ಶುಕ್ರವಾರ, ಜನವರಿ 19, 2018

ವೃದ್ಧೆಯ ಸಾವೆಂಬ ಭಾರತದ ಆತ್ಮದ ಸಾವು


ಭಾರತದ ರಾಜಕೀಯ ರಂಗವು ತನ್ನ ಅಂತಿಮ ಅವಸಾನದ ಘಟ್ಟ ತಲುಪಿದ ಎಲ್ಲಾ ಕ್ಷಣಗಳು ಪಕ್ಷ ಬೇಧವಿಲ್ಲದೆ ಭಾರತಾದ್ಯಂತ ಕಾಣಿಸತೊಡಗಿವೆ. ತಮ್ಮ ತಾತ್ವಿಕ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ಬದುಕಿಗೆ ಇರಬೇಕಾದ ಲಜ್ಜೆ ಮತ್ತು ಎಚ್ಚರಿಕೆ ದೇಶದ ರಾಜಕಾರಣಿಗಳಿಗೆ ಇಲ್ಲವಾಗಿವೆ. ಅಧಿಕಾರದ ಗದ್ದುಗೆಯನ್ನು ಏರಬೇಕೆಂಬ ಏಕೈಕ ಕಾರಣಕ್ಕಾಗಿ ಜನಸಾಮಾನ್ಯರ ಕಷ್ಟ ಕೋಟಲೆಗಳನ್ನು ಮರೆತು ವೇದಿಕೆಯಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಾ, ಆಡಬಾರದ ಆಟ ಮತ್ತು ಹೂಡಬಾರದ ತಂತ್ರಗಳನ್ನು ಹೂಡುವಲ್ಲಿ ನಿರತರಾಗಿದ್ದಾರೆ. ಇದಕ್ಕೆ ನೇರ ಉದಾಹರಣೆಯೆಂದರೆ ನಮ್ಮ  ಹಿರಿಯ ರಾಜಕಾರಣಿ ಹೆಚ್.ಡಿ.ದೇವಗೌಡರುಶೂದ್ರ ಸಮುದಾಯದಲ್ಲಿ ಹುಟ್ಟಿ ಕರ್ನಾಟಕದ ಪ್ರಬಲ ಒಕ್ಕಲಿಗ ಸಮುದಾಯದ ಪ್ರತಿನಿಧಿ ಎನಿಸಿಕೊಳ್ಳುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಶೃಂಗೇರಿಯ ಶಾರದಾಂಬೆ ದೇವಸ್ಥಾನದಲ್ಲಿ ಸತತ ಹನ್ನೆರೆಡು ದಿನಗಳ ಕಾಲ ಕುಳಿತು ಮಹಾ ರುದ್ರ ಯಾಗದಲ್ಲಿ ನಿರತರಾಗಿದ್ದಾರೆ.
ಆಧುನಿಕ 21 ನೇ ಶತಮಾನದಲ್ಲಿಯೂ ಸಹ P್ಫ್ಷಂತರ ರೂಪಾಯಿ ಮೌಲ್ಯದ ರೇಷ್ಮೆ ವಸ್ತ್ರ, ಎಣ್ಣೆ ಮತ್ತು ತುಪ್ಪವನ್ನು ಬೆಂಕಿಗೆ ಸುರಿಯುತ್ತಿದ್ದಾರೆ. ಉತ್ತರ ಭಾರತದಲ್ಲಿ ಚಳಿಗೆ ತತ್ತರಿಸಿದ ಹಸುಗೂಸುಗಳು ಮತ್ತು ವೃದ್ಧ ಜೀವಗಳು ತರಗೆಲೆಗಳಂತೆ ನೆಲಕ್ಕೆ ಉರುಳುತ್ತಿದ್ದಾರೆ. ದೇವೇಗೌಡರು ಯಜ್ಞ ಮಾಡುತ್ತಿರುವ ಸಮಯದಲ್ಲಿ  ಶಾರದಾಂಬೆಯ ದೇವಿಯ ದರ್ಶನಕ್ಕೆ ಬಂದ ಹಿರಿಯ ವೃದ್ಧನನ್ನು ಪೊಲೀಸ್ ಪೇದೆಯೊಬ್ಬ ಸತ್ತ ನಾಯಿಯನ್ನು ಎಳೆದು ಹಾಕುವಂತೆ ಶೃಂಗೇರಿಯ ರಸ್ತೆಯಲ್ಲಿ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಹಾಕುತ್ತಿರುವ ದೃಶ್ಯ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ದೇಗುಲದ ಒಳಗೆ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳನ್ನು ರಾಜಕೀಯದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸಲು, ಹೊಮ, ಹವನದ ಹೊಗೆಯ ನಡುವೆ ಗೌಡರು ಮುಳುಗಿ ಹೋಗಿದ್ದಾರೆ. ಮಾಜಿ ಪ್ರಧಾನಿ ಎಂಬ ಏಕೈಕ ಕಾರಣಕ್ಕಾಗಿ  ಅವರಿಗೆ ರಕ್ಷಣೆ ಒದಗಿಸಲು ಓರ್ವ ಡಿ.