Tuesday, 28 February 2017

ಕೋಮುವಾದದ ನೆಲೆಗಳು ಮತ್ತು ಗ್ರಹಿಕೆಯ ದೋಷಗಳುಹಲವಾರು ಭಾಷೆ ಮತ್ತು ಧರ್ಮಗಳ ಸಂಗಮದ ನೆಲವಾದ ಭಾರತವನ್ನು ನಾವು ಬಹುಸಂಸ್ಕತಿಯ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆ. ಆದರೆ,ಇಂತಹ ನಿಜವಾದ ಅರ್ಹತೆ ದೇಶಕ್ಕೆ ಇಂದಿನ ದಿನಮಾನಗಳಲ್ಲಿ ಇದೆಯಾ? ಎಂಬ ಪ್ರಶ್ನೆಯನ್ನು ನಮ್ಮ ನಮ್ಮ ಅಂತರಂಗಕ್ಕೆ ಹಾಕಿಕೊಂಡಾಗ ಮನಸ್ಸು ಮೌನ ಮತ್ತು ಮುಜುಗರದಿಂದ ಮುದುಡಿಹೋಗುತ್ತದೆ. ಭಾರತದನಿಜವಾದ ಚರಿತ್ರೆ ಯಾವುದು? ಎಂಬ ಪ್ರಶ್ನೆಯೂ ನಮ್ಮನ್ನು ತೀವ್ರವಾಗಿ ಕಾಡತೊಡಗುತ್ತದೆ.
ಇವೊತ್ತಿಗೂ ಭಾರತದ ನೈಜ ಇತಿಹಾಸವೆಂಬುದು ಪ್ರಾಮಾಣಿಕವಾಗಿ ದಾಖಲಾಗಿಲ್ಲ. ಕ್ರಿ.. ಒಂದನೆಯ ಶತಮಾನದಿಂದ ಹಿಡಿದು ಹದಿನಾರು ಅಥವಾ ಹದಿನೇಳನೆಯ ಶತಮಾನದವರೆಗೆ ಭಾರತದಲ್ಲಿ ಪ್ರವಾಸ ಮಾಡಿದ ಚೀನಾ ಯಾತ್ರಿಕರುಪೋರ್ಚುಗೀಸರು, ಡಚ್ಚರು  ಮುಂತಾದ ಪ್ರವಾಸಿಗರ ದಿನಚರಿಯ ಪುಟಗಳ ಆಧಾರದ ಮೇಲೆ ಭಾರತದ ಇತಿಹಾಸ ಮತ್ತು ವಸ್ತುಸ್ಥಿತಿಯನ್ನು ದಾಖಲಾಗಿದೆ. ಆನಂತರದ ದಿನಗಳಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಬ್ರಿಟಿಷ್ ವಿದ್ವಾಂಸರು ಬರೆದ ಇತಿಹಾಸವೆಲ್ಲವೂ ಭಾರತದ ಅಧಿಕೃತ ಚರಿತ್ರೆಯಾಯಿತು.
ನೆಲದ ಸಂಸ್ಕತಿಗೆ ಸಂಬಂಧಪಡವರ ಹಾಗೂ ಪಾಶ್ಚಿಮಾತ್ಯ ಕಣ್ಣಿನಿಂದ ನೋಡಿದ ಹಾಗೂ ಹೃದಯದಿಂದ ಗ್ರಹಿಸಿದವರ ಚಿಂತನೆಗಳು ಮತ್ತು ಕೃತಿಗಳು ನಮ್ಮ ಪಾಲಿಗೆ ಇತಿಹಾಸ ಪಠ್ಯಗಳಾದವು. ಆದರೆ  ಅವುಗಳಲ್ಲಿ ಬಹುತೇಕ ಪಾಲು ಒಂದೇ ಮಗ್ಗುಲಿನ ಚರಿತ್ರೆಯಾಗಿ ರೂಪುಗೊಂಡಿರುವುದನ್ನು  ಅಲ್ಲಗೆಳೆಯಲಾಗದು. ಕಾರಣದಿಂದಾಗಿ ಭಾರತದ ಚರಿತ್ರೆಯ ಮೂಲ ನೆಲೆಗಳನ್ನು ತೆರೆದ ಹೃದಯದಿಂದ ಶೋಧಿಸಿ, ಹೊಸ ಇತಿಹಾಸವನ್ನು ಸೃಷ್ಟಿಸುವ ಅಗತ್ಯವಿದೆ.
