ಮಂಗಳವಾರ, ಜನವರಿ 5, 2016

ಮರಾಠಿಯಿಂದ ಕನ್ನಡ ರಂಗಭೂಮಿಗೆ ಬಂದ ತಮಾಶ ನೃತ್ಯ ನಾಟಕ



ಇದೇ ಜನವರಿ ಮೂರರಂದು ಭಾನುವಾರ ಕನ್ನಡ ರಂಗಭೂಮಿಯ ಪಾಲಿಗೆ ಅವಿಸ್ಮರಣೀಯ ದಿನವಾಯಿತು. ಮರಾಠಿಯ ಭಾಷೆಯ ತಮಾಶ ನೃತ್ಯ ನಾಟಕಕ್ಕೆ ಕನ್ನಡದ ಗಮಲು ಸೇರಿಕೊಂಡಿತು. ಮಹಾರಾಷ್ಟ್ರದ ಜಾನಪದ ಕಲೆಗಳಿಗೆ ವಿಶೇಷವಾಗಿ ನೃತ್ಯ ಮತ್ತು ಸಂಗೀತಕ್ಕೆ ತಾಯಿ ಬೇರು ಎನಿಸಿಕೊಂಡ ಹಾಗೂ ಮರಾಠ ಜನರ ಬದುಕಿನೊಳಗೆ ಅವಿಭಾಜ್ಯ ಅಂಗದಂತೆ ಬೆರೆತು ಹೋಗಿರುವ ಹಾಗೂ ಅಲ್ಲಿನ ಸಂಸ್ಕೃತಿ ಸೊಗಡಿನ ತಮಾಶ ನೃತ್ಯ ನಾಟಕ ಪ್ರಥಮಬಾರಿಗೆ  ಧಾರವಾಡದಲ್ಲಿ ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಎರಡು ಭಾಷೆಗಳ  ಮೈತ್ರಿಗೆ ನಾಂದಿಯಾಯಿತು.
ಇಂತಹ ಅಪರೂಪದ ಪ್ರಯೋಗಕ್ಕೆ ಮುಂದಾದ ಧಾರವಾಡ ರಂಗಾಯಣದ ನಿರ್ದೇಶಕ ಪ್ರಕಾಶ್ ಗರುಡ ಮತ್ತು ಆಡಳಿತಾಧಿಕಾರಿ ಕೆ,ಹೆಚ್, ಚನ್ನೂರ ಹಾಗೂ ಮರಾಠಿ ರೂಪವನ್ನು ಕನ್ನಡದ ಭಾಷೆಗೆ ತಂದಿರುವ ನಮ್ಮ ನಡುವಿನ ದೈತ್ಯ ಪ್ರತಿಭೆ ಡಿ.ಎಸ್. ಚೌಗಲೆ ಇವರನ್ನು ನಾವು ಅಭಿನಂದಿಸಬೇಕು.
ಮೊನ್ನೆ ಭಾನುವಾರ ಕಛೇರಿ ಕೆಲಸ ಮಗಿಸಿ, ಸಂಜೆ  ಮನೆಗೆ ಬಂದ ತಕ್ಷಣ ನನ್ನ ಕಿರಿಯ ಸಹೋದರನಂತಿರುವ ಡಿ.ಎಸ್. ಚೌಗುಲೆಗೆ ಫೋನ್ ಮಾಡಿದೆ. “ ಅಣ್ಣಾ ನೀನು ಒಂದು ಗಂಟೆ ಮುಂಚಿತವಾಗಿ ಬಾ, ಬಾಂಬೆ ವಿಶ್ವ ವಿದ್ಯಾನಿಲಯದ ಜಾನಪದ ಕಲೆಗಳ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಗಣೇಶ್ ಚಂದನ ಶಿವ ಮತ್ತು ಕೊಲ್ಲಾಪುರದ ಶಿವಾಜಿ ವಿ.ವಿ.ಯ ಜಾನಪದ ವಿಭಾಗದ ಪ್ರೊಫೆಸರ್ ಶಿಂಧೆ ಬಂದಿದ್ದಾರೆ. ಅವರ ಜೊತೆ ಮಾತನಾಡುವುದಿದೆ” ಎಂದು  ಆಹ್ವಾನ ಹೇಳಿದಾಗ  ಮರು ಮಾತನಾಡದೆ ಧಾರವಾಡ ರಂಗಾಯಣ ಕಛೇರಿಯತ್ತ ಹೊರಟೆ. ಅಲ್ಲಿನ ವಿ.ವಿ.