ವೈ.ಎಸ್.ಪಿ. ನಾಲ್ವರು ಪೋಲಿಸ್ ಇನ್ಸ್ ಪೆಕ್ಟರ್ ಸೇರಿದಂತೆ  ಇಪ್ಪತ್ತಕ್ಕೂ ಹೆಚ್ಚು ಮಂದಿ ಪೋಲಿಸ್ ಪೇದೆಗಳು ಮತ್ತು ಓರ್ವ ವೈದ್ಯ ಮತ್ತು ನಾಲ್ವರು ಆರೋಗ್ಯ ಇಲಾಖೆಯ ನೌಕರರು ತಮ್ಮ  ಅಂಬುಲೆನ್ಸ್ ವಾಹನದ ಜೊತೆ ಶೃಂಗೇರಿ ಮಠದ ಬಾಗಿಲಲ್ಲಿ ಭಿಕ್ಷುಕರರಂತೆ ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಕಾಯುತ್ತಿದ್ದಾರೆ. ರಾಜಕೀಯವನ್ನು ವೇದಾಂತದಂತೆ ಮಾತನಾಡುವ  ಶ್ರೀ ಮಾನ್ ದೊಡ್ಡಗೌಡರು ಇವುಗಳನ್ನು ಕಾಣುವ ಮತ್ತು ಕೇಳುವ  ಕಣ್ಣು ಮತ್ತು ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ.
ಸಂದರ್ಭದಲ್ಲಿ ಶೂದ್ರ ಸಮುದಾಯದಿಂದ ಬಂದ ಹಾಗೂ ಮಠ ಮಾನ್ಯಗಳನ್ನು, ದೇವರು ಮತ್ತು ಪ್ರಜಾರಿಯನ್ನು ಹಾಗೂ ಮೌಡ್ಯಗಳನ್ನು ನಿರಾಕರಿಸಿದ್ದ ಕುವೆಂಪುರವರು ಇದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಅಥವಾ ಲಂಕೇಶ್, ಕೆ.ರಾಮದಾಸ್ ಈಗ ಜೀವಂತವಾಗಿದ್ದರೆ, ಅವರು ದೇವೇಗೌಡರ ಕುರಿತು ಯಾವ ರೀತಿಯಲ್ಲಿ ಪ್ರಕ್ರಿಯಿಸುತ್ತಿದ್ದರು ಎಂದು ಯೋಚಿಸುತ್ತಿದ್ದೇನೆ.
ಇದೇ ಜನವರಿ ಹದಿನೇಳರ ಕಳೆದ ಸೋಮವಾರದಂದು ಜಾರ್ಖಂಡ್ ರಾಜ್ಯದ ಗರ್ವಾ ಎಂಬ ಊರಿನ ಗ್ರಾಮ ಪಂಚಾಯಿತಿಯೆದುರು ಎಂಬತ್ತು ವರ್ಷದ ಶ್ಯಾಮದೇವಿ ಕುನ್ವರ್ ಎಂಬ ವೃದ್ಧ ಮಹಿಳೆಯೊಬ್ಬಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚಳಿಯಿಂದ ರಕ್ಷಿಸಿಕೊಳ್ಳಲು ಸರ್ಕಾರ ನೀಡುವ ಉಚಿತ ಕಂಬಳಿಗಾಗಿ ಅಂಗಲಾಚುತ್ತಾ ಅಸು ನೀಗಿದ ದಾರುಣ ಘಟನೆಯನ್ನು ಧೈನಿಕ್ ಭಾಸ್ಕರ್ ಎಂಬ ದಿನಪತ್ರಿಕೆಯೊಂದು ಚಿತ್ರ ಸಮೇತ ವರದಿ ಮಾಡಿದೆ. 2 ರಿಂದ 4 ಡಿಗ್ರಿ ಸೆಲ್ಸಿಯಸ್ ಪ್ರಮಾಣದ ಚಳಿಯಲ್ಲಿ ಕಂಬಳಿಯನ್ನು ಕೊಳ್ಳಲಾರದ ಬಡವರು, ಹೆಂಗಸರು ಮತ್ತು ಮಕ್ಕಳು ಹಾಗೂ ವೃದ್ಧರಿಗಾಗಿ ತಂದಿಟ್ಟ ಕಂಬಳಿಗಳನ್ನು ವಿತರಿಸಲು ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಯಿತು. ಸತತ ಹದಿನೈದು ದಿನಗಳ ಕಾಲ ಪಂಚಾಯಿತಿ ಕಚೇರಿಗೆ ಅಲೆದಾಡಿದ ಶ್ಯಾಮದೇವಿ ಒಂದು ಕಂಬಳಿಗಾಗಿ ಗೋಗರೆದು ದೈನೇಸಿ ಸ್ಥಿತಿಯಲ್ಲಿ ಪ್ರಾಣ ಬಿಟ್ಟಿದ್ದು ಭವಿಷ್ಯದ ಭಾರತದ ಬಡವರ ಕುರಿತಾಗಿ ಬರೆದ ಮುನ್ನುಡಿಯಂತಿದೆ. ಇದು ಒಬ್ಬ ಅಸಹಾಯಕ ವೃದ್ಧೆಯ ಸಾವು ಮಾತ್ರವಾಗಿರದೆ ಅದು ನಿಜಭಾರತದ ಆತ್ಮದ ಸಾವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಅಪಮಾನದ ಹಾಗೂ ಆತ್ಮ ಸಾಕ್ಷಿಗೆ ಸವಾಲಾಗಿರುವ  ಒಂದು ಜೀವದ ಸಾವಿಗೆ ನಾವು ಯೋಚಿಸಲಾರದಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ.
ಇತ್ತೀಚೆಗೆ  ಕೇಂದ್ರ ಸರ್ಕಾರದಿಂದÀ ಬಿಡುಗಡೆಯಾಗಿರುವ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ ಅಂಶಗಳು ದೇಶದ ಬಡವರನ್ನು, ಕೃಷಿ ಕೂಲಿಕಾರ್ಮಿಕರನ್ನು ಮತ್ತು ಗ್ರಾಮೀಣ ಭಾಗದ ರೈತರನ್ನು ಎತ್ತ ಕೊಂಡೊಯ್ಯುತ್ತಿವೆ ಎಂಬುದನ್ನು ನಮ್ಮೆದುರು ತೆರದಿಟ್ಟಿವೆ. ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಹೋಗುತ್ತಿರುವವರ ಪ್ರಮಾಣ ಮತ್ತು ಕೃಷಿ ರಂಗದ ಅವನತಿಯ ಅಂಕಿ ಅಂಶಗಳು ಹಾಗೂ ರಿಯಾಲಿಟಿ ಸೆಕ್ಟರ್ ಎಂದು ಕರೆಸಿಕೊಳ್ಳುವ ಕಟ್ಟಡ ನಿರ್ಮಾಣದ ಕ್ಷೇತ್ರಕ್ಕೆ ಜಮೆಯಾಗುತ್ತಿರುವವರ ಸಂಖ್ಯೆಯನ್ನು ಅವಲೋಕಿಸಿದಾಗ ಏಕ ಕಾಲಕ್ಕೆ ಭಾರತದ ಆತ್ಮಗಳಿಂತಿದ್ದ ಗ್ರಾಮಗಳ ಅವನತಿ ಮತ್ತು ನಗರಗಳಲ್ಲಿ ಹೆಚ್ಚುತ್ತಿರುವ ಕೊಳಗೇರಿಗಳ ಸಂಖ್ಯೆ ನಮ್ಮನ್ನು ದಂಗು ಬಡಿಸುತ್ತವೆ. ಕೇವಲ ಎಂಟು ಅಡಿ ಅಗಲ ಮತ್ತು ಹತ್ತು ಅಡಿ ಉದ್ದದ ಪ್ಲಾಸ್ಟಿಕ್ ಹೊದಿಕೆ ಅಥವಾ ತಗಡಿನ ಶೀಟುಗಳ ಅಡಿಯಲ್ಲಿ ವಿದ್ಯುತ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಗಳಿಲ್ಲದ ಕೂಪಗಳಲ್ಲಿ ಬದುಕುವ ನತದೃಷ್ಟರು, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಪತ್ರವಿಲ್ಲದೆ ನಮ್ಮೊಳಗಿದ್ದು ನಮ್ಮವರಾಗದ ಭಾರತದ ಬಹಿಷ್ಕø ಸಮುದಾಯದ ಅಂಗವಾಗಿ ಉಳಿದಿದ್ದಾರೆ. ಇನ್ನು ನಮ್ಮ ರಾಜಕೀಯ ನಾಯಕರು ವೇದಿಕೆಗಳಲ್ಲಿ ಎದೆಯುಬ್ಬಿಸಿ ಮಾತನಾಡುವ ಗುಡಿಸಲು ರಹಿತ ಸಮಾಜ, ಎಲ್ಲಾ ಹಳ್ಳಿಗಳಿಗೆ ವಿದ್ಯುತ್. ರಿಯಾಯಿತಿ ದರದ ಪಡಿತರ ಎಂಬ ಮಾತುಗಳು ಮುಂಡಾ ಮೋಚುವ ಕ್ರಿಯೆಯ ಒಂದು ಅಂಗವಾಗಿ ಕಾಣತೊಡಗಿವೆ.

