ಶುಕ್ರವಾರ, ಜುಲೈ 14, 2017

ಆಫ್ರಿಕಾದಲ್ಲಿ ದೇಶಿ ಬಿತ್ತನೆ ಬೀಜ ಕ್ರಾಂತಿಗೆ ನಾಂದಿ ಹಾಡಿದ ಆಂಧ್ರ ರೈತರು


ಬಹುರಾಷ್ಟ್ರೀಯ ದೈತ್ಯ ಕಂಪನಿಯಾದ ಮಾನ್ಸಂಟೊ ಸಂಸ್ಥೆಯ ಕುಲಾಂತರಿ ತಳಿಗಳಿಗೆ ಜಾಗತಿಕ ಮಟ್ಟದಲ್ಲಿ ಹಂತ ಹಂತವಾಗಿ ವಿರೋಧ ವ್ಯಕ್ತವಾಗುತ್ತಿದೆ. ಪಶ್ಚಿಮ ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರವಾದ ಬರ್ಕಿನ ಪಾಸೊ ) (ಃuಡಿಞiಟಿಚಿ Pಚಿsoಎಂಬ ಪುಟ್ಟ ರಾಷ್ಟ್ರದಲ್ಲಿ ರೈತರು ಬಿ.ಟಿ. ಹತ್ತಿಗೆ ವಿದಾಯ ಹೇಳುತ್ತಿದ್ದಾರೆ. ನೆರೆಯ ರಾಷ್ಟ್ರವಾದ ಘಾನದಲ್ಲಿ ಕುಲಾಂತರಿ ತಳಿಗಳ ಹತ್ತಿ, ಟಮೋಟೊ, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಪ್ರಾಯೋಗಿಕ ಪರೀಕ್ಷೆಗಳಿಗೆ ನೀಡಲಾಗಿದ್ದ ಅನುಮತಿಯನ್ನು ಅಲ್ಲಿನ ಸರ್ಕಾರ ಹಿಂತೆಗೆದುಕೊಂಡಿದೆ.
ಬಡರಾಷ್ರಗಳು ಮತ್ತು ಅಭಿವೃದ್ಧಿ ಶೀಲ ರಾಷ್ರಗಳ ರೈತರ ಅನಕ್ಷರತೆ ಮತ್ತು ಅಜ್ಞಾನವನ್ನು ಬಂಡವಾಳ ಮಾಡಿಕೊಂಡಿರುವ ಹಾಗೂ ಆರ್ಥಿಕ ಸಾಮಾಥ್ರ್ಯದಲ್ಲಿ ಇಡೀ ರಾಷ್ರಗಳನ್ನು ಕೊಂಡುಕೊಳ್ಳುವಷ್ಟು ಸಂಪತ್ತನ್ನು ಶೇಖರಿಸಿರುವ ಮಾನ್ಸಂಟೊ, ಬೇಯರ್, ಡುಪಾಂಟ್ ಕಂಪನಿಗಳು, ಕುಲಾಂತರಿ ಬಿತ್ತನೆ ಬೀಜಗಳು, ಈ ಬೆಳೆಗಳಿಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ದುಬಾರಿ ಔಷಧಗಳ ವ್ಯೂಹ ರಚಿಸಿಕೊಂಡು, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ರಗಳ ಮುಗ್ಧ ರೈತರನ್ನು ತಾವು ಹೆಣೆದಿರುವ ಬಲೆಗೆ ಬೇಟೆಯ ಮಿಕಗಳಂತೆ ಕೆಡುವುತ್ತಿವೆ.
ಕಳೆದ ಒಂದೂವರೆ ದಶಕದಿಂದ ಭಾರತವು ಸೇರಿದಂತೆ ಹಲವು ರಾಷ್ರಗಳಲ್ಲಿ ವಿಶೇಷವಾಗಿ ಈಜಿಪ್ತ್, ಬಾಂಗ್ಲಾ, ಪಾಕಿಸ್ತಾನ, ಚೀನಾದ ಮುಂಗೋಲಿಯಾ ಪ್ರಾಂತ್ಯ ಈ ಪ್ರದೇಶಗಳ ರೈತರು ಬಿ.ಟಿ.ಹತ್ತಿಯನ್ನು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಭಾರತದಲ್ಲಿ ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣದ ಪ್ರಾಂತ್ಯಗಳಲ್ಲಿ ಹತ್ತಿ ಬೆಳೆ ಪ್ರಯೋಗದಲ್ಲಿ ರೈತರು ವಿಫಲರಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಮೂರು ರಾಜ್ಯಗಳಲ್ಲಿ ಕಲೆದ ಒಂದೂವರೆ ದಶಕದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯು ಇಪ್ಪತ್ತು ನಾಲ್ಕು ಸಾವಿರವನ್ನು ದಾಟಿದೆ.
