ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಕ್ರಿಸ್ತಪೂರ್ವದಿಂದಲೂ ಉಸಿರಾಗಿಸಿಕೊಂಡಿರುವ ತಮಿಳುನಾಡಿನ ನೆಲವು ಭಾಷೆ, ಸಾಹಿತ್ಯ ಸಂಗೀತ, ನೃತ್ಯ, ಕಲೆ ಹೀಗೆ ಎಲ್ಲಾ ಪ್ರಕಾರಗಳಲ್ಲೂ ತನ್ನದೇ ವಿಶಿಷ್ಠ ಸಂಸ್ಕೃತಿಗೆ ಹೆಸರಾಗಿದೆ. ಇಂತಹ ನೆಲದಲ್ಲಿ ಚೆಟ್ಟಿಯಾರ್ ಸಮುದಾಯವು ವ್ಯಾಪಾರ, ಆಭರಣಗಳ ತಯಾರಿಕೆ, ನೇಯ್ಗೆ, ಆಹಾರ ಪದ್ಧತಿ ಮತ್ತು ಅವಿಭಕ್ತ ಕುಟುಂಬ ಪದ್ಧತಿ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ತಾವು ವಾಸಿಸುತ್ತಿದ್ದ ಅರಮನೆಯಂತಹ ಭವ್ಯಮಹಲುಗಳ ಮೂಲಕ ಇಡೀ ದೇಶದ ಗಮನ ಸೆಳೆದ ಸಮುದಾಯವಾಗಿದೆ. ಜೊತೆಗೆ ಬ್ರಾಹ್ಮಣೇತರ ಸಮುದಾಯದಲ್ಲಿ ಹಣಕಾಸಿನ ವ್ಯವವಾರ ಮತ್ತು ವಿದೇಶಿ ವ್ಯಾಪಾರದಲ್ಲಿ ಸಾಧನೆ ಮಾಡಿದ ವಿಶಿಷ್ಠ ಸಮುದಾಯ ಎಂದು ಪ್ರಸಿದ್ಧವಾಗಿದೆ. ಅವರನ್ನು ತಮಿಳೂನಾಢಿನಲ್ಲಿ ನಟ್ಟುಕೊಟ್ಟೈ ಚೆಟ್ಟಿಯಾರ್‌ಗಳು ಎಂದು ಕರೆಯುತ್ತಾರೆ. ಆದರೆ, ಅವರು ತಮ್ಮನ್ನು ನಾಗರಾಥರ್ ಅಂದರೆ ನಗರರ್ತರು ( ನಗರವಾಸಿಗಳು ಅಥವಾ ವ್ಯಾಪಾರಿಗಳು) ಎಂದು ಕರೆಸಿಕೊಳ್ಳಲು ಬಯಸುತ್ತಾರೆ.
ಕಳೆದ ಎರಡು ಶತಮಾನದ ಅವಧಿಯಲ್ಲಿ ಚೆಟ್ಟಿಯಾರ್ ಸಮುದಾಯುವು ಹಣಕಾಸಿನ ವ್ಯವಹಾರ ಮತ್ತ ವ್ಯಾಪಾರದ ಮೂಲಕ ಪ್ರವರ್ಧಮಾನ ಸ್ಥಿತಿಗೆ ತಲುಪಿದರು. ಚೆಟ್ಟಿಯಾರ್ ಸಮುದಾಯದ ಅಥವಾ ಕುಲದ ಸದಸ್ಯರು ವಿವಾಹ, ಹಬ್ಬ, ಮುಂತಾದ ಶುಭಕಾರ್ಯಗಳ್ಲಿ ಒಟ್ಟಿಗೆ ಭಾಗವಹಿಸುವುದರೊಂದಿಗೆ ತಮ್ಮದೇ ಆದ ಜೀವನಶೈಲಿ ಆಚರಣೆಗಳನ್ನು ಅತ್ಯಂತ ಭವ್ಯವಾದ ರೀತಿಯಲ್ಲಿ ನಡೆಸಿಕೊಂಡು