Monday, 28 September 2015

ಕೆ.ಎಸ್. ಭಗವಾನ್ ಮತ್ತು ಭಗವದ್ಗೀತೆ ಹಾಗೂ ಕುವೆಂಪು ವೈಚಾರಿಕತೆ


ಕಳೆದ ಆರು ತಿಂಗಳಿಂದ ಭಗವದ್ಗೀತೆ ಕುರಿತಂತೆ ಮೈಸೂರಿನಲ್ಲಿ ವಿಚಾರವಾದಿ ಹಾಗೂ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಕೆ.ಎಸ್. ಭಗವಾನ್ ರವರು ನೀಡಿದ್ದ ಪ್ರತಿಕ್ರಿಯೆ ಹಲವು ವಿಕೃತ ರೂಪ ಪಡೆದುಕೊಂಡು ಇದೀಗ ಕನ್ನಡದ ಸಾಂಸ್ಕೃತಿಕ ಜಗತ್ತನ್ನು ತಲ್ಲಣಗೊಳಿಸಿದೆ. ಐವತ್ತು ವರ್ಷಗಳ ಹಿಂದೆ ಕನ್ನಡದ ಸಾಹಿತ್ಯಕ್ಕೆ ಷೇಕ್ಸ್ ಪಿಯರ್  ಮತ್ತು ಅವನ ನಾಟಕಗಳು ಮತ್ತು ಇತರೆ ಸಾಹಿತ್ಯ ಅಪರಿಚಿತವಾಗಿದ್ದ ಸಂದರ್ಭದಲ್ಲಿ ಆತನ ದೈತ್ಯ ಪ್ರತಿಭೆಯನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ಕೆ.ಎಸ್. ಭಗವಾನ್ ಕೂಡ ಒಬ್ಬರು. 1976 ರಲ್ಲಿ ಅವರು ಅನುವಾದಿಸಿದ “ ಜೂಲಿಯಸ್ ಸೀಜರ್ ; ನಾಟಕ ಇವೊತ್ತಿಗೂ ಅತ್ಯುತ್ತಮ ನಾಟಕಗಳಲ್ಲಿ ಒಂದು.
 ನನ್ನ  ಬಾಲ್ಯದ ಸಹಪಾಠಿಗಳಾದ ಅಪ್ಪಾಜಿಗೌಡ ಮತ್ತು ಕೆ.ಟಿ.ಶ್ರೀಕಂಠೇಗೌಡ ಎಂಬುವರು 1976 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ತರಗತಿ ಓದುತ್ತಿದ್ದಾಗ ಅವರಿಗೆ ಭಗವಾನ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು.. ಆ ವರ್ಷ ಮೈಸೂರಿನ ಶತಮಾನೋತ್ಸವ ಭವನದಲ್ಲಿ ನನ್ನ ಗೆಳೆಯರು ಜೂಲಿಯಸ್ ಸೀಜರ್ ನಾಟಕ ವನ್ನು ಪ್ರದರ್ಶನ ಮಾಡಿದ ಸಂದರ್ಭದಲ್ಲಿ  ವಾರಗಟ್ಟಲೆ ಅವರ ಜೊತೆ ಇದ್ದ ನಾನು ಭಗವಾನರ ಸಂಪರ್ಕಕ್ಕೆ ಬಂದಿದ್ದೆ. ( ಈಗ  ಹಂಪಿಯ ಕನ್ನಡ ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಲಕ್ಷ್ಮಣ ತೆಲಗಾವಿ  ನಾಟಕದಲ್ಲಿ ಬ್ರೂಟಸ್  ಪಾತ್ರ ಮಾಡಿದ್ದರು) ಅಂದಿನಿಂದ ಕೆ.ಎಸ್. ಭಗವಾನ್ ರವರು ನನಗೆ ನೇರ ಗುರುವಲ್ಲದಿದ್ದರೂ ಸಹ ಗುರು ಎಂದು ಭಾವಿಸಿ ಗೌರವಿಸಿಕೊಂಡು ಬಂದವನು ನಾನು.
ಕೆ.ಎಸ್. ಭಗವಾನ್ ರವರು ಮಂಡಿಸುತ್ತಿರುವ ವಿಚಾರಗಳಲ್ಲಿ ನನಗೆ ಸಹಮತವಿದೆ. ಆದರೆ, ಅವರು ವಿಷಯಗಳನ್ನು ಮಂಡಿಸುತ್ತಿರುವ ವೈಖರಿ ಕುರಿತಂತೆ ನನಗೆ ಸಹಮತವಿಲ್ಲ. ಒಂದು ವಿಷಯ ಕುರಿತಂತೆ ಭಿನ್ನಮತ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕನ್ನಡ ಸಾಹಿತ್ಯ ಜಗತ್ತಿಗೆ ಹೊಸದೇನಲ್ಲ. ಅದಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದೆ. ಆದರೆ ಒಂದು ವಿಷಯ ಕುರಿತ ಭಿನ್ನಾಭಿಪ್ರಾಯಕ್ಕೆ ಈ ರೀತಿಯ ಬೀದಿ ಜಗಳ ಅನಿವಾರ್ಯವೆ? ಇದು ಎಲ್ಲರೂ ತಮ್ಮ ತಮ್ಮ ಆತ್ಮಸಾಕ್ಷಿಯ ಪ್ರಜ್ಞೆಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. ಭಗವದ್ಗೀತೆಯ ಅಸ್ಮಿತೆ ಕುರಿತಾದ ಪ್ರಶ್ನೆ ಇಂದು ನಿನ್ನೆಯದಲ್ಲ. ಅದನ್ನು ಸುಟ್ಟು ಹಾಕುವುದರಿಂದ ಯಾವ ಪ್ರಯೋಜನೂ ಇಲ್ಲ. ಆದರೆ. ಅದರ ಮೂಲವನ್ನು ಪ್ರಶ್ನಿಸುವಾಗ ವಾದದ ಅಥವಾ ತರ್ಕದ ಹಾದಿಯನ್ನು ನಾವು ತಪ್ಪಬಾರದು ಅಷ್ಟೇ. ಭಗವಾನ್ ಹೇಳುವ ಹಾಗೆ ಅದನ್ನು ಸುಟ್ಟು ಹಾಕುವ ಅಪಾಯ ಕೃತಿ ಏನಲ್ಲ;  ಅದೇ ರೀತಿ ಮನುಕುಲವನ್ನು ಉದ್ಧಾರ ಮಾಡುವಂತಹ ಪವಿತ್ರ ಕೃತಿಯೂ ಅದಲ್ಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ಭೋಧಿಸಿದ ಉಪದೇಶಗಳು ಎನ್ನಲಾಗುವ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಸಮಗ್ರವಾಗಿ ಓದಿ, ವಾಖ್ಯಾನ ಮಾಡಲು ಕನಿಷ್ಟ ಒಂದು ದಿನವಾದರೂ ಬೇಕು. ಯುದ್ಧ ಭೂಮಿಯಲ್ಲಿ ಇದು ಸಾಧ್ಯವೆ? ಕೃಷ್ಣನು ಅರ್ಜುನಿಗೆ ಇದನ್ನು ಭೋಧಿಸುವಾಗ, ಯುದ್ಧ ಭೂಮಿಯಲ್ಲಿ ಕೌರವರು ಕಡ್ಲೆಕಾಯಿ ಬಿಡಿಸಿಕೊಂಡು ತಿನ್ನುತ್ತಾ ಕುಳಿತಿದ್ದರೊ? ಅಥವಾ ಚೌಕ ಬಾರ ಆಡುತ್ತಿದ್ದರೊ? ಗೊತ್ತಿಲ್ಲ. ಈ ನಿಟ್ಟಿನಲ್ಲಿ ಈವರೆಗೆ ನಾನು ಬಲ್ಲಂತೆ  ಭಗವದ್ಗೀತೆ ಕುರಿತಾದ ಮೌಲಿಕ ಪ್ರಶ್ನೆಗಳನ್ನು ಎತ್ತಿದವರೆಂದರೆ, ಒಬ್ಬರು ಡಾ.ಜಿ.ರಾಮಕೃಷ್ಣರವರು ಮತ್ತು ಇನ್ನೊಬ್ಬರು, ಇತ್ತೀಚೆಗೆ ಭಗವದ್ಗೀತೆಗೆ ನಮಸ್ಕಾರ ಎಂಬ ಕೃತಿ ಬರೆದ ಪ್ರೊ. ಅರವಿಂದ ಮಾಲಗತ್ತಿಯವರು. ಈ ಇಬ್ಬರೂ ಎತ್ತಿರುವ ಪ್ರಶ್ನೆಗಳಿಗೆ  ಸಮರ್ಪಕ ಉತ್ತರ ಕೊಡಲಾರದ ಮಹಾಭಾರತದ  ಉತ್ತರ ಕುಮಾರನ ಸಂತತಿಯು ಇದೀಗ ಕೆ.ಎಸ್. ಭಗವಾನರ ಮೇಲೆ ಮುಗಿಬಿದ್ದಿದೆ. ಒಂದು ವಿಷಯ ಕುರಿತು ಸಂವಾದ ನಡೆಸುವಾಗ ಅಲ್ಲಿ ಎರಡು ಗುಂಪಿನ ನಡುವೆ ಮುಖ್ಯವಾಗಿ ಇರಬೇಕಾಗಿರುವುದು , ಒಬ್ಬರಿಗೊಬ್ಬರು ವಾದಗಳನ್ನು ಕೇಳಿಸಿಕೊಳ್ಳಬೇಕಾದ ಸಹೃದಯತೆ. ಆದರೆ ಭಗವದ್ಗೀತೆ ವಿಷಯದಲ್ಲಿ ಇದು ಮಾಯವಾಗಿದೆ. ಈ ಕಾರಣಕ್ಕಾಗಿ ತಮ್ಮ ಜೀವನ ಪೂರ್ತಿ ಪುರೋಹಿತಶಾಹಿಯ ವಿರುದ್ಧ ಸೆಣಸಿದ ಕುವೆಂಪು ರವರು ಎಂದಿಗೂ  ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳಗಳನ್ನಾಗಿ ಪರಿವರ್ತಿಸಿದವರಲ್ಲ. ಕುವೆಂಪು ಮತ್ತು ದೇವುಡು ನರಸಿಂಹ ಶಾಸ್ತ್ರಿ ನಡುವೆ 1931 ಮತ್ತು 32 ರ ನಡುವೆ ನಡೆದ ಸೈದ್ಧಾಂತಿಕ  ಜಗಳ ನಮ್ಮ ಮುಂದಿದೆ.
1931 ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಉಪನ್ಯಾನ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹ ಶಾಸ್ತ್ರಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು ( ಆವಾಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗು ಬಿದ್ದರು. ಆದರೆ, ಕುವೆಂಪುರವರು  ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು  ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್.ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. “ ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ”  ನಂತರ ಗಲಾಟೆ ತಣ್ಣಗಾಯಿತು.


ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ರವರನ್ನು ಕೇಳಿದರು. “ ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?” ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು.
“ ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ?. ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ, ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ” ಅಂದು ಮಹಾ ಬ್ರಾಹ್ಮಣ ಎಂಬ ಕಾದಂಬರಿ ಬರೆದು ಬೀಗುತ್ತಿದ್ದ ದೇವುಡುಗೆ ಕುವೆಂಪು ಬೀಸಿದ ಚಾಟಿ ಏಟಿನಿಂದ ಆ ಕಾಲದಲ್ಲಿ  ಕುವೆಂಪು ಸಾಹಿತ್ಯವನ್ನು ದ್ವೇಷಿಸುತ್ತಿದ್ದ ಎಲ್ಲಾ ಬ್ರಾಹ್ಮಣರು ತಮ್ಮ ತಮ್ಮ ಬೆನ್ನು ಮುಟ್ಟಿ ನೋಡಿಕೊಂಡಿದ್ದರು. ಏಕೆಂದರೆ ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು.

ಸಧ್ಯದ  ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ   ಕುವೆಂಪುರವರ ಪ್ರಖರ ವೈಚಾರಿಕತೆ ಎಲ್ಲರಿಗೂ  ಮಾರ್ಗದರ್ಶನವಾಗಬೇಕಿದೆ. 

No comments:

Post a Comment