ಭಾನುವಾರ, ಮೇ 18, 2014

ಜಿಮ್ ಕಾರ್ಬೆಟ್ ಎಂಬ ಕರುಣಾಳು



ಅದು 1985 ರ ಚಳಿಗಾಲ ಕಳೆದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಆರಂಭದ ಒಂದು ದಿನ. ವಿಶ್ವ ವಿಖ್ಯಾತ ಶಿಕಾರಿಕಾರನೆಂದು ಪ್ರಸಿದ್ಧಿಯಾಗಿದ್ದ ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಛಾನಲ್‍ನ ತಂಡ, ಉತ್ತರಕಾಂಡದ ನೈನಿತಾಲ್ ಗಿರಿಧಾಮದ ಸಮೀಪವಿರುವ  ಚೋಟಿ ಹಲ್ದಾನಿಯ ಕಾರ್ಬೆಟ್ ನಿವಾಸದಲ್ಲಿ ಬೀಡು ಬಿಟ್ಟು ಆತನ ಜೀವನ ಕಥೆ ಕುರಿತಂತೆ ಚಿತ್ರೀಕರಣ ಮಾಡುತ್ತಿತ್ತು.
ಕಾರ್ಬೆಟ್‍ನ ಶಿಕಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಕಾರಿಯ ವೇಳೆ 30 ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಎಂಬ ಪಾತ್ರಗಳನ್ನು ಸಾಕ್ಷ್ಯ ಚಿತ್ರಕ್ಕಾಗಿ ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‍ನ ಪಾತ್ರಕ್ಕಾಗಿ ಆತನನ್ನು ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯೊಬ್ಬನನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಕಾರ್ಬೆಟ್ ನ ಆತ್ಮಕಥನ ಬರೆದಿದ್ದ ಬ್ರಿಟನ್ನಿನ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.
ಚಿತ್ರೀಕರಣದ ವೇಳೆ ಸ್ಥಳೀಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಞರು ಮತ್ತು  ಸಹಾಯಕರನ್ನು ಸಹ ಸ್ಥಳಕ್ಕೆ ಕರೆಸಲಾಗಿತ್ತು. ಅದೊಂದು ದಿನ  ಚಿತ್ರೀಕರಣ ನಡೆಯುತ್ತಿದ್ದ  ಸ್ಥಳÀಕ್ಕೆ ಬೆಳಗಿನ ವೇಳೆ ಸ್ಥಳೀಯರು ಬಂದು, ದೂರದ ಊರಿನಿಂದ ಕಾರ್ಬೆಟ್‍ನನ್ನು ನೋಡಲು ವೃದ್ಧನೊಬ್ಬ ಕಾಲ್ನಡಿಗೆಯಲ್ಲಿ ಬಂದಿದ್ದಾನೆ ಎಂದರು. ಚಿತ್ರದ ತಂಡದ ಸದಸ್ಯರುಬಹುಷಃ ಕಾರ್ಬೆಟ್‍ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊಟ್ಟರು.
ಆ ವೃದ್ಧ ಕಲದೊಂಗಿ ಮತ್ತು ಚೋಟಿ ಹಲ್ದಾನಿಯಿಂದ ಸುಮಾರು 90 ಕಿಲೋಮೀಟರ್ ದೂರವಿರುವ ಹಳ್ಳಿಯಿಂದಗುಡ್ಡಗಾಡು ಪ್ರದೇಶವನ್ನು ಹತ್ತಿ ಇಳಿದು, ಮರದ ಟೊಂಗೆಯೊಂದನ್ನು ಊರುಗೋಲಾಗಿ ಮಾಡಿಕೊಂಡು ತನ್ನ ಮೊಮ್ಮಕ್ಕಳ ಜೊತೆ ನಾಲ್ಕು ದಿನಗಳ ಕಾಲ ನಡೆದು ಕಲದೊಂಗಿ ಮತ್ತು ಚೋಟಿ ಹಲ್ದಾನಿ ಗ್ರಾಮಗಳನ್ನು ತಲುಪಿದ್ದ. 

