Thursday, 11 January 2018

ಗಾಂಧೀಜಿಯವರ ಚರಕದ ಹಲವು ಆಯಾಮಗಳು


ಕಳೆದ ವಾರ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಏರ್ಪಡಿಸಿದ್ದಪರಿಸರ, ಅಭಿವೃದ್ಧಿ ಮತ್ತು ಜೀವನ ಶೈಲಿಕುರಿತ ರಾಜ್ಯಮಟ್ಟದ ಕಾರ್ಯಾಗಾರ ಶೀಬಿರಕ್ಕೆ ಅತಿಥಿ ಉಪನ್ಯಾಸಕನಾಗಿ ಹೋಗಿ ಬಂದೆ. ಮೇಲುಕೋಟೆ ನಾನು ಹುಟ್ಟಿ ಬೆಳೆದ ಮಂಡ್ಯ ಜಿಲ್ಲೆಯಲ್ಲಿ ಪುಟ್ಟ ಗಿರಿಧಾಮದಂತಿರುವ ಊರುಶ್ರೀ ಚಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹ ದೇಗುಲಗಳು, ಪ್ರಸಿದ್ಧ ಕಲ್ಯಾಣಿಯ ಜೊತೆಗೆ ಅರ್ಧಕ್ಕೆ ನಿಂತ ರಾಜಗೋಪುರದ ವಾಸ್ತು ಶಿಲ್ಪವಿರುವ ಯಾತ್ರಾಸ್ಥಳ. ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಕವಿ ಪು.ತಿ.. ಹಾಗೂ ಪತ್ರಕರ್ತ ಖಾದ್ರಿ ಶಾಮಣ್ಣನವರು ಹುಟ್ಟಿದ ಊರು. ಬುದ್ಧನ ನಂತರ ಭಾರತ ಕಂಡ ಬಹುದೊಡ್ಡ ದಾರ್ಶನಿಕ ಶ್ರೀ ರಾಮಾನುಜರು ಹನ್ನೆರೆಡು ವರ್ಷಗಳ ಕಾಲ ನೆಲೆ ನಿಂತು ತಳಸಮುದಾಯದ ಜನರಿಗೆ ವೈಷ್ಣವ ದೀಕ್ಷೆ ನೀಡಿದ ಪವಿತ್ರ ಭೂಮಿ. ಇವೆಲ್ಲಕ್ಕಿಂತ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಗಾಂಧಿ ಎಂದು ಜನಪ್ರಿಯವಾಗಿದ್ದ  ಶ್ರೀ ಸುರೇಂದ್ರ ಕೌಲಗಿಯವರ ಕರ್ಮಭೂಮಿ. ನಿರಂತರ ಅರವತ್ತು ವರ್ಷಗಳ ಕಾಲ ಗಾಂಧಿಯನ್ನು ಮತ್ತು ಅವರ ವಿಚಾರಗಳನ್ನು ಧ್ಯಾನಿಸುತ್ತಾ, ಜನಪದ ಸೇವಾ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ. ಇದರ ಮೂಲಕ ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸುತ್ತಾ. ಖಾದಿ ಉತ್ಪಾದನಾ ಘಟಕ, ಗ್ರಾಮೋದ್ಯೋಗ ಕೇಂದ್ರಅಂಗವಿಕಲರು ಮತ್ತು ಅನಾಥ ಮಕ್ಕಳ ಆಶ್ರಮ  ಹೀಗೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕುವುದರ ಮೂಲಕ ಮನುಕುಲಕ್ಕೆ ಮಾದರಿಯಾಗಿ ಬದುಕಿದವರು.
