ಬುಧವಾರ, ಸೆಪ್ಟೆಂಬರ್ 3, 2014

ಮೋದಿಮಯ ಭಾರತದಲ್ಲಿ ರಾಜ್ಯಪಾಲರೆಂಬ ಕಾಲ್ಚೆಂಡುಗಳು



ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜಕೀಯದಲ್ಲಿ ವಿಕ್ರಮ ಸಾಧಿಸಿದ  ಇಂದಿರಾಗಾಂಧಿಯವರ ನಂತರ, ವರ್ಷ ಅಂತಹದ್ದೇ ದಾಖಲೆ ಸ್ಥಾಪಿಸಿದ ನರೇಂದ್ರ ಮೋದಿಯವರು ಎನ್.ಡಿ.. ಮೈತ್ರಿಕೂಟದ   ಪ್ರಧಾನಿ ಗದ್ದುಗೆ ಏರಿದ್ದಾರೆ. ನಂತರ ಒಂದೊಂದೇ ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಬಿ.ಜೆ.ಪಿ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ  ತಮ್ಮ ನೆಚ್ಚಿನ ಭಂಟ ಅಮಿತ್ ಷಾ ರವನ್ನು ತಂದು ಕೂರಿಸಿದ್ದು, ಪಕ್ಷದ ಸಂಸದಿಯ ಮಂಡಳಿಯಿಂದ ಹಿರಿಯ ನಾಯಕರಾದ ಎಲ್.ಕೆ.ಅಧ್ವಾನಿ ಮತ್ತು ಮುರಳಿಮನೋಹರ ಜೋಷಿಯಂತಹವರನ್ನು ಹೊರಗಿಟ್ಟಿದ್ದು ಇವೆಲ್ಲವೂ ಅವರ ಚಾಣಾಕ್ಷ ರಾಜಕೀಯ ನಡೆಗಳಿಗೆ ಸಾಕ್ಷಿಯಾಗಿವೆ.
ಕಡಿಮೆ ಸಿಬ್ಬಂದಿ ಮತ್ತು ಪರಿಣಾಮಕಾರಿಯಾದ ಆಡಳಿತ ಎಂಬ ಘೋಷಣೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಯವರು ಆಮೆಗತಿಯ ಆಡಳಿತಕ್ಕೆ  ಚುರುಕು ಮುಟ್ಟಿಸುವುದರ ಮೂಲಕ ಕಾರ್ಯಾಂಗಕ್ಕೆ ಚುರುಕು ತಂದಿರುವುದನ್ನು ಅಲ್ಲಗೆಳೆಯಲಾಗದು. ಆದರೆ, ತಾನೋರ್ವ ಪ್ರಶ್ನಾತೀತ ನಾಯಕ ಎಂಬ ಭಾವನೆಯಿಂದ ವಿಜೃಂಭಿಸುತ್ತಿರುವ ಮೋದಿಯವರು ಅಂತಿಮವಾಗಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕೊನೆಯ ದಿನಗಳಲ್ಲಿ  ತಾಳಿದ ಸರ್ವಾಧಿಕಾರಿ ಧೋರಣೆಯನ್ನು ತಾಳ ಬಹುದೇನೊ ಎಂಬ ಸಣ್ಣ ಸಂಶಯ ಮತ್ತು ಸುಳಿವು ಇತ್ತೀಚೆಗಿನ ಅವರ ರಾಜಕೀಯ ನಡೆಗಳಲ್ಲಿ ಕಾಣುತ್ತಿವೆ. ಪ್ರಶ್ನೆಗಳಿಗೆ ಅಂತಿಮವಾಗಿ ಕಾಲ ಉತ್ತರಿಸಬೇಕಾಗಿದೆ.
ಯು.ಪಿ.. ಸರ್ಕಾರದ ಆಢಳಿತಾವಧಿಯಲ್ಲಿ  ನೇಮಕ ಮಾಡಲಾಗಿದ್ದ ರಾಜ್ಯಪಾಲರನ್ನು ಅತ್ಯಂತ ನಾಜೂಕು ನಡೆಯ ಮೂಲಕ ಒಬ್ಬಬ್ಬರಾಗಿ ತಾವೇ ರಾಜಿನಾಮೆ ನೀಡಿ ನಿರ್ಗಮಿಸುವಂತೆ ಮಾಡಿರುವ ಪ್ರಧಾನಿಯ ಗುಪ್ತ ಕಾರ್ಯಾಚರಣೆಯನ್ನು ಪ್ರಜಾಪ್ರಭುತ್ವದ ನೀತಿ, ನಿಯಮಗಳನ್ನು ಬಲ್ಲ ಯಾವೊಬ್ಬ ನಾಗರೀಕನೂ ಒಪ್ಪಲಾರ. ಇತ್ತೀಚೆಗೆ ನೀಡಲಾದ ಮಣಿಪುರದ ರಾಜ್ಯಪಾಲ ವಿ.ಕೆ. ದುಗ್ಗಾಲ್ ರವರ ರಾಜಿನಾಮೆಯನ್ನೂ ಸಹ ಒಳಗೊಂಡಂತೆ ಒಟ್ಟು ಒಂಬತ್ತು ಮಂದಿ ರಾಜ್ಯಪಾಲರು ರಾಜಿನಾಮೆ ನೀಡಿ ರಾಜಭವನಗಳಿಂದ ನಿರ್ಗಮಿಸಿದ್ದಾರೆ. ರಾಜ್ಯಪಾಲರುಗಳು ರಾಜಿನಾಮೆಗಾಗಿ ಮೋದಿ ಸರ್ಕಾರ ಅನುಸರಿಸಿದ ಪರೋಕ್ಷ ಒತ್ತಡದ  ಕ್ರಮ ಮಾತ್ರ ಆಕ್ಷೇಪಾರ್ಹವಾದುದು. ರಾಜ್ಯಪಾಲರುಗಳೊಂದಿಗೆ ಯಾವೊಂದು ಪೂರ್ವ ಸಮಾಲೋಚನೆಯನ್ನು ನಡೆಸದೆ, ಸರ್ಕಾರಿ ನೌಕರರನ್ನು ವರ್ಗಾಯಿಸುವ ರೀತಿಯಲ್ಲಿ ವರ್ಗಾವಣೆ ಮಾಡಿ ªರುಗಳÀನ್ನು ಅಪಮಾನಿಸಲಾಯಿತು. ಸಂವಿಧಾನ ಬದ್ಧ ಹಕ್ಕು ಮತ್ತು ನಿಯಮದಡಿ ನೇಮಕಗೊಂಡು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳಿಂದ ನಿಗದಿತ ಅಂತರವನ್ನು ಕಾಪಾಡಿಕೊಂಡು, ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಾಂಗ ಮತ್ತು ಶಾಸಕಾಂಗದ ಮುಖ್ಯಸ್ಥರುಗಳಂತೆ ಕಾರ್ಯನಿರ್ವಹಿಸುತ್ತಿದ್ದ ರಾಜ್ಯಪಾಲರ ಹುದ್ದೆಗಿದ್ದ ಗೌರವ ಮತ್ತು ಘನತೆಗೆ ಧಕ್ಕೆ ತರಲಾಯಿತು. ಇದರ ಜೊತೆಗೆ ಅತ್ಯಂತ ಹೀನಾಯ ಮಾರ್ಗವನ್ನು ಸಹ ಮೋದಿ ಸರ್ಕಾರ ತುಳಿಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಹಾಗೂ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣ್ ಅವರ ಮೇಲೆ ಆಗಸ್ಟ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟ್ರ್ ಖರೀದಿ ಹಗರಣ ಕುರಿತಂತೆ ಸಿ.ಬಿ.. ತನಿಖೆ ಕೈಗೊಳ್ಳುವ ಬೆದರಿಕೆ ಒಡ್ಡಿ ರಾಜಿನಾಮೆ ಪಡೆಯಲಾಯಿತು. ಅದೇ ರೀತಿ ಗೋವಾದ ರಾಜ್ಯಪಾಲರಾಗಿದ್ದ ವಿ.ಕೆ. ವಾಂಚು ಅವರನ್ನು ಸಹ ಇದೇ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸಿ.ಬಿ.. ತನಖೆಗೆ ಒಳಪಡಿಸುವುದರ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡಿ ಹುದ್ದೆ ತ್ಯೆಜಿಸುವಂತೆ ಮಾಡಲಾಯಿತುಇನ್ನು ನರೇಂದ್ರಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ನಿರಂತರ ಸಂಘರ್ಷಕ್ಕೆ ಇಳಿದಿದ್ದರು ಎಂಬ ಏಕೈಕ ಕಾರಣಕ್ಕೆ ಅಲ್ಲಿನ ರಾಜ್ಯಪಾ¯ರಾಗಿದ್ದ  ಎಂಬತ್ತೆರೆಡು ವಯಸ್ಸಿನ ಶ್ರೀಮತಿ ಕಮಲ ಬೆನಿವಾಲ್ ಅವರನ್ನು ಒಂದು ಮಾತು ಕೂಡ ಕೇಳದೆ, ದೂರದ ಈಶಾನ್ಯ ಭಾರತದ ರಾಜ್ಯವೊಂದಕ್ಕೆ ವರ್ಗಾಯಿಸಿ ಅವಮಾನಿಸಲಾಯಿತು. ಇದರಿಂದ ಬೇಸತ್ತ ಅವರು ಸಹ ತಮ್ಮ ಹುದ್ದೆ ತೊರೆಯಬೇಕಾಯಿತು. ಮುನ್ನ ಉತ್ತರಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಎಲ್,ಜೋಷಿ ಮತ್ತು ಛತ್ತೀಸ್ ಗಡದ ರಾಜ್ಯಪಾಲರಾಗಿದ್ದ ಶೇಖರ್ ದತ್ತ ಯಾವುದೇ ರೀತಿಯ ಅಪಮಾನಕ್ಕೂ ಒಳಗಾಗದೆ, ಮೋದಿಯವರ ಆದೇಶದ ಮೇರೆಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ  ಮೌಖಿಕವಾಗಿ ನೀಡಿದ ಸೂಚನೆಯಂತೆ ತಲೆ ಬಾಗಿ ಹೊರನಡೆದರು.

ಇವರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಶಂಕರ್ ನಾರಾಯಣ್ ಮಾತ್ರ  ತಮ್ಮನ್ನು ರಾತ್ರೋರಾತ್ರಿ ಮಿಜೋರಾಂ ಗೆ ವರ್ಗಮಾಡಿರುವುದನ್ನು ಖಂಡಿಸಿ, ಮೋದಿಯವರ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿಮುಟ್ಟಿಸುವುದರ ಮೂಲಕ ರಾಜಿನಾಮೆ ನೀಡಿದರು. ರಾಷ್ಟ್ರಪತಿಯವರಿಗೆ ರಾಜಿನಾಮೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರುಮನ ಬಂದಂತೆ ಅಧಿಕಾರದ ಮಂತ್ರ ದಂಡವನ್ನು ಬಳಸುತ್ತಿರುವ ನರೇಂದ್ರಮೋದಿ ನೇತೃತ್ವದ ಎನ್.ಡಿ.. ಸರ್ಕಾರ ನಿರಂಕುಶವಾದಿಯಂತೆ ವರ್ತಿಸುತ್ತಿದೆ. ರೀತಿಯ ಸರ್ವಾಧಿಕಾರತನದ ಧೋರಣೆ ಎನ್.ಡಿ.. ಸರ್ಕಾರದ ವಂಶವಾಹಿಯಲ್ಲಿ ( ಡಿ.ಎನ್.) ಅಡಗಿದೆ ಎಂದು ನನಗೆ ಖಾತ್ರಿಯಾಗಿದೆ ಎಂದರು. ಶಂಕರ್ ನಾರಾಯಣ್ ಅವರಿಗಿಂತ ಇನ್ನೊಂದು ದೃಢ ಹೆಜ್ಜೆ ಇಟ್ಟಿರುವ ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿಯವರು ಕೇಂದ್ರ ಸರ್ಕಾರದ ವಜಾ ಯತ್ನದ ವಿರುದ್ಧ ಸುಪ್ರೀಂಕೋರ್ಟಿನ ಮೆಟ್ಟಿಲೇರುವುದರ ಮೂಲಕ ರಾಜ್ಯಪಾಲರುಗಳ ನೇಮಕ ಮತ್ತು ವಜಾ ಕುರಿತಂತೆ ಇರುವ ಸಂವಿಧಾನದ ಹಕ್ಕುಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈಗಾಗಲೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಂಡಿರುವ ಸುಪ್ರೀಂಕೋರ್ಟ್ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿಯವರಿಗೆ ನೋಟಿಸ್ ಜಾರಿ ಮಾಡಿದೆ. ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಥಮವಾಗಿ ರಾಜ್ಯಪಾಲರೊಬ್ಬರು ತಮ್ಮನ್ನು ವಜಾಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಪ್ರಕರಣ ಇದಾಗಿದ್ದು, ಮುಖ್ಯನಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಸಂದರ್ಭದಲ್ಲಿ  ಕೇಂದ್ರ ಸರ್ಕಾರದ ಮುಂದಿನ ಕಾರ್ಯತಂತ್ರ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದೆ. ನಡುವೆ ರಾಜಸ್ಥಾನದ ರಾಜ್ಯಪಾಲರಾಗಿದ್ದ ಶ್ರೀಮತಿ ಮಾರ್ಗರೇಟ್ ಆಳ್ವರವನ್ನು ಗೋವಾ ಕೇಂದ್ರಾಡಳಿತ ಪ್ರದೇಶಕ್ಕೆ ವರ್ಗಾಯಿಸಲಾಗಿದ್ದು, ಅವರು ಯಾವುದೇ ಆಕ್ಷೇಪಣೆಯಿಲ್ಲದೆ ಗೋವಾದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಕೇರಳದ ರಾಜ್ಯಪಾಲರಾಗಿ ಇತ್ತೀಚೆಗೆ ತಾನೆ ಯು.ಪಿ.. ಸರ್ಕಾರದ ಕೊನೆಯ ದಿನಗಳಲ್ಲಿ ನೇಮಕವಾಗಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶ್ರೀಮತಿ ಶೀಲಾ ದೀಕ್ಷಿತ್ ರವರು  ರಾಜಿನಾಮೆ ನೀಡಿ ಹೊರ ಬಂದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಭಾರತದ ರಾಜಕಾರಣದ ಕಪ್ಪು ಚುಕ್ಕೆ ಎಂದು ಗುರುತಿಸಲ್ಪಟ್ಟಿರುವ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದುಕೊಂಡು ಅಯೋಧ್ಯೆ ನಗರದ ಬಾಬರಿ ಮಸೀದಿ ಧ್ವಂಸಕ್ಕೆ ಪರೋಕ್ಷ ಕಾರಣರಾದ ಕಲ್ಯಾಣ್ ಸಿಂಗ್ ನೇಮಕವಾಗಿದ್ದಾರೆ.


ರಾಜ್ಯಪಾಲರ ರಾಜಿನಾಮೆ ಕುರಿತಂತೆ ಎದ್ದಿರುವ ವಿವಾದಕ್ಕೆ ಸೃಷ್ಟಣೆ ನೀಡಿ ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸರ್ಕಾರ ಬದಲಾದಂತೆ ರಾಜ್ಯಪಾಲರುಗಳು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ನಿರ್ಗಮಿಸಬೇಕು ಎಂದು ಪರ್ಮಾನು ಹೊರಡಿಸಿದ್ದಾರೆ. ಇದಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಧ್ವನಿಗೂಡಿಸಿದ್ದಾರೆ. ಹಾಗಾದರೆ ರಾಜ್ಯಪಾಲರ ಹುದ್ದೆಗಳು ರಾಜಕೀಯ ಪ್ರೇರಿತ ನೇಮಕಾತಿಯ ಹುದ್ದೆಗಳೇ? ಪ್ರಶ್ನೆಗೆ ಸರ್ವೋಚ್ಛ ನ್ಯಾಯಾಲಯದಿಂದ ಹೊರಬೀಳುವ  ತೀರ್ಪಿನಿಂದ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಸರ್ಕಾರಗಳು ಬದಲಾದಂತೆ ನಿಗಮ ಮತ್ತು ಮಂಡಳಿಗೆ ನೇಮಕವಾಗುವ ವ್ಯಕ್ತಿಗಳು ತಮ್ಮ ತಮ್ಮ ಹುದ್ದೆಗೆ ರಾಜಿನಾಮೆ ನೀಡುವುದು ಅಲಿಖಿತ ನಿಯಮ ಅಥವಾ ಸಂಪ್ರದಾಯದಂತೆ ಚಾಲ್ತಿಯಲ್ಲಿತ್ತು. ಕಾರಣಕ್ಕಾಗಿ  ಡಾ. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.. ಸರ್ಕಾರದಲ್ಲಿ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ರಿಸರ್ವ್ ಬ್ಯಾಂಕಿನ ಮಾಜಿ ಗೌರ್ನರ್ ಸಿ.ರಂಗರಾಜನ್ ಸೇರಿದಂತೆ, ರಾಷ್ಟ್ರೀಯ ವಿಪತ್ತು ನಿರ್ವಹಣ ಮಂಡಳಿಯ ಅಧ್ಯಕ್ಷರಾಗಿದ್ದ ಶಶಿಧರ ರೆಡ್ಡಿ ಮತ್ತು ಇತರೆ ಐದು ಮಂದಿ ಸದಸ್ಯರು ತಮ್ಮ ತಮ್ಮ ಹುದ್ದೆಗಳನ್ನು ತೊರೆದರು. ಒಂದು ಸರ್ಕಾರದ ಆಳ್ವಿಕೆಯಲ್ಲಿ ನೇಮಕಗೊಂಡ ನಂತರ ಮತ್ತೊಂದು ಸರ್ಕಾರದ ಆಳ್ವಿಕೆಯಲ್ಲಿ ನಾವು ಹುದ್ದೆಯಲ್ಲಿ ಇರಬಾರದು ಎಂಬ ನೈತಿಕ ಪ್ರಜ್ಞೆ ಹುದ್ದೆಗಳನ್ನು ತೊರೆಯಲು ಇವರಿಗೆ ಆಧಾರವಾಗಿತ್ತೇ ಹೊರತು, ಇದು ಕಾನೂನು ಬದ್ಧ ನಿಯಮವಾಗಿರಲಿಲ್ಲ.
