ಬುಧವಾರ, ಸೆಪ್ಟೆಂಬರ್ 10, 2014

ಯೋಜನಾ ಆಯೋಗದ ಸ್ವರೂಪ ಮತ್ತು ಸವಾಲುಗಳು



ಭಾರತದ ಸರ್ವಾಂಗೀಣ ಅಭಿವೃದ್ದಿಯ ರೂಪು ರೇಷೆಗಳು ಮತ್ತು ಯೋಜನೆಗಳ ಗರ್ಭಗುಡಿ ಅಥವಾ ಚಿಂತಕರ ಚಾವಡಿ ಎಂದು ಕರೆಯಬಹುದಾದ ಯೋಜನಾ ಆಯೋಗದ ಕಾರ್ಯತಂತ್ರಗಳನ್ನು ಬದಲಿಸುವ ನಿಟ್ಟಿನಲ್ಲಿ ಅದಕ್ಕೆ ಹೊಸ ರೂಪ ಕೊಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧವಾಗುತ್ತಿದ್ದಾರೆ. ಯೋಜನಾ ಆಯೋಗದ ಕಾರ್ಯ ತಂತ್ರವನ್ನು ಬದಲಿಸುವ ಜೊತೆಗೆ ಇಡೀ ಆಯೋಗದ ಸಮಿತಿ ಸದಸ್ಯರ ನೇಮಕಾತಿ ನೀತಿಯ ಬದಲಾವಣೆ ಕುರಿತು ಕಾಂಗ್ರೇಸ್ ಪಕ್ಷವನ್ನೂ ಒಳಗೊಂಡಂತೆ ಹಲವು ರಾಜಕೀಯ ಪಕ್ಷಗಳು ಅಪಸ್ವರ ಎತ್ತಿವೆ.
ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಅಭಿವೃದ್ಧಿ ಕುರಿತ ನಮ್ಮ ಆಲೋಚನಾ ವಿಧಾನಗಳು ಸಹ ಬದಲಾಗಬೇಕಿದೆ ಆದ್ದರಿಂದ ನರೇಂದ್ರ ಮೋದಿಯವರ ಆಲೋಚನೆಯನ್ನು ನಾವು ರಾಜಕೀಯ ನೆಲೆಯಲ್ಲಿ ಚರ್ಚಿಸುವ ದೃಷ್ಟಿಕೋನವನ್ನು ಬದಿಗಿಟ್ಟು ಇಪ್ಪತ್ತೊಂದನೆಯ ಶತಮಾನದ ಅಗತ್ಯಕ್ಕೆ ಅನುಗುಣವಾಗಿ, ಜಾಗತಿಕ ಮಟ್ಟದ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು, ಯೋಜನಾ ಆಯೋಗದ ಕಾರ್ಯತಂತ್ರ ಮತ್ತು ಸ್ವರೂಪ ಇವುಗಳ ಬದಲಾವಣೆ ಕುರಿತು ಮುಕ್ತ ಮನಸ್ಸಿನಿಂದ ಚಿಂತನೆ ನಡೆಸುವ ಅಗತ್ಯವಿದೆ. ಯು.ಪಿ.. ಸರ್ಕಾರದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೂ ಸಹ ಯೋಜನಾ ಆಯೋಗದ ಅಭಿವೃದ್ಧಿ ಕುರಿತ ಕಾರ್ಯತಂತ್ರಗಳು ಬದಲಾಗಬೇಕೆಂದು ಒತ್ತಿ ಹೇಳಿದ್ದರು.
