Friday, 5 January 2018

ರಜನಿ ರಾಜಕೀಯ ಪ್ರವೇಶ ಮತ್ತು ಕಣ್ಣ ಮುಂದಿನ ವಾಸ್ತವ


ತಮಿಳು ಚಿತ್ರ ರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ ರಜನಿಕಾಂತ್ 2017 ವರ್ಷದ ಕೊನೆಯ ದಿನದಂದು ರಾಜಕೀಯ ಪ್ರವೇಶ ಮಾಡುವುದಾಗಿ ಅಧಿಕೃತವಾಗಿ ಘೋಷಿಸುವುದರ ಮೂಲಕ ಅಲ್ಲಿನ ರಾಜಕೀಯದಲ್ಲಿ ಸಣ್ಣ ಸಂಚಲನವನ್ನುಂಟು ಮಾಡಿದ್ದಾರೆ. ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ಮತ್ತು ಅವರ ಕಡುವೈರಿ ಎಂ.P್ಪರುಣಾನಿಧಿಯವರ ವೃದ್ಧಾಪ್ಯದಿಂದಾಗಿ ತಮಿಳುನಾಡಿನ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಶೂನ್ಯವನ್ನು ತುಂಬಲು ಬಹುತೇಕ ಚಿತ್ರನಟರು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮತ್ತೊಬ್ಬ ಜನಪ್ರಿಯ ನಟ ಕಮಲ್ ಹಾಸನ್ ಕೂಡ ತಮ್ಮ  ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡುವುದರ ಮೂಲಕ  ಈಗಾಗಲೇ ಸಕ್ರಿಯವಾಗಿದ್ದಾರೆತಮಿಳುನಾಡಿನ ರಾಜಕೀಯದಲ್ಲಿ ಇದು ಹೊಸ ವಿದ್ಯಾಮಾನವೇನಲ್ಲ. ಇಬ್ಬರು ಜನಪ್ರಿಯ ನಟರಿಗಿಂತ ಮುನ್ನ 2011 ರಲ್ಲಿ ಹಿಂದೆ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ( ಎಂ.ಡಿ.ಎಂ.ಕೆ) ವಿಜಯಕಾಂತ್ ಎಂಬ ನಟ ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಪಕ್ಷದ ಮೈತ್ರಿಯಿಂದಾಗಿ ಇಪ್ಪತ್ತೊಂಬತ್ತು  ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ( 2016 ರಲ್ಲಿಮೈತ್ರಿ ಕಡಿದುಕೊಂಡ ಕಾರಣಕ್ಕಾಗಿ ತಾವು ಠೇವಣಿ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಪಕ್ಷ ಒಂದು ಸ್ಥಾನವನ್ನು ಗೆಲ್ಲಲಾರದೆ ಇತಿಹಾಸದ ಕಸದ ಬುಟ್ಟಿ ಸೇರಿದ ವಾಸ್ತವ ಇದೀಗ ನಮ್ಮ ಮುಂದಿದೆ. ಇನ್ನು ಅಲ್ಲಿನ ಚಿತ್ರರಂಗದ ಶರತ್ ಕುಮಾರ್, ಸತ್ಯರಾಜ್, ವಡಿವೇಲು ಮುಂತಾದ ನಟರು ಕೆಲವು ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ಬೆಳೆವಣಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರುವ ಹಾಗೂ ಕಮಲ್ ಹಾಸನ್ ಅವರ ಹಿರಿಯ ಸಹೋದರ ಮತ್ತು ತಮಿಳು ಚಿತ್ರರಂಗದ ಗೌರವಾನ್ವಿತ ಹಿರಿಯ ನಟರಲ್ಲಿ ಒಬ್ಬರಾಗಿರುವ ಚಾರುಹಾಸನ್ ( ಇವರು ನಟಿ ಸುಹಾಸಿನಿ ಅವರ ತಂದೆ ಹಾಗೂ ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಸಿನಿಮಾದಲ್ಲಿ ತಬರನ ಪಾತ್ರವಹಿಸಿದವರು) ಮೂರು ತಿಂಗಳ ಹಿಂದೆ ಚೆನ್ನೈ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ  ರಜನಿ ಮತ್ತು ಕಮಲ್ ಇಬ್ಬರೂ ಸೇರಿ ತಮಿಳು ನಾಡಿನ ಮತದಾರರಲ್ಲಿ ಶೇಕಡ ಐದರಷ್ಟು ಮತವನ್ನು ಪಡೆಯಲಾರರು ಎಂಬ ಕಟುವಾದ ಸತ್ಯದ ಮಾತುಗಳನ್ನು ಆಡಿದ್ದರು.
ಚಾರುಹಾಸನ್ ಆಡಿದ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಇತ್ತೀಚೆಗೆ ನಡೆದ ಚೆನ್ನೈ ನಗರದ ರಾಧಕೃಷ್ಣ ನಗರದ ಉಪಚುನಾವಣೆಯ ಫಲಿತಾಶವನ್ನು ವಿಶ್ಲೇಷಿಸಿದರೆ, ಸತ್ಯ ಏನೆಂದು ನಮಗೆ ಗೋಚರವಾಗುತ್ತದೆ. ಜಯಲಲಿತಾ ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಆಡಳಿತಾರೂಢ ಅಣ್ಣಾ ಡಿ.ಎಂ.ಕೆ. ಮತ್ತು ಪ್ರಬಲ ಪ್ರತಿಪಕ್ಷವಾದ ಡಿ.ಎಂ.ಕೆ. ಪಕ್ಷದ ಅಭ್ಯರ್ಥಿಗಳನ್ನು ಹಿಂದಿಕ್ಕಿ ಈಗ ಜೈಲು ಸೇರಿರುವ ಶಶಿಕಲಾ ಅವರ ಸಂಬಂಧಿ ಟಿ.ವಿ.ದಿನಕರನ್ ಎಂಬಾತ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸುವುದರ ಮೂಲಕ ಭವಿಷ್ಯದ ತಮಿಳುನಾಡು ರಾಜಕೀಯ ದುರಂತದ ಬಗ್ಗೆ ಮುನ್ನುಡಿ ಬರೆದಿದ್ದಾನೆ. ಚುನಾವಣೆಯು ಘೋಷಣೆಯಾಗುತ್ತಿದ್ದಂತೆ ಪ್ರತಿಯೊಂದು ಮತಕ್ಕೆ ಒಂದೂವರೆ ಸಾವಿರ ರೂಪಾಯಿನಿಂದ ಆರಂಭವಾಗಿ ಎರಡೂವರೆ ಸಾವಿರ ತಲುಪಿ ಅಂತಿಮವಾಗಿ ಭಾರತದ ಶೇರು ಮಾರುಕಟ್ಟೆಯ ಸೂಚ್ಯಂಕದಂತೆ ನಾಲ್ಕು ಸಾವಿರ ರೂಪಾಯಿಗೆ ತಲುಪಿತು. ಒಂದು ಕುಟುಂಬದಲ್ಲಿ ನಾಲ್ಕು ಅಥವಾ ಐದು ಮತಗಳಿರುವ ಬಡವರಿಗೆ ಇದು ಅನಿರೀಕ್ಷಿತವಾಗಿ ದೊರೆತ ಲಾಟರಿ ಬಹುಮಾನವಾಯಿತು. ಮತದಾರರ  ಎದುರು ತತ್ವ ಸಿದ್ಧಾಂತ, ಭವಿಷ್ಯದ ತಮಿಳು ಕುರಿತು ಗಂಟಲು ಶೋಷಿಸಿಕೊಂಡು ಹೊಡೆದ ಭಾಷಣಗಳೆಲ್ಲವೂ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ತೂರಿ ಹೋದವು. ಇಂತಹ ದಯನೀಯವಾದ ರಾಜಕೀಯ ಸ್ಥಿತಿಯಲ್ಲಿ ರಜನಿ ಅಥವಾ ಕಮಲ್ ಹಾಸನ್ ಇಂತಹವರು ಸಿನಿಮಾಗಳಲ್ಲಿ ಹೊಡೆಯುವ ಡೈಲಾಗ್ ರಾಜಕೀಯ ರಂಗದಲ್ಲಿ ಚಲಾವಣೆಗೆ ಬರುತ್ತವೆ ಎಂದು ನಿರೀಕ್ಷಿಸುವುದು ಅಥವಾ ನಂಬುದು ಮೂರ್ಖತನದ ಪರಮಾವಧಿ ಎಂದರೆ, ತಪ್ಪಾಗಲಾರದು.
ಕಳೆದ ಮೂರುವರೆ ದಶಕ ಭಾರತದ ರಾಜಕೀಯ ಮತ್ತು ಅದರೊಂದಿಗೆ ಬೆಸೆದುಕೊಂಡ ಚಿತ್ರರಂಗದ ನಟರ ಇತಿಹಾಸವನ್ನು ಗಮನಿಸಿದರೆ ಚಿತ್ರ ನಟರ ವೈಫಲ್ಯತೆ ಎದ್ದು ಕಾಣುತ್ತದೆ. ಮೊದಲಿಗೆ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ನಂತರ ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ಇಬ್ಬರು ನಟರು ಪಕ್ಷವನ್ನು ಸ್ಥಾಪಿಸಿ ಮುಖ್ಯಮಂತ್ರಿಯಾದ ಉದಾಹರಣೆಗಳು ನಮ್ಮಲ್ಲಿ ಇದೆಯಾದರೂ, ಅತ್ಯಂತ ಕೆಟ್ಟ ಆಡಳಿತ ನೀಡಿದ ದೋಷ ಇಬ್ಬರು ನಟರ ಬೆನ್ನಿಗೆ ಅಂಟಿಕೊಂಡಿದೆ. ಇವರಿಬ್ಬರಿಗೆ ಹೋಲಿಸಿದರೆ, ಇವರ ನಂತರ ಆಡಳಿತ ಚುಕ್ಕಾಣಿ ಹಿಡಿದ ತಮಿಳುನಾಡಿನ ಜಯಲಲಿತಾ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಒಳ್ಳೆಯ ಆಡಳಿತ ನೀಡಿದ್ದಾರೆ.

ತಮಿಳುನಾಡಿನಲ್ಲಿ ಎಂ.ಜಿ.ಆರ್ ಮತ್ತು ಆಂಧ್ರದಲ್ಲಿ ಎನ್.ಟಿ.ಆರ್. ಹಾಗೂ ಕರ್ನಾಟಕದಲ್ಲಿ  ರಾಜಕುಮಾರ್ ಇವುಗಳು ಕಾಲದಲ್ಲಿ ನಟಿಸಿದ ಸದಭಿರುಚಿಯ ಚಿತ್ರಗಳು, ಆಯ್ದುಕೊಂಡ ಕಥೆಗಳು ಇವುಗಳ ಮೂಲಕ ಕಾಲಘಟ್ಟದ ಜನಮಾನಸದಲ್ಲಿ ಆದರ್ಶ ನಾಯಕರು ಎಂಬ ನಂಬಿಕೆಯೊಂದು ಬೆಳೆದು ಬಂದಿತ್ತು. ಬಹುತೇಕ ನನ್ನ ತಲೆಮಾರಿನ ಜನ ಗಂಡು ಹೆಣ್ಣು ಎಂಬ ಬೇಧ ಭಾವವಿಲ್ಲದೆ ನಾಯಕರಲ್ಲಿ ಒಬ್ಬ ಶ್ರೀರಾಮನನ್ನೊ ಅಥವಾ ಒಬ್ಬ ಸತ್ಯ ಹರಿಶ್ಚಂದ್ರನನ್ನು ಕಂಡು ಸಂಭ್ರಮಿಸಿದ್ದುಂಟು. ಕಾಲ ಬದಲಾಗಿರುವ ದಿನಮಾನಗಳಲ್ಲಿ ಚಿತ್ರ ನಟರಲ್ಲಿ ಆದರ್ಶ ನಾಯಕನನ್ನು ಕಾಣುವುದು ಮೂರ್ಖತನವೆಂಬುವುದು ಆಧುನಿಕ ಯುವ ತಲೆಮಾರಿಗೆ ಅರ್ಥವಾಗಿದೆ. ಅವರ ಪಾಲಿಗೆ ಇವರೆಲ್ಲರೂ ಮನರಂಜನೆಯ ಸರಕುಗಳು ಮಾತ್ರ. ಇಂತಹ ನಿಜಸ್ಥಿತಿಯಲ್ಲಿ ವರ್ತಮಾನ ಜಗತ್ತಿನೊಂದಿಗೆ ಎಂದಿಗೂ ಒಡನಾಡದೆ ತಮ್ಮದೇ ಆದ ಭ್ರಮಾ ಲೋಕದಲ್ಲಿರುವ ಚಿತ್ರನಟರಿಗೆ  ರಾಜಕೀಯ ಪ್ರವೇಶ ಮಾಡಿದ ನಂತರ ವಾಸ್ತವ  ಅವರಿಗೆ ಅರ್ಥವಾಗುತ್ತಿದೆ. 2008 ರಲ್ಲಿ ನೆರೆಯ ಆಚಿಧ್ರಪ್ರದೇಶದಲ್ಲಿ ಮೇಗಾಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದ ಚಿರಂಜಿವಿ ಎಂಬ ನಟ ಇಂತಹದ್ದೇ ಕಸರತ್ತು ನಡೆಸಿ, ಅಂತಿಮವಾಗಿ ತನ್ನ ಪ್ರಜಾರಾಜ್ಯ ಎಂಬ ಪಕ್ಷವನ್ನು ಕಾಂಗ್ರೇಸ್ ಪಕ್ಷದಲ್ಲಿ ವಿಲೀನಗೊಳಿಸಿ ನಗಣ್ಯರಾದರು.
ಕೆಲವು ರಾಜಕೀಯ ಪಕ್ಷಗಳ ಬಾಲಂಗೋಚಿಯನ್ನು ಹಿಡಿದು ರಾಜ್ಯ ಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿದ್ದ ಅಥವಾ ಆಗಿರುವ ಚಿತ್ರನಟರ ಪಟ್ಟಿ ದೊಡ್ಡದಿದೆ. ಅದು ರಾಜೀವ್ ಗಾಂಧಿ ಅವಧಿಯ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಸುನೀಲ್ ದತ್, ರಾಜಬಬ್ಬರ್, ವಿನೋದ್ ಖನ್ನಾ, ರೇಖಾ, ಹೇಮಾಮಾಲಿನಿ, ಅನುಪಮ್ ಖೇರ್, ಗೋವಿಂದ , ಪರೇಶ್ ರಾವಲ್, ಹೀಗೆ ಮುಂದುವರಿದು ನಮ್ಮ ಕನ್ನಡದ ರಮ್ಯ, ಜಯಮಾಲಾ, ತಾರಾ ಹಾಗೂ ಉಮಾಶ್ರಿ, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು ಹೀಗೆ ಮುಂದುವರಿಯುತ್ತದೆ. ಇವರ ಸಾಧನೆಗಳೆನು? ಎಂದು ನೋಡಿದರೆ, ಇವರೆಲ್ಲರೂ ಆಯಾ ಪಕ್ಷಗಳ ಪ್ರದರ್ಶನದ ಬೊಂಬೆಗಳಾದರೆ ಹೊರತು; ರಾಜಕೀಯ ಕ್ಷೇತ್ರದಲ್ಲಿ ಇವರ ಸಾಧನೆಗಳು ಶೂನ್ಯ.
ಸಧ್ಯದ ತಮಿಳುನಾಡಿನ ರಾಜಕೀಯದಲ್ಲಿ ಉಂಟಾಗಿರುವ ಶೂನ್ಯವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದ ಎಲ್ಲಾ ರಾಷ್ಟ್ರ ಹಾಗೂ ಪ್ರಾದೇಶಿಕ ಪಕ್ಷಗಳಿಗೂ ಆವರಿಸಿದೆ. ಎರಡನೆಯ ಹಂತದ ನಾಯಕರನ್ನು ರಾಷ್ಟ್ರ ಮಟ್ಟದ ಪಕ್ಷಗಳಲ್ಲಿ ಬೆಳಸಲಾಗುತ್ತಿಲ್ಲ. ಇನ್ನು ಪ್ರಾದೇಶಿಕ ಪಕ್ಷಗಳೆಂಬ ಪಾಳೇಗಾರರ ಪಕ್ಷಗಳು ತಮ್ಮ ತಮ್ಮ ಕುಟುಂಬಗಳ ವಾರಸುದಾರರ ಹಿಡಿತದಲ್ಲಿವೆ. ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ ಭಾರತದ ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಸ್ಥಿತಿಯನ್ನು ಗಮನಿಸಿದಾಗ ಇದು ಎಂದಿಗೂ ವಾಸಿಯಾಗದ ಉಲ್ಬಣಗೊಂಡಿರುವ ಕಾಯಿಲೆಯಂತೆ ಕಾಣುತ್ತಿದೆ. ಸಹಜವಾದ ಸಾವೊಂದೇ ಇದಕ್ಕೆ ನಿಜವಾದ  ಮದ್ದು. ನಾಗರೀಕತೆಗಳು ಅವಸಾನಗೊಂಡು ಮತ್ತೊಂದು   ಬೆಳೆಯುವಂತೆ  ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯೊಂದು ಬೆಳೆಯ ಬೇಕಿದೆ.
ಸ್ಥಿತಿಯಲ್ಲಿ ಜೊತೆಗೆ ತನ್ನ ಅರವತ್ತಮೂರನೆಯ ವಯಸ್ಸಿನಲ್ಲಿ ನಾನು ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತೇನೆ, ರಾಜಕೀಯಕ್ಕೆ ಅನುಭಾವವನ್ನು ಬೆಸೆಯುತ್ತೇನೆ ಎಂಬ ರಜನಿಯವರ ಮಾತುಗಳು ರಾಜಕೀಯ ಯೋಚನೆಗಳ ಕುರಿತಾಗಿ ಅವರ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತವೆ. ರಜನಿಯವರು ತಮಿಳುನಾಡು ರಾಜಕೀಯದಲ್ಲಿ ಆಟವನ್ನು ಕೆಡಿಸಬಲ್ಲವರೇ ಹೊರತುಪಂದ್ಯವನ್ನು ಗೆಲ್ಲಲಾರರು. ಸಿನಿಮಾ ನಟರ ವಿಷಯದಲ್ಲಿ ಆಂಧ್ರ ಮತ್ತು ತಮಿಳುನಾಡಿನ ಜನರಿಗಿಂತ ಹೆಚ್ಚು ಪ್ರಬುದ್ಧರಾಗಿದ್ದು ಯಾವುದೇ ಸಿನಕತನವಿಲ್ಲದೆ ಯೋಚಿಸಬಲ್ಲ ಕರ್ನಾಟಕದಲ್ಲಿ ಉಪೇಂದ್ರ ಎಂಬ ನಟ ಕೂಡ ರಾಜಕೀಯ ಪಕ್ಷ ಸ್ಥಾಪಿಸುವುದರ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯ ಜೋಕ್ ಒಂದು ಅಸ್ತಿತ್ವದಲ್ಲಿದೆ. ವಿವಾಹ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ ವಿಚಿತ್ರವಾಗಿ ವರ್ತಿಸುವ ವ್ಯಕ್ತಿಯನ್ನುಯಾರ್ಲಾ ಇವನು ಉಪೇಂದ್ರಾ?” ಎಂದು ಪ್ರಶ್ನಿಸುತ್ತಾರೆ. ಇದರರ್ಥ ತಿಕ್ಕಲುತನಕ್ಕೆ ಇನ್ನೊಂದು ಹೆಸರು ಉಪೇಂದ್ರ ಎಂಬಂತಾಗಿದೆ.
ರಾಜಕೀಯ ಪಕ್ಷ ಘೋಷಣೆ ಮಾಡಿದ ದಿನ ಮನೆಯಿಂದ ಬಂದು ಮಾಧ್ಯಮಗಳ ಕ್ಯಾಮರಾಗಳ ಎದುರು ಖಾಕಿ ಶರ್ಟ್ ಧರಿಸಿ ಕುಳಿತುಕೊಂಡು ನನ್ನದು ಬಡವರ ಪಕ್ಷ ಎಂದು ಉಪೇಂದ್ರ ಘೋಷಿಸಿದ ತಕ್ಷಣ, ನಟ ಬೆಳ್ಳಿ ತೆರೆಗೆ ಮೀಸಲಾಗಿದ್ದ ತನ್ನ ತಿಕ್ಕಲುತನಗಳನ್ನು ಬೀದಿಗೆ ವರ್ಗಾಯಿಸುತ್ತಿದ್ದಾನೆ ಎಂಬುದು ಮನವರಿಕೆಯಾಯಿತು. ಉಪೇಂದ್ರ ವ್ಯಯಕ್ತಿಕವಾಗಿ ಬುದ್ಧಿವಂತ ಮತ್ತು ಪ್ರಾಮಾಣಿಕವಾಗಿ ಇರಲು ಬಯಸುವ ವ್ಯಕ್ತಿ. ಹಾಗಾಗಿ ಈತ  ರಾಜ್ಯದ 224 ವಿಧಾನ ಸಭೆಯ ಕ್ಷೇತ್ರಗಳನ್ನು ಗೆಲ್ಲುವ  ಪ್ರಯತ್ನವನ್ನು ತ್ಯೆಜಿಸಿ ತಾನು ವಾಸಿಸುತ್ತಿರುವ ಬೆಂಗಳೂರು ಮಹಾ ನಗರ ಪಾಲಿಕೆಯÀಲ್ಲಿ ನಾಲ್ಕು ವಾರ್ಡ್ಗಳನ್ನು ಗೆಲ್ಲುವ ಬಗ್ಗೆ ಯೋಚಿಸುವುದು ಒಳಿತು.

(ಕರಾವಳಿ ಮುಂಜಾವು ದಿನ ಪತ್ರಿಕೆಯ “ಜಗದಗಲ” ಅಂಕಣಕ್ಕೆ ಬರೆದ ಲೇಖನ)

No comments:

Post a Comment