ಇತ್ತೀಚೆಗೆ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೇಸ್ ಕೂಡ ಸರ್ಕಾರ ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಿಂದಿನ ಬಿ.ಜೆ.ಪಿ. ಸರ್ಕಾರದ ಆಳ್ವಿಕೆಯಲ್ಲಿ ನೇಮಕ ಮಾಡಿದ್ದ ಸಿಂಡಿಕೇಟ್ ಸದಸ್ಯರುಗಳ ವಜಾ ಮಾಡಲು ಹೊರಟಿತ್ತು. ಸಮಯದಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಕೆಲ ಸದಸ್ಯರು ತಡೆಯಾಜ್ಞೆ ತರುವುದರ ಮೂಲಕ ತಮ್ಮ ತಮ್ಮ ಹುದ್ದೆಗಳನ್ನು ರಕ್ಷಿಸಿಕೊಂಡರು. ಹಿಂದಿನ ಸರ್ಕಾರ ನಮ್ಮನ್ನು ಮೂರು ವರ್ಷಗಳ ಅವಧಿಗೆ  ನೇಮಕ ಮಾಡಿರುವಾಗ, ನಮ್ಮನ್ನು ಹುದ್ದೆಯಿಂದ ವಜಾ ಮಾಡುವ ಹಕ್ಕು ನೂತನ ಸರ್ಕಾರಕ್ಕೆ ಇಲ್ಲ ಎಂದು ಸದಸ್ಯರು ವಾದಿಸಿದ್ದರು. ವಾದಕ್ಕೆ  ಹೈಕೋರ್ಟ್ ಸಹಮತ ಸೂಚಿಸಿತು.
ಕರ್ನಾಟಕ ರಾಜ್ಯದ ನಿಗಮ ಮತ್ತು ಮಂಡಳಿಗಳ ಸದಸ್ಯರ ಬೆಳವಣಿಗೆಯನ್ನು ಗಮನಿಸಿದರೆ, ಇದೇ ನಿಯಮವನ್ನು ಕೇಂದ್ರ ಸರ್ಕಾರಕ್ಕೆ ಏಕೆ ಅನ್ವಯಿಸಬಾರದು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ವಾಸ್ತವವಾಗಿ ಇತ್ತೀಚೆಗಿನ ರಾಜ್ಯಪಾಲಕರ ನೇಮಕಾತಿಯನ್ನು ಸೂಕ್ಷ್ಮವಾಗಿ ಗಮನಸಿದಾಗ ದೇಶದ ರಾಜಭವನಗಳು ರಾಜಕೀಯ ವೃದ್ಧಾಶ್ರಮಗಳಾಗಿ ಪರಿವರ್ತನೆಗೊಂಡಿರುವುದನ್ನು ನಾವು ಗಮನಿಸಬಹುದು. ರಾಜಪಾಲ್ಯರ ಹುದ್ದೆಗೆ ಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ಇವೊತ್ತಿಗೂ ಯಕ್ಷಪ್ರಶ್ನೆಗಳಾಗಿ ಉಳಿದಿದೆ. ರಾಜ್ಯಪಾಲರ ಹುದ್ದೆಯು ಸಂವಿಧಾನ ಬದ್ಧ ಹುದ್ದೆಯಾಗಿದೆಯೇ ವಿನಃ, ಇಂತಹ ಜವಬ್ದಾರಿಯುತ ಹುದ್ದೆಗೆ ಏರಬೇಕಾದ ವ್ಯಕ್ತಿಗೆ  ರಾಜ್ಯದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತದ ಬಗ್ಗೆ ಕನಿಷ್ಟ ಜ್ಞಾನವಿರಬೇಕು ಎಂಬ ನಿಯಮ ಜಾರಿಯಲ್ಲಿಲ್ಲ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವಯೋವೃದ್ಧ ರಾಜಕಾರಣಿಳಿಗೆ ಆಶ್ರಯ ಕಲ್ಪಿಸುವ ತಾಣಗಳಾಗಿ ರಾಜಭವನಗಳು ಮಾರ್ಪಾಟಾಗಿವೆ. ಮೋದಿ ನೇತೃತ್ವದ ಎನ್.