ಸ್ವಾತಂತ್ಯಾ ನಂತರದ ಭಾರತದ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಮಾಜವಾದಿ ಮತ್ತು ಬಂಡವಾಳಶಾಹಿ ನೀತಿಗಳನ್ನು ಒಳಗೊಂಡ ಮಿಶ್ರ ಆರ್ಥಿಕತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ಮುಂದಾಗಿದ್ದರು. ನೀರಾವರಿ, ಕೃಷಿ ಅಭಿವೃದ್ಧಿಯ ಜೊತೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ, ಉದ್ಯೋಗ ಸೃಷ್ಟಿಯ ಮೂಲಕ ಬಡತನ ನಿವಾರಿಸುವುದು ಮತ್ತು ಭಾರತಕ್ಕೆ ಆಹಾರ ಭದ್ರತೆಯ ವಿಷಯದಲ್ಲಿ ಸ್ವಾವಲಂಬಿತನ ಸಾಧಿಸುವುದು ಇವುಗಳು ಜವಹರಲಾಲ್ ನೆಹರೂ ಅವರಿಗೆ ಮುಖ್ಯವಾಗಿದ್ದವು. ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಂಡ ಸ್ವತಂತ್ರ ಭಾರತಕ್ಕೆ ಆರಂಭz ದಿನಗಳÀಲ್ಲಿ ಅನೇಕ ಸವಾಲುಗಳು ಎದುರಾಗಿದ್ದವು. ಪ್ರಜಾಪ್ರಭುತ್ವದ ತಳಹದಿಯನ್ನು ಸುಸ್ಥಿರಗೊಳಿಸುವುದರ ಜೊತೆ ಜೊತೆಯಲ್ಲಿ ಸದೃಢ ಭಾರತವನ್ನು ನಿರ್ಮಾಣ ಮಾಡುವ ಜವಬ್ದಾರಿ ರಾಜಕೀಯ ನಾಯಕರ ಮೇಲಿತ್ತು. ಕೇವಲ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದಕ್ಕಾಗಿ ತಮ್ಮ ಆಯಸ್ಸನ್ನು ಸೆವೆಸಿದ್ದ ನೆಹರೂ, ಪಟೇಲ್ ಮತ್ತು ಸಂಗಡಿಗರಿಗೆ ಆಡಳಿತ ಅನುಭವದ ಕೊರತೆಯಿತ್ತು. ನಾಯಕರುಗಳನ್ನು ದಿಕ್ಕು ತಪ್ಪಿಸದಂತೆ ಕರೆದೊಯ್ಯುವ ನೈತಿಕ ಜವಾಬ್ದಾರಿ ಅಂದಿನ ಅಧಿಕಾರಿಗಳ ಮೇಲಿತ್ತು. ಬ್ರಿಟೀಷರ ಕೈ ಕೆಳಗೆ ದುಡಿದ ಅನುಭವವಿದ್ದ ದಕ್ಷ ಅಧಿಕಾರಿಗಳ ತಂಡವೊಂದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ನೆಹರೂ ಅವರಿಗೆ ದೊರೆತ ಫಲವಾಗಿ ಅವರು 1951 ರಲ್ಲಿ ಆರಂಭಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲು ಕಾರಣವಾಯಿತು..