ಕಳೆದ ಇಪ್ಪತ್ತು ವರ್ಷಗಳಲ್ಲಿ  ಮೇಲುಕೋಟೆಗೆ ಹಲವಾರು ಬಾರಿ ಭೇಟಿ ನೀಡಿದ್ದರೂ ಸಹ; ಜನಪದ ಸೇವಾ ಟ್ರಸ್ಟ್  ಕಛೇರಿಗೆ ಅಥವಾ  ಸುರೇಂದ್ರ ಕೌಲಗಿಯವರ ನಿವಾಸಕ್ಕೆ  ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ದೂರವಾಣಿಯಲ್ಲಿ ಮಾತನಾಡುವುದು ಇಲ್ಲವೆ ಮಂಡ್ಯ ನಗರದಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳಲ್ಲಿ ಅವರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸುವುದರಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆ. ಇತ್ತೀಚೆಗೆ ಸುರೇಂದ್ರ ಕೌಲಗಿ ಮತ್ತು ಅವರ ಪತ್ನಿಯವರು ನಿಧನರಾದ ನಂತರ ಅವರ ಕರ್ಮಭೂಮಿಗೆ ಒಮ್ಮೆ ಹೋಗಿಬರಬೇಕು ಎಂಬ ಹಂಬಲ ಪದೇ ಪದೆ ಕಾಡುತ್ತಿತ್ತುಅವರ ಪುತ್ರ ಸಂತೋಷ್ ಕೌಲಗಿಯವರ ಮೂಲಕ ಅದು ನೆರವೇರಿತು.

ಮೇಲುಕೋಟೆಯಿಂದ ನಾಲ್ಕೈದು ಕಿಲೊಮೀಟರ್ ದೂರದಲ್ಲಿ ಮೇಲುಕೋಟೆ-ಚಿನಕುರಳಿ ರಸ್ತೆಯಲ್ಲಿರುವಹೊಸ ಬದುಕಿನ ದಾರಿಎಂಬ ಹೆಸರಿನ ಅವರ ತೋಟದಲ್ಲಿ ಸ್ಥಾಪಿಸಲಾಗಿರುವ ಖಾದಿ ಕೈ ಮಗ್ಗದ ಘಟಕ ಮತ್ತು ಅಲ್ಲಿ ದುಡಿಯುವ ಹೆಣ್ಣು ಮಕ್ಕಳು ಕಟ್ಟಿಕೊಂಡಿರುವ ಘನತೆಯ ಬದುಕನ್ನು ಕೂಲಂಕುಷವಾಗಿಅವಲೋಕಿಸಿದಾಗ, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಸ್ವರಾಜ್ಯ ಕಲ್ಪನೆಯ ದೃಷ್ಟಿಕೋನದಿಂದ ಅವರು ಆಯ್ಕೆ ಮಾಡಿಕೊಂಡ ಚರಕದ ಮಹತ್ವ ಈಗ ಅರಿವಾಗತೊಡಗಿದೆ. ಇಡೀ ಭಾರತದ ಆತ್ಮದಂತಿರುವ ಗ್ರಾಮಗಳ ಸ್ವರಾಜ್ಯ ಮತ್ತು ಅವುಗಳ ಉದ್ಧಾರಕ್ಕೆ  ಗುಡಿ ಕೈಗಾರಿಕೆಗಳು ಪೂರಕ ಎಂಬುದು ಮಹಾತ್ಮರ ಅಚಲವಾದ ನಂಬಿಕೆಯಾಗಿತ್ತುಗಾಂಧೀಜಿಯವರ ಪರಿಕಲ್ಪನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆಪರಮ ಗಾಂಧಿವಾದಿಯಾಗಿದ್ದುಕೊಂಡು, ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದಂತೆ ಬದುಕಿದ ಸುರೇಂದ್ರಕೌಲಗಿಯವರ ನಿಧನಾನಂತರ ಅವರ ಉದಾತ್ತ ಧ್ಯೇಯ ಮತ್ತು ಆದರ್ಶಗಳನ್ನು ಅವರ ಪುತ್ರ ಸಂತೋಷ ಕೌಲಗಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಾವು ಓದಿದ ಇಂಜಿನಿಯರಿಂಗ್ ಪದವಿಯನ್ನು ಬದಿಗಿಟ್ಟು ತಂದೆಯ ಜೊತೆ ಖಾದಿ ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಕೈ ಜೋಡಿಸಿದ್ದ ಸಂತೋಷ್  ಅದನ್ನು ಹಠತೊಟ್ಟವರಂತೆ ಮುಂದುವರಿಸಿದ್ದಾರೆ. ಇಷ್ಟೇ ಅಲ್ಲದೆ; ಮಾಡುವ ಕಾಯಕದಲ್ಲಿ ನಿಷ್ಠ ಮತ್ತು ಧ್ಯೇಯಗಳಿದ್ದರೆ ಗುರಿಸಾಧಿಸಬಹುದು ಎಂಬುದಕ್ಕೆ ಅವರು ನಮ್ಮ ಕಣ್ಣ ಮುಂದಿನ ಸಾಕ್ಷಿಯಾಗಿದ್ದಾರೆಇಪ್ಪತ್ತು ವರ್ಷಗಳ ಹಿಂದೆ ಇವರು ಅನುವಾದಿಸಿದ ಶೂನ್ಯ ಬಂಡವಾಳ ಕೃಷಿ ಚಂತನೆಯ ಹಾಗೂ ಜಪಾನಿನ ನೈಸರ್ಗಿಕ ಕೃಷಿ ವಿಜ್ಞಾನಿ ಪುಕಾವೋಕ ಅವರಒಂದು ಹುಲ್ಲಿನ ಕ್ರಾಂತಿ”  ಎಂಬ ಕೃತಿ ಇಂದಿಗೂ ಸಹ ಜನಪ್ರಿಯ ಕೃತಿಗಳಲ್ಲಿ ಒಂದಾಗಿದೆ. ಮೇಲುಕೋಟೆಯ ಜನಪದ ಸೇವಾಟ್ರಸ್ಟ್ ಪ್ರಕಟ ಮಾಡಿರುವ ಎರಡು ಕೃತಿಗಳಾದ ಪುಕಾವೋಕನಒಂದು ಹುಲ್ಲಿನ ಕ್ರಾಂತಿಮತ್ತು ಗಾಂಧಿವಾದಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪನವರಶಾಶ್ವತ ಅರ್ಥಶಾಸ್ತ್ರಇವೆರೆಡೂ ಕೃತಿಗಳು ಕನ್ನಡದ ಸಾಂಸ್ಕøತಿಕ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಗಳು ಎಂದು ಹೇಳಬಹುದು.
ಜನಪದ ಸೇವಾ ಟ್ರಸ್ಟ್   ತೋಟವನ್ನು ಸಹ ಸಹಜ ಕೃಷಿ ಹಾಗೂ ಶೂನ್ಯ ಬಂಡವಾಳ ಕೃಷಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿರುವ ಸಂತೋಷ್ ಕೌಲಗಿಯವರು ನನ್ನನ್ನು ಹಾಗೂ ಶಿರಸಿಯಿಂದ ಆಗಮಿಸಿದ್ದ ಅಪ್ಪಿಕೊ ಚಳುವಳಿಯ ನೇತಾರ ಮತ್ತು ಪರಿಸರ ತಜ್ಞ ಪಾಂಡು ರಂಗ ಹೆಗ್ಡೆಯವರನ್ನು ಅಲ್ಲಿ ನಿರ್ಮಿಸಲಾಗಿರುವ ಅತಿಥಿ ಗೃಹ ಕಟ್ಟಡಕ್ಕೆ ಕರೆದೊಯ್ದು ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ಮಿಸಿರುವ ಕಟ್ಟಡವನ್ನು ತೋರಿಸಿದರು. ಕಳೆದ ವರ್ಷ ಸುರೇಂದ್ರ ಕೌಲಗಿಯವರಿಗೆ ನೀಡಿದ ಜಮ್ನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿಯ ಹಣವಾದ ಹತ್ತು ಲಕ್ಷ ರೂಪಾಯಿಗಳನ್ನು ಕಟ್ಟಡಕ್ಕೆ ವಿನಿಯೋಗಿಸಲಾಗಿದ್ದು, ಗಾಂಧೀಜಿಯ ವಿಚಾರಧಾರೆಗಳಿಗೆ ತೆರೆದುಕೊಳ್ಳಲು ಬಯಸುವ ಸುಮಾರು ನಲವತ್ತು ಆಸಕ್ತ ಅಭ್ಯರ್ಥಿಗಳು ಅತಿಥಿ ಗೃಹದಲ್ಲಿ ಬಂದು  ತಂಗಬಹುದಾಗಿದೆ.