ಡಿ.. ಸರ್ಕಾರ ಕೂಡ ಇದರಿಂದ ಹೊರತಾಗಿಲ್ಲ. ಗುಜಾರಾತಿನ ಸ್ಪೀಕರ್ ಆಗಿದ್ದÀ ವಾಜುಬಾಯ್ ವಾಲ ಅವರು ಹಿಂದೊಮ್ಮೆ (2001ರಲ್ಲಿ) ತಮಗೆ ಗುಜರಾತಿನಲ್ಲಿ ವಿಧಾನ ಸಭಾ ಕ್ರೇತ್ರವೊಂದÀನ್ನು ತೆರವು ಮಾಡಿಕೊಟ್ಟರು ಎಂಬ ಏಕೈಕ ಕಾರಣಕ್ಕೆ ನರೇಂದ್ರಮೋದಿಯವರು ಅವರನ್ನು ಕರ್ನಾಟಕ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ. ಗುಜರಾತಿನ ವಿಧಾನ ಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡುವ ಅವಶ್ಯಕತೆ ಏನಿತ್ತು ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.





ಎರಡು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟಿಷರು ಬಿಟ್ಟು ಹೋದ ಆಡಳಿತದ ಪಳಿಯುಳಿಕೆಗಳಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಸಹ ಪ್ರಮುಖವಾದವು. ರಾಷ್ಟ್ರಪತಿ ಭವನ ಮತ್ತು ರಾಜಭವನಗಳಲ್ಲಿರುವ ಬಹುತೇಕ ಶಿಷ್ಟಾಚಾರಗಳು ಬ್ರಿಟೀಷರು ಭಾರತೀಯರ ಮೇಲೆ ಹೇರಲಾಗಿದ್ದ ಗುಲಾಮಗಿರಿತನದ ಕುರುಹುಗಳಾಗಿ ಉಳಿದಿವೆ. ಜೊತೆಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಖಾಸಾಗಿ ಬದುಕು ಕೂಡ ಈಸ್ಟ್ ಇಂಡಿಯ ಕಂಪನಿಯ ಗೌರ್ನರ್ ಜನರಲ್ ಗಳು ಬದುಕಿದ್ದ ವೈಭವೊಪೇತ ಬದುಕಿನ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಒಮ್ಮೆ ದೆಹಲಿ ರೈಸಿನಾ ಹಿಲ್ಸ್ ನಲ್ಲಿರುವ ಮುನ್ನೂರ ಎಂಟು ಕೋಣೆಗಳುಳ್ಳ ರಾಷ್ಟ್ರಪತಿ ಭವನವನ್ನು ಮತ್ತು ಮುಂಬೈ ನಗರದ ಮಲಬಾರ್ ಹಿಲ್ಸ್ ನಲ್ಲಿರುವ ಮಹಾರಾಷ್ಟ್ರ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನ ಇಲ್ಲಿನ ಚಟುವಟಿಕೆಗಳನ್ನು ಕಣ್ಣಾರೆ ವೀಕ್ಷಿಸಿದರೆ, ಭಾರತದಂತಹ ಪ್ರಜಾಪ್ರಭುತ್ವವಾದಿ ರಾಷ್ಟ್ರಕ್ಕೆ ಇಂತಹ ವ್ಯವಸ್ಥೆ ಬೇಕಿತ್ತಾ? ಎಂಬ ಪ್ರಶ್ನೆ ನಿರಂತರವಾಗಿ ನಮ್ಮನ್ನು ಕಾಡುತ್ತದೆ.

                                ( ದಿನಾಂಕ 3-9-14 ರಂದು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