ಭಾರತದ ಇತಿಹಾಸದ ಉದ್ದಕ್ಕೂ ಸಾಮ್ರಾಜ್ಯದ ವಿಸ್ತರಣೆಗಾಗಿ ಮತ್ತು  ಹೆಣ್ಣಿಗಾಗಿ ಹಾಗೂ ಧರ್ಮದ ಮೇಲುಗೈಗಾಗಿ ಅನೇಕ ರಕ್ತ ಪಾತಗಳು, ಕದನಗಳು  ಜರುಗಿಹೋಗಿವೆ. ಜೊತೆಗೆ  ಅವುಗಳಲ್ಲಿ ಕೆಲವು ಸಂಘರ್ಷಗಳಿಗೆ ಕೋಮುವಾದ ಲೇಪನ ವನ್ನು ಬಳಿಯಲಾಗಿದೆ. ಅದೇ ರೀತಿ ಭಾರತದ ಅಮೂಲ್ಯ ಸಂಪತ್ತಿನ ಲೂಟಿಗಾಗಿ ದಂಡೆತ್ತಿ ಬಂದ ವಿದೇಶಿ ದಾಳಿಕೋರರ ಕೃತ್ಯಗಳನ್ನು ( ಮಹಮ್ಮದ್ ಘಜನಿ, ಮಹಮ್ಮದ್ ಘೋರಿ, ತೈಮೂರ್ ಇತ್ಯಾದಿ) ಅವರು ದೇವಸ್ಥಾನಗಳ ಮೇಲೆ ದಾಳಿ ಮಾಡಿದ ಕಾರಣಕ್ಕಾಗಿ ಹಿಂದೂ ಧರ್ಮದ ಮೇಲಿನ ದಾಳಿ ಎಂದು ಇತಿಹಾಸದ ಪುಟಗಳಲ್ಲಿ ಬಣ್ಣಿಸಲಾಗಿದೆ. ಇಂತಹ ಅನೇಕ ಅರ್ಧಸತ್ಯದಿಂದ ಕೂಡಿದ ಘಟನೆಗಳು ನಮ್ಮ ಪಾಲಿಗೆ ಇತಿಹಾಸವಾಗಿ ಬೋಧಿಸಲ್ಪಡುತ್ತಿರುವುದು ನಮ್ಮ ಪಾಲಿನ ದುರಂತ.
ಭಾರತದಂತಹ ಬಹು ಸಂಸ್ಕತಿಯ ನೆಲದಲ್ಲಿ ಜನಾಂಗೀಯ ಘರ್ಷಣೆಗಳು, ಧರ್ಮ ಕುರಿತಂತೆ ಕೋಮು ಘರ್ಷಣೆಗಳು ಹೊಸ ಸಂಗತಿಗಳೇನಲ್ಲ. ಕ್ರಿಸ್ತಪೂರ್ವದ ಬುದ್ಧ ಮತ್ತು ಮಹಾವೀರರ ಅನುಯಾಯಿಗಳ ಬಡಿದಾಟ ಮತ್ತು ಸಾಮೂಹಿಕ ಕಗ್ಗೊಲೆಯಿಂದ  ಹಿಡಿದು ಇಪ್ಪತ್ತೊಂದನೆಯ ಶತಮಾನದ ಕೋಮುವಾದದ ಹಿಂಸೆಯ ಅಧ್ಯಾಯಗಳವರೆಗೂ ಮುಂದುವರಿದಿದೆ. ಭಾರತದ ಚರಿತ್ರೆಯಲ್ಲಿ ಬೌದ್ದರು -ಜೈನರು, ಹಿಂದೂಗಳ - ಸಿಖ್ಖರು, ಸಿಖ್ಖರು - ಮುಸ್ಲಿಮರು, ಹಿಂದೂಗಳು - ಕ್ರೈಸ್ತರುಹಿಂದೂಮುಸ್ಲಿಮರು ಹೀಗೆ ಎಲ್ಲರೂ ತಮ್ಮ ಧರ್ಮಗಳ ಹಿತಾಸಕ್ತಿಗಾಗಿ ಬದುಕಿನುದ್ದಕ್ಕೂ ಹೊಡೆದಾಡಿಕೊಂಡು ಬಂದಿದ್ದಾರೆ. ಅನ್ಯ ಧರ್ಮಗಳ ಬಗೆಗಿನ ಪ್ರೀತಿ, ಸಹಿಷ್ಣುತೆ ಮತ್ತು ಗೌರವ ಇವುಗಳಿಗಿಂತ ಹೆಚ್ಚಾಗಿ  ದ್ವೇಷವೇ ಧರ್ಮದ ಮೂಲವೆಂತಾಗಿರುವ ದಿನಮಾನಗಳಲ್ಲಿ ಧರ್ಮಗಳ ಕುರಿತಂತೆ ಮಾತನಾಡುವಾಗ ಅಥವಾ ಬರೆಯುವಾಗ ಜಾಗೃತ ಮನಸ್ಸಿನಿಂದ ನಾವು ಸದಾ ಎಚ್ಚರಗೊಂಡಿರಬೇಕು.
ಇಂದಿನ ದಿನಗಳಲ್ಲಿ ಕೋಮುವಾದ ಎಂದರೆ ಅದು ಹಿಂದೂ ಅಥವಾ ಮುಸ್ಲಿಂ ಧರ್ಮ ಕುರಿತಾಗಿ ಹೊಂದಿರುವ ಭಾವನೆಗಳು ಎಂದು ನಂಬಿಕೊಂಡು ಬರಲಾಗಿದೆ. ಇವೆರೆಡಕ್ಕೂ ಮೀರಿ ಅಂದರೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ  ಬುದ್ಧನ ಮಧ್ಯಮ ಮಾರ್ಗದಲ್ಲಿ ನಡೆದು  ಧರ್ಮ ನಿರಪೇಕ್ಷ ಪ್ರಜ್ಞೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಜಗತ್ತನ್ನು  ನೋಡುವ ವ್ಯಕ್ತಿಗಳನ್ನು ಮಾಕ್ರ್ಸ್ ಚಿಂತನೆಯ ವಾರಸುದಾರರು ಅಥವಾ ಎಡಪಂಥಿಯರು ಎಂಬ ಹಣೆಪಟ್ಟಿಯೊಂದಿಗೆ ಕರೆಯಲಾಗುತ್ತಿದೆ. ಜೊತೆಗ  ಇವರೆಲ್ಲರೂ ಇಸ್ಲಾಂ ಧರ್ಮದ ಸಹಾನುಭೂತಿಗಳು ಮತ್ತು ಹಿಂದೂ ಧರ್ಮದ ದಂಗೆಕೋರರು ಎಂದು ಬಣ್ಣಿಸಿಕೊಂಡು ಬರಲಾಗಿದೆ. ಇತಿಹಾಸವೆಂಬುದು ಕೇವಲ ಘಟಿಸಿಹೋದ ಘಟನೆಯೊಂದರ ಕುರಿತ ಮಾಹಿತಿ ಮಾತ್ರವಲ್ಲ, ಅದು ಮನುಷ್ಯ ಕುಲವು ತನ್ನ ಅವಿವೇಕತನದಿಂದ  ಎಸಗಿದ ಅಪರಾಧಗಳಿಗೆ ಸಾಕ್ಷಿ ಕೂಡ ಹೌದು. ಜೊತೆಗೆ ಅಂತಹ ತಪ್ಪುಗಳನ್ನು ಮಾನವಕುಲ ಮತ್ತೇ ಎಸಗದಂತೆ ದಾರಿ ತೋರಿಸುವ, ಎಚ್ಚರಿಸುವ ದಾರಿ ದೀಪ ಕೂಡ ಹೌದು. ಆದರೆ ಇಂದು ಇತಿಹಾಸ ಮಾಹಿತಿಗಳು ಭಾರತೀಯ ಸಮುದಾಯಗಳ ಪಾಲಿಗೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ  ತಮ್ಮ ಪೂರ್ವಿಕರು ಅನುಭವಿಸಿದ ನೋವಿಗೆ ಸೇಡು ತೀರಿಸಿಕೊಳ್ಳುವ ಆಯುಧಗಳಾಗಿ ಬಳಸಲ್ಪಡುತ್ತಿವೆ. ಇಂತಹ ಪೈಶಾಚಿಕ ಮನೋಭಾವವು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೆಚ್ಚಾಗಿ ಸಾಮಾಜಿಕ ವ್ಯಾಧಿಯಾಗಿ, ನೋವಾಗಿ ಸುಸಂಸ್ಕತ ನಾಗರೀಕ ಸಮಾಜವನ್ನು ಕಾಡುತ್ತಾ ಬಾಧಿಸುತ್ತಿದೆ.
