ಗುರುವಾರ, ಜನವರಿ 5, 2017

ಭಾರತದ ಕ್ರೀಡಾ ಸಂಸ್ಥೆಗಳೆಂಬ ಕಳ್ಳರ ಕೂಟಗಳು



ಇದನ್ನು ನೀವು ಈ ದೇಶದ ನಾಗರೀಕರ ಪ್ರಜ್ಞೆಗೆ ಆವರಿಸಿಕೊಂಡಿರುವ ವಿಸ್ಮೃತಿ ಎಂದು ಬೇಕಾದರೂ ಕರೆಯಬಹುದು ಇಲ್ಲವೆ ಭಾರತದ ಕೀಡಾರಂಗಕ್ಕೆ ತಟ್ಟಿರುವ ಹಾಗೂ ವಿಮೋಚನೆಯಾಗದ  ಶಾಪ ಎಂದು ಸಹ ಕರೆಯಬಹುದು. ಏಕೆಂದರೆ, ಕಳೆದ ವಾರ ಭಾರತದ ಒಲಿಂಪಿಕ್ ಕ್ರೀಡಾ ಸಂಸ್ಥೆಗೆ ಇಬ್ಬರು ಕಳಂಕಿತರು ಮಾತ್ರವಲ್ಲ, ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಸಂಪಾದನೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌತಾಲ ಎಂಬುವರನ್ನು ಜೀವಿತಾವಧಿಗೆ ಗೌರವ ಅಧ್ಯಕ್ಷರನ್ನಾಗಿ ಮಾಡಿರುವ ವಿಷಯ ಭಾರತದ ನಾಗರೀಕರು ತಲೆ ತಗ್ಗಿಸುವ ಸಂಗತಿ. ಮೂಲತಃ ಕನ್ನಡಿಗರಾಗಿದ್ದು ಪುಣೆಯಲ್ಲಿ ಉದ್ಯಮಿಯಾಗಿರುವ ಸುರೇಶ್ ಕಲ್ಮಾಡಿ ಕಾಂಗ್ರೇಸ್ ಪಕ್ಷದ ವತಿಯಿಂದ ರಾಜ್ಯ ಸಭೆಯ ಸದಸ್ಯರಾಗಿದ್ದರು. ಭಾರತದ ಒಲಿಂಪಿಕ್ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ 45 ಕೋಟಿ ರೂಪಾಯಿನಷ್ಟು ಅಕ್ರಮವೆಸಗಿ ಹತ್ತು ತಿಂಗಳು ಕಾಲ ಜೈಲು ವಾಸ ಅನುಭವಿಸಿದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಕಲ್ಮಾಡಿ ಈಗಲೂ ಸಹ ವಿಚಾರಣೆ ಎದುರಿಸುತ್ತಿದ್ದಾರೆ. ಹರಿಯಾಣ ಮೂಲದ ಶಾಸಕರಾಗಿರುವ ಅಭಯ್ ಚೌತಾಲ ಮೇಲೆ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ನ್ಯಾಯಾಲಯದಲ್ಲಿ ಅರ್ಧ ಡಜನ್ ಗೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ಇವೆ.
ಕಳೆದ ವಾರ ಚೆನ್ನೈ ನಗರದಲ್ಲಿ ನಡೆದ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಇಬ್ಬರು ಕಳಂಕಿತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವ ಒಲಿಂಪಿಕ್ ಕ್ರೀಡಾ ಸಂಸ್ಥೆಯ ಸದಸ್ಯರೆಂಬ  ಮಹನೀಯರನ್ನು ಭಾರತದ ಜನತೆ “ ನೀವು ಹೊಟ್ಟೆಗೆ ಏನು ತಿನ್ನುತ್ತೀರಾ?” ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ಭಾರತದ ಕ್ರೀಡೆಗಳ ಕುರಿತಂತೆ ಮತ್ತು ಅವುಗಳ ಮಹತ್ವ, ಹಾಗೂ ಕ್ರೀಡೆಗಳ ಹಿಂದೆ ಇರುವ ಭಾರತದ ಯುವಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಪತ್ತು  ಇವುಗಳ ಕುರಿತು ಎಳ್ಳಷ್ಟು ಜ್ಞಾನವಿಲ್ಲದ ಇಂತಹ ಅವಿವೇಕಿಗಳು ಇಂದು ಭಾರತದ ಕ್ರೀಡಾಸಂಸ್ಥೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಭಾರತದ ನೂರ ಇಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಕ್ರೀಡೆಗಳಿಂದ ವಿಶೇಷವಾಗಿ  ಓಟ, ಲಾಂಗ್ ಜಂಪ್, ಹೈ ಜಂಪ್, ಮುಂತಾದ ಸ್ಪರ್ಧೆಗಳಲ್ಲಿ  ಈವರಗೆ ಚಿನ್ನದ ಪದಕ ಬೇಡ ,ಕನಿಷ್ಟ ಒಂದು ಕಂಚಿನ ಪದಕವನ್ನು ತಂದು ಕೊಡುವ ಒಬ್ಬ ಕ್ರೀಡಾಪಟುವನ್ನು ನಾವು ತಯಾರು ಮಾಡಿಲ್ಲ ಎಂಬ ವಿಷಯವು ನಮಗೆ ನಾಚಿಕೆಗೆಡಿನ ಸಂಗತಿ ಎಂದು ಅನಿಸಲಿಲ್ಲ. ಏಕೆಂದರೆ, ಕ್ರೀಡೆ ಎಂದರೆ ಕೇವಲ ಕ್ರಿಕೇಟ್ ಎಂಬ ಭ್ರಮೆಯಲ್ಲಿ ನಾವು ಮುಳುಗಿ ಏಳುತ್ತಿದ್ದೇವೆ. ನಮ್ಮ ಮಾಧ್ಯಮಗಳು ಸಹ ಇದನ್ನೇ ಪ್ರತಿಬಿಂಬಿಸುತ್ತಾ ಭಾರತೀಯರ ಮಿದುಳನ್ನು ತೊಳೆಯುವ ಕ್ರಿಯೆಯಲ್ಲಿ ನಿರತವಾಗಿವೆ.
ಈವರೆಗೆ ಒಲಂಪಿಕ್ ಕ್ರೀಡಾ ಇತಿಹಾಸದಲ್ಲಿ ಅಂದರೆ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆದಿರುವ ಒಟ್ಟು  ಮುವತ್ತು ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತಕ್ಕೆ ಈವರೆಗೆ ಒಂಬತ್ತು ಚಿನ್ನ, ಆರು ರಜತ ಮತ್ತು  ಹನ್ನೊಂದು ಕಂಚಿನ ಪದಕಗಳು ಸೇರಿದಂತೆ ಒಟ್ಟು ಇಪ್ಪತ್ತಾರು ಪದಕಗಳು ಲಭ್ಯವಾಗಿವೆ. ಇವುಗಳಲ್ಲಿ ಹಾಕಿಯಲ್ಲಿ ಭಾರತ ತಂಡ ಈವರೆಗೆ ಎಂಟು ಚಿನ್ನ, ಒಂದು ರಜತ ಹಾಗೂ ಎರಡು ಕಂಚಿನ ಪದಕವನ್ನು ಗೆದ್ದಿದೆ. 1928 ರಿಂದ 1980 ರವರೆಗೆ ಎಂಟು ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡವು 1980 ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಂತರ ತನ್ನ ಸಾರ್ವ ಭೌಮತ್ವವನ್ನು ಕಳೆದುಕೊಂಡಿತು. ಇದನ್ನು ಹೊರತು ಪಡಿಸಿದರೆ, ಬೆರಣಿಕೆಯಷ್ಟು ಕ್ರೀಡಾ ಪಟುಗಳು ತಮ್ಮ ವೈಯಕ್ತಿಕ ಶ್ರಮ ಮತ್ತು ಸಾಧನೆಯಿಂದ  ಒಲಂಪಿಕ್ ಕ್ರೀಡೆಯಲ್ಲಿ ಪದಕಗಳಿಗೆ ಮುತ್ತಿಟ್ಟಿದ್ದಾರೆ. 