ನಂತರ ಸನೀಹದಲ್ಲಿದ್ದ ಕೈಮಗ್ಗದ ಘಟಕ, ದೇಸಿ ಹತ್ತಿಯಿಂದ ತಯಾರಾಗುವ ನೂಲುಗಳಿಗೆ ಯಾವುದೇ ಕೃತಕ ಬಣ್ಣಗಳನ್ನು ಬಳಸದೆ, ಅಡಿಕೆ ಮತ್ತು ಕೆಲವು ಆಯ್ದ ಗಿಡಮರಗಳ ತೊಗಟೆಯನ್ನು ಬಳಸಿ ತಯಾರಿಸಲಾಗುವ ನೈಜವಾದ ಬಣ್ಣಗಳನ್ನು ಹಾಕುವ ಘಟಕಗಳಿಗೆ ಕರೆದೊಯ್ದರು. ನಂತರ ಯಂತ್ರಗಳಿಗೆ ವಿದ್ಯುತ್ ಅನ್ನು ಬಳಸದೆ ಸಂಪೂರ್ಣವಾಗಿ ಮಾನವ ಶ್ರಮದಿಂದ ಖಾದಿ ಬಟ್ಟೆಯನ್ನು ನೇಯುವ ಕೈ ಮಗ್ಗಗಳತ್ತ ತೆರಳಿದಾಗ, ಅಲ್ಲಿ ದುಡಿಯುತ್ತಿದ್ದ ಹೆಣ್ಣು ಮಕ್ಕಳು ಮತ್ತು ಅವರು ಕಟ್ಟಿಕೊಂಡಿರುವ ಘನತೆಯ ಬದುಕನ್ನು ಸಂತೋಷ್ ಕೌಲಗಿ ನಮಗೆ ವಿವರಿಸಿದರು. ಖಾದಿ ಕೈಮಗ್ಗದ ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಮುವತ್ತು ಮಂದಿ ಹೆಣ್ಣು ಮಕ್ಕಳು ಸುತ್ತ ಮುತ್ತ ಗ್ರಾಮಗಳಿಂದ ಬಂದ ವಿವಿಧ ವಯೋಮಾನದವರಾಗಿದ್ದರು. ಎಲ್ಲಾ ಜಾತಿಯ ಸಮುದಾಯದಿಂದ ಬಂದ ಹಾಗೂ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಓದಿರುವ ಹೆಣ್ಣುಮಕ್ಕಳು ಬಡತನದ ಕುಟುಂಬದಿಂದ ಬಂದಿದ್ದು, ಕೃಷಿ ಚಟುವಟಿಯಲ್ಲಿ ಕೂಲಿಯಾಳುಗಳಾಗಿ ದುಡಿಯಲಾದೆ ಸಂಕೋಚದಿಂದ ಮುದುಡಿ ಹೋಗಿದ್ದವರು. ಜೊತೆಗೆ ಪೇಟೆ ಅಥವಾ ನಗರಗಳಿಗೆ ಹೋಗಿ ಬದುಕವ ಕೃತಕ ಕಲೆಯನ್ನು ಅರಿಯದವರಾಗಿದ್ದರು. ಇದೀಗ ನಾಲ್ಕು ಗೋಡೆಯ ನಡುವೆ ಒಂದು ಚರಕ ಅಥವಾ ಒಂದು ಕೈ ಮಗ್ಗ ಅವರಿಗೆ ಘನತೆಯ ಹಾಗೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ. ಅತ್ಯಂತ ಆತ್ಮವಿಶ್ವಾಸದಿಂದ ಶ್ರಮಾಧಾರಿತ ಖಾದಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಹೆಣ್ಣುಮಕ್ಕಳು ಪ್ರತಿ ತಿಂಗಳೂ ಏಳು ಸಾವಿರದಿಂದ ಒಂಬತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಹಾಗಾಗಿ ಅವರ ಮುಖದಲ್ಲಿ ಆತ್ಮ ವಿಶ್ವಾಸ  ತುಂಬಿ ತುಳುಕಾಡುತ್ತಿದೆ.

