ಗುರುವಾರ, ಫೆಬ್ರವರಿ 8, 2018

ಕುಸುಮಾ ಬಾಲೆಯ ನೆಪದಲ್ಲಿ ಹಾ.ಮಾ.ನಾ. ನೆನಪಾದರು


ಲೇಖಕ ಮತ್ತು ಪತ್ರಕರ್ತ ಎಂದು ಸಾರ್ವಜನಿಕವಾಗಿ ನಾನು ಗುರುತಿಸಿಕೊಂಡಿದ್ದರೂ ಸಹ ಬಹುತೇಕ ಮಂದಿಗೆ ನಾನೊಬ್ಬ ಗಂಭೀರ ಓದುಗ ಎಂಬುದು ತಿಳಿದಿಲ್ಲ. ನನ್ನ ಹದಿನಾರನೆಯ ವಯಸ್ಸಿನಿಂದ ಆರಂಭವಾದ ಓದಿನ ಹುಚ್ಚು ಇಂದಿಗೂ ಸಹ ಕೊನೆಯಾಗಿಲ್ಲ. ಯವ್ವನದ  ದಿನಗಳಲ್ಲಿ ಅತಿ ಹೆಚ್ಚು ಕನ್ನಡದ ಕೃತಿಗಳನ್ನು ಓದುತ್ತಿದ್ದೆ. ಇತ್ತೀಚೆಗಿನ ಇಪ್ಪತ್ತು ವರ್ಷಗಳಿಂದ ಇಂಗ್ಲೀಷ್ ಕೃತಿಗಳನ್ನು ಓದುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ಕಥೆ, ಕಾದಂಬರಿ ಮತ್ತು ಕಾವ್ಯ ಇಂತಹ ಪ್ರಕಾರಗಳನ್ನು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿ, ಹೆಚ್ಚಾಗಿ ಆತ್ಮಕಥೆಗಳನ್ನು ಮತ್ತು ವೈಚಾರಿಕ ಹಾಗೂ ಸಂಶೋಧನಾ ಕೃತಿಗಳನ್ನು ಓದುತ್ತಿದ್ದೇನೆ.
ಕನ್ನಡದಲ್ಲಿ ಆರರಿಂದ ಎಂಟು ಸಾವಿರ ಕೃತಿಗಳು ಪ್ರಕಟವಾಗುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಮುಚ್ಚು ಮರೆ ಇಲ್ಲದೆ ನೇರವಾಗಿ ಹೇಳಬೇಕೆಂದರೆ ನಾನು ವರ್ಷವೊಂದರಲ್ಲಿ ಓದುವ ಕೃತಿಗಳ ಸಂಖ್ಯೆ ಏಳು ಅಥವಾ ಎಂಟರ ಸಂಖ್ಯೆಯನ್ನು ದಾಟಲಾರದು. ಅದರಲ್ಲೂ ವಿಶೇಷವಾಗಿ ಯುವ ಲೇಖಕರ/ಲೇಖಕಿಯ ಕೃತಿಗಳನ್ನು ಓದುವುದು ತೀರಾ ಕಡಿಮೆ ಎಂದು ಹೇಳಬಹುದು. ಪ್ರತಿಭಾವಂತ ಯುವ ಲೇಖಕ ಅಥವಾ ಲೇಖಕಿಯರನ್ನು ನಾನು ಗುರುತಿಸಿ ಹೇಳಬಹುದಾದರೆ, ಏಳೆಂಟು ಹೆಸರುಗಳನ್ನು ಮಾತ್ರ ನಾನು ಹೇಳಬಲ್ಲವನಾಗಿದ್ದೀನಿ. ಇದು ನನ್ನ ಓದಿನ ಮಿತಿಯೂ ಇದ್ದಿರಬಹುದು. ಆದರೆ, ವಯಸ್ಸಿನಲ್ಲಿ ನನ್ನ ಕಿರಿಯ ಸಹೋದರಿಯಂತೆ ಇರುವ ಕುಸುಮಾಬಾಲೆ ಎಂಬ ಅಂಕಿತ ನಾಮದ ಕುಸುಮಾ ಅಯ್ಯರಳ್ಳಿ ಎಂಬ ಯುವ ಲೇಖಕಿಯ ಅಂಕಣ ಬರಹಗಳ ಕೃತಿಯೊಂದು ಇತ್ತೀಚೆಗೆ ನನ್ನನ್ನು ಗಂಭಿರವಾಗಿ ಕಾಡತೊಡಗಿತು. ನಾನು ಯಾವುದೇ ಒಳ್ಳೆಯ ಕೃತಿಯನ್ನು ಒಂದೇ ಓದಿಗೆ ಮುಗಿಸುವ ಆತುರದ ಪ್ರವೃತ್ತಿಯ ಮನುಷ್ಯನಲ್ಲ. ಒಂದೊಂದೆ ಅಕ್ಷರವನ್ನು ಎದೆಗಿಳಿಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ ಒಂದು ಅಧ್ಯಾಯದಂತೆ ಓದುವ ಅಭ್ಯಾಸ ಇಟ್ಟುಕೊಂಡವನು. ವರ್ಷ ರೀತಿಯಲ್ಲಿ ಡಾ.