ಮಂಗಳವಾರ, ಆಗಸ್ಟ್ 12, 2014

ಮೇಲುಕೋಟೆಯ ಗಾಂಧಿ- ಸುರೇಂದ್ರ ಕೌಲಗಿಗೆ ಜಮ್ನಲಾಲ್ ಬಜಾಜ್ ಪ್ರಶಸ್ತಿ



ಮೇಲುಕೋಟೆಯೆಂಬುದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳವಷ್ಟೇ ಅಲ್ಲ, ಅಲ್ಲಿ ನನ್ನಂತಹವನ ಪಾಲಿಗೆ ಇನ್ನಷ್ಟು ಆಕರ್ಷಣಿಯ ಸ್ಥಳಗಳಿವೆ. ಬೆಟ್ಟದ ಮೇಲಿರುವ ಚಲುವ ನಾರಾಯಣಸ್ವಾಮಿ ದೇಗುಲ, ಬೆಟ್ಟದ  ತಡಿಯಲ್ಲಿರುವ  ಲೋಕ ಪ್ರಸಿದ್ಧ ಕಲ್ಯಾಣಿ, ಯೋಗನರಸಿಂಹ ಸ್ವಾಮಿ ದೇಗುಲ ಮತ್ತು  ಅರ್ಧಕ್ಕೆ ನಿಂತ ರಾಜಗೋಪುರದ ಹೆಬ್ಬಾಗಿಲು, ಅದರ ಪಕ್ಕದ ಅಕ್ಕ-ತಂಗಿ ಕೊಳಗಳು, ರಾಜಗೋಪುರದ ಹಿಂದಿನ ಗುಡ್ಡದ ಮೇಲಿರುವ ಸಂಸ್ಕೃತ ಸಂಶೋಧನಾ ಕೇಂದ್ರದ ಬಳಿ ನಲಿದಾಡುವ ನವಿಲುಗಳು, ಮಾಮರದ ಮರೆಯಲ್ಲಿ ಕುಳಿತು ಕೂಗುವ ಕೋಗಿಲೆಗಳು, ಮೇಲುಕೋಟೆಯ ಅಯ್ಯಂಗಾರ್ ಬೀದಿಗಳಲ್ಲಿ ಯಾತ್ರಿಕರಿಗಾಗಿ ಮನೆಯಲ್ಲಿ ಸಿದ್ಧಪಡಿಸಿದ ಪುಳಿಯೊಗರೆಯ ವಾಸನೆ ಮತ್ತು ಸಿಹಿ ಪೊಂಗಲ್, ಕಾಫಿಯ ಸುವಾಸನೆ ಹಾಗೂ ಮೇಲುಕೋಟೆಯ ಸಮೀಪದ ಬೇಬಿ ಎಂಬ ಹಳ್ಳಿಯ ದಲಿತರ ಕೇರಿಗಳಲ್ಲಿ ಚಲುವನಾರಾಯಣಸ್ವಾಮಿ ಮತ್ತು ಬೇಬಿ ನಾಚ್ಚಿಯಾರ್ ಕುರಿತು ಹಾಡುವ ಸುಶ್ರಾವ್ಯ ಜನಪದಗೀತೆಗಳು  ಇವೆಲ್ಲವೂ  ಮೇಲುಕೋಟೆಯ ನೆನಪಿನ ಭಾಗಗಳಾಗಿ ಉಳಿದುಕೊಂಡಿವೆ.

