ಬುಧವಾರ, ಜೂನ್ 10, 2026

ತಮಿಳು ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಭಾರತೀರಾಜ ಈಗ ನೆನಪು ಮಾತ್ರ.

 


 


ಇಡೀ ಭಾರತೀಯ ಚಿತ್ರರಂಗವು ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಾದ ಕ್ರಾಂತಿಕಾರಕ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ತಮಿಳು ಚಿತ್ರರಂಗಕ್ಕೆ ವಿನೂತನ ಹಾಗೂ ವೈಚಾರಿಕತೆಯಿಂದ ಕೂಡಿದ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಕೆ. ಬಾಲಚಂದರ್ ಹಾಗೂ ಗ್ರಾಮೀಣ ಪ್ರದೇಶದ ಕಥೆಗಳ ನಿರೂಪಣೆಯಲ್ಲಿ ಭಾರತೀರಾಜ ಹೊಸ ಇತಿಹಾಸವನ್ನು ಬರೆದರು. ಇವರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇಂದು ತಮಿಳು ಚಿತ್ರರಂಗ ಸಾಗುತ್ತಿದೆ. ತೆಲುಗು ಚಿತ್ರರಂಗದ ಕೆ.ವಿಶ್ವನಾಥ್, ತಮಿಳು ಚಿತ್ರರಂಗದ ಬಾಲಚಂದರ್ ಮತ್ತು ಭಾರತೀರಾಜ ಮೂವರು ತ್ರಿಮೂರ್ತಿಗಳು ಒಂದು ರೀತಿಯಲ್ಲಿ ದಕ್ಷಿಣ ಭಾರತದ ಶ್ರೇಷ್ಠ ಸಾಹಿತಿಗಳ ಜೊತೆ ನಿಲ್ಲಬಲ್ಲ ಪ್ರತಿಬೆ ಹಾಗೂ ಗೌರವವನ್ನು ಪಡೆದಿದ್ದರು.

 ಕಳೆದ ಆರುತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀರಾಜರವರು  ಚೇತರಿಸಿಕೊಂಡು ಕಳೆದ ತಿಂಗಳು ಚೆನ್ನೈ ನಗರದ ತಮ್ಮ ನಿವಾಸಕ್ಕೆ  ಹಿಂತಿರುಗಿದ್ದರು. ಇಂದು  ಬೆಳಿಗ್ಗೆ ತಮ್ಮ 84 ನೇ ವಯಸ್ಸಿಗೆ ನಮ್ಮನ್ನು ಅಗಲಿದರು. ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ, ನಟರಾಗಿ ದಂತಕಥೆಯಂತೆ ಬದುಕಿದ ಭಾರತೀರಾಜ ನಮ್ಮ ಕನ್ನಡಿಗರಾದ ಪುಟ್ಟಣ್ಣ ಕಣಗಾಲ್ ರವರ ಶಿಷ್ಯರು. ಪುಟ್ಟಣ್ಣ ಅವರ ಗರಡಿಯಲ್ಲಿ ಪಳಗಿದ ಭಾರತೀರಾಜರವರು ತಮ್ಮದೇ ಆದ ಶಿಷ್ಯ ಪರಂಪರೆಯನ್ನು ಹುಟ್ಟು ಹಾಕುವುದರ ಮೂಲಕ ಇಡೀ ತಮಿಳು ಸಿನಿಮಾರಂಗವನ್ನು ಶ್ರೀಮಂತ ಗೊಳಿಸಿದ್ದಾರೆ.

 ಭಾರತೀರಾಜ ಅವರು  ಕೆ.ಭಾಗ್ಯರಾಜ್ ಅವರನ್ನು ಸೃಷ್ಟಿಸಿದರು. ಭಾಗ್ಯರಾಜ್ ಬಳಿ, ಚೇರನ್ ಹಾಗೂ ಚೇರನ್ ಬಳಿ ಆರ್ ಪ್ರತಿಭನ್ ಹೀಗೆ ಎಲ್ಲರೂ ನಟರಾಗಿ, ನಿರ್ದೇಶಕರಾಗಿ ಹೊಸ ದಾಖಲೆಯನ್ನು ನಿರ್ಮಿಸಿದರು. ಇವರೆಲ್ಲರ ಕಥೆ ಆಯ್ಕೆ ಮಾಡಿಕೊಳ್ಳುವ ವಿಧಾನ, ಹೇಳುವ ಶೈಲಿ ಹೀಗೆ ಪ್ರತಿಯೊಂದರಲ್ಲಿಯೂ ಪುಟ್ಟಣ್ಣ ಕಣಗಾಲ್ ಅವರು ಭಾರತೀರಾಜರ ಎದೆಯೊಳಗೆ ಬಿತ್ತಿದ್ದ ಬೀಜದ ಪ್ರಭಾವವಿರುವುದನ್ನು ನಾವು ಕಾಣಬಹುದು,

