Wednesday, 2 September 2015

ಬೇಸಾಯದ ಬವಣೆಯ ಬೇರುಗಳನ್ನು ಅರಸುತ್ತಾ..

                                          (ಇತಿಹಾಸ ತಜ್ಞ ಪ್ರೊ. ಇರ್ಫಾನ್ ಹಬೀಬ್)

ನಮ್ಮ ಕರ್ನಾಟಕದಲ್ಲಿ ರೈತರು ದಿಕ್ಕೆಟ್ಟವರಂತೆ ಸಾವಿನ ಮೂಲಕ ತರಗೆಲೆಗಳಂತೆ ನೆಲಕ್ಕುರುಳುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗಂಟಲಿನ ಪಸೆ ಆರುವಂತೆ ಲಭೊ ಲಭೋ ಎಂದು ದಿನವಿಡಿ ಬಡಿದುಕೊಂಡ ಮಾಧ್ಯಮಗಳು ಮಾತು ಮರತಂತೆ ಈಗ ತಣ್ಣಗಾಗಿವೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ ನಾವೆಲ್ಲಾ ತಣ್ಣಗೆ ನಮ್ಮದೇ ಆದ ಭ್ರಮಾತ್ಮಕ ಜಗತ್ತಿನಲ್ಲಿ ಹಾಗೂ ವ್ಯಯಕ್ತಿಕ ವ್ಯಸನಗಳಲ್ಲಿ ಮುಳುಗಿಹೋಗಿದ್ದೀವಿ. ರೈತರ ಆತ್ಮಹತ್ಯೆ ಎಂಬುದು ಮದ್ದಿಲ್ಲದ ಸಾವು ಎಂಬ ತೀರ್ಮಾನಕ್ಕೆ ಬಂದಂತೆ ನಾವು ಬದುಕುತ್ತಿದ್ದೀವಿ.
ಬೇಸಾಯದಲ್ಲಿ ಕಳೆದು ಹೋದ ವೃತ್ತಿ ನೈಪುಣ್ಯತೆ, ಬದ್ಧತೆ ಹಾಗೂ  ಗತಿಸಿದ ಪರಂಪರೆಯಕೊಂಡಿಗಳನ್ನು ಹುಡುಕುವ ವ್ಯವಧಾನ ಯಾರಿಗೂ ಇದ್ದಂತಿಲ್ಲ. ಕಳೆದು ಎರಡು ದಿನಗಳಿಂದ ನನ್ನ ಸಂಗ್ರಹದಲ್ಲಿದ್ದ  ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ರವರ” ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ” ಎಂಬ ಮಾಲಿಕೆಯ ಕೆಲವು ಕೃತಿಗಳನ್ನು ತಿರುವು ಹಾಕುತ್ತಿದ್ದೆ.  ಭಾರತದ ಬಲಪಂಥೀಯ ಚಿಂತನೆಗಳಿಂದ ರೂಪುಗೊಂಡಿರುವ ಇತಿಹಾಸಕ್ಕೆ ಪರ್ಯಾಯವಾಗಿ ಇತಿಹಾಸವನ್ನು ವಾಸ್ತವಿಕ ಹಾಗೂ ಗಟ್ಟಿಯಾದ ಪುರಾವೆಗಳ ನೆಲೆಯಲ್ಲಿ ಭಾರತ  ಚರಿತ್ರೆಯನ್ನು ಕಟ್ಟಿಕೊಡುತ್ತಿರುವ ರೋಮಿಲಾ ಥಾಪರ್, ಕೆ. ಅಯ್ಯಪ್ಪ ಪಣೀಕರ್ ಹಾಗೂ ಇರ್ಫಾನ್ ಹಬೀಬ್ ರವರ ಕೃತಿಗಳ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ.
ಇಂದು ಸಂಜೆ ಇರ್ಫಾನ್ ಹಬೀಬ್ ರವರ ಇಂಡಿಯನ್ ಎಕಾನಮಿ 1858-1914 ಎಂಬ ಕೃತಿಯನ್ನು ಓದುತ್ತಿದ್ದೆ. ಆ ಕೃತಿಯಲ್ಲಿನ ಕೃಷಿ ಕುರಿತಂತೆ ಒಂದು ಅಧ್ಯಾಯವಿದ್ದು ಅದರಲ್ಲಿ 1893 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ಧೇಶನದ ಮೇರೆಗೆ ಭಾರತಕ್ಕೆ ಬೇಟಿ ನೀಡಿದ ರಸಾಯನಶಾಸ್ತ್ರದ ವಿಜ್ಞಾನಿ ಜೆ.ಎ. ವೋಕರ್ ಎಂಬಾತ ಬರೆದ ಟಿಪ್ಪಣಿಯನ್ನು ಇರ್ಫಾನ್ ಹಬೀಬ್ ದಾಖಲಿಸಿದ್ದಾರೆ. ವೋಕರ್ ಭಾರತದ ಕೃಷಿ ಕುರಿತು  ಬರೆದ ಮಾತುಗಳಿವು.

“ ಅತ್ಯಂತ ಪ್ರಾಚೀನ ಉಪಕರಣಗಳು ಹಾಗೂ ಕೃಷಿ ತಂತ್ರಗಾರಿಕೆಯು ಭಾರತದಲ್ಲಿ ಉಳಿದಿರುವುದಕ್ಕೆ ಅನೇಕ ಸಕಾರಣಗಳಿವೆ. ಇಲ್ಲಿನ ರೈತರ ಸಾಂಪ್ರಾದಾಯಕವಾದ ದೇಶಿ ಜ್ಞಾನ ಮತ್ತು ಅವರು ಉಪಯೋಗಿಸುವ ಅತ್ಯಂತ ಸರಳ ಹಾಗೂ ಹಗುರವಾದ ನೇಗಿಲು, ಗುದ್ದಲಿ, ಸಲಕೆಗಳು ಅತ್ಯಂತ ಪರಿಣಾಮಕಾರಿ ಸಲಕರಣೆಗಳಾಗಿವೆ. ಇಲ್ಲಿನ ಮಿಶ್ರ ಬೆಳೆ ಪದ್ಧತಿ ಮತ್ತು ಬೆಳೆಗಳ ಆವರ್ತನೆಯ ಪದ್ಧತಿ ನಿಜಕ್ಕೂ ಜಗತ್ತಿಗೆ ಮಾದರಿಯಾಗುವಂತಹವು. ಬೆಳೆಗಳ ನಡುವೆ ಬೆಳೆಯುವ ಕಳೆಯನ್ನು ಬೇರು ಸಮೇತ ಕಿತ್ತೊಗೆಯುವ ಅವರ ದೈಹಿಕ ಶ್ರಮ ಮತ್ತು ರೈತರು ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಮರದ ನೇಗಿಲುಗಳು ಅಚ್ಚರಿ ಮೂಡಿಸುತ್ತವೆ. ಈ ನೇಗಿಲುಗಳು ಫಲವತ್ತಾದ ಭೂಮಿಯ ಮೇಲ್ಪದರನ್ನು ಮಗುಚಿ ಹಾಕುವಲ್ಲಿ ಪರಿಣಾಮಕಾರಿಯಾಗಿವೆ. ಇಲ್ಲಿನ ಬೀಜ ಬಿತ್ತನೆಯ ಕ್ರಮ ಹಾಗೂ ವಿನಿಮಯ ಪದ್ಧತಿಯು ವಿಸ್ಮಯಕಾರಿಯಾಗಿದ್ದು ಜೊತೆಗೆ ದಕ್ಷತೆಯಿಂದ ಕೂಡಿದೆ.”

ಸುಮಾರು 122 ವರ್ಷಗಳ ಹಿಂದೆ  ಭಾರತದಲ್ಲಿ ಸ್ವಾವಲಂಭಿಯಾಗಿದ್ದ  ಬೇಸಾಯದ ಕ್ರಮವನ್ನು ಬ್ರಿಟೀಷ್ ವಿಜ್ಞಾನಿ ಈ  ರೀತಿ ಬಣ್ಣಿಸುತ್ತಾ, ಬ್ರಿಟೀಷ್ ಸರ್ಕಾರದ ಒತ್ತಡದ ಮೇರೆಗೆ ಭಾರತದ ರೈತರು ನೀಲಿ ಬೆಳೆ ಮತ್ತು ಎಣ್ಣೆಯ ಬೇಳೆಕಾಳುಗಳ ಬೆಳೆ ತೆಗೆಯಲು ಹೊರಟು ತಮ್ಮ ಸಾಂಪ್ರದಾಯಿಕ ಕೃಷಿಯ ಪದ್ಧತಿಯನ್ನು ಕಳೆದುಕೊಂಡರು ಎನ್ನುತ್ತಾ ಭಾರತದ ಕೃಷಿ ಲೋಕದ ಅವನತಿಯ ಅಧ್ಯಾಯವನ್ನು ನಿಖರವಾಗಿ ಗುರುತಿಸಿದ್ದಾನೆ.

No comments:

Post a Comment