ಭಾರತದಲ್ಲಿ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಶೇಕಡ 48.5 ರಷ್ಟು ಕುಟುಂಬಗಳು ಭೂರಹಿತ ಕುಟುಂಬಗಳಾಗಿದ್ದು ಕುಟುಂಬಗಳ ಸದಸ್ಯರು ಕೃಷಿ ಕೂಲಿ ಮತ್ತು ಇತರೆ ವೃತ್ತಿಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾ ಬದುಕು ಸೆವೆಸುತ್ತಿದ್ದಾರೆ. ಭಾರತದ ಗ್ರಾಮೀಣ ಭಾಗದ 90 ಕೋಟಿ ಜನಸಂಖ್ಯೆಯಲ್ಲಿ 25 ಕೋಟಿ ಜನರು ಭೂಮಿ ಅಥವಾ ಇತರೆ ನಿವೇಶನಗಳಿಂದ ವಂಚಿತರಾದ ಜನರಾಗಿದ್ದಾರೆ. ಕೃಷಿ ರಂಗದ ಬೆಳವಣಿಗೆಯ ಕುಂಠಿತದಿಂದಾಗಿ ಇವರೆಲ್ಲರೂ ಕೂಲಿ ಅರಸಿಕೊಂಡು ನಗರತ್ತ ಮುಖ ಮಾಡಿದ ಪರಿಣಾಮವಾಗಿ ಗ್ರಾಮೀಣ ಬದುಕು ಈಗ ನರಕ ಸದೃಶ್ಯವಾಗಿದೆ. 2004 ಮತ್ತು 2005 ರಲ್ಲಿ ನಗರಗಳ ಕಟ್ಟಡ, ರಸ್ತೆ, ಇತ್ಯಾದಿ ನಿರ್ಮಾಣಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಸಂಖ್ಯೆ 1ಕೋಟಿ ಹತ್ತು ಲಕ್ಷ ಇದ್ದದ್ದು, 2011-12 ವೇಳೆಗೆ 1 ಕೋಟಿ 90 ಲಕ್ಷಕ್ಕೆ ಏರಿತು. 15 ರಿಂದ 29 ವರ್ಷ ವಯಸ್ಸಿನ ಒಳಗಿನ ಕೂಲಿಕಾರ್ಮಿಕರ ಸಂಖ್ಯೆಯು ಶೇಕಡ 7.5 ರಿಂದ ಶೇಕಡ 19 ಪ್ರಮಾಣಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ 50 ಲಕ್ಷ ಕೂಲಿ ಕಾರ್ಮಿಕರು ಕೃಷಿ ರಂಗದಿಂದ ವಿಮುಖರಾಗಿದ್ದಾರೆ. ಕಟ್ಟಡ ನಿರ್ಮಾಣ ರಂಗದಲ್ಲಿ ಕೂಲಿ ಕಾರ್ಮಿಕರ ಬೇಡಿಕೆಯು 1993 ರಲ್ಲಿ ಶೇಕಡ 3.9 ರಷ್ಟು ಇದ್ದ ಬೇಡಿಕೆಯು 2004 ವೇಳೆಗೆ ಶೇಕಡ 10.7 ರವರೆಗೆ ಬೆಳೆದು, ಇದೀಗ ಶೇಕಡ 17 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಇತ್ತ ಗ್ರಾಮೀಣ ಭಾಗದಲ್ಲಿ ರೈತ ಅನಾಥನಾಗಿದ್ದಾನೆ. ಒಂದೆಡೆ ಅತಿವೃಷ್ಟಿ ಇಲ್ಲವೆ, ಅನಾವೃಷ್ಟಿ ಇದರ ಜೊತೆ ತಾನು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲದ ಬೆಲೆ ಇಲ್ಲದೆ ಪರದಾಡುತ್ತಿದ್ದಾನೆ. ಕಳೆದ ತಿಂಗಳಿನಿಂದ ಉತ್ತರ ಪ್ರದೇಶವೂ ಸೇರಿದಂತೆ ಪಂಜಾನ್ ಮತ್ತು ಉತ್ತರಕಾಂಡ ರಾಜ್ಯಗಳಲ್ಲಿ ಆಲೂಗೆಡ್ಡೆ ಬೆಲೆ ಕಿಲೋ ಒಂದಕ್ಕೆ ಒಂದು ರೂಪಾಯಿಗೆ ಮಾರಾಟವಾಗುತ್ತಿದೆ. ಈಗ ಕರ್ನಾಟಕದಲ್ಲಿ ಟಮೋಟೊ ಬೆಳೆದ ರೈತರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಭಾರತದ ಕೃಷಿ ಬೆಳೆವಣಿಗೆ ದಿನದಿಂದ ದಿನಕ್ಕೆ ಕುಸಿಯತೊಡಗಿದೆ. 2016-17 ರಲ್ಲಿ ಶೇಕಡ 4.9 ರಷ್ಟು ಇದ್ದ ಬೆಳವಣಿಗೆಯ ಪ್ರಮಾಣ 2017-18 ಸಾಲಿಗೆ ಶೇಕಡ 2.1 ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ತಲೆ ತಲಾಂತರದಿಂದ ಭೂಮಿಯನ್ನು ನಂಬಿ ಬದುಕಿದ್ದ ರೈತರು ಭೂಮಿಯ ಮೇಲಷ್ಟೇ ಅಲ್ಲದೆ, ತಮ್ಮ ಬಗ್ಗೆಯೂ ಸಹ ಆತ್ಮ ವಿಶ್ವಾಸ ಕಳೆದುಕೊಂಡಿದ್ದಾರೆ.
ಕೃಷಿ ರಂಗದ ಅವನತಿಯಲ್ಲಿ ಸರ್ಕಾರದ ಜೊತೆಗೆ ರೈತರನ್ನು ದಿಕ್ಕು ತಪ್ಪಿಸುತ್ತಿರುವ ವ್ಯವಸ್ಥೆಯ ಪಾತ್ರವೂ ಸಹ ಇದೆ. ರೈತರನ್ನು ಕಬ್ಬು, ಹತ್ತಿ, ಹಾಗೂ ತರಕಾರಿಯಂತಹ ವಾಣಿಜ್ಯ ಬೆಳೆಗಳಿಗೆ ಕಟ್ಟಿ ಹಾಕುವ ಬದಲು ಬಹುಬೆಳೆಯ ಬೇಸಾಯಕ್ಕೆ ಅವರನ್ನು ಕೊಡೊಯ್ಯಬೇಕಿದೆ. ದುಭಾರಿ ಕ್ರಮಿನಾಶ ಮತ್ತು ರಸಗೊಬ್ಬರ ಕಪಿಮುಷ್ಟಿಯಿಂದ ಅವರನ್ನು ಬಿಡುಗೊಳಿಸಿ, ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿಸಾಗಾಣಿಕೆ ಮುಂತಾದ ಉಪಕಸುಬುಗಳನ್ನು ಅವರಿಗೆ ಪುನಃ ಪರಿಚಯಿಸುವ ಅಗತ್ಯವಿದೆ. ಬಹುತೇಕ ಅನಕ್ಷರಸ್ತರು ಮತ್ತು ಅರೆ ಶಿಕ್ಷಿತರಿರುವ ದೇಶದಲ್ಲಿ ಎಲ್ಲರಿಗೂ ಉದ್ಯೋಗ ಮತ್ತು ಅನ್ನ ನೀಡುವ ವಲಯಗಳೆಂದರೆ, ಕೃಷಿ ಮತ್ತು ಗುಡಿ ಕೈಗಾರಿಕೆಗಳು ಎಂಬುದನ್ನು  ಮರೆತ ಫಲವಾಗಿ ಶ್ಯಾಮದೇವಿ ಎಂಬ  ನತದೃಷ್ಟ ವೃದ್ಧೆಯಂತಹ ಸಾವಿಗೆ ನಾವೀಗ ಮೂಕ ಸಾಕ್ಷಿಯಾಗುತ್ತಿದ್ದೆವೆ. ಇಂತಹ ದುರಂತದ ಅಧ್ಯಾಯಗಳಿಗೆ ಇತಿಶ್ರಿ ಹಾಡಬೇಕಾಗಿರುವುದು ನಮ್ಮೆಲ್ಲರ ನೈತಿಕ ಕರ್ತವ್ಯ ಎಂಬುದನ್ನು ನಾವು ಮರೆಯುವಂತಿಲ್ಲ.

( ಕರಾವಳಿ ಮುಂಜಾವು  ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