ಗಿರಡ್ಡಿ ಗೋವಿಂದರಾಜರು ಇಂಗ್ಲೀಷ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ದೇವದತ್ತ ಪಟ್ನಾಯಕ್ ಅವರ ಮಹಾಭಾರಥ ಪೌರಾಣಿಕ ಕಥನಜಯಎಂಬ ಬೃಹತ್ ಕೃತಿ ಮತ್ತು ಕುಸುಮಾಬಾಲೆಯಯೋಳ್ತೀನಿ ಕೇಳಿಎಂಬ ಅಂಕಣ ಬರಹಗಳ ಕೃತಿ ಇವುಗಳನ್ನು ಓದಿ ಮುಗಿಸಿದೆಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬರೆಯುವ ಇಲ್ಲವೆ; ಓದುವ ಹವ್ಯಾಸವುಳ್ಳ ನಾನು, ಕುಸುಮಾ ಅವರ ಬರಹದ ಭಾಷೆಯನ್ನು ಹಾಗೂ ಅವರು ಕೃತಿಯಲ್ಲಿ ಕಾಣಿಸಿರುವ ಲೋಕದ ವೈವಿಧ್ಯತೆಯನ್ನು ಕಂಡು ಬೆರಗಾಗಿ, ಬೆಳಗಿನ ಆರುಗಂಟೆಗೆ    ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೆ. ಇದೀಗ ಕೃತಿಗೆ ಪ್ರತಿಷ್ಠಿತ ಹಾ.ಮಾ.ನಾ. ಅಂಕಣ ಪ್ರಶಸ್ತಿ ಕೂಡ ಲಭ್ಯವಾಗಿದೆ.
ಮಂಡ್ಯ ಮತ್ತು ಮೈಸೂರು ನಗರದಲ್ಲಿರುವ  ನನ್ನ ಹಲವಾರು ಹಿರಿಯ ಮಿತ್ರರು ಡಾ.ಹಾ.ಮಾ.ನಾಯಕ್ ರವರ ಸ್ಮರಣೆಯಲ್ಲಿ ಹತ್ತು ಲಕ್ಷ ರೂಪಾಯಿಗಳಷ್ಟು ದೇಣಿಗೆಯನ್ನು ಸಂಗ್ರಹಿಸಿಅದನ್ನು ಬ್ಯಾಂಕ್ನಲ್ಲಿ ಠೇವಣಿಯನ್ನಾಗಿಟ್ಟು ಕಳೆದ ಐದು ವರ್ಷಗಳಿಂದ ಹಾ.ಮಾ.ನಾ. ಹೆಸರಿನಲ್ಲಿ ಭಾಷಾ ವಿಜ್ಞಾನಕ್ಕೆ, ಜಾನಪದ ಕ್ಷೇತ್ರ ಅಥವಾ ಅಂಕಣ ಬರಹ ಇವುಗಳಲ್ಲಿ ಗಣನೀಯವಾದ ಸೇವೆ ಸಲ್ಲಿಸಿದ ಮಹನೀಯರಿಗೆ ಐವತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದರು. ಬಾರಿ ಹೊಸದಾಗಿ ಕಿರಿಯ ಲೇಖಕ/ಲೇಖಕಿಯರಿU ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನದ ಪ್ರಶಸ್ತಿಯನ್ನು ಸಹ ಸ್ಥಾಪಿಸಿದ್ದು, ಪ್ರಥಮ ಬಾರಿಗೆ ಅಂಕಣ ಬರಹಕ್ಕಾಗಿ ಕುಸುಮಾ ಅಯ್ಯರಳ್ಳಿ ಆಯ್ಕೆಯಾದರು. ಆಯ್ಕೆ ಸಮಿತಿಯ ಸದಸ್ಯರು ಕೆಲವು ಮಾನದಂಡಗಳನ್ನು ಸೂಚಿಸಿಮೂವರು ಯುವ ಲೇಖಕಿಯರ ಹೆಸರು ಸೂಚಿಸಲು ನನ್ನನ್ನು ಕೇಳಿಕೊಂಡಾಗ ಇಬ್ಬರು ಹೆಸರನ್ನು ಮಾತ್ರ ನಾನು ಸೂಚಿಸಿಲು ಸಾಧ್ಯವಾಯಿತು. ಪ್ರಜಾವಾಣಿ ಪತ್ರಿಕೆಯ ವಿಶಾಲಾಕ್ಷಿ ಅಕ್ಕಿ ಮತ್ತು ಕುಸುಮಾ ಅಯ್ಯರಳ್ಳಿ ಇಬ್ಬರ ಯುವ ಲೇಖಕಿಯರ ನಡುವೆ ಅಂತಿಮವಾಗಿ ಕುಸುಮಾಬಾಲೆಯವರಯೋಳ್ತೀನಿ ಕೇಳಿಕೃತಿಯು ಹಾ.ಮಾ.ನಾ. ಅಂಕಣ ಪ್ರಶಸ್ತಿಗೆ ಆಯ್ಕೆಯಾಯಿತು.

ತಲೆಮಾರಿನ ಬಹುತೇಕ ಮಂದಿಗೆ ಹಾ.ಮಾ.ನಾ. ಮತ್ತು ಅವರ ಬರಹ ಮತ್ತು ಘನತೆಯ ಬದುಕು ಗೊತ್ತಿಲ್ಲ ಎಂದು ನಾನು ಭಾವಿಸಿದ್ದೇನೆ. “ಸಂಪ್ರತಿಎಂಬ ಹೆಸರಿನಲ್ಲಿ ಅವರು ನಿರಂತರವಾಗಿ ಸುಧಾ ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿ ಅಂಕಣವನ್ನು ಬರೆಯುವುದರ ಜೊತೆಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸಸ್ತಿಯನ್ನು ತಂದು ಕೊಡುವುದರ ಮೂಲಕ ಸಾಹಿತ್ಯದ ಸ್ಥಾನ ಮಾನಗಳನ್ನು ಗಳಿಸಿಕೊಟ್ಟವರು. ಕುವೆಂಪು ಅವರಂತೆ  ಮಲೆನಾಡಿನ ಶಿವಮೊಗ್ಗ ಜಿಲ್ಲೆಯಿಂದ ಬಂದ ಹಾ.ಮಾ.ನಾ.ರವರು ಕುವೆಂಪು ಅವರನ್ನು ಮಾದರಿಯನ್ನಾಗಿಟ್ಟುಕೊಂಡು ಜಾತಿಯನ್ನು ಮೀರಿ ಘನತೆಯಿಂದ ಬದುಕಿದವರು. ಜಾನಪದ ವಿದ್ವಾಂಸರಾಗಿ, ಭಾಷಾ ವಿಜ್ಞಾನಿಯಾಗಿ ಅವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಅವರು ಕಟ್ಟಿ ಬೆಳಸಿದ ರೀತಿ ಇಂದಿಗೂ ಮಾದರಿಯಾಗಿದೆ. ಶಿವರಾಮ ಕಾರಂತರಂತೆ ಅವರಿಗೆ ಯಾರೇ ಪತ್ರ ಬರೆದರೂ; ಅಂಚೆಕಾರ್ಡಿನಲ್ಲಿಗೋಧೂಳಿ, ಜಯಲಕ್ಷ್ಮಿಪುರಂ, ಮೈಸೂರುಎಂದು ಬಲ ಬದಿಯಲ್ಲಿ ವಿಳಾಸವನ್ನು ಮತ್ತು ದಿನಾಂಕವನ್ನು ದಾಖಲಿಸುವುದರ ಮೂಲಕ ಅತ್ಯಂತ ಮುದ್ದಾದ ದುಂಡನೆಯ ಅಕ್ಷರಗಳಲ್ಲಿ ಪತ್ರ ಬರೆಯುತ್ತಿದ್ದರು. ಹಾ.ಮಾ.ನಾ. ಅವರನ್ನು ಅಂಕಣಕೋರ ಎಂದು ಗೇಲಿ ಮಾಡುತ್ತಿದ್ದ ಪಿ.ಲಂಕೇಶರನ್ನು ಯಾವುದೋ ಒಂದು ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಎಳೆಯುವುದರ ಮೂಲಕ ಅವರಿಂದ ಕ್ಷಮೆ ಯಾಚಿಸುವಂತೆ ಮಾಡುವುದರ ಜೊತೆಗೆ ಪತ್ರಿಕೆಯಲ್ಲಿ ಕುರಿತು ವಿಷಾಧ ಪ್ರಕಟಿಸುವಂತೆ ಮಣಿಸಿದ್ದರು. ಹಾ.ಮಾ,ನಾ. ತಾವು ಬದುಕಿದ್ದ ಅಷ್ಟು ದಿನಗಳಲ್ಲಿ ಯಾವ ವಿಷಯಕ್ಕೂ ರಾಜಿಯಾಗದೆ, ಯಾವ ವ್ಯಕ್ತಿಗೂ ಮಣಿಯದೆ ಆತ್ಮಸಾಕ್ಷಿಯ ಪ್ರಜ್ಞೆಗೆ ಅನುಗುಣವಾಗಿ ಬದುಕಿದ ಕನ್ನಡದ ಕಲವೇ ಕೆಲವು ಧೀಮಂತರಲ್ಲಿ ಮುಖ್ಯರು. ಅವರ ಅಂಕಣ ಬರಹಗಳ ವೈವಿಧ್ಯತೆಯೂ ಕೂಡ ನನ್ನ ತಲೆಮಾರಿನ ಹಲವರನ್ನು ಪ್ರೇರೆಪಿಸಿದೆ ಎಂದರೆ ತಪ್ಪಾಗಲಾರದು.