ಬಂದವರು. ಇಂದು ಅವರಲ್ಲಿ ಅನೇಕರು ವಿದೇಶಗಳಲ್ಲಿ ಉದ್ಯೋ ಗ ಮತ್ತು ವ್ಯಾಪಾರದ ನಿಮಿತ್ತ ವಾಸವಾಗಿದ್ದರೂ ಸಹ, ಅವರ ಹೃದಯದಲ್ಲಿ ಚೆಟ್ಟಿನಾಡಿನ ಸಂಸ್ಕೃತಿ ಮನೆ ಮಾಡಿದೆ. ಅವರಲ್ಲಿ ಬಹುತೇಕ ಮಂದಿ ಇಂದಿಗೂ ಸಹನಿಧಾನವಾಗಿ ಮರೆಯಾಗುತ್ತಿರುವ ಸಾಂಪ್ರದಾಯಿಕತೆಯ ಕುರುಹುಗಳಿಗೆ ಅಂಟಿಕೊಂಡಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ರಾಮನಾಡ್ ಸಂಸ್ಥಾನಕ್ಕೆ ಸೇರಿದ್ದ ಈ ಪ್ರದೇಶವು ಈಗ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಐವತ್ಮೂರು ಗ್ರಾಮಗಳು ಮತ್ತು ಪುದುಕೋಟೈ ಜಿಲ್ಲೆಯ ಇಪ್ಪತ್ತು ಗ್ರಾಮಗಳನ್ನು ಒಳಗೊಂಡು ಚೆಟ್ಟಿನಾಡು ಎಂದು ಕರೆಯಲ್ಪಡುತ್ತದೆ. ಕಾರೈಕುಡಿ ಎಂಬ ಪಟ್ಟಣವು ಚೆಟ್ಟಿನಾಡಿನ ಕೇಂದ್ರವಾಗಿದೆ. ಮಧುರೈ ನಗರದಿಂದ ತೊಂಬತ್ತು ಕಿಲೋಮೀಟರ್ ಹಾಗೂ ತಿರುಚ್ಚನಾಪಳ್ಳಿಯಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಕಾರೈಕುಡಿ ಪಟ್ಟಣದ ಸಮೀಪವಿರುವ ಕನಾಡು ಕಥನ್ ಮತ್ತು ಅತ್ತಂಗುಡಿ ಎಂಬ ಊರುಗಳಲ್ಲಿ ಇರುವ ಭವ್ಯ ಚೆಟ್ಟಿನಾಡು ಅರಮನೆಗಳು ಸೇರಿದಂತೆ ಎಪ್ಪತ್ತಮೂರು ಗ್ರಾಮಗಳಲ್ಲಿರುವ ಐದು ಸಾವಿರಕ್ಕೂ ಹೆಚ್ಚು ವಿಶಿಷ್ಠ ವಾಸದ ಮನೆಗಳು ಅವರ ಅಭಿರುಚಿಗೆ ಸಾಕ್ಷಿಯಾಗಿವೆ. ನೋವಿನ ಸಂಗತಿಯೆಂದರೆ, ಒಂದು ಕಾಲದಲ್ಲಿ ನಟ್ಟುಕೊಟ್ಟೈ ಚೆಟ್ಟಿಯಾರ್ ಸಮುದಾಯದ ಶಕ್ತಿ ಮತ್ತು ಸಂಪತ್ತಿನ ಪ್ರತೀಕವಾಗಿದ್ದ ದೈತ್ಯಾಕಾರದ ಮತ್ತು ಮನಮೋಹಕ ಮಹಲುಗಳು ಈಗ ಗತ ವೈಭವಕ್ಕೆ ಸಾಕ್ಷಿಯಾಗಿ ಪಾಳುಬಿದ್ದಿವೆ.