ಗೇಟಿನ ಹೊರ ಭಾಗದಲ್ಲಿ ನಿಂತಿದ್ದ ಆತನಿಗೆ ಕಾರ್ಬೆಟ್ ಪಾತ್ರಧಾರಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಯಿತು. ಮನೆಯ ವರಾಂಡದಲ್ಲಿ ನಿಂತಿದ್ದ ಆ ವೃದ್ಧ, ಪಾತ್ರಧಾರಿಯತ್ತ ನಿಧಾನವಾಗಿ ಮೈ ಬಗ್ಗಿಸಿ ನಡೆದು ಬಂದು, ಅವನ ಪಾದದ ಮೇಲೆ ಕಾಡಿನಿಂದ ಕಿತ್ತು ತಂದಿದ್ದ ಹೂವುಗಳನ್ನು ಹಾಕಿ ತನ್ನ ಹಣೆಯನ್ನು ಅವನ ಪಾದಗಳಿಗೆ ಒತ್ತಿ ತನ್ನ ಕಣ್ಣೀರಿನಿಂದ ಪಾದಗÀಳನ್ನು ತೋಯಿಸಿಬಿಟ್ಟ. ಇಡೀ ದೃಶ್ಯವನ್ನ ಅಚ್ಚರಿಯಿಂದ  ನೋಡುತ್ತಿದ್ದ ಬಿ.ಬಿ.ಸಿ. ಚಿತ್ರ ತಂಡಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಿಧಾನವಾಗಿ ಸಾವರಿಸಿಕೊಂಡ ಆ ವೃದ್ಧ ಎದ್ದು ನಿಂತು  ಪಾತ್ರಧಾರಿಗೆ ಕೈ ಮುಗಿಯುತ್ತಾ  ತನ್ನ ಗಢವಾಲ್ ಭಾಷೆಯಲ್ಲಿ “ಸಾಬ್ ನಮ್ಮನ್ನು ಇಷ್ಟು ವರ್ಷ ಅನಾಥರನ್ನಾಗಿ ಮಾಡಿ ಎಲ್ಲಿ ಹೋಗಿದ್ದಿರಿ? ದಯಮಾಡಿ ನೀವು ಮತ್ತೇ ನಮ್ಮನ್ನು ತೊರೆದು ಹೋಗಬೇಡಿ ಎಂದು ಅಂಗಲಾಚತೊಡಗಿದ.” ಪರಿಸ್ಥಿತಿಯನ್ನು ಗ್ರಹಿಸಿದ ಚಿತ್ರ ತಂಡ, ಮುಂಬೈ ಸಹಾಯಕರ ಮೂಲಕ ಈ ವ್ಯಕ್ತಿ ಕಾರ್ಬೆಟ್ ಅಲ್ಲ, ಅವರು ತೀರಿ ಹೋಗಿ 30 ವರ್ಷಗಳಾದವು, ಅವರ ಬಗ್ಗೆ ಚಿತ್ರ ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿ, ಆ ವೃದ್ಧನಿಗೆ ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿಕೊಡಲು ಅರ್ಧ ದಿನ ಸೆಣಸಾಡಬೇಕಾಯಿತು. ಇದು ಕಾರ್ಬೆಟ್ ಕುರಿತಾಗಿ ಅಲ್ಲಿನ ಜನತೆ ಹೊಂದಿದ್ದ ಅವಿನಾಭಾವ ಸಂಬಂಧಕ್ಕೆ ಒಂದು ಉದಾಹರಣೆ ಅಷ್ಟೇ.
ಜಗತ್ತಿನ ವನ್ಯಜೀವಿಗಳ ಲೋಕದಲ್ಲಿ  ಜಿಮ್‍ಕಾರ್ಬೆಟ್ ಎಂಬ ಹೆಸರು ಜಗದ್ವಿಖ್ಯಾತ ಮಾತ್ರವಲ್ಲದೆ, ಅಜರಾಮರವಾಗಿ ಉಳಿದುಹೋಗಿದೆ. ಭಾರತದಲ್ಲಿ ಹುಟ್ಟಿ ಬೆಳೆದು, ಸ್ಥಳಿಯ ಭಾಷೆ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದ ಜಿಮ್‍ಕಾರ್ಬೆಟ್  ಹಿಮಾಲಯದ ಪರಿಸರದಲ್ಲಿ ಅನೇಕ  ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಬೇಟೆಯಾಡುವುದರ ಮೂಲಕ 1930 ಮತ್ತು 40 ರ ದಶಕದಲ್ಲಿ ವಿಶ್ವಪ್ರಸಿದ್ದನಾದ. 1948 ರಲ್ಲಿ ಭಾರತವನ್ನು ತ್ಯೆಜಿಸಿ, ಕೀನ್ಯಾದಲ್ಲಿ ನೆಲೆಸಿದ್ದ   ಜಿಮ್ ಕಾರ್ಬೆಟ್, 1955ರಲ್ಲಿ  ನಿಧನ ಹೊಂದಿದಾಗ, ಟೈಮ್ಸ್ ವಾರಪತ್ರಿಕೆ ಮುಖಪುಟದಲ್ಲಿ ಆತನ ಚಿತ್ರವನ್ನು ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಭಾರತ ಸರ್ಕಾರ ಅವನು ಹುಟ್ಟಿ ಬೆಳೆದು ನಡೆದಾಡಿದ  ಉತ್ತರಕಾಂಡ್ ರಾಜ್ಯದ ರಾಮನಗರ ಪಟ್ಟಣ ಸಮೀಪದ ಚೋಟಿ ಹಲ್ದಾನಿ ಹಳ್ಳಿಯ  ಸುತ್ತಮುತ್ತಲಿನ ಹದಿನೆಂಟು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿ  ಅರಣ್ಯಪ್ರದೇಶವನ್ನು “ ಜಿಮ್ ಕಾರ್ಬೆಟ್ ಅಭಯಾರಣ್ಯ” ಎಂದು ಘೊಷಿಸಿತು.