ಭಾರತದಲ್ಲಿ ಆರಂಭವಾದ ಪಂಚವಾರ್ಷಿಕ ಯೋಜನೆಗಳಿಗೆ 1938 ರಲ್ಲಿ ನಿಜವಾದ ಸ್ವರೂಪ ಸಿಕ್ಕಿತ್ತು. ಹಾಗಾಗಿ ಭಾರತದ ಪಂಚವಾಷಿಕ ಯೋಜನೆಗಳ ಮೂಲ ರೂವಾರಿಗಳೆಂದು ಪಶ್ಚಿಮ ಬಂಗಾಳದ ಬೌತ ವಿಜ್ಞಾನಿ ಮೇಘನಾದ್ಸಹ ಮತ್ತು ನಮ್ಮ ಕರ್ನಾಟಕದ ಸರ್.ಎಂ.ವಿಶ್ವೇಶ್ವರಯ್ಯ ಇವರನ್ನು ಕರೆದರೆ ತಪ್ಪಾಗಲಾರದು. 1938 ರಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೇಸ್ ವಾರ್ಷಿಕ ಅಧಿವೇಶನದ ವೇಳೆ ಅಧ್ಯಕ್ಷರಾಗಿದ್ದ ಸುಭಾಷ್ ಚಂದ್ರ ಬೋಸ್ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನಾ ಆಯೋಗದ ಕನಸು ಕಂಡರು. ಮೇಘನಾದ್ ಸಹ ಮತ್ತು ವಿಶ್ವೇಶ್ವರಯ್ಯ ಇದರ ರೂಪು ರೇಶೆಗಳನ್ನು ಸಿದ್ಧಪಡಿಸಿದರು. ಯೋಜನಾ ಆಯೋಗಕ್ಕೆ ದೇಶದ ಪ್ರಧಾನಿ ಅಧ್ಯಕ್ಷರಾಗಿದ್ದುಕೊಂಡು, ವಿವಿಧ ರಂಗದ ತಜ್ಞರು ಸದಸ್ಯರಾಗುವುದಕ್ಕೆ ಅವಕಾಶ ಇರುವಂತೆ ಮಾರ್ಗದರ್ಶಿ ಸೂತ್ರವನ್ನು ಸಿದ್ಧಪಡಿಸಿ ಪ್ರಧಾನಿಗೆ ನೀಡಲಾಗಿತ್ತು. ಅದರಂತೆ ನೆಹರೂರವರು 1951 ರಲ್ಲಿ ಯೋಜನೆಯ ಆಯೋಗದ ಮೂಲಕ ತಾವು ಹಾಕಿಕೊಂಡಿದ್ದ  ಗುರಿಗಳನ್ನು ಜಾರಿಗೆ ತರಲು 1952 ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆಯನ್ನು ಆರಂಭಿಸಿದರು. ನೀರಾವರಿಗೆ ಒತ್ತು ಕೊಟ್ಟು, ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಸಲುವಾಗಿ ಬೃಹತ್ ಅಣೆಕಟ್ಟುಗಳಿಗೆ ಆದ್ಯತೆ ನೀಡಿದರು. ಜೊತೆಗೆ ರಸಾಯನಿಕ ಗೊಬ್ಬರ, ಕಬ್ಬಿಣ ಮುಂತಾದ ಉತ್ಪನ್ನಗಳ ಉತ್ಪಾದನೆಗಾಗಿ ಸಾರ್ವಜನಿಕ ರಂಗದಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಿದರು. ಅಣೆಕಟ್ಟುಗಳು ಮತ್ತು ವಿಜ್ಞಾನದ ಪ್ರಯೋಗಾಲಗಳು ದೇಶದ ಅಭಿವೃದ್ಧಿಯ ದೇಗುಲಗಳು ಎಂದು ನೆಹರೂರವರು  ಘೋಷಿಸಿದರು. ನೆಹರೂ ಅವರ ಚಿಂತನೆಗಳು ಮತ್ತು ಕನಸುಗಳಲ್ಲಿ ರಷ್ಯಾದಲ್ಲಿ ಯಶಸ್ವಿಯಾದ ಪಂಚವಾಷಿಕ ಯೋಜನೆಗಳಿದ್ದವು.
1950 ಮತ್ತು 60 ದಶಕಗಳಲ್ಲಿ ಹಾಗೂ ಅನಂತರ ಬಂದ ಹಸಿರು ಕ್ರಾಂತಿಯ ಯೋಜನೆಗಳ ಮೂಲಕ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾದರೂ ಸಹ 1990 ದಶಕದ ನಂತರ ಯೋಜನೆಗಳ ಗುರಿ ಮತ್ತು ಪ್ರತಿಫಲಗಳಗಳ ನಡುವೆ ಹೊಂದಾಣಿಕೆಯಿಲ್ಲದೆ ದಿಕ್ಕು ತಪ್ಪಿದವು. ಆಯೋಗದ ದೃಷ್ಟಿಕೋನ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನಗಳ ವಿಷಯದಲ್ಲಿ ಅನುಸರಿಸಿದ  ತಾರತಮ್ಯ ನೀತಿಯಿಂದಾಗಿ  ಹಲವಾರು ಆಕ್ಷೇಪಣೆಗಳಿಗೆ ಮತ್ತು ವಿವಾದಗಳಿಗೆ ಗುರಿಯಾಗಬೇಕಾಯಿತು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡಸಲು ಸೂಕ್ತವಾದ ಸಲಹೆ ಹಾಗೂ ಮಾರ್ಗದರ್ಶಕ ತಜ್ಞರ ಕೊರತೆಯಿಂದಾಗಿ ಯೋಜನಾ ಆಯೋಗವೆಂಬುದು ನಿವೃತ್ತ ರಾಜಕಾರಣಿಗಳ ಆಶ್ರಯ ತಾಣವಾಯಿತು. ಆಯೋಗದಲ್ಲಿ ಪ್ರಧಾನಿ ಪದನಿಮಿತ್ತ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದರ ಮೂಲಕ ಆಡಳಿತದಲ್ಲಿರುವ ಕೇಂದ್ರ ಸರ್ಕಾರ ತನಗೆ ಇಷ್ಟ ಬಂದ ವ್ಯಕ್ತಿಯನ್ನು ನೇಮಕ ಮಾಡಬಹುದಾಗಿದೆ. ಉಳಿದಂತೆ ಕೇಂದ್ರ ಮಂತ್ರಿ ಮಂಡಲದಲ್ಲಿರುವ  ಗೃಹ, ಆರೋಗ್ಯ, ರಸಾಯನಿಕ ಗೊಬ್ಬರ ಖಾತೆ ಸಚಿವ , ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವರನ್ನು ನೇಮಕ ಮಾಡಲಾಗುತ್ತದೆ. ಜನಪ್ರತಿನಿಧಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಅರ್ಹತೆಯನ್ನು ಹೊರತು ಪಡಿಸಿದರೆ ಸಚಿವರಿಗೆ ಯೋಜನಾ ಆಯೋಗದಲ್ಲಿ ಸದಸ್ಯರಾಗಲು ಯಾವುದೇ ಅರ್ಹತೆಗಳಿಲ್ಲ ಎಂಬುದು ಕಟುವಾದರೂ ಒಪ್ಪಿಕೊಳ್ಳಲೇ ಬೇಕಾದÀ ವಾಸ್ತವಿಕ ಅಂಶ. ಹೀಗೆ ವಲಯವಾರು ವಿಷಯಗಳ ತಂತ್ರಜ್ಞರಲ್ಲದ ಹಾಗೂ ರಾಜಕೀಯ ವ್ಯಕ್ತಿಗಳಿಂದ ತುಂಬಿ ಹೋಗಿರುವ ಆಯೋಗದಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಮತ್ತು ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ಯೋಜನಾ ಆಯೋಗಕ್ಕೆ ರಾಜಕೀಯೇತರ ಅಂದರೆ ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಕೃಷಿ, ವಾಣಿಜ್ಯ, ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಜ್ಞರನ್ನು ಒಳಗೊಂಡಂತೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಿಗಾಗಿ ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರರನ್ನು ನೇಮಕ ಮಾಡುವ ಅವಶ್ಯಕತೆ ಎದ್ದು ಕಾಣುತ್ತಿದೆ. ದೇಶದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸದ್ಭಳಕೆ ಹಾಗೂ ಕಾಲಕ್ಕೆ ಅನುಗುಣವಾಗಿ ಯಾವ ಯಾವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬುದರ ಕುರಿತ ಚಿಂತನೆ ನಡೆಯಬೇಕಿದೆ. ಅಭಿವೃದ್ಧಿಗೆ ತೊಡಕಾಗಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಗುರುತಿಸುವಿಕೆ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಎಡೆಯಿಲ್ಲದಂತೆ ನಿಗಾ ವಹಿಸುವುದು ಇವೆಲ್ಲವೂ ಇಂದಿನ ಯೋಜನಾ ಆಯೋಗದ ಆದ್ಯ ಕರ್ತವ್ಯಗಳಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅರವತ್ತೇಳು ವರ್ಷಗಳು ಕಳೆದು ಅರವತ್ತೆಂಟನೆಯ ನೇ ವರ್ಷಕ್ಕೆ ಕಾಲಿಟ್ಟರೂ ದೇಶದ ಬಡತನದ ನಿವಾರಣೆಯಾಗಲಿಲ್ಲ. ವಸತಿ ಮತ್ತು ಆರೋಗ್ಯ ಸಮಸ್ಯೆ ಭಾರತದ ಜ್ವಲಂತ ಸಮಸ್ಯೆಗಳಾಗಿ ಇನ್ನೂ ಕಾಡುತ್ತಲೇ ಇವೆ. ಕುಡಿಯುವ ಒಂದು ಲೀಟರ್ ನೀರಿನ ಬೆಲೆ ಇಪ್ಪತ್ತು ರೂಪಾಯಿ ಆಗಿರುವಾಗ, ದಿನಕ್ಕೆ ಇಪ್ಪತ್ತೆಂಟು  ರೂಪಾಯಿಗಳನ್ನು ಸಂಪಾದಿಸುವ ವ್ಯಕ್ತಿ ಬಡವನಲ್ಲ ಎಂದು ವ್ಯಾಖ್ಯಾನಿಸುವ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಅವರ ಮಾತಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು ತಿಳಿಯುತ್ತಿಲ್ಲ. ವಿಶ್ವಬ್ಯಾಂಕ್ ದಿನವೊಂದಕ್ಕೆ ಒಂದೂವರೆ ಡಾಲರ್ ಅಂದರೆ ತೊಂಬತ್ತು ರೂಪಾಯಿ ಸಂಪಾದಿಸಲು ಸಾಧ್ಯವಾಗದ ವ್ಯಕ್ತಿಯನ್ನು ಬಡವನೆಂದು ಗುರುತಿಸಿರುವ ಸಂಗತಿ ಭಾರತದ ಯೋಜನಾ ಆಯೋಗಕ್ಕೆ ತಿಳಿದಿಲ್ಲವೆ? ಇಂತಹ ವೈರುಧ್ಯಮಯ ಹೇಳಿಕೆಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಯೋಜನಾ ಆಯೋಗಕ್ಕೆ ಹೊಸ ಸ್ವರೂಪ ಕೊಡುವುದು ಅನಿವಾರ್ಯವಾಗಿದೆ. ಆದರೆ ಜಾಗತೀಕರಣದ ದಿನಗಳಲ್ಲಿ ಯಾವುದೇ ಮಾನವೀಯ ಮುಖವಿಲ್ಲದೆ, ಲಾಭಕೋರತನವೊಂದೇ ತನ್ನ ಗುರಿ ಎಂದು ಹೊರಟಿರುವ ಮುಕ್ತ ಮಾರುಕಟ್ಟೆ ನೀತಿಗೆ ಎದುರಾಗಿ, ಅಭಿವೃದ್ಧಿಯ ಗುರಿ ಮತ್ತು ಯೋಜನೆಗಳು  ದಿಕ್ಕು ತಪ್ಪದಂತೆ ಮುನ್ನೆಡಸಲು, ತಜ್ಞರ ಜೊತೆಗೆ ನೆಲದ ನೈಸರ್ಗಿಕ ಸಂಪತ್ತು ಲೂಟಿಯಾಗದಂತೆ ತಡೆಯಬಲ್ಲ ಮತ್ತು ನೆಲದ ಸಂಸ್ಕøತಿಯ ವಾರಸುದಾರರಾದ ಆದಿವಾಸಿಗಳು ಮತ್ತು ದಲಿತ ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಸಹ ಯೋಜನಾ ಆಯೋಗದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ.


