಕೆ ಅವರು ನೀಡಿರುವ  ಶೀರ್ಷಿಕೆ  Hunger-: Old Torments and New Blunders(  ಹಸಿವು- ಭರಿಸಲಾಗದ ನೋವುಗಳು ಮತ್ತು ಹೊಸ ಬೇಜವಬ್ದಾರಿತನದ ತಪ್ಪುಗಳು) ಅವರ ಪ್ರಖರ ವೈಚಾರಿಕ ಚಿಂತನೆಗೆ ಸಾಕ್ಷಿಯಾಗಿದೆ.
ಇಲ್ಲಿನ ಬಹುತೇಕ ಪ್ರಬಂಧಗಳಿಗೆ ತಮ್ಮ ಬಾಲ್ಯ ಹಾಗೂ ಬದುಕಿನ ಹಲವಾರು ಅನುಭವಗಳನ್ನು ಸಂಲಗ್ನಗೊಳಿಸಿರುವ ಸೇನ್ ರವರು  ಅವುಗಳ ಮೂಲಕ ಓದುಗರೊಂದಿಗೆ  ಆತ್ಮೀಯವಾದ ಸಂವಾದವನ್ನು ನಡೆಸಿದ್ದಾರೆ. ತಾವು ನಂಬಿದ್ದ ತತ್ವ ಮತ್ತು ಸಿದ್ಧಾಂತಗಳಿಗೆ ಎಂದೂ ರಾಜಿಯಾಗದ ಅಮಾರ್ತ್ಯ ಸೇನ್ ನಿಷ್ಟುರ ಸತ್ಯಗಳನ್ನು ತಣ್ಣನೆಯ ಧ್ವನಿಯಲ್ಲಿ ಖಚಿತವಾಗಿ ಹೇಳಬಲ್ಲರು. ಪ್ರಾಚೀನ ಭಾರತದ ಆರ್ಯಭಟನ ಗಣಿತ ಸಿದ್ಧಾಂತ, ಶೂದ್ರಕನ ಮೃಚ್ಛಕಟಿಕ, ಕಾಳಿದಾಸ ಶಾಕುಂತಲ ಕೃತಿಗಳ ಕುರಿತು ಮಾತನಾಡುತ್ತಾ ಇವುಗಳಿಗೆ ಮೇಲ್ವರ್ಗದ ಜನ ಹಿಂದುತ್ವದ ಬಣ್ಣ ಬಳಿದದ್ದು ದುರದೃಷ್ಟಕರ ಎಂದು ಅಬಿಪ್ರಾಯ ಪಡುತ್ತಾರೆ.  ಇಂದಿನ ಮಾಧ್ಯಮಗಳು ವಿಶೇಷವಾಗಿ ಮೋದಿಮಯ ಭಾರತದ ಮಾಧ್ಯಮಗಳು ಹೇಗೆ ತಮ್ಮ ವಿವೇಚನೆ ಕಳೆದು ಕೊಂಡಿವೆ ಹಾಗೂ ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಬೆನ್ನು ತಿರುಗಿಸಿ, ಕಾರ್ಪೊರೇಟ್ ಜಗತ್ತಿನ ಪಂಜರದ ಗಿಳಿಗಳಾಗಿವೆ ಎನ್ನುವುದನ್ನು ತಮ್ಮ ಒಂದು ಪ್ರಬಂಧದಲ್ಲಿ ಪ್ರಬುದ್ಧವಾಗಿ ವಿವೇಚಿಸಿದ್ದಾರೆ. ಜಾಗತಿಕ ಮಟ್ಟದ ಹಲವಾರು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭಾವಂತರು ಭಾರತದ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸಮುದಾಯದಿಂದ ಬಂದವರಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸುವ ಅವರು, “ ದೇಶಾದ್ಯಂತ  ಕ್ರೈಸ್ತರ ಚರ್ಚುಗಳು ಹತ್ತಿ ಉರಿಯುತ್ತಿರುವಾಗ, ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘ ಪರಿವಾರದ ಕೃತ್ಯವನ್ನು ಆತ್ಮ ಸಾಕ್ಷಿ ಮತ್ತು ಪ್ರಜ್ಞೆ ಇಲ್ಲದವರ ಕೃತ್ಯ ಎಂದು  ನಿಷ್ಟುರವಾಗಿ ಬಣ್ಣಿಸಿದ್ದಾರೆ.