1952 ರ ಒಲಿಂಪಿಕ್ ನಲ್ಲಿ ದಾದಾ ಸಾಹೇಬ್ ಎಂಬ ಕುಸ್ತಿ ಪಟು ಕಂಚಿನ ಪದಕ, 1996 ರಲ್ಲಿ ಲಿಯಾಂಡರ್ ಪೇಸ್ ಟೆನ್ನಿಸ್ ನಲ್ಲಿ ಕಂಚಿನ ಪದಕ, 2000 ರ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಆಂಧ್ರಪ್ರದೇಶದ  ಕರ್ಣಂ ಮಲ್ಲೇಶ್ವರಿ ವೇಯ್ಟ್ ಲಿಪ್ಟಿಂಗ್ ನಲ್ಲಿ ಕಂಚು, 2004 ರಲ್ಲಿ ರಾಜವರ್ಧನ್ ರಾಠೋಡ್ ಶೋಟಿಂಗ್ ನಲ್ಲಿ ರಜತ ಪದಕ ಮತ್ತು 2008 ರಲ್ಲಿ ಅಭಿನವ ಬಿಂದ್ರಾ ಶೂಟಿಂಗ್ ನಲ್ಲಿ ಪ್ರಪಥಮವಾಗಿ ಚಿನ್ನದ ಪದಕ ಗೆದ್ದುಕೊಟ್ಟರು. 2008 ರ ಒಲಿಂಪಿಕ್ಸ್ ಕ್ರೀಡೆಯಲ್ಲಿ ವಿಜೇಂದರ್ ಸಿಂಗ್ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದರು. 2012 ರ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಆರು ಪದಕಗಳನ್ನು ಗೆಲ್ಲುವುದರ ಮೂಲಕ ಭಾರತದ ಕ್ರೀಡಾಪಟುಗಳು ದಾಖಲೆ ನಿರ್ಮಿಸಿದರು. ಗಗನ್ ನಾರಂಗ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು, ವಿಜಯಕುಮಾರ್ ರೈಫಲ್ ಶೋಟಿಂಗ್ ನಲ್ಲಿ ರಜತ, ನೈನಾ ಸೆಹ್ವಾಲ್ ಟೆನ್ನಿಸ್ ನಲ್ಲಿ ರಜತ, ಕುಸ್ತಿ ವಿಭಾಗದಲ್ಲಿ ಯೋಗೇಶ್ವರ್ ದತ್ ಕಂಚು ಮತ್ತು ಸುಶೀಲ್ ಕುಮಾರ್ ರಜತ ಗೆದ್ದುಕೊಟ್ಟರೆ, ಮೇರಿ ಕೋಂ. ಮಹಿಳಾ ಬಾಕ್ಷಿಂಗ್ ಸ್ಪರ್ಧೆಯಲ್ಲಿ ಕಂಚಿ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. 2016 ರ ರಿಯೋ ಒಲಿಂಪಿಕ್ಸ್ ಕ್ರೀಡೆಗೆ ದಾಖಲೆ ಎನ್ನಬಹುದಾದ  119 ಮಂದಿ ಕ್ರೀಡಾ ಪಡುಗಳು ಭಾಗವಹಿಸಿದ್ದರು. ಆದರೆ, ಇಬ್ಬರು  ಮಹಿಳಾ ಕ್ರೀಡಾ ಪಟುಗಳು ಭಾರತದ ಮಾನ ಕಾಪಾಡಿದರು. ಇವರಲ್ಲಿ ಪಿ.ವಿ.ಸಿಂಧು ಬ್ಯಾಡ್ ಮಿಂಟನ್ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರೆ, ಪಂಜಾಬಿನ ಸಾಕ್ಷಿ ಎಂಬ ಹೆಣ್ಣು ಮಗಳು ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಳು.