ಇಂತಹ ದಯನೀಯವಾದ ಸ್ಥಿತಿಯಲ್ಲಿ  ಭಾರತದ ಕೇಂದ್ರ ಸರ್ಕಾರಕ್ಕೆ ಇನ್ನೂ ಬುದ್ದಿ ಬಂದಂತೆ ಕಾಣುವುಲ್ಲ. ಇಲ್ಲಿಯವರೆಗೆ ಬಿ.ಟಿ.ಹತ್ತಿಂiÀi ಪ್ರಯೋಗವಾಯಿತು, ಬಿ.ಟಿ.ಬದನೆಯ ಪ್ರಯೋಗವಾಯಿತು. ಇದೀಗ ಬಿ.ಟಿ. ಸಾಸಿವೆಗೆ ಮಾನ್ಸಂಟೊ ಕಂಪನಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದಲ್ಲಿ ಸಾಸಿವೆ ಎಣ್ಣೆಯ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಜಗಜಾಂತರ ವೆತ್ಯಾಸವಿದೆ. ಗುಜರಾತ್, ರಾಜಸ್ತಾನ್ ಹೀಗೆ ಒಂದೆರೆಡು ರಾಜ್ಯಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಸಾಸಿವೆ ಎಣ್ಣೆಯ ಬಳಕೆ ತೀರಾ ಕಡಿಮೆಯಿದೆ. ಆದರೂ ಸಹ ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರೂಪಾಯಿ ಹಣ ಬಹುರಾಷ್ಟ್ರೀಯ ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಹರಿದು ಬರುವುದರಿಂದ ಅಧಿಕಾರಕ್ಕೆ ಬರುವ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳೆಗೆ ಕೆಂಪುಗಂಬಳಿ ಹಾಸುವುದನ್ನು ಹವ್ಯಾಸವನ್ನಾಗಿಸಿಕೊಂಡಿವೆ.
ಆಫ್ರಿಕಾದ ಬರ್ಕಿನ ಪಾಸೊ ಎಂಬ ಪುಟ್ಟ ರಾಷ್ಟ್ರವು ಅಲ್ಲಿನ ರೈತರ ಭವಿಷ್ಯದ ಬಗ್ಗೆ ತೆಗೆದುಕೊಂಡಿರುವ ಕಾಳಜಿ ಹಾಗೂ ಬಿ.ಟಿ.ಹತ್ತಿಯನ್ನು ನಿಷೇಧಿಸುವ ಮುನ್ನ ಅಲ್ಲಿನ ಸರ್ಕಾರ ಮತ್ತು ವಿಜ್ಞಾನಿಗಳು, ಪ್ರಗತಿಪರ ರೈತರರು, ಸ್ವಯಂ ಸೇವಾ ಸಂಘಟನೆಗಳು ನಡೆಸಿದ ವಿಸ್ತøತ ಅಧ್ಯಯನವು ಭಾರತಕ್ಕೆ ಮಾದರಿಯಾಗಿದೆ. ಬರ್ಕಿನ ಪಾಸೊ ದೇಶದಲ್ಲಿ ಹತ್ತಿ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಆ ರಾಷ್ಟ್ರದ ಒಟ್ಟು ಜಿ.ಡಿ.ಪಿ. ಬೆಳವಣಿಗೆಯಲ್ಲಿ (ಒಟ್ಟು ಆಂತರೀಕ ಉತ್ಪಾದನೆ) ಶೇಕಡ 4% ರಷ್ಟು ಪಾಲನ್ನು ಹೊಂದಿತ್ತು. ಜೊತೆಗೆ ವಿದೇಶಗಳಿಗೆ ರಫ್ತಾಗುವ ಮುಕ್ಕಾಲು ಭಾಗದ ವಸ್ತುಗಳಲ್ಲಿ ಹತ್ತಿ ಮತ್ತು ಹತ್ತಿಯಿಂದ ತಯಾರಿಸಿದ ನೂಲು, ವಸ್ತ್ರ ಇವುಗಳ ಪಾಲಿತ್ತು. ಆದರೆ, 2003 ರಲ್ಲಿ ಅಲ್ಲಿನ ದೇಶಿ ಹತ್ತಿ ಬೆಳೆಗೆ ಪರ್ಯಾಯವಾಗಿ ರೈತರಿಗೆ ಅಮೇರಿಕಾ ಮೂಲದ ಮಾನ್ಸಂಟೊ ಕಂಪನಿಯು ಹೊಸದಾಗಿ ಪರಿಚಯಿಸಿದ “ ಮಾನ್ಸಂಟೊ ಬೋಲ್ ಗಾರ್ಡ್-2” ಎಂಬ ಬಿ.ಟಿ. ಹತ್ತಿ ಬೆಳೆಯು ಅಲ್ಲಿನ ರೈತರು ಮತ್ತು ದೇಶದ ಆರ್ಥಿಕ ಚಟುವಟಿಕೆಯನ್ನು ತಲೆಕೆಳಗು ಮಾಡಿತು. ಮಾನ್ಸಂಟೊ ಕಂಪನಿಯು ಸಹ ಬರ್ಕಿನ ಪಾಸೊ ರಾಷ್ಟ್ರದಲ್ಲಿ ಬಿ.ಟಿ.ಪಾಸೊ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರೈತರಿಗೆ ಹತ್ತಿ ಬೀಜವನ್ನು ವಿತರಣೆ ಮಾಡಿತ್ತು.
ಬಿ.ಟಿ. ಹತ್ತಿ ಬೆಳೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳದರೂ ಸಹ, ಬಿ.ಟಿ. ಪಾಸು ಹತ್ತಿಯಲ್ಲಿ ನೂಲಿನ ಎಳೆ ತಯಾರು ಮಾಡಲು ಇರಬೇಕಾದ ಮೂಲ ಕಾಣೆಯಾಗಿದ್ದವು. ಈ ಕುರಿತು ಡೆನ್ಮಾರ್ಕ್‍ನ ವಿಜ್ಞಾನಿಗಳು ಆಳವಾದ ಅಧ್ಯಯನ ನಡೆಸಿದ ನಂತರ ಬಿ.ಟಿ.ಹತ್ತಿ ಬೀಜವೆಂಬ ಕುಲಾಂತರಿ ತಳಿಯ ಬೀಜವನ್ನು ಸೃಷ್ಟಿಸುವಾಗ ಮಾನ್ಸಂಟೊ ಕಂಪನಿಯು ಮಾಡಿರುವ ಎಡವಟ್ಟುಗಳು ಬೆಳಕಿಗೆ ಬಂದವು.
ಬರ್ಕಿನ ಪಾಸೊ ರಾಷ್ಟ್ರಕ್ಕೆ ಮತ್ತು ಅಲ್ಲಿನ ಭೂಮಿ ಮತ್ತು ಹವಾಗುಣಕ್ಕೆ ತಕ್ಕಂತೆ ಬಿ.ಟಿ. ಹತ್ತಿ ಬೀಜ ತಯಾರಿಸಲು ಹೊರಟ ಕಂಪನಿಯು ಅಮೇರಿಕಾದ ತನ್ನ ಪ್ರಯೋಗಾಲಯದಲ್ಲಿದ್ದ ಜೀವಕೋಶ ಮತ್ತು ಬರ್ಕಿನ ಪಾಸೊ ರಾಷ್ಟ್ರದ ಭೂಮಿಯಿಂದ ತೆಗೆಯಲಾಗಿದ್ದ ಜೀವಕೋಶಗಳನ್ನು ಸಂಕರಗೊಳಿಸಿ ಬೀಜವನ್ನು ಸೃಷ್ಟಿ ಮಾಡಲಾಗಿತ್ತು. ಆದರೆ, ಈ ಬೀಜದಿಂದ ಉತ್ಪಾದನೆಯಾದ ಹತ್ತಿಯಲ್ಲಿ ನಾರಿನ ಅಂಶ ಕಾಣೆಯಾಗಿತ್ತು. ಏಕೆಂದರೆ, ಕುಲಾಂತರಿಯ ಪ್ರಯೋಗದಲ್ಲಿ  ಸ್ಥಳೀಯ ರಾಷ್ಟ್ರದ ಜೀವಕೋಶಗಳು ತಮ್ಮ ಸತ್ವವನ್ನು ಕಳೆದುಕೊಂಡು ನಿರ್ಜೀವವಾಗಿದ್ದವು. ಇಂತಹ ಅಧ್ಯಯನ ಮತ್ತು ಹತ್ತಿ ಬೆಳೆಯ ಇಳುವರಿಯ ಕುಸಿತಕ್ಕೆ ಕಾರಣವಾದ ಅಂಶಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಅಲ್ಲಿನ ವಿಜ್ಞಾನಿಗಳು ನಿರತರಾಗಿದ್ದಾಗ, ನಮ್ಮ ತೆಲಂಗಾಣ ರೈತರ ಅನುಭವ ಕುರಿತು ಹೈದರಾಬಾದಿನ ಡೆಕ್ಕನ್ ಡೆವಲಪ್‍ಮೆಂಟ್ ಸೊಸೈಟಿ ಎಂಬ ಸಂಸ್ಥೆಯು 2007 ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸಿದ “ ಎ ಡಿಸಸ್ಟೆರ್ ಇನ್ ಸರ್ಚ್ ಆಫ್ ಸಕ್ಸಸ್- ಬಿ.