ಗುರುವಾರ, ಜನವರಿ 14, 2016

ಪದವನರ್ಪಿಸಬಹುದಲ್ಲದೆ, ಪದಾರ್ಥವನ್ನರ್ಪಿಸಬಾರದು





ಎಲ್ಲಾ ಓದುಗ ಮಿತ್ರರಿಗೆ ಸಂಕ್ರಾಂತಿಯ ಶುಭಾಷಯಗಳು. ಇಂದಿನಿಂದ ಭೂಮಿಗೀತ ಬ್ಲಾಗ್ ಅಂರ್ತಾಜಾಲ ಪತ್ರಿಕೆಯಾಗಿ ಭೂಮಿಗೀತ ಡಾಟ್ ಕಾಂ ಹೆಸರಿನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮ್ಮದೆರು ತೆರೆದು ಕೊಳ್ಳುತ್ತದೆ. ಇದನ್ನು ರೂಪಿಸುವಾಗ ನಾನಾಗಲಿ, ನನ್ನ ಸಮಾನ ಮನಸ್ಕ ಮಿತ್ರರಾಗಲಿ ವಾಸ್ತವ ಸತ್ಯದಿಂದ ದೂರ ಸರಿಯದೆ, ನಾವು ಬದುಕುತ್ತಿರುವ ಈ ಇಪ್ಪತ್ತೊಂದನೇ ನರಕ ಸದೃಶ್ಯ ಬದುಕಿನ ವಿವಿಧ ಮಜಲುಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ.  ಇದರ ಹಿಂದೆ ಸತತ ಎರಡೂವರೆ ವರ್ಷಗಳ ಪ್ರಯೋಗದ ಅನುಭವವಿದೆ. 2013 ಏಪ್ರಿಲ್ 10 ರಂದು  ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ತಾಣಕ್ಕೆ ಕಳೆದ ಡಿಸಂಬರ್ ಅಂತ್ಯದ ಒಳಗೆ 3 ಲಕ್ಷದ 75 ಸಾವಿರ ಮಂದಿ ಬೇಟಿ ನೀಡಿದ್ದರೆ, 28.ಸಾವಿದ 700 ಮಂದಿ ಅಲ್ಲಿನ 186 ಲೇಖನಗಳನ್ನು ಓದಿದ್ದಾರೆ. ಯಾವುದೇ ವ್ಯಯಕ್ತಿಕ ವ್ಯಸನಗಳಿಗೆ ಬಲಿ ಬೀಳದೆ ಈ ನಾಡಿನ ಜ್ವಲಂತ ಸಮಸ್ಯೆಗಳನ್ನು ಕುರಿತು ಒಬ್ಬನೇ ನಿರಂತರವಾಗಿ ಲೇಖನಗಳನ್ನು ಬರೆದೆ. ಪ್ರತಿ ದಿನದ ನನ್ನ ದಿನಚರಿಯ ನಡುವೆ  ವ್ಯಯಿಸಿದ ಕೇವಲ ಒಂದು ಗಂಟೆಯ ಸಮಯದಿಂದಾಗಿ ಇದು ಸಾಧ್ಯವಾಯಿತು. ಇಲ್ಲಿನ ಲೇಖನಗಳು ಇಂದಿಗೂ ನಾಡಿನ ಹಲವು ದಿನಪತ್ರಿಕೆಗಳು, ಪಾಕ್ಷಿಕ ಪತ್ರಿಕೆಗಳು ಮತ್ತು ಮೂರು ಮಾಸ ಪತ್ರಿಕೆಗಳಲ್ಲಿ ಮರು ಮುದ್ರಣಗೊಳ್ಳುತ್ತಿವೆ.
