ಕೊಚ್ಚಿ ಅಥವಾ ಕೊಚ್ಚಿನ್ ಎಂದು ಕರೆಯಾಗುವ ಈ ನಗರವು ಭಾರತದ ನೈಋತ್ಯ ಕರಾವಳಿಯಲ್ಲಿರುವ ಹಾಗೂ ಕೇರಳದ ಬಹು ಸಾಂಸ್ಕೃತಿಕ ತಾಣವಾಗಿದೆ. ಒಂದು ಕಾಲದಲ್ಲಿ ಪೋರ್ಚುಗೀಸರ ಹಾಗೂ ಡಚ್ಚರು ಮತ್ತು ಮಾಪಿಳ್ಳೆ ( ಮುಸ್ಲಿಮರ) ಮತ್ತು ಯಹೂದಿಗಳ ನೆಲೆಬೀಡಾಗಿದ್ದ ಕೊಚ್ಚಿನ್ ನಗರವೂ ಪ್ರಾಚೀನ ಕಾಲದಿಂದಲೂ ಭಾರತದ ಪ್ರಮುಖ ಬಂದರು ಪಟ್ಟಣವಾಗಿತ್ತು. ಇಲ್ಲಿಂದ ಕ್ರಿಸ್ತಶಕ ಮೂರು ಮತ್ತು ನಾಲ್ಕನೇ ಶತಮಾನದಿಂದಲೂ ಪ್ರಮುಖ ಸಾಂಬಾರು ಬೆಳೆ ಅಥವಾ ಪದಾರ್ಥಗಳಾಗಿದ್ದ ಕಾಳುಮೆಣಸು, ಏಲಕ್ಕಿ, ಚಹಾ, ಲವಂಗ, ಕೊಬ್ಬರಿ ಎಣ್ಣೆ ಇತ್ಯಾದಿ ವಸ್ತುಗಳು ಚೀನಾ, ಅರಬ್ ರಾಷ್ಟ್ರಗಳು ಮತ್ತು ಈಜಿಪ್ತ್ ಹಾಗೂ ಟರ್ಕಿ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಹೇರಳವಾಗಿ ರಫ್ತಾಗುತ್ತಿದ್ದವು.
ಈ ಕಾರಣದಿಂದಾಗಿ ಕ್ರಿಸ್ತಶಕ 1565 ರಿಂದ 1603 ರವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಈ ಪ್ರದೇಶವು 1603 ರಲ್ಲಿ ಡಚ್ಚರ ಆಳ್ವಿಕೆಗೆ ಒಳಫಟ್ಟಿತ್ತು. ನಂತರ 1804 ರಲ್ಲಿ ಬ್ರಿಟೀಷರ ಪಾಲಾಗಿ ಸ್ಥಳಿಯ ದೊರೆಗಳ ಆಳ್ವಿಕೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಸಾಹತು ಪ್ರದೇಶವಾಗಿತ್ತು. ವ್ಯಾಪಾರದ ನಿಮಿತ್ತ ಇಲ್ಲಿಗೆ ಆಗಮಿಸಿದ ಮಾಪಿಳ್ಳೈ ಎಂದು ಕರೆಸಿಕೊಳ್ಳುವ ಅರಬ್ಬರು, ಕ್ರೆöÊಸ್ತಧರ್ಮದ ಪ್ರಚಾರಕ್ಕೆ ಬಂದ ಐರೋಪ್ಯರು ಹಾಗೂ ಯಹೂದಿಗಳು, ಇಲ್ಲಿಯೇ ನೆಲೆ ನಿಂತ ಕಾರಣದಿಂದಾಗಿ ಯಹೂದಿಗಳ ನೆಲೆಬೀಡಾಗಿದ್ದ ಕೊಚ್ಚಿನ್ ಬಂದರು ಪಟ್ಟಣವು ಇಂದಿಗೂ ಸಹ ತನ್ನ ಸುಂದರ ಕಡಲ ತೀರ, ಕಲೆಗಳು ಮತು ಬಹುಸಂಸ್ಕೃತಿಗಳ ಕೇಂದ್ರವಾಗಿದೆ. ಹದಿನಾಲ್ಕನೆಯ ಶತಮಾನದಲ್ಲಿ ಚೀನಿಯರಿಂದ ಪರಿಚಿತವಾದ ಚೀನಾದ ಬೃಹದಾಕಾರದ ಮೀನು ಹಿಡಿಯುವ ಬಲೆಯು ಇಲ್ಲಿನ ಪ್ರಧಾನ ಸಂಸ್ಕೃತಿಯ ಲಕ್ಷಣವಾಗಿದೆ. ಅದೇ ರೀತಿ ಮೀನಿನ ತರೇವಾರಿ ಖಾದ್ಯಗಳು ಮತ್ತು ತೆಂಗಿನ ಎಣ್ಣೆಯಿಂದ ತಯಾರಾಗುವ ಸಸ್ಯಹಾರಿ ಆಹಾರ ಪದಾರ್ಥಗಳಿಗೂ ಸಹ ಕೊಚ್ಚಿನ್ ನಗರ ಹೆಸರುವಾಸಿಯಾಗಿದೆ. ಇಂತಹ ಸಾಂಸ್ಕೃತಿಕ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಪ್ರಭಾವಗಳನ್ನು ಪ್ರತಿಬಿಂಬಿಸುವ ಕೊಚ್ಚಿನ್ ನಗರವು ತನ್ನ ಪ್ರಾಚೀನ ಕೇರಳದ ಸಂಸ್ಕೃತಿಯನ್ನು ಒಳಗೊಂಡAತೆ ವಸಾಹತುಶಾಹಿ ಯುಗದ ಸಂಸ್ಕೃತಿಯನ್ನು ಸಹ ತನ್ನ ಒಡಲಲ್ಲಿ ಇರಿಸಿಕೊಂಡಿದೆ.
ನಾವು ಮಟ್ಟಂಚೇರಿಯ ಡಚ್ ಅರಮನೆಯ ಸೊಗಸಾದ ಸಭಾಂಗಣಗಳ ಮೂಲಕ ಅಲೆದಾಡುತ್ತಿರಲಿ ಅಥವಾ ಕೇರಳ ಕಥಕ್ಕಳಿ ಕೇಂದ್ರದಲ್ಲಿ ಸಂಕೀರ್ಣವಾದ ಪ್ರದರ್ಶನಗಳನ್ನು ಮೆಚ್ಚಿಕೊಳ್ಳುತ್ತಿರಲಿ, ಕೊಚ್ಚಿಯು ತನ್ನ ಕಲಾತ್ಮಕ ಉತ್ಸಾಹದಲ್ಲಿ ಮುಳುಗಲು ನಮ್ಮನ್ನು ಆಹ್ವಾನಿಸುತ್ತದೆ. ಕೇರಳ ಜಾನಪದ ವಸ್ತುಸಂಗ್ರಹಾಲಯವು ಕೊಚ್ಚಿನ್ ನಗರದಲ್ಲಿರುವ ಅಪರೂಪದ ವಸ್ತುಸಂಗ್ರಹಾಲಯವಾಗಿದೆ. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವ ಉದ್ದೇಶದಿಂದ ಇದನ್ನು ವಾಣಿಜ್ಯೋದ್ಯಮಿ ಮತ್ತು ಕಲಾ ಉತ್ಸಾಹಿ ಜಾರ್ಜ್ ಜೆ. ಥಾಲಿಯಾತ್ ಎಂಬುವರು ಸ್ಥಾಪಿಸಿದರು. ಈ ಸಂಗ್ರಹಾಲಯವು ಕೇರಳದ ಜಾನಪದ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ವಿವಿಧ ಅಂಶಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಮತ್ತು ಪ್ರದರ್ಶನಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಮೂರು ಅಂತಸ್ತಿನ ಕಲಾತ್ಮಕವಾದ ಕಟ್ಟಡದಲ್ಲಿ ಸಂಗ್ರಹವಾಗಿರುವ ವಿವಿಧ ಸ್ವರೂಪದ ದೀಪದ ಸ್ಥಂಭಗಳು, ಗಣಪತಿ ವಿಗ್ರಹಗಳು ಮತ್ತು ಕೇರಳದ ಪ್ರಸಿದ್ಧ ನೃತ್ಯ ಪ್ರಕಾರಗಳಾದ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂಗಳ ಕಲಾವಿದರು ಧರಿಸುತ್ತಿದ್ದ ವಸ್ತçಗಳು ಹಾಗೂ ಮುಖವಾಡಗಳು ನಮ್ಮನ್ನು ಆಕರ್ಷಿಸುತ್ತವೆ.
ವಸ್ತುಸಂಗ್ರಹಾಲಯದ ಪ್ರವೇಶದ್ವಾರದಲ್ಲಿ ಭವ್ಯವಾದ ಕಾಲ್ ವಿಲಕ್ಕು (ಕಲ್ಲಿನ ದೀಪ) ಮೂಲಕ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಮೊದಲು ಪ್ರವೇಶ ದರವು ವಯಸ್ಕರಿಗೆ ನೂರು ರೂಪಾಯಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಐವತ್ತು ರೂಪಾಯಿಗಳಷ್ಟು ಇತ್ತು. ಈಗ ಅದನ್ನು ದ್ವಿಗುಣಗೊಳಿಸಲಾಗಿದೆ. ಪ್ರವಾಸಿಗರಿಗೆ ಇದು ದುಬಾರಿ ಎನಿಸಿದರೂ ಸಹ ಕನಿಷ್ಠ ಮೂರುಗಂಟೆಗಳ ಕಾಲ ಇಲ್ಲಿನ ವಸ್ತುಗಳನ್ನು ನಾವು ಆಸಕ್ತಿಯಿಂದ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ಡಾ.ಪಿ.ಆರ್. ತಿಪ್ಪೆಸ್ವಾಮಿಯವರು ಮೈಸೂರು ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ್ ಅರಮನೆಯ ಕಟ್ಟದಲ್ಲಿ ಸ್ಥಾಪಿಸಲಾಗಿರುವ ಜಾನಪದ ಸಂಗ್ರಹಾಲಯವು ಏಷ್ಯಾದ ಅತಿದೊಡ್ಡ ಜಾನಪದ ಸಂಗ್ರಹಾಲಯ ಎಂದು ಹೆಸರಾಗಿದೆ. ಇದು ಕರ್ನಾಟಕದ ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗ್ರಹಾಲಯವಾಗಿದೆ. ಇದೇ ರೀತಿಯಲ್ಲಿ ಇಡೀ ಕೇರಳ ಸಂಸ್ಕೃತಿಯನ್ನು ಕೊಚ್ಚಿನ್ ಸಂಗ್ರಾಹಲಯವು ಪ್ರತಿಬಿಂಭಿಸುತ್ತದೆ. ಮರ, ಕಂಚು ಮತ್ತು ಕಲ್ಲಿನ ಶಿಲ್ಪಗಳು, ಸಂಗೀತ ಉಪಕರಣಗಳು, ಸಾಂಪ್ರದಾಯಿಕ ವೇಷಭೂಷಣಗಳು, ಪ್ರಾಚೀನ ಟೆರಾಕೋಟಾ ಆಭರಣಗಳು ಮತ್ತು ಮ್ಯೂರಲ್ ಪೇಂಟಿAಗ್‌ಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿರುವ ಈ ಆಕರ್ಷಕ ವಸ್ತುಸಂಗ್ರಹಾಲಯವು ಮಲಬಾರ್, ಕೊಚ್ಚಿನ್ ಮತ್ತು ತಿರುವಾಂಕೂರ್‌ನ ವಾಸ್ತುಶಿಲ್ಪದ ಶೈಲಿಗಳನ್ನು ಸಂಯೋಜಿಸುವ ವಾಸ್ತುಶಿಲ್ಪದ ಅದ್ಭುತವಾಗಿದೆ.
ಈ ಮೂರು ಅಂತಸ್ತಿನ ವಸ್ತುಸಂಗ್ರಹಾಲಯದ ಪ್ರತಿಯೊಂದು ಮಹಡಿಯು ವಿಶಿಷ್ಟವಾದ ಪ್ರದರ್ಶನಗಳನ್ನು ಹೊಂದಿದೆ, ಮೊದಲ ಮಹಡಿಯಲ್ಲಿ ಸಾಂಪ್ರದಾಯಿಕ ನೃತ್ಯ ವೇಷಭೂಷಣಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಎರಡನೆಯ ಮಹಡಿಯಲ್ಲಿ ಅದ್ಭುತವಾದ ಮ್ಯೂರಲ್ ಪೇಂಟಿAಗ್‌ಗಳನ್ನು ಪ್ರದರ್ಶಿಸಲಾಗುತ್ತದೆ, ಇದು ವಿಶಾಲವಾದ ಸಾಂಸ್ಕೃತಿಕ ಅನುಭವವನ್ನು ನಮಗೆ ನೀಡುತ್ತದೆ. ೧೮೧೫ ರಲ್ಲಿ ಸೀಮೆಎಣ್ಣೆ ಮೂಲಕ ಚಾಲನೆಯಲ್ಲಿದ್ದ ಗಾಳಿ ಬೀಸುತ್ತಿದ್ದ ಟೇಬಲ್ ಪ್ಯಾನ್ ಎಲ್ಲರ ಗಮನ ಸೆಳೆಯುತ್ತದೆ. ಹೆಚ್ಚುವರಿಯಾಗಿ, ವಸ್ತುಸಂಗ್ರಹಾಲಯವು 'ಫೋಕ್ಲೋರ್ ಥಿಯೇಟರ್' ಅನ್ನು ಸಹ ಹೊಂದಿದೆ, ಅಲ್ಲಿ ಪ್ರವಾಸಿಗರು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಕಲಾ ಪ್ರಕಾರಗಳ ನೇರ ಪ್ರದರ್ಶನಗಳನ್ನು ನಾವು ಆನಂದಿಸಬಹುದು, ಈ ಪ್ರದರ್ಶನವು ಕೇರಳದ ಶ್ರೀಮಂತ ಸಂಪ್ರದಾಯಗಳಿಗೆ ಜೀವ ತುಂಬುವ ತಲ್ಲೀನಗೊಳಿಸುವ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ. 'ಸ್ಪೈಸ್ ಆರ್ಟ್ ಕೆಫೆ' ಸಾಂಪ್ರದಾಯಿಕ ಕೇರಳದ ಪಾಕಪದ್ಧತಿಯ ಅಧಿಕೃತ ರುಚಿಯನ್ನು ನೀಡುತ್ತದೆ, ಪುರಾತನ ವಸ್ತುಗಳ ಅಂಗಡಿ, ಆಭರಣ ಮಳಿಗೆ ಮತ್ತು ಮುಖವಾಡಗಳ ಕಲಾ ಗ್ಯಾಲರಿಗಳು ಪ್ರವಾಸಿಗರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಕಾರಣದಿಂದ ಇದು ಬಹುಮುಖಿ ಸಾಂಸ್ಕೃತಿಕ ತಾಣವಾಗಿದೆ.
ಕೇರಳದ ಈ ಜಾನಪದ ವಸ್ತುಸಂಗ್ರಹಾಲಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ನೀವು ಇತಿಹಾಸದ ವಿದ್ಯಾರ್ಥಿಯಾಗಿರಲಿ, ಕಲಾ ಪ್ರೇಮಿಯಾಗಿರಲಿ ಅಥವಾ ಕುತೂಹಲಕಾರಿ ಪ್ರವಾಸಿಗರಾಗಿರಲಿ, ಕೊಚ್ಚಿಯಲ್ಲಿರುವ ಈ ಸಾಂಸ್ಕೃತಿಕ ಪರಂಪರೆಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದು ಕೇರಳದ ಸಾಂಪ್ರದಾಯಿಕ ಕರಕುಶಲ ಮತ್ತು ಕಲಾತ್ಮಕ ಪರಂಪರೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬಲ್ಲದು.
ಎನ್.ಜಗದೀಶ್ ಕೊಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