ಏಷ್ಯಾದ ಅಥವಾ ಅವಿಭಜಿತ ಭಾರತ ಉಪಖಂಡದ ಶತಮಾನದ ಅತಿಘೋರ ಮಾನವ ದುರಂತ ಎಂದು ಬಣ್ಣಿಸಲಾದ ಹಾಗೂ ಭಾರತದ ವಿಭಜನೆಯ ಸಂದರ್ಭದಲ್ಲಿ ಉಂಟಾದ ಹಿಂದೂಮುಸ್ಲಿಂ - ಸಿಖ್ಕರ ನಡುವಿನ ಕೋಮುಗಲಭೆಯಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರೆ, ಲಕ್ಷಾಂತರ ಕುಟುಂಬಗಳು ಬೀದಿಪಾಲಾದವು. ಇತಿಹಾಸದ ಇಂತಹ ಘೋರ ದುರಂತದಿಂದ ಭಾರತ, ಪಾಕ್ ನಾಗರೀಕರು ಎಂದಿಗೂ  ಪಾಠ ಕಲಿಯಲೇ ಇಲ್ಲ. 1947 ರಿಂದ ದೇಶದಲ್ಲಿ ನಿರಂತರ ನಡೆದ ಅಸಂಖ್ಯಾತ ಕೋಮುಘಲಭೆಗಳ ನಡೆದವು.  1984 ಅಕ್ಟೋಬರ್ 30 ರಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯ ನಂತರ  ರಾಜಧಾನಿ ದೆಹಲಿ ನಗರದ ಸೇರಿದಂತೆ ವಿವಿಧೆಡೆ ನಡೆದ ಸಿಖ್ಖರ ನರಮೇಧ ಹಾಗೂ 2002 ರಲ್ಲಿ ಗುಜರಾತಿನ ಗೋದ್ರಾದಲ್ಲಿ ನಡೆದ ಕೋಮುಗಲಭೆ ಇವೆಲ್ಲವೂ ಭಾರತದ ಇತಿಹಾಸಕ್ಕೆ ಅಂಟಿದ ಕಪ್ಪು ಚುಕ್ಕೆಗಳು ಎಂದು ದಾಖಲಿಸಬಹುದು. ಇಂತಹ ಅಮಾನವೀಯ ಘಟನೆಗಳಿಗೆ ಮತ್ತು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಹಿಂದೂ - ಮುಸ್ಲಿಂ ಸಂಘಟನೆಗಳು ಇಂದಿಗೂ ತೆರೆ ಮರೆಯಲ್ಲಿ ಕ್ರಿಯಾಶೀಲವಾಗಿರುವುದು ಭಾರತದ ನಾಗರೀಕ ಜಗತ್ತು ತಲೆ ತಗ್ಗಿಸುವ ಸಂಗತಿಯಾಗಿದೆ.
ಮನುಷ್ಯ ಕುಡಿಯುವ ನೀರಿಗೆ, ಉಸಿರಾಡುವ ಗಾಳಿಗೆ ಅಥವಾ ಆತನ ಬಡತನ, ಅಪಮಾನ, ಹಸಿವು, ನೋವು ನಿಟ್ಟುಸಿರು ಮತ್ತು ಆತನ ದೇಹದಲ್ಲಿ ಹರಿಯುವ ಬಿಸಿನೆತ್ತರಿಗೆ ಜಾತಿ ಧರ್ಮದ ಹಣೆಪಟ್ಟಿಯಿಲ್ಲ ಎಂಬ  ವಿವೇಕ ಇದೀಗ ಎಲ್ಲರಲ್ಲೂ ಕಾಣೆಯಾಗಿದೆ. ಈ ಕಾರಣದಿಂದಾಗಿ ಯಾವುದೇ  ವ್ಯಕ್ತಿ , ಆತ ಮುಸ್ಲಿಂಆಗಿರಲಿ, ಹಿಂದೂ ಆಗಿರಲಿ ಅಂತಹವನು ಮಾತ್ರ ಧರ್ಮದ ಹೆಸರಿನಲ್ಲಿ  ಮೃಗದಂತೆ ವರ್ತಿಸಬಲ್ಲ. ಹಾಗಾಗಿ ವರ್ತಮಾನ ಜಗತ್ತಿನ ಧರ್ಮಗುರುಗಳು ನಮಗೆ ಆತ್ಮ ಸಾಕ್ಷಿ ಪ್ರಜ್ಞೆಯುಳ್ಳ ಮನುಷ್ಯರಂತೆ ಗೋಚರಿಸುವ ಬದಲಾಗಿ  ಧರ್ಮದೆಸರಿನಲ್ಲಿ ದ್ವೇಷ ಬಿತ್ತುವ ಪಿಶಾಚಿಗಳಂತೆ ಗೋಚರಿಸುತ್ತಾರೆ.