ಟಿ.ಕಾಟನ್- 3 ಇಯರ್ಸ್ ಪ್ರಾಡ್” (ಜಯ ಅರಸುವಲ್ಲಿ ಒದಗಿದ ಆಪತ್ತು- ಬಿ.ಟಿ.ಹತ್ತಿ: ಮೂರು ವರ್ಷಗಳ ವಂಚನೆ) ಎಂಬ ಸಾಕ್ಷ್ಯ ಚಿತ್ರ ಬರ್ಕಿನ ಪಾಸೊ ರಾಷ್ಟ್ರವಲ್ಲದೆ ಇಡೀ ಜಗತ್ತಿನ ಹಲವಾರು ರಾಷ್ರಗಳ ರೈತರ ಕಣ್ಣು ತೆರಸಿತು.
ಸುಮಾರು ಎರಡು ದಶಕದ ಹಿಂದೆ ನಮ್ಮ ಕನ್ನಡಿಗರಾದ ಹಾಗೂ ಪಿರಿಯಾಪಟ್ಟಣದ ಮೂಲದ ಪಿ.ವಿ.ಸತಿಶ್ ಎಂಬುವವರು ಹೈದರಾಬಾದ್, ಮೇಡಕ್, ಜಹಿರಾಬಾದ್, ಹೀಗೆ ಒಟ್ಟು ಐದಾರು ಜಿಲ್ಲೆಗಳಲ್ಲಿ ಸಣ್ಣ ಹಾಗೂ ಹಿಂದುಳಿದ ರೈತರ ಶ್ರೇಯೋಭಿವೃದ್ಧಿ ಮತ್ತು ಕಿರುಧಾನ್ಯ ಗಳ ಕೃಷಿಗೆ ಒತ್ತು ನೀಡಿ ಆರಂಭಿಸಿದ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ” ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕೇವಲ ರೈತರು ಮಾತ್ರವಲ್ಲದೆ, ದಲಿತ ಹಾಗೂ ಹಿಂದುಳಿದ ಮಹಿಳೆಯರ ಪಾಲಿಗೆ ಜೀವನಾಡಿಯಾಗಿದೆ. ಈ ಸಂಸ್ಥೆಯನ್ನು ಆರಂಭಿಸುವ ಮುನ್ನ ಸತೀಶ್ ರವರು ಸುಮಾರು ಇಪ್ಪತ್ತು ವರ್ಷಗಳ ಕಾಲ ದೂರದರ್ಶನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಸಾಕ್ಷ್ಯ ಚಿತ್ರಗಳ ಮೂಲಕ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ, ಪ್ರೇPಕÀ್ಷರಿಗೆ ಮುಟ್ಟಿಸುವಲ್ಲಿ  ನಿಪುಣರಾಗಿರುವ ಸತೀಶ್ ಇದೀಗ ತಮ್ಮ ಸಂಸ್ಥೆಯಲ್ಲಿ ನೂರಾರು ದಲಿತ ಮಹಿಳೆಯರನ್ನು ಕ್ಯಾಮರಾ ವುಮನ್‍ಗಳಾಗಿ, ಎಡಿಟರ್‍ಗಳಾಗಿ, ರೂಪಿಸಿದ್ದಾರೆ. ಈ ಚಿತ್ರದಲ್ಲಿ ಆದಿಲಾಬಾದ್, ನಲ್ಗೊಂಡ ಜಿಲ್ಲೆಗಳನ್ನು ಒಳಗೊಂಡಂತೆ ತೆಲಂಗಾಣ ಪ್ರಾಂತ್ಯದಲ್ಲಿ ಬಿ.ಟಿ. ಹತ್ತಿ ಬೆಳೆದು ಕೈ ಸುಟ್ಟುಕೊಂಡ ರೈತರ ಅನುಭವ, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವಾ ಪತ್ನಿಯರು ಮತ್ತು ಅನಾಥರಾದ ಅವರ ಮಕ್ಕಳ ನೋವಿನ ಕಥನವನ್ನು ದಾಖಲಿಸಲಾಗಿದೆ.
