Friday, 27 January 2017

ಗಾಂಧಿವಾದವೆಂದರೆ, ಗಂಟೆ-ಜಾಗಟೆ-ಶಂಖಗಳ ನೀನಾದವಲ್ಲಇದನ್ನು ನೀವು ಮಹಾತ್ಮ ಗಾಂಧಿಯವರ  ಶಕ್ತಿ ಎಂದಾದರೂ ಭಾವಿಸಿ ಅಥವಾ ಅವರ ವ್ಯೆಕ್ತಿತ್ವದ ವೈರುಧ್ಯವೆಂದಾದರೂ ಕರೆಯಿರಿ ಚಿಂತೆಯಿಲ್ಲ.  ಗಾಂಧೀಜಿಯವರು ತಾವು ಬದುಕಿದ್ದಾಗ ತಮ್ಮ ಪ್ರಖರ ನಿಲುವು ಮತ್ತು ಚಿಂತನೆಗಳ ಮೂಲಕ  ಪಾಶ್ಚಿಮಾತ್ಯ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದರು.   ಅದೇ ರೀತಿ ಅವರು ತಮ್ಮ ನಿಧನಾನಂತರವು ಸಹ ಹುಟ್ಟಿ ಬೆಳೆದ ಭಾರತದ ನೆಲವನ್ನು   ಕಾಡುತ್ತಿದ್ದಾರೆ ಇದು ಅವರ ವ್ಯೆಕ್ತಿತ್ವದ ಗುಣ ಮತ್ತು ವಿಶೇಷ.
ಭಾರತದ ಜನ ಮಾನಸದಲ್ಲಿ ಗಾಂಧೀಜಿ ಎಂದರೆ ಚರಕ    ಎಂಬ ಮಾತು ಮನೆ ಮಾತಾಗಿದೆ ಅದೇ ರೀತಿ  ಸತ್ಯ ಹಾಗೂ  ಅಹಿಂಸೆಗೆ ಪರ್ಯಾಯ ಹೆಸರೇ ಗಾಂಧೀಜಿ ಎಂಬ ನಂಬಿಕೆ ಬಲವಾಗಿ ಬೇರೂರಿದೆ.  ಅವುಗಳೊಂದಿಗೆ ಗಾಂಧೀಜಿಯವರಿಗೆ ಇರುವ ನಂಟನ್ನು ಅಷ್ಟೊಂದು ಸುಲಭವಾಗಿ ಕಳಚಲಾಗದು. ಈ ಕಾರಣಕ್ಕಾಗಿ  ಸ್ವಾತಂತ್ರ್ಯಾನಂತರದ ದಿನಗಳಿಂದ ಖಾದಿ ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರದ ಕ್ಯಾಲೆಂಡರ್ ಗಳು ಮತ್ತು ದಿನಚರಿ ಪುಸ್ತಕ ಇವುಗಳಲ್ಲಿ  ಚರಕದಿಂದ ನೂಲು ನೇಯುತ್ತಿದ್ದ ಗಾಂಧಿಯವರ ಭಾವ ಚಿತ್ರಗಳು  ಶಾಶ್ವತ ಸ್ಥಾನ ಪಡೆದಿವೆ. ಆದರೆ, .ಈ ವರ್ಷ ಮಾತ್ರ ಗಾಂಧೀಜಿಯ ಚಿತ್ರ ಪಲ್ಲಟಗೊಂಡಿದೆ. ಅವರ ಜಾಗದಲ್ಲಿ ಒಂಟಿ ಕೈಯಲ್ಲಿ  ಚರಕದಿಂದ ನೂಲು ನೇಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ ಕಾಣಿಸಿಕೊಂಡು ಹಲವು ವಿವಾದ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ ಗಾಂಧೀಜಿಯವರ ಭಾವಚಿತ್ರವನ್ನು ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈ ಬಾರಿ ನರೇಂದ್ರ ಮೋದಿಯವರ  ಭಕ್ತರು ಈ ಸಾಹಸಕ್ಕೆ ಕೈ ಹಾಕಿದರು. ಇದು ಪ್ರಜ್ಞಾವಂತ ನಾಗರೀಕರ ಪಾಲಿಗೆ ಅನಿರೀಕ್ಷಿತ ಘಟನೆಯಾಗಿರಲಿಲ್ಲ ಏಕೆಂದರೆ,   ಗಾಂಧೀಜಿಯನ್ನು ಕೊಂದ ಪಾತಕಿಯನ್ನು ಹುತಾತ್ಮನ ಪಟ್ಟಕ್ಕೆ ಏರಿಸಿ ಗುಡಿ ಕಟ್ಟುತ್ತಿರುವ ಈ ವರ್ತಮಾನದ ಭಾರತದಲ್ಲಿ ಸಾಮಾಜಿಕ ಮೌಲ್ಯಗಳು ಯಾವ ಕ್ಷಣದಲ್ಲಾದರೂ ಪಲ್ಲಟಗೊಳ್ಳಬಲ್ಲವು ಎಂಬುದನ್ನು ಅವರೆಲ್ಲರೂ ಅರಿತಿದ್ದಾರೆ.
