ಬುಧವಾರ, ಸೆಪ್ಟೆಂಬರ್ 23, 2015

ಗಾಂಧಿ, ಗೋರಾ ಎಂಬ ಗುರುಶಿಷ್ಯರ ದೇವರು-ಧರ್ಮಗಳ ಕುರಿತ ಜಿಜ್ಞಾಸೆ


ಕನ್ನಡ ಪ್ರಖ್ಯಾತ ಸಂಶೋಧಕರು ಮತ್ತು ವಿದ್ವಾಂಸರಾಗಿದ್ದ ಡಾ. ಕಲ್ಬರ್ಗಿಯವರ ಹತ್ಯೆಯಾದ ನಂತರ  ಕನ್ನಡದ ಸಾಂಸ್ಕೃತಿಕ ಜಗತ್ತು ತಲುಪಿರುವ ಅಧೋಗತಿಯನ್ನು ನೆನದಾಗ ಮನಸ್ಸು  ಅಪಮಾನದಿಂದ ಮುದುಡಿಹೋಗುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮಾತು ಮತ್ತು ಚರ್ಚೆಗಳ ಮೂಲಕ  ಈವರೆಗೆ ಬಗೆ ಹರಿಸಿಕೊಳ್ಳುತ್ತಿದ್ದ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಇದೀಗ ಹೊಡಿ, ಬಡಿ ಮತ್ತು ಕೊಲ್ಲು, ಎಂಬ ಮಾತುಗಳು ಆವರಿಸಿಕೊಂಡಿವೆ. ತಮ್ಮ ಬಾಯಿಗಳನ್ನು ಗಟಾರಮಾಡಿಕೊಂಡು, ನಾಲಿಗೆಯನ್ನು ಚಪ್ಪಲಿಯನ್ನಾಗಿಸಿಕೊಂಡು ವಿದ್ವಾಂಸರ ಕುರಿತು ಸಾಹಿತ್ಯ, ಸಂಸ್ಕೃತಿಗಳ ಗಂಧ ಗಾಳಿಯಿಲ್ಲದ ತಲೆ ತಿರುಕರ ಮಾತುಗಳು ಅವರು ಪ್ರತಿನಿಧಿಸುವ ಧರ್ಮ ಮತ್ತು ಸಂಸ್ಕೃತಿಯ ಪ್ರತಿಬಿಂಬಗಳಂತೆ ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ದೇವರು ಮತ್ತು ಧರ್ಮ ಕುರಿತು ಅಪಾರ ಶ್ರದ್ಧೆ ಹೊಂದಿದ್ದ ಗಾಂಧೀಜಿಯವರು ತಮ್ಮ ಶಿಷ್ಯ  ಹಾಗೂ ನಾಸ್ತಿಕ ಗೋಪರಾಜು ರಾಮಚಂದ್ರರಾವ್  (ಗೋರಾ)ಎಂಬುವರೊಡನೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆಸಿದ ಸಂವಾದ ನೆನಪಾಗುತ್ತಿದೆ.
ಗೋರಾ ರವರು 1902 ರಲ್ಲಿ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಒರಿಸ್ಸಾದ ಗಂಜಾಂ ಜಿಲ್ಲೆಯ ಛತ್ರಪುರ ಎಂಬಲ್ಲಿ ಜನಿಸಿದವರು. ಅವರ ತಂದೆ ಅಂದಿನ ಸರ್ಕಾರದಲ್ಲಿ ಆಂಧ್ರದ ಕಾಕಿನಾಡದಲ್ಲಿ ಸೇವೆಯಲ್ಲಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಎ. ಆನರ್ಸ್ ಪದವಿ ಪಡೆದಿದ್ದ ಗೋರಾರವರು ಬಾಲ್ಯದಿಂದ ದೇವರು, ಧರ್ಮ ಮತ್ತು ಅಂಧಶ್ರದ್ಧೆಗಳ ವಿರುದ್ಧ ತಿರುಗಿ ಬಿದ್ದವರು. ತಾವು  ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ  ಮಧುರೈ ಕಾಲೇಜಿನ ಮತಾಂತರ ಕುರಿತ ಒಲವು ಹಾಗೂ ಕಾಕಿನಾಡ ಕಾಲೇಜಿನಲ್ಲಿ ಧರ್ಮ ಕುರಿತಾದ ಅಂಧ ಶ್ರದ್ಧೆಗಳನ್ನು ತಿರಸ್ಕರಿಸಿ, ಉದ್ಯೋಗಕ್ಕೆ  ರಾಜಿನಾಮೆ ನೀಡಿ ಸ್ವತಂತ್ರವಾಗಿ ಬದುಕಲು ಇಚ್ಚಿಸಿದವರು. ಇದಕ್ಕಾಗಿ ವಿಜಯವಾಡ ಸಮೀಪ ನಿರೀಶ್ವರವಾದ ಕೇಂದ್ರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಧರ್ಮ ಮತ್ತು ಧರ್ಮ ಗ್ರಂಥಗಳ ಕುರಿತಂತೆ ಧಾರ್ಮಿಕ ಮುಖಂಡರೊಡನೆ ನಿರಂತರ ಚರ್ಚೆಯಲ್ಲಿ ಇದ್ದವರು.





1930 ರಲ್ಲಿ ಮಹಾತ್ಮ ಗಾಂಧಿಯವರು ಪ್ರಥಮವಾಗಿ  ಆಂಧ್ರದ ಗೋದಾವರಿ, ಕಾಕಿನಾಡ, ಶ್ರೀ ಶೈಲಂ ಜಿಲ್ಲೆಗಳಿಗೆ ಬಂದು ಹೋದ ನಂತರ ಗಾಂಧಿ ಚಿಂತನೆಗಳಿಗೆ ಮಾರು ಹೋದರು. ( ಗಾಂಧೀಜಿಯವರ ಬೇಟಿ ಕುರಿತು ರಾಮಮೋಹನ ರಾವ್ ಎಂಬುವರು ತಮ್ಮ ಆತ್ಮ ಚರಿತ್ರೆಯನ್ನು ಸ್ವರಾಜ್ಯಂ ಹೆಸರಿನಲ್ಲಿ ಕಾದಂಬರಿ ರೂಪದಲ್ಲಿ ಬರೆದಿದ್ದು, ಆಕ್ಸ್ ಪರ್ಡ್ ಯೂನಿವರ್ಸಿಟಿ ಪ್ರೆಸ್ ನಿಂದ ಅದೇ ಹೆಸರಿನಲ್ಲಿ ಇಂಗ್ಲೀಷ್ ನಲ್ಲಿ ಪ್ರಕಟವಾಗಿದೆ.) ಆನಂತರದ ದಿನಗಳಲ್ಲಿ ಗೋರಾರವರು  ಗಾಂಧೀಜಿಯವರ ಜೊತೆ ದೇವರು ಧರ್ಮ ಕುರಿತಂತೆ ನಿರಂತರ ಪತ್ರ ವ್ಯವಹಾರ ನಡೆಸಿದರು. ಅದು ತೃಪ್ತಿಯಾಗದೆ, ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಗಾಂಧಿ ಜೊತೆ ಸಂವಾದ ನಡೆಸುತ್ತಿದ್ದರು. ಗಾಂಧಿಜಿಯವರನ್ನು ಪ್ರಥಮ ಬಾರಿಗೆ ಬೇಟಿಯಾದಾಗ, “ ಹೃದಯದೊಳಗೆ ದೇವರೇ ಇಲ್ಲದ ಮನುಷ್ಯನ ಜೊತೆ ನಾನು ಹೇಗೆ ಸಂವಾದ ನಡೆಸಲಿ? “ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದನ್ನು ಗೋರಾರವರು ತಮ್ಮ  An atheist With Gandhi ಕೃತಿಯಲ್ಲಿ ದಾಖಲಿಸಿದ್ದಾರೆ. ( ಈ ಕೃತಿಯನ್ನು ನನ್ನ ಮಿತ್ರರಾದ, ಹಾಗೂ  ನಿವೃತ್ತ ಶಿಕ್ಷಣ ಆಯುಕ್ತರಾದ ಧಾರವಾಡದ ವೆಂಕಟೇಶ್ ಮಾಚಕನೂರು ಅವರು “ ಗಾಂಧಿಯೊಂದಿಗೆ ಒಬ್ಬ ನಾಸ್ತಿಕ” ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದು, ಬಳ್ಳಾರಿಯ ಲೋಹಿಯಾ ಪ್ರಕಾಶನ ಈ ಕಿರು ಪುಸ್ತಕವನ್ನು ಪ್ರಕಟಿಸಿದೆ) ಗಾಂಧಿಯವರ ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಅಲ್ಲಿ ವಾರಗಟ್ಟಲೆ ತಂಗಿದ್ದರೂ ಸಹ ಗೋರಾ ಅವರು ಎಂದೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಪ್ರಾರ್ಥನಾ ಸಬೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ನಿರೀಶ್ವರವಾದ ಅಥವಾ ನಾಸ್ತಿಕತೆ ಎನ್ನುವುದು ಮನುಷ್ಯನೊಬ್ಬ ನಡೆಸುವ ದೈನಂದಿಕ ಜೀವನದಲ್ಲಿ ಸಕರಾತ್ಮಕ ಬೆಳವಣಿಗೆಗಳನ್ನು ತಂದು ಕೊಡುವ ಭಾವ ಅಥವಾ ವಿಶ್ವಾಸ ಎಂಬುವುದು ಗೋರಾರವರ ದೃಢ ನಿಲುವಾಗಿತ್ತು. ದೇವರ ಮೇಲಿನ ನಂಬಿಕೆ ಮನುಷ್ಯನನ್ನು ಅಧೀರನನ್ನಾಗಿ ಮಾಡಿ, ಅವನನ್ನು ಧರ್ಮ ಮತ್ತು ಕರ್ಮ ಗಳ ನಡುವೆ ಜೀತದಾಳುವನ್ನಾಗಿ ಮಾಡುತ್ತದೆ ಎಂದು ಗೋರಾ ಗಾಂಧಿಯವರ ಜೊತೆ ವಾದ ಮಾಡುತ್ತಿದ್ದರು. ಗಾಂಧಿ ಮತ್ತು ಗೋರಾ ಎಂಬ ಈ ಅಪರೂಪದ ಗುರುಶಿಷ್ಯರ ನಡುವೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆದ ಸಂವಾದದ ಫಲವಾಗಿ ಗಾಂಧಿಯವರು ದೇವರು ಎನ್ನುವ ಶಬ್ಧವನ್ನು ಅಂತಿಮವಾಗಿ  ಸತ್ಯ ಎಂದು ಬದಲಾಯಿಸಿಕೊಂಡರು.



ಆಂದ್ರಪ್ರದೇಶದ ಉತ್ತರ ಭಾಗದ ಗೋದಾವರಿ ಪ್ರಾಂತ್ಯದಲ್ಲಿ ಮೂಲತಃ ಬ್ರಾಹ್ಮಣರಾಗಿದ್ದ ಗೋರಾ ರವರು ಪ್ರತಿ ಹದಿನೈದು ದಿನಕ್ಕೆ ಹುಣ್ಣಿಮೆಯ ದಿನದಂದು  ಬೆಳಂದಿಂಗಳ ಊಟ ಎಂಬ ಕಾರ್ಯಕ್ರಮವನ್ನು ಹರಿಜನರ ಕೇರಿಗಳಲ್ಲಿ ಏರ್ಪಡಿಸಿ, ಅವರೊಂದಿಗೆ ಸಹಭೋಜನ ನಡೆಸುತ್ತಿದ್ದರು. ಜಾತಿಯ ವಿನಾಶಕ್ಕೆ ಅಂತರ್ಜಾತಿಯ ವಿವಾಹ ಎಂದು ಮದ್ದು ಎಂದು ಬಲವಾಗಿ ನಂಬಿದ್ದ ಅವರು ತಮ್ಮ ಪುತ್ರಿಯನ್ನು ( ಮನೋರಮಾ)ಹರಿಜನ ಯುವಕನಿಗೆ ವಿವಾಹ ಮಾಡಿಕೊಡಲು ನಿರ್ಧರಿಸಿ, ಈ ವಿವಾಹವನ್ನು ವಾರ್ಧಾ ಆಶ್ರಮದಲ್ಲಿ ನಡೆಸಿಕೊಡುವಂತೆ ಗಾಂಧಿಯವರಿಗೆ ಪತ್ರ ಬರೆದರು. ಗೋರಾ ಅವರ ಪುತ್ರಿಗೆ ಹದಿನೇಳು ವರ್ಷ ಎಂದು ತಿಳಿದ ಗಾಂಧಿಯವರು “ ಹತ್ತೊಂಬತ್ತು ವರ್ಷ ತುಂಬಿದ ಮೇಲೆ ವಿವಾಹ ಮಾಡೋಣ ಅಕಸ್ಮಾತ್ ಈಗಲೇ ನೆರವೇರಬೇಕು ಎಂಬುದು ನಿನ್ನ ಇಚ್ಛೆಯಾಗಿದ್ದರೆ ಮಾಡೋಣ ಆದರೆ, ನಿನ್ನ ಪುತ್ರಿಗೆ ಹತ್ತೊಂಬತ್ತು ತುಂಬುವವರೆಗೆ ಆಕೆ ದಾಂಪತ್ಯ ಜೀವನ ನಡೆಸಬಾರದು “ ಎಂದು ಪತ್ರ ಬರೆದಿದ್ದರು. ಗಾಂಧೀಜಿಯವರ ಸಲಹೆಯನ್ನು 1947 ರಲ್ಲಿ ಒಪ್ಪಿದ ಗೋರಾರವರು ತಮ್ಮ ಭಾವಿ ಅಳಿಯನನ್ನು ( ಅರ್ಜುನ) ವಾರ್ಧಾ ಆಶ್ರಮಕ್ಕೆ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಕಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗಾಂಧೀಜಿಯವರು ಗೋರಾರವರಿಗೆ ಪತ್ರ ಬರೆದು “ ನಿನ್ನ ಭಾವಿ ಅಳಿಯ ಆಶ್ರಮದಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿ, ಆದರೆ, ಅವನು ಮಂತ್ರ ಅಥವಾ ಶ್ಲೋಕ ಹೇಳುವುದು ಬೇಡ” ಎಂಬ  ನಿಲುವನ್ನು ತಾಳಿದ್ದರು.



ದುರದೃಷ್ಟವಶಾತ್ 1949 ಕ್ಕೆ ನಡೆಯಬೇಕಿದ್ದ ವಿವಾಹಕ್ಕೆ ನೇತೃತ್ವ ವಹಿಸಬೇಕಿದ್ದ ಗಾಂಧಿಯವರು 1948 ರ ಜನವರಿಯಲ್ಲಿ ಮತಾಂಧನೊಬ್ಬನ ಗುಂಡಿಗೆ ಬಲಿಯಾದರು. ಕೊನೆಗೂ ಅವರ ಆಶಯದಂತೆ 1949 ರಲ್ಲಿ ವಾರ್ಧಾ ಸಮೀಪದಲ್ಲಿ ಇದ್ದ ಸೇವಾಗ್ರಾಮದಲ್ಲಿ ಗೋರಾ ಅವರ ಪುತ್ರಿಯ ಅಂತರ್ಜಾತಿಯ ವಿವಾಹ ನೆರವೇರಿತು. ತಾವು ನಂಬಿದ್ದ ತತ್ವಗಳಿಗೆ ಬದ್ಧರಾಗಿ ಬಾಳಿದ ಗೋರಾ 1975 ರಲ್ಲಿ ನಿಧನರಾದರು. ತತ್ವ ಸಿದ್ಧಾಂತಗಳ ಭಿನ್ನಾಭಿಪ್ರಾಯಗಳ ನಡುವೆ ಮಾನವೀಯತೆ ಮತ್ತು ಮನುಷ್ಯ ಸಂಬಂಧ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ಗುರು ಶಿಷ್ಯರ ಆದರ್ಶನೀಯವಾದ  ಬದುಕು ಇದೀಗ  ಕರ್ನಾಟಕದಲ್ಲಿ  ತಾಂಡವವಾಡುತ್ತಿರುವ ವಿಕಾರಗಳಿಗೆ ಮದ್ದಾದರೆ ಎಷ್ಟು ಚೆನ್ನ? ಅಲ್ಲವೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