ಇಂಗ್ಲೆಂಡ್ ಮೂಲದ ಕುಟುಂಬವೊಂದರಲ್ಲಿ ಉತ್ತರಕಾಂಡದ ನೈನಿತಾಲ್ ಗಿರಿಧಾಮದಲ್ಲಿ 1875 ರಲ್ಲಿ ಜನಿಸಿದ ಜಿಮ್ ಕಾರ್ಬೆಟ್ ತನ್ನ ಇಡೀ ಬದುಕನ್ನು ಅಪ್ಪಟ ಭಾರತೀಯನಂತೆ ಬದುಕಿದ ಅಪರೂಪದ ವ್ಯಕ್ತಿ. ಇಡೀ ಜಗತ್ತು ಆತನನ್ನು ಅತ್ತ್ಯುತ್ತಮ ಬೇಟೆಗಾರ ಎಂದು ಮಾತ್ರ ಗುರುತಿಸಿತು. ಆದರೆ, ಅದಕ್ಕಿಂತ ಹೆಚ್ಚಾಗಿ ಅವನೊಬ್ಬಳಗೊಬ್ಬ  ಅಪ್ರತಿಮ ನಿಸರ್ಗದ ಆರಾಧಕನಿದ್ದ. ಅರಣ್ಯ ಮತ್ತು ಅಲ್ಲಿನ ಜೀವಜಾಲಗಳ ಚಟುವಟಿಕೆಗಳ ಕುರಿತಂತೆ ಜಿಮ್ ಕಾರ್ಬೆಟ್‍ಗಿದ್ದ ಅಳವಾದ ಜ್ಞಾನ ವಿಸ್ಮಯಪಡುವಂತಿತ್ತು. ನಿಸರ್ಗದ ಚಟುವಟಿಕೆಯ ಎಲ್ಲಾ ಸೂಕ್ಷ್ಮತೆಗಳನ್ನು ಹಾಗೂ ಅದರ ಭಾಷೆಯನ್ನು  ಬಾಲ್ಯದಿಂದಲೆ ಅರಿತಿದ್ದ ಜಿಮ್ ಕಾರ್ಬೆಟ್, ಪ್ರಾಣಿ, ಪಕ್ಷಿಗಳ ದ್ವನಿಯನ್ನು ಕರಾರುವಕ್ಕಾಗಿ ಅನುಕರಣೆ ಮಾಡುತ್ತಿದ್ದ. ಅಪಾಯಕಾರಿ ಪ್ರಾಣಿಗಳು ಮನುಷ್ಯನ ಹತ್ತಿರ ಸುಳಿದಾಗ, ಯಾವ ಯಾವ ಪ್ರಾಣಿಗಳು ಮತ್ತು ಪಕ್ಷಿಗಳು ಹೇಗೆ ಮುನ್ಸೂಚನೆಯನ್ನು ಕೊಡಬಲ್ಲವು ಎಂಬುದನ್ನು ಸಹ ಅರಿತಿದ್ದ. ಅರಣ್ಯದಲ್ಲಿ ದಿಕ್ಕು ತಪ್ಪಿದಾಗ, ಯಾವ ಹೂವುಗಳು ಸೂರ್ಯನಿಗೆ ಮುಖಮಾಡಿ ನಿಲ್ಲುತ್ತವೆ ಎಂಬುದರ ಮೇಲೆ ದಿಕ್ಕುಗಳನ್ನು ಗುರುತಿಸುವ ಪರಿಜ್ಞಾನ ಆತನಿಗಿತ್ತು. ಅಷ್ಟೇ ಅಲ್ಲದೆ, ಸೊಳ್ಳೆ ಮತ್ತು ಜಿಗಣೆಗಳ ಕಾಟದಿಂದ ತಪ್ಪಿಸಿಕೊಳ್ಳಲು, ಯಾವ  ಗಿಡದ ಸೊಪ್ಪಿನ ರಸವನ್ನು ದೇಹಕ್ಕೆ ಲೇಪಿಸಿಕೊಳ್ಳಬೇಕು, ಹಸಿವು, ನೀರಡಿಕೆಗೆ ಎಂತಹÀ ಗೆಡ್ಡೆ ಗೆಣಸುಗಳನ್ನು ತಿನ್ನಬೇಕು ಎಂಬ ಅಸಾಧಾರಣ ಜ್ಞಾನವೂ ಕಾರ್ಬೆಟ್‍ಗಿತ್ತು. ಈ ಕಾರಣಕ್ಕಾಗಿ 1944-45 ರ ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತದಲ್ಲಿದ್ದ ಬ್ರಿಟೀಷ್ ಸರ್ಕಾರ ಆತನನ್ನು ಸೇನೆಯ ಮೇಜರ್ ಹುದ್ದೆಗೆ ನೇಮಕ ಮಾಡಿಕೊಂಡಿತ್ತು. ಜಪಾನ್ ಸೈನಿಕರ ವಿರುದ್ದ ಭಾರತದ ಸೈನಿಕರು ಬ್ರಿಟೀಷ್ ಸರ್ಕಾರದ ಪರವಾಗಿ ಬರ್ಮಾದ ಅರಣ್ಯ ಪ್ರದೇಶದಲ್ಲಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶಕನಾಗಿ ಅರಣ್ಯ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಖ್ಯಾತಿ ಜಿಮ್ ಕಾರ್ಬೆಟ್‍ನದು.