ಈ ಘಟನೆಗೆ ಪೂರಕವಾಗಿ ಹರಿಯಾಣದ ಬಿ.ಜೆ.ಪಿ. ಸರ್ಕಾರದ ಸಚಿವನೊಬ್ಬ ನೀಡಿದ ಹೇಳಿಕೆ ಇವೆರೆಲ್ಲರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. “ಖಾದಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವ ಪ್ರಯುಕ್ತ, ಗಾಂಧಿ ಚಿತ್ರವನ್ನು ಬದಲಾಯಿಸಿ, ಮೋದಿಯವರ ಚಿತ್ರವನ್ನು ಹಾಕಲಾಗಿದೆ” ಎಂಬ ಸಚಿವನ ಮಾತು, ಭಾರತದ ಸಂದರ್ಭದಲ್ಲಿ ಖಾದಿ ಮತ್ತು ಚರಕ ಕುರಿತಂತೆ ಎಳ್ಳಷ್ಟು ಮಾಹಿತಿ ಇರದ ಅಜ್ಞಾನಿಗಳು ಮಾತ್ರ ಆಡಬಹುದಾದ ಮಾತುಗಳು ಎಂಬುದಕ್ಕೆ ಸಾಕ್ಷಿಯಾಗಿವೆ. ಈ ದೇಶದ . ಖಾಸಾಗಿ ದೈತ್ಯ ಕಂಪನಿಯೊಂದರ ಮೊಬೈಲ್ ಜಾಹಿರಾತಿಗೆ ( ಮುಖೇಶ್ ಅಂಬಾನಿಯವರ ಜಿಯೋ ಮೊಬೈಲ್) ಈ ದೇಶದ ಪ್ರಧಾನಿಯ ಚಿತ್ರ ಬಳಕೆಯಾಗುತ್ತದೆ ಎಂದರೆ,  ಸರಳತೆ ಮತ್ತು ಸ್ವಾಭಿಮಾನದ ಪ್ರತೀಕವಾದ ಖಾದಿಗೂ ಮತ್ತು ಐಷಾರಾಮಿ ಹಾಗೂ ಉಪಭೋಗ ಸಂಸ್ಕೃತಿಯ ಪ್ರತೀಕವಾದ  ಮೊಬೈಲ್ ಗೂ ಇದೀಗ  ವೆತ್ಯಾಸವಿಲ್ಲದಂತಾಗಿದೆ ಅಂದರೆ, . ದೇಶಿಯತೆ ಮತ್ತು ಆಧುನಿಕತೆಯ ಗಡಿ ರೇಖೆಗಳು ಅಳಿಸಿಹೋಗಿವೆ ಎಂದರ್ಥ. ಆಶ್ಚರ್ಯದ ಸಂಗತಿಯೆಂದರೆ, ಈ ವಿವಾದ ಕುರಿತು ಪ್ರಧಾನಿ ಮೋದಿಯವರು ಈವರೆಗೆ ತುಟಿ ಬಿಚ್ಚಿಲ್ಲ. ದೇಶ ಭಕ್ತರು  ಗಾಂಧಿವಾದ ವೆಂಬುದು ಗುಡಿಯೊಳಗಿನ  ಗಂಟೆ, ಜಾಗಟೆಗಳ  ಶಬ್ಧವೆಂದುಕೊಂಡಿದ್ದಾರೆ.  ಅದು ಈ ನೆಲದ ದುರಂತವೆಂದರೆ ತಪ್ಪಾಗಲಾರದು.