ಒಲಿಂಪಿಕ್ ಕ್ರೀಡಾಕೂಟದದಲ್ಲಿ ವಿಜೇತರಾಗಿರುವ ಬಹುತೇಕ ಕ್ರೀಡಾಪಟುಗಳ  ಸಾಧನೆಯ ಹಿಂದೆ ಅವರ ಹೆತ್ತ ತಂದೆ ತಾಯಿಗಳ ತ್ಯಾಗ, ಕೋಚ್ ಗಳ ಶ್ರದ್ಧೆ ಹಾಗೂ ಗೆದ್ದೇ ಗೆಲ್ಲುವನೆಂಬ ಕ್ರೀಡಾಪಟುಗಳ ಛಲ ಇವುಗಳು ಎದ್ದು ಕಾಣುತ್ತವೆ. ಆದರೆ, ಭಾರತದ ಯಾವುದೇ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಪಾತ್ರ ವಹಿಸಿರುವುದು ಅಥವಾ ಕ್ರೀಡಗೆ ಬೆಂಬಲವಾಗಿ ನಿಂತಿರುವುದು  ಕಂಡು ಬರುವುದಿಲ್ಲ. ಭಾರತದ ಕ್ರಿಕೇಟ್, ವಾಲಿಬಾಲ್, ಪುಟ್ಬಾಲ್, ಹಾಕಿ ಫೇಡರೇಶನ್, ಸೇರಿಂದತೆ ಬಹುತೇಕ ಕ್ರೀಡಾ ಸಂಸ್ಥೆಗಳಲ್ಲಿ ಭಾರತದ ಕಳಂಕಿತ ರಾಜಕಾರಣಿಗಳು ಸೇರಿಕೊಂಡಿದ್ದು ಭಾರತದ ಕ್ರೀಡೆಗಳನ್ನು ಹಳ್ಳ ಹಿಡಿಸುವುದರ ಜೊತೆಗೆ ಕ್ರಿಕೇಟ್ ನಂತಹ ಜನಪ್ರಿಯ ಕ್ರೀಡೆಯನ್ನು ಜೂಜಿನ ಕ್ರೀಡೆಯಾಗಿ ಪರಿವರ್ತಿಸಿದ್ದಾರೆ. ಭಾರತ ಕ್ರಿಕೇಟ್ ನಿಯಂತ್ರಣ ಮಂಡಳಿಯನ್ನು ಹೊರತು ಪಡಿಸಿದರೆ,ಬಹುತೇಕ ಕ್ರೀಡಾ ಸಂಸ್ಥೆಗಳು ಕೇಂದ್ರ ಸರ್ಕಾರದ ಧನ ಸಹಾಯದ ಮೂಲಕ ಅಸ್ತಿತ್ವದಲ್ಲಿವೆ.ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕೂಡ ಭಾರತದ ಕ್ರೀಡೆಗಳ ಅವನತಿಗೆ ಪರೋಕ್ಷವಾಗಿ ಕಾರಣವಾಗಿದೆ. ಭಾರತದ ಕ್ರಿಕೇಟ್ ಮಂಡಳಿಯನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೊರ್ಟ್ ಬೀಸಿರುವ ಚಾಟಿಯೇಟುಗಳು ಇದೀಗ ಭಾರತದ ಇತರೆ  ಕ್ರೀಡಾ ಸಂಸ್ಥೆಗಳ ಮೇಲೂ ಬೀಳಬೇಕಾಗಿದೆ.

ಒಂದು ಕಾಲದಲ್ಲಿ ಸಭ್ಯ ಕ್ರೀಡೆ ಎನಿಸಿಕೊಂಡಿದ್ದ ಕ್ರಿಕೆಟ್ ಪಂದ್ಯವನ್ನು ಟೆಸ್ಟ್ ಪಂದ್ಯಗಳಿಂದ  ಐವತ್ತು ಓವರ್ ಗಳ ಪಂದ್ಯಗಳನ್ನಾಗಿ ಪರಿವರ್ತಿಸಿ ಜನಪ್ರಿಯಗೊಳಿಸಲಾಯಿತು. ಈ ಪಂದ್ಯಕ್ಕೆ ಸಿಕ್ಕ ಜನಪ್ರಿಯತೆ ಹಾಗೂ ಜಾಹಿರಾತು ಕಂಪನಿಗಳು ಹರಿಸಿದ   ಹಣದ ಹೊಳೆ  ಇವೆಲ್ಲವೂ ಕ್ರಿಕೆಟ್ ನ ಚಹರೆಯನ್ನು ಬದಲಾಯಿಸಿತು. ನಂತರ ರಾಜಸ್ಥಾನ ಮೂಲದ ಲಲಿತ್ ಮೋದಿ ಎಂಬ ಮಹಾ ಚಾಣಾಕ್ಷನೊಬ್ಬ ಐವತ್ತು ಓವರ್ ಪಂದ್ಯವನ್ನು ಇಪ್ಪತ್ತು ಓವರ್ ಗಳಿ ಗೆ ಇಳಿಸುವುದರ ಮೂಲಕ ಕ್ರಿಕೇಟ್ ಎಂಬ ಕ್ರೀಡೆಯನ್ನು ಜೂಜಾಟವನ್ನಾಗಿ ಪರಿವರ್ತಿಸಿದ. ಪಂದ್ಯಗಳ ಪ್ರಸಾರದ ಹಕ್ಕು, ತಂಡಗಳ ಹರಾಜು, ಮತ್ತು ಈ ಪಂದ್ಯಗಳಿಗೆ ಹರಿದು ಜನಸಾಗರದಿಂದ ಕ್ರಿಕೆಟ್ ಮಂಡಳಿಯ ಖಜಾನೆ ತುಂಬಿ ತುಳುಕಾಡತೊಡಗಿತು. ಇದರಿಂದಾಗಿ ಮಂಡಳಿಗಳಿಗೆ ಮಾಜಿ ಕ್ರೀಡಾ ಪಟುಗಳ ಬದಲಾಗಿ  ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾತ್ರವಲ್ಲದೆ, ರಾಜ್ಯ ಮಟ್ಟದ ಕ್ರೀಡಾ ನಿಯಂತ್ರಣ ಮಂಡಳಿಗಳಿಗೆ  ದೇಶದ ರಾಜಕಾರಣಿಗಳು, ಮತ್ತು ಕೈಗಾರಿಕೋದ್ಯಮಿಗಳು ಕಾಲಿಟ್ಟರು.. ಕೊಲ್ಕತ್ತ ಮೂಲದ  ಜಗನ್ಮೋಹನ್ ದಾಲ್ಮಿಯಾ, ಚೆನ್ನೈ ಮೂಲದ ಶ್ರೀನಿವಾಸನ್ ಎಂಬ ಉದ್ಯಮಿಗಳು ಭಾರತ ಕ್ರಿಕೇಟ್ ಮಂಡಳಿಗೆ ನುಸುಳಿದರು.  ಮುಂಬೈ ಕ್ರಿಕೇಟ್ ಮಂಡಳಿಗೆ ಶರದ್ ಪವಾರ್, ದೆಹಲಿ ಕ್ರಿಕೆಟ್ ಮಂಡಳಿಗೆ ಅರುಣ್ ಜೇಟ್ಲಿ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ರಂತಹ ರಾಜಕಾರಣಿಗಳು ಪ್ರವೇಶ ಪಡೆದು ಭಾರತದ ಕ್ರಿಕೇಟ್ ಅನ್ನು ಒಂದು ಬೃಹತ್ ಉದ್ಯಮವನ್ನಾಗಿ ಪರಿವರ್ತಿಸಿ, ಅದರ ಸೂತ್ರಗಳನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಅದೃಷ್ಟವಶಾತ್ ಇದೀಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಹಲವು ಮಹತ್ವದ ನಿಯಾಮವಳಿಗಳನ್ನು ರೂಪಿಸಿ ಎಲ್ಲರನ್ನು ಕಸ ಗುಡಿಸಿ ಹಾಕುವಂತೆ   ಮಂಡಳಿಯಿಂದ  ಹೊರಗೆ ಬಿಸಾಕಿದೆ. ಎಪ್ಪತ್ತು ವರ್ಷ ದಾಟಿದ ವ್ಯೆಕ್ತಿಗಳು ನಿಯಂತ್ರಣ ಮಂಡಳಿಯಲ್ಲಿ ಇರಬಾರದು, ಕ್ರೀಡೆಗೆ ಸಂಬಂಧ ಪಡೆದ ವ್ಯೆಕ್ತಿಗಳು ಆಯ್ಕೆ ಸಮಿತಿಯಲ್ಲಿ  ಸ್ಥಾನ ಪಡೆಯಬಾರದು ಹಾಗೂ ಮೂರು ವರ್ಷದ ಅವಧಿಗಿಂತ ಹೆಚ್ಚಿನ ಕಾಲ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ಮಹತ್ವದ ನಿರ್ಣಯವನ್ನು ಜಾರಿಗೆ ತಂದಿದೆ. ಭಾರತದ ಕ್ರಿಡೆಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಇಂತಹ ಶಿಫಾರಸ್ಸುಗಳನ್ನು ಸೂಚಿಸಿದ ಮಾಜಿ ನ್ಯಾಯ ಮೂರ್ತಿ ಲೋಧಾ ನೇತೃತ್ವದ ಸಮಿತಿಗೆ ಮತ್ತು ಈ ಶಿಫಾರಸ್ಸುಗಳಿಗೆ ಅಂಕಿತ ಹಾಕಿದ ಸುಪ್ರೀಂ ಕೋರ್ಟಿಗೆ ಭಾರತೀಯರು ಸದಾ ಕೃತಜ್ಞರಾಗಿರಬೇಕು. ಇಂತಹದ್ದೇ ಶಿಫಾರಸ್ಸುಗಳು ಭಾರತದ ಕ್ರೀಡಾ ಸಂಸ್ಥೆಗಳಲ್ಲಿ ಜಾರಿಗೆ ಬರುವುದರ ಮೂಲಕ ಮಾಜಿ ಕ್ರೀಡಾಪಟುಗಳ ನೇತೃತ್ವದಲ್ಲಿ ನಡೆಯುವಂತಾಗಬೇಕು. ಇದು ಜಾರಿಗೆ ಬಂದರೆ, ಕಳ್ಳಕಾಕರ ಗೂಡಾಗಿರುವ ಭಾರತದ ಕ್ರೀಡೆಗೆ ಮೋಕ್ಷ ಸಿಕ್ಕಂತಾಗುತ್ತದೆ.

 ( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