ಈ ಸಾಕ್ಷ್ಯ ಚಿತ್ರವನ್ನು ನೋಡಿದ ಅಲ್ಲಿನ ವಿಜ್ಞಾನಿಗಳು ನೇರವಾಗಿ ತೆಲಂಗಾಣಕ್ಕೆ ಬಂದು ಪಿ.ವಿ.ಸತೀಶ್ ನೆರವಿನಿಂದ ಕ್ಷೇತ್ರ ಕಾರ್ಯದ ಅಧ್ಯಯನ ಮಾಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಅನುಭವಕ್ಕೆ ನೇರ ಸಾಕ್ಷಿಯಾದರು. ಮಳೆಯಾಶ್ರಿತ ಭೂಮಿಯಲ್ಲಿ ಭೂಮಿಯಲ್ಲಿ ಮೊದಲು ಬೆಳೆಯುತ್ತಿದ್ದ ದೇಶಿ ಹತ್ತಿ ಬೀಜಕ್ಕೆ ಪರ್ಯಾಯವಾಗಿ ಮುನ್ನೂರು ಪಟ್ಟು ಅಧಿಕ ಬೆಲೆ ತೆತ್ತು ಖರಿದಿಸಿದ ಬಿ.ಟಿ.ಹತ್ತಿಯ ಬೀಜ ಹಾಗೂ ಕಂಪನಿಯ ನಿರ್ದೇಶನದಂತೆ ಸಿಂಪಡಿಸಿದ ದುಬಾರಿ ಬೆಲೆಯ ಕೀಟನಾಶಕ ಹೀಗೆ ಅಧಿಕಗೊಂಡ ಕೃಷಿ ಉತ್ಪಾದನೆಯ ವೆಚ್ಚ, ಇದರ ಬದಲಾಗಿ ಕೈ ಕೊಟ್ಟ ಬೆಳೆ, ಕ್ಷೀಣಿಸಿದ ಉತ್ಪಾದನೆಯ ಪರಿಣಾಮ ಸಾಲಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳು ಇವೆಲ್ಲಾ ಅಂಕಿ ಅಂಶಗಳನ್ನು ಕಲೆ ಹಾಕಿದ ವಿಜ್ಞಾನಿಗಳು, ಬಿ.ಟಿ. ಹತ್ತಿಯ ಉತ್ಪಾದನೆ ಅಥವಾ ಇಳುವರಿಯು ವರ್ಷ, ವರ್ಷಕ್ಕೆ ಹೇಗೆ ಕಡಿಮೆಯಾಗುತ್ತಾ ಹೋಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದರು. ಮೊದಲ ವರ್ಷದಲ್ಲಿ ಹೆಕ್ಟೇರ್ ಒಂದಕ್ಕೆ ( ಎರಡೂವರೆ ಎಕರೆ ಭೂಮಿ) 3692 ಕೆ.ಜಿ. ಹತ್ತಿಯ ಇಳುವರಿಯು, ಮೂರನೇ ವರ್ಷಕ್ಕೆ 3114 ಕೆ.ಜಿ.ಹತ್ತಿಗೆ ಕುಸಿದಿತ್ತು. ಅಂದರೆ ವರ್ಷವೊಂದಕ್ಕೆ ಸರಾಸರಿ 300 ಕೆ.ಜಿ.ಯಷ್ಟು ಇಳುವರಿ ಕಡಿಮೆಯಾಗುತ್ತಾ ಬಂದಿತ್ತು. ಆದರೆ, ಉತ್ಪಾದನಾ ವೆಚ್ಚ ಮಾತ್ರ ಏರುತ್ತಾ ಹೋಗಿತ್ತು. ಎಲ್ಲಾ ವಿಧದಲ್ಲಿ ಬಿ.ಟಿ.ಹತ್ತಿ ಬೆಳೆಗಿಂತ ದೇಶಿ ಹತ್ತಿ ಬೆಳೆಯ ಕೃಷಿ ಉತ್ತಮವೆಂದು ಮನಗಂಡಿರುವ ಇಲ್ಲಿನ ರೈತರ ನಿರ್ಧಾರವು ಬರ್ಕಿನಾ ಪಾಸೊ ರಾಷ್ಟ್ರದ ವಿಜ್ಞಾನಿಗಳಿಗೆ ಮಾದರಿಯಾಗಿ ಗೋಚರಿಸಿತು.