ಅವರೊಳಗೆ ಒಂದು ಮಾತೃ ಹೃದಯವೊಂದು ಸದಾ ಜಾಗೃತವಾಗಿದ್ದು, ಅದು ಸದಾ ಹೆಣ್ಣು ಜೀವಗಳ ಒಳಿತಿಗಾಗಿ ತುಡಿಯುತ್ತಲೇ ಇರುತ್ತದೆ. ಕೃತಿಯ ಶೀರ್ಷಿಕೆಯಾದ “ ದ ಕಂಟ್ರಿ ಆಫ್ ಪಸ್ಟ್ ಭಾಯ್ಸ್”  ಪ್ರಬಂಧದಲ್ಲಿ ಹಲವು ಸವಲತ್ತುಗಳನ್ನು ಪಡೆದ ಬಾಲಕರು ತರಗತಿಯಲ್ಲಿ ಅಥವಾ ಇನ್ಯಾವುದೇ ರಂಗದಲ್ಲಿ ಮುಂದೆ ಬರುವುದು ಸಾದನೆಯಲ್ಲ, ಅವಕಾಶ ವಂಚಿತ ಹೆಣ್ಣು ಜೀವವೊಂದು, ಈ ಸಮಾಜ ಹೇರಿರುವ ನೀತಿ ನಿಯಮಗಳ ಅಡ್ಡಗೋಡೆಗಳನ್ನು ದಾಟಿ, ಬಡತನ ಮತ್ತು ಹಸಿವುಗಳ ನಡುವೆ ಮುಂದೆ ಬರುವುದು ನಿಜವಾದ ಸಾಧನೆ ಎಂದು ಬಣ್ಣಿಸುತ್ತಾರೆ. ನೊಬೆಲ್ ಪ್ರಶಸ್ತಿ ನೀಡಿದ ಸ್ವೀಡಿಶ್ ಅಕಾಡೆಮಿಯು ತಮ್ಮ ಸಂಗ್ರಹಾಲಯಕ್ಕೆ ನಿಮ್ಮ ನೆನಪಿಗಾಗಿ ಯಾವುದಾದರೂ ವಸ್ತವನ್ನು ಕಾಣಿಕೆಯಾಗಿ ನೀಡಿ ಎಂದು ಕೇಳಿದಾಗ, ಅಮಾರ್ತ್ಯ ಸೇನರು, ಅಕಾಡೆಮಿಗೆ ಒಂದು ಆರ್ಯಭಟನ ಗಣಿತಶಾಸ್ತ್ರದ ಸಂಸ್ಕೃತ ಪಠ್ಯ ಪುಸ್ತಕ ಹಾಗೂ ತಮ್ಮ ಹಳೆಯದಾದ ಬೈಸಿಕಲ್ ಒಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಅದಕ್ಕೆ ಕಾರಣ ವಿವರಿಸಿರುವ ಅವರು. ಆರ್ಯಭಟನ ಗಣಿತಶಾಸ್ತ್ರದ ಮೂಲಕ ನಾನು  ಅಭಿವೃದ್ಧಿ ಅರ್ಥಶಾಸ್ತ್ರದ ಸಮಸ್ಯೆಗಳನ್ನು ಅಂಕಿ ಆಂಶಗಳ ಸಹಾಯದಿಂದ ಅರಿತುಕೊಂಡೆ. ನಂತರ ಶಾಂತಿನಿಕೇತನದ ಸುತ್ತ ಮುತ್ತಲಿನ ಹೆಣ್ಣು ಮಕ್ಕಳ ಅಧ್ಯಯನಕ್ಕೆ  ಹಳ್ಳಿಗಳನ್ನು ಸುತ್ತುವಾಗ ಈ ಬೈಸಿಕಲ್ ಅನ್ನು ಬಳಸುತ್ತಿದ್ದೆ. ನನಗೆ ನೊಬೆಲ್ ಅಕಾಡೆಮಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸ್ವೀಡಿಶ್ ಅಕಾಡೆಮಿ “ ಜಗತ್ತಿನ ಮಹಿಳೆಯರ ಸ್ಥಾನ ಮಾನಗಳ ಕುರಿತು ಅಧಿಕೃತ ಅಂಕಿ ಅಂಶಗಳ ಜೊತೆ ಮಾತನಾಡಬಲ್ಲ ಅರ್ಥಶಾಸ್ತ್ರಜ್ಞ” ಎಂದು ನನ್ನನ್ನು ಬಣ್ಣಿಸಿತ್ತು. ಹಾಗಾಗಿ ಈ ಪ್ರಶಸ್ತಿಗೆ ಕಾರಣವಾದ ಈ ಎರಡು ವಸ್ತುಗಳನ್ನು ಸ್ಟಾಕ್ ಹೋಂ ನಗರದಲ್ಲಿರುವ ಸಂಗ್ರಹಾಲಯಕ್ಕೆ ಉಡುಗೊರೆ ನೀಡಿದೆ ಎನ್ನುತ್ತಾರೆ.

ಒಟ್ಟಾರೆಯಾಗಿ ಅಮಾರ್ತ್ಯ ಸೇನರ ಈ ಕೃತಿ ದ ಐಡಿಯಾ ಆಫ್ ಜಸ್ಟಿಸ್ ನಂತರ ಬಂದ ಹಾಗೂ ನಮ್ಮ ಸಂಗ್ರಹದಲ್ಲಿ ಇರಬೇಕಾದ ಅತ್ಯಮೂಲ್ಯ ಕೃತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