ಶುಕ್ರವಾರ, ಡಿಸೆಂಬರ್ 6, 2013

ವಚನ ಪಿತಾಮಹಾ ಫ.ಗು. ಹಳಕಟ್ಟಿ. ಒಂದು ನೋವಿನ ನೆನಪು

ಅದೊಂದು ಧಾರವಾಡದ ಕಡು ಬೇಸಿಗೆಯ ದಿನ. ೧೯೫೫ರ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಚನ ಸಾಹಿತ್ಯದ ಪಿತಾಮಹನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ದಿನ. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ , ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ವಿ.ವಿ.ಯ ರಿಜಿಸ್ಟ್ರಾರ್ ಆಗಿದ್ದ ಒಡೆಯರ್ ಹಳಕಟ್ಟಿಯವರನ್ನು ಉದ್ದೇಶಿಸಿ ‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘ತಮ್ಮಾ ಕೋಟಿನ ಒಳಗಾ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸಖೆ ತಡಿತೀನಿ ತಮ್ಮಾ ಆದರ ಅವಮಾನ ತಡಿಯಾಂಗಿಲ್ಲ’ ಎಂದಾಗ ಒಡೆಯರ್ ಮೂಕ ವಿಸ್ಮಿತರಾಗಿ ನಿಂತರು.

೧೯೦೪ರಲ್ಲಿ ಮುಂಬೈನಲ್ಲಿ ವಕೀಲಿ ಶಿಕ್ಷಣ ಮುಗಿಸಿ, ಪದವಿಯೊಂದಿಗೆ ಬಿಜಾಪುರಕ್ಕೆ ಬಂದ ಹಳಕಟ್ಟಿಯವರು ಬಯಸಿದ್ದರೆ ವಕೀಲಿ ವೃತ್ತಿಯಲ್ಲೇ ಶ್ರೀಮಂತರಾಗುವ ಅವಕಾಶವಿತ್ತು. ಆದರೆ ಎಲ್ಲದಕ್ಕೂ ತಿಲಾಂಜಲಿ ಇತ್ತು, ಸಮಾಜಸೇವೆ, ವಚನ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿ, ಗಂಧದ ಕೊರಡಿನಂತೆ ಜೀವ ತೆಯ್ದು ತಮ್ಮ ಕೊನೆಯ ದಿನಗಳಲ್ಲಿ ಬಡತನವನ್ನೇ ಹಾಸಿ-ಹೊದ್ದು ಬದುಕಿದ ಫ.ಗು. ಹಳಕಟ್ಟಿ ಎಂಬ ನಿಷ್ಕಳಂಕ ಕರ್ಮಯೋಗಿಯ ಕರುಣಾಜನಕ ಕಥನವಿದು.
ಹಳಕಟ್ಟಿಯವರ ಜನ್ಮಭೂಮಿ ಧಾರವಾಡ. ಆದರೆ ಕರ್ಮಭೂಮಿಯನ್ನಾಗಿ ಅವರು ಆರಿಸಿಕೊಂಡಿದ್ದು ಬಿಜಾಪುರವನ್ನು. ೧೮೬೦ರ ಜುಲೈ ೨ರಂದು ಧಾರವಾಡದಲ್ಲಿ ಗುರುಬಸಪ್ಪ, ದಾನಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಹಳಕಟ್ಟಿಯವರು ಪ್ರೌಢಶಾಲೆಯವರೆಗೆ ಧಾರವಾಡದಲ್ಲೆ ಓದಿದರು. ಆ ಕಾಲದಲ್ಲಿ ಅವರ ತಂದೆ ಗುರುಬಸಪ್ಪ ಧಾರವಾಡದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಧಾರವಾಡದ ಲಿಂಗಾಯಿತ ವಿದ್ಯಾ ಅಭಿವೃದ್ಧಿ ಸಂಸ್ಥೆ ಹಾಗೂ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಮುಂಬೈ ನಗರದಲ್ಲಿ ಬಿ.ಎ. ಪದವಿ ಹಾಗೂ ಎಲ್.ಎಲ್.ಬಿ. ಪದವಿ ಪೂರೈಸಿ ವಕೀಲ ವೃತ್ತಿಗಾಗಿ ೧೯೦೪ರಲ್ಲಿ ಬಿಜಾಪುರಕ್ಕೆ ಬಂದ ಫ.ಗು. ಹಳಕಟ್ಟಿಯವರು ತಮ್ಮ ಕಡೆಯ ಉಸಿರಿರುವ ತನಕ ಬಿಜಾಪುರವನ್ನು ಕಾಯಕ ಭೂಮಿಯನ್ನಾಗಿಸಿಕೊಂಡರು.

ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳಲ್ಲಿ ಆಂಗ್ಲರ ಆಡಳಿತ ಹಾಗೂ ಅವರು ತಂದಿತ್ತ ಶಿಕ್ಷಣದ ಸುಧಾರಣೆಗಳಿಂದ ಸಮಾಜದಲ್ಲಿ ಎಚ್ಚರಿಕೆ ಮೂಡುತ್ತಿದ್ದ ಕಾಲವಾಗಿತ್ತು. ಆಧುನಿಕ ಶಿಕ್ಷಣ ಪಡೆದಿದ್ದ ಹಳಕಟ್ಟಿ ಮನಸ್ಸು ಮಾಡಿದ್ದರೆ ಸರ್ಕಾರದಲ್ಲಿ ಘನತರವಾದ ಹುದ್ದೆ ಪಡೆಯಬಹುದಿತ್ತು. ಇಲ್ಲವೆ ತಮ್ಮ ವಕೀಲಿ ವೃತ್ತಿಯಿಂದ ಶ್ರೀಮಂತಿಕೆ ದಕ್ಕಿಸಿಕೊಳ್ಳ ಬಹುದಿತ್ತು. ಆದರೆ ಬಿಜಾಪುರಕ್ಕೆ ಬಂದ ಅವರು ಅಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುತ್ತಿದ್ದ ಪರಿ ಇವೆಲ್ಲವನ್ನು ಮನಗಂಡು ಸಮಾಜ ಸೇವೆಗೆ ತಮ್ಮ ಬದುಕನ್ನು ಮೀಸಲಾಗಿಸಿದರು.

ತಮ್ಮ ತಂದೆಯಂತೆ ಬಿಜಾಪುರದಲ್ಲಿ , ಬಿಜಾಪುರ ಲಿಂಗಾಯಿತ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದರಲ್ಲದೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಸಮಾಜ ಸೇವೆಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಹಳಕಟ್ಟಿ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡುವುದರ ಮೂಲಕ (೧೯೨೨) ವಚನ ಸಾಹಿತ್ಯ ಸಂಗ್ರಹಣೆ, ಪ್ರಕಟಣೆಗೆ ಕೈಹಾಕಿದರು. ಮುಂದೆ ಈ ಪ್ರವೃತ್ತಿಯೇ ಅವರಿಗೆ ಧ್ಯಾನವಾಯಿತು. ಹನ್ನೆರಡನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವುದು ಅವುಗಳಲ್ಲಿ ಇರಬಹುದಾದ ಧಾರ್ಮಿಕ ಹಾಗೂ ವೈಚಾರಿಕ ಮಹತ್ವದ ಚಿಂತನೆಗಳನ್ನು ಸಾದರಪಡಿಸುವುದು ಇದು ಫ.ಗು. ಹಳಕಟ್ಟಿಯವರ ಜೀವನ ಮಂತ್ರವಾಯಿತು.

೧೯೧೦ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ೧೯೧೨ರಲ್ಲಿ ಸಿದ್ದೇಶ್ವರ ಸಂಸ್ಥೆ, ೧೯೧೩ರಲ್ಲಿ ಸಹಕಾರಿ ಸಂಘ, ೧೯೧೪ರಲ್ಲಿ ಸಿದ್ದೇಶ್ವರ ಹೈಸ್ಕೂಲು ಸ್ಥಾಪಿಸಿ ೧೯೧೯ರಲ್ಲಿ ಬಿಜಾಪುರದ ನಗರಸಭಾ ಸದಸ್ಯರಾಗಿ, ೧೯೨೦ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿ ಹಳಕಟ್ಟಿಯವರು ಕಾರ್ಯ ನಿರ್ವಹಿಸಿದ್ದರೂ ಸಹ ಎಲ್ಲೆಡೆ ತಮ್ಮ ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕಿನೊಂದಿಗೆ ಗುರುತಿಸಿಕೊಂಡರು.

೧೯೨೩ರಲ್ಲಿ ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ ಸಂಕಲನವನ್ನು ಹೊರತರುವ ಮೂಲಕ ವಚನಗಳ ಸಂಗ್ರಹಕ್ಕೆ ಕೈಹಾಕಿದ ಹಳಕಟ್ಟಿಯವರು ಇವುಗಳ ಪ್ರಕಟಣೆಗಾಗಿ ೧೯೨೬ರಲ್ಲಿ ‘ಹಿತಚಿಂತಕ’ ಎಂಬ ಮುದ್ರಣಾಲಯ ಪ್ರಾರಂಭಿಸಿ ‘ಶಿವಾನುಭಾವ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

೧೯೨೬ರಿಂದ ೧೯೬೧ರವರೆಗೆ ನಿರಂತರವಾಗಿ ಈ ಪತ್ರಿಕೆಯಲ್ಲಿ ವಚನಗಳ ಬಗ್ಗೆ, ಶಿವಶರಣರ ಬಗ್ಗೆ ಹಳಕಟ್ಟಿಯವರು ಬರೆದ ಲೇಖನಗಳ ಸಂಗ್ರಹಗಳು ಒಟ್ಟು ೭೨ ಕೃತಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆ ಅನ್ಯರ ಕೃತಿಗಳು ಸೇರಿ ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂದೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ವಚನಗಳಲ್ಲಿ ಅಡಗಿರುವ ಶಿವಶರಣರ ತತ್ವ ಮತ್ತು ಚಿಂತನೆಗಳನ್ನು ಜನತೆಗೆ ತಿಳಿಸುವುದೇ ಜೀವನದ ಪರಮ ಗುರಿ ಎಂದು ನಂಬಿಕೊಂಡಿದ್ದ ಹಳಕಟ್ಟಿಯವರು ತಮ್ಮ ಜೀವಿತದ ಕೊನೆಯವರೆಗೂ ಬಿಜಾಪುರದಲ್ಲಿ ಸ್ವಂತ ಮನೆ ಮಾಡಿಕೊಳ್ಳದೆ ಫಕೀರನಂತೆ ಬದುಕಿಬಿಟ್ಟರು. ತುಂಬ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆಗೆ ಯಾರಾದರು ೨ರೂ ಸಹಾಯಧನ ಮಾಡಿದರೆ ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಿ ಕೃತಜ್ಞತೆ ಅರ್ಪಿಸುತ್ತಿದ್ದರು.
ತಾವು ಈ ರೀತಿ ಕಷ್ಟಗಳ ಸರಮಾಲೆಯ ನಡುವೆ ಬದುಕಿದ್ದರ ಬಗ್ಗೆ ಅವರು ಎಂದೂ ವಿಷಾದ ಪಡಲಿಲ್ಲ. ತಮ್ಮ ‘ನನ್ನ ೭೫ ವರ್ಷಗಳು’ ಎಂಬ ಕೃತಿಯಲ್ಲಿ ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ಗುರುಬಸಪ್ಪ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇವರನ್ನು ಹಳಕಟ್ಟಿಯವರು ತುಂಬು ಹೃದಯದಿಂದ ಸ್ಮರಿಸಿದ್ದಾರೆ.
 

ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ಅರ್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು ‘ವಚನ ಪಿತಾಮಹ’ ಎಂಬ ಬಿರುದು ನೀಡಿ ಗೌರವಿಸಿದೆ.


ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ ೧೦೮ ಶಿಕ್ಷಣ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕಾರಣಕ್ಕಾಗಿ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಂ.ಬಿ. ಪಾಟೀಲರು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅವರ ಸಮಗ್ರ ಸಾಹಿತ್ಯವನ್ನು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ನೇತೃತ್ವದಲ್ಲಿ ೧೫ ಬೃಹತ್ ಸಂಪುಟಗಳಲ್ಲಿ ಹೊರತಂದಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಬಿಜಾಪುರ ನಗರ ಸಭೆ, ಅಲ್ಲಿನ ಒಂದು ರಸ್ತೆಗೆ ಹಳಕಟ್ಟಿಯವರ ಹೆಸರಿಡಲು ಸಭೆ ಸೇರಿ , ಅವರು ವಾಸವಾಗಿದ್ದ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಫ.ಗು. ಹಳಕಟ್ಟಿಯವರು ಬಿಜಾಪುರದ ಎಲ್ಲಾ ಬಡಾವಣೆಗಳಲ್ಲೂ ಒಂದು ಅಥವಾ ಎರಡು ವರ್ಷ ವಾಸವಾಗಿದ್ದರು. ಮನೆಯ ಬಾಡಿಗೆ ಹೆಚ್ಚಾಗುತ್ತಿದ್ದಂತೆ, ತಮ್ಮ ವರಮಾನಕ್ಕೆ ತಕ್ಕಂತೆ ಬಾಡಿಗೆ ಮನೆ ಹುಡುಕಿ ಹೊರಡುತ್ತಿದ್ದರು. ಇಡೀ ಬಿಜಾಪುರದ ರಸ್ತೆಗಳಿಗೆ ಹಳಕಟ್ಟಿಯವರ  ಹೆಸರಿಡಬೇಕಾದ ಸಮಸ್ಯೆ ಎದುರಾಯಿತು. ಅಂತಿಮವಾಗಿ ರಸ್ತೆಗೆ ಹೆಸರಿಡುವ ಬದಲು, ಅಲ್ಲಿನ ಪ್ರಸಿದ್ಧ ಸಿದ್ದೇಶ್ವರ ಗುಡಿ ಎದುರು ಅವರ ಪ್ರತಿಮೆ ಸ್ಥಾಪಿಸಲು ನಿರ್ಧಾರವಾಯಿತು.
ಬಿಜಾಪುರದಲ್ಲಿ ಬಿ.ಎಲ್.ಡಿ. ಸಂಸ್ಥೆ ಸ್ಥಾಪಿಸಿರುವ  ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಹಳಕಟ್ಟಿಯವರ ಜೀವನ ಸಾಧನೆಯನ್ನು ಗಮನಿಸಿದಾಗ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಂತಹ ಸಾಧನೆ ಮಾಡಲು ಸಾಧ್ಯವೆ ಎಂಬ ವಿಸ್ಮಯ ಮೂಡುತ್ತದೆ. ಈ ಕಾರಣಕ್ಕಾಗಿ ಬಿಜಾಪುರ ನಗರಸಭೆ ಸಿದ್ದೇಶ್ವರ ಬ್ಯಾಂಕ್‌ನ ಎದುರು ಹಳಕಟ್ಟಿಯವರ ಆಳೆತ್ತರದ ಪ್ರತಿಮೆ ನಿಲ್ಲಿಸಿ ಗೌರವ ಸೂಚಿಸಿದೆ
ಮಾಹಿತಿ ಸೌಜನ್ಯ- ಡಾ. ಎಂ.ಎಂ. ಕಲ್ಬರ್ಗಿ

ಬುಧವಾರ, ಡಿಸೆಂಬರ್ 4, 2013

ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳು



ಕನ್ನಡದ ಸಾಂಸ್ಕೃತಿಕ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ವಿಶೇಷವಾಗಿ ಇತ್ತೀಚೆಗಿನ ದಿನಗಳಲ್ಲಿ  ಜರುಗುತ್ತಿರುವ ಅನೇಕ ಕ್ಷಿಪ್ರ ವಿದ್ಯಾಮಾನಗಳು, ನಿಜಕ್ಕೂ ನಮ್ಮಲ್ಲಿ ಗಾಬರಿಯನ್ನು ಹುಟ್ಟಿಸುತ್ತಿವೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟುವ ಸಂಪ್ರದಾಯ ಅಥವಾ ಇತಿಹಾಸ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಅರಕೇಸರಿಯ ಆಸ್ಥಾನದಲ್ಲಿ ಇದ್ದುಕೊಂಡು ಅರಸೊತ್ತಿಗೆಯ ಕ್ರೌರ್ಯವನ್ನು ಟೀಕಿಸುವ ಧೈರ್ಯ  ಪಂಪ, ನಿಗಿತ್ತು.  ರನ್ನ ತನ್ನ  ಗಧಾಯುದ್ಧದ ಮಹಾಕಾವ್ಯದ ‘”ದುರ್ಯೋಧನ ವಿಲಾಪಂ” ಭಾಗದಲ್ಲಿ ಮಹಾಭಾರತದ ದುರ್ಯೋಧನನನ್ನು ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳು
ಹೊಸದಾಗಿ ಚಿತ್ರಿಸುವುದರ ಮೂಲಕ ಸೃಜನಶೀಲತೆಯ ಪರಾಕಾಷ್ಟೆಯನ್ನು ಮುಟ್ಟಿದ.  ಇದರ ಮುಂದುವರಿದ ಭಾಗವಾಗಿ ಶೂದ್ರ ತಪಸ್ವಿ ಎಂಬ ನಾಟಕ ರಚನೆ ಮಾಡುವುದರ ಜೊತೆಗೆ   ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಮಂಥರೆ  ಪಾತ್ರಕ್ಕೆ ಹೊಸ ಜೀವ ಮತ್ತು ರೂಪ ಕೊಟ್ಟ ಕುವೆಂಪು ನಮ್ಮ ನಡುವೆ ಇದ್ದರು. ಇಂತಹ  ಮಹಾನೀಯರು ತಮ್ಮ ಸೃಜನಶೀಲತೆಯ ಮೂಲಕ  ಚರಿತ್ರೆಯನ್ನು ಮುರಿದು ಕಟ್ಟುವುದರ ಮೂಲಕ  ಹೊಸದೆಂಬಂತೆ  ರೂಪಿಸಿದ ವೈಖರಿ ಕನ್ನಡ ಸಾಹಿತ್ಯದಲ್ಲಿ  ಇವೊತ್ತಿಗೂ ಅಜರಾಮರವಾಗಿ ಉಳಿದಿದೆ.
ನಮ್ಮ ಪುರಾಣ ಮಹಾ ಕಾವ್ಯಗಳಾದ ಮಹಾ ಭಾರತ ಮತ್ತು ರಾಮಾಯಣ ಕೃತಿಗಳು ಇತಿಹಾಸದುದ್ದಕ್ಕೂ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ  ಹಲವು ರೂಪಗಳಲ್ಲಿ ಮೈದಾಳಿವೆ. ಎ.ಕೆ. ರಾಮಾನುಜನ್ ಸಂಪಾದಿಸಿರುವ “ ಮುನ್ನೂರು ರಾಮಾಯಣಗಳು” ಕೃತಿಯಲ್ಲಿ ದಾಖಲಾಗಿರುವ ವಿಭಿನ್ನ ರಾಮಾಯಣದ ಕಥೆಗಳು ನಮ್ಮನ್ನು ದಂಗು ಬಡಿಸುತ್ತಿವೆ. ಇಂತಹ ಪರಂಪರೆಯ ಈ ನೆಲದಲ್ಲಿ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ದಿಟ್ಟ ಹೆಣ್ಣು ಮಗಳೊಬ್ಬಳು ( ಬಿ.ವಿ.ಭಾರತಿ) ತನ್ನ ಹೋರಾಟದ ಕಥನವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟು, ತಮ್ಮ  ಕೃತಿಗೆ ಅರ್ಥಪೂರ್ಣವಾದ ಹಾಗೂ ರೂಪಕ ಭಾಷೆಯಲ್ಲಿ “ ಬುದ್ಧನಿಗೆ ಸಾಸಿವೆ ತಂದವಳು” ಎಂಬ ಶಿರ್ಷಿಕೆ ನೀಡಿದ್ದರು. ಆದರೆ ಅದಕ್ಕೆ ಅಡಚಣೆ ಮತ್ತು ಬೆದರಿಕೆಯ ಮಾತುಗಳು ಕೇಳಿಬಂದವು. ಈ ಬೆಳವಣಿಗೆ ತಾಲಿಬಾನ್ ಗಳು ಕೇವಲ ಆಪ್ಘಾನಿಸ್ಥಾನ, ಅಥವಾ ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಇದ್ದಾರೆ ಎಂಬ ಅಪಾಯದ ಮುನ್ಸೂಚನೆ ನೀಡಿದಂತಿದೆ.

ದೇವರ ಅಸ್ತಿತ್ವದ ಬಗ್ಗೆ ಮೌನ ತಾಳಿದ, ಮತ್ತು  ಆಸೆಯೆಂಬುದು  ದುಃಖಕ್ಕೆ ಮೂಲ ಎಂಬ ಅರ್ಥಪೂರ್ಣ ಸಂದೇಶವನ್ನು ಜಗತ್ತಿಗೆ ಸಾರಿದ ಬುದ್ಧ  ಯಾವತ್ತಿಗೂ ಯಾರ ಆಸ್ತಿಯಾಗಿರಲಿಲ್ಲ. ಅವನ ಚಿಂತನೆಗಳು, ಯಾವೊಂದು ಸಮುದಾಯದ ಅಥವಾ ವ್ಯಕ್ತಿಯೊಬ್ಬನ ಸ್ವತ್ತಾಗಿರಲಿಲ್ಲ.  ವಿವೇಕದ ಪ್ರಜ್ಙೆಯನ್ನು ಕಳೆದುಕೊಂಡು, ಬುದ್ಧನ ಅಮಲನ್ನು ನೆತ್ತಿಗೇರಿಸಿಕೊಂಡವರು ಮಾತ್ರ ಈ ರೀತಿಯ ಪ್ರತಿರೋಧ ತೋರಬಲ್ಲರು. ಸಾವು ಕುರಿತ ಕಟು ವಾಸ್ತವನ್ನು ಜಗತ್ತಿಗೆ ಪರಿಚಯಿಸಲು ಬುದ್ಧ, ಸಾವಿಲ್ಲದ ಮನೆಯಿಂದ ಸಾಸಿವೆ ತರುವಂತೆ  ಕಿಸಗೌತಮಿಗೆ ಹೇಳಿರುವುದು ಕೂಡ ರೂಪಕದ ಭಾಷೆಯಲ್ಲಿ ಎಂಬುದನ್ನು ನಾವು ಮರೆಯಬಾರದು. ಅಂತಹದೇ ರೂಪಕವನ್ನು ಬಳಸಿರುವ ಲೇಖಕಿ ಭಾರತಿ ‘ ಸಾವಿನ ಹೊಸ್ತಿಲಲ್ಲಿ ತಲೆಇಟ್ಟು ಮಲಗಿದ್ದರೂ ಸಹ ತಮ್ಮ ಮನಸ್ಸಿನ ಇಚ್ಛಾಶಕ್ತಿಯಿಂದ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದು ಬಂದಿರುವುದು ವಿಶೇಷ,. ಈ ಕಾರಣಕ್ಕಾಗಿ ಅವರು ತಮ್ಮ ಅನುಭವಕ್ಕೆ ಅರ್ಥ ಪೂರ್ಣ ಶಿರ್ಷಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಲೇಖಕಿ ಭಾರತಿಯವರಾಗಲಿ, ಇದನ್ನು ಈ ಕ್ಷಣದಲ್ಲಿ ಬರೆಯುತ್ತಿರುವ ನಾನಾಗಲಿ, ಓದುತ್ತಿರುವ ನೀವಾಗಲಿ ಯಾರೂ ಈ ಭೂಮಿಯ ಮೇಲೆ ಶಾಶ್ವತವಲ್ಲ. ಆದರೂ ನಾವುಗಳು ನಮ್ಮ ಪುರಾಣದಲ್ಲಿ, ಇತಿಹಾಸದಲ್ಲಿ, ವರ್ತಮಾನದ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ “ ಸಾವಿಲ್ಲದವನು” ಅಥವಾ ಚಿರಂಜಿವಿ ಎಂಬ ಪದಗಳನ್ನು ಬಳಸಿದ್ದೇವೆ, ಬಳಸುತ್ತಿದ್ದೇವೆ, ಇವುಗಳನ್ನು ನಮ್ಮ ಶಬ್ಧಕೋಶದಿಂದ ಅಳಿಸಿ ಹಾಕಲು ಸಾಧ್ಯವೆ?
ಕಳೆದ ಶನಿವಾರ ರಾತ್ರಿ  ಹತ್ತು ಗಂಟೆ ವೇಳೆಯಲ್ಲಿ  ಊಟ ಮುಗಿಸಿ, ಆತ ತಾನೆ ರಾತ್ರಿಯ ಓದಿಗೆ ಪುಸ್ತಕ ಕೈಗೆತ್ತಿಕೊಳ್ಳುತ್ತಿದ್ದಂತೆ, ಭಾರತಿಯವರ ದೂರವಾಣಿ ಬಂತು. ಅವರು ಶಿರ್ಷಿಕೆಯ ವಿವಾದವನ್ನು ನನಗೆ ವಿವರಿಸಿದರು. ಯಾವ ಕಾರಣಕ್ಕೂ ಶಿರ್ಷಿಕೆ ಬದಲಾಯಿಸಬಾರದು, ಭಿನ್ನ ಆಲೋಚನೆಯ ಜನರ ಅಪಸ್ವರಗಳಿಗೆ ಬೆಲೆಕೊಡಬಾರದು, ಎಂದು ಸಮಾಧಾನ ಹೇಳಿ, ನಾವು ಸಮಾನ ಮನಸ್ಕರು ನಿಮ್ಮೊಂದಿಗೆ ಇದ್ದೀವಿ ಎಂದು ಭರವಸೆ ನೀಡಿದೆ. ಭಾನುವಾರ ಬೆಳಿಗ್ಗೆ ಕಛೇರಿಗೆ ಹೋದವನು ಮನಸ್ಸು ತಡೆಯಲಾರದೆ, ಮತ್ತೇ ಧೈರ್ಯ ತುಂಬಲು ಅವರಿಗೆ ಕರೆ ಮಾಡಿದಾಗ. ಅವರಿಂದ ಬಂದ ಮಾತುಗಳು ನನ್ನನ್ನು ಮೌನಕ್ಕೆ ದೂಡಿಬಿಟ್ಟವು. ತೀರಾ ಹತಾಶರಾಗಿ ಮಾತನಾಡಿದ ಅವರು, “ ಅಣ್ಣಾ,  ನನಗೆ ಬೇಕಾಗಿರುವುದು, ನೆಮ್ಮದಿ ಮತ್ತು ನಿಶ್ಚಿಂತೆ ಮಾತ್ರ. ಇವುಗಳಿಗಾಗಿ ಏನನ್ನೂ ತ್ಯಾಗ ಮಾಡಲು ಸಿದ್ಧಳಿದ್ದೀನಿ. ಎಂದೂ ದೇವರು, ಧರ್ಮ ಮತ್ತು ಜಾತಿಯನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬುದ್ಧನ ಪ್ರಶಾಂತ ನಗೆ ಮತ್ತು ಮೌನದ ಮೂರ್ತಿಯಂತಿರುವ  ಅವನ ಪ್ರತಿಮೆಯಲ್ಲಿ ಒಂದಿಷ್ಟು ಸುಖ ಕಂಡಿದ್ದೆ.  ಅದು ಕೆಲವರ ಪಾಲಿಗೆ ನೋವು ತರುವುದಿದ್ದರೆ, ಇಂದಿನಿಂದ ನನಗೆ ಬುದ್ದನೂ ಬೇಡ, ಬಸವನೂ ಬೇಡ. ಬೇಕಿರುವುದು ನೆಮ್ಮದಿ  ಮಾತ್ರ ಎಂದರು. ಅವರ ಮನೆಗೆ, ಅವರ ಹತ್ತಿರದ ಗೆಳತಿಯರಿಗೆ, ಬಂಧುಗಳಿಗೆ ಫೋನ್  ಕರೆ ಮಾಡಿ ಬೆದರಿಕೆ ಹಾಕುವಂತಹ ತಪ್ಪನ್ನು ಈ ಅಮಾಯಕ ಹೆಣ್ಣು ಮಗಳು ಮಾಡಿದ್ದಾದರೂ ಏನು? ಬುದ್ಧನಿಗೆ ಮಾಡಿದ ಅಪಮಾನವಾದರೂ ಏನು?

ಇಂತಹ ಘಟನೆಗಳ ಕುರಿತಂತೆ ಆವೇಶದ ಪ್ರತಿಭಟನೆಗಳು, ವಿರೋಧಗಳು ಭಾರತದ ನೆಲದ ಸಂಸ್ಕೃತಿಗೆ ಹೊಸ ಸಂಗತಿಗಳೇನಲ್ಲ. ಆದರೆ, ಇದರಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆದ ನಷ್ಟ ಮಾತ್ರ ಅಗಣಿತವಾದುದು. ಇಂತಹ ಅನೇಕ ಗಂಭೀರ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಸದ್ದಿಲ್ಲದೆ ಈ ಜಗತ್ತಿನಲ್ಲಿ ಜರುಗುತ್ತಿವೆ. ಇದಕ್ಕೆ  ಈ ಉದಾಹರಣೆ ಸಾಕು.
ಕೆಲ ದಿನಗಳ ಹಿಂದೆ  ಪಠ್ಯ ಪುಸ್ತಕವೊಂದರಲ್ಲಿ ಅಂಬೇಡ್ಕರ್ ವ್ಯಂಗ್ಯ ಚಿತ್ರದ ಕುರಿತಾಗಿ ಎದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಕಾಣದ ವಾಸ್ತವ ಸಂಗತಿಯೊಂದನ್ನು ಸಮಾಜ ವಿಜ್ಙಾನಿ ಯೋಗೇಂದ್ರ ಯಾದವ್ ಚರ್ಚೆಯ ಸಂದರ್ಭದಲ್ಲಿ ಅಂಕಿ ಅಂಶಗಳ ಮೂಲಕ ನಮ್ಮ ಮುಂದಿಟ್ಟರು. 1980 ರ ದಶಕದಲ್ಲಿ ಮಹಾರಾಷ್ಟದಲ್ಲಿ ಹುಟ್ಟಿಕೊಂಡ ದಲಿತ ಪ್ರಜ್ಙೆ ಇಡೀ ದೇಶವನ್ನು ಆವರಿಸಿದ ಫಲವಾಗಿ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಮುಂಚೂಣಿಗೆ ಬಂದವು. ಇವುಗಳ ಜೊತೆ ಜೊತೆಯಲ್ಲಿ ಅಂಬೇಡ್ಕರ್ ಕುರಿತಂತೆ ಯಾವೊಂದು ಟೀಕೆಯನ್ನು ಸಹಿಸಿದ ದಲಿತರ ಪ್ರತಿಭಟನೆಗೆ ಹೆದರಿದ ಮೇಲ್ವರ್ಗದ ಜನ ಭಾರತದ ಶಾಲಾ ಕಾಲೇಜು ಮತ್ತು ವಿಶ್ವ ವಿದ್ಯಾನಿಯಗಳಲ್ಲಿ ಅಂಬೇಡ್ಕರ್ ಅವರ ಜೀವನ ಮತ್ತು ಚಿಂತನೆಗಳು ಪಠ್ಯವಾಗದಂತೆ ನೋಡಿಕೊಂಡರು. ಇದಕ್ಕೆ ಅವರು ನೀಡಿದ ಉತ್ತರ ದಲಿತರ ಪ್ರತಿಭಟನೆಯಾಗಿತ್ತು ಅವರ ಉತ್ತರ ನಮಗೆ ಹುನ್ನಾರದಂತೆ ತೋಚಿದರೂ ಸಹ  ಅದನ್ನು ನಾವು ಸಂಪೂರ್ಣ ನಿರಾಕರಿಸುವಂತಿಲ್ಲ.
ಸ್ವಾತಂತ್ರ್ಯಾ ನಂತರದ ಭಾರತವನ್ನು ತನ್ನ ಪ್ರಖರ ವೈಚಾರಿಕತೆಯಿಂದ  ಎಚ್ಚರಿಸಿದ ಮತ್ತು ಪ್ರಭಾವಿಸಿದ ಹಾಗೂ ಗಾಂಧೀಜಿಯ ಪಾಲಿಗೆ ನೈತಿಕ ಪ್ರಜ್ಙೆಯಂತಿದ್ದ ಅಂಬೇಡ್ಕರ್ ಕುರಿತಾಗಲಿ ಅವರ ಚಿಂತನೆಗಳ ಕುರಿತು ವಿಮರ್ಶಾತ್ಮಕ ಕೃತಿಗಳಾಗಲಿ, ಲೇಖನಗಳಾಗಲಿ ದಲಿತ ಹಾಗೂ ಪ್ರಗತಿಪರ ಲೇಖಕರನ್ನು ಹೊರತು ಪಡಿಸಿ ಬೇರೆ ಲೇಖಕರಿಂದ  ಹೊರ ಬರಲು ಸಾಧ್ಯವಾಗಿಲ್ಲ. ಅಂಬೇಡ್ಕರ್  ಎಂದರೆ, ದಲಿತರ ಸ್ವತ್ತು ಎಂಬ ಹುಸಿ ನಂಬಿಕೆಯೊಂದನ್ನು ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಿಕೊಂಡು ಬರಲಾಯಿತು. ಜೊತೆಗೆ ಬಲಪಂಥೀಯರು, ಮತ್ತು ಮೇಲಗವರ್ಗದ ಜನ ಅಂಬೇಡ್ಕರ್ ಅವರನ್ನು ವ್ಯವಸ್ತಿತ ವಾಗಿ ಮುಂಚೂಣಿಗೆ ಬರದಂತೆ ನೊಡಿಕೊಂಡರು. ಇದರಿಂದಾಗಿ ಗಾಂಧೀಜಿ ಸಕಲ ಸಮುದಾಯಕ್ಕೆ ತಲುಪಿದ ಹಾಗೆ ಅಂಬೇಡ್ಕರ್ ಈವರೆಗೂ ಎಲ್ಲಾ ಸಮುದಾಯಗಳಿಗೆ ತಲುಪಲು ಸಾದ್ಯವಾಗಲಿಲ್ಲ. ಇದಕ್ಕೆ ಪರೋಕ್ಷವಾಗಿ ಅಂಬೇಡ್ಕರ್ ಅಭಿಮಾನಿಗಳ ಆರಾಧನೆಯ  ಮನೋಭಾವ ಕೂಡ ಕಾರಣವಾಯಿತು.

 ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ  ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, ಬದಲಾಗಿ ನಮ್ಮ ಮನಸ್ಸಿನೊಳಕ್ಕೆ ಇಳಿಸಿಕೊಂಡು, ಧ್ಯಾನಿಸುವ ವ್ಯಕ್ತಿತ್ವಗಳು. ಇಂತಹ ಸಮಷ್ಟಿ ಪ್ರಜ್ಙೆಯನ್ನು ನಾವು ಮರೆತ ಫಲವಾಗಿ ವರ್ತಮಾನದ ಜಗತ್ತಿನಲ್ಲಿ ಅನೇಕ ದುರಂತಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ.
ಭಾರತದ ಬಹುತೇಕ ವಿಶ್ವ ವಿದ್ಯಾನಿಲಯಗಳ ಪಠ್ಯ ಪುಸ್ತಕ ಸಮಿತಿಗಳು, ವಿವಾದಕ್ಕೆ ಎಡೆಮಾಡಿಕೊಡುವುದು ಬೇಡ ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರ ಚಿಂತನೆಗಳನ್ನು ದೂರವಿಡುತ್ತಿದ್ದಾರೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಬಲಪಂಥೀಯ ಮನಸ್ಸುಗಳು, ತಮ್ಮ ಮರೆ ಮಾಚಿದ ಅಜೆಂಡಾಗಳನ್ನುಸದ್ದು ಮತ್ತು ಸುದ್ಧಿ ಮಾಡದೆ  ಜಾರಿಗೆ ತರುತ್ತಿದ್ದಾರೆ, ಕಳೆದ ವರ್ಷ ದೆಹಲಿಯ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಪಠ್ಯವಾಗಿದ್ದ ಎ.ಕೆ. ರಾಮಾನುಜನ್ ಅವರ “ ಮುನ್ನೂರು ರಾಮಾಯಣಗಳು” ಕೃತಿಯನ್ನು ನಿಷೇಧಿಸುವಲ್ಲಿ  ಅವರು ಯಶಸ್ವಿಯಾದರು.
ಯಾವುದನ್ನೂ ಹಿಂದೆ ಮುಂದೆ ಯೋಚಿಸದೆ, ಅತಾರ್ಕಿಕ ನೆಲೆಯಲ್ಲಿ ಸಾಗುವ ನಾವು ಅರಿಯಬೇಕಾದ ಇನ್ನೊಂದು ಸಂಗತಿಯೊಂದಿದೆ. ನಮ್ಮ ಕಣ್ಣೆದುರು, ಅಂಬೇಡ್ಕರ್ ಮತ್ತು ಗಾಂಧಿಯನ್ನು ಮುಖಾ ಮುಖಿಯಾಗಿಸಿ, ಪರಸ್ಪರ ನಿಂದಿಸುವಲ್ಲಿ ತಮ್ಮ ಆಯಸ್ಸನ್ನು ಸೆವೆಸಿ ಮಣ್ಣಾದವರ ಕಥನ ಇನ್ನೂ ಜೀವಂತವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್ ವಿಭಿನ್ನ ಸಂಸ್ಕೃತಿ ಮತ್ತು ನೆಲೆಗಳಿಂದ ಬಂದ ಕಾರಣಕ್ಕಾಗಿ, ಇಬ್ಬರ ಗುರಿ ಒಂದೇ ಆಗಿದ್ದರೂ ಅವರ ಆಲೋಚನಾ ಕ್ರಮಗಳು ಬೇರೆ ಬೆರೆಯಾಗಿದ್ದವು.
ಬಡವರ ಮೈ ಮೇಲೆ ಬಟ್ಟೆ ಬರುವವರೆಗೂ ಅರಬೆತ್ತಲೆಯಾಗಿರಲು ಗಾಂಧೀಜಿ ನಿರ್ಧರಿಸಿದರೆ, ಮೈ ತುಂಬಾ ಬಟ್ಟೆ ಧರಿಸುವುದು, ಸ್ವಾಭಿಮಾನದ ಸಂಕೇತ ಎಂದು ಅಂಬೇಡ್ಕರ್ ಭಾವಿಸಿದರು. ಅಂತಿಮವಾಗಿ ತಮ್ಮ ಕೊನೆಯ ದಿನಗಳಲ್ಲಿ ಈ ಇಬ್ಬರು ನಾಯಕರೂ ಬುದ್ದ ತೋರಿದ ಪಥದಲ್ಲಿ ಸಾಗಿದರು.  ಇಬ್ಬರ ಕೈಯಲ್ಲಿ . ಅದೇ ಊರುಗುಲು, ಮತ್ತು ಮೈ ಮೇಲೆ ಅದೇ  ತುಂಡು ಉಡುಗೆ ಮಾತ್ರ. ಇದು ಬುದ್ದನ ಬದುಕಿನ ಶೈಲಿ, ಬುದ್ಧನ ಚಿಂತನೆಯ ಮಾದರಿ. ಇಂತಹ ಸೂಕ್ಷ್ಮತೆಗಳನ್ನು ನಾವು ಗಮನಿಸದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ನಡುವಿನ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್,ಮುಂತಾದ ದಾರ್ಶನಿಕರು  ವಿಕ್ಷಿಪ್ತ ಮನಸ್ಸುಗಳ ಆಸ್ತಿಯಾಗುವ ಅಪಾಯವುಂಟು.
ಕೊನೆಯ ಮಾತು- ಲೇಖಕಿ, ಬಿ.ವಿ. ಭಾರತಿಯವರು  ಹಲವರ ಬೆದರಿಕೆಗೆ  ಮಣಿದು, ತಮ್ಮ ಕೃತಿಯ ಶಿರ್ಷಿಕೆಯನ್ನು ‘ ಸಾಸಿವೆ ತಂದವಳು” ಎಂದು ಬದಲಾಯಿಸಿದ್ದಾರೆ. ಜೊತೆಗೆ  ಕಳೆದ ಎರಡೂವರೆ ವರ್ಷಗಳಿಂದ ಫೇಸ್ ಬುಕ್ ನಲ್ಲಿ ಸಕ್ರಿಯಾಗಿದ್ದ ಅವರು,  ನಿನ್ನೆಯಿಂದ ತಮ್ಮ ಅಕೌಂಟ್ ಮುಚ್ಚಿಹಾಕಿದ್ದಾರೆ. ಮುಂದಿನ ಭಾನುವಾರ ಬೆಂಗಳೂರಿನಲ್ಲಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುವ ಭಾರತಿಯವರ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವೆಲ್ಲರೂ ಭಾಗವಹಿಸಿ, ತನ್ನ ಒಡಲಿನಲ್ಲಿ ಸಾವಿನ ಕರೆಗಂಟೆಯೊಂದನ್ನು ಇಟ್ಟುಕೊಂಡು ಓಡಾಡುತ್ತಿರುವ ಈ ಹೆಣ್ಣು ಮಗಳಿಗೆ ನೈತಿಕ ಸ್ಥೈರ್ಯ ತುಂಬಬೇಕಾಗಿದೆ.ಈ ಸಹೋದರಿಯರ ಜೊತೆ ನೀವಿರುತ್ತೀರಿ ಎಂದು ನಾನು ಭಾವಿಸಿದ್ದೇನೆ,

ಶನಿವಾರ, ನವೆಂಬರ್ 30, 2013

ಕನ್ನಡ ರಂಗಭೂಮಿಯ ಭೀಷ್ಮ- ಕಂದಗಲ್ ಹನುಮಂತರಾಯರು


1993 ರಲ್ಲಿ ಬಿಜಾಪುರದಲ್ಲಿ ನಡೆದ ನವರಸಪುರ ಉತ್ಸವ ದ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದೆ. ಕಂದಗಲ್ ಹನುಮಂತರಾವ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಟಿಗಾಗಿ ರಂಗಮಂದಿರಕ್ಕೆ ತೆರಳಿದ ನನಗೆ ಅಲ್ಲಿ ಹಾಕಲಾಗಿದ್ದ ಆಳೆತ್ತರದ ಭಾವಚಿತ್ರ ಗಮನೆಳೆಯಿತು. ಚಿತ್ರದ ಕೆಳೆಗೆ ಬರೆಯಲಾಗಿದ್ದ “ ಕನ್ನಡದ ಷೆಕ್ಸ್ ಪಿಯರ್ ಕಂದಗಲ್ ಹನುಮಂತರಾವ್ “ ಎಂಬ ಶಿರ್ಷಿಕೆ ನನ್ನಲ್ಲಿ ಕುತೂಹಲ ಉಂಟು ಮಾಡಿತು. ಏಕೆಂದರೆ, 1905 ಮತ್ತು 1910 ರ ನಡುವೆ ಕನ್ನಡದಲ್ಲಿ ಪ್ರಥಮವಾಗಿ ಷೆಕ್ಸ್ ಪಿಯರನ ನಾಟಕಗಳನ್ನು ಕನ್ನಡಕ್ಕೆ ತಂದವರು,ಮಂಡ್ಯ ಜಿಲ್ಲೆಯ ಎಂ.ಎಲ್. ಶ್ರೀಕಂಠೇಗೌಡರು. ಹಾಗಾಗಿ ನಾವು ಅವರನ್ನು ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಿದ್ದೆವು. ಅಲ್ಲಿನ ಗೆಳೆಯರನ್ನು ಈ ಕುರಿತು ವಿಚಾರಿಸಿದಾಗ, ಷೆಕ್ಸ್ ಪಿಯರನ ನಾಟಕಗಳನ್ನು ಹನುಮಂತರಾಯರು ತಮ್ಮ ಕಂಪನಿಯಲ್ಲಿ ಪ್ರದರ್ಶನ ಮಾಡುತ್ತಿದ್ದರು. ಅದಕ್ಕಾಗಿ ಉತ್ತರ ಕರ್ನಾಟಕದ ಜನ ಪ್ರೀತಿಯಂದ ಅವರನ್ನು ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಾರೆ ಎಂದು ಉತ್ತರಿಸಿದರು. ಅಲ್ಲಿಯವರೆ ಅವರ ಹೆಸರನ್ನು ಕೇಳದ ನನಗೆ, ಅವರ ಬದುಕನ್ನು ಗಮನಿಸಿದಾಗ. ರಂಗಭೂಮಿಗೆ ಅವರು ತೆತ್ತುಕೊಂಡ ಬಗೆ, ಅವರ ತ್ಯಾಗ ಇವುಗಳನ್ನು ಗಮನಿಸಿದಾಗ ನಿಜಕ್ಕೂ ಈ ಹೆಸರು ಸಾರ್ಥಕ ಎನಿಸಿತು.

೧೮೬೬ ಜನವರಿ ೧೧ರಂದು ಕಂದಗಲ್ ಗ್ರಾಮದ ಭೀಮರಾಯ ಮತ್ತು ಗಂಗೂಬಾಯಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದ ಹನುಮಂತರಾಯರು ಪ್ರಾಥಮಿಕ ಶಿಕ್ಷಣವನ್ನು ತನ್ನ ಹಳ್ಳಿಯಲ್ಲೇ ಪಡೆದರು. ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹನುಮಂತರಾಯರಿಗೆ ಪಕ್ಕದ ಓಣಿಯ ಶರಣ ಸಂಪ್ರದಾಯದ ಗಿರಿಮಲ್ಲಯ್ಯ ಎಂಬುವವರ ಮನೆಯಲ್ಲಿ ಜರುಗುತ್ತಿದ್ದ ಭಜನೆ ಶರಣರ ಪ್ರವಚನಗಳ ಬಗ್ಗೆ ಬಾಲ್ಯದಿಂದಲೂ ಎಲ್ಲಿಲ್ಲದ ಆಸಕ್ತಿ. ಈ ಕಾರ್ಯಕ್ರಮ ಗಳಿಗೆ ಕದ್ದು ಮುಚ್ಚಿ ಹಾಜರಾಗುತ್ತಿದ್ದ ಬಾಲಕ ಹನುಮಂತರಾಯ ಭಜನೆ ಹಾಡುವುದು, ಹಾರ್ಮೊನಿಯಂ ನುಡಿಸುವುದು ಇವುಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ.

ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಂದೆ ಭೀಮರಾಯರು ಹನುಮಂತರಾಯ ಹಾಗೂ ತಮ್ಮ ಶ್ರೀನಿವಾಸರಾಯನನ್ನು ಬಿಜಾಪುರದಲ್ಲಿ ಮನೆಮಾಡಿ ಇರಿಸಿದಾಗ ಆ ವೇಳೆಗಾಗಲೆ ಬಿಜಾಪುರಕ್ಕೆ ಗಣೇಶೋತ್ಸವ ಕಾಲಿಟ್ಟಿತ್ತು. ಪುಣೆಯಲ್ಲಿ ತಿಲಕರು ಗಣೇಶೋತ್ಸವವನ್ನು ವಿಜೃಂಬಣೆಯಿಂದ ಆಚರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದರಿಂದ ಬಿಜಾಪುರದಲ್ಲೂ ಸಹ ಈ ಉತ್ಸವದಲ್ಲಿ ನಾಟಕ ಸಂಗೀತ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಕಾರ್ಯಕ್ರಮಗಳು ಹನುಮಂತರಾಯರ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದವು.

ಪ್ರೌಢಶಾಲೆ ಶಿಕ್ಷಣದ ಅವಧಿಯಲ್ಲಿ ವಿದ್ಯಾಭ್ಯಾಸಕ್ಕಿಂತ ನಾಟಕಗಳತ್ತ ಒಲವು ತೋರಿದ ಹನುಮಂತರಾಯರು ಅನೇಕ ಏಕಾಂಕ ನಾಟಕಗಳನ್ನು ಬರೆದು ಗೆಳೆರೊಡಗೂಡಿ ಪ್ರದರ್ಶಿಸಿದರು. ಬಿಜಾಪುರದ ಪ್ರತಿಷ್ಟಿತ ವ್ಯಕ್ತಿಗಳಾದ ಫ.ಗು. ಹಳಕಟ್ಟಿ, ಶ್ರೀನಿವಾಸ ಕೌಜಲಗಿ ಮುಂತಾದವರ ಪ್ರಶಂಸೆಗೆ ಪಾತ್ರರಾಗಿದ್ದರು. ನಾಟಕದ ಆಸಕ್ತಿಯಿಂದಾಗಿ ಮುಲ್ಕಿ ಪರೀಕ್ಷೆಯಲ್ಲಿ ಫೇಲಾದ ಹನುಮಂತರಾಯರು ಮನೆಯವರ ವಿರೋಧ ಎದುರಿಸಲಾರದೆ ೧೯೧೮ರಲ್ಲಿ ಪುಣೆಗೆ ತೆರಳಿ ಮಿಲಿಟರಿ ಉದ್ಯೋಗಕ್ಕೆ ಸೇರ್ಪಡೆಯಾದರು.


ನಾಟಕ ಕಂಪನಿಗಳ ತವರೂರು ಎನಿಸಿದ್ದ ಪುಣೆ ನಗರ ಹನುಮಂತರಾಯರ ನಾಟಕದ ಆಸಕ್ತಿಗೆ ಮತ್ತಷ್ಟು ನೀರೆರೆದು ಪೋಷಿಸಿತು. ಪುಣೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮರಾಠಿ ನಾಟಕಗಳನ್ನು ನೋಡುತ್ತಾ ಅಲ್ಲಿನ ನಾಟಕಕಾರ ರೊಂದಿಗೆ ಸಂಬಂಧ ಬೆಳೆಸುತ್ತಾ ನಾಟಕ ರಚನೆಯ ತಂತ್ರಗಳನ್ನು, ನಟನೆಯ ಗುಟ್ಟುಗಳನ್ನು ಕಲಿತರು. ಕೇವಲ ಮೂರು ವರ್ಷಗಳ ಕಾಲ ಪುಣೆಯಲ್ಲಿದ್ದ ಹನುಮಂತರಾಯರು ತಾಯಿಯ ಅನಾರೋಗ್ಯದಿಂದಾಗಿ ಮಿಲಿಟರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ತನ್ನ ಹುಟ್ಟೂರಿಗೆ ಮರಳಬೇಕಾಯಿತು. ಚಿಕ್ಕ ಹಳ್ಳಿಯಾಗಿದ್ದ ಕಂದಗಲ್ ಗ್ರಾಮದಲ್ಲಿ ಹನುಮಂತರಾಯರ ಬದುಕು ಅಸಹನೀಯ ಎನಿಸಿದಾಗ ಮತ್ತೆ ಅವರು ತಾಯಿಯೊಂದಿಗೆ ಬಿಜಾಪುರಕ್ಕೆ ತೆರಳಿ ತಮ್ಮನ ಮನೆಯಲ್ಲಿ ವಾಸಿಸತೊಡಗಿದರು. ಜೊತೆಗೆ ಹಳೆಯ ಗೆಳೆಯರ ನೆರವಿನಿಂದ ಋದನಾಪುರ ಎಂಬುವವರ ಶಿಂಗಾರಿ ಎಂಬ ಕಂಪನಿಯಲ್ಲಿ ಹೊಲಿಗೆ ಕೆಲಸಕ್ಕೆ  ಸೇರ್ಪಡೆಯಾದರು.

ಹನುಮಂತರಾಯರಿಗೆ ಉದ್ಯೋಗವೆಂಬುದು ಕೇವಲ ನಿಮಿತ್ತವಾಗಿತ್ತು. ಅವರ ಆಸಕ್ತಿಯೆಲ್ಲಾ ನಾಟಕಗಳತ್ತಲೇ ಇತ್ತು. ಹಾಗಾಗಿ ೧೯೨೧ರಲ್ಲಿ ‘ಸಂಧ್ಯಾರಾಗ’ ಎಂಬ ಐತಿಹಾಸಿಕ ನಾಟಕವನ್ನು ಬರೆದು, ಸ್ನೇಹಿತರೊಡಗೂಡಿ ‘ಶ್ರೀಕೃಷ್ಣ ನಾಟಕ ಕಂಪನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಾಟಕದ ಪರಿಕರಗಳನ್ನು ಬಾಡಿಗೆಗೆ ತಂದು ನಾಟಕ ಪ್ರದರ್ಶಿಸತೊಡಗಿದರು. ಆ ವೇಳೆಗಾಗಲೇ ಬಿಜಾಪುರದ ಸಿವಿಲ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ಶ್ರೀನಿವಾಸರಾಯ ಅಣ್ಣನ ಹವ್ಯಾಸಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ವಿಧಿ ಇಲ್ಲದೆ ಹನುಮಂತರಾಯರು ತಮ್ಮನ ಮನೆಯನ್ನು ಹಾಗೂ ಬಿಜಾಪುರವನ್ನು ತೊರೆಯಬೇಕಾಯಿತು.

ನಿರುದ್ಯೋಗಿಯಾಗಿದ್ದ ಹನುಮಂತರಾಯರಿಗೆ ಅವರ ಚಿಕ್ಕಪ್ಪ ಬಾಗಲಕೋಟೆಯಲ್ಲಿ ಸೊಲ್ಲಾಪುರ ಮೂಲದ ಅಶೋಕ ಸಹಕಾರಿ ಬ್ಯಾಂಕ್‌ನಲ್ಲಿ ಗುಮಾಸ್ತೆಯ ಹುದ್ದೆಯೊಂದನ್ನು ಕೊಡಿಸಿದರು. ಬಾಗಲಕೋಟೆಗೆ ಬಂದು ನೆಲೆಸಿದ ಹನುಮಂತರಾಯರಿಗೆ ಸಮೀಪದ ಗುಳೇದಗುಡ್ಡ ಎಂಬ ಚಿಕ್ಕ ಪಟ್ಟಣ ಆಕರ್ಷಣೆಯ ಕೇಂದ್ರವಾಯತು.

ಅಂದಿನ ಬಿಜಾಪುರ ಜಿಲ್ಲೆಯ ದಕ್ಷಿಣ ಭಾಗದ ಇಲಕಲ್, ಗುಳೇದಗುಡ್ಡ, ಕಮತಗಿ, ಗಜೇಂದ್ರಗಢ, ರಬಕವಿ, ಬನಹಟ್ಟಿ, ಬಾದಾಮಿ ಇವೆಲ್ಲವೂ ನಾಟಕಕಾರರ, ನಾಟಕ ಕಂಪನಿಗಳ, ಕಲಾವಿದರ ಕಾಶಿ ಎನಿಸಿದ್ದವು. ಅಲ್ಲದೆ ಪುರುಷರೇ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಸಂಪ್ರದಾಯವನ್ನು ಮುರಿದು ಹಾಕಿದ ಕೀರ್ತಿ ಈ ಪ್ರದೇಶಕ್ಕೆ ಸಲ್ಲುತ್ತದೆ. ಗುಳೇದಗುಡ್ಡದ ಯಮುನಾಬಾಯಿ ಮತ್ತು ಗಂಗೂಬಾಯಿ ಕಂಪನಿ ನಾಟಕಗಳಲ್ಲಿ ಪ್ರಥಮ ಬಾರಿಗೆ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ದಾಖಲೆ ಸ್ಥಾಪಿಸಿದರು.


ನಾಟಕಗಳಿಗಾಗಿ ಪ್ರತಿವಾರ ಗುಳೇದಗುಡ್ಡಕ್ಕೆ ಹೋಗುತ್ತಿದ್ದ ಹನುಮಂತರಾಯರು ನಟಿಯಾಗಿ ಹೆಸರುವಾಸಿಯಾಗಿದ್ದ ಯಮುನಾಬಾಯಿಯನ್ನು ಭೇಟಿಮಾಡಿ ಬರುತ್ತಿದ್ದರು. ಆಕೆಯ ಮೂಲಕ ಗುಳೇದಗುಡ್ಡದ ಭೀಮರಾಯರ ಪುತ್ರಿ ಅಂಬಾಬಾಯಿಯನ್ನು ೧೯೨೫ರಲ್ಲಿ ವಿವಾಹವಾಗಿ ಗುಳೇದಗುಡ್ಡದ ಜೊತೆ ಸಂಬಂಧವನ್ನು ಶಾಶ್ವತವಾಗಿರಿಸಿಕೊಂಡರು.

ರಾಯರ ನಾಟಕಗಳ ಬಗೆಗಿನ ಆಸಕ್ತಿಯನ್ನು ಗಮನಿಸಿದ ಯಮುನಾಬಾಯಿಯ ‘ನೀವೇಕೆ ನಾಟಕ ಕಂಪನಿ ಸೇರಿ ನಾಟಕಗಳನ್ನು ಬರೆದುಕೊಡಬಾರದು’ ಎಂಬ ಪ್ರಶ್ನೆಗೆ ಉತ್ತರವಾಗಿ ಪತ್ನಿ ಹಾಗೂ ಮಾವನವರ ವಿರೋಧವನ್ನು ಲೆಕ್ಕಿಸದೆ ಬ್ಯಾಂಕ್ ಉದ್ಯೋಗಕ್ಕೆ ತಿಲಾಂಜಲಿಯಿತ್ತು ನಾಟಕ ಕಂಪನಿಗೆ ಸೇರ್ಪಡೆಗೊಂಡರು.

ಯಮುನಾಬಾಯಿಯ ನಾಟಕ ಕಂಪನಿಗೆ ನಾಟಕಗಳನ್ನು ಬರೆಯುತ್ತಾ, ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಾ ಸುಮಾರು ೬ ವರ್ಷಗಳ ಕಾಲ ಕರ್ನಾಟಕವನ್ನೆಲ್ಲಾ ಸುತ್ತಿದ ರಾಯರು ಉಡುಪಿಯಲ್ಲಿದ್ದಾಗ ನಾಟಕ ಕಂಪನಿಯ ನಟರೆಲ್ಲಾ ಕೈಕೊಟ್ಟು ಕಂಪನಿ ಮುಚ್ಚಿದ ಕಾರಣ ಮತ್ತೆ ಗುಳೇದಗುಡ್ಡಕ್ಕೆ ಬರಿಗೈಯ್ಯಲ್ಲಿ ವಾಪಸಾದರು. ಈ ವೇಳೆಗೆ ಯರಾಸಿ ಬರಮಪ್ಪ ಗದುಗಿನಲ್ಲಿ ಪ್ರಾರಂಭಿಸಿದ ವಾಣಿವಿಲಾಸ ನಾಟಕ ಕಂಪನಿಗೆ ನಾಟಕಕಾರರಾಗಿ ಸೇರಿಕೊಂಡರು. ಈ ಕಂಪನಿಯಲ್ಲಿ ಹಿಂದೂಸ್ಥಾನಿ ಗಾಯಕರಾಗಿ ಹೆಸರುಮಾಡಿದ್ದ ಮಲ್ಲಿಕಾರ್ಜುನ ಮನ್ಸೂರ್, ಹೆಸರಾಂತ ನಟರಾಗಿದ್ದ ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ನಟಿಸುತ್ತಿದ್ದರಿಂದ ರಾಯರು ಬರೆದ ವರಪ್ರಧಾನ, ಅಕ್ಷಯಾಂಭರ ನಾಟಕಗಳು ಕಂಪನಿಗೆ ಹೆಸರು ತಂದುಕೊಟ್ಟವು. ಕಂಪನಿಗೆ ಹಣ ಬರತೊಡಗಿದಂತೆ ಮಾಲೀಕ ಬರಮಪ್ಪ ಮದ್ಯ, ಮದಿರೆಯ ದಾಸನಾಗಿದ್ದರಿಂದ ಈ ಕಂಪನಿಯಲ್ಲೂ ಕೂಡ ಹನುಮಂತರಾಯರು ಬದುಕಿನ ರಥವನ್ನು ನೆಮ್ಮದಿಯಿಂದ ಎಳೆಯಲು ಸಾಧ್ಯವಾಗಲಿಲ್ಲ.

ಈಗಾಗಲೇ ಎರಡು ಕಂಪನಿಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಅನುಭವಗಳಿಸಿದ್ದರಿಂದ ತಾನೇ ಏಕೆ ನಾಟಕ ಕಂಪನಿಯೊಂದನ್ನು ಪ್ರಾರಂಭಿಸಬಾರದು ಎಂದು ಕೊಂಡು ಎರಡನೇ ಬಾರಿಗೆ ಹೂಗಾರ ಭೀಮರಾಯರ ಜೊತೆ ‘ಭಾಗ್ಯೋದಯ ನಾಟಕ ಕಂಪನಿ’ ಯನ್ನು ಆರಂಭಿಸಿದರು. ರಾಯರ ಹೊಸ ಕಂಪನಿಗೆ ಅಮೀರ್‌ಬಾಯಿ ಕರ್ನಾಟಕಿ, ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ಕಲಾವಿದರಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಅವರು ಬರೆದ ‘ಜ್ವಾಲೆ’, ‘ಬಡತನದ ಭೂತ’ ಎಂಬ ಸಾಮಾಜಿಕ ಹಾಗೂ ಅವರ ಹೆಸರನ್ನು ರಂಗಭೂಮಿಯಲ್ಲಿ ಚಿರಸ್ಥಾಯಿಗೊಳಿಸಿದ ‘ರಕ್ತರಾತ್ರಿ’ ಎಂಬ ಐತಿಹಾಸಿಕ ನಾಟಕಗಳನ್ನು ತಮ್ಮ ಕಂಪನಿಯ ಮೂಲಕ ಕರ್ನಾಟಕದೆಲ್ಲೆಡೆ ಪ್ರದರ್ಶಿಸಿದರು. ಹೈದರಾಬಾದಿನಲ್ಲಿ ನಾಟಕ ಕಂಪನಿ ಕ್ಯಾಂಪ್ ಹಾಕಿದ್ದ ಸಮಯದಲ್ಲಿ ಹೆಚ್ಚಿನ ಸಂಭಾವನೆ ಆಸೆಗಾಗಿ ಕಲಾವಿದರೆಲ್ಲ ರಾತ್ರೋರಾತ್ರಿ ಬೇರೊಂದು ಕಂಪನಿಗೆ ಹೋದಾಗ ಕಂಪನಿ ಮುಚ್ಚಿದ ರಾಯರು ಯಥಾಸ್ಥಿತಿಯಲ್ಲಿ ಗುಳೇದಗುಡ್ಡಕ್ಕೆ ಮರಳಿದರು.
ಕಂಪನಿ ಸ್ಥಗಿತಗೊಳಿಸಿ ಹಿಂತಿರುಗಿ ಬಂದ ರಾಯರು, ಯಾವುದೇ ನಾಟಕ ಕಂಪನಿಗೆ ಸೇರದೆ ನಾಟಕ ಕಲಿಸುವ ವೃತ್ತಿಯನ್ನು ಮುಖ್ಯವಾಗಿರಿಸಿಕೊಂಡು ಜೀವಿಸತೊಡಗಿದರು. ಇದೇ ವೇಳೆ ಜಾತ್ರೆ ಸಂದರ್ಭಗಳಲ್ಲಿ ಮಾತ್ರ ನಾಟಕವಾಡುತ್ತಿದ್ದ ಕೆರೂರಿನ ಶಾರದಾ ನಾಟಕ ಮಂಡಳಿಗೆ ‘ಬಾಣಸಿಗಭೀಮ’ ಎಂಬ ನಾಟಕವನ್ನುಬರೆದುಕೊಟ್ಟರು. ಈ ನಾಟಕ ಉತ್ತರ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಯಿತು.

ನಾಟಕ ಕಂಪನಿ ಹುಟ್ಟುಹಾಕಿ ಕೈ ಸುಟ್ಟುಕೊಂಡಿದ್ದರೂ, ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಬೇಕೆಂಬ ಆಸೆ ರಾಯರನ್ನು ಕಾಡುತ್ತಲೇ ಇತ್ತು. ಅದರಂತೆ ಮೂರನೇ ಬಾರಿಗೆ ತನ್ನ ಪತ್ನಿ ಮತ್ತು ನಾದಿನಿಯ ಮೈಮೇಲಿನ ಒಡವೆ ಒತ್ತೆ ಇಟ್ಟು ಅರವಿಂದ ಸಂಗೀತ ನಾಟಕ ಮಂಡಳಿ ಕಟ್ಟಿಕೊಂಡು ದಾವಣಗೆರೆ, ಹಾವೇರಿಯಲ್ಲಿ ಯಶಸ್ವಿ ಕ್ಯಾಂಪ್ ಮುಗಿಸಿ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಕ್ಯಾಂಪ್ ಹಾಕಿದರು. ಬೆಂಗಳೂರಿನಲ್ಲಿ ರಾಯರ ನಾಟಕಗಳಿಗೆ ಒಳ್ಳೆಯ ಹೆಸರು ಬಂದರೂ ಹಣ ಮಾತ್ರ ದಕ್ಕಲಿಲ್ಲ. ಇದೇ ಸಂದರ್ಭದಲ್ಲಿ ಮೈಸೂರು ಮಹಾರಾಜರ ಎದುರು ‘ಅದ್ಭುತ ರಾಮಾಯಣ’ ನಾಟಕ ಪ್ರದರ್ಶಿಸುವ ಅವಕಾಶ ರಾಯರಿಗೆ ದೊರೆಯಿತು.

ಮೈಸೂರು ಕ್ಯಾಂಪ್‌ನಲ್ಲಿ ರಾಯರ ನಾಟಕಗಳಿಗೆ ಜನರ ಪ್ರತಿಕ್ರಿಯೆ ಚೆನ್ನಾಗಿದ್ದರೂ, ಪೌರಾಣಿಕ ನಾಟಕಗಳಿಗೆ ಹಣ ನೀರಿನಂತೆ ಖರ್ಚಾಗುತ್ತಿದ್ದರಿಂದ ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿಸಲೇ ಇಲ್ಲ. ಜೊತೆಗೆ ಮೈಸೂರು ಮಹಾರಾಜರ ಮುಂದೆ ನಾಟಕ ಪ್ರದರ್ಶಿಸುವ ಅವಕಾಶ ಕೈ ತಪ್ಪಿದ್ದರಿಂದ, ನಾಟಕದ ಪರಿಕರಗಳನ್ನೆಲ್ಲಾ ಹಾವೇರಿಯಲ್ಲಿ ಒತ್ತೆ ಇಟ್ಟು, ಕಲಾವಿದರಿಗೆ ಸಂಭಾವನೆ ಕೊಟ್ಟು, ಇನ್ನೆಂದೂ ನಾಟಕ ಕಂಪನಿ ಕಟ್ಟುವ ಕಾರ್ಯ ಮಾಡಬಾರದೆಂದು ತೀರ್ಮಾನಿಸಿ, ನಿರಾಸೆಯಿಂದ ಬಸವಳಿದ ರಾಯರು ಬರಿಗೈಲಿ ಮನೆಗೆ ಬಂದು ಹೆಂಡತಿ, ಮಕ್ಕಳೆದುರು ತಲೆತಗ್ಗಿಸಿ ನಿಂತರು.
ಹೀಗೆ ಸುದೀರ್ಘ ೩೦ ವರ್ಷಗಳ ಕಾಲ ನಾಟಕ ರಂಗದಲ್ಲಿ ತೇಲಿ ಮುಳುಗಿ ಕನ್ನಡದ ನಾಟಕ ಪ್ರಕಾರದಲ್ಲಿ ‘ರಕ್ತರಾತ್ರಿ’ ಎಂಬ ಶ್ರೇಷ್ಠ ಕೃತಿ ರಚಿಸಿದ ರಾಯರಿಗೆ ಅಂತಿಮವಾಗಿ ದೊರೆತಿದ್ದು, ಬಡತನ ಮತ್ತು ಸಾಲ ಹಾಗೂ ಎದೆಯುದ್ದ ಬೆಳೆದು ನಿಂತ ಹೆಣ್ಣುಮಕ್ಕಳು.


ಇಂತಹ ಸ್ಥಿತಿಯಲ್ಲೂ ಸಹ ಗುಳೇದಗುಡ್ಡ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಯುವಕ ಸಂಘಗಳು ಹಬ್ಬ, ಜಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ನಾಟಕ ಕಲಿಸಲು ಆಹ್ವಾನಿಸಿದರೆ, ಯಾವುದೇ ಆಡಂಬರವಿಲ್ಲದೆ ಒಪ್ಪಿಕೊಂಡು, ಒಂದು ಕಟ್ಟು ಬೀಡಿ, ಎರಡು ಕಪ್ ಚಹಾ, ಎರಡು ಹೊತ್ತಿನ ಊಟಕ್ಕೆ ನಾಟಕ ಕಲಿಸುತ್ತಿದ್ದರು. ನಾಟಕದ ದಿನ ಕಲಾವಿದರು ಉಡುಗೊರೆಯಾಗಿ ನೀಡುತ್ತಿದ್ದ ಅಂಗಿ, ಟವೆಲ್, ಪಂಚೆ ಇವುಗಳನ್ನು ಸ್ವೀಕರಿಸಿ, ನಿರ್ಲಿಪ್ತರಾಗಿ ಕೊಡೆ ಹಿಡಿದು ತನ್ನ ಮನೆಗೆ ನಡೆದು ಬರುತ್ತಿದ್ದರು.

ತಮ್ಮ ಜೀವಿತಾವಧಿಯಲ್ಲಿ ೭ ಏಕಾಂಕ ನಾಟಕಗಳು, ೧೪ ಪೌರಾಣಿಕ ನಾಟಕಗಳು, ೪ ಐತಿಹಾಸಿಕ ನಾಟಕಗಳು ಹಾಗೂ ೧೨ ಸಾಮಾಜಿಕ ನಾಟಕಗಳನ್ನು ಬರೆದು, ಕನ್ನಡದ ಪ್ರಮುಖ ನಾಟಕಕಾರರ ಜೊತೆ ಗುರುತಿಸಿಕೊಂಡಿದ್ದ ಕಂದಗಲ್ ಹನುಮಂತರಾಯರ ಕಡೆಯ ದಿನಗಳು ಅತ್ಯಂತ ಶೋಚನೀಯವಾಗಿದ್ದವು.

ನಾಟಕ ಕಲಾವಿದರು ತಂದುಕೊಡುತ್ತಿದ್ದ ದವಸ-ದಾನ್ಯಗಳಲ್ಲಿ ಜೀವನ ಸಾಗಿಸುತ್ತಿದ್ದ ರಾಯರಿಗೆ ಕೊನೆಯ ದಿನಗಳಲ್ಲಿ ಸರ್ಕಾರ ನೀಡುತ್ತಿದ್ದ ೧೦೦ರೂ ಮಾಸಾಶನ ಏಕೈಕ ಆಸರೆಯಾಗಿತ್ತು. ಬೆಳೆದ ಹೆಣ್ಣು ಮಕ್ಕಳ ವಿವಾಹ ಮಾಡಲಾಗದೆ ಅಸಹಾಯಕರಾಗಿ ನಿಂತಾಗ, ಸುಳ್ಯದ ದೇಸಾಯಿಯವರು ತಾವೇ ಮುಂದೆ ನಿಂತು ವಿವಾಹ ಮಾಡುವುದರ ಮೂಲಕ ರಾಯರಿಗೆ ನೆರವಾದರು.

ಹೀಗೆ ತಾವು ಪ್ರೀತಿಸಿದ, ಆರಾಧಿಸಿದ ನಾಟಕ ಕ್ಷೇತ್ರಕ್ಕೆ ತಮ್ಮದೆಲ್ಲವನ್ನೂ ಧಾರೆ ಎರೆದು ಬರಿಗೈ ದಾಸರಾದ ಹನುಮಂತರಾಯರು ತಮ್ಮ ಕೊನೆಯ ದಿನಗಳಲ್ಲಿ ಬಡತನದ ಬೇಗೆಯಿಂದ ನಲುಗಿಹೋದರು. ನಾಟಕ ರಂಗದಲ್ಲಿ ಅವರಿಗೆ ಸಿಕ್ಕ ಬಳುವಳಿ ಭಿನ್ನವತ್ತಳೆಗಳು ಹಾಗೂ ಕನ್ನಡದ ಷೇಕ್ಸ್‌ಪಿಯರ್ ಎಂಬ ಬಿರುದು ಮಾತ್ರ. ಆದರೆ ಈ ಬಿರುದು ಬಾವಲಿಗಳು ಅವರ ಹೊಟ್ಟೆ ತುಂಬಿಸಲಿಲ್ಲ. ಅವರ ಕುಟುಂಬದ ಕಷ್ಟ ತೀರಿಸಲಿಲ್ಲ. ಇದು ಇತಿಹಾಸದ ವ್ಯಂಗ್ಯ ದುರಂತಗಳಲ್ಲಿ ಒಂದು.

ಇಂದಿಗೂ ಕೂಡ ಉತ್ತರ ಕರ್ನಾಟಕದ ಜನತೆ ರಾಯರನ್ನು ತುಂಬು ಹೃದಯದಿಂದ ನೆನಪಿಸಿಕೊಂಡು ಅವರ ಪ್ರತಿಭೆಯ ಬಗ್ಗೆ ಮಾತನಾಡುತ್ತಾರೆ. ಬಿಜಾಪುರದ ಕಲಾಮಂದಿರಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಕಂದಗಲ್ ಹನುಮಂತರಾಯ ಕಲಾಮಂದಿರ ಎಂದು ನಾಮಕರಣ ಮಾಡಿ ರಾಯರಿಗೆ ಗೌರವ ಸೂಚಿಸಿದೆ. ಅದೊಂದು ಸಮಾಧಾನಕರ ಸಂಗತಿ.     
                                 ( ಗುಮ್ಮಟನಾಡಿನ ಕಥನ ಲೇಖನ ಸರಣಿಯಿಂದ)     

ಬುಧವಾರ, ನವೆಂಬರ್ 27, 2013

ಬೇಂದ್ರೆ ಮತ್ತು ಮಧುರ ಚನ್ನ ಗೆಳೆತನ ಒಂದು ನೆನಪು



http://kendasampige.com/images/trans.gif
ಬಿಜಾಪುರ ನಗರದ ಉತ್ತರ ದಿಕ್ಕಿಗೆ ೯೦ ಕಿ. ಮೀ. ದೂರವಿರುವ ಸೊಲ್ಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ೬೫ ಕಿ. ಮೀ. ದೂರದಲ್ಲಿ ಜಳಕಿ ಕ್ರಾಸ್ ಎಂಬ ಹೆಸರಿನ ಪುಟ್ಟ ಊರಿದೆ. ಈ ಊರಿನ ಮದ್ಯಭಾಗದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯ ಎಡಭಾಗಕ್ಕೆ ಚಡಚಣ ಮಾರ್ಗವಾಗಿ ಫಂಡರಾ ಪುರಕ್ಕೆ ಹೋಗುವ ರಾಜ್ಯಹೆದ್ದಾರಿ ಇದೆ. ಹಾಗಾಗಿ ಈ ಸ್ಥಳದಲ್ಲಿ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಮಹಾರಾಷ್ಟ್ರದಿಂದ ಬಂದುಹೋಗುವ ನೂರಾರು ಸರಕು ಸಾಗಾಣಿಕೆ ಲಾರಿಗಳು ಇಲ್ಲಿ ಸದಾ ತಪಾಸಣೆಗೆ ನಿಲ್ಲುವುದರಿಂದ, ಈ ಜಳಕಿ ಕ್ರಾಸ್ ಈಗ ಪುಟ್ಟ ಪಟ್ಟಣವಾಗಿ ಮಾರ್ಪಟ್ಟಿದೆ.

ಜಳಕಿ ಕ್ರಾಸ್‌ನಿಂದ ಸೊಲ್ಲಾಪುರ ದಿಕ್ಕಿನ ೫ ಕಿ. ಮೀ. ದೂರದಲ್ಲಿ ಕರ್ನಾಟಕ - ಮಹಾರಾಷ್ಟ್ರವನ್ನು ಭೌಗೋಳಿಕವಾಗಿ ಬೇಧಿಸಿರುವ ಭೀಮಾನದಿ ಹರಿಯುತ್ತಿದೆ. ಈ ನದಿ ತೀರದ ಅನೇಕ ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ದರೋಡೆಕೋರರಾಗಿ, ಕೊಲೆಗಾರರಾಗಿ, ಭೀಮಾನದಿ ಹಂತಕರೆಂದು ಹೆಸರಾಗಿ ಪೊಲೀಸರ ಗುಂಡಿಗೆ ಬಲಿಯಾದವರ ಕಪ್ಪು ಇತಿಹಾಸವೂ ಈ ಪ್ರದೇಶಕ್ಕಿದೆ. ಭೀಮಾನದಿ ಸೇತುವೆಗೆ ೧ ಕಿ.ಮೀ. ಮುನ್ನವೇ ರಸ್ತೆಯ ಬಲಬದಿಯಲ್ಲಿ ನಮಗೆ ಕಾಣಸಿಗುವ ‘ಹಲಸಂಗಿ ಗ್ರಾಮಕ್ಕೆ ದಾರಿ’ ಎಂಬ ನಾಮ ಫಲಕ ಕನ್ನಡ ಇತಿಹಾಸ ಬಲ್ಲವರಿಗೆ ಪುಳಕ ತರುವ ವಿಚಾರ.

ಕರ್ನಾಟಕದ ಗಡಿಭಾಗದ ಕಟ್ಟಕಡೆಯ ಕುಗ್ರಾಮದಲ್ಲಿ ೧೯೨೦ರ ದಶಕದಲ್ಲಿ, ಅದೂ ಮರಾಠಿ, ಉರ್ದು ಭಾಷೆಯ ಪ್ರಭಾವವಿದ್ದ ವಾತಾವರಣದಲ್ಲಿ ನಾಲ್ಕಾರು ಸಮಾನ ಮನಸ್ಕರು ಕನ್ನಡ ಸಾಹಿತ್ಯವನ್ನು ಧ್ಯಾನಿಸಿದ್ದು, ಉಸಿರಾಡಿದ್ದು, ಅದರಲ್ಲೇ ತಮ್ಮ ಬದುಕನ್ನು ಸವೆಸಿದ್ದು ಸಣ್ಣ ಸಂಗತಿಯೇನಲ್ಲ. ಆಧುನಿಕ ಕನ್ನಡ ಸಾಹಿತ್ಯಕ್ಕೆ (ನವೋದಯ) ಮತ್ತು ಜನಪದ ಸಾಹಿತ್ಯಕ್ಕೆ ಅಪೂರ್ವ ಕಾಣಿಕೆ ನೀಡಿದ ಹಲಸಂಗಿ ಗೆಳೆಯರು ಗುಂಪಿನ ನಿಜವಾದ ರೂವಾರಿ ಅನುಭಾವ ಕವಿ ಮಧುರಚೆನ್ನರು. ಇವರ ಜೊತೆ ಕೈ ಜೋಡಿಸಿ ಕನ್ನಡದ ತೇರನ್ನು ಎಳೆದವರು ಸಿಂಪಿಲಿಂಗಣ್ಣ, ರೇವಪ್ಪ ಕಾಪಸೆ ಮತ್ತು ದೂಳಾಸಾಹಿಬ್.

ಇಪ್ಪತ್ತನೇ ಶತಮಾನದ ಆದಿಕಾಲದವರೆಗೆ ನಮ್ಮ ಹಳೆಗನ್ನಡ, ಛಂದಸ್ಸು, ವ್ಯಾಕರಣ, ಅಷ್ಟಾದಶ ವರ್ಣನೆ ಮುಂತಾದ ಅಲಂಕಾರಗಳಿಂದ ಮೂಗಿಗಿಂತ ಮೂಗುತಿ ಭಾರ ಎನ್ನುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯಕ್ಕೆ ಆಧುನಿಕ ಗಾಳಿ ಬೀಸಿದ್ದು ೧೯೨೦ ರ ದಶಕದಲ್ಲಿ. ದಕ್ಷಿಣ ಕರ್ನಾಟಕದಲ್ಲಿ ಬಿ.ಎಂ. ಶ್ರೀ ರವರ ‘ಇಂಗ್ಲೀಷ್ ಗೀತಗಳು’ ಕೃತಿಯಿಂದ ಕನ್ನಡ ಕಾವ್ಯ ಹೊಸ ಸ್ಪರ್ಶ ಪಡೆಯುವುದರೊಂದಿಗೆ, ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯ ಪ್ರೇರಣೆ ಪಡೆಯಿತು. ಇದೇ ಸಂದರ್ಭದಲ್ಲಿ ಕರಾವಳಿ ತೀರದಲ್ಲಿ ಪಂಜೆ ಮಂಗೇಶರಾಯರು, ಗೋವಿಂದಪೈ, ಧಾರವಾಡದಲ್ಲಿ ಬೇಂದ್ರೆ ನೇತೃತ್ವದ ಗೆಳೆಯರ ಗುಂಪು ಕನ್ನಡ ಸಾಹಿತ್ಯಕ್ಕೆ ಹೊಸ-ಹೊಸ ಪ್ರೇರಣೆ ಒದಗಿಸಿದರು. ಕನ್ನಡ ಸಾಹಿತ್ಯ ಆಧುನಿಕ ರೂಪ ಪಡೆಯುವ ಮುನ್ನವೇ, ಅದಕ್ಕಾಗಿ ಹೊಸ ವೇದಿಕೆ ಸೃಷ್ಠಿಯಾಗಿದ್ದನ್ನು ನಾವು ಉತ್ತರ ಕರ್ನಾಟಕದ ತತ್ವಕಾರರ ತತ್ವಪದಗಳಲ್ಲಿ ಹರಿಯಬಹುದು. ಶಿಶುನಾಳ ಷರೀಫರ ತತ್ವ ಪದಗಳು, ಅಭಿವ್ಯಕ್ತಿಯಲ್ಲಿ, ಭಾಷೆಯಲ್ಲಿ, ನವೋದಯ ಸಾಹಿತ್ಯ ಅಸ್ತಿತ್ವಕ್ಕೆ ಬರುವ ಮುನ್ನವೆ ಚಾಲ್ತಿಯಲ್ಲಿದ್ದುದನ್ನು ನಾವು ಕಾಣಬಹುದು.

ಕನ್ನಡ ಸಾಹಿತ್ಯಕ್ಕೆ ಇಂತಹದ್ದೆ ಹೊಸ ರೂಪನೀಡಿದವರು ಹಲಸಂಗಿ ಗೆಳೆಯರು. ಈ ಗೆಳೆಯರು ೧೯೩೧ ರಲ್ಲಿ ಸಂಪಾದಿಸಿ ಪ್ರಕಟಿಸಿದ ‘ಗರತಿಯ ಹಾಡು’ ಸಂಕಲನ ಜಾನಪದ ಕ್ಷೇತ್ರಕ್ಕೆ ಅನನ್ಯ ಕೊಡುಗೆಯಾಯಿತು. ೧೯೩೩ ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಅರ್ಚಕಹಳ್ಳಿಯ ಬಿ. ರಂಗಸ್ವಾಮಿ ಪ್ರಕಟಿಸಿದ ‘ಹುಟ್ಟದ ಹಳ್ಳಿಯ ಹಾಡು’ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿ. ವಿ. ತೊರ್ಕೆ ಯವರು ಪ್ರಕಟಿಸಿದ ‘ಹಳ್ಳಿಯ ಹಾಡುಗಳು’ ಇವೆಲ್ಲವೂ ಜನಪದ ಸಾಹಿತ್ಯ ಮಾತ್ರವಲ್ಲ, ಕನ್ನಡ ಕಾವ್ಯಕ್ಕೆ ಕೂಡ ಪ್ರೇರಣೆಯಾದವು.

ಕನ್ನಡ ಸಾಹಿತ್ಯ ವಲಯದಲ್ಲಾಗುತ್ತಿದ್ದ ಪಲ್ಲಟಗಳ ಬಗ್ಗೆ ಯಾವುದೇ ಅರಿವಿಲ್ಲದೆ, ದೂರದ ಕರ್ನಾಟಕ ಗಡಿಭಾಗದ ಹಳ್ಳಿಯೊಂದರಲ್ಲಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು ಹಲಸಂಗಿ ಗೆಳೆಯರು. ಇವರ ಪಾಲಿಗೆ ಕನ್ನಡವೆಂಬುದು ಕೇವಲ ಭಾಷೆಯಷ್ಟೇ ಅಲ್ಲ, ಅದು ಉಸಿರಾಗಿತ್ತು. ಅವರ ಪಾಲಿನ ಧ್ಯಾನವಾಗಿತ್ತು. ಅದಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ತಮ್ಮ ಬದುಕಿಗಿಂತ ಕನ್ನಡವೇ ಮುಖ್ಯ ಎಂದು ನಂಬಿ ಬದುಕಿದ ಈ ಗೆಳೆಯರ ಗುಂಪಿನ ಸಿಂಪಿ ಲಿಂಗಣ್ಣ ಬಿಜಾಪುರದ ಗುಮ್ಮಟವನ್ನು ಉದ್ದೇಶಿಸಿ-
 


ಏಳು ಗುಮ್ಮಟವೇ
ನೀ ಏಳು
ಏಳು ಮಾತಿನ ಗುಮ್ಮಟವೇ
ನೀ ಏಳು
ನೀ ಎದ್ದರೆ, ಕನ್ನಡವೇ ಎದ್ದೀತು
ಗೋರಿಗಿಷ್ಟು ಬೆಲೆ ಕೊಟ್ಟವರು
ಬಾಳಿಗೆಷ್ಟು ಬೆಲೆ ಕೊಟ್ಟಿದ್ದರು
ಎಂಬುದನ್ನು ನಡೆದು ತೋರಿಸಲು
ನೀ ಏಳು

ಎಂದು ಎದೆ ತುಂಬಿ ಹಾಡಿ, ತಮ್ಮ ಕನ್ನಡದ ಬಗೆಗಿನ ಬದ್ಧತೆಯನ್ನು ತೋರಿಸಿದ್ದರು.

ಹಲಸಂಗಿ ಗೆಳೆಯರ ಗುಂಪಿನ ನೇತಾರ ಮಧುರ ಚೆನ್ನರ ನಿಜವದ ಹೆಸರು ಹಲಸಂಗಿ ಚೆನ್ನಮಲ್ಲಪ್ಪ ಎಂದು. ಅವರು ‘ನನ್ನ ನಲ್ಲ’ ಕಾವ್ಯ ಸಂಕಲನ ಪ್ರಕಟಿಸಿ ಕೀರ್ತಿಗಳಿಸಿದ ನಂತರ ಬರೆದ ‘ಮಧುರ ಗೀತ’ ಖಂಡ ಕಾವ್ಯದ ಸಂದರ್ಭದಲ್ಲಿ ‘ಮಧುರ ಚೆನ್ನ’ ಎಂಬ ಕಾವ್ಯನಾಮ ಇಟ್ಟುಕೊಂಡರು. ಈ ಕುರಿತು ತಮ್ಮ ‘ಮಧುರ ಗೀತ’ ಕಾವ್ಯದಲ್ಲಿ ಅವರೇ ಹೇಳಿಕೊಂಡಿದ್ದಾರೆ-

ಜನರಾಡಿಕೊಳ್ಳಬಹುದು ನನಗೂ ನಿನಗೂ ಕೂಡೆ
ಅವರೇನು ಬಲ್ಲರೋ ಒಳನಿಧಾನ
ನನಗೆ ನೀನತಿ ಮಧುರ, ನಿನಗೆ ನಾ ಬಲು ಚೆನ್ನ
ಹೀಗಂತಲೇ ನಾವು ಮಧುರ ಚೆನ್ನ.

೧೯೦೩ ರಲ್ಲಿ ಹಲಸಂಗಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಮಧುರ ಚೆನ್ನರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡರು. ಹೀಗಾಗಿ ಉನ್ನತ ಶಿಕ್ಷಣದ ಕನಸುಗಳಿಗೆ ತಿಲಾಂಜಲಿ ಇತ್ತು, ಸಂಸಾರದ ನೊಗ ಹೊತ್ತು, ಹೆತ್ತ ತಾಯಿಯ ಇಚ್ಛೆಯಂತೆ ೧೯ ನೇ ವಯಸ್ಸಿಗೆ ವಿವಾಹವಾದರು. ಸಂಸಾರದ ಹೊಣೆ ಹಾಗೂ ಕೃಷಿ ಕುಟುಂಬದ ವ್ಯವಹಾರದ ನಡುವೆಯೂ ಇಂಗ್ಲೀಷ್ ಕಲಿಯುವ ಆಸೆಯಿಂದ ಸ್ವಲ್ಪ ಕಾಲ ಬಿಜಾಪುರದಲ್ಲಿ ವಾಸವಾಗಿ ಕೊಣ್ಣೂರ ಹನುಮಂತರಾಯರಿಂದ ಇಂಗ್ಲೀಷ್ ಶಿಕ್ಷಣ ಪಡೆದುಕೊಂಡರು. ಅಂದಿನ ಗ್ರಾಮ ಪರಿಸರದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಕಂದಾಚಾರಗಳ ಬಗ್ಗೆ ಬೇಸತ್ತಿದ್ದ ಮಧುರಚೆನ್ನರು ತಮ್ಮ ಗೆಳೆಯರ ಜೊತೆಗೂಡಿ ೧೯೨೨ ರಲ್ಲಿ ತನ್ನೂರಿನಲ್ಲಿ ಶಾರದಾ ವಾಚನಾಲಯ ಸ್ಥಾಪಿಸಿ, ಗಾಂಧಿ, ವಿವೇಕಾನಂದ, ಅರವಿಂದರು, ರಾಮಕೃಷ್ಣ ಪರಮಹಂಸರ ಕೃತಿಗಳನ್ನು ಕಲೆಹಾಕಿ, ತಾವು ಓದಿದ್ದಲ್ಲದೆ ಜನರಿಗೂ ಓದಿಸಿದರು.

ತಂದೆಯ ಸಾವಿನ ನಂತರ ಆಧ್ಯಾತ್ಮದತ್ತ ಒಲವು ತೋರಿದ ಮಧುರಚೆನ್ನರಿಗೆ, ಅರವಿಂದರ ಚಿಂತನೆಗಳು ಹೆಚ್ಚು ಪ್ರಭಾವ ಬೀರಿ, ಅವರ ಭಕ್ತರಾದರು. ಅರವಿಂದರ ಮೇಲಿನ ಭಕ್ತಿ ಅವರ ಕಡೆಯ ಬದುಕಿನವರೆಗೂ ಮುಂದುವರಿದಿತ್ತು. ಗ್ರಾಮ ಪರಿಸರದಲ್ಲಿ ಕಿವಿಯ ಮೇಲೆ ಬೀಳುತ್ತಿದ್ದ ಜನಪದ ಹಾಡುಗಳಿಂದ ಪ್ರೇರಿತರಾಗಿದ್ದ ಅವರು, ಶಾಲೆಯಲ್ಲಿದ್ದಾಗಲೇ ಕವಿತೆ ಬರೆಯಲು ಪ್ರಾರಂಭಿಸಿದ್ದರು. ಸೊಲ್ಲಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚನಮಾಡಿ (೧೯೧೮ ರಲ್ಲಿ), ಸಮ್ಮೇಳನದಲ್ಲಿ ಭಾಗವಹಿಸಿದ್ದ ಬೇಂದ್ರೆಯವರ ಗಮನ ಸೆಳೆದರು. ಆನಂತರ ಬೇಂದ್ರೆ - ಮಧುರಚೆನ್ನರ ಬಾಂಧವ್ಯ ರಾಮ-ಲಕ್ಷ್ಮಣರ ಬಾಂಧವ್ಯದಂತೆ ಬೆಳೆಯಿತು.

ಧಾರವಾಡದಲ್ಲಿ ಬೇಂದ್ರೆಯವರು ಗೆಳೆಯರ ಗುಂಪು ಹೆಸರಿನಲ್ಲಿ ಪ್ರಕಟಿಸುತ್ತಿದ್ದ ‘ಜಯ ