ಬುಧವಾರ, ಜನವರಿ 29, 2025

ಕೇರಳ ಸಂಸ್ಕೃತಿಯ ಪ್ರತಿಬಿಂಭ ಕೊಚ್ಚಿನ್ ಜಾನಪದ ಸಂಗ್ರಹಾಲಯ.




ಕೊಚ್ಚಿ ಅಥವಾ ಕೊಚ್ಚಿನ್ ಎಂದು ಕರೆಯಾಗುವ ಈ ನಗರವು ಭಾರತದ ನೈಋತ್ಯ ಕರಾವಳಿಯಲ್ಲಿರುವ ಹಾಗೂ ಕೇರಳದ ಬಹು ಸಾಂಸ್ಕೃತಿಕ ತಾಣವಾಗಿದೆ. ಒಂದು ಕಾಲದಲ್ಲಿ ಪೋರ್ಚುಗೀಸರ ಹಾಗೂ ಡಚ್ಚರು ಮತ್ತು ಮಾಪಿಳ್ಳೆ ( ಮುಸ್ಲಿಮರ) ಮತ್ತು ಯಹೂದಿಗಳ ನೆಲೆಬೀಡಾಗಿದ್ದ ಕೊಚ್ಚಿನ್ ನಗರವೂ ಪ್ರಾಚೀನ ಕಾಲದಿಂದಲೂ ಭಾರತದ ಪ್ರಮುಖ ಬಂದರು ಪಟ್ಟಣವಾಗಿತ್ತು. ಇಲ್ಲಿಂದ ಕ್ರಿಸ್ತಶಕ ಮೂರು ಮತ್ತು ನಾಲ್ಕನೇ ಶತಮಾನದಿಂದಲೂ ಪ್ರಮುಖ ಸಾಂಬಾರು ಬೆಳೆ ಅಥವಾ ಪದಾರ್ಥಗಳಾಗಿದ್ದ ಕಾಳುಮೆಣಸು, ಏಲಕ್ಕಿ, ಚಹಾ, ಲವಂಗ, ಕೊಬ್ಬರಿ ಎಣ್ಣೆ ಇತ್ಯಾದಿ ವಸ್ತುಗಳು ಚೀನಾ, ಅರಬ್ ರಾಷ್ಟ್ರಗಳು ಮತ್ತು ಈಜಿಪ್ತ್ ಹಾಗೂ ಟರ್ಕಿ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಹೇರಳವಾಗಿ ರಫ್ತಾಗುತ್ತಿದ್ದವು.
ಈ ಕಾರಣದಿಂದಾಗಿ ಕ್ರಿಸ್ತಶಕ 1565 ರಿಂದ 1603 ರವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಈ ಪ್ರದೇಶವು 1603 ರಲ್ಲಿ ಡಚ್ಚರ ಆಳ್ವಿಕೆಗೆ ಒಳಫಟ್ಟಿತ್ತು. ನಂತರ 1804 ರಲ್ಲಿ ಬ್ರಿಟೀಷರ ಪಾಲಾಗಿ ಸ್ಥಳಿಯ ದೊರೆಗಳ ಆಳ್ವಿಕೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಸಾಹತು ಪ್ರದೇಶವಾಗಿತ್ತು. ವ್ಯಾಪಾರದ ನಿಮಿತ್ತ ಇಲ್ಲಿಗೆ ಆಗಮಿಸಿದ ಮಾಪಿಳ್ಳೈ ಎಂದು ಕರೆಸಿಕೊಳ್ಳುವ ಅರಬ್ಬರು, ಕ್ರೆöÊಸ್ತಧರ್ಮದ ಪ್ರಚಾರಕ್ಕೆ ಬಂದ ಐರೋಪ್ಯರು ಹಾಗೂ ಯಹೂದಿಗಳು, ಇಲ್ಲಿಯೇ ನೆಲೆ ನಿಂತ ಕಾರಣದಿಂದಾಗಿ ಯಹೂದಿಗಳ ನೆಲೆಬೀಡಾಗಿದ್ದ ಕೊಚ್ಚಿನ್ ಬಂದರು ಪಟ್ಟಣವು ಇಂದಿಗೂ ಸಹ ತನ್ನ ಸುಂದರ ಕಡಲ ತೀರ, ಕಲೆಗಳು ಮತು ಬಹುಸಂಸ್ಕೃತಿಗಳ ಕೇಂದ್ರವಾಗಿದೆ. ಹದಿನಾಲ್ಕನೆಯ ಶತಮಾನದಲ್ಲಿ ಚೀನಿಯರಿಂದ ಪರಿಚಿತವಾದ ಚೀನಾದ ಬೃಹದಾಕಾರದ ಮೀನು ಹಿಡಿಯುವ ಬಲೆಯು ಇಲ್ಲಿನ ಪ್ರಧಾನ ಸಂಸ್ಕೃತಿಯ ಲಕ್ಷಣವಾಗಿದೆ. ಅದೇ ರೀತಿ ಮೀನಿನ ತರೇವಾರಿ ಖಾದ್ಯಗಳು ಮತ್ತು ತೆಂಗಿನ ಎಣ್ಣೆಯಿಂದ ತಯಾರಾಗುವ ಸಸ್ಯಹಾರಿ ಆಹಾರ ಪದಾರ್ಥಗಳಿಗೂ ಸಹ ಕೊಚ್ಚಿನ್ ನಗರ ಹೆಸರುವಾಸಿಯಾಗಿದೆ. ಇಂತಹ ಸಾಂಸ್ಕೃತಿಕ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಪ್ರಭಾವಗಳನ್ನು ಪ್ರತಿಬಿಂಬಿಸುವ ಕೊಚ್ಚಿನ್ ನಗರವು ತನ್ನ ಪ್ರಾಚೀನ ಕೇರಳದ ಸಂಸ್ಕೃತಿಯನ್ನು ಒಳಗೊಂಡAತೆ ವಸಾಹತುಶಾಹಿ ಯುಗದ ಸಂಸ್ಕೃತಿಯನ್ನು ಸಹ ತನ್ನ ಒಡಲಲ್ಲಿ ಇರಿಸಿಕೊಂಡಿದೆ.


ನಾವು ಮಟ್ಟಂಚೇರಿಯ ಡಚ್ ಅರಮನೆಯ ಸೊಗಸಾದ ಸಭಾಂಗಣಗಳ ಮೂಲಕ ಅಲೆದಾಡುತ್ತಿರಲಿ ಅಥವಾ ಕೇರಳ ಕಥಕ್ಕಳಿ ಕೇಂದ್ರದಲ್ಲಿ ಸಂಕೀರ್ಣವಾದ ಪ್ರದರ್ಶನಗಳನ್ನು ಮೆಚ್ಚಿಕೊಳ್ಳುತ್ತಿರಲಿ, ಕೊಚ್ಚಿಯು ತನ್ನ ಕಲಾತ್ಮಕ ಉತ್ಸಾಹದಲ್ಲಿ ಮುಳುಗಲು ನಮ್ಮನ್ನು ಆಹ್ವಾನಿಸುತ್ತದೆ. ಕೇರಳ ಜಾನಪದ ವಸ್ತುಸಂಗ್ರಹಾಲಯವು ಕೊಚ್ಚಿನ್ ನಗರದಲ್ಲಿರುವ ಅಪರೂಪದ ವಸ್ತುಸಂಗ್ರಹಾಲಯವಾಗಿದೆ. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವ ಉದ್ದೇಶದಿಂದ ಇದನ್ನು ವಾಣಿಜ್ಯೋದ್ಯಮಿ ಮತ್ತು ಕಲಾ ಉತ್ಸಾಹಿ ಜಾರ್ಜ್ ಜೆ. ಥಾಲಿಯಾತ್ ಎಂಬುವರು ಸ್ಥಾಪಿಸಿದರು. ಈ ಸಂಗ್ರಹಾಲಯವು ಕೇರಳದ ಜಾನಪದ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ವಿವಿಧ ಅಂಶಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಮತ್ತು ಪ್ರದರ್ಶನಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಮೂರು ಅಂತಸ್ತಿನ ಕಲಾತ್ಮಕವಾದ ಕಟ್ಟಡದಲ್ಲಿ ಸಂಗ್ರಹವಾಗಿರುವ ವಿವಿಧ ಸ್ವರೂಪದ ದೀಪದ ಸ್ಥಂಭಗಳು, ಗಣಪತಿ ವಿಗ್ರಹಗಳು ಮತ್ತು ಕೇರಳದ ಪ್ರಸಿದ್ಧ ನೃತ್ಯ ಪ್ರಕಾರಗಳಾದ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂಗಳ ಕಲಾವಿದರು ಧರಿಸುತ್ತಿದ್ದ ವಸ್ತçಗಳು ಹಾಗೂ ಮುಖವಾಡಗಳು ನಮ್ಮನ್ನು ಆಕರ್ಷಿಸುತ್ತವೆ.
ವಸ್ತುಸಂಗ್ರಹಾಲಯದ ಪ್ರವೇಶದ್ವಾರದಲ್ಲಿ ಭವ್ಯವಾದ ಕಾಲ್ ವಿಲಕ್ಕು (ಕಲ್ಲಿನ ದೀಪ) ಮೂಲಕ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಮೊದಲು ಪ್ರವೇಶ ದರವು ವಯಸ್ಕರಿಗೆ ನೂರು ರೂಪಾಯಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಐವತ್ತು ರೂಪಾಯಿಗಳಷ್ಟು ಇತ್ತು. ಈಗ ಅದನ್ನು ದ್ವಿಗುಣಗೊಳಿಸಲಾಗಿದೆ. ಪ್ರವಾಸಿಗರಿಗೆ ಇದು ದುಬಾರಿ ಎನಿಸಿದರೂ ಸಹ ಕನಿಷ್ಠ ಮೂರುಗಂಟೆಗಳ ಕಾಲ ಇಲ್ಲಿನ ವಸ್ತುಗಳನ್ನು ನಾವು ಆಸಕ್ತಿಯಿಂದ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ಡಾ.ಪಿ.ಆರ್. ತಿಪ್ಪೆಸ್ವಾಮಿಯವರು ಮೈಸೂರು ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆಯ ಕಟ್ಟದಲ್ಲಿ ಸ್ಥಾಪಿಸಲಾಗಿರುವ ಜಾನಪದ ಸಂಗ್ರಹಾಲಯವು ಏಷ್ಯಾದ ಅತಿದೊಡ್ಡ ಜಾನಪದ ಸಂಗ್ರಹಾಲಯ ಎಂದು ಹೆಸರಾಗಿದೆ. ಇದು ಕರ್ನಾಟಕದ ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗ್ರಹಾಲಯವಾಗಿದೆ. ಇದೇ ರೀತಿಯಲ್ಲಿ ಇಡೀ ಕೇರಳ ಸಂಸ್ಕೃತಿಯನ್ನು ಕೊಚ್ಚಿನ್ ಸಂಗ್ರಾಹಲಯವು ಪ್ರತಿಬಿಂಭಿಸುತ್ತದೆ. ಮರ, ಕಂಚು ಮತ್ತು ಕಲ್ಲಿನ ಶಿಲ್ಪಗಳು, ಸಂಗೀತ ಉಪಕರಣಗಳು, ಸಾಂಪ್ರದಾಯಿಕ ವೇಷಭೂಷಣಗಳು, ಪ್ರಾಚೀನ ಟೆರಾಕೋಟಾ ಆಭರಣಗಳು ಮತ್ತು ಮ್ಯೂರಲ್ ಪೇಂಟಿAಗ್‌ಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿರುವ ಈ ಆಕರ್ಷಕ ವಸ್ತುಸಂಗ್ರಹಾಲಯವು ಮಲಬಾರ್, ಕೊಚ್ಚಿನ್ ಮತ್ತು ತಿರುವಾಂಕೂರ್‌ನ ವಾಸ್ತುಶಿಲ್ಪದ ಶೈಲಿಗಳನ್ನು ಸಂಯೋಜಿಸುವ ವಾಸ್ತುಶಿಲ್ಪದ ಅದ್ಭುತವಾಗಿದೆ.

ಈ ಮೂರು ಅಂತಸ್ತಿನ ವಸ್ತುಸಂಗ್ರಹಾಲಯದ ಪ್ರತಿಯೊಂದು ಮಹಡಿಯು ವಿಶಿಷ್ಟವಾದ ಪ್ರದರ್ಶನಗಳನ್ನು ಹೊಂದಿದೆ, ಮೊದಲ ಮಹಡಿಯಲ್ಲಿ ಸಾಂಪ್ರದಾಯಿಕ ನೃತ್ಯ ವೇಷಭೂಷಣಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಎರಡನೆಯ ಮಹಡಿಯಲ್ಲಿ ಅದ್ಭುತವಾದ ಮ್ಯೂರಲ್ ಪೇಂಟಿAಗ್‌ಗಳನ್ನು ಪ್ರದರ್ಶಿಸಲಾಗುತ್ತದೆ, ಇದು ವಿಶಾಲವಾದ ಸಾಂಸ್ಕೃತಿಕ ಅನುಭವವನ್ನು ನಮಗೆ ನೀಡುತ್ತದೆ. ೧೮೧೫ ರಲ್ಲಿ ಸೀಮೆಎಣ್ಣೆ ಮೂಲಕ ಚಾಲನೆಯಲ್ಲಿದ್ದ ಗಾಳಿ ಬೀಸುತ್ತಿದ್ದ ಟೇಬಲ್ ಪ್ಯಾನ್ ಎಲ್ಲರ ಗಮನ ಸೆಳೆಯುತ್ತದೆ. ಹೆಚ್ಚುವರಿಯಾಗಿ, ವಸ್ತುಸಂಗ್ರಹಾಲಯವು 'ಫೋಕ್ಲೋರ್ ಥಿಯೇಟರ್' ಅನ್ನು ಸಹ ಹೊಂದಿದೆ, ಅಲ್ಲಿ ಪ್ರವಾಸಿಗರು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಕಲಾ ಪ್ರಕಾರಗಳ ನೇರ ಪ್ರದರ್ಶನಗಳನ್ನು ನಾವು ಆನಂದಿಸಬಹುದು, ಈ ಪ್ರದರ್ಶನವು ಕೇರಳದ ಶ್ರೀಮಂತ ಸಂಪ್ರದಾಯಗಳಿಗೆ ಜೀವ ತುಂಬುವ ತಲ್ಲೀನಗೊಳಿಸುವ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ. 'ಸ್ಪೈಸ್ ಆರ್ಟ್ ಕೆಫೆ' ಸಾಂಪ್ರದಾಯಿಕ ಕೇರಳದ ಪಾಕಪದ್ಧತಿಯ ಅಧಿಕೃತ ರುಚಿಯನ್ನು ನೀಡುತ್ತದೆ, ಪುರಾತನ ವಸ್ತುಗಳ ಅಂಗಡಿ, ಆಭರಣ ಮಳಿಗೆ ಮತ್ತು ಮುಖವಾಡಗಳ ಕಲಾ ಗ್ಯಾಲರಿಗಳು ಪ್ರವಾಸಿಗರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಕಾರಣದಿಂದ ಇದು ಬಹುಮುಖಿ ಸಾಂಸ್ಕೃತಿಕ ತಾಣವಾಗಿದೆ.

ಕೇರಳದ ಈ ಜಾನಪದ ವಸ್ತುಸಂಗ್ರಹಾಲಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ನೀವು ಇತಿಹಾಸದ ವಿದ್ಯಾರ್ಥಿಯಾಗಿರಲಿ, ಕಲಾ ಪ್ರೇಮಿಯಾಗಿರಲಿ ಅಥವಾ ಕುತೂಹಲಕಾರಿ ಪ್ರವಾಸಿಗರಾಗಿರಲಿ, ಕೊಚ್ಚಿಯಲ್ಲಿರುವ ಈ ಸಾಂಸ್ಕೃತಿಕ ಪರಂಪರೆಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದು ಕೇರಳದ ಸಾಂಪ್ರದಾಯಿಕ ಕರಕುಶಲ ಮತ್ತು ಕಲಾತ್ಮಕ ಪರಂಪರೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬಲ್ಲದು.
ಎನ್.ಜಗದೀಶ್ ಕೊಪ್ಪ

ಚೆಟ್ಟಿನಾಡ್ ಸಂಸ್ಕೃತಿಯ ವೈಭವ

 


ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಕ್ರಿಸ್ತಪೂರ್ವದಿಂದಲೂ ಉಸಿರಾಗಿಸಿಕೊಂಡಿರುವ ತಮಿಳುನಾಡಿನ ನೆಲವು ಭಾಷೆ, ಸಾಹಿತ್ಯ ಸಂಗೀತ, ನೃತ್ಯ, ಕಲೆ ಹೀಗೆ ಎಲ್ಲಾ ಪ್ರಕಾರಗಳಲ್ಲೂ ತನ್ನದೇ ವಿಶಿಷ್ಠ ಸಂಸ್ಕೃತಿಗೆ ಹೆಸರಾಗಿದೆ. ಇಂತಹ ನೆಲದಲ್ಲಿ ಚೆಟ್ಟಿಯಾರ್ ಸಮುದಾಯವು ವ್ಯಾಪಾರ, ಆಭರಣಗಳ ತಯಾರಿಕೆ, ನೇಯ್ಗೆ, ಆಹಾರ ಪದ್ಧತಿ ಮತ್ತು ಅವಿಭಕ್ತ ಕುಟುಂಬ ಪದ್ಧತಿ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ತಾವು ವಾಸಿಸುತ್ತಿದ್ದ ಅರಮನೆಯಂತಹ ಭವ್ಯಮಹಲುಗಳ ಮೂಲಕ ಇಡೀ ದೇಶದ ಗಮನ ಸೆಳೆದ ಸಮುದಾಯವಾಗಿದೆ. ಜೊತೆಗೆ ಬ್ರಾಹ್ಮಣೇತರ ಸಮುದಾಯದಲ್ಲಿ ಹಣಕಾಸಿನ ವ್ಯವವಾರ ಮತ್ತು ವಿದೇಶಿ ವ್ಯಾಪಾರದಲ್ಲಿ ಸಾಧನೆ ಮಾಡಿದ ವಿಶಿಷ್ಠ ಸಮುದಾಯ ಎಂದು ಪ್ರಸಿದ್ಧವಾಗಿದೆ. ಅವರನ್ನು ತಮಿಳೂನಾಢಿನಲ್ಲಿ ನಟ್ಟುಕೊಟ್ಟೈ ಚೆಟ್ಟಿಯಾರ್‌ಗಳು ಎಂದು ಕರೆಯುತ್ತಾರೆ. ಆದರೆ, ಅವರು ತಮ್ಮನ್ನು ನಾಗರಾಥರ್ ಅಂದರೆ ನಗರರ್ತರು ( ನಗರವಾಸಿಗಳು ಅಥವಾ ವ್ಯಾಪಾರಿಗಳು) ಎಂದು ಕರೆಸಿಕೊಳ್ಳಲು ಬಯಸುತ್ತಾರೆ.
ಕಳೆದ ಎರಡು ಶತಮಾನದ ಅವಧಿಯಲ್ಲಿ ಚೆಟ್ಟಿಯಾರ್ ಸಮುದಾಯುವು ಹಣಕಾಸಿನ ವ್ಯವಹಾರ ಮತ್ತ ವ್ಯಾಪಾರದ ಮೂಲಕ ಪ್ರವರ್ಧಮಾನ ಸ್ಥಿತಿಗೆ ತಲುಪಿದರು. ಚೆಟ್ಟಿಯಾರ್ ಸಮುದಾಯದ ಅಥವಾ ಕುಲದ ಸದಸ್ಯರು ವಿವಾಹ, ಹಬ್ಬ, ಮುಂತಾದ ಶುಭಕಾರ್ಯಗಳ್ಲಿ ಒಟ್ಟಿಗೆ ಭಾಗವಹಿಸುವುದರೊಂದಿಗೆ ತಮ್ಮದೇ ಆದ ಜೀವನಶೈಲಿ ಆಚರಣೆಗಳನ್ನು ಅತ್ಯಂತ ಭವ್ಯವಾದ ರೀತಿಯಲ್ಲಿ ನಡೆಸಿಕೊಂಡು ಬಂದವರು. ಇಂದು ಅವರಲ್ಲಿ ಅನೇಕರು ವಿದೇಶಗಳಲ್ಲಿ ಉದ್ಯೋ ಗ ಮತ್ತು ವ್ಯಾಪಾರದ ನಿಮಿತ್ತ ವಾಸವಾಗಿದ್ದರೂ ಸಹ, ಅವರ ಹೃದಯದಲ್ಲಿ ಚೆಟ್ಟಿನಾಡಿನ ಸಂಸ್ಕೃತಿ ಮನೆ ಮಾಡಿದೆ. ಅವರಲ್ಲಿ ಬಹುತೇಕ ಮಂದಿ ಇಂದಿಗೂ ಸಹನಿಧಾನವಾಗಿ ಮರೆಯಾಗುತ್ತಿರುವ ಸಾಂಪ್ರದಾಯಿಕತೆಯ ಕುರುಹುಗಳಿಗೆ ಅಂಟಿಕೊಂಡಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ರಾಮನಾಡ್ ಸಂಸ್ಥಾನಕ್ಕೆ ಸೇರಿದ್ದ ಈ ಪ್ರದೇಶವು ಈಗ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಐವತ್ಮೂರು ಗ್ರಾಮಗಳು ಮತ್ತು ಪುದುಕೋಟೈ ಜಿಲ್ಲೆಯ ಇಪ್ಪತ್ತು ಗ್ರಾಮಗಳನ್ನು ಒಳಗೊಂಡು ಚೆಟ್ಟಿನಾಡು ಎಂದು ಕರೆಯಲ್ಪಡುತ್ತದೆ. ಕಾರೈಕುಡಿ ಎಂಬ ಪಟ್ಟಣವು ಚೆಟ್ಟಿನಾಡಿನ ಕೇಂದ್ರವಾಗಿದೆ. ಮಧುರೈ ನಗರದಿಂದ ತೊಂಬತ್ತು ಕಿಲೋಮೀಟರ್ ಹಾಗೂ ತಿರುಚ್ಚನಾಪಳ್ಳಿಯಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಕಾರೈಕುಡಿ ಪಟ್ಟಣದ ಸಮೀಪವಿರುವ ಕನಾಡು ಕಥನ್ ಮತ್ತು ಅತ್ತಂಗುಡಿ ಎಂಬ ಊರುಗಳಲ್ಲಿ ಇರುವ ಭವ್ಯ ಚೆಟ್ಟಿನಾಡು ಅರಮನೆಗಳು ಸೇರಿದಂತೆ ಎಪ್ಪತ್ತಮೂರು ಗ್ರಾಮಗಳಲ್ಲಿರುವ ಐದು ಸಾವಿರಕ್ಕೂ ಹೆಚ್ಚು ವಿಶಿಷ್ಠ ವಾಸದ ಮನೆಗಳು ಅವರ ಅಭಿರುಚಿಗೆ ಸಾಕ್ಷಿಯಾಗಿವೆ. ನೋವಿನ ಸಂಗತಿಯೆಂದರೆ, ಒಂದು ಕಾಲದಲ್ಲಿ ನಟ್ಟುಕೊಟ್ಟೈ ಚೆಟ್ಟಿಯಾರ್ ಸಮುದಾಯದ ಶಕ್ತಿ ಮತ್ತು ಸಂಪತ್ತಿನ ಪ್ರತೀಕವಾಗಿದ್ದ ದೈತ್ಯಾಕಾರದ ಮತ್ತು ಮನಮೋಹಕ ಮಹಲುಗಳು ಈಗ ಗತ ವೈಭವಕ್ಕೆ ಸಾಕ್ಷಿಯಾಗಿ ಪಾಳುಬಿದ್ದಿವೆ.
ಚೆಟ್ಟಿಯಾರ್ ಗಳು ತಮ್ಮ ಭವ್ಯವಾದ ಮಹಲುಗಳ ನಿರ್ಮಾಣಕ್ಕಾಗಿ ಈ ನೆಲದಲ್ಲಿ ಜನಿಸಿದ್ದಾರೆ ಎಂಬಂತೆ ಮನೆಗಳನ್ನು ನಿರ್ಮಿಸಿದ್ದಾರೆ. ಚೆಟ್ಟಿಯಾರ್‌ಗಳಿಗೆ ಮಹಲುಗಳ ಕಟ್ಟಡ ನಿರ್ಮಾಣವು ಗಂಭೀರ ವ್ಯವಹಾರವಾಗಿತ್ತು, ಅವರು ಈ ಕನಸಿನ ಮನೆಗಳನ್ನು ನಿರ್ಮಿಸಲು ತಮ್ಮ ಎಲ್ಲಾ ಹಣವನ್ನು ಮತ್ತು ಹೃದಯವನ್ನು ವಿನಿಯೋಗಿಸಿದರು ಜೊತೆಗೆ ಯುರೋಪಿಯನ್ ವಾಸ್ತುಶೈಲಿಯಿಂದ ಸ್ಫೂರ್ತಿ ಪಡೆದರು ಮತ್ತು ಪ್ರಪಂಚದಾದ್ಯಂತದ ತರಿಸಿಕೊಂಡ ಕಚ್ಚಾ ವಸ್ತುಗಳೊಂದಿಗೆ ಕೆಲಸ ಮಾಡಲು ಸ್ಥಳೀಯ ವಾಸ್ತುಶಿಲ್ಪಿಗಳನ್ನು ನಿಯೋಜಿಸಿದರು. ಇದರ ಪರಿಣಾಮವಾಗಿ, ಗೋಥಿಕ್ ಮುಂಭಾಗಗಳು, ಅಮೃತಶಿಲೆಯ ಮಹಡಿಗಳು, ಬೆಲ್ಜಿಯಂ ದೇಶದ ಬಣ್ಣದ ಗಾಜಿನ ಕಿಟಕಿಗಳು ಮತ್ತು ಕನ್ನಡಿಗಳು ಹಾಗೂ ಇಟಲಿಯಿಂದ ತರಿಸಿದ ಅಮೃತಶಿಲೆ, ಇಂಡೋನೇಷ್ಯಾದ ಅಡುಗೆ ಮನೆಯ ಪಾತ್ರೆಗಳು ಹೀಗೆ ಪ್ರತಿ ಮನೆಯೂ ನಿಯಮಿತವಾಗಿ ವೈಶಿಷ್ಟ್ಯವಾಯಿತು. ಇಷ್ಟು ಮಾತ್ರವಲ್ಲದೆ ವಿಶಾಲವಾದ, ತೆರೆದ ಅಂಗಳಗಳು, ಎತ್ತರದ ವರಾಂಡಾಗಳು, ಸಮೃದ್ಧವಾಗಿ ಕೆತ್ತಿದ ಮರದ ಚೌಕಟ್ಟುಗಳು ಮತ್ತು ಹಿಂದೂ ದೇವತೆಗಳನ್ನು ಚಿತ್ರಿಸುವ ಗಾರೆ ಉಬ್ಬುಗಳಂತಹ ಸ್ಥಳೀಯ ತಮಿಳು ವಾಸ್ತುಶೈಲಿಯ ವಿಭಿನ್ನ ಘಟಕಗಳನ್ನು ಸಹ ಅವರ ಸಾಂಸ್ಕೃತಿಕ ಅಭಿರುಚಿಗೆ ಸಾಕ್ಷಿಯಾಗಿವೆ.


ಚೆಟ್ಟಿಯಾರ್ ಸಮುದಾಯದ ಶ್ರೀಮಂತಿಕೆ ಮತ್ತ ಅಭಿರುಚಿಗೆ ಕಾರಣಗಳಿಗೆ ಹತ್ತೊಂತ್ತನೇ ಮತ್ತು ಇಪ್ಪತ್ತ ನೇ ಶತಮಾನದ ಆರಂಭದಲ್ಲಿ, ಚೆಟ್ಟಿನಾಡಿನ ಅನೇಕ ನಿವಾಸಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ವಿಶೇಷವಾಗಿ ಬರ್ಮಾ, ಸಿಲೋನ್, ವಿಯೆಟ್ನಾಂ ಮತ್ತು ಮಲೇಷ್ಯಾದಲ್ಲಿ ಉಪ್ಪು ಮತ್ತು ಸಾಂಬಾರ್ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರು. ಇಷ್ಟು ಮಾತ್ರವಲ್ಲದೆ ಹಣವನ್ನು ಸ್ಥಳೀಯ ವ್ಯಾಪಾರಿಗಳಿಗೆ ನಿಯಮಿತವಾಗಿ ಬಡ್ಡಿಗೆ ನೀಡುವುದು ಅವರ ವೃತ್ತಿಯಾಗಿತ್ತು. ಎರಡನೆಯ ಮಹಾಯುದ್ಧದ ವೇಳೇಗೆ ಅವರ ವಿದೇಶಿ ವ್ಯಾಪಾರ ಸ್ಥಗಿತಗೊಂಡ ನಂತರ ತಮಿಳುನಾಡಿನಲ್ಲಿ ಹಲವು ಉದ್ಯಮ ಮತ್ತು ವ್ಯಾಪಾರಗಳಲ್ಲಿ ತೊಡಗಿಸಿಕೊಂಡರು. ಇವರಲ್ಲಿ ದಕ್ಷಿಣ ಭಾರತದಲ್ಲಿ ಚಲನ ಚಿತ್ರಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಅಂದಿನ ಮದ್ರಾಸ್ ನಗರದ ಎ.ವಿ.ಎಂ. ಸ್ಟುಡಿಯೋ ಮಾಲಿಕರಾದ ಅವಿಚಿ ಮೇಯಪ್ಪ ಚೆಟ್ಟಿಯಾರ್, ಇಂಡಿಯನ್ ಬ್ಯಾಂಕ್ ಸಂಸ್ಥಾಪಕ ಅಣ್ಣಾಮಲೈ ಚೆಟ್ಟಿಯಾರ್, ಕಾರೈಕುಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆ ಹಾಗೂ ವಿಶ್ವ ವಿದ್ಯಾನಿಯವನ್ನು ಸ್ಥಾಪಿಸಿದ ಅಳಗಪ್ಪ ಚೆಟ್ಟಿಯಾರ್, ಚೆಟ್ಟಿನಾಡ್ ಸೀಮೆಂಟ್ ಸೇರಿದಂತೆ ಹಲವಾರು ಉದ್ದಿಮೆಗಳನ್ನು ಸ್ಥಾಪಿಸಿದ ಎಂ.ಎ. ಮುತ್ತಯ್ಯ ಚೆಟ್ಟಿಯಾರ್ ಮತ್ತು ಅವರ ಪುತ್ರ ಎಂ.ಎ.ಎಂ. ರಾಮಸ್ವಾಮಿ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚದಂಬರಂ ಮತ್ತು ತಮಿಳು ಚಿತ್ರರಂಗದ ಪ್ರಖ್ಯಾತ ಕವಿ ಕಣ್ಣದಾಸನ್ ಹಾಗೂ ಚಿತ್ರ ನಿರ್ದೇಶಕ ಎಸ್.ಪಿ.ಮುತ್ತುರಾಮನ್ ಹೀಗೆ ಹಲವು ಮಹನೀಯರನ್ನು ಹೆಸರಿಸಬಹುದು.
ಚೆ್ಟ್ಟಿಯಾರ್ ಸಮುದಾಯದ ಜನರು ತನ್ನ ಶ್ರೀಮಂತಿಕೆಯ ನಡುವೆಯೂ ತಮ್ಮದೇ ಆದ ಚೆಟ್ಟಿನಾಡ್ ಸಂಸ್ಕೃತಿಯನ್ನ ಕಾಪಾಡಿಕೊಂಡು ಆರಾಧಿಸುಸುತ್ತಾ ಬಂದಿದ್ದಾರೆ ಪ್ರತಿ ಚೆಟ್ಟಿನಾಡ್ ಗ್ರಾಮದಲ್ಲಿ ಕನಿಷ್ಠ ಒಂದು ದೇವಾಲಯವಿದೆ, ವೈರವನ್ ಕೋವಿಲ್, ಇರಣಿಯೂರ್, ಕರ್ಪಗ ವಿನಾಯಕರ್, ಕುಂದ್ರಕುಡಿ ಮುರುಗನ್, ಕೊಟ್ಟೈಯೂರ್ ಶಿವನ್ ಮತ್ತು ಕಂದನೂರ್ ಶಿವನ್ ಹೀಗೆ ಹಲವು ದೇವಾಲಯಗಳನ್ನು ಹೊಂದಿರುವುದು ವಿಶೇಷವಾಗಿದೆ. ಪ್ರತಿಯೊಂದು ದೇವಾಲಯದ ವಾರ್ಷಿಕ ಉತ್ಸವವನ್ನು 'ತಿರುವಿಲಾ' ಎಂದು ಕರೆಯಲಾಗುತ್ತದೆ, ದೇವರ ಸಾಮೂಹಿಕ ಆರಾಧನೆಯ ಕ್ರಿಯೆಯಲ್ಲಿ ಇಡೀ ಗ್ರಾಮದವರು ಭಾಗವಹಿಸುತ್ತಾರೆ ಪ್ರತಿಯೊಂದು ದೇವಾಲಯವು ತನ್ನದೇ ಆದ ಊರಣಿ ಎಂಬ ತೊಟ್ಟಿ ಅಥವಾ ಕೊಳವನ್ನು ಹೊಂದಿದ್ದು, ಅದರಲ್ಲಿ ನೀರನ್ನು ಸಂಗ್ರಹಿಸಿ ನೈದಿಲೆಗಳನ್ನು ಬೆಳೆಸಲಾಗುತ್ತದೆ ಮತ್ತು ಪವಿತ್ರ ಆಚರಣೆಗಳಿಗೆ ಬಳಸಲಾಗುತ್ತದೆ.
ಚೆಟ್ಟಿಯಾರ್ ಕುಟುಂಬದಲ್ಲಿ ವಿವಾಹ ಕಾರ್ಯಕ್ರಮವು ಅತ್ಯಂತ ದೊಡ್ಡ ಆಚರಣೆಯಾಗಿದೆ. ವಧುವಿನ ಉಡುಗೆ, ತೊಡುಗೆ ಸಾಂಪ್ರದಾಯಕ ಶೈಲಿಯಲ್ಲಿರುತ್ತದೆ. ಎಲ್ಲಾ ರೀತಿಯ ಚಿನ್ನ, ಬೆಳ್ಳಿ ಆಭರಣಗಳು, ರೇಷ್ಮೆ ಸೀರೆ ಮತ್ತು ಚೆ್ಟ್ಟಿನಾಡ್ ಸಂಸ್ಕೃತಿಯ ಹತ್ತಿಯ ಸೀರೆ ಹಾಗೂ ವಧು ಪತಿಯ ಮನೆಗೆ ಹೋಗುವಾಗ ಎಲ್ಲಾ ಬಗೆಯ ಸಾಮಾನುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದರ ಜೊತೆಗೆ ಚೆಟ್ಟಿಯಾರ್ ಪುರುಷ ಮತ್ತು ಮಹಿಳೆಯರು ಅರವತ್ತು ವರ್ಷಗಳನ್ನು ತಲುಪಿದಾಗ ಕುಟುಂಬದ ಪ್ರಮುಖ ಘಟನೆ ಎಂಬಂತೆ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ಭಾಗವಹಿಸುವುದು ಎಲ್ಲಾ ಕುಟುಂಬ ಸದಸ್ಯರಿಗೆ ಮತ್ತು ಹತ್ತಿರದಲ್ಲಿಲ್ಲದ ಮತ್ತು ಆತ್ಮೀಯರಿಗೆ ಬಹುತೇಕ ಕಡ್ಡಾಯವಾಗಿದೆ.
ಚೆಟ್ಟಿಯಾರ್ ಸಂಸ್ಕೃತಿಯಲ್ಲಿ ಅವರ ಪಾಕ ಪದ್ಧತಿ ಕೂಡ ವಿಭಿನ್ನವಾಗಿದ್ದು ವಿಶಿಷ್ಠವಾಗಿದೆ. ಸಸ್ಯಹಾರಿ ಊಟದಲ್ಲಿ ಬೇಯಿಸಿದ ಬೇಳೆ, ಬದನೆಕಾಯಿ ಗೊಜ್ಜು ಮತ್ತು ನುಗ್ಗೆಕಾಯಿ ಸಾಂಬಾರ್, ಅನ್ನಕ್ಕೆ ತುಪ್ಪ ಹಾಗೂ ಹಪ್ಪಳ, ಉಪ್ಪಿನಕಾಯಿ ಜೊತೆಗೆ ಊಟದಲ್ಲಿ ಪಾಯಸ ಕಡ್ಡಾಯವಾಗಿತ್ತರುತ್ತದೆ. ಮಾಂಸಹಾರ ಭೋಜನದಲ್ಲಿ ಅವರು ತಯಾರಿಸುವ ಮಾಂಸದ ಅಡುಗೆಯು ವಿಶೇಷವಾಗಿ ಕೋಳಿ ಇಲ್ಲವೆ, ಮೇಕೆ ಅಥವಾ ಕುರಿ ಮಾಂಸದ ಸಾಂಬಾರ್ ಹಾಗೂ ಸಮುದ್ರಾಹಾರವನ್ನು ಒಳಗೊಂಡಿರುವ ಭಕ್ಷ್ಯಗಳು ಇಡೀ ತಮಿಳುನಾಢಿನಲ್ಲಿ ಅತ್ಯಂತ ಪ್ರಸಿದ್ಧಿಯಾಗಿವೆ.
ಇಂದು ಕನಾಡುಕಥಾನ್ ಗ್ರಾಮದಲ್ಲಿ ಚೆಟ್ಟಿನಾಡು ಮ್ಯಾನ್ಷನ್ ಎಂಬ ಹೆಸರಿನಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಮಹಲ್ ಒಂದನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಅದೇ ರೀತಿಯಲ್ಲಿ ಕಾರೈಕುಡಿ ಸಮೀಪ ಬಾಂಗಾಲಾ ಹೆಸರಿನಲ್ಲಿ ಚೆಟ್ಟಿಯಾರ್ ಕುಟುಂಬದ ಮಹಿಳೆಯೊಬ್ಬರು ತಮ್ಮ ಕುಟುಂಬದ ಭವ್ಯ ಮಹಲನ್ನು ಹೋಂ ಸ್ಟೇ ನಡೆಸುತ್ತಿದ್ದಾರೆ. ಆದರೆ, ಇವೆಲ್ಲವೂ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಉದ್ಯಮವಾಗಿರುವ ಕಾರಣ ಸಾಮಾನ್ಯ ಪ್ರವಾಸಿಗರಿಗೆ ಊಟ, ವಸತಿ ದುಬಾರಿಯಾಗುತ್ತದೆ. ಕಾರೈಕುಡಿ ಪಟ್ಟಣದಲ್ಲಿ ಅಥವಾ ಪುದುಕೋಟೈ ಜಿಲ್ಲಾ ಕೇಂದ್ರದಲ್ಲಿ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಪಾಯಿನಲ್ಲಿ ಹವಾನಿಯಂತ್ರಿತ ಹೋಟೆಲ್ ಕೊಠಡಿಗಳು ದೊರೆಯುವುದರಿಂದ ಪ್ರವಾಸಿಗರು ಇಲ್ಲಿ ತಂಗಬಹುದು. ಕಾರೈಕುಡಿ ಮತ್ತು ಪುದುಕೋಟೈ ನಡುವಿನ ಅಂತರ ನಲವತ್ತು ಕಿಲೋಮೀಟರ್ ಇದ್ದು ಕನಾಡು ಕಥನ್ ಗ್ರಾಮವು ಮಾರ್ಗ ಮಧ್ಯದಲ್ಲಿದ್ದು ಕಾರೈಕುಡಿಯಿಂದ ಹನ್ನೆರೆಡು ಮತ್ತು ಪುದುಕೋಟೈನಿಂದ ಇಪ್ಪತ್ತೆಂಟು ಕಿ.ಮಿ.ದೂರವಿದೆ. ಪ್ರತಿ ಹತ್ತು ನಿಮಿಷಕ್ಕೆ ಬಸ್ ಗಳು ಸಂಚರಿಸುತ್ತವೆ. ಹಾಗಾಗಿ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಓಡಾಡುತ್ತಾ ಚೆಟ್ಟಿನಾಡ್ ಮಹಲುಗಳನ್ನು ವೀಕ್ಷಿಸಬಹುದು.


ಅಲ್ಲಿನ ಪ್ರತಿ ಮಹಲು ಐವತ್ತಕ್ಕೂ ಹೆಚ್ಚು ಕೊಠಡಿಗಳನ್ನು ಮತ್ತು ಮೂರರಿಂದ ನಾಲ್ಕು ಅಂಗಳಗಳನ್ನು ಹೊಂದಿವೆ. ಹೆಚ್ಚಿನವು ಒಂದು ಎಕರೆಗಿಂತಲೂ ಹೆಚ್ಚು ವಿಸ್ತಾರ ಹೊಂದಿದ್ದು, ಇಡೀ ಬೀದಿಯನ್ನು ಆವರಿಸಿಕೊಂಡಿವೆ ಇದಕ್ಕಾಗಿಯೇ ಸ್ಥಳೀಯರು ಅವರನ್ನು ಪೆರಿಯ ವೀಡು ಅಥವಾ "ದೊಡ್ಡ ಮನೆಗಳು" ಎಂದು ಕರೆಯುತ್ತಾರೆ. ಪುರುಷರು ಯಾವಾಗಲೂ ವ್ಯಾಪಾರದ ನಿಮಿತ್ತ ದೂರವಿರುತ್ತಿದ್ದ ಕಾರಣ, ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿರಲು ಒಟ್ಟಿಗೆ ಇರುವುದು ಅವರಿಗೆ ಮುಖ್ಯವಾಗಿತ್ತು. ಈ ಕಾರಣದಿಂದಾಗಿ ಬಹುತೇಕ ಮಂದಿ ಅವಿಭಕ್ತ ಕುಟುಂಬಗಳಿಗೆ ಒಟ್ಟಿಗೆ ವಾಸಿಸಲು ದೊಡ್ಡ ಮನೆಗಳನ್ನು ನಿರ್ಮಿಸಿದರು. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಐವತ್ತರಿಂದ ಎಪ್ಪತ್ತು ಮಂದಿ ಒಟ್ಟಿಗೆ ವಾಸಿಸುತ್ತಿದ್ದರು.
ಈಗ ಹಲವಾರು ಮಹಲು ಪಾಳು ಬಿದ್ದಿವೆ. ಅವುಗಳ ವಾರಸುದಾರರು ವಿದೇಶಗಳಲ್ಲಿ ವಾಸಿಸುತ್ತಿರುವುದರಿಂದ ನಿರ್ವಹಣೆ ಇಲ್ಲದೆ ಅವನತಿಯ ಅಂಚಿಗೆ ತಲುಪಿವೆ. ಇತ್ತೀಚೆಗೆ ಚೆಟ್ಟಿನಾಡ್ ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ ಹಲವಾರು ಮಂದಿ ಸಾಮೂಹಿಕ ಶ್ರಮಿಸುತ್ತಿದ್ದಾರೆ ಜೊತೆಗೆ ಪ್ರಸಿದ್ಧ ತಾಣವಾಗಿ ಈ ಸ್ಥಳವು ಈಗ ಪ್ರಸಿದ್ಧಿಯಾಗಿದ್ದು, ವಾಸ್ತು ಶಿಲ್ಪ, ಪಾಕಪದ್ಧತಿ, ಚೆಟ್ಟಿನಾಡ್ ಹತ್ತಿ ಸೀರೆಗಳ ತಯಾರಿಕೆ ಮತ್ತು ಚೆಟ್ಟಿನಾಡ್ ಟೈಲ್ಸ್ ಅಂದರೆ ನೆಲಹಾಸುಗಳ ವಿನ್ಯಾಸ ಮತ್ತು ತಯಾರಿಕೆ ಇವುಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ವಾರ್ಷಿಕ ಚೆಟ್ಟಿನಾಡ್ ಪರಂಪರೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಪ್ರಾರಂಭಿಸಿದ ಮೆಯ್ಯಪ್ಪನ್, ಎಂಬುವರು ಚೆಟ್ಟಿನಾಡಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯನ್ನು ಪುನರುಜ್ಜೀವನಗೊಳಿಸುವ ಮೂಲಕ ಪಾಳುಬಿದ್ದ ಮಹಲುಗಳಿಗೆ ಹೊಸ ಜೀವನವನ್ನು ಉಸಿರುಗಟ್ಟುವ ಗುರಿಯನ್ನು ಹೊಂದಿದ್ದಾರೆ. "ನಮ್ಮ ಸಂರಕ್ಷಣೆಯ ಪ್ರಯತ್ನಗಳಿಗೆ ಜಾಗೃತಿ ಬಹುಮುಖ್ಯವಾಗಿದೆ ಮತ್ತು ಪ್ರತಿ ವರ್ಷ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಈ ಉತ್ಸವವು ಅದನ್ನು ಸಾಧಿಸುವ ನಮ್ಮ ಮೊದಲ ಹೆಜ್ಜೆಯಾಗಿದೆ" ಎಂದು ಅವರು ಹೇಳುತ್ತಾರೆ. ಒಟ್ಟಾರೆ ದ್ರಾವಿಡ ಸಂಸ್ಕೃತಿಯಲ್ಲಿ ಚೆಟ್ಟಿನಾಡ್ ಸಂಸ್ಕೃತಿಯನ್ನು ನಾವು ಗಮನಿಸಲೇ ಬೇಕಾದ ಅಪೂರ್ವ ಸಂಸ್ಕೃತಿಯಾಗಿದೆ.
ಎನ್.ಜಗದೀಶ್ ಕೊಪ್ಪ

ಶನಿವಾರ, ಜನವರಿ 18, 2025

ಬೂದಿ ಲೇಪಿತ ಮಹಿಳಾ ನಾಗ ಸಾಧುಗಳ ಕಥನ

 

ಮಹಾ ಕುಂಭದಲ್ಲಿ ಬೂದಿ ಲೇಪಿತ ದೇಹ, ಭಯಾನಕ ಕೂದಲು ಮತ್ತು ಕೇಸರಿ ವಸ್ತ್ರ ಹೊಂದಿರುವ ಮಹಿಳಾ ನಾಗ ಸಾಧುಗಳು  ಈ ಬಾರಿಯ ಮಹಾ ಕುಂಭಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಮಹಿಳಾ ನಾಗಾ ಸಾಧುವಿನ ಪ್ರಯಾಣವು ಸರಳ ಭಕ್ತಿಯದ್ದಲ್ಲ, ಅವರ ಈ ರೂಪಾಂತರವು ಕಠಿಣ ಆಧ್ಯಾತ್ಮಿಕ ಪ್ರಯೋಗಗಳನ್ನು ಒಳಗೊಂಡಿರುತ್ತದೆ ಜೊತೆಗೆ ಆಳವಾದ ಪರಿವರ್ತನೆಯದ್ದು ಹಾಗೂ ಲೌಕಿಕ  ಪ್ರಪಂಚ ಮತ್ತು ಅದರ ಕುರಿತಾದ ಆಲೋಚನೆಯನ್ನು ತ್ಯಜಿಸುವುದು ಕಠಿಣ ಹಾದಿಯ ಜೊತೆಗೆ ಮುಖ್ಯವಾಗಿರುತ್ತದೆ.     ಸನ್ಯಾಸಿಯಾಗುವ ಮೊದಲು, ಆಕೆ ಮಹಿಳೆ, ಹೆಂಡತಿ, ತಾಯಿ, ಮಗಳಾಗಿರುತ್ತಾಳೆ.  ನಂತರ  ಮನೆ , ಭೂಮಿಯ , ಕುಟುಂಬ  ಮತ್ತು ಸಂತೋಷವನ್ನು ಬಿಟ್ಟು ಶಿವನಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ.

 


ಮಹಿಳಾ ನಾಗಾ ಸಾಧುಗಳಿಗೆ ದೀಕ್ಷಾ ಪ್ರಕ್ರಿಯೆಯು ಪುರುಷ ಸಹವರ್ತಿಗಳಿಗೆ ಇರುವಂತೆಯೇ ಕಠಿಣವಾಗಿರುತ್ತದೆ.  ನಾಗ ಸಾಧ್ವಿಣಿಯ ಹೆಸರಿನಲ್ಲಿ ಸನ್ಯಾಸತ್ವ ಸ್ವೀಕರಿಸುವ ಮೊದಲು ಅವರು ತಮ್ಮ ಗುರುಗಳಿಗೆ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸಬೇಕು ಮತ್ತು ತೀವ್ರವಾದ ಆಧ್ಯಾತ್ಮಿಕ ಪ್ರಯೋಗಗಳು ಮತ್ತು ತರಬೇತಿಯನ್ನು ಸಹಿಸಿಕೊಳ್ಳಬೇಕು. ಹಾದಿಯಲ್ಲಿ ಮೊದಲ ಹೆಜ್ಜೆ ಸ್ವಯಂ ತ್ಯಜಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ . ಅಹಂ, ಆಸೆಗಳು ಮತ್ತು ತಮ್ಮ ಗುರುತನ್ನು ಅಳಿಸು ಹಾಕುವುದರ ಜೊತೆಗೆ ಮರೆಯಬೇಕಾಗುತ್ತದೆ.