ಇತ್ತೀಚೆಗೆ ಲಂಡನ್ ಮೂಲದ ಬಿ.ಬಿ.ಸಿ. ಛಾನಲ್ ಮತ್ತು ಎಕನಾಮಿಸ್ಟ್ ಪತ್ರಿಕೆ ನಡೆಸಿರುವ ಅದ್ಯಯನಗಳು ಮುಸ್ಲಿಂ ಜಗತ್ತಿನ ಬಡತನವನ್ನು ಮತ್ತು ಮೌಡ್ಯವನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿವೆ. ತೀವ್ರ ಪೈಪೋಟಿಯಿಂದ  ಕೂಡಿರುವ ವರ್ತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಮಹುತೇಕ ಮುಸ್ಲಿಂರು ಶಿಕ್ಷಣದಿಂದ ವಂಚಿತರಾಗಿ  ಧರ್ಮದ ಪಂಜರದೊಳಗೆ ಬಂಧಿಯಾಗಿದ್ದಾರೆ. ಜಗತ್ತಿನಲ್ಲಿರುವ ಸುಮಾರು 162 ಕೋಟಿ ಮುಸ್ಲೀಮರಲ್ಲಿ ಶೇಕಡ 80 ರಷ್ಟು ಮಂದಿ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ 58 ರಾಷ್ಟ್ರಗಳಲ್ಲಿ ಅರಬ್ ರಾಷ್ಟ್ರಗಳನ್ನು ಹೊರತು ಪಡಿಸಿದರೆ, ಬಹುತೇಕ ರಾಷ್ಟ್ರಗಳು ಬಡತನದಲ್ಲಿ ಮುಳುಗಿಹೋಗಿವೆ. ಜಗತ್ತಿನ ಅತ್ಯಂತ ಬಡರಾಷ್ಟ್ರಗಳ ಪೈಕಿ ಪಾಕಿಸ್ಥಾನ, ಬಾಂಗ್ಲಾ, ಆಪ್ಘಾನಿಸ್ಥಾನ, ಸೋಮಾಲಿಯ, ನೈಜಿರಿಯಾ, ರುವಾಂಡ ಇವೆಲ್ಲವೂ ಮುಸ್ಲಿಂ ಧರ್ಮಗುರುಗಳು ಇಲ್ಲವೆ, ಬಂಡುಕೋರರು ಅಥವಾ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಮೂಲಕ ಪರೋಕ್ಷವಾಗಿ ಆಳಲ್ಪಡುತ್ತಿವೆ. ಒಟ್ಟು ಜಾಗತಿಕ ಸೇವೆ ಮತ್ತು ಸರಕುಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಕೊಡುಗೆ ಕೇವಲ ಐದರಷ್ಟು ಮಾತ್ರ.
ಜಗತ್ತಿನ ವಾಸ್ತವ ಸ್ಥಿತಿ ಹೀಗಿರುವ ಸಂದರ್ಭದಲ್ಲಿ ಕೋಮುಗಲಭೆಯ ಬೇರುಗಳನ್ನು ಕುರಿತು ನಾವು ವಿವೇಚಿಸುವಾಗ ಇತಿಹಾಸದ ಘಟನೆಗಳ ಕುರಿತಂತೆ ನಮ್ಮಲ್ಲಿ ಪರಿಪೂರ್ಣವಾದ ಜ್ಞಾನ ಮತ್ತು ಅಂಕಿ ಅಂಶಗಳ ದಾಖಲೆಗಳಿರಬೇಕಾಗುತ್ತದೆ.
(ಕರಾವಳಿ ಮುಂಜಾವು ದಿನ ಪತ್ರಿಕೆಯ "ಜಗದಲ" ಅಂಕಣಕ್ಕೆ ಬರೆದ ಲೇಖನ)


No comments:

Post a Comment