ನಾವು ಬಳಸ ಬಹುದಾದ ನೂರೈವತ್ತು ರೂಪಾಯಿ ಬೆಲೆಯ ಒಂದು ಖಾದಿ ಟವಲ್ ಮೂರು ಮಂದಿಗೆ, ಇನ್ನೂರೈವತ್ತು ರೂಪಾಯಿ ಬೆಲೆಯ ಒಂದು ಪಂಚೆ, ನಾಲ್ಕು ಮಂದಿಗೆ ಹಾಗೂ ಐನೂರು ರೂಪಾಯಿ ಮೌಲ್ಯದ ಒಂದು ಖಾದಿ ಹೊದಿಕೆಯು ಐದು ಮಂದಿಗೆ ದಿನದ ಹೊಟ್ಟೆ ತುಂಬಿಸಬಲ್ಲದು ಎಂಬುದು ದಿನ ನನಗೆ ಅರಿವಾಯಿತು. ಹತ್ತಿಯಿಂದ ನೂಲಾಗಿ ರೂಪಾಂತರಗೊಂಡು, ವಿವಿಧ ಹಂತದದಲ್ಲಿ ಸಂಸ್ಕರಣೆಗೊಂಡು, ರಾಟೆ ಮತ್ತು ಕೈ ಮಗ್ಗದ ಮೂಲಕ ಖಾದಿ ವಸ್ತ್ರದ ರೂಪ ಧರಿಸುವ ಒಂದು ಪ್ರಕ್ರಿಯೆ ಅಥವಾ ಒಂದು ಗುಡಿ ಕೈಗಾರಿಕೆಯ ಚಟುವಟಿಕೆ ಎಂಟತ್ತು ಮಂದಿಗೆ ಜೀವನಾಧಾರಿತ ವೃತ್ತಿಯಾಗಬಲ್ಲದು ಎಂದು ಒಂದು ಶತಮಾನದ ಹಿಂದೆ ಗ್ರಹಿಸಿದ ಗಾಂಧೀಜಿಯವರ ದೂರಾಲೋಚನಾ ಶಕ್ತಿ ಬೆರಗಾಗುವಂತಹದ್ದು.
ನಿಸರ್ಗದ ಕೊಡುಗೆಗಳು ಇರುವುದು ನಮ್ಮಗಳ ಅನುಕೂಲಕ್ಕಾಗಿ ಎಂದು ಗ್ರಹಿಸಿರುವ ಪಾಶ್ಚಿಮಾತ್ಯ ಪ್ರೇರಿತ ಆಧುನಿಕತೆ ಆಲೋಚನೆಗಳು  ಮನುಷ್ಯನನ್ನು ಕ್ರೂರಿಯಾಗಿ ಪರಿವರ್ತಿಸುತ್ತಿರುವ ಸಂಧರ್ಭದಲ್ಲಿ ಹಾಗೂ ಲಾಭಕೋರತನವನ್ನು ಧ್ಯೇಯವಾಯಿಸಿಕೊಂಡಿರುವ ಬಂಡವಾಳ ಶಾಹಿ ಜಗತ್ತಿನ ಯುಗದಲ್ಲಿ ನಮ್ಮ ಆಲೋಚನೆಗಳು ಯಾವಾಗಲೂ ವ್ಯಯಕ್ತಿಕ ನೆಲೆಯಲ್ಲಿರದೆ, ಅವುಗಳು ಸಾಮುದಾಯಿಕ ನೆಲೆಯಲ್ಲಿರಬೇಕು ಎಂದು ಗ್ರಹಿಸುವುದರ ಮೂಲಕ  ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು ಮಹಾತ್ಮ ಗಾಂಧಿ. ಹಾಗಾಗಿ ಅವರು ಹಿಡಿದ ಅಥವಾ ಪ್ರತಿಪಾದಿಸಿದ ಒಂದು ಚರಕ ನಮಗೆ ಕೇವಲ ಒಂದು ದೇಶಿ ಯಂತ್ರವಾಗಿರದೆ, ಅದು ಭಾರತದ ಗ್ರಾಮ ಸಮುದಾಯದ ಅನ್ನದ ಬಟ್ಟಲಾಗಿ ಕಾಣುತ್ತಿದೆ. ಮೇಲುಕೋಟೆಯ ಖಾದಿ ಘಟಕದಲ್ಲಿ ಮಾತ್ರವಲ್ಲದೆ, ಊರಿನಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮನೆಗಳಲ್ಲಿ ಮಹಿಳೆಯರು ಚರಕದಿಂದ ತೆಗೆದ ನೂಲನ್ನು