 ದಕ್ಷಿಣ ತಮಿಳುನಾಡಿನ ಮಧುರೈ ಸಮೀಪದ ಥೇಣಿ ಜಿಲ್ಲೆಯ ಹಳ್ಳಿಯೊಂದರಲ್ಲಿ 1941 ರಲ್ಲಿ ಜನಿಸಿದ ಭಾರತೀರಾಜ ಬಾಲ್ಯದಿಂದಲೂ ನಾಟಕಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಇವರು ಮತ್ತು ಇಳೆಯರಾಜ ಐವತ್ತೈದು ವರ್ಷಗಳ ಹಿಂದ ಏಕಕಾಲಕ್ಕೆ ಚಿತ್ರರಂಗಕ್ಕೆ ಬಂದವರು. ಭಾರತೀರಾಜ ಅವರ ಬಹುತೇಕ ಸಿನಿಮಾಗಳಿಗೆ ಇಳೆಯರಾಜ ಅವರ ಸಂಗೀತ ಇರುವುದು ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ಇಬ್ಬರ ನಡುವೆ ಬಿರುಕುಂಟಾಗಿ ದೂರವಾಗಿದ್ದರು. ಆದರೆ, ಒಂಬತ್ತು ವರ್ಷಗಳ ಹಿಂದೆ ಭಾರತೀರಾಜರ 75 ನೇ ವರ್ಷದ ಹುಟ್ಟುಹಬ್ಬದಲ್ಲಿ ಏಕವಚನದ ಗೆಳೆಯರಾಗಿದ್ದ ಇಬ್ಬರು ಗೆಳೆಯರು ಮತ್ತೇ  ಒಂದುಗೂಡಿದರು.

 ಭಾರತೀರಾಜ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆಯು ಇಪ್ಪತ್ತಕ್ಕೂ ಹೆಚ್ಚಿವೆ. ಆದರೆ, ಇವರ  ಪದಿನಾರು ವಯನಿದಿಲೆ,  ಕೀಳಕ್ಕೆ ಪೋಗುಂ ರೈಲ್, ಅಲೈಗಳ್ ಒಯುವುದಿಲ್ಲೈ, ಮಣ್ ವಾಸನೈ, ಮೊದಲ್ ಮಯಾದೈ, ಸಿಗಪ್ಪು ರೋಜಾಕ್ಕಳ್, ಪುದಿಯ ವಾರ್ಪುಗಳ್, ವೇದಂ ಪುತಿದು, ಒರು ಕೈದಿಯ ಡೈರಿ, ಕಡಲೂರ ಕವಿತೈಗಳ್, ಕರುತ್ತಮ್ಮ, ಕಾದಲ್ ಪೂಕ್ಕಳ್ ಹೀಗೆ ಹೆಸರಿಸುತ್ತಾ ಹೋಗಬಹುದು. ಚಿತ್ರ ನಿರ್ದೇಶನಕ್ಕಾಗಿ ಒಟ್ಟು ಆರುಬಾರಿ ರಾಷ್ಟ್ರಪ್ರಶಸ್ತಿ, ಆರು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಮತ್ತು  ನಾಲ್ಕು ಫಿಲಂಪೇರ್ ಪ್ರಶಸ್ತಿಯನ್ನು ಪಡೆದಿದ್ದ ಭಾರತೀರಾಜ ಗ್ರಾಮೀಣ ಕಥನಗಳನ್ನು ಹೇಳುವಲ್ಲಿ ಪ್ರಸಿದ್ಧರಾಗಿದ್ದರು. ಅವರ ಬಹುತೇಕ ಗ್ರಾಮೀಣ ಚಿತ್ರಗಳನ್ನು  ಅವರು ಮಂಡ್ಯ ಜಿಲ್ಲೆಯ  ಮಳವಳ್ಳಿಯಿಂದ ಕೊಳ್ಳೆಗಾಲಕ್ಕೆ ಹೋಗುವಾಗ ಸಿಗುವ ಬೆಳಕವಾಡಿ ಗ್ರಾಮದ ಬಳಿ ಇರುವ ಕಾವೇರಿ ನದಿ ತೀರ ಮತ್ತುಅಲ್ಲಿನ ಗದ್ದೆಗಳಲ್ಲಿ ಚಿತ್ರೀಕರಿಸಿರುವುದು ವಿಶೇಷ. ಶಿಂಷಾ ಬಳಿಯ ಕಾವೇರಿ ನದಿಯ ಸೇತುವೆ, ಮತ್ತು ನದಿ, ತಲಕಾಡಿನ ನದಿತೀರಾ ಇವೆಲ್ಲವುಗಳ ಕುರಿತು ಭಾರತೀರಾಜ ಭಾವನಾತ್ಮಕ ಸಂಬಂಧ ಹೊಂದಿದ್ದರು.

 ಇಂದು ತಮಿಳು ಚಿತ್ರನಿರ್ದೇಶಕರು ಇಪ್ಪತ್ತೈದರಿಂದ ಐವತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಿರ್ದೇಶಕರು ಇದ್ದಾರೆ. ಆದರೆ ಬಾಲಚಂದರ್ ಮತ್ತು ಭಾರತೀರಾಜ ಅವರ ಸಂಭಾವನೆಯು ಅವರ ಸಿನಿಮಾ ಜೀವನದಲ್ಲಿ ಲಕ್ಷ ರೂಪಾಯಿ ದಾಟಿರಲಿಲ್ಲ. ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆ ಮಾತನಾಡುತ್ತಿದ್ದ ಕೆ.ಬಾಲಚಂದರ್, ಮರೋಚರಿತ್ರವನ್ನು ಹಿಂದಿಗೆ ಏಕ್ ದುಜೆ ಕೆ ಲಿಯೆ ಹೆಸರಿನಲ್ಲಿ ನಿರ್ದೇಶನ ಮಾಡಿದಾಗ, ಜೀವನದಲ್ಲಿ ಪ್ರಥಮ ಬಾರಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದೆ ಎಂದು ಹೇಳಿದ್ದರು. ಭಾರತೀರಾಜ ಅವರು ತಮ್ಮ ಕೊನೆಯ ದಿನಗಳ ಜೀವನ ನಿರ್ವಹಣೆಗೆ ಸನ್ ಟಿ.ವಿ.ಗೆ ತಮಿಳು ಧಾರವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಹಾಗೂ  ಹತ್ತು ಲಕ್ಷ ರೂಪಾಯಿ ನಿಗದಿತ ಸಂಭಾವನೆಗೆ ವರ್ಷಕ್ಕೆ ಒಂದೆರೆಡು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದರು.


ಇಂದು ಭಾಲಚಂದರ್, ಭಾರತೀರಾಜ ನಮ್ಮೊಡನೆ ಇಲ್ಲ. ಆದರೆ ಅವರು ಸೃಷ್ಟಿಸಿದ ಸಿನಿಮಾ ಎಂಬ ದೃಶ್ಯಕಾವ್ಯಗಳು ಸದಾ ನಮ್ಮೊಂದಿಗೆ ಇರುತ್ತವೆ.  ನನ್ನ ಬೌದ್ಧಿಕ ಜ್ಞಾನದ ವಿಸ್ತರಣೆಯಲ್ಲಿ ಪ್ರಭಾವ ಬೀರಿದ ಈ ಇಬ್ಬರು ಮಹನೀಯರು ನನ್ನ ಪಾಲಿಗೆ ಗುರುಗಳಾಗಿದ್ದರು.

ಹೋಗಿ ಬನ್ನಿ ಗುರುವೇ, ನಿಮ್ಮ ಹೆಸರು ನನ್ನೊಳಗೆ ಸದಾ ಶಾಶ್ವತವಾಗಿ ಉಳಿದಿದೆ.

 

ಜಗದೀಶ್ ಕೊಪ್ಪ, ಮೈಸೂರು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