ಬರ್ಕಿನ ಪೊಸೊ ರಾಷ್ಟ್ರದ ಒಂದು ಕೋಟಿ ಎಂಬತ್ತು ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಇವರು ಬಿ.ಟಿ.ಹತ್ತಿಯಿಂದ ಅನುಭವಿಸಿದ ನಷ್ಟವನ್ನು ಅಲ್ಲಿನ ಸರ್ಕಾರ ಯಾವುದೇ ಮುಲಾಜಿಲ್ಲದೆ ಮಾನ್ಸಂಟೊ ಕಂಪನಿಯಿಂದ ವಸೂಲಿ ಮಾಡಿ ಅದನ್ನು ಅಲ್ಲಿಂದ ಹೊರದಬ್ಬಿತು. ಮಾನ್ಸಂಟೊ ಕಂಪನಿಯು ಅಲ್ಲಿನ ಸರ್ಕಾರಕ್ಕೆ 76 ದಶಲಕ್ಷ ಡಾಲರ್ ಹಣವನ್ನು ದಂಡದ ರೂಪದಲ್ಲಿ ಪಾವತಿಸಿತು. ಆಫ್ರಿಕಾದ ಒಂದು ಪುಟ್ಟ ಗಣರಾಜ್ಯವೊಂದು ಅಮೇರಿಕಾದ ದೈತ್ಯ ಕಂಪನಿಯನ್ನು ಮಣಿಸಿ, ಅದರಿಂದ ನಷ್ಟ ಭರ್ತಿ ಮಾಡಿಕೊಳ್ಳುವುದಾದರೆ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎನಿಸಿಕೊಳ್ಳುವ ಭಾರತಕ್ಕೆ ಏಕೆ ರೈತರಿಗಾದ ನಷ್ಟವನ್ನು ವಸೂಲಿ ಮಾಡಲು ಸಾಧ್ಯವಾಗಿಲ್ಲ?
ಈ ದೇಶದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಎಂಜಲು ಕಾಸಿಗೆ ಕಾರ್ಪೋರೇಟ್ ಸಂಸ್ಥೆಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವ ಪದ್ಧತಿ ರದ್ದಾಗುವವರೆಗೂ ಈ ದೇಶದ ರೈತರು ಮತ್ತು ಜನಸಾಮಾನ್ಯರಿಗೆ ಭದ್ರತೆ ಸಿಗುವುದಿಲ್ಲ. ಇದು ಸಾರ್ವಕಾಲಿಕ ಸತ್ಯವಾಗಿದ್ದರೂ ಯಾರೊಬ್ಬರೂ ಮಾತನಾಡಲು ಸಿದ್ಧರಿಲ್ಲ.
 ( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ “ ಅಂಕಣಕ್ಕೆ ಬರೆದ ಲೇಖನ)
( ಮಹಿತಿ ಸೌಜನ್ಯ- ಡೌನ್ ಟು ಅರ್ಥ್ ಇಂಗ್ಲೀಷ್ ಪಾಕ್ಷಿಕ. ಚಿತ್ರಗಳು – ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ, ಹೈದರಾಬಾದ್.)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