ಕುಸುಮಾ ಅವರ ಅಂಕಣ ಬರಹಗಳು, ಅವುಗಳಲ್ಲಿ ಅಡಕವಾಗಿರುವ ಜೀವ ಮಿಡಿತದ ಸದ್ದು ಹಾಗೂ ಕೃತಿಯಲ್ಲಿನ ವ್ಯಕ್ತಿ ಚಿತ್ರಗಳನ್ನು ಓದುವಾಗ ನನಗೆ ಗೋರೂರು ರಾಮಸ್ವಾಮಿ ಅಯ್ಯಂಗಾರರನಮ್ಮ ಊರಿನ ರಸಿಕರುಕೃತಿ ನೆನಪಾಗ ತೊಡಗಿತು. ಲೋಕವನ್ನು ತೆರೆದ ಕಣ್ಣುಗಳಿಂದ ನೋಡುವ ಮನಸ್ಸು ಮತ್ತು  ಗ್ರಹಿಸುವ ಹೃದಯವುಳ್ಳವರು ಮಾತ್ರ ಬರೆಯಬಹುದಾದ ಬರಹಗಳಿವು ಎನಿಸಿತು. ಯಾವುದೇ ಪಂಥ ಅಥವಾ ಇಸಂಗಳಿಗೆ ಒಳಗಾಗದೆ ಒಂದು ನಿರ್ಧಿಷ್ಟ ಅಂತರವನ್ನು ಕಾಪಾಡಿಕೊಂಡು ಬಂದಿರುವ ಕುಸುಮಬಾಲೆಆಧುನಿಕತೆಯ ಬಿರುಗಾಳಿಗೆ ತತ್ತರಿಸುತ್ತಿರುವ ಗ್ರಾಮಭಾರತ ಮತ್ತು ಅದರೊಳಗಿನ ನೊಂದ ಜೀವಗಳನ್ನು ತಮ್ಮ ಕಥನದ ನಾಯಕ, ನಾಯಕಿಯರನ್ನಾಗಿ ಮಾಡಿಕೊಂಡು ತಮ್ಮದೇ ಆದ ನಂಜನಗೂಡಿನ ಗ್ರಾಮ ಭಾಷೆಯಲ್ಲಿ ಕಟ್ಟಿಕೊಡುವ ವಿಶಿಷ್ಠ ಶೈಲಿ ಕೃತಿಯ ಹೆಗ್ಗಳಿಕೆಯಾಗಿದೆ. ಇಂದಿನ ಬಹುತೇಕ  ಜನಾಂಗ ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸ ಅಪ್ ತಾಣಗಳಿಗೆ ತಮ್ಮ ಬದುಕನ್ನು ಮೀಸಲಿಟ್ಟು, ಅವುಗಳ ಅಗತ್ಯಕ್ಕೆ ತಕ್ಕಂತೆ ತಮ್ಮ ಬದುಕನ್ನು ಬದಲಾಯಿಸಿಕೊಂಡು ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸ್ಟೇಟಸ್ ಹಾಕಿಕೊಂಡು ಅವುಗಳಿಗೆ ಬರುವ ಲೈಕು ಮತ್ತು ಕಾಮೆಂಟ್ಗಳನ್ನು ಆಹಾರ, ನಿದ್ರೆ ಮತ್ತು ಮೈಥುನವನ್ನಾಗಿಸಿಕೊಂಡಿರುವ ಪರಿಯನ್ನು ಗಮನಿಸಿದಾಗ ಇಂತಹುಗಳಿಂದ ಒಂದಿಷ್ಟು ಅಂತರ ಕಾಯ್ದುಕೊಂಡಿರುವ ಕುಸುಮಾ ಅವರ ಸೃಜನಶೀಲತೆ ನಮಗೆ ಅರ್ಥವಾಗುತ್ತದೆ.
