ಶುಕ್ರವಾರ, ಜುಲೈ 28, 2017

ಕನ್ನಡ ಕಾವ್ಯ ಮೀಮಾಂಸೆ : ಸಾಂಸ್ಕಂತಿಕ ರಾಜಕಾರಣದ ಸಮರ್ಥ ಅನಾವರಣ



ಕನ್ನಡದ ಶ್ರೇಷ್ಠ ಸಂಸ್ಕಂತಿ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್ ಬೂದಾಳು ಅವರಕನ್ನಡ ಕಾವ್ಯ ಮೀಮಾಂಸೆಕೃತಿಯು ಇತ್ತೀಚೆಗಿನ ದಿನಗಳಲ್ಲಿ ಕನ್ನಡಕ್ಕೆ ಬಂದ ಮಹತ್ವದ ವಿದ್ವತ್ಪೂರ್ಣ ಅಧ್ಯಯನ ಕೃತಿಯಾಗಿದೆ. ತಮ್ಮ ಬದುಕನ್ನು ಬೌದ್ಧ ಧರ್ಮದ ತತ್ವ ಮತ್ತು ಸಿದ್ಧಾಂತಗಳಿಗೆ, ನಾಗಾರ್ಜುನ ಮತ್ತು ಅಲ್ಲಮಪ್ರಭು ಕುರಿತ ಅಧ್ಯಯನಕ್ಕೆ ಹಾಗೂ ನಾಡಿನುದ್ದಕ್ಕೂ ಜನಪದರ ಎದೆಯೊಳಗೆ ದಾಖಲಾಗಿರುವ ಅಲಿಖಿತ ಪಠ್ಯಗಳಾದ ತತ್ವಪದಗಳ ಸಂಗ್ರಹ ಮತ್ತು ವಿಶ್ಲೇಷಣೆಗೆ ಮೀಸಲಾಗಿಟ್ಟಿರುವ ನಟರಾಜ ಬೂದಾಳರು ಸತತ ಹತ್ತು ವರ್ಷಗಳ ಕಾಲದ ತಮ್ಮ ವಸ್ತು ನಿಷ್ಠ ಅಧ್ಯಯನದ ಮೂಲಕ ಭಾರತೀಯ ಕಾವ್ಯ ಮೀಮಾಂಸೆಗೆ ಪರ್ಯಾಯವಾಗಿ ಕನ್ನಡದ ಕಾವ್ಯ ಮೀಮಾಂಸೆಯ ಮಾದರಿಯನ್ನು ಇದೀಗ ನಮ್ಮ ಎದುರುಗಿಟ್ಟಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪ್ರಕಟವಾಗಿರುವ ಕೃತಿಯು ಕನ್ನಡದ ದೇಶಿ ಚಿಂತನೆಗೆ ಮಹತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಕನ್ನಡದ ಬೌದ್ಧಿಕ ಜಗತ್ತನ್ನು ತಮ್ಮ ಚಿಂತನೆಗಳ ಮೂಲಕ ವಿಸ್ತರಿಸಿದ ಡಾ. ಡಿ.ಆರ್. ನಾಗರಾಜು ಅವರ ನಂತರ ಮುಂದುವರಿದ ದೇಸಿ ಚಿಂತನೆ ಶೋಧ ಎಂದು ಕರೆಯಬಹುದಾದ ಕೃತಿಯನ್ನು ದಿವಂಗತ ಡಿ.ಆರ್. ನಾಗರಾಜು ಅವರಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆಕೃತಿಯ ಮುಂದುವರಿದ ಚಿಂತನೆಯ ಭಾಗವೆಂದು  ಧಾರಾಳವಾಗಿ ಹೇಳಬಹುದಾಗಿದೆ.
