ಶುಕ್ರವಾರ, ಡಿಸೆಂಬರ್ 18, 2015

ಮಂಜುನಾಥ ಚಾಂದ್ ರವರ ಚಂದನೆಯ ಕಥೆಗಳು



ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದಕದ ತೆರೆದ ಆಕಾಶಕೃತಿಯು ಹಲವು ಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆ. ಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತು ಮಾಡುತ್ತಿರುವ ಪತ್ರಕರ್ತರೆ ಹೆಚ್ಚು. ಆದರೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆ ಮರೆಯ ಕಾಯಿಯಂತೆ, ತುಂಬಿದ ಕೊಡದಂತೆ ಬದುಕಿದವರು. ಅವರ ವ್ಯಕ್ತಿತ್ವದ ಗುಣಗಳು   ಕಥಾ ಸಂಕಲ£ದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದು, ಶಾಪವೂ ಹೌದು. ಏಕೆಂದರೆ, ಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮ. ಆದರೆ, ಅವರ ಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿ, ಲವಲವಿಕೆಯನ್ನಾಗಲಿ ಕಾಣುವುದು ಕಷ್ಟ. ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದು. ಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳು, ಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳು, ನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನು ತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ ತಮ್ಮದೂರತೀರಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದ ಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆ. ಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳು ಸಾಬೀತು ಪಡಿಸಿವೆ. ಏಕೆಂದರೆ, ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳು. ವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆ ತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು ಕಾರಣಕ್ಕೆ. ಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕು ಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆ. ಜೊತೆಗೆ ನಾವು ವೈದೇಹಿಯವರ ಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.



ನಗರದ ಬದುಕಿನ ಕಥೆಗಳಿಗಿಂತ ಹೆಚ್ಚಾಗಿ ತಮ್ಮ ಪರಿಸರ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಚಾಂದ್ ರವರ ನಿರೂಪಣೆ ಮತ್ತು ಕಥೆಗಳ ಪಾತ್ರಗಳಿಗೆ ಬಳಸಿರುವ ಭಾಷೆಯಲ್ಲಿ ಕವಿಯೊಬ್ಬನ ಪ್ರತಿಭೆ ಅನಾವರಣಗೊಂಡಿದೆ. ಸಂಕಲನದ ತಿಮಿರ, ಸವೆದ ಹಾದಿಯ ಉಸಿರು, ಹೊಳೆ ದಂಡೆಯ ಆಚೆ, ಸಂತೆಯಿಂದ ಬಂದವನು, ಊರಿಗೆ ಬಂದ ದೇವರು ಕಥೆಗಳು ಗಮನ ಸೆಳೆಯುತ್ತವೆ. ಜೊತೆಗೆ ಓದುಗರ ಮನದಲ್ಲಿ ಬಹುಕಾಲ ನಿಲ್ಲುತ್ತವೆ.


ಜಾಗತೀರಣವೆಂಬುದು ಸದ್ದಿಲ್ಲದೆ, ಅದೃಶ್ಯ ರೂಪದಲ್ಲಿ ನಮ್ಮನ್ನ ಹಿಂಬಾಲಿಸಿಕೊಂಡು ಬರುತ್ತಿರುವ  ಬೆಂಬಿಡದ ಭೂತ.  ನಮಗರಿವಾಗದಂತೆ ಅದು ನಮ್ಮನ್ನು ತಬ್ಬಿಕೊಂಡು  ಹೊಸಕಿ ಹಾಕುತ್ತಿರುವ ವರ್ತಮಾನದ ದುರಂತಗಳು ಚಾಂದ್ ರವರ ಕಥೆಗಳಲ್ಲಿ ರೂಪಕದ ಭಾಷೆಯ ಮೂಲಕ  ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ. ನಾವು  ಹುಟ್ಟಿ ಬೆಳೆದು ಓಡಾಡಿದ  ನೆಲವೆಂಬುದುಈಗ  ನಮ್ಮದೆರು  ಆದುನಿಕತೆಯ ಕಾಡ್ಗಿಚ್ಚಿಗೆ ಸಿಲುಕಿ, ಇತ್ತ ಒಣಗಲಾರದಅತ್ತ ಬೇರು ಬಿಡಲಾರದ ಅರೆ ಬೆಂದ ಹಸಿರು ಮರದಂತಾಗಿದೆ. ಅಂತಹ ನೋವಿನ, ಸಂಕಟದ ಕ್ಷಣಗಳನ್ನು ಚಾಂದ್ ತಮ್ಮ ಕಥೆಗಳ ಪಾತ್ರಗಳ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆಜೊತೆಗೆ ಅವರ ಮುಂದಿನ ಕಥೆಗಳ ಕುರಿತು ನಮ್ಮಲ್ಲಿ ಆಸೆ ಮೂಡಿಸಿದ್ದಾರೆ.

2 ಕಾಮೆಂಟ್‌ಗಳು:

  1. ಚಾಂದ್ ಅವರ ಕಥೆಗಳನ್ನು ಒದಲೇಬೇಕೆಂಬ ಓಳ ಒತ್ತಡವನ್ನು ಭೂಮಿಗೀತದ ಲೇಖನ
    ಉಂಟು ಮಾಡಿದೆ.
    ಸುಬ್ಬಣ್ಣ
    ಬೆಂಗಳೂರು

    ಪ್ರತ್ಯುತ್ತರಅಳಿಸಿ
  2. ನನ್ನ 'ಪತ್ರಿಕಾ ಬದುಕ'ನ್ನು ಬಹಳ ಕಾಲದಿಂದ ಬಲ್ಲ ಕೊಪ್ಪ ಅವರ ಆಪ್ತವಾದ ಬರಹಕ್ಕೆ ಧನ್ಯವಾದಗಳು. ಎಷ್ಟೋ ಬಾರಿ ನಮ್ಮೊಳಗಿನ ಶಕ್ತಿಯ ಅರಿವೇ ನಮಗಿರುವುದಿಲ್ಲ. ಕೊಪ್ಪ ಅವರ ಈ ಬರಹ ಆ ಅರಿವು ಮೂಡಿಸಿದೆ ಎಂದು ಭಾವಿಸುತ್ತೇನೆ. -ಚಾಂದ್.

    ಪ್ರತ್ಯುತ್ತರಅಳಿಸಿ