 ಗಾಂಧಿ ಅಥವಾ ಗಾಂಧಿವಾದವೆಂಬುದು  ಕೇವಲ ವಿಚಾರ ಧಾರೆ ಮಾತ್ರವಲ್ಲ, ಅದು ಶಬ್ದದೊಳಗಿನ ನಿಶಬ್ದ.  ಗಾಂಧಿವಾದವೆಂಬುದು ಮಾತಿನ ಸಂಗತಿಯಲ್ಲ, ಒಂದು ಜೀವನ ಕ್ರಮ ಅಥವಾ ಬದುಕಿನ ತಾತ್ವಿಕ ಸಿದ್ದಾಂತ. ಇಂತಹ  ತಿಳುವಳಿಕೆಯಿಲ್ಲದ ಮಂದಿಯಿಂದ ಇದೀಗ ಗಾಂಧೀಜಿಯವರ  ವ್ಯೆಕ್ತಿತ್ವದ ಮತ್ತು ಅವರ ವಿಚಾರಧಾರೆ ಮೌಲ್ಯ ಮಾಪನ ನಡೆಯುತ್ತಿರುವುದು ಈ ನೆಲದ ದುರಂತ. ತಮ್ಮ ಜೀವಿತದಲ್ಲಿ  ಎಂದೂ ಗಾಂಧಿಯನ್ನು ನೋಡದ, ಕೇಳದ, ಗಾಂಧಿಯನ್ನು ಓದದ ಕೋಟ್ಯಾಂತರ ಭಾರತದ ಜನತೆ ಅದರಲ್ಲೂ ಅನಕ್ಷರತೆ ಮತ್ತು ಬಡತನ ತಾಂಡವಾಡುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಜನತೆ ಗಾಂಧೀಜಿಯವರು  ನೀಡುತ್ತಿದ್ದ ಹೋರಾಟದ ಕರೆಗೆ ಪ್ರವಾಹೋಪಾದಿಯಲ್ಲಿ ಬೀದಿಗಳಿಯುತ್ತಿದ್ದರು. ಹಲವು ಭಾಷೆ, ಸಂಸ್ಕೃತಿಗಳ ನಾಡಾದ ಈ ದೇಶದಲ್ಲಿ ಜನಸಾಮಾನ್ಯರ ಮನಸ್ಸು ಗೆಲ್ಲುವುದು ಅಷ್ಟು ಸುಲಭದ ಸಂಗತಿಯಲ್ಲ. ಒಂದು ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂದು ಭಾವಿಸಿಕೊಳ್ಳುವ ಮತ್ತು ಒಬ್ಬ ವ್ಯೆಕ್ತಿಗಾದ ಅಪಮಾನವನ್ನು ತನ್ನ ವ್ಯಯಕ್ತಿಕ ಅಪಮಾನವೆಂದು ಭಾವಿಸಿಕೊಳ್ಳುವ ಮಾತೃಹೃದಯ ಗಾಂಧೀಜಿಯವರಿಗಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದೊಡನೆ ದಿಡಿರ್ ನಾಯಕರಾಗಿ ಉದ್ಭವಿಸಲಿಲ್ಲ. ಭಾರತದುದ್ದಕ್ಕೂ ಓಡಾಡಿ ಇಲ್ಲಿನ ಜನರ ಸುಖ ದುಃಖಗಳನ್ನು ಅರಿತರು. ಅನೇಕ ಪ್ರಾಮಾಣಿಕ ದೇಶಭಕ್ತ ಯುವಕರನ್ನು ಗುರುತಿಸಿ, ಅವರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಅದನ್ನು ಆರದಂತೆ ನೋಡಿಕೊಂಡರು. ಹಿರಿಯರು, ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಆಲಿಸುವ ಗುಣ ಅವರಲ್ಲಿತ್ತು. ತನ್ನೊಂದಿಗೆ ಶಾಶ್ವತವಾಗಿ ಸೈದ್ಧಾಂತಿಕವಾಗಿ  ಭಿನ್ನಾಭಿಯ ಹೊಂದಿದ್ದ  ಅಂಬೇಡ್ಕರ್, ಲೋಹಿಯಾ ಮತ್ತು ನಿರ್ಮಲ್ ಕುಮಾರ್ ಬೋಸ್ ಮುಂತಾದ ಕಿರಿಯ ಮಿತ್ರರ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದರು.
