ಸೋಮವಾರ, ಜುಲೈ 6, 2026

ಲಾಹೋರ್ ಹೀರಾಮಂಡಿಯ ಗತ ವೈಭವದ ಇತಿಹಾಸ

 


ಅವಿಭಜಿತ ಭಾರತದ ಪ್ರಸಿದ್ದ ಸಾಂಸ್ಕೃತಿಕ ನಗರವಾಗಿದ್ದ ಪಾಕಿಸ್ತಾನದ ಲಾಹೋರ್ ನಗರವು ಇಂದಿಗೂ ಅದೇ ಗತವೈಭವವನ್ನು ಉಳಿಸಿಕೊಂಡಿದೆ. ಇಡೀ ಪಾಕಿಸ್ತಾನದಲ್ಲಿ ಸಾಹಿತ್ಯ ಸಂಗೀತ, ನೃತ್ಯಕಲೆಗಳ ತವರೂರು ಎಂಬಂತಿರುವ ಲಾಹೋರ್ ನಗರದಲ್ಲಿನ ಹೀರಾಮಂಡಿ ಎಂಬ ಪ್ರದೇಶವು ಹಲವು ಶತಮಾನಗಳಿಂದ ವಿವಿಧ ಕಾರಣಗಳಿಂದಾಗಿ ಪ್ರಸಿದ್ಧವಾಗಿದೆ. ದಿನದ ಇಪ್ಪತ್ತುನಾಲ್ಕು ಗಂಟೆಯೂ ಚಟುವಟಿಕೆಯಲ್ಲಿರುವ ಈ ಪ್ರದೇಶವು ಸದಾ ತನ್ನ ಬಣ್ಣ ಮತ್ತು ಚಹರೆಯನ್ನು ಬದಲಾಯಿಸುತ್ತದೆ. ಹಗಲಿನ ವೇಳೆಯಲ್ಲಿ ದವಸ ಧಾನ್ಯಗಳು, ತರಕಾರಿ ವ್ಯಾಪಾರ ನಡೆದರೆ, ಸಂಜೆಯಾಗುತ್ತಿದ್ದಂತೆ ಬಗೆ ಬಗೆಯ ಸಿಹಿತಿಂಡಿ ಹಾಗೂ ಆಹಾರ ಪದಾರ್ಥಗಳಿಗೆ ಹೆಸರಾಗಿದೆ. ಸಂಜೆಯ ವೇಳೆಗೆ ಕತ್ತಲಾದಂತೆ ನೃತ್ಯ ಸಂಗೀತದ ಜೊತೆಗೆ ಮಹಿಳೆಯರ ದೇಹ ಮಾರಾಟದ ಮಾರುಕಟ್ಟೆಯಾಗುತ್ತದೆ.
ನೋವಿನ ಸಂಗತಿ ಎಂದರೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಸಾವಿರಾರು ನತದೃಷ್ಟ ಮಹಿಳೆಯರು ಮುಸ್ಲಿಮರಿಂದ ಅತ್ಯಾಚಾರಕ್ಕೆ ಒಳಗದಾಗ, ಸಿಖ್ ಧರ್ಮದ ಕುಟುಂಬದ ಹಿರಿಯರಿಂದ ವiರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಲ್ಪಟ್ಟರು ಮತ್ತು ಸಿಖ್ ಧರ್ಮ ಗುರುಗಳ ಆದೇಶದ ಮೇರೆಗೆ ಸಾಮೂಹಿಕವಾಗಿ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ಸಾವಿಗೆ ಹೆದರಿ ತಪ್ಪಿಸಿಕೊಂಡ ಯುವತಿಯರಿಗೆ ಅಂದಿನ ದಿನಗಳಲ್ಲಿ ಹೀರಾಮಂಡಿಯ ನೃತ್ಯಗಾತಿಯರ ಕೋಥಾಗಳು ಆಸರೆಯಾದವು. ಹೀರಾಮಂಡಿಯು ಒಂದು ಬಗೆಯಲ್ಲಿ ವೇಶ್ಯಾವಾಟಿಕೆಯ ಕೇಂದ್ರವೂ ಹೌದು, ಇನ್ನೊಂದು ಬಗೆಯಲ್ಲಿ ನೊಂದವರ, ಹಾಗೂ ಹಸಿವಿನಿಂದ ಬಳಲಿದ ಹೆಣ್ಣುಮಕ್ಕಳ ಆಶ್ರಯ ತಾಣವೂ ಹೌದು. ಇದರಿಂದಾಗಿ ಹೀರಾಮಂಡಿ ಪ್ರದೇಶವನ್ನು ಅವಿಭಜಿತ ಭಾರತದ ಪುರಾತನ ವೇಶ್ಯಾವಾಟಿಕೆಯ ಕೇಂದ್ರ ಎಂದು ಗುರುತಿಸಲಾಗಿದೆ. ಮುಂಬೈನ ಕಾಮಾಟಿಪುರ, ಕೊಲ್ಕತ್ತ ನಗರದ ಸೋನಾಗಚಿ, ಪುಣೆಯ ಬುಧುವಾರ್ ಪೇಟ್, ಬಿಹಾರದ ಮುಜಾಪರ್ ನಗರದ ಚತುರ್ಬುಜ್ ಸ್ಥಾನ್ ಹಾಗೂ ದೆಹಲಿಯಲ್ಲಿ ಬ್ರಿಟಿಷ್ ಗವರ್ನರ್ ಗ್ಯಾಸ್ಟಿನ್ ಬಸ್ಟೆಲ್ ಎಂಬುವನು ತನಗಾಗಿ ಮತ್ತು ಸೈನಿಕರಿಗಾಗಿ ಅಜ್ಮೀರ್ ಗೇಟ್ ಮತ್ತು ಲಾಹೋರ್ ಗೇಟ್ ಗಳ ನಡುವೆ ಸ್ಥಾಪಿಸಿದ ಕೋಥಾಗಳು ಈಗ ಜಿ.ಬಿ.ರೋಡ್ ವೇಶ್ಯಾ ಕೇಂದ್ರವೆಂದು ಹೆಸರಾಗಿದೆ.
ವಿಶ್ವ ಏಡ್ಸ್ ನಿಯಂತ್ರಣ ಮಂಡಲಿಯು 2016 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಆರು ಲಕ್ಷದ ಐವತ್ತೇಳು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಕಾಯಕ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು ಪ್ರಕಟಿಸಿತ್ತು. ವಾಸ್ತವವಾಗಿ ಮುವತ್ತು ಲಕ್ಷ ಮಹಿಳೆಯರು ಈ ವೃತ್ತಿಯಲ್ಲಿದ್ದು, ಹನ್ನೆರಡು ಲಕ್ಷ ಅಪ್ರಾಪ್ತ ಬಾಲಕಿಯರು ಇದ್ದಾರೆ. ಇದು ಪರೋಕ್ಷವಾಗಿ ಈ ದೇಶದ ಬಡತನ, ಮಕ್ಕಳ ಕಳ್ಳಸಾಗಾಣಿಕೆ, ಕಾನೂನು ನಿಯಂತ್ರಣದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ವೇಶ್ಯಾವೃತ್ತಿಯು ಪ್ರತಿಯೊಂದು ದೇಶದ ಸಾಮಾಜಿಕ ಕಳಂಕ ಎಂದು ನಾವು ಗುರುತಿಸಿದರೂ ಸಹ, ಅದು ಅನೇಕ ಅನಾಥ ಹೆಣ್ಣುಮಕ್ಕಳ ಪಾಲಿಗೆ ತವರು ಮನೆಯಾಗಿರುವುದನ್ನು ಕಡೆಗಣಿಸುವಂತಿಲ್ಲ. ಈ ಕಾರಣದಿಂದ ಲಾಹೋರಿನ ಹೀರಾಮಂಡಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಮತ್ತು ಇತಿಹಾಸ ನಮ್ಮನ್ನು ಹದಿನಾರನೇ ಶತಮಾನಕ್ಕೆ ಕರೆದೊಯ್ಯುತ್ತದೆ.
ಇಂದಿನ ಪಾಕಿಸ್ತಾನದ ಲಾಹೋರ್ ಹಾಗೂ ಮಲ್ತಾನ್ ನಗರಗಳೆರೆಡೂ ಐತಿಹಾಸಿಕ ನಗರಗಳಾಗಿವೆ. ಪರ್ಷಿಯನ್ ದೊರೆಗಳು, ಸೂಫಿ ಸಂತರು, ವ್ಯಾಪಾರಸ್ಥರು ಇಂದಿನ ಟರ್ಕಿ, ಇರಾನ್ ಮತ್ತು ಇರಾಕ್ ರಾಷ್ಟçಗಳಿಂದ ಭಾರತಕ್ಕೆ ಬರುವಾಗ ಮಲ್ತಾನ್ ನಗರವು ಅವರ ಪಾಲಿಗೆ ವಿಶ್ರಾಂತಿಯ ತಂಗುದಾಣವಾಗಿತ್ತು. ಅದೇ ರೀತಿಯಲ್ಲಿ ಮೊಗಲ್ ಸಾಮ್ರಾಜ್ಯದ ಅಕ್ಬರ್ ನ ಅವಧಿಯಲ್ಲಿ ಲಾಹೋರ್ ನಗರವು ಆತನ ಆಡಳಿತಕ್ಕೆ ಸೇರಿತ್ತು. ರಾವಿ ನದಿಯ ದಂಡೆಯಲ್ಲಿರುವ ಲಾಹೋರ್ ನಗರವನ್ನು ಅಕ್ಬರ್ನ ಪುತ್ರ ಸಲೀಂ ತನ್ನ ಪಟ್ಟಾಭಿಷೇಕದ ನಂತರ ಜಹಾಂಗೀರ್ ಎಂದು ಹೆಸರಿನಿಂದ ಲಾಹೋರ್ ನಗರವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದನು. ಇಂದಿಗೂ ಸಹ, ಜಹಾಂಗೀರ್ ಮತ್ತು ಆತನ ಪತ್ನಿ ನೂರ್ ಜಹಾನ್ ದಂಪತಿಗಳ ಭವ್ಯ ಸಮಾಧಿಯ ಕಟ್ಟಡವು ಲಾಹೋರಿನ ಪ್ರಮುಖ ಆಕರ್ಷಣೆಯಾಗಿದೆ.. ಲಾಹೋರ್ ಕೋಟೆಯ ದಕ್ಷಿಣದ ಒಂದು ಪ್ರದೇಶವನ್ನು ರಾಜಮನೆತನದ ಮತ್ತು ಚಕ್ರವರ್ತಿಯ ಸೇವಕರು ಮತ್ತು ಸೇನೆಪಡೆಯ ವಸತಿಗಾಗಿ ಅಭಿವೃದ್ಧಿಪಡಿಸಲಾಯಿತು. ಈ ಪ್ರದೇಶ ಕೋಟೆಗೆ ಹತ್ತಿರದಲ್ಲಿರುವುದರಿಂದ, 'ಶಾಹಿ ಮೊಹಲ್ಲಾ' ಅಥವಾ 'ಸಾಮ್ರಾಟನ ನೆರೆಹೊರೆ' ಎಂದು ಕರೆಯಲಾಯಿತು.

ಈ ಪ್ರದೇಶವು ರಾಜಮನೆತನದ ಆಸ್ಥಾನದ ವೃತ್ತಿಪರ ಮನರಂಜಕರಾದ ತವೈಫ್ ಹೆಸರಿನ ನೃತ್ಯಗಾತಿಯರಿಗೆ ನೆಲೆಯಾಗಿತ್ತು. ಮೊಘಲ್ ಯುಗದಲ್ಲಿ ಪ್ರವರ್ಧಮಾನಕ್ಕೆ ಬಂದ ತವೈಫ್ ಸಂಸ್ಕೃತಿಯು ಮಧ್ಯಕಾಲೀನ ಭಾರತೀಯ ದೊರೆಗಳ ಆಸ್ಥಾನದಲ್ಲಿ ಮುಜ್ರಾ ಎಂಬ ನೃತ್ಯವನ್ನು ಪ್ರದರ್ಶಿಸುವ ಪ್ರತಿಭಾನ್ವಿತ ಕಲಾವಿದರನ್ನು ಒಳಗೊಂಡಿತ್ತು. ಆ ಕಾಲಘಟ್ಟದ ಬಹುತೇಕ ಕಲಾವಿದರು ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಹೆಚ್ಚಿನ ಕೊಡುಗೆ ನೀಡಿದ ಅತ್ಯಂತ ಯಶಸ್ವಿ ಮನರಂಜನೆಯ ಕಲಾವಿದÀರಾಗಿದ್ದರು. ಆಸ್ಥಾನದಲ್ಲಿ ಹಾಡು ಮತ್ತು ನೃತ್ಯವನ್ನು ವೃತ್ತಿಯಾಗಿಸಿಕೊಂಡಿದ್ದ ತವೈಫ್ ಹೆಸರಿನ ಕಲಾವಿದಎಯರಿಗೆ ಆಸ್ಥಾನದಲ್ಲಿದ್ದ ಅತ್ಯುತ್ತಮ ಉಸ್ತಾದ್ಗಳು ಸಂಗೀತ ಮತ್ತು ನೃತ್ಯದಲ್ಲಿ ತರಬೇತಿ ನೀಡುತ್ತಿದ್ದರು. ಇವರೆಲ್ಲರೂ ಶಾಹಿ ಮೊಹಲ್ಲಾದ ಗಣ್ಯ ವ್ಯಕ್ತಿಗಳಾಗಿ ಸಾಮಾಜಿಕ ಸಂಕೇತವಾಗಿದ್ದರು; ಅನೇಕ ವೃತ್ತಿಪರ ಕಲಾವಿದೆಯರು ಹೆಚ್ಚಾಗಿ ಲೈಂಗಿಕ ಕಾರ್ಯಕರ್ತರಾಗಿದ್ದರೂ ಕೂಡಾ, ಶಾಹಿ ಮೊಹಲ್ಲಾದ ತವೈಫ್ ಕಲಾವಿದೆಯರು ಆ ವೃತ್ತಿಯಲ್ಲಿರಲಿಲ್ಲ. ಗಣ್ಯರು ತಮ್ಮ ಮಕ್ಕಳನ್ನು ಶಿಷ್ಟಾಚಾರ, ಸಂಗೀತ, ಮತ್ತು ನೃತ್ಯ ಕಲಿಯಲು ಅವರ ಬಳಿಗೆ ಕಳುಹಿಸುತ್ತಿದ್ದರು.
ಹದಿನೆಂಟನೇ ಶತಮಾನದ ಮೊದಲಾರ್ಧದ ವೇಳೆಗೆ, ಲಾಹೋರ್ ನಗರವು ಹಲವಾರು ಆಕ್ರಮಣಗಳು ಮತ್ತು ದಾಳಿಗಳಿಗೆ ಸಾಕ್ಷಿಯಾಯಿತು. ಇರಾನಿನ ದೊರೆ ನಾದಿರ್ ಷಾ ಮತ್ತು ಆನಂತರ ಅಹ್ಮದ್ ಷಾ ಅಬ್ದಾಲಿಯ ನೇತೃತ್ವದಲ್ಲಿ ಆಫ್ಘನ್ನರ ದಾಳಿಯು ಪಂಜಾಬ್ನಲ್ಲಿ ಮೊಘಲ್ ಆಳ್ವಿಕೆಯನ್ನು ದುರ್ಬಲಗೊಳಿಸಿದವು. ಇದರಿಂದಾಗಿ ತವೈಫ್ಗಳ ರಾಜಮನೆತನದ ಪ್ರೋತ್ಸಾಹ ಕೊನೆಗೊಂಡಿತು. ಇದೇ ಸಮಯದಲ್ಲಿ ಲಾಹೋರ್ ನಗರದಲ್ಲಿ ವೇಶ್ಯಾಗೃಹಗಳು ಕಾಣಿಸಿಕೊಂಡವು. ಆಕ್ರಮಣಕಾರಿ ಮುಸ್ಲಿಂ ಸೈನ್ಯವು ೧೭೪೮ ಮತ್ತು ೧೭೬೭ ರ ನಡುವೆ ಭಾರತದ ಉಪಖಂಡದಲ್ಲಿ ದಾಳಿ ನಡೆಸಿ ಲೂಟಿ ಮಾಡಿದ ಪಟ್ಟಣಗಳಿಂದ ಅಪಹರಿಸಿದ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ವೇಶ್ಯಾಗೃಹಗಳನ್ನು ಸ್ಥಾಪಿಸಿದವು. ಅವುಗಳು ಇಂದಿಗೂ ಧೋಬಿ ಮಂಡಿ ಮತ್ತು ದಾರಾ ಶಿಕೋ ಮೊಹಲ್ಲಾ ಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ. 1762ರಲ್ಲಿ ಅಫ್ಘಾನ್ ಸೈನ್ಯವು ಸಿಖ್ಖರ ಪವಿತ್ರ ದೇವಾಲಯವಾದ ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಕೆಡವಿದಾಗ ಸಿಖ್ ಸಮುದಾಯವು ಒಗ್ಗೂಡಿ ಮಸ್ಲಿಂ ಪಡೆಗಳನ್ನು ಲಾಹೋರ್ ಒಳಗೊಂಡಂತೆ ಇಡೀ ಪಂಜಾಬ್ ಪ್ರಾಂತ್ಯದಿಂದ ಹೊರದಬ್ಬಿತು,
ರಂಜಿತ್ ಸಿಂಗ್ ಎಂಬ ಯುವಕನು 1799 ರಲ್ಲಿ, ಲಾಹೋರ್ ನಗರವನ್ನು ವಶಪಡಿಸಿಕೊಂಡು. 1801 ರಲ್ಲಿ, ಪಂಜಾಬಿನ ದೊರೆ ಎಂದು ಸ್ವಯಂ ಘೋಷಿಸಿಕೊಂಡನು. ರಂಜಿತ್ ಸಿಂಗ್ ಮೊಘಲರ ಹಲವಾರು ರಾಜ ಪದ್ಧತಿಗಳನ್ನು ಪುನಃ ಪರಿಚಯಿಸಿದನು. ಅವುಗಳಲ್ಲಿ ತವೈಫ್ ಗಳ ನೃತ್ಯ ಸಂಸ್ಕೃತಿ ಕೂಡಾ ಒಂದಾಗಿತ್ತು. ಆಸ್ಥಾನದಲ್ಲಿ ನೃತ್ಯ ಪ್ರದರ್ಶನಗಳಿಂದಾಗಿ ಶಾಹಿ ಮೊಹಲ್ಲಾದ ಕಲಾವಿದೆಯರು ಮತ್ತೊಮ್ಮೆ ಆಸ್ಥಾನದಿಂದ ಪ್ರೋತ್ಸಾಹವನ್ನು ಪಡೆದರು. ವಾಸ್ತವವಾಗಿ, ದೊರೆ ರಂಜಿತ್ ಸಿಂಗ್ ಅಮೃತಸರ ಬಳಿಯ ಮಖನ್ ಪುರ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾಶ್ಮೀರದ ಮುಸ್ಲಿಂ ಹೆಣ್ಣುಮಗಳು 'ಮೊರನ್' ಎಂಬ ಕಲಾವಿದೆಯನ್ನು ಪ್ರೀತಿಸುತ್ತಿದ್ದ ಕಾರಣದಿಂದ, ಹೀರಾ ಮಂಡಿಯ ಕಲಾವಿದೆಯರಿಗೆ ರಾಜಮನೆತನದ ಪ್ರೋತ್ಸಾಹವನ್ನು ನೀಡುತ್ತಿದ್ದನು. ಆದರೆ, ಎರಡು ನಿರ್ಣಾಯಕ ಆಂಗ್ಲೋ-ಸಿಖ್ ಯುದ್ಧಗಳ ನಂತರ (1845-49), ಸಿಖ್ ಸಾಮ್ರಾಜ್ಯವು ಪಂಜಾಬ್ ಪ್ರಾಂತ್ಯದಲ್ಲಿ ಕೊನೆಗೊಂಡಿತು. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಈ ಪ್ರದೇಶವನ್ನು ವಶಪಡಿಸಿಕೊಂಡಿತು.
ಈ ಸಂದರ್ಭದಲ್ಲಿ ಜೀವನೋಪಾಯವನ್ನು ಕಳೆದುಕೊಂಡ ಅನೇಕ ತವೈಫ್ ಕಲಾವಿದೆಯರು ಲಾಹೋರಿನ ಹಳೆಯ ನಗರದ ಕಂಟೋನ್ಮೆAಟ್ ಪ್ರದೇಶದಲ್ಲಿ ಬ್ರಿಟಿಷ್ ಸೈನಿಕರಿಗೆ ಲೈಂಗಿಕ ಕಾರ್ಯಕರ್ತರಾದರು. ಈ ಪ್ರದೇಶವು ಮೊಘಲ್ ಯುಗದ ಶಾಹಿ ಮೊಹಲ್ಲಾದಿಂದ ಹತ್ತಿರವಿದ್ದು ಹೀರಾ ಮಂಡಿ ಎಂದೂ ಕರೆಯಲ್ಪಡುತ್ತಿದ್ದ ಕಾರಣ, ಇಲ್ಲಿಂದಲೂ ಅವರು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ೧೮೫೦ ರ ದಶಕದ ಆರಂಭದಲ್ಲಿ, ನಗರದಲ್ಲಿ ಪ್ಲೇಗ್ ರೋಗ ಹರಡಿತು. ಸ್ಥಳೀಯ ಬ್ರಿಟಿಷ್ ಆಡಳಿತವು ತಮ್ಮ ಕಂಟೋನ್ಮೆಂಟ್ ಅನ್ನು ನಗರದ ಹೊರಗಿನ ಧರ್ಮಪುರಕ್ಕೆ ಸ್ಥಳಾಂತರಿಸಿತು. ಇಂತಹ ಏಳು ಬೀಳುಗಳ ನಡುವೆ ಹೀರಾ ಮಂಡಿಯು ಪ್ರದರ್ಶನ ಕಲೆಗಳ ಕೇಂದ್ರವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿತು. ಚಕ್ರವರ್ತಿಗಳ ಬದಲಾಗಿ ಅಲ್ಲಿನ ಶ್ರೀಮಂತರು. ತವೈಫ್ ಗಳ ಪೋಷಕರಾದರು. ಹೀಗಾಗಿ ಹೀರಾಮಂಡಿ ಪ್ರದರ್ಶನ ಕಲೆಗಳ ಸಂಸ್ಕೃತಿಯು. ನೂರ್ ಜಹಾನ್, ಖುರ್ಷಿದ್ ಬೇಗಂ, ಮುಮ್ತಾಜ್ ಸೇರಿದಂತೆ ಅನೇಕ ಅತ್ಯುತ್ತಮ ಕಲಾವಿದೆಯರನ್ನು ಹುಟ್ಟುಹಾಕಿದೆ.
ಹೀರಾ ಮಂಡಿ ಪ್ರದೆಶವು ಹಿಂದೂಸ್ತಾನಿ ಸಂಗೀತದ ಕೇಂದ್ರ ಬಿಂದುವಾಗಿತ್ತು. ಭಾರತದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಡೇ ಗುಲಾಂ ಆಲಿಖಾನ್ ಅವರ ಕಿರಿಯ ಸಹೋದರರಾದ ಬರ್ಕತ್ ಅಲಿ ಖಾನ್ ಮತ್ತು ಮುಬಾರಕ್ ಅಲಿ ಖಾನ್ ಅವರ ನಿತ್ಯ ಸಂಗೀತ ಕಚೇರಿ ಅಥವಾ ಬೈಠಕ್ ಗಳು ಇಲ್ಲಿ ನಡೆಯುತ್ತಿದ್ದವು, ಈ ಸಂಗೀತಗಾರರನ್ನು ಅಲ್ಲಿನ ಜನರು ಇಂದಿಗೂ ಬಹಳ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ ಈ ಬೈಠಕ್ಗಳು ಸಂಗೀತ ಕಲಿಕೆಯ ಕೇಂದ್ರಗಳಾಗಿದ್ದವು. ಉಸ್ತಾದ್ ದಮನ್ನ, ಉಸ್ತಾದ್ ಅಮೀರ್ ಖಾನ್ ಅವರ ನಿವಾಸಗಳು ಇಲ್ಲಿದ್ದವು. ಈ ಬೈಠಕ್ ಅನ್ನು 'ಹುಜ್ರಾ-ಎ ಶಾ ಹುಸೇನ್' ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇದು ಅದೇ ಹೆಸರಿನ ಮಹಾನ್ ಸೂಫಿ ಕವಿಗೆ ವಿಶ್ರಾಂತಿ ನೀಡುತ್ತಿದ್ದ ಸ್ಥಳವಾಗಿತ್ತು. ಹೀರಾ ಮಂಡಿ ಚೌಕದ ವೇದಿಕೆಯು ಉಸ್ತಾದ್ ಬರ್ಕತ್ ಅಲಿ ಖಾನ್ ಅವರ ಬೈಠಕ್, ಠುಮ್ರಿ ಮತ್ತು ಗಜಲ್ ಗಾಯನಕ್ಕೆ ಹೆಸರುವಾಸಿಯಾಗಿತ್ತು, ಉಸ್ತಾದ್ ಚೋಟೆ ಆಶಿಕ್ ಅಲಿ ಖಾನ್ ಖಯಾಲ್ ಗಾಯನದ ಶ್ರೇಷ್ಠ ಪ್ರತಿಪಾದಕರಾಗಿದ್ದರು. ಉತ್ತರ ಭಾರತವೂ ಸೇರಿದಂತೆ ಇಡೀ ಧೇಶಾದ್ಯಂತ ಪ್ರಸಿದ್ಧವಾಗಿರುವ ಖವ್ವಾಲಿ ಎಂಬ ಸೂಫಿ ಭಕ್ತಿ ಗಾಯನದ ಸೃಷ್ಟಿಗೆ ಮತ್ತು ಸ್ಪೂರ್ತಿಗೆ ಲಾಹೋರ್ ನಗರದ ಹೀರಾಮಂಡಿ ಮೂಲಕಾರಣವಾಗಿದೆ.
ಇಲ್ಲಿನ ಹೆಚ್ಚಿನ ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಮುಸ್ಲಿಮರಾಗಿದ್ದು, ಹೀರಾಮಂಡಿಯಲ್ಲಿ ಉತ್ತಮ ಆಸ್ತಿಗಳನ್ನು ಹೊಂದಿದ್ದರು. ಅವರು ನಿಧನರಾದಾಗ ತಮ್ಮ ಆಸ್ತಿಯನ್ನು ಮಸೀದಿ ಅಥವಾ ಇತರ ಕಲ್ಯಾಣ ಕಾರ್ಯಗಳಿಗೆ ದಾನ ಮಾಡುತ್ತಿದ್ದರು. ಬ್ರಿಟಿಷ್ ಆಳ್ವಿಕೆಯಲ್ಲಿ ಹೀರಾ ಮಂಡಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು, ಆ ಸಮಯದಲ್ಲಿ ದೂರದ ಪ್ರದೇಶಗಳಿಂದ ಜನರು ತಮ್ಮ ಹೆಣ್ಣುಮಕ್ಕಳನ್ನು ಲಾಹೋರ್ ಗೆ ಕರೆತಂದು ಸಂಗೀತ ಮತ್ತು ನೃತ್ಯ ಕಲೆಯನ್ನು ಕಲಿಯುವಂತೆ ಮಾಡುತ್ತಿದ್ದರು. ಲಖನ್ವಾಲ್ ಕಸೂರ್, ಸಿಯಾಲ್ ಕೋಟ್, ಫೈಜಾಬಾದ್, ಫಿರೋಜ್ ಪುರ್, ಲೂಧಿಯಾನ, ಜಲಂಧರ್, ಫಾಗ್ವಾರಾ ಸೇರಿದಂತೆ ಹಲವು ನಗರಗಳ ನೃತ್ಯ ಹುಡುಗಿಯರ ಕುಟುಂಬಗಳು ಹೀರಾ ಮಂಡಿ ಪ್ರದೇಶದಲ್ಲಿ ನೆಲೆಗೊಂಡಿದ್ದವು. ಲೈಂಗಿಕ ಕಾರ್ಯಕರ್ತರಿಗೆ ಮತ್ತು ಸಂಗೀತ, ನೃತ್ಯ ರಸಿಕರಿಗೆ ಮನರಂಜನೆಯ ಕೇಂದ್ರವಾಗಿದ್ದ ಹೀರಾ ಮಂಡಿಯ ದ್ವಂದ್ವ ಸಂಸ್ಕೃತಿಯು ಭಾರತದ ಸ್ವಾತಂತ್ರ್ಯದ ನಂತರವೂ ಮುಂದುವರೆಯಿತು.
ಇಲ್ಲಿನ ತವೈಫ್ಗಳಲ್ಲಿ ಹಲವಾರು ಮಂದಿ ಲೈಂಗಿಕ ಕಾರ್ಯಕರ್ತರಾಗಿದ್ದು, ಕಂಜರ್ ಸಮುದಾಯದಿಂದ ಬಂದವರಾಗಿದ್ದರು. ಪೂರ್ವ ಪಾಕಿಸ್ತಾನ ಸೇರಿದಂತೆ ಇತರ ಪ್ರದೇಶಗಳ ಮಹಿಳೆಯರನ್ನು ಬಡತನದಿಂದಾಗಿ ಅವರನ್ನು ಅಕ್ರಮವಾಗಿ ಸಾಗಣೆ ಮಾಡಿ ಹೀರಾ ಮಂಡಿಗೆ ಕರೆಕರಲಾಗಿತ್ತು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಹಮ್ಮದ್ ಜಿಯಾ-ಉಲ್-ಹಕ್, 1978 ರಿಂದ 1988 ರವರೆಗೆ, ಹೀರಾ ಮಂಡಿಯಲ್ಲಿ ಮುಜ್ರಾಗಳು ಮತ್ತು ಲೈಂಗಿಕ ಕಾರ್ಯಕರ್ತರ ಸಂಸ್ಕೃತಿಯನ್ನು ಕೊನೆಗೊಳಿಸಲು ಕಠಿಣ ಪ್ರಯತ್ನ ಮಾಡಿದ್ದರು. ಆದರೆ, ಅದು ಯಶಸ್ವಿಯಾಗಲಿಲ್ಲ. ಅನೇಕ ವೇಶ್ಯಾಗೃಹಗಳು ಲಾಹೋರ್ನಿಂದ ಇತರ ಭಾಗಗಳಿಗೆ ಸ್ಥಳಾಂತರಗೊಂಡವು. ಇಂದಿಗೂ ಕೂಡಾ ಅನೇಕ ತವೈಫ್ ಪ್ರಸಿದ್ಧ ಕಲಾವಿದೆಯರ ಮಹಲುಗಳು ಹೀರಾಮಂಡಿಯ ವೈಭವಕ್ಕೆ ಸಾಕ್ಷಿಯಾಗಿವೆ. ಮಟ್ಟಿ ಬಾಯಿ ಎಂಬಾಕೆ ಕೆಂಪು ದೀಪ ಪ್ರದೇಶದ ಪ್ರಸಿದ್ಧ ನೃತ್ಯಗಾರ್ತಿಯಾಗಿದ್ದಳು ಅಲ್ಲಿನ ಒಂದು ವೃತ್ತಕ್ಕೆ ಆಕೆಯ ಹೆಸರಿಡಲಾಗಿದೆ. ಅಖ್ತರಿ ಎಂಬ ಕಲಾವಿದೆ ಸಿನಿಮಾ ನಟಿಯಾಗಿ ಹೀರಾ ಮಂಡಿಯ ಮುಖ್ಯ ರಸ್ತೆಯಲ್ಲಿ ವಾಸಿಸುತ್ತಿದ್ದಳು. ಜಮೀನ್ದಾರ್ ಮತ್ತು ಖಾಂದಾನ್ ಎಂಬ ಪ್ರಸಿದ್ಧ ಚಲನಚಿತ್ರಗಳಲ್ಲಿ ಆಕೆ ನಟಿಸಿದ್ದಳು. ಪಾಕಿಸ್ತಾನದ ಪ್ರಸಿದ್ಧ ಕಾದಂಬರಿಕಾರ ಗುಲಾಮ್ ಅಬ್ಬಾಸ್ ಈ ಪ್ರದೇಶದ ನಿವಾಸಿಯಾಗಿದ್ದರಿಂದ ಅದೇ ಹೀರಾ ಮಂಡಿಯಲ್ಲಿ ಕುಳಿತು ತಮ್ಮ 'ಆನಂದಿ' ಎಂಬ ಕಾದಂಬರಿಯನ್ನು ಬರೆದಿದ್ದಾರೆ.
ಪಂಜಾಬಿನ ದೊರೆ ರಂಜೀತ್ ಸಿಂಗ್ ಆಳ್ವಿಕೆಯ ಸಮಯದಲ್ಲಿ ಆತನ ಸೇನಾ ದಳಪತಿ ಕಾಲೂ ಸಿಂಗ್ ಎಂಬುವನು ಕಾಶ್ಮೀರದ ನೂರಾರು ಮಹಿಳೆಯರನ್ನು ಬಂಧಿಸಿ ಲಾಂಡಾ ಬಜಾರ್ ಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತರನ್ನಾಗಿ ಮಾಡಿದ್ದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಐತಿಹಾಸಿಕ ಉಲ್ಲೇಖಗಳ ಪ್ರಕಾರ, ಮೊಘಲ್ ಆಳ್ವಿಕೆಯಲ್ಲಿ ಕೇವಲ ನೃತ್ಯ ಹುಡುಗಿಯರು ಮಾತ್ರ ಇದ್ದರು ಆದರೆ ಸಿಖ್ ದೊರೆಯ ಆಳ್ವಿಕೆಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಪರಿಚಯಿಸಲಾಯಿತು. ಸಿಖ್ ಸರ್ದಾರ್ಗಳು ಯಾವಾಗಲೂ ಸುಂದರ ಹುಡುಗಿಯರನ್ನು ಸಂತೋಷಕ್ಕಾಗಿ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಭಾರತ ಮತ್ತು ಪಾಕ್ ವಿಭಜನೆಯ ಸಂದರ್ಭದಲ್ಲಿ ನೊಂದವರ ಬದುಕನ್ನು ‘’ಮಾಯದ ಗಾಯಗಳು’’ ಎಂಬ ಶೀರ್ಷಿಕೆಯಡಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಲೇಖಕನಿಗೆ ಗಡಿಯಾಚೆಗಿನ ಲಾಹೋರ್ ಪ್ರದೇಶದ ಹೆಣ್ಣು ಮಕ್ಕಳ ಕುರಿತಂತೆ ಸಿಕ್ಕ ಮಾಹಿತಿಗಳವು.
( ಜುಲೈ ತಿಂಗಳ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)