ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ದೇಶಾದ್ಯಂತ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷದ ಮಮತಾ ಬ್ಯಾನರ್ಜಿಯವರ ಹದಿನೈದು ವರ್ಷಗಳ ಆಡಳಿತಕ್ಕೆ ತೆರೆಬಿದ್ದಿದೆ. ಅಕ್ಕಿನ ನೆಲವು ತ್ರಿವರ್ಣ ಭಾವುಟದಿಂದ ಹಿಡಿದು, ಕೆಂಪು ಭಾವುಟಕ್ಕೆ ಒಲಿದು, ಇದೀಗ ಕೇಸರಿ ಭಾವುಟವನ್ನು ಅಪ್ಪಿಕೊಂಡಿದೆ. ಇಡೀ ದೇಶದಲ್ಲಿ ತನ್ನದೇ ಆದ ಭಾಷೆ, ಸಾಹಿತ್ಯ ಹಾಗೂ ಸಂಗೀತ ಸಂಸ್ಕೃತಿಯ ವಿಶಿಷ್ಠತೆಯನ್ನು ಹೊಂದಿದ್ದ ಬಂಗಾಳದ ಜನತೆ ಸಂಘಪರಿವಾರದ ಕೋಮುವಾದವನ್ನು ಅಪ್ಪಿಕೊಂಡಿರುವುದ ಚಕಿತಗೊಳಿಸಿದೆ. ಏಕೆಂದರೆ, ಭಾರತದಲ್ಲಿ ಪ್ರಥಮ ಬಾರಿಗೆ ಪಾಶ್ಚಿಮಾತ್ಯ ಚಿಂತನೆಗಳಿಗೆ ಮತ್ತು ಇಂಗ್ಲೀಷ್ ಭಾಷೆಗೆ ಬ್ರಿಟಿಷರ ಮೂಲಕ ತೆರೆದುಕೊಂಡ ಅಲ್ಲಿನ ಜನತೆ ಇತಿಹಾಸದ ಗ್ರಹಿಕೆಯಲ್ಲಿ ನಿಪುಣರು. ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಪಶ್ಚಿಮ ಬಂಗಾಳಕ್ಕೆ ಧರ್ಮಾಧಾರಿತ ಮತ್ತು ಜಾತಿಯಾಧಾರಿತ ರಾಜಕೀಯ ಪಕ್ಷದ ಅಗತ್ಯವಿತ್ತೆ? ಈ ಪ್ರಶ್ನೆ ಪ್ರಜ್ಞಾವಂತ ನಾಗರೀಕರನ್ನು ಕಾಡತೊಡಗಿದೆ.
ದೇಶದ ಪ್ರತಿಷ್ಠಿತ ನಗರ ಮತ್ತು ಸಾಂಸ್ಕೃತಿಕ ಕಣಜ ಎಂದು ಹೆಸರಾಗಿರುವ ಕೊಲ್ಕತ್ತಾ ನಗರಕ್ಕೆ ಹಲವು ಶತಮಾನಗಳ ಭವ್ಯ ಇತಿಹಾಸವಿದೆ. ಕೋಲ್ಕತ್ತಾದ ಕಥೆ ನಿಜವಾದ ಅರ್ಥದಲ್ಲಿ ಭಾರತದ ಬಹು ಸಂಸ್ಕೃತಿಯ ಇತಿಹಾಸವಾಗಿದೆ. ಕೈಗಾರಿಕಾ ಕ್ರಾಂತಿಯೊಂದಿಗೆ ಅಧಿಕಾರ ಬದಲಾವಣೆಗೆ ಕಾರಣವಾದ ಒಗ್ಗಟ್ಟಿನ ಕ್ರಾಂತಿಕಾರಿ ಕಾರ್ಮಿಕರು ಮತ್ತು ರೈತರ ಕಥೆ ಮತ್ತು ಅವರ ಘೋಷಣೆಗಳು ಹೀಗೆ ಹೆಸರಿಸುತ್ತಾ ಹೋಗಬಹುದು. ಹಾಗಾಗಿ ಕೋಲ್ಕತ್ತಾ ನಗರದ ಇತಿಹಾಸವು ಸಂಘರ್ಷದ ಹೋರಾಟದಿಂದ ತುಂಬಿದ ರಾಜಕೀಯ ಜಲಸಂಧಿಯ ಕಥೆನವಾಗಿದೆ.
ತೆರೆದ ಆಕಾಶದ ಕೆಳಗಿನ ಈ ಬೃಹತ್ ನಗರದಲ್ಲಿ ತರಾವರಿ ಜನ ವಾಸಿಸುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಕಾರಣದಿಂದಾಗಿ ಭಾರತದ ಪ್ರಥಮ ರಾಷ್ಟ್ರಪತಿಯಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸಿಸುತ್ತಿದ್ದ ಡಾ. ರಾಜೇಂದ್ರ ಪ್ರಸಾದ್, ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದ ಸಂದರ್ಭದಲ್ಲಿ ಅವರು ನೋಡಿದ್ದ ಕೋಲ್ಕತ್ತಾದ ಬಡವರ ಬೀದಿಗಳನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಏಕೆಂದರೆ, ಅಲ್ಲಿನ ವಿಶ್ವವಿದ್ಯಾಲಯಗಳಿಂದ
ಹೆಚ್ಚಿನ
ಸಂಖ್ಯೆಯ
ಬಂಡಾಯ
ಮನೋಭಾವದ ವಿದ್ಯಾರ್ಥಿಗಳು
ಹೊರಹೊಮ್ಮಿದ್ದರು.
ಈ ನಗರವು ಜಾತ್ಯಾತೀಯ ಮನೋಭಾವದ ವ್ಯಕ್ತಿಗಳನ್ನು ಹೊಂದಿರುವ ಹಾಗೆ ಮತಾಂಧರನ್ನು ಒಳಗೊಂಡಿದೆ. 1866 ರಿಂದ 1869 ರವರೆಗೆ ಭಾರತದ ಬ್ರಿಟಿಷ್ ಸೇನಾಪಡೆಯಲ್ಲಿ ಯುವ ಸೇನಾಧಿಕಾರಿಯಾಗಿದ್ದ ಇಂಗ್ಲೆಂಡ್ ನ ಮಾಜಿಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಕೋಲ್ಕತ್ತಾ ನಗರದ ಸಂಜೆಯು ಲಂಡನ್ನಂತೆ ಭಾಸವಾಗುತ್ತದೆ ಆದರೆ, ಇಲ್ಲಿನ ಬಡವರನ್ನು ನೋಡಿದಾಗ, ನೆಲದ ಮೇಲಿನ ನರಕವೆಂಬಂತೆ ಕಾಣುತ್ತದೆ ಎಂದು ತನ್ನ ತಾಯಿಗೆ ಪತ್ರ ಬರೆದಿದ್ದರು, ಭಾರತದ ಗವರ್ನರ್ ಜನರಲ್ ಆಗಿದ್ದ ರಾಬರ್ಟ್ ಕ್ಲೈವ್ ಕೋಲ್ಕತ್ತಾ ನಗರವು ವಿಶ್ವದಲ್ಲಿ ಅತ್ಯಂತ ಕೆಟ್ಟ ವಸಾಹತು ಎಂದು ಹೇಳಿದ್ದನು. ಪ್ರತಿಯೊಬ್ಬರೂ ಕೋಲ್ಕತ್ತಾವನ್ನು ನೋಡುವಾಗ ತಮ್ಮದೇ ಆದ ಗ್ರಹಿಕೆ ಮತ್ತು ದೃಷ್ಟಿಕೋನವನ್ನು ಹೊಂದಿದ್ದರು. ಮಿರ್ಜಾ ಗಾಲಿಬ್ ಈ ನಗರವನ್ನು ಪ್ರೀತಿಸುತ್ತಿದ್ದನು.
ಕೊಲ್ಕತ್ತಾ ನಗರದ ನಿಜವಾದ ಚಿತ್ರಣ ಸಿಗುವುದು
1985 ರಲ್ಲಿ ಪ್ರಾನ್ಸ್ ಮೂಲದ ಲೇಖಕ ಡಾಮಿನಿಕ್ಯೂ ಲ್ಯಾಫಿಯರ್ ಬರೆದ ಸಿಟಿ ಆಫ್ ಜಾಯ್ ಎಂಬ ನೈಜಘಟನೆಗಳನ್ನು ಆಧರಿಸಿದ ಕಾದಂಬರಿಯಲ್ಲಿ ಮಾತ್ರ. ಅಲ್ಲಿನ ಬಡತನ, ಬಡವರ ಬದುಕು ಹಾಗೂ ಅವರು ಬದುಕಿದ್ದಾಗಲೇ ತಮ್ಮ ದೇಹದ ಅಸ್ಥಿಪಂಜರವನ್ನು ಮಾರಾಟ ಮಾಡಲು ಒಪ್ಪಿ, ಹತ್ತಿರದಿಂದ ಹದಿನೈದು ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಡೆಯುತ್ತಿದ್ದ ರೀತಿ ಎಲ್ಲವನ್ನೂ ದಾಖಲಿಸಿದ್ದಾರೆ. ಮಕ್ಕಳ ಹಸಿವು ನೀಗಿಸುವ ಕಾರಣದಿಂದಾಗ,
ಬಡತಾಯಂದಿರು ಅನಿವಾರ್ಯವಾಗಿ ಮೈ ಮಾರಿಕೊಳ್ಳುತ್ತಿದ್ದ ಕರುಣಾಜನಕ ಬದುಕನ್ನು ಹೃದಯಕ್ಕೆ ತಾಗುವಂತೆ ಲೇಖಕರು ಚಿತ್ರಿಸಿದ್ದಾರೆ. ಈ ಕಾದಂಬರಿಯು ಜಗತ್ತಿನಾದ್ಯಂತ ಅತಿ ಹೆಚ್ಚು ಮಾರಾಟವಾದ ಕೃತಿ ಎಂಬ ಪ್ರಸಿದ್ಧಿ ಪಡೆಯಿತು. ಈ ಕಾದಂಬರಿಯಿಂದ ಬಂದ ಸಂಪೂರ್ಣ ಹಣವನ್ನು ಡಾಮಿನಿಕ್ಯೂ ಲ್ಯಾಪಿಯರ್ ಅಲ್ಲಿನ ಬಡವರಿಗೆ ವಿನಿಯೋಗಿಸಿದರು. ಕೊಲ್ಕತ್ತಾ ನಗರದ ಕೊಳಗೇರಿಗಳಲ್ಲಿ ಬಡ ಜನತೆಗೆ ವಸತಿ ವ್ಯವಸ್ಥೆ, ಬೀದಿ ಕೊಳಾಯಿ ಮೂಲಕ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಟ್ಟ ಅವರನ್ನು ಕೊಲ್ಕತ್ತಾ ನಗರದ ಬಡಜನತೆ ದೇವರಂತೆ ಪೂಜಿಸಿದರು.
ಇಂತಹ ಮಹಾನ್ ಲೇಖಕನ ಜೊತೆಗೆ ಕೊಲ್ಕತ್ತಾ ನಗರದ ಜನತೆಯ ಪಾಲಿಗೆ ಹೆತ್ತ ತಾಯಿಯಂತೆ ಜೀವಿಸಿದ ಮದರ್ ಥೆರೆಸಾ ಅವರ ಬದುಕು ಮತ್ತು ನಿಸ್ವಾರ್ಥ ಸೇವೆ ಕೂಡಾ ಅಕ್ಷರಕ್ಕೆ ನಿಲುಕಲಾರದ ಕಥನವಾಗಿದೆ.
ಕುಷ್ಠ ರೋಗಿಗಳು,
ಬಡ ಅನಾಥ ಮಕ್ಕಳು ಇಂತಹವರ ಪಾಲಿಗೆ ತಾಯಿ ಮಾತ್ರವಲ್ಲದೆ. ಅಪ್ಪಟ ಪ್ರೀತಿಯ ದೇವತೆಯಂತೆ ಬದುಕಿದ್ದರು. ಇಂದಿಗೂ ಸಹ ಕೊಲ್ಕತ್ತ ನಗರದ ಬೀದಿಗಳಲ್ಲಿ ನಾವು ಓಡಾಡುತ್ತಿದ್ದರೆ, ಅಲ್ಲಿನ ಐತಿಹಾಸಿಕ ಕಟ್ಟಡಗಳು ತಮ್ಮ ಒಡಲಲ್ಲಿ ಹುದುಗಿಸಿಟ್ಟುಕೊಂಡಿರುವ ವರ್ಣರಂಜಿತ ಕಥೆಗಳನ್ನು ಹೇಳಬಲ್ಲವು. ಆದರೆ, ನೋಡುವ ಕಣ್ಣುಗಳು, ಗ್ರಹಿಸುವ ಹೃದಯಗಳು ನಮಗೆ ಇರಬೇಕಾಗುತ್ತದೆ. ಇಂತಹ ಭವ್ಯ ಇತಿಹಾಸದ ಕುರುಹುಗಳಿರುವ ಈ ನಗರವು ಬಂಗಾಳದ ರಾಜಧಾನಿ ಮತ್ತು ಹೃದಯವಾಗಿದ್ದು, 1947 ರಿಂದ ಆ ರಾಜ್ಯದ ಅತಿ ಹೆಚ್ಚು ಸಂಖ್ಯೆಯ ಹಿಂಸಾಚಾರಕ್ಕೆ ಮತ್ತು ರಕ್ತಪಾತಕ್ಕೆ ಸಾಕ್ಷಿಯಾಗಿದೆ.
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸವು ಸುದೀರ್ಘವಾಗಿ ಹಿಂಸಾಚಾರ ಮತ್ತು ಸಂಘರ್ಷಗಳೊಂದಿಗೆ ಬೆಸೆದುಕೊಂಡಿದೆ. ಸ್ವಾತಂತ್ರ್ಯಾನಂತರದ ಕಾಲದಿಂದ ಹಿಡಿದು ಇಂದಿನವರೆಗೂ, ಈ ರಾಜ್ಯವು ವಿವಿಧ ರಾಜಕೀಯ ಪಕ್ಷಗಳ ನಡುವಿನ ತೀವ್ರ ಪೈಪೋಟಿ, ಚುನಾವಣಾ ಹಿಂಸಾಚಾರ ಮತ್ತು ನಕ್ಸಲೀಯ ಚಳುವಳಿಗಳಿಗೆ ಸಾಕ್ಷಿಯಾಗಿದೆ. 1967 ರ ಮೇ 25 ರಂದು ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ ಬಾರಿ ಗ್ರಾಮದಲ್ಲಿ ಪೊಲೀಸರು ಮತ್ತು ರೈತ ಆದಿವಾಸಿಗಳ ನಡುವಿನ ಸಂಘರ್ಷವು ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ಮತ್ತು ಆದಿವಾಸಿಗಳ ಸಾವಿನೊಂದಿಗೆ ಭಾರತದಲ್ಲಿ ನಕ್ಸಲ್ ಚಳುವಳಿಯ ಹುಟ್ಟಿಗೆ ಕಾರಣವಾಯಿತು. ಎಡಪಂಥೀಯ ಚಿಂತನೆಗಳಿಂದ ಬೆಳೆದ ಅಲ್ಲಿನ ಯುವ ಜನತೆ ವ್ಯವಸ್ಥೆಯೊಂದಿಗೆ ಮತ್ತು ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದರು. ಇದರಿಂದಾಗಿ ಕೊಲ್ಕತ್ತಾ ನಗರದಲ್ಲಿ 1970 ರ ದಶಕದಲ್ಲಿ ವಿದ್ಯಾರ್ಥಿ ಮತ್ತು ಯುವಜನತೆಯ ಹಿಂಸಾಚಾರ ಕೂಡಾ ತೀವ್ರವಾಗಿತ್ತು
ಕಾಮ್ರೇಡ್ ಜ್ಯೋತಿ ಬಸು ಅವರ ನೇತೃತ್ವದಲ್ಲಿ ಮುವತ್ತನಾಲ್ಕು ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಸಿಪಿಐ(ಎಂ) ಪಕ್ಷದ ಆಡಳಿತದಲ್ಲಿ ರಾಜಕೀಯ ಹಿಂಸಾಚಾರವು
ರಚನಾತ್ಮಕ
ವಿದ್ಯಮಾನವಾಗಿ
ಮಾರ್ಪಟ್ಟಿತು.
ಗ್ರಾಮೀಣ
ಭಾಗಗಳಲ್ಲಿ
ಪಕ್ಷದ
ವರ್ಚಸ್ಸು
ಹೆಚ್ಚಿಸಲು
ಕಾರ್ಯಕರ್ತರು ಹಿಂಸಾಚಾರವನ್ನು
ಅಸ್ತ್ರವಾಗಿ
ಬಳಸಿಕೊಂಡರು.
2011 ರಲ್ಲಿ ತ್ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ
ಬಂದ ನಂತರ, ಹಿಂಸಾಚಾರದ ಸ್ವರೂಪ ಬದಲಾಯಿತೇ ಹೊರತು ಕಡಿಮೆಯಾಗಲಿಲ್ಲ. 2011, 2016 ಮತ್ತು
2021 ರ
ವಿಧಾನಸಭೆ
ಚುನಾವಣೆಗಳ
ಸಮಯದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. 2021 ರ ಚುನಾವಣೆಯ ನಂತರ ನಡೆದ ಸಂಘರ್ಷದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆದು, ಅನೇಕರು ಪ್ರಾಣ ಕಳೆದುಕೊಂಡರು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಪಶ್ಚಿಮ ಬಂಗಾಳದ ಇತಿಹಾಸದಲ್ಲಿ 2023 ರಲ್ಲಿ ನಡೆದ ಪಂಚಾಯತ್ ಚುನಾವಣೆಯು ಅತ್ಯಂತ ಹಿಂಸಾತ್ಮಕ
ಚುನಾವಣೆಗಳಲ್ಲಿ
ಒಂದಾಗಿದೆ,
ನಾಮಪತ್ರ
ಸಲ್ಲಿಕೆಯಿಂದ
ಹಿಡಿದು
ಫಲಿತಾಂಶದವರೆಗೂ
ನಿರಂತರವಾಗಿ ಹತ್ಯೆಗಳು
ಮತ್ತು
ಅಕ್ರಮಗಳು
ನಡೆದಿದ್ದವು. 2025ರ ಏಪ್ರಿಲ್ ತಿಂಗಳಲ್ಲಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕೋಮು ಸಂಘರ್ಷ ಮತ್ತು ಹಿಂಸಾಚಾರ ನಡೆದು, ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿತ್ತು. ಇದು
ಕೇವಲ ಚುನಾವಣೆಗಳಿಗೆ ಸೀಮಿತವಾಗದೆ, ದೈನಂದಿನ ರಾಜಕೀಯದ ಭಾಗವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಆಡಳಿತ ಪಕ್ಷಗಳು ಹಿಂಸಾಚಾರವನ್ನು ಬಳಸಿಕೊಳ್ಳುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಇಂತಹ ರಾಜಕೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿರುವ ಅಲ್ಲಿನ ರಕ್ತ ಸಿಕ್ತ ಅಧ್ಯಾಯಗಳು ಪಶ್ಚಿಮ ಬಂಗಾಳಕ್ಕೆ ಮಸಿ ನಳಿದಿದೆ.
ಅಲ್ಲಿನ ಸಮಕಾಲೀನ ರಾಜಕೀಯ ಕುರಿತು ಇಂದಿನ ಯುವ ಪೀಳಿಗೆಗೆ ಅರಿವಿದೆ. ಅದು ಕಾಂಗ್ರೇಸ್ ಆಳ್ವಿಕೆಯಾಗಿರಬಹುದು ಅಥವಾ ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಚಳುವಳಿ ಹೆಚ್ಚುತ್ತಿದ್ದ 70 ರ ದಶಕದ ಆರಂಭದ ಕಾಲವಾಗಿರಬಹುದು. ನಕ್ಸಲ್ ಬಾರಿಯ ಬೆಳವಣಿಗೆಯ ನಂತರ ರಾಜ್ಯದಲ್ಲಿ ನಡೆದ ರಕ್ತಪಾತಕ್ಕೆ
ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ ಶಂಕರ್ ರೇ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. 1977 ರಲ್ಲಿ
ಪಶ್ಚಿಮ ಬಂಗಾಳ ರಾಜ್ಯವನ್ನು
ಎಡಪಂಥೀಯರು ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿದಾಗ,
ಸಾಮಾನ್ಯ
ಸ್ಥಿತಿಯನ್ನು
ನಿರೀಕ್ಷಿಸಲಾಗಿತ್ತು.
ಆದರೆ, ಹಿಂಸಾಚಾರ ನಿಗ್ರಹ ಕುರಿತಂತೆ ಇದ್ದ ನಿರೀಕ್ಷೆ ಸುಳ್ಳಾಯಿತು.
1997 ರಲ್ಲಿ ಜ್ಯೋತಿ
ಬಸು ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಸದನದಲ್ಲಿ ಒಂದು ದಾಖಲೆಯನ್ನು ಮಂಡಿಸಿದರು,
"1977-1996 ರ
ನಡುವಿನ
ಅವಧಿಯಲ್ಲಿ,
ಪಶ್ಚಿಮ
ಬಂಗಾಳದಲ್ಲಿ
ರಾಜಕೀಯ
ಹಿಂಸಾಚಾರದಿಂದಾಗಿ
ಒಟ್ಟು ಇಪ್ಪತ್ತೆಂಟು
ಸಾವಿರ
ಜನರು
ಪ್ರಾಣ
ಕಳೆದುಕೊಂಡಿದ್ದಾರೆ"
ಎಂದು ಹೇಳಿದ್ದರು. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರವು ರಾಜಕೀಯ ರಂಗದ ಕೇಂದ್ರಬಿಂದುವಾಗಿದೆ. ಇದು ಇಂದಿಗೂ ನಮ್ಮ ನಡುವಿನ ಜ್ವಲಂತ ಪ್ರಶ್ನೆಯಾಗಿದೆ.
ಪಶ್ಚಿಮ ಬಂಗಳಾಳದ ಮುಖ್ಯ ಮಂತ್ರಿಗಳಾಗಿದ್ದ ಸಿದ್ಧಾರ್ಥ ಶಂಕರ್ ರೇ ಅವರಿಂದ ಹಿಡಿದು ಜ್ಯೋತಿ ಬಸುವರೆಗೆ, ನಂತರದ ವರ್ಷಗಳಲ್ಲಿ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಮಮತಾ ಬ್ಯಾನರ್ಜಿ ಆಡಳಿತದ ಅವಧಿಯಲ್ಲಿ ಏನೂ
ಬದಲಾಗಲಿಲ್ಲ.
ಇದೀಗ ಮುಕುಲ್ ರಾಯ್, ಸುವೆಂದು ಅಧಿಕಾರಿ, ದೀಪಾಲಿ ಬಿಸ್ವಾಸ್ ಸೇರಿದಂತೆ ನಲವತ್ತು ಮಂದಿ
ಕಾರ್ಯಕರ್ತರು
ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುವುದರ ಮೂಲಕ ಪಶ್ಚಿಮ ಬಂಗಾಳದಲ್ಲಿ ನೂತನ ರೀತಿಯ ಹಿಂಸಾಚಾರಕ್ಕೆ ರತ್ನಗಂಬಳಿ ಹಾಸಿದ್ದಾರೆ. ರಾಜ್ಯದಲ್ಲಿ ಸೈದ್ಧಾಂತಿಕ ಬದಲಾವಣೆಗಳಾಗದೆ, ಕೇವಲ
ಘೋಷಣೆಗಳು ಮಾತ್ರ ಬದಲಾದವು, ನಿನ್ನೆಯವರೆಗೂ ಜಪಿಸಲಾಗುತ್ತಿದ್ದ
ಕ್ರಾಂತಿಕಾರಿ ಘೋಷಣೆಗಳು ನಂತರದ ದಿನಗಳಲ್ಲಿ 'ಮಾ ಮತಿ
ಮಾನುಷ್ (ತಾಯಿ, ಮಾತೃಭೂಮಿ ಮತ್ತು ಜನರು)'
ಎಂದು
ಕರೆಯಲ್ಪಟ್ಟವು. ಇದೀಗ ಅದನ್ನು ಜೈ
ಶ್ರೀ
ರಾಮ್ ಎಂದು ಬದಲಾಯಿಸಲಾಗಿದೆ.
ಮಮತಾ ಬ್ಯಾನರ್ಜಿಯವರ ಆಡಳಿತವು ಕೂಡಾ ಹಿಂಸಾಚಾರದಿಂದ ಮುಕ್ತವಾಗಿರಲಿಲ್ಲ.
ಅವರ
ಕೈಗಳ
ಮೇಲೆ ಅಳಿಸಲಾಗದ ರಕ್ತದ ಕಲೆಗಳಿದ್ದವು.
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ರಾಜಕೀಯ ಕಾಡ್ಗಿಚ್ಚಿನಲ್ಲಿ
ತೊಡಗಿಸಿಕೊಂಡು ಚುನಾವಣೆಯಲ್ಲಿ ಕೇಸರಿ ಬಾವುಟವನ್ನು ಹಾರಿಸಿದೆ.
ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳದ ಚುನಾವಣೆ ಏಕೆ
ಮುಖ್ಯವಾಗಿತ್ತು? ಎಂದರೆ,
ಅಲ್ಲಿನ
ನೆಲವು ಕೋಮುವಾದವನ್ನು ಇತಿಹಾಸದುದ್ದಕ್ಕೂ ತನ್ನ ಅಂಗಳದ ಹೊರಗೆ ಇಟ್ಟುಕೊಂಡಿದ್ದ ಏಕೈಕ ರಾಜ್ಯವಾಗಿತ್ತು. ಮಮತಾಬ್ಯಾನರ್ಜಿಯವರ ಟಿಎಂಸಿ ಪಕ್ಷದ ಮೇಲೆ ದಾಳಿಯನ್ನು ನಡೆಸಲು ಬಿಜೆಪಿ ಸಜ್ಜಾಗುತ್ತಿದ್ದಂತೆ, ಅದು ರಾಜಕೀಯ ಹಿಂಸಾಚಾರವನ್ನು ತನ್ನ
ಪ್ರಾಥಮಿಕ ಅಸ್ತ್ರವನ್ನಾಗಿ ಮಾಡಿಕೊಂಡಿತು.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ನಂತರ, ತಮ್ಮ ಭಾಷಣದಲ್ಲಿ ಪಶ್ಚಿಮ ಬಂಗಾಳದ ಹಿಂಸಾಚಾರಕ್ಕೆ ಮುನ್ನುಡಿ ಬರೆದಿದ್ದರು.
"ಪ್ರಜಾಪ್ರಭುತ್ವದ
ಮಾರ್ಗಗಳ ಮೂಲಕ ನಮಗೆ
ಸವಾಲು ಹಾಕಲು ಸಾಧ್ಯವಾಗದವರು ಬಿಜೆಪಿ ಕಾರ್ಯಕರ್ತರನ್ನು ನಿರ್ಮೂಲನೆ ಮಾಡಲು ಹಿಂಸಾತ್ಮಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಪಾಠ
ಕಲಿಸುತ್ತಾರೆ ಎಂದು ಹೇಳಲು ಬಯಸುತ್ತೇನೆ.’’ ಎಂಬ
ಅವರ ಮಾತು ಭಾಷಣದಲ್ಲಿ ಹೊರಬಿದ್ದಿತು.
ಪಂಶ್ಚಿಮ ಬಂಗಾಳದಲ್ಲಿ ಹಿಂಸೆ ಏಕೆ
ಇಷ್ಟೊಂದು ಪ್ರಭಲವಾಗಿ ಬೇರೂರಿದೆ ಎಂಬುದಕ್ಕೆ ನಾವು ಇತಿಹಾಸದತ್ತ ತಿರುಗಿ ನೋಡಬೇಕಾಗುತ್ತದೆ. 1993 ರಲ್ಲಿ ಬಂಗಾಳದಲ್ಲಿ ಜ್ಯೋತಿ ಬಸು
ಆಳ್ವಿಕೆ ನಡೆಸುತ್ತಿದ್ದಾಗ,
ಮಮತಾ ಬ್ಯಾನರ್ಜಿ ಅಲ್ಲಿನ ರಾಷ್ಟ್ರೀಯ ಕಾಂಗ್ರೇಸ್ ನಾಯಕಿಯಾಗಿದ್ದರು. ಎಡಪಂಥೀಯ ಸರ್ಕಾರದ ವಿರುದ್ಧ ಅವರು ಚಳುವಳಿಯನ್ನು ಮುನ್ನಡೆಸುತ್ತಿದ್ದಾಗ
ಚಳುವಳಿಗಾರರ ಮೇಲೆ
ಗುಂಡು ಹಾರಿಸಲು
ಸರ್ಕಾರವು ಆದೇಶಿಸಿತು, ಈ ಘಟನೆ ಹದಿಮೂರು ಮಂದಿ ಕಾಂಗ್ರೆಸ್ ರಾಜಕೀಯ ಕಾರ್ಯಕರ್ತರ ಸಾವಿಗೆ ಕಾರಣವಾಯಿತು. ಮಮತಾ
ಬ್ಯಾನರ್ಜಿ ಕಾಂಗ್ರೆಸ್ ನಿಂದ ಬೇರ್ಪಟ್ಟಿದ್ದರೂ ಸಹ, ಇಂದಿನವರೆಗೂ ಆ ದಿನವನ್ನು "ಹುತಾತ್ಮ ದಿನ"
ಎಂದು
ಆಚರಿಸುತ್ತಾರೆ. ವಿಪರ್ಯಾಸವೆಂದರೆ,
ಕಾಂಗ್ರೆಸ್ ಪಕ್ಷವು ಈಗ ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರೊಂದಿಗೆ
ಮೈತ್ರಿ ಮಾಡಿಕೊಂಡಿದೆ.
ಮಮತಾ
ಬ್ಯಾನರ್ಜಿ ಕಾಂಗ್ರೆಸ್ ಮತ್ತು ಸಿ.ಪಿ.ಐ.ಎಂ ಪಕ್ಷಗಳ ಎದುರಾಳಿಯಾಗಿದ್ದಾರೆ.
ಈ
ರಾಜಕೀಯ ಚದುರಂಗದಲ್ಲಿ ಮತದಾರರು ಎಲ್ಲಿ ನಿಲ್ಲಬೇಕು?
ಹೇಗೆ ಆಲೋಚಿಸಬೇಕು? ಅಲ್ಲಿನ ಮತದಾರರು ಏಕಾಏಕಿ ಬಿ.ಜೆ.ಪಿ.ಗೆ ಒಲಿದ ಪರಿಯನ್ನು ಇಲ್ಲಿ ಗುರುತಿಸಬಹುದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರ ಆಳ್ವಿಕೆ ಇದ್ದ ಸಮಯದಲ್ಲಿ ಮಮತಾ ಬ್ಯಾನರ್ಜಿ ಅಲ್ಲಿನ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ನಿಟ್ಟಿನಲ್ಲಿ ಸಿಂಗೂರ್ ಮತ್ತು ನಂದಿ ಗ್ರಾಮದಲ್ಲಿ ನಡೆಸಿದ ಪ್ರತಿಭಟನೆಗಳು ಒಂದು ರೀತಿಯಲ್ಲಿ ಅನಾಗರಿಕ ತಂತ್ರವಾಗಿದ್ದವು. ನಿಷೇಧಿತ ಮಾವೋವಾದಿ ಕಮ್ಯೂನಿಸ್ಟ್ ಸಂ ಘಟನೆಯ ನಾಯಕ ಮತ್ತು ಅಲ್ಲಿನ ಲಾಲ್ ಘಡ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಮುನ್ನಡೆಸುತ್ತಿದ್ದ ಆಂಧ್ರಪ್ರದೇಶದ ಕರೀಂ ನಗರದ ಜಿಲ್ಲೆಯ ಮಲ್ಲೋಜಲ ಕೋಟೇಶ್ವರ ರಾವ್ ಎಂಬ ಮೂಲ ಹೆಸರಿನ ಕಿಶನ್ ಜಿ. ಎಂಬಾತನನ್ನು ಹಿಂಸಾತ್ಮಕ ಪ್ರತಿಭಟನೆಗೆ ಬಳಸಿಕೊಂಡರು. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿತು. ಸಿಂಗೂರ್, ನಂದಿಗ್ರಾಮ್, ಲಾಲ್ ಘಡದಲ್ಲಿ ಹಿಂಸಾಚಾರವು ಭುಗಿಲೆದ್ದಿತು, ಹಲವಾರು ರೈತರು ಮತ್ತು ಕಾರ್ಮಿಕರು ಕೊಲ್ಲಲ್ಪಟ್ಟರು. ಅಂದಿನ ರಾಜ್ಯಪಾಲರಾಗಿದ್ದ ಗೋಪಾಲ್ ಕೃಷ್ಣ ಗಾಂಧಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪ್ರಜಾಪ್ರಭುತ್ವವನ್ನು ಹಿಂಸಾಚಾರ ನುಂಗಿ ಹಾಕಿದೆ ಎಂದು ಹೇಳಿದ್ದರು. ನಂತರ ಲಾಲ್ ಘಡದಲ್ಲಿ ಹಿಂಸಾಚಾರ ನಡೆದು ಹತ್ತು ಮಂದಿ ಪ್ರಾಣ ಕಳೆದುಕೊಂಡರು ಆ ಸಂದರ್ಭದಲ್ಲಿ ರಾಜ್ಯಪಾಲರಾಗಿದ್ದ ಎಂ.ಕೆ. ನಾರಾಯಣ್ ಕೂಡಾ ಪ್ರಜಾಪ್ರಭುತ್ವ ಹದಗೆಡುತ್ತಿರುವ ಕುರಿತು ಕಳವಳ ವ್ಯಕ್ತ ಪಡಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಈಗ ಏನು ಬದಲಾಗಿದೆ? ಸರ್ಕಾರ ಬದಲಾಯಿತು, ಆಡಳಿತ ಪಕ್ಷಗಳು ಬದಲಾದವು, ಈಗ
ಕೋಮುವಾದದ ಆಧಾರದ ಮೇಲೆ
ಹಿಂಸಾಚಾರದ ರೇಖೆಯನ್ನು ಎಳೆಯಲಾಗಿದೆ, ಘೋಷಣೆಗಳನ್ನು ರೂಪಿಸಲಾಗುತ್ತಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಕೇವಲ ಐದು ದಿನಗಳಲ್ಲಿಅಂದರೆ, ಮೇ 12 ರಂದು ಅಲ್ಲಿನ ಕಾಶಿಪುರ ಕ್ಷೇತ್ರದ ಬಿ.ಜೆ.ಪಿ. ಶಾಸಕ ರಿತೇಶ್ ತಿವಾರಿ ಎಂಬಾತನು, ಮುಖ್ಯಮಂತ್ರಿ ಸುವೆಂದು ಅಧಿಕಾರಿಯ ಸಮ್ಮುಖದಲ್ಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಇನ್ನು ಮುಂದೆ ನನ್ನ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಮತ್ತು ಸರ್ಕಾರದ ವತಿಯಿಂದ ಯಾವುದೇ ರೀತಿಯ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಘೋಷಿಸಿದ್ದಾನೆ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ, ಅಲ್ಲಿನ ಆಡಳಿತ ಪಕ್ಷವು ರಾಜ್ಯಾದ್ಯಂತ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಚುನಾವಣಾ ಟಿಕೆಟ್
ನೀಡಲಿಲ್ಲ. ಹೆಚ್ಚು ಕಡಿಮೆ ಬಿಹಾರದಲ್ಲೂಇದೇ ನೀತಿಯನ್ನು ಅನುಸರಿಸಲಾಯಿತು.
ಭಾರತೀಯ ಸಂವಿಧಾನವು ದೇಶದ ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕುಗಳನ್ನು ನೀಡಿದೆ. ಆದರೆ, ನಾಗರೀಕ ಜನ್ಮ ಸಿದ್ಧ ಹಕ್ಕುಗಳು ಸಂವಿಧಾನ ಕೃತಿಯಲ್ಲಿ ಅಕ್ಷರ ರೂಪದಲ್ಲಿ ಅಡಗಿ ಕುಳಿತಿವೆ. ಇನ್ನು ಮುಂದೆ ಪಶ್ಚಿಮ ಬಂಗಾಳದ ಬಿ.ಜೆ.ಪಿ. ಆಡಳಿತದಲ್ಲಿ ಮುಸ್ಲಿಮರು ತೃತೀಯ ದರ್ಜೆಯ ಗುಲಾಮರಂತೆ ಬದುಕಬೇಕಾಗಿದೆ. ಚುನಾವಣೆಯ ಸಮಯದಲ್ಲಿ ಪ್ರಧಾನಿಯವರ ನಾಲಿಗೆಯ ಮೇಲೆ ಸೋನಾರ್ ಬಾಂಗ್ಲಾ". ಅಂದರೆ, ಸುವರ್ಣ ಬಂಗಾಳ ಎಂಬ ಮಾತುಗಳು ನಿರಂತರವಾಗಿ ಹರಿದಾಡಿದವು. ಆದರೆ, ಈಗ ಅದನ್ನು ಸಮುದಾಯಗಳ ನಡುವೆ ವಿಭಜನೆಯ ರೇಖೆಯನ್ನು ಎಳೆಯಲು ನಾಚಿಕೆಯಿಲ್ಲದೆ ಬಳಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಬದ್ಧ ಹಾಗೂ ಪ್ರಜಾ ಪ್ರಭುತ್ವದ ವ್ಯವಸ್ಥೆಯ ಆಡಳಿತ ಜಾರಿಯಲ್ಲಿದೆಯಾ? ಎಂಬ ಪ್ರಶ್ನೆಯನ್ನು ಈ ದೇಶದ ಪ್ರತಿಯೊಬ್ಬ ನಾಗರೀಕನೂ ತನ್ನ ಆತ್ಮಸಾಕ್ಷಿಗೆ ಕೇಳಿ ಕೊಳ್ಳಬೇಕಾಗಿದೆ.
ಚಿತ್ರ ಸೌಜನ್ಯ= ಕಾರ್ ವಾನ್ ಅಂತರ್ಜಾಲ ಪತ್ರಿಕೆ.
( 2026 ಜೂನ್ ತಿಂಗಳ ಹೊಸತು ಮಾಸ ಪತ್ರಿಕೆಯ ಬಹುಸಂಸ್ಕೃತಿ ಅಂಕಣಕ್ಕೆ
ಬರೆದ ಲೇಖನ) .
ಡಾ.ಎನ್.ಜಗದೀಶ್ ಕೊಪ್ಪ