ಗಳ ಜಾನಪದ ವಿಭಾಗಗಳಲ್ಲಿ  ಜಾನಪದ ಪಠ್ಯಕ್ಕಿಂತ ಕಲೆಗಳ ಪ್ರದರ್ಶನ ಮತ್ತು ತರಬೇತಿಗೆ ಒತ್ತು ನೀಡಿರುವುದನ್ನು ಚಂದನ ಶಿವ ಮತ್ತು ಶಿಂಧೆ ನಮಗೆ ವಿವರಿಸಿದರು. ಪ್ರತಿ ವರ್ಷ ಐನೂರು ಮಂದಿ ವಿದ್ಯಾರ್ಥಿಗಳು ಜಾನಪದ ಕಲೆಗಳಲ್ಲಿ ಪದವೀಧರರಾಗಿ ಹೊರಬರುವುದರ ಜೊತೆಗೆ ಕಲಾವಿದರಾಗಿ ಹೊರ ಹೊಮ್ಮುವ ಬಗೆಯನ್ನು ವಿವರಿಸಿದರು. ನಮ್ಮ ವಿ.ವಿ.ಗಳು ಜಾನಪದ ವಿಷಯ ಕುರಿತಂತೆ ಕೃತಿಗಳನ್ನು ಮುದ್ರಣ ಮಾಡಿಸುವುದಷ್ಟೇ ಜಾನಪದ ಕಲೆಗಳ ಉದ್ಧಾರಕ್ಕೆ ಇರುವ ಏಕೈಕ ಮಾರ್ಗ ಎಂದು ತಿಳಿದುಕೊಂಡಿರುವ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರದ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸಿದವು.

ಬೆಳಗಾಗಿ ಜಿಲ್ಲೆಯ ಗಡಿಭಾಗದ ಹಳ್ಳಿಯಲ್ಲಿ ಜನಿಸಿ, ಕನ್ನಡ ಮತ್ತು ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಪರಂಪರೆಯಲ್ಲಿ ಬೆಳದಿರುವ ಡಿ.ಎಸ್.ಚೌಗಲೆ ಬೆಳಗಾವಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ.  ಕಳೆದ ಎರಡು ದಶಕಗಳಿಂದ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಕೊಂಡಿಯಂತೆ ಕೆಲಸ ಮಾಡುತ್ತಿರುವ ಅಪರೂಪದ ಹಾಗೂ ಬಹುಮುಖ ಪ್ರತಿಭೆಯ ವ್ಯಕ್ತಿ. ರಂಗಭೂಮಿ ಕುರಿತಂತೆ ಡಾಕ್ಟರೇಟ್ ಪದವಿಗಳಿಸಿರುವ ಚೌಗಲೆ ಕನ್ನಡದ ಪ್ರತಿಭಾವಂತ ಕಥೆಗಾರ. ವರ್ಣ ಚಿತ್ರ ಕಲಾವಿದ, ನಾಟಕಕಾರ, ಅನುವಾದಕ ಹೀಗೆ ಸಕಲ ಕಲಾವಲ್ಲಭನಂತೆ ಗೋಚರಿಸುವ ಒಬ್ಬ ಅಪರೂಪದ ಮಿತ್ರ. ಗಾಂಧಿ v/s ಗಾಂಧಿ ಯಂತಹ ಮರಾಠಿ ನಾಟಕವನ್ನು ಕನ್ನಡಕ್ಕೆ ಹೊಸ ಸಂಚಲನವನ್ನುಂಟು ಮಾಡಿರುವ ಡಿ.ಎಸ್. ಚೌಗಲೆ ಈಗ ಮರಾಠಿಯ ಪ್ರಸಿದ್ಧ ನೃತ್ಯ ನಾಟಕ ಪ್ರಕಾರವನ್ನು ಕನ್ನಡಕ್ಕೆ ತರುವುದರ ಮೂಲಕ ಹೊಸ ದಾಖಲೆ ಬರೆದಿರುವುದು ವಿಶೇಷ.
 ತಮಾಶ ಅಂದರೆ ತಮಸ್ (ಕತ್ತಲು) ಮತ್ತು ಆಶಾ (ಬೆಳಕು) ಎಂದು ಕರೆಯಬಹುದಾದ ಒಂದು ಪರಿಭಾಷೆ. ವಿಠಲ ಅಥವಾ ವಿಠೋಭ, ಸಂತ ತುಕಾರಾಂ ಮುಂತಾದವರ ಪ್ರಭಾವದಿಂದ ಭಕ್ತಿ ಪರಂಪರೆಯ ನೆಲವಾಗಿರುವ  ಮಹಾರಾಷ್ಟ್ರದಲ್ಲಿ ತಮಾಶಾ ಎಂಬ ನೃತ್ಯ ಪ್ರಕಾರಕ್ಕೆ ಮೂರು ಶತಮಾನಗಳ ಇತಿಹಾಸವಿದೆ. ಆರಂಭದ ದಿನಗಳಲ್ಲಿ ಇಡೀ ರಾತ್ರಿ ಲಾವಣಿ ರೂಪದಲ್ಲಿ ಗ್ರಾಮೀಣ ಜನರೆದುರು ಪ್ರಸ್ತುತ ಪಡಿಸುತ್ತಿದ್ದ ಈ ಕಲೆಗೆ ಸಂಭಾಷಣೆ ರೂಪದ ನಾಟಕ ಮತ್ತು ನೃತ್ಯವನ್ನು ನಂತರದ ದಿನಗಳಲ್ಲಿ ಜೋಡಿಸಲಾಯಿತು. ಆಯಾ ಕಾಲಕ್ಕೆ ತಕ್ಕಂತೆ ಅನೇಕ ಪರಿವರ್ತನೆಗಳಾದವು. ದೇವರನ್ನು ಛೇಡಿಸುವುದಕ್ಕೆ ಹುಟ್ಟಿಕೊಂಡ ಮಾತುಗಳು ದ್ವಂದಾರ್ಥದ ಸಂಭಾಷಣೆಗಳಾಗಿ ಪರಿವರ್ತನೆ ಹೊಂದಿದವು. ಭಕ್ತಿ ರಸದ ಕಾವ್ಯವು ಶೃಂಗಾರ ಕಾವ್ಯವಾಗಿ ರೂಪುಗೊಂಡಿತು. ಬಂಗಾಳಿ ಕವಿ ಜಯದೇವ ಕವಿಯ ಗೀತ ಗೋವಿಂದ ಕಾವ್ಯ ಮರಾಠಿ ಮತ್ತು ತೆಲುಗು ಭಾಷೆಯ ಮೇಲೆ ಪ್ರಭಾವ ಬೀರಿದ ಪರಿಣಾಮ ಹಾಗೂ ವೈಷ್ಣವ ಪಂಥ ಉತ್ತುಂಗದಲ್ಲಿದ್ದ ಕಾರಣ,  ಭಕ್ತಿ ಕಾವ್ಯವೆಲ್ಲವೂ ಆರಾಧನೆಯ ನೆಪದಲ್ಲಿ ಶೃಂಗಾರ ಕಾವ್ಯವಾಗಿ ಮರು ಹುಟ್ಟು ಪಡೆಯಿತು. ದೇವರಿದ್ದ ಜಾಗದಲ್ಲಿ ದೊರೆಗಳನ್ನು ಇರಿಸಲಾಯಿತು., ಶೃಂಗಾರ ಕಾವ್ಯದಲ್ಲಿ ಅವರನ್ನು ಭಜಿಸತೊಡಗಿದರು.  ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳಿಗೆ ತಮಾಶವೂ ಸಹ ಒಳಗಾಯಿತು. ಅದು ಅಂತಿಮವಾಗಿ ಎಲ್ಲಿಗೆ ತಲುಪಿತೆಂದರೆ, ಸಭ್ಯರು ಮತ್ತು ಮಹಿಳೆಯರು ಕುಳಿತು ನೋಡುವ ಪ್ರಕಾರ ಇದಲ್ಲ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿತು. ನಮ್ಮ ಉತ್ತರ ಕರ್ನಾಟಕದ ನಾಟಕ ಕಂಪನಿಗಳು ದ್ವಂದಾರ್ಥ ಮತ್ತು ಅಶ್ಲೀಲ ದ ಸಂಭಾಷಣೆಗೆ ಜೋತು ಬಿದ್ದಂತೆ ತಮಾಶ ಕಲಾವಿದರೂ ಸಹ ಜೋತು ಬಿದ್ದರು. ರಾತ್ರಿ ಹನ್ನೊಂದು ಗಂಟೆಗೆ ಆರಂಭವಾಗುವ ಈ ಪ್ರದರ್ಶನ ಬೆಳಗಿನ ಜಾವದವರೆಗೆ ಮುಂದುವರಿಯುತ್ತಿತ್ತು. 1996 ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ಗೆಳೆಯನ ಜೊತೆ ತಮಾಶ ಪ್ರದರ್ಶನಕ್ಕೆ ಹೋಗಿ ಇಪ್ಪತ್ತು ರುಪಾಯಿ ನೀಡಿ ಅಂಗೈ ಮೇಲೆ ಸೀಲು ಮುದ್ರೆ ಒತ್ತಿಸಿಕೊಂಡು ( ಸಿಕ್ಕ) ಅದನ್ನು ಗೇಟ್ ನಲ್ಲಿ ಟಿಕೇಟ್ ನಂತೆ ಅದನ್ನು ತೋರಿಸಿ ಥಿಯಟರ್ ಒಳಗೆ ಹೋಗಿ ಕುಳಿತು ನೃತ್ಯ ನೋಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ಇತ್ತೀಚೆಗೆ ಇದನ್ನು ಪರಿಷ್ಕರಿಸಿ ಅಶ್ಲೀಲ ಸಂಭಾಷಣೆಗಳನ್ನು ತೆಗೆದು ಹಾಕಿ, ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು  ಜನರತ್ತ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ.


ತಮಾಶಾ ನೃತ್ಯ ನಾಟಕ ಪ್ರಕಾರದಿಂದ ಟಿಸಿಲೊಡೆದ ಶ್ರೀ ಕೃಷ್ಣ ಪಾರಿಜಾತ ಎಂಬ ಸಣ್ಣಾಟ ನಾಟಕದ ಪ್ರಕಾರ ಮರಾಠಿ ಮಾತೃ ಭಾಷೆಯನ್ನಾಡುವ ಗೌಳಿಗರಿಂದ ಕನ್ನಡಕ್ಕೂ ಬಂದಿರುವುದು ವಿಶೇಷವಾಗಿದೆ.. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರು ಶ್ರೀ ಕೃಷ್ಣ ಪಾರಿಜಾತ ನಾಟಕದಲ್ಲಿ ಶ್ರೀ ಕೃಷ್ಣ ನ ಪಾತ್ರದಲ್ಲಿ ಅನೇಕ ಮುಸ್ಲಿಂ ಸಮುದಾಯದ ನಟರು ಮತ್ತು ನಾಟಕಕಾರರು ಹೆಸರುವಾಸಿಯಾಗಿದ್ದಾರೆ. ಇಂತಹವರಲ್ಲಿ ಅಪ್ಪಾಲಾಲ್ ಪ್ರಮುಖರು.  ತಮಾಶಾ ಕನ್ನಡಕ್ಕೆ ಶ್ರೀ ಕೃಷ್ಣ ಪಾರಿಜಾತ, ರಾಧಾನಾಟ ಮುಂತಾದ ನಾಟಕ ಪ್ರಕಾರಗಳನ್ನು ನೀಡಿದರೆ, ತಮಿಳುನಾಡಿನಲ್ಲಿ ಸಾದಿರ್ ಹೆಸರಿನಲ್ಲಿ ಪ್ರಚಲಿತದಲ್ಲಿದ್ದ ಪ್ರಾಚೀನ ಭರತನಾಟ್ಯ ನೃತ್ಯ ಪ್ರಕಾರಕ್ಕೆ  ಕೊರವಂಜಿ ನೃತ್ಯವನ್ನು ಹಾಗೂ ವಿಶೇಷವಾಗಿ  ಪಾದಗಳ ಚಲನೆಗೆ ತ್ವರಿತಗತಿಯನ್ನು ತಂದುಕೊಟ್ಟಿತು. ತಮಿಳುನಾಡಿ ನ ದೇವಸ್ಥಾನಗಳಲ್ಲಿ ಆಗಮಶಾಸ್ತ್ರಗಳ ಹಿನ್ನಲೆಯಲ್ಲಿ ಸೃಷ್ಟಿಯಾಗಿದ್ದ ದೇವದಾಸಿಯ ನೃತ್ಯಗಳು ಆಚರಣೆಯಲ್ಲಿದ್ದರೆ, ಭರತ ಮುನಿಯ ಅಭಿನಯ ಶಾಸ್ತ್ರ ದ ನವರಸಗಳನ್ನು ಒಳಗೊಂಡ ಸಾದಿರ್ ನೃತ್ಯವು ದೊರೆಗಳ ಅರಮನೆಯಲ್ಲಿ ರಾಜದಾಸಿಯರಿಂದ ನೆರವೇರುತ್ತಿತ್ತು. 