ಒಂದು ಕಾಲದಲ್ಲಿ ಮಹಾತ್ಮ ಗಾಂಧಿಯವರ ನಿಕಟ ಅನುಯಾಯಿಯಾಗಿದ್ದ ರಾಮಮನೋಹರ ಲೋಹಿಯಾರವರು ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ, ಗಾಂಧಿಜಿಯವರು ನೆಹರೂ ಮತ್ತು ಪಟೇಲ್ ಮುಂತಾದವರ ಮಾತುಗಳಿಗೆ  ನೀಡುತ್ತಿದ್ದ ಆದ್ಯತೆ ಮತ್ತು ನೆಹರೂ ಅವರ ಧೋರಣೆಗಳನ್ನು ಖಂಡಿಸಿ ಗಾಂಧಿಯವರಿಂದ ಮಾನಸಿಕವಾಗಿ ದೂರವಾಗಿದ್ದರು. ಆದರೆ 1948 ರ ಜನವರಿ 30 ರಂದು ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ತೀರಾ ಅಘಾತಕ್ಕೆ ಒಳಗಾದ ಲೋಹಿಯಾ ರವರು ನೆಹರೂ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ತಮ್ಮ ನಾಯಕನ ಅಂತಿಮ ಸಂಸ್ಕಾರದಿಂದ ಹಿಡಿದು, ಚಿತಾಭಸ್ಮ ವಿಸರ್ಜನೆ ಮಾಡುವವರೆಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರು  ನಿಧನರಾದ ನಾಲ್ಕು ದಿನಗಳ ನಂತರ ಅವರ ಚಿತಾಭಸ್ಮವನ್ನು ಅಲಹಾಬಾದಿನ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲು ದೆಹಲಿಯಿಂದ ವಿಶೇಷ ರೈಲನ್ನು ಏರ್ಪಾಡು ಮಾಡಲಾಗಿತ್ತು. ಚಿತಾಭಸ್ಮದ ಜೊತೆ ಗಾಂಧಿಯವರ ಪುತ್ರ ದೇವದಾಸ್, ನೆಹರೂ ಹಾಗೂ ಪಟೇಲ್ ಸಹ ಇದ್ದರು. ಇವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲೋಹಿಯಾರವರು ಗಾಂಧೀಜಿಯ ನಿಧನದಿಂದ ಮಾತು ಕಳೆದುಕೊಂಡು ಮೌನವಾಗಿ ರೈಲಿನ ಕಿಟಕಿಯ ಬಳಿ ಕುಳಿತು ಹೊರಗಿನ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು.