ಸಣ್ಣ ಸಣ್ಣ ಉಂಡೆಗಳಾಗಿ ಸುತ್ತಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಕೆಲವು ವಯಸ್ಸಾದ ಅನಕ್ಷರಸ್ತ ವೃದ್ಧರು ನೂಲಿಗೆ ಬಣ್ಣ ಹಾಕುವುದು ಮತ್ತು ಅದನ್ನು ಒಣಗಿಸುವುದರಲ್ಲಿ ತೊಡಗಿದರೆ, ಸಿದ್ಧವಾದ ಸೀರೆಗಳಿಗೆ ಕಸೂತಿ ಹಾಕುವಲ್ಲಿ ಮಹಿಳೆಯರು ಹಾಗೂ ಖಾದಿ ಸಿದ್ಧ ಉಡುಪುಗಳನ್ನು ತಯಾರಿಸುವಲ್ಲಿ ಯುವತಿಯರು ನಿರತರಾಗಿದ್ದರು. ಒಂದು ಚರಕವು ಹಸಿವು, ಬಡತನವನ್ನು ಹೋಗಲಾಡಿಸುವುದಕ್ಕೆ ಹೇಗೆ ಉಪಯೋಗವಾಗಬಲ್ಲದು ಎಂಬುದನ್ನು ನಾವು ಖಾದಿ ಘಟಕಗಳಲ್ಲಿ ಅರಿಯಬಹುದು.

ಭಾರತದಲ್ಲಿ ಕೃಷಿ ರಂಗದ ನಂತರ ಅತಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಯಾಗಿರುವುದು  ಗುಡಿ ಕೈಗಾರಿಕೆಗಳಲ್ಲಿ ಮಾತ್ರ. ಆದರೆ, ಜಾಗತೀಕರಣದ ಯುಗದಲ್ಲಿ ಬಳಸಿ ಬಿಸಾಡುವ ಸಂಸ್ಕøತಿಯಲ್ಲಿ ತೇಲಿ ಮುಳಗುತ್ತಿರುವ ಜನರಿಗೆ ಮತ್ತು ಜನಪ್ರತಿನಿಧಿಗಳ ಪಾಲಿಗೆ ನಗರಗಳು ಅಕ್ಷಯ ಪಾತ್ರೆಯಂತೆ ಗೋಚರವಾಗುತ್ತಿವೆ. ನೆಲದ ಮೇಲಿನ ನರಕಗಳಂತಿರುವ ನಗರಗಳ ಭ್ರಮೆಯನ್ನು ಯುವಜನರ ಎದೆಯಿಂದ ಕಳಚಿ ಹಳ್ಳಿಗಳಲ್ಲಿಯೂ ಸಹ ಗಾಂಧೀಜಿ ರೂಪಿಸಿದ ಚಿಂತನೆಗಳ ಮಾದರಿಯಲ್ಲಿ ಸರಳವಾಗಿ ನಾವು ಬದುಕಬಹುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ. ನಿಟ್ಟಿನಲ್ಲಿ ಖ್ಯಾತ ಪತ್ರಕರ್ತೆ ಶ್ರೀಮತಿ ರಜನಿ ಭಕ್ಷಿಯವರು ಬರೆದಬಾಪು ಕುಟಿಎಂಬ ಇಂಗ್ಲೀಷ್ ಕೃತಿ ನಮ್ಮ ಪಾಲಿಗೆ ಗಾಂಧೀಜಿ ಸಂವಿಧಾನದಂತಿದೆ. ಗಾಂಧೀಜಿಯವರು ರೂಪಿಸಿದ ಗ್ರಾಮಭಾರತದ ಮಾದರಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾದವರ ಕಥನಗಳು ಕೃತಿಯಲ್ಲಿ ದಾಖಲಾಗಿವೆ.

( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)

No comments:

Post a Comment