17 ನೇ ಶತಮಾನದಲ್ಲಿ ವಿಜಯನಗರದದ ಅರಸ ರ ಮೂಲಕ ಕ್ರೇತ್ರಜ್ಞ ನ ಪದಾಲು ಹೆಸರಿನ ಶೃಂಗಾರ ಕಾವ್ಯಗಳು ತಮಿಳುನಾಡಿಗೆ ಪದಂ ಹೆಸರಿನಲ್ಲಿ ನೃತ್ಯ ಮತ್ತು ಸಂಗೀತಕ್ಕೆ ಪ್ರವೇಶ ಮಾಡಿದವು. ಆನಂತರ 18 ನೇ ಶತಮಾನದಲ್ಲಿ ತಂಜಾವೂರನ್ನು ಆಕ್ರಮಿಸಿಕೊಂಡು ಆಳ್ವಿಕೆ ಆರಂಭಿಸಿದ ಮರಾಠಿ ಮೂಲದ ಶರ್ಪೋಜಿಯ ಕಾಲದಲ್ಲಿ ತಮಿಳುನಾಡಿನ ಆಸ್ಥಾನಕ್ಕೆ ತಮಾಶ ನೃತ್ಯ ಪ್ರವೇಶ ಪಡೆಯಿತು. ( ಶರ್ಪೋಜಿಯು ಶಿವಾಜಿಯ ಮಲತಾಯಿಯ ಪುತ್ರ) ತೆಲುಗಿನ ಪದಾಲು ( ಪದಗಳು) ಮತ್ತು ಮರಾಠಿಯ ತಮಾಶ ನೃತ್ಯ ಮತ್ತು ಭರತಮುನಿಯ ಅಭಿನಯ ಶಾಸ್ತ್ರ ಇವುಗಳ ಸಂಕರದಿಂದಾಗಿ ಸಾದಿರ್ ನೃತ್ಯ  ಹದಿನೆಂಟನೆಯ ಶತಮಾನದಲ್ಲಿ ಹೊಸ ರೂಪ ಪಡೆಯಿತು. ಮರಾಠಿ ದೊರೆಗಳ ಆಳ್ವಿಕೆಯ ಕಾಲದಲ್ಲಿ ತಂಜಾವೂರು ಮತ್ತು ಮಧುರೈ ಸಂಸ್ಥಾನಗಳಲ್ಲಿ ನೃತ್ಯ ಮತ್ತು ಸಂಗೀತ ಈ ಎರಡೂ ಪ್ರಕಾರಗಳು ಉಚ್ಛ್ರಾಯ ಸ್ಥಿತಿ ತಲುಪಿದವು. ವಿಜಯ ನಗರ ಸಾಮ್ರಾಜ್ಯದ ಮಾಂಡಲೀಕರು ಮತ್ತು  ಮರಾಠಿ ದೊರೆಗಳ ಅಭಿರುಚಿಗೆ ಸಾಕ್ಷಿಯಾಗಿ ತಂಜಾವೂರಿನಲ್ಲಿರುವ ಸರಸ್ವತಿ ಮಹಲ್, ತಿರುವಯ್ಯೂರಿನ ಕಾವೇರಿ ನದಿ ತೀರದಲ್ಲಿರುವ ಸಂಗೀತ ಮಹಲ್, ಮತ್ತು ಮಧುರೈ ನಗರದಲ್ಲಿರುವ ನಾಯಕರ್ ಪ್ಯಾಲೆಸ್ ಎಂಬ  ಅರಮನೆಯೊಳಗೆ ಇರುವ ಬೃಹತ್ ನೃತ್ಯ ಸಭಾಂಗಣ ಇವೆಲ್ಲವೂ ಈಗಲೂ ಸಹ ಅಸ್ತಿತ್ವದಲ್ಲಿವೆ.
ಮಹಾರಾಷ್ಟ್ರದಲ್ಲಿ ಲೋಕನೃತ್ಯ ಎಂದು ಕರೆಯುವ ಈ ತಮಾಶ ಪ್ರಯೋಗಕ್ಕೆ ಅಧ್ಯಾತ್ಮಿಕ , ರಾಜಕೀಯ, ಸಾಮಾಜಿಕ ವಿಡಮಂಬನೆ ಲಾವಣಿ ಮತ್ತು ಕಾವ್ಯವನ್ನು ಕಟ್ಟಿ ಹಾಡುವುದರ ಮೂಲಕ ಜನಪ್ರಿಯಗೊಳಿಸಿದ
ಅನೇಕ ಮಹನೀಯರಲ್ಲಿ ಶಾಹಿರ ರಾಮಜೋಷಿ, ಶಾಹಿರ ಪ್ರಭಾಕರ, ಪ್ರಮುಖರು. ಪಠೆ ಬಾಪುರಾವ್ ಬರೆದ ಲಾವಣಿಗಳು ಇಂದಿಗೂ ಸಹ ಜನಪ್ರಿಯವಾಗಿವೆ. ಯಾವುದೇ ಕಲೆಯ ಪ್ರಕಾರಕ್ಕೆ ಮನರಂಜನೆಯ ಅಥವಾ ಶೃಂಗಾರದ ಹೆಸರಿನಲ್ಲಿ ಒಂದಿಷ್ಟು ಅಶ್ಲೀಲವೆನಿಸುವ ಆಶು ರಚನೆಗಳು ಸೇರಿಕೊಳ್ಳುವುದು ಸಹಜ. ಇಂತಹದ್ದೇ ಸಂಗತಿಗಳು ಮರಾಠ ದೊರೆಗಳ ಆಳ್ವಿಕೆಯಲ್ಲಿ ತಮಿಳುನಾಡಿನಲ್ಲಿ ಕರ್ನಾಟಕ ಸಂಗೀತ ಮತ್ತು ಭರತ ನಾಟ್ಯ ಪ್ರಕಾರಗಳಲ್ಲೂ ಇದ್ದವು. ಉದಾಹರಣೆಗೆ ಕ್ಷೇತ್ರಯ್ಯನ ಪದಾಲು ಎನ್ನುವ ಈ ಕೆಳಗಿನ ಶೃಂಗಾರ ಕಾವ್ಯವನ್ನು ಸಂಗೀತ ಕಛೇರಿಯ ಕೊನೆಯ ಭಾಗದಲ್ಲಿ ಪದಂ ಮತ್ತು ಜಾವಳಿಗಳನ್ನು ಪ್ರಸ್ತುತ ಪಡಿಸುವಾಗ ಹಾಡಲಾಗುತ್ತಿತ್ತು. ಜೊತೆಗೆ ಭರತನಾಟ್ಯ ( ಸಾದಿರ್ ನೃತ್ಯ)ದಲ್ಲಿಯೂ ನೃತ್ಯ ರೂಪಕವಾಗಿ ಬಳಸಲಾಗುತ್ತಿತ್ತು.
ಉದಾಹರಣೆಗೆ ನಾವು ಕ್ಷೇತ್ರಯ್ಯನ ಈ ಶೃಂಗಾರ ಭರಿತವಾದ ಪದವನ್ನು ಗಮನಿಸಬಹುದು.
ಅಮ್ಮಾ, ಇಟುವಂಟಿವಾನಿಕೇಮಿ ಸೇಯುದೇನೇ/ ಕೊಮ್ಮ ಮೂವಗೋಪಾಲುನಿ ಗುಣಮು ಜೆಪ್ಪದ ವಿನಿವಮ್ಮ/ ಪೈಯ್ಯದ ಜೇ ಬಟ್ಟುಕೊನಿ ಬಾಯಜಾಲ ನನಿವಾಡ/ ಸಯ್ಯಾಟಲಾಡುಚುನ್ನು ಚಾಲ ವಲಪಿಂಚುನಮ್ಮ/ ದಬ್ಬುನ ಪಡಕಿಂಟಿಲೋ ದಾಗಿಯುಂಡಿ ಕೊನಿನಾದು/ ಗಬ್ಬಿ ಗುಬ್ಬಲನು ಬಟ್ಟಿ ಕನ್ನುಲನೊತ್ತುಕೊನುನಮ್ಮ/ ಸಮ್ಮತಿಂಚಕನೇನುಂಟೇ ಸಾರೆಕುನದಲಿಂಚಿಚೂ/ ಕಮ್ಮವೊಲ್ತು ಕೇಳಿಲೋನ ಕೌಗಲಿಂಚಿ ಕುಡುನಮ್ಮ/
ಇದನ್ನು ಕನ್ನಡದಲ್ಲಿ ಹೀಗೆ ಹೇಳಬಹುದು.
ಇಂತಹವನಿಗೆ ಏನು ಮಾಡಲಮ್ಮಾ/ ಸಖೀ ಮುವ್ವ ಗೋಪಾಲನ ಕಥೆ ಹೇಳುವೆ ಕೇಳೆ/ ಸೆರಗು ಹಿಡಿದು ನಿನ್ನ ಬಿಡಲಾರನೆಂದು ಸರಸವಾಡುತ್ತಾನೆ/ ನನ್ನನ್ನು ತುಂಬಾ ಪ್ರೀತಿಸುತ್ತಾನೆ/ ಮಲಗುವ ಕೋಣೆಯಲ್ಲಿ ಅವಿತುಕೊಂಡು ನನ್ನ ಗಟ್ಟಿ ಮೊಲೆಗಳನ್ನು ಕಣ್ಣಿಗೆ ಒತ್ತುಕೊಳ್ಳುತ್ತಾನಮ್ಮ/ ಮತ್ತೆ ಮತ್ತೆ ಹೆದುರಿಸಿ ಆಲಂಗಿಸಿಕೊಂಡು/ ಮನ್ಮಥ ಕೇಳಿಯಲ್ಲಿ ತೊಡಗುತ್ತಾನಮ್ಮ/
(ಇದನ್ನು ಕರ್ನಾಟಕ ಸಂಗೀತದಲ್ಲಿ ಕಲ್ಯಾಣಿ ರಾಗದಲ್ಲಿ ಹಾಡಲಾಗುತ್ತಿತ್ತು)


1930 ರ ದಶಕದಲ್ಲಿ ಕರ್ನಾಟಕ ಸಂಗೀತವನ್ನು ಪರಿಷ್ಕರಿಸಿ, ಮೂರು ಗಂಟೆಗಳ ಅವಧಿಯ ಸಂಗೀತ ಕಛೇರಿಯಲ್ಲಿ ಏನೇನು ಹಾಡಬೇಕೆಂದು ನಿರ್ಧರಿಸಿದವರು, ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ರವರು. ಪದಂ ಮತ್ತು ಜಾವಳಿ ಸ್ಥಾನದಲ್ಲಿ ತಮಿಳು ತಿರುಪ್ಪಾವಯ್ ( ದೇವರ ನಾಮ) ಮತ್ತು ಪುರಂದರ ದಾಸರ ಕಿರ್ತನೆಗಳನ್ನು ಸೇರ್ಪಡಿಸುವುದರ ಮೂಲಕ ಅವರು ಸಂಗೀತದಲ್ಲಿ ಹೊಸ ಪ್ರಯೋಗ ಮಾಡಿದರು. ಶ್ರೀಮತಿ ರುಕ್ಮಿಣಿ ಅರುಂಡಾಳ್ ರವರು ಸಾದಿರ್ ನೃತ್ಯವನ್ನು ಪರಿಷ್ಕರಿಸಿ, ಕೊರವಂಜಿ ನೃತ್ಯ ಮತ್ತು ಶೃಂಗಾರ ರಸ ಗಳು ಇದ್ದ ಭಾಗದಲ್ಲಿ ಮಹಾಭಾರತ ಮತ್ತು ರಾಮಾಯಣದ ಕೆಲವು ಭಾಗಗಳನ್ನು ಕಾವ್ಯ ಮತ್ತು ನೃತ್ಯ ರೂಪದಲ್ಲಿ ಅಳವಡಿಸುವುದರ ಮೂಲಕ ಅದಕ್ಕೆ ಭರತನಾಟ್ಯ ಎಂದು ನಾಮಕರಣ ಮಾಡಿದರು. ಪ್ರತಿಯೊಂದು ಕಲೆಯೂ ಆಯಾ ಕಾಲಘಟ್ಟದ ಸಮುದಾಯದ ಅಭಿರುಚಿಗೆ ತಕ್ಕಂತೆ ಮರು ಹುಟ್ಟು ಪಡೆಯುತ್ತದೆ ಎಂಬುದಕ್ಕೆ ತಮಾಶ, ಕರ್ನಾಟಕ ಸಂಗೀತ, ಭರತನಾಟ್ಯ ಮುಂತಾದ ಕಲೆಗಳ ಇತಿಹಾಸ ನಮ್ಮೆದುರು ಸಾಕ್ಷಿಯಾಗಿದೆ.
ತಮಾಶ ಕಲಾ ಪ್ರಕಾರದಲ್ಲಿ ಎರಡು ಭಾಗಗಳಿದ್ದು, ಒಂದು ಪೂರ್ವ ರಂಗ ಮತ್ತು ಇನ್ನೊಂದನ್ನು ಉತ್ತರ ರಂಗ ಎಂದು ಕರೆಯಲಾಗುತ್ತದೆ. ಪೂರ್ವರಂಗದಲ್ಲಿ ಸಾಂಪ್ರದಾಯಿಕವಾಗಿ ಬಂದ ನೃತ್ಯ ಮತ್ತು ಹಾಡುಗಳು ಇರುತ್ತವೆ. ಡೋಲಕಿ , ಗೆಜ್ಜೆಯ ನೀನಾದ, ಹಾರ್ಮೋನಿಯಂ, ಮುಂತಾದವುಗಳು ತಮಾಶ ನೃತ್ಯದ ಜೀವಾಳ ಎಂದರೆ, ತಪ್ಪಾಗಲಾರದು. ಎರಡನೆಯ ಭಾಗದಲ್ಲಿ ಆಧುನಿಕ ಬದುಕಿನ ಅನುಭವಗಳನ್ನು ವಿಡಂಬನೆಯ ಮೂಲಕ ಹೇಳುವುದು ಇಲ್ಲಿನ ವಿಶೇಷ.

ಧಾರವಾಡ ರಂಗಾಯಣಕ್ಕೆ  ಕಲಾವಿದರೆಲ್ಲರೂ ಕೇವಲ ಆರೇಳು ತಿಂಗಳ ಹಿಂದೆ ಸೇರ್ಪಡೆಯಾದವರು. ಬಹುತೇಕ ಎಲ್ಲಾ ನಟ ನಟಿಯರು ಇಪ್ಪತ್ತೈದು ವರ್ಷದ ಒಳಗಿನವರು. ಈ ಯುವ ಕಲಾ ಪ್ರತಿಭೆಗಳು ಕೇವಲ ಇಪ್ಪತ್ತೈದು ದಿನಗಳ ಅವಧಿಯಲ್ಲಿ ತರಬೇತಿ ಪಡೆದು ಕಠಿಣವಾದ ಈ ನೃತ್ಯ ಪ್ರಕಾರವನ್ನು ಕನ್ನಡದಲ್ಲಿ ಸಾದರಪಡಿಸಿದ್ದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಭಿನಯದಲ್ಲಿ ಒಬ್ಬರೊನ್ನಬ್ಬರು ಮೀರಿಸುವ ಪ್ರತಿಬೆ ಹೊಂದಿದ್ದಾರೆ.. ಈ ಪ್ರಯೋಗದಲ್ಲಿ ಮರಾಠಿ ಸಂಸ್ಕೃತಿಯ ಛಾಯೆ  ಸಹಜವಾಗಿ ಎದ್ದು ಕಾಣುತ್ತದೆ ನಿಜ, ಅಲ್ಲಿನ ಲಾವಣಿಗಳನ್ನು ಕನಡಕ್ಕೆ ಅನುವಾದಿಸ ಬಹುದು ಆದರೆ, ಲಾವಣಿಯ ರಾಗದ ಮಟ್ಟುಗಳನ್ನು ಕನ್ನಡಕ್ಕೆ ತರುವುದು ಸುಲಭದ ಮಾತಲ್ಲ. ಹಾಗಾಗಿ ಅದೇ ರಾಗಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ಗಣೇಶ ಚಂದನ ಶಿವ ಅವರ ನಿರ್ದೇಶನ ಮತ್ತು ರಚನೆಯಲ್ಲಿ ಮೂಡಿ ಬಂದ  ಈ ನಾಟಕದಲ್ಲಿ ಪುಣೆಯ ಹೆಸರಾಂತ ತಮಾಶಾ ನೃತ್ಯಗಾತಿ ರೇಷ್ಮಾ ಮುಸಳೆಯವರ ವಸ್ತ್ರ ವಿನ್ಯಾಸ, ಔರಂಗಾಬಾದಿನ ಸಾಗರ್ ಜೊಷಿಯವರ ಡೋಲಕಿ ( ಡೋಲು ವಾದನ) ಮನ ಸೆಳೆಯುತ್ತವೆ. ಈ ವಿನೂತನ ಪ್ರಯೋಗ ಮುಂದಿನ ದಿನಗಳಲ್ಲಿ ರಂಗಭೂಮಿಗೆ ಹೊಸ ದಾರಿಯನ್ನು ನಿರ್ಮಿಸಿದರೆ, ಆಶ್ಚರ್ಯವಿಲ್ಲ.
ಕೊನೆಯ ಮಾತು- ಧಾರವಾಡದ ರಂಗಾಯಣದ ಈ ತಮಾಶಾ ಪ್ರಯೋಗವು ಇದೇ ಜನವರಿ 16 ರಂದು ಮೈಸೂರಿನ ರಂಗಾಯಣದ ಆಶ್ರಯದಲ್ಲಿ ನಡೆಯುವ ಬಹುರೂಪಿ ಉತ್ಸವದಲ್ಲಿ ಪ್ರದರ್ಶನವಾಗಲಿದೆ. ಆಸಕ್ತರು ಈ ನೃತ್ಯ ನಾಟಕವನ್ನು ಮೈಸೂರು ಕಲಾ ಮಂದಿರದಲ್ಲಿ ವೀಕ್ಷಿಸಬಹುದು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