ಗಾಂಧೀಜಿಯ ಚಿತಾ ಬಸ್ಮವನ್ನು ಹೊತ್ತು ಅಲಹಾಬಾದ್ ನತ್ತ  ಸಾಗುತ್ತಿದ್ದ ರೈಲಿನ ಹಳಿಗಳ ಪಕ್ಕದ ಹೊಲದಲ್ಲಿ ನಿಂತಿದ್ದ ರೈತನೊಬ್ಬ ತನ್ನ ಹೊಲದಲ್ಲಿ ಬೆಳದಿದ್ದ ಸೂರ್ಯಕಾಂತಿಯ ಹೂಗಳನ್ನು ಕಿತ್ತು  ಚಲಿಸುತ್ತಿದ್ದ ರೈಲಿನತ್ತ ತೂರಿ ಕೈ ಮುಗಿಯುತ್ತಾ ನಿಂತಿದ್ದ ದೃಶ್ಯವನ್ನು ನೋಡಿ ಅವಕ್ಕಾದ ಲೋಹಿಯಾರವರ ಕಣ್ಣುಗಳಲ್ಲಿ ಕಣ್ಣೀರ ಧಾರೆ ಕೆನ್ನೆಗಳ ಮೇಲೆ ಹರಿದು ಅವರ ಎದೆಯನ್ನು ತೋಯಿಸಿದವು. ಅನಾಮಿಕ ರೈತನೊಬ್ಬ ಗಾಂಧಿಗೆ ಸಲ್ಲಿಸಿದ ಅಂತಿಮ ಪ್ರಣಾಮವು ಗಾಂಧೀಜಿಯವರ ಜೊತೆಗಿದ್ದ ಲೋಹಿಯಾ ಅವರ ಭಿನ್ನಾಭಿಪ್ರಾಯಗಳನ್ನು ಕರಗಿಸಿಬಿಟ್ಟಿದ್ದವು. ಈ ನಾಡಿನ ಅನಕ್ಷರಸ್ತರಿಗೆ , ಬಡವರಿಗೆ ಮತ್ತು ಜನಸಾಮಾನ್ಯರಿಗೆ ಗಾಂಧೀಜಿಯವರು ತಲುಪಿದ್ದ ಬಗೆಯನ್ನು ಅವರು ವಿಶ್ಲೇಷಿಸುತ್ತಾ ತಮ್ಮ ಆತ್ಮಕಥೆಯಲ್ಲಿ ಪರಿಣಾಮಕಾರಿಯಾಗಿ ಬಣ್ಣಿಸಿದ್ದಾರೆ.
ಅದೇ ರೀತಿ 1942 ರ ಅವದಿಯಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಪಶ್ಚಿಮ ಬಂಗಾಳದ ಪ್ರೊ.ನಿರ್ಮಲ್ ಕುಮಾರ್ ಬೋಸ್ ರವರು ಗಾಂಧೀಜಿಯವರು ತಮ್ಮ ಮೊಮ್ಮಕ್ಕಳ ಸಮಾನರಾದ ಮನುಬೆಹನ್ ಅವರ ಜೊತೆ ನಡೆಸಿದ ಬ್ರಹ್ಮ ಚರ್ಯೆಯ ಪ್ರಯೋಗ ಕುರಿತು ನಾಯಕನೊಂದಿಗೆ ಬಿನ್ನಾಭಿಪ್ರಾಯ ತಳೆದರು. ಅಷ್ಟೇ ಅಲ್ಲದೆ ತಮ್ಮ ತೀಕ್ಷ್ಣ ಹಾಗೂ ಹರಿತವಾದ ಮಾತುಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಗಳ ಮೂಲಕ ಗಾಂಧಿ ಜೊತೆ ಪತ್ರ ವ್ಯವಹಾರ ನಡೆಸಿ, ಅವರನ್ನು ಆತ್ಮಸಾಕ್ಷಿಯ ನೇಣುಗಂಬಕ್ಕೇರಿಸಿದರು. ಗಾಂಧೀಜಿಯವರು ಮನಸ್ಸು ಮಾಡಿದ್ದರೆ, ತಮ್ಮ ಶಿಷ್ಯ ನಿರ್ಮಲ್ ಕುಮಾರ್ ಬೋಸ್ ರವರ ಪತ್ರಗಳನ್ನು ನಿರ್ಲಕ್ಷಿಸಬಹುದಿತ್ತು. ಆದರೆ. ಬೋಸ್ ಎತ್ತಿದ ಎಲ್ಲಾ ಪ್ರಶ್ನೆಗಳಿಗೆ ಒಬ್ಬ ವಿಧೇಯ ವಿದ್ಯಾರ್ಥಿಯಂತೆ ಉತ್ತರ ನೀಡಿದರು. ಇದರಿಂದ ತೃಪ್ತರಾಗದ ನಿರ್ಮಲ್ ಕುಮಾರ್ ಬೋಸ್ ಗಾಂಧೀಜಿಯವರಿಂದ ದೂರವಾದರು. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ತಮ್ಮ ಮತ್ತು ಗಾಂಧೀಜಿ ಜೊತೆಗಿನ ಸಂಬಂಧವನ್ನು ಮರು ವಿಮರ್ಶೆಗೆ ಒಳಪಡಿಸಿಕೊಂಡ ಬೋಸ್ 1953 ರಲ್ಲಿ “ ಮೈ ಡೇಸ್ ವಿತ್ ಗಾಂಧಿ” ಎಂಬ ಕೃತಿಯನ್ನು ಹೊರ ತಂದರು. ಈ ಕೃತಿಯಲ್ಲಿ ಗುರು-ಶಿಷ್ಯರ ನಡುವೆ ನಡೆದ ಪತ್ರ ಸಂವಾದವೆಲ್ಲವೂ ವಿವರವಾಗಿ ದಾಖಲಾಗಿವೆ. ಈ ಮೊದಲು ಈ ಕೃತಿಯನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದ ನವಜೀವನ ಟ್ರಸ್ಟ್ ಸಂಸ್ಥೆ ಕೆಲವು ಆಯ್ದ ಪತ್ರಗಳ ಭಾಗಗಳನ್ನು ತೆಗೆದು ಹಾಕುವಂತೆ ಬೊಸ್ ರವರಿಗೆ ಸೂಚಿಸಿತ್ತು. ಆದರೆ ಇದನ್ನು ನಿರಾಕರಿಸಿದ ನಿರ್ಮಲ್ ಕುಮಾರ್ ಬೋಸ್ ತಾವೇ ಸ್ವತಃ ಕೃತಿಯನ್ನು ಪ್ರಕಟಿಸಿದರು. ಈವರೆಗೆ ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಇದೂ ಕೂಡ ಒಂದಾಗಿದೆ.
ಲೋಹಿಯಾ ಮತ್ತು ಬೋಸ್ ರವರ ಈ ಎರಡು ಘಟನೆಗಳು ಮಹಾತ್ಮ ಗಾಂಧಿಯವರನ್ನು ಇನ್ನೊಂದು ದಿಕ್ಕಿನಲ್ಲಿ  ಅರ್ಥಮಾಡಿಕೊಳ್ಳಲು ನಮಗೆ ಮಾದರಿಯಾಗಿವೆ ಎಂದರೆ ತಪ್ಪಾಗಲಾರದು. ಗಾಂಧಿಜಿಯವರ ವ್ಯೆಕ್ತಿತ್ವವೇ ಅಂತಹದ್ದು. ಅದು ದಾರ್ಶನಿಕನ ಸ್ಥಾನಕ್ಕೇರಿದ ದೈವ ಸ್ವರೂಪದ್ದು. ಅವರೊಂದಿಗೆ ಯಾರಾದರು ಹೋಲಿಸಿಕೊಳ್ಳುವುದು ಇಲ್ಲವೆ ಅವರ ಚಿತ್ರ ಕದಲಿಸುವುದರ ಮೂಲಕ ಮರೆ ಮಾಚುತ್ತೇನೆ ಎನ್ನುವುದು ಕೇವಲ ನಗೆಪಾಟಿಲಿನ ಸಂಗತಿ ಮಾತ್ರ ಆಗಬಲ್ಲದು.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾ ಬರೆದ ಲೇಖನ)


No comments:

Post a Comment