ಇವುಗಳ ಜೊತೆ ಜೊತೆಗೆ ತಮ್ಮ ಜೀವನ ಪೂರ್ತಿ ಕವಿತೆಗಳಲ್ಲಿ ಮೇಲುಕೋಟೆಯನ್ನು ಧ್ಯಾನಿಸಿದ ಕನ್ನಡದ  ಹಿರಿಯ ಕವಿ ಪು.ತಿ.ನ. ನೆನಪು ಹಾಗೂ ಅವರ ನಿವಾಸ, ಕನ್ನಡ ಪತ್ರಿಕೋದ್ಯಮಕ್ಕೆ ಘನತೆ ತಂದುಕೊಟ್ಟ ಖಾದ್ರಿ ಶಾಮಣ್ಣ ನವರ ಜೊತೆ ಜನಪದಸೇವಾ ಟ್ರಸ್ಟ್ ನ ಸುರೇಂದ್ರ ಕೌಲಗಿ ಇವರ ನೆನಪುಗಳು ಸಹ ಮೇಲುಕೋಟೆಯೊಂದಿಗೆ ತಳುಕುಹಾಕಿಕೊಂಡಿವೆ.
ಮೇಲುಕೋಟೆಯ ಗಾಂಧೀಜಿ ಎಂದು ನನ್ನ ತಲೆಮಾರಿನ ಗೆಳೆಯರು ಪ್ರೀತಿ ಮತ್ತು ಗೌರವದಿಂದ ಕರೆಯುವ ಜನಪದಸೇವಾ ಟ್ರಸ್ಟ್ ನ ರೂವಾರಿ ಸುರೇಂದ್ರ ಕೌಲಗಿಯವರಿಗೆ ಈ ಬಾರಿಯ ಪ್ರತಿಷ್ಟಿತ ಜಮ್ನಲಾಲ್ ಬಜಾಜ್ ಪ್ರಶಸ್ತಿಯ ಗೌರವ ದೊರೆತಿದೆ. ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ, ನಡೆ ಮತ್ತು ನುಡಿಯಲ್ಲಿ ಒಂದಾಗಿ ಬದುಕುತ್ತಿರುವ ಆದರ್ಶ ವ್ಯಕ್ತಿಗಳಿಗೆ ಕೊಡಮಾಡುವ ಈ ರಾಷ್ಟ್ರ ಮಟ್ಟದ ಪ್ರಶಸ್ತಿಯು ಈ ಬಾರಿ ಸುರೇಂದ್ರ ಕೌಲಗಿಯವರಿಗೆ ದೊರಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.


ಮೇಲುಕೋಟೆಯನ್ನು ತಮ್ಮ ಸುಧೀರ್ಘ ಅರವತ್ತು ವರ್ಷಗಳಿಂದ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಹಾಗೂ ನಿಜ ಭಾರತದ ಆತ್ಮವೆನಿಸಿರುವ ಗ್ರಾಮಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮ ಈ ಎಂಬತ್ತನೇಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಸುರೇಂದ್ರಕೌಲಗಿಯವರು ನನ್ನ ತಲೆಮಾರಿಗೆ ಬಹು ದೊಡ್ಡ ಆದರ್ಶ. ಮೂಲತಃ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದವರಾದ ಸುರೇಂದ್ರ ಕೌಲಗಿಯವರು ಸುಮಾರು ಐದು ವರ್ಷಗಳ ಕಾಲ ಜಯಪ್ರಕಾಶ್ ನಾರಾಯಣ್ ಅವರಿಗೆ 1954 ರಿಂದ 59 ರವರೆಗೆಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ನಂತರ ವಿನೋಭಾ ಅವರ ಜೊತೆ ಕೂಡ ಒಡನಾಡಿದರು. ಈ ಸಂದರ್ಭದಲ್ಲಿ ಗಾಂಧಿಜಿಯವರ ತತ್ವ ಮತ್ತು ಆದರ್ಶಗಳನ್ನು ತಮ್ಮ ಎದೆಗೆ ಇಳಿಸಿಕೊಂಡ ಇವರು , ಅವುಗಳನ್ನು ಸಾಕಾರಗೊಳಿಸಲು ಮಂಡ್ಯ ಜಿಲ್ಲೆಯ ಮೇಲುಕೋಟೆಯ ಎಂಬ ಪುಟ್ಟ ಗಿರಿಧಾಮವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡರು.