ಪ್ರಧಾನಿಯಾಗಿ ನೂರು ದಿನಗಳು ಪೂರೈಸಿರುವ ನರೇಂದ್ರಮೋದಿಯವರು ಇತ್ತೀಚೆಗೆ ಜಪಾನ್ ಪ್ರವಾಸದ ಸಂದರ್ಭದಲ್ಲಿ ಹೇಳಿದ ಮಾತುಗಳು ನಮ್ಮನ್ನು ಆತಂಕಕ್ಕೆ ದೂಡುತ್ತಿವೆ. “ ಜಪಾನ್ ಹತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಭಾರತ ಎರಡು ವರ್ಷಗಳಲ್ಲಿ ಸಾಧಿಸಿ ತೋರಬೇಕಾಗಿದೆಎನ್ನುವ ಅವರ ಮಾತುಗಳಲ್ಲಿ ಬಂಡವಾಳಶಾಹಿ ಜಗತ್ತಿಗೆ ಭಾರತವನ್ನು ಮುಕ್ತವಾಗಿ ತೆರದಿಡುವ ಉತ್ಸಾಹ ಕಂಡು ಬರುತ್ತಿದೆ. ಕೇವಲ ಒಂದು ವಲಯದ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿ ಎಂದು ಪ್ರತಿಬಿಂಬಿಸುವ ಕುರುಡು ನೀತಿಯನ್ನು ಕೈ ಬಿಟ್ಟು, ಭಾರತದ ಎಲ್ಲಾ ರಂಗಗಳ ಅಭಿವೃದ್ಧಿಗೆ ಒತ್ತು ನೀಡಬೇಕಾದ ನೈತಿಕ ಜವಾಬ್ದಾರಿ ಯೋಜನಾ ಆಯೋಗದ ಮೇಲಿದೆರಷ್ಯಾದ ಮಾದರಿಯನ್ನು ಕೈ ಬಿಟ್ಟು ಚೀನಾದ ಅಲ್ಪಾವಧಿಯ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೊತೆಗೆ ಹೊಸದಾಗಿ ಯೋಜನೆಯನ್ನು ಅನುಷ್ಟಾನಗೊಳಿಸುವ ಮುನ್ನ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಅಥವಾ ರಾಜ್ಯದಲ್ಲಿ ಪ್ರಾಯೋಗಿಕ ಅಳವಡಿಸಿ, ಅದರ ಸಾಧಕ ಬಾಧಕಗಳನ್ನು ತಿಳಿದು ನಂತರ ದೇಶ್ಯಾದಂತ ಅಳವಡಿಸಬಲ್ಲ ಸೂಕ್ಷ್ಮ ತಿಳುವಳಿಯುಳ್ಳ ತಜ್ಞರನ್ನು ಆಯೋಗ ಒಳಗೊಳ್ಳಬೇಕಿದೆ. 1971 ರಲ್ಲಿ ಪಾಕಿಸ್ತಾನದಿಂದ ವಿಭಜನೆಗೊಂಡು ನೂತನವಾಗಿ ಉದಯವಾದ ನೆರೆಯ ಬಂಗ್ಲಾ ದೇಶವು ಯುದ್ಧ, ಮತ್ತು ರಾಜಕೀಯ ಅಸ್ಥಿರತೆ ಹಾಗೂ ಬರಗಾಲ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳ ನಡುವೆಯೂ ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನೋವಲ್ ಪ್ರಶಸ್ತಿ ವಿಜೇತ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್  ಅಲ್ಲಿನ ಜನರ ಬಡತನವನ್ನು ನಿವಾರಿಸುವಲ್ಲಿ ಭಾರತಕ್ಕಿಂತ ಮುಂದಿದೆ ಎಂಬ ಅಂಶವನ್ನು ನಮ್ಮನ್ನಾಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಅರಿಯಬೇಕಿದೆ. ಕೇವಲ ರಾಜಕೀಯ ವಿಮೋಚನೆಯೆಂಬುದು ಸ್ವಾತಂತ್ರ್ಯಕ್ಕೆ ಅರ್ಥವಲ್ಲ, ಭಾರತದ ಜನಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಂದ ವಿಮೋಚನೆ ಸಿಕ್ಕಾಗ ಮಾತ್ರ ಅದು ನಿಜವಾದ ಅರ್ಥದಲ್ಲಿ ಸ್ವಾತಂತ್ಯವಾಗಬಲ್ಲದು.
              

                        ( ದಿನಾಂಕ 10-09-2014 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)


                                                                 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