Tuesday, 29 May 2018

ಮೋದಿಮಯ ಭಾರತದ ಭ್ರಮೆ ಮತ್ತು ವಾಸ್ತವಗಳುಇದೇ ಮೇ 26 ನೇ ದಿನಾಂಕಕ್ಕೆ  ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕು ವರ್ಷಗಳಾದವು. ನಾಲ್ಕು ವರ್ಷಗಳ ಅವರ ಆಡಳಿತವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದಾಗ, ತೃಪ್ತಿಗಿಂತ ನಿರಾಸೆ ಎಲ್ಲೆಡೆ ಎದ್ದು ಕಾಣುತ್ತಿದೆ. ಭಾರತದ ಪ್ರಜ್ಞಾವಂತ ನಾಗರೀಕರನ್ನು  ನರೇಂದ್ರ ಮೋದಿಯವರು ದೇಶದ ಪ್ರಧಾನಿ ಹುದ್ದೆಯಲ್ಲಿದ್ದಾರಾ? ಅಥವಾ ಪಕ್ಷದ ಪ್ರಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರಾ?” ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ. ಜೊತೆಗೆ ವಿಷಯ ಜನಸಾಮಾನ್ಯರ ನಡುವಿನ ಪದೇ ಪದೇ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ನಾನು ಬಿಡುವುದಿಲ್ಲ ಎಂದು ಮೇ 15 ರಂದು ಫಲಿತಾಂಶ ಪ್ರಕಟವಾದಾಗ ಸಂಜೆ ನವದೆಹಲಿಯಲ್ಲಿ ಪ್ರಧಾನಿಯವರು ಗುಡುಗಿದ್ದಾರೆ. ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾದ ಭಾರತದಲ್ಲಿ ಓರ್ವ  ಪ್ರಧಾನಿಯಾಗಿರುವ ವ್ಯಕ್ತಿ ನೀಡಬಹುದಾದ ಹೇಳಿಕೆ ಹೀಗೂ ಇರಬಹುದೆ? ಇದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಕಳೆದ ನಾಲ್ಕುವರ್ಷಗಳಿಂದ ಇವೊತ್ತಿಗೂ ಮಾಧ್ಯಮವನ್ನು ನೇರವಾಗಿ ಮುಖಾ ಮುಖಿಯಾಗಿ ಎದುರಿಸಲಾಗದೆ ಅಪಕ್ವ ಮನಸ್ಥಿತಿಯ ಪುಕ್ಕಲ ಪ್ರಧಾನಿ ಎಂಬ ಬಿರುದಿಗೆ ಪಾತ್ರರಾಗಿರುವ ನರೇಂದ್ರ ಮೋದಿಯವರು ಪಕ್ಷದ ವೇದಿಕೆಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಪುಂಖಾನುಪುಂಖವಾಗಿ ಅಣಿ ಮುತ್ತುಗಳನ್ನು ಉದುರಿಸಬಲ್ಲ ಹಾಗೂ ಅದ್ಭುತವಾಗಿ ನಟಿಸಬಲ್ಲ ಚಾಣಾಕ್ಷ ರಾಜಕಾರಣಿಯಾಗಿ ಕಾಣುತ್ತಿದ್ದಾರೆ.
ದೇಶದ ಒಬ್ಬ ಪ್ರಧಾನಿಯಾಗಿ ತಾನು ಆಡಬಹುದಾದ  ಮಾತುಗಳಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ತನ್ನ ಮಾತುಗಳನ್ನು ಇಡೀ ದೇಶದ ನಾಗರೀಕರು ಮಾತ್ರವಲ್ಲದೆ; ಜಗತ್ತಿನ ಮಾಧ್ಯಮಗಳು ಎಚ್ಚರಿಕೆಯಿಂದ ಗಮನಿಸುತ್ತವೆ ಎಂಬ ಕನಿಷ್ಟ ತಿಳುವಳಿಕೆಯಿಲ್ಲದ ನರೇಂದ್ರಮೋದಿಯವರು ಒಬ್ಬ ಸಾಮಾನ್ಯ ಶಾಸಕ ಅಥವಾ ಸಂಸದನಂತೆ ಭಾರತದ ರಾಜಕೀಯ ಇತಿಹಾಸ ಕುರಿತು ಅಪ್ರಭುದ್ಧತೆಯಿಂದ ಮಾತನಾಡುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ದೆಹಲಿಯಲ್ಲಿ ಮೆಟ್ರೊ ರೈಲು ಸಂಚಾರ ಸ್ಥಾಪಿಸುವುದರ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದರು ಎಂಬ ಮಾತನಾಡಿದ ದೇಶದ ಪ್ರಧಾನಿಗೆ ಭಾರತದಲ್ಲಿ ಪ್ರಥಮ ಮೆಟ್ರೊ ರೈಲು ಸಂಚಾರವು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ( 1984)ಎಡರಂಗ ಆಡಳಿತವಿದ್ದ ಅಂದರೆ, ಜ್ಯೋತಿಬಸು ಅವರು ಮುಖ್ಯಮಂತ್ರಿಯಾಗಿದ್ದ ಪಶ್ಚಿಮ ಬಂಗಾಳದ ಕೊಲ್ಕತ್ತ ನಗರದಲ್ಲಿ ಆರಂಭವಾಯಿತು ಎಂಬ ಕನಿಷ್ಠ ತಿಳುವಳಿಕೆ ಇಲ್ಲವಾಗಿದೆ. ಇದರ ಜೊತೆಗೆ  ಇತ್ತೀಚೆಗೆ ಕರ್ನಾಟಕದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೆಹರೂ ಅವರಿಂದ ಸೇನಾ ದಂಡನಾಯರಾಗಿದ್ದ ಜನರಲ್ ಕಾರಿಯಪ್ಪನವರಿಗೆ ಅಪಮಾನವಾಗಿತ್ತು ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಮುಜಗರಕ್ಕೆ ಒಳಗಾದರು.
ಯಾವುದೇ ಒಬ್ಬ ಜನನಾಯಕ ಒಳ್ಳೆಯ ಆಡಳಿಗಾರನಾಗಬೇಕಾದರೆ, ಆತನಿಗೆ ಸ್ಥಿತಪ್ರಜ್ಞೆ ಇರಬೇಕು.  ತನ್ನ ಬಳಿ ವಿವಿಧ ರಂಗಗಳ ತಜ್ಞರನ್ನು ಇಟ್ಟುಕೊಂಡು ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯಬೇಕು. ಆದರೆ ಅಂತಹ ಯಾವುದೇ ಲಕ್ಷಣಗಳು ಮೋದಿಯವರಲ್ಲಿ ಕಂಡು ಬರುವುದಿಲ್ಲ. ಅವರದೇ ಆದ  ಪಕ್ಷದ ಹಿರಿಯ ಸಂಸದ ಹಾಗೂ ಹಿಂದಿ ಚಿತ್ರರಂಗದ ಹಿರಿಯ ನಟ ಶತೃಘ್ನಸಿನಾ ಅವರು ಹೇಳುವ ಹಾಗೆ ಇದೀಗ ಭಾರತೀಯ ಜನತಾ ಪಕ್ಷವು ಇಬ್ಬರು ಸೈನಿಕರ ಸೇನೆಯಾಗಿದೆ. ( ಒಬ್ಬರು ಮೋದಿ, ಮತ್ತೊಬ್ಬರು ಅವರ ಭಂಟ ಅಮಿತ್ ಶಾ) ಪಕ್ಷದಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲದ ಕಾರಣದಿಂದಾಗಿ ಮತ್ತು ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ ಪರಿಣಾಮವಾಗಿ ಎಲ್ಲಾ ತತ್ವಸಿದ್ಧಾಂತಗಳನ್ನು ಗಾಳಿಗೆ ತೂರಿ ದೇಶಾದ್ಯಂತ ಬಿ.ಜೆ.ಪಿ. ಆಡಳಿತವನ್ನು ಪ್ರತಿಷ್ಠಾಪಿಸುವುದು ನಮ್ಮ ಗುರಿ ಎಂಬಂತೆ ಗುಜರಾತಿನ ಗುರು ಶಿಷ್ಯರು ವರ್ತಿಸುವುದರ ಮೂಲಕ ಪಕ್ಷದ ಹಿರಿಯ ನಾಯಕರಾದ ಯಶವಂತಸಿನಾ ಹಾಗೂ ಅರುಣ್ ಶೌರಿಯವರ ಕಟು ಟೀಕೆಗೆ ಗುರಿಯಾಗಿದ್ದಾರೆ.
ಮೋದಿಯ ಆಳ್ವಿಕೆಯ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ಸಾಮಾಜಿಕ, ಆರ್ಥಿಕ ವಲಯವೂ ಸೇರಿದಂತೆ  ಔದ್ಯೋಗಿಕ ವಲಯಗಳಲ್ಲಿ ಅಲ್ಲೋಲ ಕಲ್ಲೋಲವೇರ್ಪಟ್ಟಿದೆ. ಇವುಗಳ ನಡುವೆಯೂ ತಿಂಗಳಿಗೊಂದು ಆಕರ್ಷಕ ಶೀರ್ಷಿಕೆಯ ಯೋಜನೆಗಳನ್ನು ಘೋಷಿಸುವುದು ಮೋದಿಯವರ ಹವ್ಯಾಸವಾಗಿದೆ. ಹಿಂದೆ ಘೋಷಿಸಲಾಗಿದ್ದ ಸ್ವಚ್ಛ ಭಾರತ್ ಆಂಧೋಲನ, ನಮಾಮಿ ಗಂಗಾ ಯೋಜನಾ, ಸ್ಮಾರ್ಟ್ ಸಿಟೀಸ್ ( ಪರಿಪೂರ್ಣ ನಗರಗಳು) ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಬಚಾವ್, ಮುದ್ರಾ  ಯೋಜನೆ  ಹೀಗೆ ಡಜನ್ ಗಟ್ಟಲೆ ಯೋಜನೆಗಳಲ್ಲಿ ಕೆಲವು ಕಾಲು ಮುರಿದುಕೊಂಡು ಸ್ಥಗಿತವಾಗಿದ್ದರೆ, ಇನ್ನು ಹಲವು ಯೋಜನೆಗಳು ನಿಧಾನವಾಗಿ ತೆವಳುತ್ತಿವೆ.
2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತು ಪ್ರಧಾನಿಯಾದ ನಂತರ ನರೇಂದ್ರಮೋದಿಯವರು ತುಂಬಾ ಆವೇಶಭರಿತ ಮಾತುಗಳಲ್ಲಿ ಹೇಳಿದ ಮಾತುಗಳೆಂದರೆ, ವಿದೇಶಗಳಲ್ಲಿರುವ ಭಾರತದ ಕಪ್ಪು ಹಣವನ್ನು ವಾಪಸ್ ತರುತ್ತೇನೆ. ಎಲ್ಲಾ ಭಾರತೀಯರ ಖಾತೆಗೆ ತಲಾ ಹದಿನೈದು ಲಕ್ಷ ರೂಪಾಯಿನಂತೆ ಜಮಾ ಮಾಡುತ್ತಿನಿ ಎನ್ನುವುದು ಮೊದಲ ಭರವಸೆ. ಎರಡನೆಯದು ಭಾರತದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂಬ ಮಾತು. ಭಾರತದ ವಾಸ್ತವವನ್ನು ಅರ್ಥಮಾಡಿಕೊಳ್ಳಲಾರದ ಒಬ್ಬ ಅನನುಭವಿ ರಾಜಕಾರಣಿಯಂತೆ ಮಾತನಾಡಿದ ನರೇಂದ್ರ ಮೋದಿಯವರು ತಾವು ನೀಡಿದ ತಪ್ಪು ಭರವಸೆಗಳ ಪ್ರತಿಫಲವೆಂಬಂತೆ ಈಗ ಮಾಧ್ಯಮಗಳನ್ನು ಎದುರಿಸಲಾರದೆ ಕಣ್ಣು ತಪ್ಪಿಸಿಕೊಂಡು ಓಡಾಡುವಂತಾಗಿದೆ. ಮೋದಿಯವರು ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವುದು ಬೇಡ, ಸಧ್ಯಕ್ಕೆ ಕೋಟಿಗಟ್ಟಲೆ ಸಾಲಪಡೆದು ಇಲ್ಲಿನ ಬ್ಯಾಂಕಿಗಳಿಗೆ  ವಂಚಿಸಿ ಓಡಿ ಹೋಗುತ್ತಿರುವ  ಉದ್ಯಮಿಗಳಿಗೆ ಕಡಿವಾಣ ಹಾಕಿದರೆ ಸಾಕಾಗಿದೆ. ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಅಂದರೆ ವಸೂಲಿಯಾಗದ ಸಾಲದ ಪ್ರಮಾಣ ಬರೋಬ್ಬರಿ ಒಂಬತ್ತು ಲಕ್ಷ ಕೋಟಿ ರೂಪಾಯಿಗೆ ಏರಿದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್ಗಳು ತಮ್ಮ ಆಯ ವ್ಯಯ ಪತ್ರದಲ್ಲಿ ಕೆಲವು ಸಾಕದ ಖಾತೆಗಳನ್ನು ಎಂದಿಗೂ ವಸೂಲಿಯಾಗದ ಸಾಲ ಎಂದು ಪರಿಗಣಿಸಿ ಎರಡು ಲಕ್ಷ ಕೋಟಿ ರೂಪಾಯಿ ಲೆಕ್ಕವನ್ನು ಅಳಿಸಿ ಹಾಕಿವೆ. ( ಇದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ಟ್ರಿಮ್ಮಿಂಗ್ ಮತ್ತು ಬುಕ್ ಕ್ಲೀನಿಂಗ್ ಎಂದು ಕರೆಯಲಾಗುತ್ತದೆ)

ಮೋದಿಯವರ ಆಡಳಿತದಲ್ಲಿ ಬ್ಯಾಂಕುಗಳ ಕಾರ್ಯ ವೈಖರಿ  ಹೇಗಿದೆಯೆಂದರೆ, ಬ್ಯಾಂಕುಗಳ ಮೇಲಿನ ನಿಗಾ ವಹಿಸುವುದು ಸೇರಿದಂತೆ, ದೇಶದ ಆರ್ಥಿಕ ಚಟುವಟಿಕೆಯನ್ನು ನಿಯಂತ್ರಿಸುವ ಕೇಂದ್ರ ಬ್ಯಾಂಕ್ ಎಂದು ಕರೆಯಲಾಗುವ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ದೇಶದಲ್ಲಿ ರೈತರಿಗೆ ನೀಡಲಾಗಿರುವ ಸಬ್ಸಿಡಿ ವಿವರಗಳ ಅಂಕಿ ಅಂಶಗಳು ತನ್ನ ಬಳಿ ಇಲ್ಲ ಎಂದು ತಿಳಿಸಿದೆ. 2016 ನವಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ನೋಟು ನಿಷೇಧ ಆಜ್ಞೆಯನ್ನು ಜಾರಿಗೆ ತಂದಾಗ ಹಳೆಯ ನೋಟುಗಳ ಬದಲಿಗೆ ಹೊಸ ಐನೂರು ಹಾಗೂ ಎರಡು ಸಾವಿರ ಮೌಲ್ಯದ ಹೊಸ ನೋಟುಗಳನ್ನು ರಿಸರ್ವ್ ಬ್ಯಾಂಕ್ ವಿತರಿಸಿತು.  ಒಂದು ವರ್ಷದ ನಂತರವೂ ಹಳೆಯ ನೋಟುಗಳ ಸಂಗ್ರಹ ಕುರಿತು ಮಾಹಿತಿ ನೀಡಲಾರದೆ, ಇನ್ನೂ ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂಬ ಬೇಜವಾಬ್ದರಿ ಹೇಳಿಕೆಯನ್ನು ನೀಡಿ ದೇಶದೆದುರು ಬೆತ್ತಲಾಗಿತ್ತು. ಕೆಟ್ಟ ಪರಂಪರೆ ಇಂದಿಗೂ ಸಹ ಮುದುವರಿದಿದೆ. ರಿಸರ್ವ್ ಬ್ಯಾಂಕಿನ ನಿಷ್ಕ್ರಿಯತೆಯಿಂದಾಗಿ ಭಾರತದ ಬ್ಯಾಂಕುಗಳು ದಿವಾಳಿಯ ಅಂಚಿನತ್ತ ದೂಡಲ್ಪಟ್ಟಿವೆ.
ಇನ್ನು ಉದ್ಯೋಗ ಸೃಷ್ಟಿಯ ಕುರಿತು ಪ್ರಧಾನಿ ಆಡಿದ ಮಾತುಗಳು ಅವರಿಗೆ ತಿರುಗು ಬಾಣವಾದವು. ದೇಶದ ಬಡವರು ಮತ್ತು ಬಡ ನಿರುದ್ಯೋಗಿಗಳು ಬದುಕುವ ಕಲೆಯನ್ನು ಪ್ರಧಾನಿಯಿಂದ ಕಲಿಯಬೇಕಿಲ್ಲ. ಪಕೋಡ ಮಾರಾಟ ಮಾಡಿ ದಿನಕ್ಕೆ ನೂರು ಅಥವಾ ಇನ್ನೂರು ಸಂಪಾದಿಸಬಹುದು ಎಂಬ ಪ್ರಧಾನಿಯ ಮಾತು ಅವಿವೇಕತನದ ಪರಮಾವಧಿ ಎಂದು ಬಣ್ಣಿಸಬಹುದು. ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣದಲ್ಲಿ ಶೇಕಡ 65% ರಷ್ಟು ಮಂದಿ 35 ವರ್ಷದ ಒಳಗಿನ ಯುವಕರಾಗಿದ್ದಾರೆ. ಇವರಲ್ಲಿ ಪ್ರತಿ ವರ್ಷ ಮೂರು ಕೋಟಿ ಮಂದಿ ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ, ಭಾರತದ ಮಾಹಿತಿ ತಂತ್ರಜ್ಞಾನ, ಸೇವಾ ವಲಯ, ಕಟ್ಟಡ ನಿರ್ಮಾಣ ಇತ್ಯಾದಿ ವಲಯಗಳಿಂದ ಸೃಷ್ಟಿಯಾಗುತ್ತಿರುವ ಉದ್ಯೋಗದ ಪ್ರಮಾಣ ಕೇವಲ 60 ಲಕ್ಷ ಮಾತ್ರ.  ಉಳಿದವರು ಅತಂತ್ರರಾಗಿದ್ದಾರೆ. ಜೊತೆಗೆ ಹಿಂಸಾಚಾರ ಮತ್ತು ಅಪರಾಧದಂತಹ ಕ್ರಿಯೆಗಳಲ್ಲಿ ತಮಗರಿವಿಲ್ಲದಂತೆ ತೊಡಗಿಕೊಂಡಿದ್ದಾರೆ. ಭಾರತದಲ್ಲಿ ತ್ರಿಪುರಾದಲ್ಲಿನ ಶೇಕಡ 30.3% ರಷ್ಟು, ಹರ್ಯಾಣದಲ್ಲಿ ಶೇಕಡ 15.3 ರಷ್ಟು ಇದ್ದರೆ, ಕೇರಳದಲ್ಲಿ 10.7, ಗುಜರಾತಿನಲ್ಲಿ 9.7 ಅಸ್ಸಾಂ ರಾಜ್ಯದಲ್ಲಿ 9.8  ರಷ್ಟು ನಿರುದ್ಯೋಗಿಗಳಿದ್ದಾರೆ. ಈಶಾನ್ಯ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಬಿ.ಜೆ.ಪಿ. ಸರ್ಕಾರಗಳನ್ನು ಸ್ಥಾಪಿಸಿ ಬಂದ ಮಾನ್ಯ ಪ್ರಧಾನಿಯವರ ಬಳಿ ನಿರುದ್ಯೋಗ ನಿವಾರಣೆಗೆ ಯಾವುದೇ ಮಂತ್ರದಂಡವಿಲ್ಲದೆ  ಪಕೋಡ ಮಂತ್ರಕ್ಕೆ ಮೊರೆ ಹೋಗಿದ್ದಾರೆ.
ಯಾವುದೇ ಅಂಜಿಕೆ ಇಲ್ಲದೆ, ಇತಿಹಾಸದ ಪ್ರಜ್ಞೆ ಅಥವಾ ಕಣ್ಣಮುಂದಿನ ವಾಸ್ತವ ಅಂಕಿ ಅಂಶಗಳನ್ನು ಪರಿಗಣಿಸದೆ, ಮಾತನಾಡುವ ಪ್ರಧಾನಿಯವರು ಕರ್ನಾಟP ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬೆಂಗಳೂರು ನಗರ ಕಸದ ನಗರವಾಗಿದೆ ಎಂದು ಟೀಕಿಸಿದರು. ಆದರೆ. ದೇಶದ ಅತ್ಯಂತ ಕೊಳಚೆ ಹಾಗೂ ಕಸದ ನಗರಗಳೆಂದು ಪರಿಗಣಿಸಿರುವ ನಲವತ್ತು ನಗರಗಳಲ್ಲಿ ಅವರು ಪ್ರತಿನಿಧಿಸುವ ವಾರಣಾಸಿ ನಗರವು ಹದಿನಾಲ್ಕನೆಯ ಸ್ಥಾನ ಪಡೆದಿದೆ. ಇಡೀ ದೇಶದಲ್ಲಿ ವಾಯು ಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ದೆಹಲಿ ನಗರವನ್ನು ಸುಧಾರಿಸಲಾರದ ಪ್ರಧಾನಿಯವರ ಮಾತುಗಳನ್ನು ಯಾರೊಬ್ಬರೂ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಆಡಲಾದ ಭಾರತz ಹಳ್ಳಿಗಳು ಸಂಪೂರ್ಣ ವಿದ್ಯುತ್ಮಯವಾಗಿವೆ  ಎಂಬ ಅವರ ಮಾತುಗಳು ಸಹ ಹಾಸ್ಯಕ್ಕೆ ಗುರಿಯಾದವು. 2015 ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಸಾವಿರದ ದಿನಗಳಲ್ಲಿ ದೇಶದ 18. 452 ಹಳ್ಳಿಗಳನ್ನು ಕತ್ತಲು ಮುಕ್ತ ಹಳ್ಳಿಗಳನ್ನಾಗಿ ಮಾಡುತ್ತೆವೆ ಎಂದು ಘೋಷಿಸಿದ್ದರು. ಆದರೆ, 15, 183 ಹಳ್ಳಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು. ಅಂದರೆ, ಶೇಕಡ 78% ರಷ್ಟು ಸಾಧನೆ ಸಾಧ್ಯವಾಯಿತು. ದೇಶದ ಆರು ಲಕ್ಷ ಹಳ್ಳಿಗಳಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್ ಸಂಪರ್ಕ ಇರುವ ಮನೆಗಳ ಸಂಖ್ಯೆ ಕೇವಲ 1301 ಹಳ್ಳಿಗಳಲ್ಲಿ ಮಾತ್ರ. ಅಂದರೆ, ಶೇಕಡ 0.21 % ಪ್ರಮಾಣ ಮಾತ್ರ. ಇನ್ನೂ ಭಾರತದಲ್ಲಿ ಸಾವಿರಾರು ಹಳ್ಳಿಗಳು, ವಿದ್ಯುತ್, ಸಾರಿಗೆ, ರಸ್ತೆ ಯಂತಹ ಸೌಲಭ್ಯಗಳಿಂದ ವಂಚಿತವಾಗಿವೆ.

ಇಂತಹ ಮೂಲಭೂತ ಸೌಕರ್ಯಗಳ ಜೊತೆಗೆ ಮನುಷ್ಯನ ಮೂಲಬೂತ ಬೇಡಿಕೆಗಳಾದ ಶಿಕ್ಷಣ, ಆರೋಗ್ಯ, ವಸತಿ ಮುಂತಾದ ರಂಗಗಳಲ್ಲಿ ಪ್ರಗತಿಗಿಂತ ಶೂನ್ಯವೇ ಎದ್ದು ಕಾಣುತ್ತಿದೆ. ಪ್ರಧಾನಿ ಹುದ್ದೆಗೇರಿದ ವ್ಯಕ್ತಿ, ಪಕ್ಷ ಅಥವಾ   ಪ್ರಾದೇಶಿಕ ತಾರತಮ್ಯ ಮಾಡದೆ ಎಲ್ಲರನ್ನೂ, ಎಲ್ಲವನ್ನೂ ಸಮಾನ ಭಾವದಿಂದ ಕಾಣುತ್ತಾ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಆದರೆ, ಕಾಂಗ್ರೇಸ್ ಮುಕ್ತ ಭಾರತ ತನ್ನ ಏಕೈಕ ಉದ್ದೇಶವೆಂಬಂತೆ ಹೊರಟಿರುವ ಪ್ರಧಾನಿಗೆ ಉಳಿದೆಲ್ಲವೂ ಈಗ ನಗಣ್ಯವಾಗಿದೆ. ಮುಂದೆ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಇದಕ್ಕೆ ತಕ್ಕ ಪ್ರತಿಫಲವನ್ನು ಉಣ್ಣುವ ದಿನಗಳು ದೂರವಿಲ್ಲ.

( ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

No comments:

Post a Comment