ಚೆಟ್ಟಿಯಾರ್ ಗಳು ತಮ್ಮ ಭವ್ಯವಾದ ಮಹಲುಗಳ ನಿರ್ಮಾಣಕ್ಕಾಗಿ ಈ ನೆಲದಲ್ಲಿ ಜನಿಸಿದ್ದಾರೆ ಎಂಬಂತೆ ಮನೆಗಳನ್ನು ನಿರ್ಮಿಸಿದ್ದಾರೆ. ಚೆಟ್ಟಿಯಾರ್‌ಗಳಿಗೆ ಮಹಲುಗಳ ಕಟ್ಟಡ ನಿರ್ಮಾಣವು ಗಂಭೀರ ವ್ಯವಹಾರವಾಗಿತ್ತು, ಅವರು ಈ ಕನಸಿನ ಮನೆಗಳನ್ನು ನಿರ್ಮಿಸಲು ತಮ್ಮ ಎಲ್ಲಾ ಹಣವನ್ನು ಮತ್ತು ಹೃದಯವನ್ನು ವಿನಿಯೋಗಿಸಿದರು ಜೊತೆಗೆ ಯುರೋಪಿಯನ್ ವಾಸ್ತುಶೈಲಿಯಿಂದ ಸ್ಫೂರ್ತಿ ಪಡೆದರು ಮತ್ತು ಪ್ರಪಂಚದಾದ್ಯಂತದ ತರಿಸಿಕೊಂಡ ಕಚ್ಚಾ ವಸ್ತುಗಳೊಂದಿಗೆ ಕೆಲಸ ಮಾಡಲು ಸ್ಥಳೀಯ ವಾಸ್ತುಶಿಲ್ಪಿಗಳನ್ನು ನಿಯೋಜಿಸಿದರು. ಇದರ ಪರಿಣಾಮವಾಗಿ, ಗೋಥಿಕ್ ಮುಂಭಾಗಗಳು, ಅಮೃತಶಿಲೆಯ ಮಹಡಿಗಳು, ಬೆಲ್ಜಿಯಂ ದೇಶದ ಬಣ್ಣದ ಗಾಜಿನ ಕಿಟಕಿಗಳು ಮತ್ತು ಕನ್ನಡಿಗಳು ಹಾಗೂ ಇಟಲಿಯಿಂದ ತರಿಸಿದ ಅಮೃತಶಿಲೆ, ಇಂಡೋನೇಷ್ಯಾದ ಅಡುಗೆ ಮನೆಯ ಪಾತ್ರೆಗಳು ಹೀಗೆ ಪ್ರತಿ ಮನೆಯೂ ನಿಯಮಿತವಾಗಿ ವೈಶಿಷ್ಟ್ಯವಾಯಿತು. ಇಷ್ಟು ಮಾತ್ರವಲ್ಲದೆ ವಿಶಾಲವಾದ, ತೆರೆದ ಅಂಗಳಗಳು, ಎತ್ತರದ ವರಾಂಡಾಗಳು, ಸಮೃದ್ಧವಾಗಿ ಕೆತ್ತಿದ ಮರದ ಚೌಕಟ್ಟುಗಳು ಮತ್ತು ಹಿಂದೂ ದೇವತೆಗಳನ್ನು ಚಿತ್ರಿಸುವ ಗಾರೆ ಉಬ್ಬುಗಳಂತಹ ಸ್ಥಳೀಯ ತಮಿಳು ವಾಸ್ತುಶೈಲಿಯ ವಿಭಿನ್ನ ಘಟಕಗಳನ್ನು ಸಹ ಅವರ ಸಾಂಸ್ಕೃತಿಕ ಅಭಿರುಚಿಗೆ ಸಾಕ್ಷಿಯಾಗಿವೆ.
ಚೆಟ್ಟಿಯಾರ್ ಸಮುದಾಯದ ಶ್ರೀಮಂತಿಕೆ ಮತ್ತ ಅಭಿರುಚಿಗೆ ಕಾರಣಗಳಿಗೆ ಹತ್ತೊಂತ್ತನೇ ಮತ್ತು ಇಪ್ಪತ್ತ ನೇ ಶತಮಾನದ ಆರಂಭದಲ್ಲಿ, ಚೆಟ್ಟಿನಾಡಿನ ಅನೇಕ ನಿವಾಸಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ವಿಶೇಷವಾಗಿ ಬರ್ಮಾ, ಸಿಲೋನ್, ವಿಯೆಟ್ನಾಂ ಮತ್ತು ಮಲೇಷ್ಯಾದಲ್ಲಿ ಉಪ್ಪು ಮತ್ತು ಸಾಂಬಾರ್ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರು. ಇಷ್ಟು ಮಾತ್ರವಲ್ಲದೆ ಹಣವನ್ನು ಸ್ಥಳೀಯ ವ್ಯಾಪಾರಿಗಳಿಗೆ ನಿಯಮಿತವಾಗಿ ಬಡ್ಡಿಗೆ ನೀಡುವುದು ಅವರ ವೃತ್ತಿಯಾಗಿತ್ತು. ಎರಡನೆಯ ಮಹಾಯುದ್ಧದ ವೇಳೇಗೆ ಅವರ ವಿದೇಶಿ ವ್ಯಾಪಾರ ಸ್ಥಗಿತಗೊಂಡ ನಂತರ ತಮಿಳುನಾಡಿನಲ್ಲಿ ಹಲವು ಉದ್ಯಮ ಮತ್ತು ವ್ಯಾಪಾರಗಳಲ್ಲಿ ತೊಡಗಿಸಿಕೊಂಡರು. ಇವರಲ್ಲಿ ದಕ್ಷಿಣ ಭಾರತದಲ್ಲಿ ಚಲನ ಚಿತ್ರಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಅಂದಿನ ಮದ್ರಾಸ್ ನಗರದ ಎ.ವಿ.ಎಂ. ಸ್ಟುಡಿಯೋ ಮಾಲಿಕರಾದ ಅವಿಚಿ ಮೇಯಪ್ಪ ಚೆಟ್ಟಿಯಾರ್, ಇಂಡಿಯನ್ ಬ್ಯಾಂಕ್ ಸಂಸ್ಥಾಪಕ ಅಣ್ಣಾಮಲೈ ಚೆಟ್ಟಿಯಾರ್, ಕಾರೈಕುಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆ ಹಾಗೂ ವಿಶ್ವ ವಿದ್ಯಾನಿಯವನ್ನು ಸ್ಥಾಪಿಸಿದ ಅಳಗಪ್ಪ ಚೆಟ್ಟಿಯಾರ್, ಚೆಟ್ಟಿನಾಡ್ ಸೀಮೆಂಟ್ ಸೇರಿದಂತೆ ಹಲವಾರು ಉದ್ದಿಮೆಗಳನ್ನು ಸ್ಥಾಪಿಸಿದ ಎಂ.ಎ. ಮುತ್ತಯ್ಯ ಚೆಟ್ಟಿಯಾರ್ ಮತ್ತು ಅವರ ಪುತ್ರ ಎಂ.ಎ.ಎಂ. ರಾಮಸ್ವಾಮಿ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚದಂಬರಂ ಮತ್ತು ತಮಿಳು ಚಿತ್ರರಂಗದ ಪ್ರಖ್ಯಾತ ಕವಿ ಕಣ್ಣದಾಸನ್ ಹಾಗೂ ಚಿತ್ರ ನಿರ್ದೇಶಕ ಎಸ್.ಪಿ.ಮುತ್ತುರಾಮನ್ ಹೀಗೆ ಹಲವು ಮಹನೀಯರನ್ನು ಹೆಸರಿಸಬಹುದು.
ಚೆ್ಟ್ಟಿಯಾರ್ ಸಮುದಾಯದ ಜನರು ತನ್ನ ಶ್ರೀಮಂತಿಕೆಯ ನಡುವೆಯೂ ತಮ್ಮದೇ ಆದ ಚೆಟ್ಟಿನಾಡ್ ಸಂಸ್ಕೃತಿಯನ್ನ ಕಾಪಾಡಿಕೊಂಡು ಆರಾಧಿಸುಸುತ್ತಾ ಬಂದಿದ್ದಾರೆ ಪ್ರತಿ ಚೆಟ್ಟಿನಾಡ್ ಗ್ರಾಮದಲ್ಲಿ ಕನಿಷ್ಠ ಒಂದು ದೇವಾಲಯವಿದೆ, ವೈರವನ್ ಕೋವಿಲ್, ಇರಣಿಯೂರ್, ಕರ್ಪಗ ವಿನಾಯಕರ್, ಕುಂದ್ರಕುಡಿ ಮುರುಗನ್, ಕೊಟ್ಟೈಯೂರ್ ಶಿವನ್ ಮತ್ತು ಕಂದನೂರ್ ಶಿವನ್ ಹೀಗೆ ಹಲವು ದೇವಾಲಯಗಳನ್ನು ಹೊಂದಿರುವುದು ವಿಶೇಷವಾಗಿದೆ. ಪ್ರತಿಯೊಂದು ದೇವಾಲಯದ ವಾರ್ಷಿಕ ಉತ್ಸವವನ್ನು 'ತಿರುವಿಲಾ' ಎಂದು ಕರೆಯಲಾಗುತ್ತದೆ, ದೇವರ ಸಾಮೂಹಿಕ ಆರಾಧನೆಯ ಕ್ರಿಯೆಯಲ್ಲಿ ಇಡೀ ಗ್ರಾಮದವರು ಭಾಗವಹಿಸುತ್ತಾರೆ ಪ್ರತಿಯೊಂದು ದೇವಾಲಯವು ತನ್ನದೇ ಆದ ಊರಣಿ ಎಂಬ ತೊಟ್ಟಿ ಅಥವಾ ಕೊಳವನ್ನು ಹೊಂದಿದ್ದು, ಅದರಲ್ಲಿ ನೀರನ್ನು ಸಂಗ್ರಹಿಸಿ ನೈದಿಲೆಗಳನ್ನು ಬೆಳೆಸಲಾಗುತ್ತದೆ ಮತ್ತು ಪವಿತ್ರ ಆಚರಣೆಗಳಿಗೆ ಬಳಸಲಾಗುತ್ತದೆ.
ಚೆಟ್ಟಿಯಾರ್ ಕುಟುಂಬದಲ್ಲಿ ವಿವಾಹ ಕಾರ್ಯಕ್ರಮವು ಅತ್ಯಂತ ದೊಡ್ಡ ಆಚರಣೆಯಾಗಿದೆ. ವಧುವಿನ ಉಡುಗೆ, ತೊಡುಗೆ ಸಾಂಪ್ರದಾಯಕ ಶೈಲಿಯಲ್ಲಿರುತ್ತದೆ. ಎಲ್ಲಾ ರೀತಿಯ ಚಿನ್ನ, ಬೆಳ್ಳಿ ಆಭರಣಗಳು, ರೇಷ್ಮೆ ಸೀರೆ ಮತ್ತು ಚೆ್ಟ್ಟಿನಾಡ್ ಸಂಸ್ಕೃತಿಯ ಹತ್ತಿಯ ಸೀರೆ ಹಾಗೂ ವಧು ಪತಿಯ ಮನೆಗೆ ಹೋಗುವಾಗ ಎಲ್ಲಾ ಬಗೆಯ ಸಾಮಾನುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದರ ಜೊತೆಗೆ ಚೆಟ್ಟಿಯಾರ್ ಪುರುಷ ಮತ್ತು ಮಹಿಳೆಯರು ಅರವತ್ತು ವರ್ಷಗಳನ್ನು ತಲುಪಿದಾಗ ಕುಟುಂಬದ ಪ್ರಮುಖ ಘಟನೆ ಎಂಬಂತೆ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ಭಾಗವಹಿಸುವುದು ಎಲ್ಲಾ ಕುಟುಂಬ ಸದಸ್ಯರಿಗೆ ಮತ್ತು ಹತ್ತಿರದಲ್ಲಿಲ್ಲದ ಮತ್ತು ಆತ್ಮೀಯರಿಗೆ ಬಹುತೇಕ ಕಡ್ಡಾಯವಾಗಿದೆ.
ಚೆಟ್ಟಿಯಾರ್ ಸಂಸ್ಕೃತಿಯಲ್ಲಿ ಅವರ ಪಾಕ ಪದ್ಧತಿ ಕೂಡ ವಿಭಿನ್ನವಾಗಿದ್ದು ವಿಶಿಷ್ಠವಾಗಿದೆ. ಸಸ್ಯಹಾರಿ ಊಟದಲ್ಲಿ ಬೇಯಿಸಿದ ಬೇಳೆ, ಬದನೆಕಾಯಿ ಗೊಜ್ಜು ಮತ್ತು ನುಗ್ಗೆಕಾಯಿ ಸಾಂಬಾರ್, ಅನ್ನಕ್ಕೆ ತುಪ್ಪ ಹಾಗೂ ಹಪ್ಪಳ, ಉಪ್ಪಿನಕಾಯಿ ಜೊತೆಗೆ ಊಟದಲ್ಲಿ ಪಾಯಸ ಕಡ್ಡಾಯವಾಗಿತ್ತರುತ್ತದೆ. ಮಾಂಸಹಾರ ಭೋಜನದಲ್ಲಿ ಅವರು ತಯಾರಿಸುವ ಮಾಂಸದ ಅಡುಗೆಯು ವಿಶೇಷವಾಗಿ ಕೋಳಿ ಇಲ್ಲವೆ, ಮೇಕೆ ಅಥವಾ ಕುರಿ ಮಾಂಸದ ಸಾಂಬಾರ್ ಹಾಗೂ ಸಮುದ್ರಾಹಾರವನ್ನು ಒಳಗೊಂಡಿರುವ ಭಕ್ಷ್ಯಗಳು ಇಡೀ ತಮಿಳುನಾಢಿನಲ್ಲಿ ಅತ್ಯಂತ ಪ್ರಸಿದ್ಧಿಯಾಗಿವೆ.
ಇಂದು ಕನಾಡುಕಥಾನ್ ಗ್ರಾಮದಲ್ಲಿ ಚೆಟ್ಟಿನಾಡು ಮ್ಯಾನ್ಷನ್ ಎಂಬ ಹೆಸರಿನಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಮಹಲ್ ಒಂದನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಅದೇ ರೀತಿಯಲ್ಲಿ ಕಾರೈಕುಡಿ ಸಮೀಪ ಬಾಂಗಾಲಾ ಹೆಸರಿನಲ್ಲಿ ಚೆಟ್ಟಿಯಾರ್ ಕುಟುಂಬದ ಮಹಿಳೆಯೊಬ್ಬರು ತಮ್ಮ ಕುಟುಂಬದ ಭವ್ಯ ಮಹಲನ್ನು ಹೋಂ ಸ್ಟೇ ನಡೆಸುತ್ತಿದ್ದಾರೆ. ಆದರೆ, ಇವೆಲ್ಲವೂ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಉದ್ಯಮವಾಗಿರುವ ಕಾರಣ ಸಾಮಾನ್ಯ ಪ್ರವಾಸಿಗರಿಗೆ ಊಟ, ವಸತಿ ದುಬಾರಿಯಾಗುತ್ತದೆ. ಕಾರೈಕುಡಿ ಪಟ್ಟಣದಲ್ಲಿ ಅಥವಾ ಪುದುಕೋಟೈ ಜಿಲ್ಲಾ ಕೇಂದ್ರದಲ್ಲಿ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಪಾಯಿನಲ್ಲಿ ಹವಾನಿಯಂತ್ರಿತ ಹೋಟೆಲ್ ಕೊಠಡಿಗಳು ದೊರೆಯುವುದರಿಂದ ಪ್ರವಾಸಿಗರು ಇಲ್ಲಿ ತಂಗಬಹುದು. ಕಾರೈಕುಡಿ ಮತ್ತು ಪುದುಕೋಟೈ ನಡುವಿನ ಅಂತರ ನಲವತ್ತು ಕಿಲೋಮೀಟರ್ ಇದ್ದು ಕನಾಡು ಕಥನ್ ಗ್ರಾಮವು ಮಾರ್ಗ ಮಧ್ಯದಲ್ಲಿದ್ದು ಕಾರೈಕುಡಿಯಿಂದ ಹನ್ನೆರೆಡು ಮತ್ತು ಪುದುಕೋಟೈನಿಂದ ಇಪ್ಪತ್ತೆಂಟು ಕಿ.ಮಿ.ದೂರವಿದೆ. ಪ್ರತಿ ಹತ್ತು ನಿಮಿಷಕ್ಕೆ ಬಸ್ ಗಳು ಸಂಚರಿಸುತ್ತವೆ. ಹಾಗಾಗಿ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಓಡಾಡುತ್ತಾ ಚೆಟ್ಟಿನಾಡ್ ಮಹಲುಗಳನ್ನು ವೀಕ್ಷಿಸಬಹುದು.
ಅಲ್ಲಿನ ಪ್ರತಿ ಮಹಲು ಐವತ್ತಕ್ಕೂ ಹೆಚ್ಚು ಕೊಠಡಿಗಳನ್ನು ಮತ್ತು ಮೂರರಿಂದ ನಾಲ್ಕು ಅಂಗಳಗಳನ್ನು ಹೊಂದಿವೆ. ಹೆಚ್ಚಿನವು ಒಂದು ಎಕರೆಗಿಂತಲೂ ಹೆಚ್ಚು ವಿಸ್ತಾರ ಹೊಂದಿದ್ದು, ಇಡೀ ಬೀದಿಯನ್ನು ಆವರಿಸಿಕೊಂಡಿವೆ ಇದಕ್ಕಾಗಿಯೇ ಸ್ಥಳೀಯರು ಅವರನ್ನು ಪೆರಿಯ ವೀಡು ಅಥವಾ "ದೊಡ್ಡ ಮನೆಗಳು" ಎಂದು ಕರೆಯುತ್ತಾರೆ. ಪುರುಷರು ಯಾವಾಗಲೂ ವ್ಯಾಪಾರದ ನಿಮಿತ್ತ ದೂರವಿರುತ್ತಿದ್ದ ಕಾರಣ, ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿರಲು ಒಟ್ಟಿಗೆ ಇರುವುದು ಅವರಿಗೆ ಮುಖ್ಯವಾಗಿತ್ತು. ಈ ಕಾರಣದಿಂದಾಗಿ ಬಹುತೇಕ ಮಂದಿ ಅವಿಭಕ್ತ ಕುಟುಂಬಗಳಿಗೆ ಒಟ್ಟಿಗೆ ವಾಸಿಸಲು ದೊಡ್ಡ ಮನೆಗಳನ್ನು ನಿರ್ಮಿಸಿದರು. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಐವತ್ತರಿಂದ ಎಪ್ಪತ್ತು ಮಂದಿ ಒಟ್ಟಿಗೆ ವಾಸಿಸುತ್ತಿದ್ದರು.
ಈಗ ಹಲವಾರು ಮಹಲು ಪಾಳು ಬಿದ್ದಿವೆ. ಅವುಗಳ ವಾರಸುದಾರರು ವಿದೇಶಗಳಲ್ಲಿ ವಾಸಿಸುತ್ತಿರುವುದರಿಂದ ನಿರ್ವಹಣೆ ಇಲ್ಲದೆ ಅವನತಿಯ ಅಂಚಿಗೆ ತಲುಪಿವೆ. ಇತ್ತೀಚೆಗೆ ಚೆಟ್ಟಿನಾಡ್ ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ ಹಲವಾರು ಮಂದಿ ಸಾಮೂಹಿಕ ಶ್ರಮಿಸುತ್ತಿದ್ದಾರೆ ಜೊತೆಗೆ ಪ್ರಸಿದ್ಧ ತಾಣವಾಗಿ ಈ ಸ್ಥಳವು ಈಗ ಪ್ರಸಿದ್ಧಿಯಾಗಿದ್ದು, ವಾಸ್ತು ಶಿಲ್ಪ, ಪಾಕಪದ್ಧತಿ, ಚೆಟ್ಟಿನಾಡ್ ಹತ್ತಿ ಸೀರೆಗಳ ತಯಾರಿಕೆ ಮತ್ತು ಚೆಟ್ಟಿನಾಡ್ ಟೈಲ್ಸ್ ಅಂದರೆ ನೆಲಹಾಸುಗಳ ವಿನ್ಯಾಸ ಮತ್ತು ತಯಾರಿಕೆ ಇವುಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಇತ್ತೀಚೆಗೆ ವಾರ್ಷಿಕ ಚೆಟ್ಟಿನಾಡ್ ಪರಂಪರೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಪ್ರಾರಂಭಿಸಿದ ಮೆಯ್ಯಪ್ಪನ್, ಎಂಬುವರು ಚೆಟ್ಟಿನಾಡಿನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯನ್ನು ಪುನರುಜ್ಜೀವನಗೊಳಿಸುವ ಮೂಲಕ ಪಾಳುಬಿದ್ದ ಮಹಲುಗಳಿಗೆ ಹೊಸ ಜೀವನವನ್ನು ಉಸಿರುಗಟ್ಟುವ ಗುರಿಯನ್ನು ಹೊಂದಿದ್ದಾರೆ. "ನಮ್ಮ ಸಂರಕ್ಷಣೆಯ ಪ್ರಯತ್ನಗಳಿಗೆ ಜಾಗೃತಿ ಬಹುಮುಖ್ಯವಾಗಿದೆ ಮತ್ತು ಪ್ರತಿ ವರ್ಷ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಈ ಉತ್ಸವವು ಅದನ್ನು ಸಾಧಿಸುವ ನಮ್ಮ ಮೊದಲ ಹೆಜ್ಜೆಯಾಗಿದೆ" ಎಂದು ಅವರು ಹೇಳುತ್ತಾರೆ. ಒಟ್ಟಾರೆ ದ್ರಾವಿಡ ಸಂಸ್ಕೃತಿಯಲ್ಲಿ ಚೆಟ್ಟಿನಾಡ್ ಸಂಸ್ಕೃತಿಯನ್ನು ನಾವು ಗಮನಿಸಲೇ ಬೇಕಾದ ಅಪೂರ್ವ ಸಂಸ್ಕೃತಿಯಾಗಿದೆ.
ಎನ್.ಜಗದೀಶ್ ಕೊಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