ಜಿಮ್ ಕಾರ್ಬೆಟ್ ನ ಈ ಎರಡು ಪ್ರತಿಭೆಗಳಿಗಿಂತ ಮಿಗಿಲಾಗಿ, ಭಾರತದ ಬಡವರ ಕುರಿತಂತೆ ಆತನಿಗಿದ್ದ ಪ್ರೀತಿ ಮತ್ತು ಅನುಕಂಪ ಹೊರಜಗತ್ತಿಗೆ ಅನಾವರಣಗೊಳ್ಳದೆ ಅನಾಮಿಕವಾಗಿ ಉಳಿದುಹೋಗಿದೆ. ಬಾಲ್ಯದ ಚಳಿಗಾಲದ ದಿನಗಳಲ್ಲಿ ತಾನು ವಾಸಿಸುತ್ತಿದ್ದ ಚೋಟಿ ಹಲ್ದಾನಿ ಹಳ್ಳಿಯ ಜನರೊಂದಿಗೆ ಉಂಟಾದ ನಿಕಟ ಸಂಪರ್ಕ, ಮುಂದೆ ಆತನ ಯವ್ವನದ ದಿನಗಳಲ್ಲಿ ರೈಲ್ವೆ ಇಲಾಖೆಯ ಉದ್ಯೋಗದಲ್ಲಿ ಇದ್ದಾಗ ಬಡವರನ್ನು ಅಪಾರವಾಗಿ ಪ್ರೀತಿಸುವಂತೆ ಮಾಡಿತು. ಸ್ಥಳಿಯ ಘಡ್ವಾಲ್ ಮತ್ತು ಹಿಂದಿ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುತ್ತಿದ್ದ ಜಿಮ್ ಕಾರ್ಬೆಟ್ ಯಾವಾಗಲೂ ಬ್ರಿಟೀಷ್ ಅಧಿಕಾರಿಗಳ ಜೊತೆ “ ಭಾರತದಲ್ಲಿ ಬಡತನವಿದೆ ನಿಜ ಆದರೆ ಇಲ್ಲಿನ ಬಡವರಲ್ಲಿ ಪ್ರಾಮಾಣಿಕತೆ ಮತ್ತು ಹೃದಯ ಶ್ರೀಮಂತಿಕೆ ಇದೆ” ಎಂದು ವಾದಿಸುತ್ತಿದ್ದ. ಆತನ ಹೃದಯ ಶ್ರೀಮಂತಿಕೆ ಎಂತಹದ್ದು ಎಂದರೆ, ಬ್ರಿಟೀಷ್ ಸರ್ಕಾರದಿಂದ ಚೋಟಿ ಹಲ್ದಾನಿಯ ಎರಡು ಸಾವಿರ ಎಕರೆ ಪ್ರದೇಶವನ್ನು ಎಕರೆಗೆ ಇಪ್ಪತ್ತು ರುಪಾಯಿನಂತೆ ಖರೀದಿಸಿ, ಅಲ್ಲಿನ ಜನರಿಗೆ ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಮನಾಗಿ ಹಂಚಿದ ವ್ಯಕ್ತಿತ್ವ ಕಾರ್ಬೆಟ್‍ನದು.
ನೈನಿತಾಲ್ ಎಂಬ ಗಿರಿಧಾಮದಲ್ಲಿ ಕಾರ್ಬೆಟ್ ಜನಿಸಿದರೂ ಕೂಡ ತನ್ನ ಬದುಕಿನುದ್ದಕ್ಕೂ ಅವನು ಹಚ್ಚಿಕೊಂಡದ್ದು, ಸ್ಥಳೀಯ ಜನರನ್ನು ಮತ್ತು ಅರಣ್ಯವನ್ನು ಮಾತ್ರ. ಅವನ ವ್ಯಕ್ತಿತ್ವಕ್ಕೆ ಭಾರತದಲ್ಲಿ ಉದಾಹರಣೆ ನೀಡಬಹುದಾದ ಇನ್ನೊಂದು ಜೀವವೆಂದರೆ, ಅದು ಕೊಲ್ಕತ್ತಾ ನಗರದ ಬದುಕಿ ಬಾಳಿ ದಂತಕಥೆಯಾಗಿ ಹೋದ ಮದರ್ ತೆರೆಸಾ ಮಾತ್ರ. ಅಂತಹ ಮಾತೃ ಹೃದಯ ಆತನದು.


ಕಾರ್ಬೆಟ್ ಕುಟುಂಬ ನೈನಿತಾಲ್‍ನಲ್ಲಿ ವಾಸವಿತ್ತಾದರೂ, ಚಳಿಗಾಲದಲ್ಲಿ ಅಲ್ಲಿನ ಶೀತಗಾಳಿ ತಡೆಯಲಾರದೆ ಗಿರಿಧಾಮದ ತಪ್ಪಲಿನಲ್ಲಿ ಇದ್ದ ಚೋಟಿ ಹಲ್ದಾನಿ ಮತ್ತು ಕಲದೊಂಗಿ ಎಂಬ ಹಳ್ಳಿಗಳ ನಡುವೆ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ಮನೆಯಲ್ಲಿ ವಾಸ ಮಾಡುತ್ತಿತ್ತು. ನೈನಿತಾಲ್‍ನ ವಿಶಾಲವಾದ ಬಂಗಲೆಯಲ್ಲಿ ( ಗಾರ್ನಿಹೌಸ್) ಬಾಲ್ಯ ಕಳೆದು ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ ಕಾರ್ಬೆಟ್ ಆಗಿನ ಕಾಲದಲ್ಲಿ ಸುಲಭವಾಗಿ ಬ್ರಿಟೀಷರಿಗೆ ದೊರೆಯುತಿದ್ದ ಸರ್ಕಾರದ ಉದ್ಯೋಗಕ್ಕೆ ಮನಸ್ಸು ಮಾಡದೆ, ಅರಣ್ಯದÀತ್ತ ಮುಖಮಾಡಿದ. ಶಿಕಾರಿ ಎಂಬುದು ಅವನ ಪಾಲಿಗೆ ಉಸಿರಿನಷ್ಟೇ ಪ್ರಿಯವಾಗಿತ್ತು. ಒಮ್ಮೆ  ತನ್ನ ಮಧ್ಯ ವಯಸ್ಸಿನಲ್ಲಿ  ಅರಿಯದೆ, ಎರಡು ಮರಿಗಳಿಗೆ ಹಾಲುಣಿಸುತ್ತಾ ಮಲಗಿದ್ದ ಹೆಣ್ಣು ಚಿರತೆಗೆ ಗುಂಡಿಟ್ಟು ಕೊಂದು ನಂತರ ಪಶ್ಚಾತಾಪ ಪಟ್ಟ. ಅಂದಿನಿಂದ ಶಿಕಾರಿಗೆ ತಿಲಾಂಜಲಿ ನೀಡಿದ. ಆದರೆ, ಹಳ್ಳಿಗರಿಗೆ ಶಾಪವಾಗುತ್ತಿದ್ದ ಹುಲಿ ಮತ್ತು ಚಿರತೆಗಳನ್ನು ಮಾತ್ರ ಸರ್ಕಾರಗಳ ಮತ್ತು ಹಳ್ಳಿಗರ ಮನವಿಯ ಮೇರೆಗೆ ಭೇಟೆಯಾಡಿ ಕೊಲ್ಲುತ್ತಿದ್ದ. ಇದಕ್ಕಾಗಿ ಅವನು ಯಾವ ಸಂಭಾವನೆಯನ್ನೂ ಪಡೆಯುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ನರ ಭಕ್ಷಕ ಪ್ರಾಣಿಗಳನ್ನು ಬೇಟೆಯಾಡಲು ಐದರಿಂದ ಹತ್ತು ಸಾವಿರ ಹಣವನ್ನು ಗೌರವ ಸಂಭಾವನೆಯಾಗಿ ಬ್ರಿಟೀಷ್ ಸರ್ಕಾರ ನೀಡುತ್ತಿತ್ತು. ಹೀಗೆ ಬಂದೂಕು ಬಿಟ್ಟು ಕ್ಯಾಮರಾ ಹಿಡಿದ ಕಾರ್ಬೆಟ್ ಜೀವನ ನಿರ್ವಹಣೆಗೆ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಮೆಲೆ ಕಾರ್ಮಿಕರನ್ನು ಒದಗಿಸುವ ಕಂಟ್ರಾಕ್ಟರ್ ಆಗಿ ನಂತ ರÉ್ರೈಲ್ವೆ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ. ಜೊತೆಗೆ ನೈನಿತಾಲ್ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ಸಾಮಾಗ್ರಿ ವ್ಯವಹಾರವನ್ನು ಗೆಳೆಯನ ಜೊತೆ ನಡೆಸುತ್ತಿದ್ದ.
ತನ್ನ ಜೀವಿತದ ಕಡೆಯವರೆಗೂ ಅವಿವಾಹಿತನಾಗಿ ಉಳಿದ ಕಾರ್ಬೆಟ್ ಗೆ ತನ್ನ sಸಹೋದರಿ ಮಾರ್ಗರೇಟ್ (ಮ್ಯಾಗಿ) ಎಂದರೆ ಪ್ರಾಣ ಹಾಗಾಗಿ ಆಕೆಯೂ ಕೂಡ ವಿವಾಹವಾಗದೆ ಜೀವನಪೂರ್ತಿ ತಮ್ಮನ ಜೊತೆ ಉಳಿದಳು. ಈ ಇಬ್ಬರೂ ತಮ್ಮ ಭವಿಷ್ಯದ ಬಗ್ಗೆ ಕರಾರುವಕ್ಕಾದ ಯೋಜನೆಗಳನ್ನು ರೂಪಿಸಿಕೊಂಡು ಮುಂದುವರಿಯುತ್ತಿದ್ದರು. ಹಣ ಉಳಿತಾಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಿದ್ದ ಅಕ್ಕ, ತಮ್ಮ ಇಬ್ಬರೂ  ಬಡವರ ಬಗ್ಗೆ ಮಾತ್ರ ತುಂಬಾ ಉಧಾರವಾಗಿ ನಡೆದುಕೊಳ್ಳುತಿದ್ದರು. ಅಂದಿನ ದಿನಗಳಲ್ಲಿ ಮಳೆ ಮತ್ತು ಚಳಿಗಾಲದಲ್ಲಿ ವಿಷಮಶೀತ ಜ್ವರದಿಂದ, ಮತ್ತು ಬೇಸಿಗೆಯಲ್ಲಿ ವಾಂತಿ ಬೇಧಿ, ಹಾವು ಮತ್ತು ಇನ್ನಿತರೆ ಅಪಾಯಕಾರಿ ಕ್ರಿಮಿ ಕೀಟಗಳು ಕಚ್ಚಿ ಜನ ಸಾಯುವುದು ಸಾಮಾನ್ಯವಾಗಿತ್ತು. ಕಾರ್ಬೆಟ್ ಕುಟುಂಬದಲ್ಲಿ ಅವನ ಮಲ ಸಹೋದರ ವೈದ್ಯನಾಗಿದ್ದುದು, ಜೊತೆಗೆ ಅವನ ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕುರಿತಾದ ಅಪಾರ ಪುಸ್ತಕಗಳಿದ್ದ ಕಾರಣ ಅವರ ಬಳಿ ಸದಾ ಎಲ್ಲಾ ಬಗೆಯ ಔಷಧಗಳು ದೊರೆಯುತ್ತಿದ್ದವು. ಇದು ಅಲ್ಲಿನ ಸಾಮಾನ್ಯ ಜನತೆಯ ಪಾಲಿಗೆ ಸಂಜೀವಿನಿಯಾಗಿತ್ತು.
ಕಾರ್ಬೆಟ್‍ನ ತಂದೆ, ತಾಯಿಯ ಮರಣಾನಂತರ, ಸಹೋದರಿಯರು ಮದುವೆಯಾಗಿ, ಇನ್ನಿತರೆ ಸಹೋದರರು ಉದ್ಯೋಗ ಅರಸಿ ವಿದೇಶಕ್ಕೆ ಹೊರಟುಹೋದ ಮೇಲೆ, ನೈನಿತಾಲ್‍ನ ಗಾರ್ನಿಹೌಸ್ ಮನೆ ಮತ್ತು ಕಲದೊಂಗಿ ಹಾಗೂ ಚೋಟಿ ಹಲ್ದಾನಿ ನಡುವೆ ಇದ್ದ ಬಂಗಲೆಗಳು ಅವಿವಾಹಿತರಾಗಿ  ಭಾರತದಲ್ಲಿ  ನೆಲೆಸಿದ ಕಾರ್ಬೆಟ್ ಹಾಗೂ ಅವನ ಅಕ್ಕ ಮಾರ್ಗರೇಟ್ ಳ ಪಾಲಿಗೆ ಬಂದಿದ್ದವು. ಹಾಗಾಗಿ ಈ ಎರಡು ಮನೆಗಳು ಹಳ್ಳಿಗರ ಪಾಲಿಗೆ ಆಸ್ಪತ್ರೆಗಳಾದವು. ಹಾವು ಕಡಿತ ಅಥವಾ ವಾಂತಿ ಬೇಧಿ, ಇಲ್ಲವೆ ಜ್ವರ ಹೀಗೆ ಚಿಕಿತ್ಸೆ ಬಯಸಿ ಬಂದವರಿಗೆ ಅಕ್ಕ ತಮ್ಮ ಪ್ರೀತಿಯಿಂದ ಉಪಚರಿಸುತ್ತಿದ್ದರು. ಎಷ್ಟೋ ವೇಳೆ ವಾರಗಟ್ಟಲೆ ತಮ್ಮ ಮನೆಯ ಜಗುಲಿಯಲ್ಲಿ ಆಶ್ರಯ ನೀಡಿ ರೋಗಿಗಳು ಚೇತರಿಸಿಕೊಂಡ ಮೇಲೆ ಅವರನ್ನು ಮನೆಗೆ ಕಳಿಸುತ್ತಿದ್ದರು. ಇವರಿಗೆ ಸ್ಥಳೀಯರ ಬಗ್ಗೆ  ಅದೆಂತಹ ಅದಮ್ಯ ಪ್ರೀತಿ ಇತ್ತೆಂದರೆ, ಕಾರ್ಬೆಟ್ ಕಾಡು ಪ್ರಾಣಿಗಳಿಂದ ತನ್ನ ಹಳ್ಳಿಯ ಜನ ಹಾಗೂ ಅವರ ಬೆಳೆಗಳನ್ನು ರಕ್ಷಿಸಲು ತನ್ನ ಸ್ವಂತ ಖರ್ಚಿನಿಂದ ಇಡೀ ಹಳ್ಳಿಗೆ ನಾಲ್ಕು ಅಡಿ ದಪ್ಪ ಹಾಗೂ ಆರು ಅಡಿ ಎತ್ತರದ ಕಲ್ಲಿನ  ಗೋಡೆಯನ್ನು ಕಟ್ಟಿಸಿಕೊಟ್ಟಿದ್ದನು. ಈ ಗೋಡೆಯ ಸುತ್ತಳತೆ ಸುಮಾರು ಒಂದೂವರೆ ಕಿಲೋಮೀಟರ್ ಉದ್ದವಿತ್ತು. ( ಈ ಕಲ್ಲಿನ ಗೋಡೆ ಈಗಲೂ ಸಹ ಅಸ್ತಿತ್ವದಲ್ಲಿದೆ)
ಇದಲ್ಲದೆ ಪ್ರತಿವರ್ಷ ಹಳ್ಳಿಯಲ್ಲಿ ನಡೆಯುತ್ತಿದ್ದ ಬೈಸಾಕಿ ಮತ್ತು ಹೋಳಿ ಹಬ್ಬದಲ್ಲಿ  ಅಕ್ಕ ತಮ್ಮ ಇಬ್ಬರೂ ಪಾಲ್ಗೊಳ್ಳುತ್ತಿದ್ದರು. ತಮ್ಮ ಮನೆಯಲ್ಲಿ ಆಚರಿಸುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಹಳ್ಳಿಯ ಜನರೆಲ್ಲರನ್ನು ಕರೆಸುತ್ತಿದ್ದರು. ಅವರಿಗೆ ಬಡವ ಬಲ್ಲಿದ. ಜಾತಿ, ಧರ್ಮ ಇವುಗಳ ಬಗ್ಗೆ ಬೇಧವಿರಲಿಲ್ಲ.


                                      ( ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಜಿಮ್ ಕಾರ್ಬೆಟ್ ಕೊಂದ ಸ್ಥಳ)


ಸ್ವಾತಂತ್ರ ಪೂರ್ವ ಭಾರತದ ಎಲ್ಲಾ ಬ್ರಿಟೀಷ್ ವೈಸ್‍ರಾಯ್‍ಗಳ ಜೊತೆ ಜಿಮ್ ಕಾರ್ಬೆಟ್ ಒಳ್ಳೆಯ ಸಂಬಂಧ ಹೊಂದಿದ್ದ.  ಅವರುಗಳು ಬೇಸಿಗೆಯಲ್ಲಿ ಮಸ್ಸೂರಿ ಅಥವಾ ನೈನಿತಾಲ್ ಗಿರಿಧಾಮಗಳಿಗೆ ಬಂದಾಗ ತಪ್ಪದೇ
ಚೋಟಿ ಹಲ್ದಾನಿಯಲ್ಲಿದ್ದ ಕಾರ್ಬೆಟ್ ಮನೆಗೆ ಬೇಟಿ ನೀಡುತಿದ್ದರು. ಈ ಸಮಯದಲ್ಲಿ ವೈಸ್‍ರಾಯ್‍ಗಳಿಗೆ ಹಳ್ಳಿಗರನ್ನು ಬೇಟಿ ಮಾಡಿಸಿ ಚಹಾ ಕೂಟ ಏರ್ಪಡಿಸುತ್ತಿದ್ದ. ಇಂದಿಗೂ ಸಹ ಅಲ್ಲಿನ ಮನೆಗಳಲ್ಲಿ  ಅಪರೂಪದ  ಕಪ್ಪು ಬಿಳುಪು ಫೋಟೊಗಳನ್ನು ನೋಡಬಹುದು. ಇಂತಹ ಒಂದು ಅನನ್ಯ ಪ್ರೀತಿಯ ಕಾರಣ ಅಲ್ಲಿನ ಜನ ಕಾರ್ಬೆಟ್‍ನನ್ನು ನಡೆದಾಡುವ ದೇವರು ಎಂದು ನಂಬಿದ್ದರು.  ಅಲ್ಲಿನ ಹಳ್ಳಿಗಳಲ್ಲಿ ಇವೊತ್ತಿಗೂ ಒಂದು ನಂಬಿಕೆ ಜೀವಂತವಾಗಿದೆ. ಅವರನ್ನು ಕಾಡು ಪ್ರಾಣಿಗಳಿಂದ ರಕ್ಷಿಸುತ್ತಿರುವವರು ಹನುಮಾನ್ ಮತ್ತು ಕಾರ್ಪೆಟ್ ಸಾಹೇಬ್ ಎಂದು ನಂಬಿದ್ದಾರೆ.  ಅರ್ಧ ಶತಮಾನ ಕಳೆದರೂ ಕಾರ್ಬೆಟ್‍ನನ್ನು ನೋಡದ, ಕೇಳದ, ಈಗಿನ ತಲೆಮಾರು ಸಹ ಆತನನ್ನು ಮರೆತಿಲ್ಲ. ಕಲದೊಂಗಿ, ಚೋಟಿಹಲ್ದಾನಿ ಮತ್ತು ರಾಮನಗರ ಎಂಬ ಪಟ್ಟಣದಲ್ಲಿ ಕಾರ್ಬೆಟ್  ಹೆಸರಿನಲ್ಲಿ ಹೋಟೆಲ್, ಸೇವಿಂಗ್‍ಸೆಲೂನ್, ಟೈಲರಿಂಗ್ ಶಾಪ್ ಹಾಗೂ ಹೊಸದಾಗಿ ತಲೆ ಎತ್ತಿರುವ ಬಡಾವಣೆಗಳನ್ನು ಕಾಣಬಹುದು. ಇದು ನಮ್ಮ ಗ್ರಾಮ ಸಂಸ್ಕøತಿಯ ಜನ ತಮಗೆ ನೆರವಾದ ಒಬ್ಬ ಹೃದಯವಂತನನ್ನು ನೆನೆಯುತ್ತಿರುವ ಪರಿಗೆ ಸಾಕ್ಷಿಯಾಗಿದೆ.. ಆದರೆ ಇದೇ ಮಾತನ್ನು ನೈನಿತಾಲ್ ಗಿರಿಧಾಮದ ಪಟ್ಟಣಕ್ಕೆ ಅನ್ವಯಿಸಲಾಗದು.
ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯನಾಗಿ, ನಂತರ ಉಪಾಧ್ಯಕ್ಷನಾಗಿ ಅದಕ್ಕೊಂದು ಸುಂದರ ಕಟ್ಟಡ ನಿರ್ಮಾಣ ಮಾಡಿದುದಲ್ಲದೆ ಭಾರತದಲ್ಲಿ ಪ್ರಪ್ರಥಮವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಕೀರ್ತಿ ಜಿಮ್ ಕಾರ್ಬೆಟ್‍ನದು. ಇಂತಹ ವ್ಯಕ್ತಿಯ ಬಗ್ಗೆ ಪುರಸಭೆಯಲ್ಲಿ ಇಂದು ಯಾವುದೇ ಮಾಹಿತಿ ಇಲ್ಲ, ಅಷ್ಟೇ ಏಕೆ? ಕಾರ್ಬೆಟ್ ಅಂದರೆ ಯಾರು ಎಂದು ಅಲ್ಲಿನ ಸಿಬ್ಬಂದಿ ನಮ್ಮನ್ನೇ ಕೇಳುತ್ತಾರೆ. ಇದು ಅವರ ತಪ್ಪಲ್ಲ ಏಕೆಂದರೆ ಈಗ ನೈನಿತಾಲ್‍ನಲ್ಲಿ ಇರುವುದು ಮೂರು ವರ್ಗದ ಜನ, ಒಂದು ನಿವೃತ್ತ ಸೇನಾಧಿಕಾರಿಗಳು ಮತ್ತು ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಗಳು ಹಾಗೂ ಅವರ ಬೃಹತ್ ತೋಟದ ಮನೆಗಳು. ಇನ್ನೊಂದು ಸರ್ಕಾರಿ ಸಿಬ್ಬಂದಿ, ಮಗದೊಂದು ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಮಧ್ಯಮ ವರ್ಗದ ಜನ ಹಾಗಾಗಿ ಯಾರಿಗೂ ನೈನಿತಾಲ್ ಇತಿಹಾಸದ ಬಗ್ಗೆ ಯಾವುದೇ ಆಸಕ್ತಿ ಇಲ್ಲವಾಗಿದೆ.