 ಮಹಿಳಾ ನಾಗಾ ಸಾಧುಗಳು ದೀಕ್ಷೆ ಪಡೆಯುವ ಮೊದಲು ಆರರಿಂದ ಹನ್ನೆರಡು ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯಕ್ಕೆ ಒಳಗಾಗುತ್ತಾರೆ ಮತ್ತು ಅವರಲ್ಲಿ ಅನೇಕರು ದೂರದ ಗುಹೆಗಳು, ಕಾಡುಗಳು ಅಥವಾ ಪರ್ವತಗಳನ್ನು ಆಶ್ರಯಿಸುತ್ತಾರೆ. ಕಟ್ಟುನಿಟ್ಟಾದ ಆಚರಣೆಗಳನ್ನು ಅನುಸರಿಸುತ್ತಾರೆ.  ಪುರುಷಸಾಧುಗಳಿಗಿಂತ ಭಿನ್ನವಾಗಿ  "ಗಂಟಿ" ಎಂಬ ಹೊಲಿಯದ ಕೇಸರಿ ಬಟ್ಟೆಯನ್ನು ಧರಿಸುತ್ತಾರೆ ಮತ್ತು ಅವರ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ತಮ್ಮ ತ್ಯಾಗದ ಭಾಗವಾಗಿ, ಅವರು ತಮ್ಮದೇ ಆದ 'ಪಿಂಡ ದಾನ'ವನ್ನು ಮಾಡುತ್ತಾರೆ - ಇದು ಅವರ ಹಳೆಯ ಜೀವನದ ಮರಣ ಮತ್ತು ಸನ್ಯಾಸಿಗಳಾಗಿ ಪುನರ್ಜನ್ಮವನ್ನು ಸಂಕೇತಿಸುವ ಆಚರಣೆಯಾಗಿದೆ.  ನಾಗ ಸಾಧುಗಳು ಬೇರುಗಳು, ಹಣ್ಣುಗಳು, ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಹಲವು ರೀತಿಯ ಎಲೆಗಳನ್ನು ತಿನ್ನುತ್ತಾರೆ. ಅದೇ ರೀತಿ, ಮಹಿಳಾ ನಾಗ ಸಾಧ್ವಿಣಿಯರು  ಸಹ ಅದನ್ನೇ ತಿನ್ನಬೇಕು. ಕುಂಭ ಮೇಳದ ಅಖಾಡಗಳಲ್ಲಿ ಮಹಿಳಾ ತಪಸ್ವಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ.  ಪುರುಷ ನಾಗ ಸಾಧುವಿನ ನಂತರ ಮಹಿಳಾ ನಾಗ ಸಾಧುಗಳು ಸ್ನಾನ ಮಾಡಲು ಹೋಗುತ್ತಾರೆ.  ಅಖಾಡದಲ್ಲಿ, ನಾಗ ಸಾಧ್ವಿಗಳನ್ನು ಮಾಯಿ, ಅವಧೂತನಿ ಅಥವಾ ನಾಗಿಣಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

 ಒಂದು ಅಂದಾಜಿನ ಪ್ರಕಾರ  ವಾರ್ಷಿಕವಾಗಿ ಹತ್ತರಿಂದ ಹನ್ನೆರೆಡು ಸಾವಿರ ಮಂದಿ ಪುರುಷ ಮಹಿಳೆಯರು ( ಇದರಲ್ಲಿ ವಿದೇಶಿಯರು ಸೇರಿ) ನಾಗ ಸಾಧು ಮತ್ತು ಸಾಧ್ವಿಯಾಗಿ ಪರಿವರ್ತನೆ ಹೊಂದುತ್ತಿದ್ದಾರೆ.  ಜುನಾ ಅಖಾಡದ ಅಂತರರಾಷ್ಟ್ರೀಯ ವಕ್ತಾರ ಶ್ರೀಮಹಾಂತ್ ನಾರಾಯಣ್ ಗಿರಿ, ಜುನಾ ಅಖಾಡದಲ್ಲಿ ಸುಮಾರು ಐದು ಸಾವಿರ ಹೊಸ ನಾಗ ಸನ್ಯಾಸಿಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದಾರೆ. ನಿರಂಜನಿ ಅಖಾಡದಲ್ಲಿ ಸುಮಾರು ನಾಲ್ಕೂವರೆ ಸಾವಿರ ಹೊಸ ನಾಗ ಸನ್ಯಾಸಿಗಳನ್ನು  ಮಾಡುವ ಯೋಹನೆ ಜಾರಿಯಲ್ಲಿದೆ. ಅದೇ ರೀತಿ  ಆವಾಹನ್ ಅಖಾಡದಲ್ಲಿ ಒಂದು ಸಾವಿರ, ಮಹಾನಿರ್ವಾಣಿ ಅಖಾಡದಲ್ಲಿ ಮುನ್ನೂರು, ಆನಂದ್ ಅಖಾಡದಲ್ಲಿ ನಾನೂರು ಮತ್ತು ಅಟಲ್ ಅಖಾಡದಲ್ಲಿ ಇನ್ನೂರು ಜನರನ್ನು ನಾಗ ಸಾಧುಗಳನ್ನಾಗಿ ಮಾಡಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ  ವರದಿ ಮಾಡಿದೆ.

ನಾಗ ಸಾಧುಗಳು ವರ್ಷವಿಡೀ ತಮ್ಮ ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮುಳುಗಿರುತ್ತಾರೆ ಮತ್ತು ಕುಂಭದ ಸಮಯದಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಅವರು ನಾಲ್ಕು ಕೇಂದ್ರಗಳಾದ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ಗಳಲ್ಲಿ ನಡೆಯುವ ಎಲ್ಲಾ ಕುಂಭಗಳಲ್ಲಿ ಭಾಗವಹಿಸುತ್ತಾರೆ. ಶಾಹಿ ಸ್ನಾನದ ಸಮಯದಲ್ಲಿಯೂ ಸಹ ಅವರು ಅಪಾರ ಉತ್ಸಾಹದಿಂದ ತ್ರಿವೇಣಿ ಸಂಗಮದ ಹಿಮಾವೃತ ನೀರನ್ನು ಪ್ರವೇಶಿಸುವಾಗ, ಅತೀಂದ್ರಿಯ ಆನಂದದಲ್ಲಿ ಪರಸ್ಪರ ನೀರನ್ನು ಸಿಂಪಡಿಸುವಾಗ ಅವರ ವಿಶಿಷ್ಟ ಶೈಲಿ ಎದ್ದು ಕಾಣುತ್ತದೆ. ಪುರುಷ ಸಾಧುಗಳಂತೆಯೇ, ಮಹಿಳಾ ನಾಗಾ ಸಾಧುಗಳು ಸಹ ಅಚಲ ನಂಬಿಕೆ, ಭಕ್ತಿ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತಾರೆ. ಅವರ ಪಾಲಿಗೆ  ಕುಂಭಮೇಳದ ಸ್ನಾನವು ಮರ್ತ್ಯ ಮತ್ತು ದೈವಿಕತೆಯ ವಿಲೀನ ಮತ್ತು ಅಜ್ಞಾತ ಲೋಕಕ್ಕೆ  ಪ್ರಯಾಣವಾಗಿರುತ್ತದೆ

 

ಮಾಹಿತಿ ಹಾಗೂ ಚಿತ್ರಗಳು- ಇಂಡಿಯಾ ಟುಡೆ.

ಕನ್ನಡಕ್ಕೆ- ಎನ್.ಜಗದೀಶ್ ಕೊಪ್ಪ.

ಭಾನುವಾರ, ಜೂನ್ 30, 2024

ಸಾವಿನ ಕುದುರೆಯೇರಿ ಹೊರಟವರ ಕಥನ

 



 ಜೂನ್ ತಿಂಗಳ ಮೊದಲ ವಾರದಲ್ಲಿ ಉತ್ತರಖಂಡದ ಗರ್ವಾಲ್ ಎಂಬ ಪ್ರದೇಶದಲ್ಲಿ ಸಹಸ್ರ ತಾಲ್ ಎಂಬ ಸರೋವರದ ಬಳಿ ಟ್ರಕ್ಕಿಂಗ್ ಎಂಬ ಹೆಸರಿನ ಚಾರಣಕ್ಕೆ  ಹೋಗಿದ್ದ ಕರ್ನಾಟಕದ ಇಪ್ಪತ್ತೆರೆಡು ಮಂದಿ ಸದಸ್ಯರಲ್ಲಿ ಒಂಬತ್ತು ಜನರು  ಹಿಮಕುಸಿತ ಮತ್ತು ಹಿಮಗಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಹವಾಮಾನ ವೈಪರಿತ್ಯವೆಂಬುದು ಕಳೆದ ಒಂದು ದಶಕದಿಂದ ಭಾರತದಲ್ಲಿ ಸಾಮಾನ್ಯ ಅಂಶವಾಗಿರುವ ಸಂದರ್ಭದಲ್ಲಿ ಚಂಡಮಾರುತ,  ಅನಿರೀಕ್ಷಿತ ಮಳೆ, ನದಿಗಳ ದಿಡೀರ್ ಪ್ರವಾಹ, ಭೀಕರ ಬರಗಾಲ ಇವುಗಳೆಲ್ಲವೂ ಇಂದಿನ ದಿನಮಾನಗಳಲ್ಲಿ ಭಾರತದ ಭೌಗೂಳಿಕ ಮತ್ತು ಪರಿಸರದ ಲಕ್ಷಣಗಳಾಗಿವೆ. ಇವುಗಳ ಕುರಿತಾಗಿ ಇಂತಹ ಕನಿಷ್ಠ ಜ್ಞಾನವು ಇತ್ತೀಚೆಗೆ ಚಾರಣ ಎಂಬ ಸಾಹಸಕ್ಕೆ ಹೊರಡುವ ಪ್ರವಾಸಿಗರಿಗೆ ಇರಬೇಜಾದ್ದು ಅತ್ಯಾವಶ್ಯಕವಾಗಿದೆ. 

ಇಂತಹ ಪ್ರಾಕೃತಿಕ ದುರಂತಗಳಿಗೆ ಸಿಲುಕುತ್ತಿರುವ ಬಹುತೇಕ ಮಂದಿ ವಿಜ್ಞಾನ ಓದಿಕೊಂಡವರು ಮೇಲಾಗಿ ಟೆಕ್ಕಿಗಳು ಎಂದು ಆಧುನಿಕ ಪರಿಭಾಷೆಯಲ್ಲಿ ಕರೆಸಿಕೊಳ್ಳುವ  ಸಾಪ್ಟ್ ವೇರ್ ಇಂಜಿಯರ್ಗಳಾಗಿರುವುದು ವಿಪರ್ಯಾಸದ ಸಂಗತಿ. ಕಳೆದ ವರ್ಷ ಇದೇ ಪ್ರದೇಶದಲ್ಲಿ ನೆಹರೂ ಟ್ರೆಕ್ಕಿಂಗ್ ಸಂಸ್ಥೆ ನಡೆಸಿದ ಚಾರಣದಲ್ಲಿ ಇಪ್ಪತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.  ಯಾವುದೇ ಸಂವಹನ ವ್ಯವಸ್ಥೆ ಇಲ್ಲದ ಇಂತಹ ಪ್ರದೇಶದಲ್ಲಿ ಅಪಘಾತಕ್ಕೆ ಸಿಲುಕಿದವರ ಸಹಾಯಕ್ಕೆ ಬರಲು ಯಾವುದೇ ರಸ್ತೆ ಸಂಪರ್ಕಗಳು ಇರುವುದಿಲ್ಲ.  ಹೆಲಿಕಾಪ್ಟ ರ್ ಗಳನ್ನು ಹೊರತು ಪಡಿಸಿ, ಯಾವುದೇ ವಾಹನಗಳು ಅಥವಾ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪುವುದು ಅಸಾಧ್ಯವಾದ  ಪರಿಸ್ಥಿತಿ.

ಕಳೆದ ಎರಡೂವರೆ ದಶಕಗಳ ಹಿಂದೆ ಜಗತ್ತಿನಾದ್ಯಂತ ತಂತ್ರಜ್ಞಾನದ ಬದಲಾವಣೆಯ ಬಿರುಗಾಳಿ ಎದ್ದ ಪರಿಣಾಮವಾಗಿ ಆಧುನಿಕ ತಲೆಮಾರು ಜೀವಿಸುವ ಪರಿ ಮತ್ತು ಯೋಚಿಸುವ ವಿಧಾನವನ್ನು ಬದಲಾಯಿಸಿದೆ. ಬೆರಳ ತುದಿಗೆ ಇಡೀ ಜಗತ್ತು ಬಂದು ಕುಳಿತಿರುವಾಗ ಇಡೀ ಜಗತ್ತು ಅವರ ಪಾಲಿಗೆ ಹಳ್ಳಿಯಾಗಿದೆ. ಕೈ ತುಂಬಾ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಿಗೆ ಜಗತ್ತಿನ ಪ್ರತಿಯೊಂದು ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಪಾಹಪಿ ಅವರ ಮಿದುಳನ್ನು ಆಕ್ರಮಿಸಿಕೊಂಡಿದೆ. ಕಾರಣದಿಂದ ಈಜು ಬಾರದಿದ್ದರೂ ಅಪರಿಚಿತ ನದಿ ಮತ್ತು ಸಮುದ್ರಗಳಲ್ಲಿ ಈಜಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ಸಾಪ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು ಹಾಗೂ  ಅಂತಿಮ ಹಂತದ ವೈದ್ಯಕೀಯ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

 ಇವುಗಳ ಜೊತೆಗೆ  ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಐರೋಪ್ಯ ರಾಷ್ಟçಗಳಿಗೆ ತಯಾರಾದ ನಾಲ್ಕರಿಂದ ಐದು ಲಕ್ಷ ರೂಪಾಯಿ ಬೆಲೆ ಬಾಳುವ ಮತ್ತು ನೂರೈವತ್ತು ಕಿಲೊಮೀಟರ್ ವೇಗದ ಸಾಮರ್ಥ್ಯವಿರುವ ಮೋಟಾರ್ ಬೈಕ್ ಗಳು ಭಾರತಕ್ಕೆ ಲಗ್ಗೆ ಇಟ್ಟಿವೆ. ಅತ್ಯಂತ ಜನಸಂದಣಿಯ ನಗರಗಳು ಮತ್ತು ಹದಗೆಟ್ಟ ರಸ್ತೆಗಳ ದೇಶದಲ್ಲಿ ಇಂತಹ ದ್ವಿಚಕ್ರಗಳನ್ನು ಓಡಿಸುವುದು ಅಸಾಧ್ಯ ಮತ್ತು ಅಪಾಯಕಾರಿ ಎಂಬ ಜ್ಞಾನವಿದ್ದರೂ ಸಹ ಇಂದು ದೇಶದ ಬಹುತೇಕ ಮೆಟ್ರೋ ನಗರಗಳಲ್ಲಿ ವಾಹನವು ಟೆಕ್ಕಿಗಳ ಅಚ್ಚುಮೆಚ್ಚಿನ ವಾಹನವಾಗಿದೆ.

ತಮ್ಮನ್ನು ಹೆತ್ತು ಸಲುಹಿದ ಅಪ್ಪ ಅಮ್ಮಂದಿರ ಕಣ್ಗಾವಲಿನಿಂದ ದೂರವಿರುವ ಗಂಡು-ಹೆಣ್ಣುಗಳೆಂಬ  ಈಗಿನ ಯುವ ತಲೆಮಾರಿಗೆ ಮಾಹಿತಿ ತಂತ್ರಜ್ಞಾನದ ಕುಲುಮೆಯಲ್ಲಿ ಬೇಯುತ್ತಿರುವ ಪರಿಣಾಮವಾಗಿ ತಮ್ಮ ದುಡಿಮೆಯ ದೈಹಿಕ ಹಾಗೂ ಮಾನಸಿಕ ದಣಿವನ್ನು ನೀಗಿಸಿಕೊಳ್ಳಲು ಬಿಯರ್ ಅಥವಾ ಮಾದಕ ವಸ್ತಗಳ ಮೊರೆ ಹೋಗಿದ್ದಾರೆ. ಇವರ ಪಾಲಿಗೆ ಹಣವೆಂಬುದು ತೃಣ ಎಂಬAತಾಗಿದೆ. ವಾರಾಂತ್ಯದ ದಿನಗಳಲ್ಲಿ ನಗರಗಳ ಹೊರವಲಯದ ತೋಟಗಳಲ್ಲಿ ಇಡೀ ರಾತ್ರಿ ನಡೆಯುವ ಮೋಜು ಮಸ್ತಿಗೆ ಲೆಕ್ಕವಿಲ್ಲ. ಅದೇ ರೀತಿ ದ್ವಿಚಕ್ರ ವಾಹನ ಓಡಿಸಿ ನಡುರಾತ್ರಿಯಲ್ಲಿ ಸಾವಿನ ಕುದುರೆಯೇರಿ ಹೊರಟವರ ಕುರಿತಾಗಿ ಲೆಕ್ಕವಿಟ್ಟವರಿಲ್ಲ.

ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಚೆನ್ನೆöÊ ನಗರಗಳ ರಸ್ತೆ ಅಫಘಾತಗಳಲ್ಲಿ ಮೃತಪಟ್ಟವರ ಹಿನ್ನಲೆಯನ್ನು ಸೂಕ್ಷö್ಮವಾಗಿ ಗಮನಿಸಿದಾಗ ಇಂದಿನ ಯುವತಲೆಮಾರು ಹಿಡಿದಿರುವ ಸಾವಿನಹಾದಿಯ ವಿವರ ನಮಗೆ ಮನವರಿಕೆಯಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಂತಹ ಸಾವಿನ ಸಂಖ್ಯೆಯು ಶೇಕಡಾ 14 ರಷ್ಟು ಹೆಚ್ಚಾಗಿದ್ದು, ಇವುಗಳಲ್ಲಿ ಶೇಕಡಾ 34 ರಷ್ಟು ಮಂದಿ ಅತಿವೇಗದ ಚಾಲನೆಯಿಂದ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಂಕಿ ಅಂಶಗಳು ಹೇಳುತ್ತವೆ.

ಕಳೆದ ಎರಡು ದಶಕಗಳಲ್ಲಿ ಇಂತಹ ಅನಿರೀಕ್ಷಿತ ಅಪಘಾತಗಳಿಗೆ ಸಾವನ್ನಪ್ಪುತ್ತಿರುವ ಬಹುತೇಕ ಯುವಕ/ಯುವತಿಯರು ಶ್ರೀಮಂತ ಅಥವಾ ದೊಡ್ಡ ದೊಡ್ಡ ಅಧಿಕಾರಿಗಳ ಕುಟುಂಬದಿA ಬಂದವರಲ್ಲ. ಶೇಕಡಾ ೭೫ ರಷ್ಟು ಮಂದಿಯ ಕೌಟುಂಬಿಕ ಹಿನ್ನಲೆಯು ಮಧ್ಯಮ ವರ್ಗ ಅಥವಾ ಬಡಕುಟುಂಬದಿA ಬಂದ ಇತಿಹಾಸ ನಮ್ಮ ಕಣ್ಣೆದೆರು ತರದ ಪುಸ್ತಕದಂತೆ ಇದೆ. ಇವರ ಪೋಷಕರಲ್ಲಿ ಬಹುತೇಕ ಮಂದಿ ಶಾಲಾ ಶಿಕ್ಷಕರು, ಸರ್ಕಾರಿ ಕಚೇರಿಯ ಗುಮಾಸ್ತರು, ರೈತರು, ಕೃಷಿ ಮತ್ತು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ  ಆಟೋ ಚಾಲಕರು, ರಸ್ತೆ ಬದಿ ಹಣ್ಣು, ತರಕಾರಿ ಮಾರಾಟ ಮಾಡಿದ ಬಡವರಿದ್ದಾರೆ. ಇಂತಹ ಪೋಷಕರ ಕನಸುಗಳಲ್ಲಿ ತಾವು ಸಂಪತ್ತನ್ನು ಗಳಿಸಬೇಕು ಅಥವಾ ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎಂಬ ಯಾವುದೇ ಕನಸುಗಳಿರುವುದಿಲ್ಲ. ನಮ್ಮಂತೆ ನಮ್ಮ ಮಕ್ಕಳು ಬದುಕಬಾರದು, ಕಷ್ಠ ಪಡಪಾರದು ಎಂಬ ಏಕೈಕ ಕಾರಣಕ್ಕಾಗಿ ತಾವು ಸಂಪಾದಿಸಿದ ಹಣವನ್ನು ಕೂಡಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿರುತ್ತಾರೆ. ತಾವು ಒಂದು ಹೊತ್ತಿನ ಊಟ ಮಾಡಿ ತಮ್ಮ ಮಕ್ಕಳಿಗೆ ಎರಡು ಹೊತ್ತಿನ ಊಟ ಮತ್ತು ಒಂದು ತಿಂಡಿಗಾಗಿ ತಮ್ಮ ಮೈ ಬೆವರನ್ನು ನೆತ್ತರಾಗಿ ಬಸಿದಿದ್ದಾರೆ.

ಇಂದಿನ ಯುವ ಮನಸ್ಸುಗಳಿಗೆ ಇವುಗಳ ಕುರಿತು ಕನಿಷ್ಠ ಕಾಳಜಿ ಬೇಕು. ತಾವು ತಿನ್ನುವ ಆಹಾರದ ಜೊತೆ, ಕುಡಿಯುವ ನೀರಿನ ಜೊತೆ ಹಾಗೂ ಧರಿಸುವ ಆಧುನಿಕ ಥರಾವರಿ ವಸ್ತçಗಳ ಜೊತೆ ತಮ್ಮ ತಂದೆ, ತಾಯಿ ಮತ್ತು ತಮ್ಮನ್ನು ನಂಬಿರುವ ಅಕ್ಕ ತಂಗಿ ಹಾಗೂ ಅಣ್ಣ ತಮ್ಮಂದಿರ ನೆನಪು ಬಂದರೆ ಸಾಕು ಇಂತಹ ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವುದಿಲ್ಲ. ಯಾವೊಬ್ಬ ತಂದೆ ತಾಯಿಯೂ,  ನಮ್ಮಂತೆ  ಮದ್ದೆ ಊಟ ಮಾಡಬೇಕು ಅಥವಾ ರೊಟ್ಟಿ ಊಟ ಮಾಡಬೇಕು ಎಂದು ಬಯಸುವುದಿಲ್ಲ. ಮಕ್ಕಳು ಪಿಜ್ಜಾ, ಬರ್ಗರ್ ಇವುಗಳನ್ನೇ ತಿನ್ನಲಿ ಅಥವಾ ನೀರಿನ ಬದಲು ಪೆಪ್ಸಿ ಕೋಲಾ ಪಾನೀಯಗಳನ್ನು ಕುಡಿಯಲಿಅಭ್ಯಂತವಿಲ್ಲ. ಆದರೆ, ತಮ್ಮ ಮಕ್ಕಳ  ಭವಿಷ್ಯಕ್ಕಾಗಿ ದುಡಿದು ತಮ್ಮ ಯವ್ವನವನ್ನು ತ್ಯಾಗ ಮಾಡಿದ ಇವರ ಕುಟುಂಬದ ಸದಸ್ಯರು ನಿವೃತ್ತಿಯ ಜೀವನದಲ್ಲಿ ನೆಮ್ಮದಿಯಾಗಿ ಊಟ ಮಾಡಿ, ತಮ್ಮದೇ ನಿವಾಸದಲ್ಲಿ ಸುಖವಾಗಿ ನಿದ್ರೆ ಮಾಡುವ ಹಾಗೆ ಅವರ ಜೀವನ ರೂಪಿಸುವುದು ಇಂದಿನ ಮಕ್ಕಳ ನೈತಿಕ ಜವಾಬ್ದಾರಿಯಾಗಿದೆ.

ಇಂದಿನ ಯುವ ಮನಸ್ಸುಗಳಿಗೆ  ಪರ್ವತಗಳನ್ನು ಹತ್ತಿ ಇಳಿಯುವುದಕ್ಕೆ ಹಿಮಾಲಯದ ಪರ್ವತಗಳೇ ಬೇಕಾಗಿಲ್ಲ. ನಮ್ಮ ಕರ್ನಾಟದಲ್ಲಿ ಕೆಮ್ಮಣ್ಣು ಗುಂಡಿಯಿದೆ, ಕುಮಾರ ಪರ್ವತವಿದೆ, ಚಾಮುಂಡಿ ಮತ್ತು ನಂದಿ ಬೆಟ್ಟಗಳಿವೆ. ನೆರೆಯ ತಮಿಳುನಾಡಿನ ಊಟಿ ಬಳಿ ನೀಲಿಗಿರ ಪರ್ವತವು ಆನೆ ಮಲೈ ಎಂದು ಹೆಸರಾಗಿದೆ. ಬೆಂಗಳೂರಿಗೆ 130 ಕಿಲೊಮೀಟರ್ ದೂರದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಬಳಿ ಹಾರ್ಸ್ಲಿ ಹಿಲ್ ಹೆಸರಿನ ಗಿರಿಧಾಮವಿದೆ. ಇವರೆಲ್ಲಾ ಬಹುತೇಕ ಮಂದಿ ವಿಜ್ಞಾನದ ವಿದ್ಯಾರ್ಥಿಗಳು ಇವರಿಗೆ ಭಾರತದಲ್ಲಿ ಅತ್ಯಂತ ಅಪಾಯಕಾರಿ ಭೂಕಂಪ ಪ್ರದೇಶಗಳು ಯಾವುವು ಎಂಬುದರ ಬಗ್ಗೆ ಕನಿಷ್ಠ ಜ್ಞಾನವಿರಬೇಕು. ಭಾರತದಲ್ಲಿ ಪ್ರಥಮ ಸ್ಥಾನದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳು ಇದ್ದರೆ, ಎರಡನೇ ಸ್ಥಾನದಲ್ಲಿ ಹಿಮಾಲಯ ಪರ್ವತದ ತೆಹ್ರಿ, ಗರ್ವಾಲ್ ಪ್ರದೇಶ ಸೇರಿದಂತೆ ನೆರೆಯ ನೇಪಾಳ ದೇಶ ಇದೆ.  ಅಂಡಮಾನ್ ನಲ್ಲಿ ಸಂಭವಿಸುವ  ಭೂಕಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ ಐದರಿಂದ ಏಳರಷ್ಟು ಇದ್ದರೆ, ಹಿಮಾಲಯದ ಪರ್ವತ ಪ್ರದೇಶದಲ್ಲಿ ನಾಲ್ಕರಿಂದ ಆರರಷ್ಟು ಇದೆ. ರಿಕ್ಟರ್ ಮಾಪಕದಲ್ಲಿ ನಾಲ್ಕನ್ನು ದಾಟಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಇವರುಗಳಿಗೆ ವಿವರಿಸಬೇಕಾಗಿಲ್ಲ. ಆಫ್ಘನಿಸ್ಥಾನವು ಕೂಡಾ ಇದೇ ಅಪಾಯದ ಅಂಚಿನಲ್ಲಿದೆ.

ಗ್ರಾಮೀಣ ಹಿನ್ನಲೆಯಿಂದ ಬಂದ ನನ್ನನ್ನೂ ಒಳಗೊಂಡAತೆ ನನ್ನ ತಲೆಮಾರಿನ ಬಹುತೇಕ ಮಂದಿ ಬಾಲ್ಯದಲ್ಲಿ ನಮ್ಮೂರಿನ ಕೆರೆ, ಕಾಲುವೆ, ನದಿಗಳಲ್ಲಿ ಈಜುತ್ತಾ ಬೆಳೆದವರು. ಬೇಸಿಗೆಯ ದಿನಗಳಲ್ಲಿ ನಮ್ಮ ಹಗಲಿನ ಬಹುತೇಕ ಸಮಯವು ಕೆರೆ ಮತ್ತು ಕಾಲುವೆ ಹಾಗೂ ಊರಿನ ಸಮೀಪವಿರುವ ನದಿಗಳಲ್ಲಿ ಕಳೆದು ಹೋಗುತ್ತಿತ್ತು. ಆದರೆ, ನಾವೆಂದೂ ಅಪರಿಚಿತ ಸ್ಥಳಗಳಲ್ಲಿ ಕೆರೆ ಅಥವಾ ನದಿಗಳಿಗೆ ಇಳಿದು ಈಜುವುದಕ್ಕೆ ಈಗಲೂ ಸಂಹ ಅಂಜುತ್ತೇವೆ. ಏಕೆಂದರೆ, ಅಪರಿಚಿತ ಕೆರೆಗಳ ಆಳ ಮತ್ತು ಹರಿಯುವ ನದಿಗಳಲ್ಲಿ ಇರುವ ಸುಳಿಗಳು ನಮಗೆ ಗೊತ್ತಿರುವುದಿಲ್ಲ. ಇದು ನಾವು ದಕ್ಕಿಸಿಕೊಂಡ ಜ್ಞಾನವಲ್ಲ, ನಮ್ಮ ಅಪ್ಪಂದಿರು ಮತ್ತು ತಾತಂದಿರು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಜ್ಞಾನಪರಂಪರೆ ಇದಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಙಾನದ ಜೊತೆಗೆ ದೇಶಿ ಜ್ಞಾನಪರಂಪರೆಯನ್ನೂ ಯುವ ತಲೆಮಾರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು  ತೀರಾ ಅಗತ್ಯವಾಗಿದೆ.

( ಜುಲೈ ತಿಂಗಳ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