ಓದುಗ ಪ್ರೀತಿ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಕನ್ನಡದ ಜಗತ್ತಿಗೆ  ವಿಭಿನ್ನ ಪ್ರಯೋಗ ಎನ್ನಬಹುದಾದ ಹಾಗೂ ಕೃಷಿ, ಪರಿಸರ ಮತ್ತು ಅಭಿವೃದ್ಧಿಗೆ ಮೀಸಲಾದ ಈ ಹೊಸ  ತಾಣವನ್ನು ಇಂದು ಗೆಳೆಯರ ಸಹಕಾರದಿಂದ ನಿಮ್ಮೆದುರು ಅನಾವರಣಗೊಳಿಸುತ್ತಿದ್ದೀನಿ. ಈ ಮೊದಲ ಸಂಚಿಕೆಯಲ್ಲಿ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತಿರುವ ಹಾಗೂ ಪರಿಸರ ಪ್ರಜ್ಞೆಯ ಬೀಜವನ್ನು ನಮ್ಮಂತಹವರ ಎದೆಯೊಳಗೆ ಬಿತ್ತಿ ನಮ್ಮನ್ನೆಲ್ಲಾ ಸೂಜಿಗಲ್ಲಿನಂತೆ ಸೆಳೆದ ನಾಗೇಶ್ ಹೆಗೆಡೆಯವರ ಸಂದರ್ಶನವಿದೆ. ನಾಗೇಶ್ ಹೆಗೆಡೆ ಕನ್ನಡದ ಜಗತ್ತಿಗೆ ಮಾತ್ರವಲ್ಲ, ಈ ದೇಶದಲ್ಲಿ  ಕಳೆದ ಮೂರೂವರೆ ದಶಕದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಸರಿಸಿದ  ಅನಿಲ್ ಅಗರವಾಲ್, ವಂದನಾಶಿವ ಮುಂತಾದವರೊಡನೆ ಉತ್ತರ ಭಾರತದಲ್ಲಿ ಒಡನಾಡಿದವರು. ಅವರು ನಡೆದ ಬಂದ ದಾರಿಯ ಕುರಿತಾಗಿ ನಾನು ಕೇಳಿದ ಪ್ರಶ್ನೆಗಳಿಗೆ ನೀಡಿರುವ ಉತ್ತರದಲ್ಲಿ ಅವರ ಪ್ರಖರ ಪ್ರತಿಭೆಯ ದರ್ಶನವಾಗುತ್ತದೆ.  ಅವರು ಆತ್ಮ ಚರಿತ್ರೆ ಬರೆದರೆ ಖಂಡಿತಾವಾಗಿ ಈ ತಲೆ ಮಾರಿಗೆ ಅಪರೂಪದ ಮಾರ್ಗದರ್ಶನದ ಕೃತಿಯಾಗಬಲ್ಲದು. ನಾಗೇಶ್ ಹೆಗಡೆಯವರಿಂದ ಆತ್ಮ ಚರಿತ್ರೆಯನ್ನು  ಬರೆಯಿಸುವ ಹಾಗೂ ಅದನ್ನ ಇದೇ ತಾಣದಲ್ಲಿ ಪ್ರಕಟಿಸುವ ಇರಾದೆ ನನ್ನೆಲ್ಲಾ ಗೆಳಯರದು.

ಮಲೆನಾಡಿನ ಸಾಂಸ್ಕೃತಿಕ ಪಲ್ಲಟಗಳಿಗೆ ಮೌನ ಸಾಕ್ಷಿಯಾಗಿದ್ದುಕೊಂಡು, ಅವುಗಳನ್ನು ತಮ್ಮ ಕಥೆಗಳು ಮತ್ತು ಲೇಖನಗಳ ಮೂಲಕ ಪ್ರತಿಬಿಂಬಿಸುತ್ತಾ ಬಂದಿದ್ದ ಲೇಖಕಿ ಡಾ.ಎಲ್. ಸಿ. ಸುಮಿತ್ರಾ ರವರು “ ಮರಳಿ ಮಣ್ಣಿಗೆ” ಎಂಬ ಲೇಖನದ ಮೂಲಕ ವರ್ತಮಾನದ ಬದುಕಿನ ಬಿಕ್ಕಟ್ಟುಗಳನ್ನು ನಮ್ಮೆದುರು ತೆರದಿಟ್ಟಿದ್ದಾರೆ. ಪರಿಸರ, ಅರಣ್ಯ, ನೀರು ಕುರಿತಾದ ಅದ್ಯಯನಕ್ಕಾಗಿ ತಮ್ಮ ಬದುಕನ್ನು ಮಿಸಲಿಟ್ಟಿರುವ ಶಿರಸಿಯ ಶಿವಾನಂದ ಕಳವೆಯವರ ನೀರು ಕುರಿತಾದ ಸರಣಿ ಲೇಖನಗಳು ಈ ತಾಣಲ್ಲಿ ಪ್ರಕಟವಾಗಲಿದ್ದು, ಅದರ ಮೊದಲ ಕಂತು ಇಲ್ಲಿದೆ. ಅದೇ ರೀತಿ ಕೃಷಿಯ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಪ್ರಜಾವಾಣಿಯ ಹಿರಿಯ ವರದಿಗಾರ ಆನಂದ ಪ್ಯಾಟಿ ತೀರ್ಥರವರ ಇಸ್ರೇಲ್ ಪ್ರವಾಸದಲ್ಲಿ ಕಂಡ ಅಲ್ಲಿನ ಕೃಷಿ ಅನುಭವ ಇದೀಗ ಕೃತಿಯಾಗಿ ಹೊರಬಂದಿದೆ. ಕೃತಿಯ ಪರಿಚಯದೊಂದಿಗೆ ಅವರ ಒಂದು ಲೇಖನವನ್ನು ಸಹ ಇಲ್ಲಿ ಬಳಸಿಕೊಳ್ಳಲಾಗಿದೆ. ಇವುಗಳ ಜೊತೆಗೆ ಭಾರತದಲ್ಲಿ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಾವಿನ ಕುರಿತಾದ ಲೇಖನ, ಕೈಗಾರಿಕೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಲಿಯಾಗುತ್ತಿರುವ ಭಾರತದ ಫಲವತ್ತಾದ ಕೃಷಿ ಭೂಮಿ ಕುರಿತಾದ ಲೇಖನ, ಶೂನ್ಯ ಬಂಡವಾಳದ ಕೃಷಿಯಲ್ಲಿ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡ ರೈತನೊಬ್ಬನ ಯಶೋಗಾಥೆ, ಕಮರಾಕ್ಷಿ ಎಂಬ ಹುಳಿ ಹಣ್ಣು ಕುರಿತಾದ ಲೇಖನಗಳು ಸೇರಿದಂತೆ ಭಾರತದ ಅರಣ್ಯ ಪಿತಾ ಮಹಾ ಎನ್ನಬಹುದಾದ ಜರ್ಮನಿ ಮೂಲದ ಬ್ರಾಂಡಿಸ್ ಎಂಬ ಸಸ್ಯ ಶಾಸ್ತ್ರಜ್ಞನ ಪರಿಚಯ ಲೇಖನವೂ ಸಹ ಈ ಸಂಚಿಕೆಯಲ್ಲಿದೆ.
ಬಹಳ ಮುಖ್ಯವಾಗಿ  ಅಂದರೆ, 1972 ರ ನಂತರ ಕರ್ನಾಟಕ ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ತತ್ತರಿಸಿದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದ ಜನರ ಬದುಕು ತೀರಾ ಶೋಚನೀಯವಾಗಿದೆ. ಈ ಸಂದರ್ಭದಲ್ಲಿ ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಯ ರೈತರಿಗೆ ಆಶ್ರಯದಾತರಾಗಿರುವ ಬಸವರಾಜು ದಿಗ್ಗಾವಿ ಕುಟುಂಬದ ಮಾನವೀಯ ಮುಖ ಮತ್ತು ರೈತರ ಬವಣೆಗಳನ್ನು ತೆರದಿಡುವ ವಿಶೇಷ ಲೇಖನ ಕೂಡ ಇಲ್ಲಿದೆ. ಬಿ.ಟಿ. ಹತ್ತಿಯಲ್ಲಿ ಕೈ ಸುಟ್ಟಿಕೊಂಡ ರೈತರ ವರದಿಯೂ ಸಹ ಈ ಸಂಚಿಕೆಯ ವಿಶೇಷ.  ಮುಂದಿನ ಹದಿನೈದು ದಿನಗಳ ವರೆಗೆ ನಿಮ್ಮನ್ನು ಚಿಂತನೆಗೆ ಹಚ್ಚ ಬಲ್ಲ ಲೇಖನಗಳನ್ನು ಈ ಮೊದಲ ಸಂಚಿಕೆಯು ಒಳಗೊಂಡಿದೆ ಎಂಬುದು ನನ್ನ ನಮ್ರ ಭಾವನೆ. ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವೈವಿಧ್ಯಮಯ ಲೇಖನಗಳಿರುತ್ತವೆ. ನಾನಾಗಲಿ ಅಥವಾ ನನ್ನ ಸಮಾನ ಮನಸ್ಕರಾಗಲಿ ನಿಮಗೆ ಶುದ್ಧ ಗಾಳಿ ಅಥವಾ ಶುದ್ಧ ನೀರನ್ನು ಕೊಡಲಾರೆವು ಆದರೆ, ನಿಸರ್ಗದ ಕೊಡುಗೆಗಳನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬಲ್ಲ ಆಲೋಚನೆಗಳನ್ನು ಮಾತ್ರ ನೀಡಬಲ್ಲವು.


ನನಗಿನ್ನು ನೆನಪಿದೆ. ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಅಂದರೆ, 1966 ರಲ್ಲಿ ನನಗಾಗ ಹತ್ತು ವರ್ಷ. ಮೊದಲ ಮುಂಗಾರು ಮಳೆ ಬಿದ್ದ ಮಾರನೆಯ ದಿನ ನನ್ನಪ್ಪ ನೇಗಿಲನ್ನು ಹೆಗಲ ಮೇಲೆ ಹೊತ್ತುಕೊಂಡು ಎತ್ತುಗಳೊಂದಿಗೆ ಹೊಲಕ್ಕೆ ತೆರಳುತ್ತಿದ್ದ. ನಾನು ಕೈ ಚೀಲದಲ್ಲಿ ಅರಿಶಿನ, ಕುಂಕುಮ, ಗಂಧದಕಡ್ಡಿ, ಕರ್ಪೂರ ಹಾಗೂ ಬೆಂಕಿಪೊಟ್ಟಣ ಇವುಗಳನ್ನು ಹಾಕಿಕೊಂಡು, ಒಂದು ಸಣ್ಣ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಅಪ್ಪನನ್ನು ಹಿಂಬಾಲಿಸುತ್ತಿದ್ದೆ. ಅಪ್ಪ ಹೊಲದಲ್ಲಿ ಎತ್ತುಗಳಿಗೆ ನೇಗಿಲು ಕಟ್ಟಿ ಹೊಲ ಉಳುವ ಮುನ್ನ, ಮೂರು ಕಲ್ಲುಗಳನ್ನು ಆಯ್ದು ತಂದು, ಅವುಗಳನ್ನು ತೊಳೆದು ಅರಿಶಿನ ಕುಂಕಮ ಬಳಿಯುತ್ತಿದ್ದ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ ಉಳುಮೆ ಆರಂಭಿಸುತ್ತಿದ್ದ. ಹರಿಯುವ ನೀರಿಗೆ ಗಂಗೆಯೆಂದು ಪೂಜಿಸಿ ಕೈಯೆತ್ತಿ ಮುಗಿದವರ ಮತ್ತು ಪ್ರಕೃತಿಯಲ್ಲಿ ದೇವರನ್ನು ಸೃಷ್ಟಿಸಿಕೊಳ್ಳುತ್ತಿದ್ದ ಆ ಹಿರಿಯರ ಜ್ಞಾನ ಶಿಸ್ತು ಇವೊತ್ತಿಗೂ ನನ್ನಲ್ಲಿ ಬೆರಗು ಮೂಡಿಸಿದೆ. ನಾವು ಅಂತಹ ಲೋಕವನ್ನು ಈಗ ಸೃಷ್ಟಿಸಲು ಸಾಧ್ಯವಾಗದಿದ್ದರೂ ಕನಿಷ್ಟ ಅಂತಹ ಮನಸ್ಸುಗಳನ್ನು ಸೃಷ್ಟಿಸಬಹುದು. ಹಾಗಾಗಿ ಪ್ರತಿ ಆರು ತಿಂಗಳಿಗೆ ಮೊಬೈಲ್, ಪ್ರತಿ ಒಂದು ವರ್ಷಕ್ಕೆ ನಮ್ಮ ಮನೆಯ ಟಿ.ವಿ. ಪ್ರಿಜ್, ವಾಹನಗಳನ್ನು ಬದಲಾಯಿಸುವ ಮನಸ್ಸುಗಳನ್ನು ನಾವೇಕೆ ಬದಲಾಯಿಸಬಾರದು? ಆಧುನಿಕ ಬದುಕಿನ ಲೋಲುಪತೆ ಮತ್ತು ಭೋಗಸಂಸ್ಕೃತಿಯ ಮನಸ್ಸುಗಳನ್ನು ಪರಿಸರಕ್ಕೆ ಎರವಾಗದಂತೆ ಸರಳವಾಗಿ ಬದುಕುವ ದಾರಿ ತೋರುವ ಹಂಬಲ ನಮ್ಮದು. ಈ ಕಾರಣಕ್ಕಾಗಿ  ನಮಗೆ ಅಲ್ಲಮನ  ಪ್ರಭುವಿನ “ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು”  ಎಂಬ ವಚನದ ಸಾಲುಗಳು ನೆನಪಾದವು. ಈ ಸಂಚಿಕೆಯ ಲೇಖನ ಗಳ ಕುರಿತು ನಿಮ್ಮ ಅಭಿಪ್ರಾಯ, ಹಾಗೂ ಈ ತಾಣ ಕುರಿತಂತೆ ಸಲಹೆ ,ಸೂಚನೆಗಳಿಗೆ ಮುಕ್ತವಾದ ಸ್ವಾಗತವಿದೆ. ದಯವಿಟ್ಟು ಬರೆಯಿರಿ.
ಭೂಮಿಗೀತ ತಾಣಕ್ಕೆ ಬೇಟಿ ನೀಡಲು ಈ ವಿಳಾಸವನ್ನು ಟೈಪ್ ಮಾಡಿ- www. bhoomigeetha.com

ಇಂತಿ ನಿಮ್ಮ
ಡಾ. ಎನ್. ಜಗದೀಶ್ ಕೊಪ್ಪ

(ಸಂಪಾದಕ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