1960 ರ ದಶಕದಲ್ಲಿ ಜನಪದ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿದ ಕೌಲಗಿಯವರು, ಟ್ರಸ್ಟ್ ನ ಅಡಿ ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ ನೀಡುವ ಉದ್ದೇಶದಿಂದ ಆರಂಭಿಸಿದ “ ಕರುಣಾಗೃಹ “ ಹಾಗೂ ದುಡಿಯುವ ಕೈಗಳಿಗೆ ಆಸರೆಯಾಗಲು ಗ್ರಾಮೋದ್ಯೋಗ ಕ್ಕೆ ದಾರಿಯಾಗುವಂತೆ ಸ್ಥಾಪಿಸಿದ  “ ಹೊಸ ಜೀವನ ದಾರಿ” ಎಂಬ ಸಂಸ್ಥೆ ಈಗಾಗಲೇ ಐವತ್ತು ವರ್ಷಗಳನ್ನು ಪುರೈಸಿವೆ. ಚರಕ ಮತ್ತು ಖಾದಿಯನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುವ ಮತ್ತು ಗೌರವಿಸುವ ಸುರೇಂದ್ರ ಕೌಲಗಿಯವರ ಸಂಸ್ಥೆಯಲ್ಲಿ ಚರಕ ಮತ್ತು ಕೈ ಮಗ್ಗದ ಚಟುವಟಿಕೆಗಳು  ನಿರಂತರವಾಗಿ ಕ್ರಿಯಾಶೀಲವಾಗಿವೆ. ಜನಪದ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕೌಲಗಿಯವರು ಈ ಪತ್ರಿಕೆಯಲ್ಲಿ ಕೃಷಿ, ಪರಿಸರ ಕುರಿತಂತೆ ಅನೇಕ ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಸಹಜ ಮತ್ತು ನೈಸರ್ಗಿಕ ಕೃಷಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಜಪಾನಿನ ನೈಸರ್ಗಿಕ ಕೃಷಿ ತಜ್ಞ ಪುಕಾವೊಕ ಅವರ “ ಒಂದು ಹುಲ್ಲಿನ ಕ್ರಾಂತಿ” ಎಂಬ ಅಪರೂಪದ ಕೃತಿಯನ್ನು ಕನ್ನಡಕ್ಕೆ ತಂದ ಕೀರ್ತಿ ಇವರದು. 


ಸದಾ ಖಾದಿ ಜುಬ್ಬ, ಪಂಚೆ, ಹೆಗಲಿಗೆ ಒಂದು ಬ್ಯಾಗ್, ಮುಖದ ತುಂಬಾ ಮಾಸದ ಮುಗುಳ್ನಗೆ ಇವು ಸುರೇಂದ್ರ ಕೌಲಗಿಯವರ ಚಹರೆಗಳು. ಸಾಮಾಜಿಕ ಸ್ವಾಸ್ಥವನ್ನು ಕಾಪಾಡಬಲ್ಲ ಯಾವುದೇ ಚಳುವಳಿಗಳು, ಸಭೆ ಸಮಾರಂಭಗಳು  ಮಂಡ್ಯ ನಗರದಲ್ಲಿ ನಡೆಯುವಾಗ ತಪ್ಪದೇ ಹಾಜಾರಾಗುತ್ತಿದ್ದ ಇವರು, ಕಳೆದ ಇತ್ತೀಚೆಗೆ ಅನಾರೋಗ್ಯದಿಂದ ತಮ್ಮ ಚಟುವಟಿಕೆಗಳನ್ನು ಜನಪದ ಸೇವಾ ಟ್ರಸ್ಟ್ ಗೆ ಮಾತ್ರ ಸೀಮಿತವಾಗಿರಿಸಿಕೊಂಡಿದ್ದಾರೆ. ತಂದೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಅವರ ಪುತ್ರ ಸಂತೋಷ್ ಕೌಲಗಿ  ಟ್ರಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕಕ್ಕೆ ಎರಡನೇಯ ಬಾರಿಗೆ ಜಮ್ನ ಲಾಲ್ ಪ್ರಶಸ್ತಿ ಸುರೇಂದ್ರ ಕೌಲಗಿ ಮೂಲಕ ದೊರೆತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಷ್ಟೇ ಅಲ್ಲ, ಜೊತೆಗೆ ಗಾಂಧೀಜಿ ಚಿಂತನೆಗಳಿಗೆ ಮತ್ತು ಕನಸುಗಳಿಗೆ ಸಾವಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