ಭಾರತೀಯ ಕಾವ್ಯ ಮೀಮಾಂಸೆಯೆಂದು ಕರೆಯಲಾಗುವ ಉತ್ತರದ ಸಂಸ್ಕø ಕಾವ್ಯ ಮೀಮಾಂಸೆಯ ಕಣ್ಣಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾರತೀಯ ಇತರೆ ಭಾಷೆಗಳ ಕಾವ್ಯವನ್ನು ವ್ಯಾಖ್ಯಾನಿಸುವ ಪದ್ಧತಿ ಬಹಳ ಕಾಲದಿಂದಲೂ ರೂಢಿಯಲ್ಲಿದೆ. ಉತ್ತರ ಭಾರತದ ಸಂಸ್ಕø ಭಾಷೆ ಮತ್ತು ಅದರ ಮೀಮಾಂಸೆಗೆ ಪ್ರತಿಯಾಗಿ ದಕ್ಷಿಣ ಭಾರತದಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡ ದ್ರಾವಿಡ ಭಾಷೆಗಳಾದ ತಮಿಳು ಮತ್ತು ಕನ್ನಡದಲ್ಲಿ ಕಾವ್ಯ ಸೃಷ್ಟಿಯಿಂದ ಹಿಡಿದು, ವ್ಯಾಖ್ಯಾನಿಸುವ ನಮ್ಮದೇ ಆದ ಪರಿಕರಗಳು ಅಥವಾ ಮಾನದಂಡಗಳಿದ್ದವು. ಆದರೆಉತ್ತರದ ಸಾಂಸ್ಕøತಿಕ ರಾಜಕಾರಣ ಮತ್ತು ಪ್ರಾದೇಶಿಕ ಭಾಷೆಗಳ ಕುರಿತಾದ ಕೀಳರಿಮೆಯ ಪ್ರಜ್ಞೆಯಿಂದಾಗಿ ನಾವಿನ್ನೂ ಸಂಸ್ಕಂತದ ಭಾರತೀಯ ಕಾವ್ಯ ಮೀಮಾಂಸೆಯ ನೆರಳಲ್ಲಿ ಸಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ  ಹೊಸಚಿಂತನೆ ಮತ್ತು  ಮಾರ್ಗಗಳನ್ನು ನಟರಾಜ ಬೂದಾಳು ಕನ್ನಡಿಗರ ಮುಂದಿರಿಸಿದ್ದಾರೆ.
ಲೇಖಕರೇ ಕೃತಿಯಲ್ಲಿ ಹೇಳುವಮೀಮಾಂಸೆಯೆಂಬುದು ಮೂಲತಃ ಲೋಕವನ್ನು ನೋಡುವ ಕಣ್ಣು, ಬದುಕುವ ಜಗತ್ತನ್ನು ಬದುಕಿನ ಸ್ವರೂಪಕ್ಕೆ ಅದರ ಅಗತ್ಯಕ್ಕೆ ಅನುಸಾರವಾಗಿ ವಿವರಿಸಿಕೊಳ್ಳುವ ಒಂದು ಕ್ರಮ. ಮೀಮಾಂಸೆಯ ದಾರಿ ಮತ್ತು ಪ್ರಭುತ್ವದ ದಾರಿ ಬೇರೆಯಾಗಿರುವುದಿಲ್ಲ. ಕವಿರಾಜ ಮಾರ್ಗ ಕೃತಿಯು ಇದನ್ನೇ ಸೂಚಿಸುತ್ತದೆ. ಆದರೆ, ಜೀವನ ಕ್ರಮಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರ ಕೇಂದ್ರಗಳು ತಮ್ಮ ಅಧಿಕಾರವನ್ನು ರೂಢಿಸಿಕೊಳ್ಳುವುದರಿಂದ ಸಹಜವಾಗಿ ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಗಳು ಅಧಿಕಾರದ ಆಯುಧಗಳಾಗಿವೆ. ಏಕಕೇಂದ್ರಿತ ಪ್ರಾಬಲ್ಯವನ್ನು ಸ್ಥಾಪಿಸಬಯಸುವ ಸಂಸ್ಕø ಕಾವ್ಯ ಮೀಮಾಂಸೆಯು ಸ್ಥಳೀಯ ಕಾವ್ಯ ಮೀಮಾಂಸೆ ಮತ್ತು ಜೀವನ ಕ್ರಮಗಳ ಮೇಲೆ ಅಧಿಕಾರ ತೋರುತ್ತಾ ಬಂದಿದೆಎಂಬ ಮಾತುಗಳು ನಮ್ಮ ಜೀವನ ಕ್ರಮ, ದೇಶಿ ಸಂಸ್ಕøತಿಯ ಚಿಂತನೆ ಹಾಗೂ ನಮ್ಮ ನಡುವಿನ ಮಲೆ ಮಹಾದೇಶ್ವರನ ಕಾವ್ಯ, ಮಂಟೆ ಸ್ವಾಮಿ ಕಾವ್ಯ, ಜುಂಜಪ್ಪನ ಕಾವ್ಯ, ಶರಣರ ವಚನಗಳು ಮತ್ತು ಅಸಂಖ್ಯಾತ ತತ್ವ ಪದಕಾರರ ತತ್ವದ ಪದಗಳನ್ನು ಕನ್ನಡ ಕಾವ್ಯ ಮೀಮಾಂಸೆಯ ದೃಷ್ಟಿ ಕೋನದಲ್ಲಿ ನೋಡುವಂತೆ, ಗ್ರಹಿಸುವಂತೆ ಮತ್ತು  ವ್ಯಾಖ್ಯಾನಿಸುವಂತೆ ಪ್ರೇರೇಪಿಸುತ್ತವೆ.
ಕೃತಿಯು ಕನ್ನಡದ ಮನಸ್ಸುಗಳಿಗೆ ಮುಖ್ಯವಾದ ಹಾಗೂ ಸಂಶೋಧನೆಗೆ ಮಾದರಿಯಾದ ಪಠ್ಯವಾಗಿದೆ. ಏಕೆಂದರೆ, ಇಲ್ಲಿ ಕಾವ್ಯ ಮೀಮಾಂಸೆ ಕುರಿತಂತೆ ಲೇಖಕರು ಸಾವಾಧಾನವಾಗಿ ಚಿಂತಿಸಿ ಕಟ್ಟಿಕೊಟ್ಟಿರುವ ಚಿಂತನೆಗಳು ನಾವು ಮರೆತು ಹೋಗಿರುವ ಮಾರ್ಗಕ್ಕೆ ಕೈ ದೀವಿಗೆಯಂತೆ ಕಾಣುತ್ತವೆ. ಸಮೂಹವೊಂದರ ಬದುಕಿನ ಶೈಲಿ ರೂಪುಗೊಳ್ಳುವುದು ಸುತ್ತಲಿನ ನಿಸರ್ಗಕ್ಕೆ ಅನುಗುಣವಾಗಿಯೋ ಅಥವಾ ಕಾಲ್ಪನಿಕ ನಂಬಿಕೆಯನ್ನಾಧರಿಸಿಯೋ ಎಂಬ ಪ್ರಶ್ನೆಗೆ ಶ್ರಮಣ ಕಾವ್ಯ ಮೀಮಾಂಸೆಯು ನಿಸರ್ಗ ಎಂದು ಉತ್ತರಿಸಿದರೆ, ಸಂಸ್ಕಂತ ಕಾವ್ಯ ಮೀಮಾಂಸೆಯು ಸೃಷ್ಟಿಯ ಬಗೆಗಿನ ನಂಬಿಕೆಯನ್ನಾಧರಿಸಿ ಎಂದು ಉತ್ತರಿಸುತ್ತದೆ. ಇದನ್ನು ಆಳವಾಗಿ ಆಲೋಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಹೆಚ್ಚು ವಾಸ್ತವಿಕವಾಗಿದೆ. ಇದು ಬುದ್ಧನ ಚಿಂತನೆಯ ಮಾದರಿ ಕೂಡ ಹೌದು. ಏಕೆಂದರೆ, ಅವನು ಕಣ್ಣ ಮುಂದಿನ ವಾಸ್ತವವನ್ನು ಹೊರತು ಪಡಿಸಿ ಅಂದರೆ, ಇಹಲೋಕದ ವ್ಯವಹಾರಗಳನ್ನು ಹೊರತು ಪಡಿಸಿ, ಕಲ್ಪನಾ ಲೋಕ ಅಥವಾ ಊಹೆಗಳ ಆಧಾರಿತ ಎಲ್ಲಾ ನಂಬಿಕೆಗಳನ್ನು ತಿರಸ್ಕರಿಸಿದವನು. ಭಾರತೀಯ ಕಾವ್ಯ ಮೀಮಾಂಸೆಯು ರೂಪ, ರಸ, ಸ್ಪರ್ಶ ಇವುಗಳ ಕುರಿತು ವಿವೇಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಇದನ್ನು ಮೀರಿ; ದೇಹ, ಶ್ರಮ, ನಡೆ ಮತ್ತು ನುಡಿಗಳನ್ನು ಕುರಿತು ವಿವೇಚಿಸುತ್ತದೆ.
ಕೃತಿಯ ಪ್ರಾಮುಖ್ಯತೆ ಇರುವುದು ಭಾರತೀಯ ಕಾವ್ಯ ಮೀಮಾಂಸೆಗೆ ಪ್ರತಿಯಾಗಿ ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ  ಅದರ ಇತಿಹಾಸ, ಬೆಳವಣಿಗೆಯನ್ನು ಗಂಭೀರವಾಗಿ ಅಧ್ಯಯನ ಮಾಡಿ ಕನ್ನಡ ಕಾವ್ಯ ಮೀಮಾಂಸೆಯ ಚಾರಿತ್ರಿಕ ಬೆಳವಣಿಗೆಯನ್ನು ಲೇಖಕರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಭಾರತದ ಶ್ರಮಣ ಪರಂಪರೆಯನ್ನು ನಿಟ್ಟಿನಲ್ಲಿ ಮುನ್ನೆಲೆಗೆ ತಂದು ಪ್ರಸ್ತಾಪಿಸಿರುವ ಲೇಖಕರು, “ ಬುದ್ಧ ಪೂರ್ವಯುಗದ ಚಾರ್ವಾಕನಿಂದ ಹಿಡಿದು ಶಿಶುನಾಳ ಶರೀಪನವರೆಗೆ ಗುರುತಿಸಲು ಸಾಧ್ಯವಾಗುವ ವಿಶಿಷ್ಟವಾದ ಸಾತತ್ಯತೆಯನ್ನು ಭಾರತೀಯ ದರ್ಶನಗಳಲ್ಲಿ ಗುರುತಿಸಬಹುದುಎಂದು ಹೇಳುವ ನಟರಾಜ ಬೂದಾಳರುಶ್ರಮಣ ಪರಂಪರೆಯೆಂದು ವಿಶಾಲಾರ್ಥದಲ್ಲಿ ಕರೆಯಬಹುದಾದ ಇವರಲ್ಲಿ ಪ್ರಾಚೀನ ಪಂಥಗಳಾದ ಆಜೀವಕರು, ಚಾರ್ವಾಕರು, ಜೈನರು, ಬುದ್ಧರು, ನಾಥಪಚಿಥೀಯರು, ನಾನಾ ರೀತಿಯ ಸಿದ್ಧರು, ನಂತರದ ಕಾಲದ ವಚನಕಾರರು, ತತ್ವಪದಕಾರರು ಸೇರುತ್ತಾರೆ. ಕನ್ನಡದ ಬದುಕಿನಲ್ಲಿ ಪಂಥಗಳು ನಡೆಸಿದ ದೀರ್ಘಕಾಲದ ಯಾನದ ಫಲವಿದೆ.ಇಷ್ಟು ದೀರ್ಘಕಾಲದ ಚಲನೆಯಲ್ಲಿ ಅವುಗಳ ನಡುವೆ ನಡೆದ ಮುಖಾಮುಖಿಯ ಕಾರಣದಿಂದಾಗಿ ಅನೇಕ ರೂಪಾಂತರಗಳು ಸಂಭವಿಸಿವೆ. ಕನ್ನಡದ ಅಸ್ಮಿತೆಯನ್ನು ಆಕರಗಳು ರೂಪಿಸಿವೆ. ಹಾಗಾಗಿ ಕನ್ನಡದ ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳನ್ನು ತಾತ್ವಿಕ ಆಕರಗಳ ಮೂಲಕ ರೂಪಿಸಿಕೊಳ್ಳುವ್ಯದರಿಂದ ನೇರವಾಗಿ ಕನ್ನಡದ ಬದುಕಿನಿಂದಲೇ ಅವುಗಳನ್ನು ಹೆಕ್ಕಿಕೊಂಡಂತಾಗುತ್ತದೆಎಂಬ ಸ್ಪಷ್ಟವಾದ ನಿಲುವನ್ನು ತಾಳುತ್ತಾ, ಕನ್ನಡ ಕಾವ್ಯ ಮೀಮಾಂಸೆಯ ಮೂಲ ಬೇರುಗಳನ್ನು ನಿಖರವಾಗಿ ಗುರುತಿಸಿದ್ದಾರೆ.
ದೇಹ ಮತ್ತು ಶ್ರಮವನ್ನು ವಾಖ್ಯಾನಿಸುವ ನಿರ್ವಹಿಸುವ ಅನೇಕ ಮಾದರಿಗಳು ಕನ್ನಡದ ಬದುಕನ್ನು ರೂಪಿಸಿರುವುದನ್ನು ದಾಖಲಿಸಿರುವ ಲೇಖಕರು, ದೇಹ ಮತ್ತು ಶ್ರಮವನ್ನು ಅಪಮಾನಿಸಿರುವ ಕಾರಣಕ್ಕೆ ಕನ್ನಡದ ಮನಸ್ಸು ಘಾಸಿಕೊಂಡಿದೆ. ಅಪಮಾನದ ಸಂಕಟದಿಂದ ಹೊರಬರಲು ನಡೆಸಿದ ಹೊರಾಟದ ದೀರ್ಘಕಾಲೀನ ಚರಿತ್ರೆಯೊಂದು ನಮ್ಮ ಬೆನ್ನಿಗಿದೆ ಎನ್ನುತ್ತಾರೆ.
ಇದನ್ನು ಡಿ.ಆರ್. ನಾಗರಾಜ್ ಅವರುಕನ್ನಡದ ಭಾಷೆಯೊಳಗಿನ ದಂಗೆಯ ದನಿ ಎದ್ದರೆ, ಅದು ಕಲ್ಯಾಣದ ಜತೆಗೆ ಮಾತನಾಡಬೇಕು. ಅದು ಕನ್ನಡ ಭಾಷೆಯ ಚಾರಿತ್ರಿಕ ವಿಧಿಎಂದು ತಮ್ಮ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಕೃತಿಯಲ್ಲಿ ಹೇಳಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಟರಾಜ ಬೂದಾಳು ಅವರು ಪ್ರಾದೇಶಿಕ ನೆಲೆಯಲ್ಲಿ ಉತ್ತರದ ಸಾಂಸ್ಕøತಿಕ ರಾಜಕಾರಣಕ್ಕೆ ಪ್ರತಿಯಾಗಿ ಅನೇಕ ಮಾದರಿಗಳನ್ನು ಕೃತಿಯ ಮೂಲಕ ನಮ್ಮ ಮುಂದಿಟ್ಟು ಅಂತಹ ದಂಗೆಯ ದನಿಗಳನ್ನು ಗುರುತಿಸಿದ್ದಾರೆ. ಹಾಗಾಗಿ ಕೃತಿಯು ಕನ್ನಡ ಸಾಂಸ್ಕøತಿಕ ಜಗತ್ತಿಗೆ ಮಹತ್ವದ ಕೃತಿ ಮಾತ್ರವಲ್ಲದೆ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲ ಗುಣವನ್ನೂ ಸಹ ಪಡೆದುಕೊಂಡಿದೆ.
ಬೂದಾಳು ಅವರ ಚಿತ್ರ ಸೌಜನ್ಯ- ಪ್ರಜಾವಾಣಿ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