  


 ತನ್ನ ಸಹೋದರಿಯೊಂದಿಗೆ ಚೋಟಿ ಹಲ್ದಾನಿಯ ಮನೆಯಲ್ಲಿ ಹಳ್ಳಿಯ ಯಜಮಾನನಂತೆ ಬದುಕಿದ ಜಿಮ್ ಕಾರ್ಬೆಟ್, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ, ಬ್ರಿಟೀಷರ ಮೇಲೆ ದಾಳಿಯಾಗಬಹುದೆಂದು ಹೆದರಿ, ಜೀವಭಯದೊಂದಿಗೆ ದೇಶವನ್ನು ತೊರೆದ. ತಾನು ಬದುಕಿದ ಹಳ್ಳಿಯ ಜನರಿಗೆ ನೋವಾಗಬಾರದೆಂದು ಗುಟ್ಟಾಗಿ, ಚಿರಂಜಿಲಾಲ್ ಷಾ ಎಂಬ ವ್ಯಾಪಾರಿಗೆ ಮನೆಯನ್ನು ಮಾರಾಟ ಮಾಡಿ,  ಇಂಗ್ಲೆಂಡ್ ಗೆ ಹೊಗಿ ಬರುತ್ತೀನಿ  ಸುಳ್ಳು ಹೇಳುವುದರ ತಾನು ಹುಟ್ಟಿ ಬೆಳೆದ ನೆಲಕ್ಕೆ ವಿದಾಯ ಹೇಳಿದ. ಹಳ್ಳಿಗರಿಗೆ ನಂಬಿಕೆ ಬರುವಂತೆ ಪ್ರತಿ ವರ್ಷ ತಾನೇ ಸ್ವತಃ ಭೂಮಿಯ ಕಂದಾಯವನ್ನು ಭಾರತ ಸರ್ಕಾರಕ್ಕೆ ಪಾವತಿಸುತ್ತಿದ್ದ. ಕಾರ್ಬೆಟ್ ನಿಧನಾನಂತರ ಅವನ ಸಹೋದರಿ ಮಾರ್ಗರೇಟ್, ಭಾರತ ಸರ್ಕಾರಕ್ಕೆ ಪತ್ರ ಬರೆದು ಜಮೀನಿನ ಹಕ್ಕುದಾರಿಕೆಯನ್ನು ಗ್ರಾಮಸ್ಥರಿಗೆ ವರ್ಗಾಯಿಸಿದಳು. 1965 ರಲ್ಲಿ ಭಾರತ ಸರ್ಕಾರ ಕಾರ್ಬೆಟ್ ವಾಸಿಸುತ್ತಿದ್ದ ಮನೆಯನ್ನು ವ್ಯಾಪಾರಿಯಿಂದ ಮತ್ತೆ ಇಪ್ಪತ್ತು ಸಾವಿರ ರುಪಾಯಿಗಳಿಗೆ ಖರೀದಿಸಿ, ಅದನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿತು. ಈಗ ಚೋಟಿ ಹಲ್ದಾನಿ ಗ್ರಾಮಸ್ಥರ ಸುಪರ್ಧಿಯಲ್ಲಿರುವ  ಈ ಮನೆಯಲ್ಲಿ  ಜಿಮ್ ಕಾರ್ಬೆಟ್ ಉಪಯೋಗಿಸುತ್ತಿದ್ದ, ಕುರ್ಚಿ ಮೇಜು, ಬಂದೂಕ, ಶಿಕಾರಿಗೆ ಬಳಸುತ್ತಿದ್ದ ಟಾರ್ಚ್, ಆತನ ಖಾಕಿ ಉಡುಗೆ ತೊಡುಗೆ, ಇವುಗಳನ್ನು ಜೋಪಾನವಾಗಿರಿಸಲಾಗಿದೆ. ಸ್ಥಳಿಯರ ಭಾಷೆಯಲ್ಲಿ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಜಿಮ್ ಕಾರ್ಬೆಟ್ ಇವೊತ್ತಿಗೂ ಅವರ ಪಾಲಿಗೆ ದೇವರಾಗಿದ್ದರೆ, ಆತ ವಾಸಿಸುತ್ತಿದ್ದ ಬಂಗಲೆ ದೇಗುಲವಾಗಿದೆ.
( 18-5-2014 ರ ವಿಜಯವಾಣಿ ಸಾಪ್ತಾಹಿಕದಲ್ಲಿ " ಬೇಟೆಗಾರನ ಮಾನವೀಯ ಮುಖ" ಹೆಸರಿನಲ್ಲಿ ಪ್ರಕಟವಾದ ಲೇಖನ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