.
ಕೃತಿಯಲ್ಲಿನನೇರ ದಿಟ್ಟ ನಿರಂತರಲೇಖನದ ಬೈರಾಚಾರಿ ಮತ್ತು  “ಉಳ್ಳವರು ಶಿವಾಲಯವ ಮಾಡುವರುಬರಹದ ಸಿದ್ಲಿಂಗು  ಇವರುಗಳು ತಮ್ಮ ವಿಶಿಷ್ಟ ವ್ಯೆಕ್ತಿತ್ವದ ಮೂಲಕ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತಾರೆ. ಇಂತಹ ವ್ಯಕ್ತಿ ಚಿತ್ರಗಳನ್ನುಓದುವಾಗ ನನಗೆ ಪಶ್ಚಿಮ ಬಂಗಾಳದ ಯುವ ಲೇಖಕಿ ನಿಧಿ ದುಗಾರ್ ಕುಂಡಾಲಿಯ ಅವರು ತಮ್ಮ ಲಾಸ್ಟ್ ಜನರೇಷನ್ಎಂಬ ಅಧ್ಯಯನ ಕೃತಿಯಲ್ಲಿ ಭಾರತದಲ್ಲಿ ವೃತ್ತಿ ಕಸುಬುಗಳನ್ನು ಅವಲಂಬಿಸಿ ಬದುಕುತ್ತಿರುವ ಮುಗ್ಧ ಜನರು ನೆನಪಾಗ ತೊಡಗಿದರು. ಕುಸುಮಾಬಾಲೆ ಕೂಡ ಅದೇ ರೀತಿಯಲ್ಲಿ ತಮ್ಮ ಸುತ್ತಾಟದಲ್ಲಿ ಮತ್ತು ಒಡನಾಟದಲ್ಲಿ ದಕ್ಕಿದ ಅನುಭವಗಳಿಗೆ ಅಕ್ಷರ ರೂಪ ಕೊಡುವುದರ ಮೂಲಕ ಓದುಗರನ್ನು ಚಿಂತನೆಗೆ ಹಚ್ಚಬಲ್ಲ ಪ್ರಭಾವಶಾಲಿ ಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಕೃತಿಯಲ್ಲಿನ ಒಂದೊಂದು ಬರಹವು ಮತ್ತೆ ಮತ್ತೆ ಓದಬೇಕೆನಿಸುವ ಗುಣವನ್ನು ಪಡೆದಿವೆ. “ ಬತ್ತದಿರಲಿ ಒಳಗೆ ಹರಿವ ನೆನಪಿನ ನದಿ’ “ಗೆರೆಯೊಂದರ ಆಚೀಚೆ” “ಮುದ್ದಯ್ಯನೆಂಬ ಕಾಲಜ್ಞಾನಿಯ ನೆನಪಲಿ್ಲ, “ ಮನೆಯೊಳಗೆ ಮನೆಯೊಡೆಯನಿಲ್ಲಾ” “ ಸಿಂಪಲ್ಲಾಗಿ ಒಂದ್ ಚಡ್ಡಿ ಸ್ಟೋರಿ”  “ಬದುಕಿನ ಜಾತ್ರೆಗಳು ನಿರಂತರಇಂತಹ ಹಲವಾರು ಬರಹಗಳನ್ನು ಇಲ್ಲಿ ಉಲ್ಲೇಖಿಸಬಹುದು. ಕುಸುಮಾ ಬಾಲೆಯ ಪಯಣ ಹಾಗೂ ಮಾನವೀಯ ಮುಖವುಳ್ಳ ಬರಹದ ದಾಟಿ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ

( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)

1 ಕಾಮೆಂಟ್‌: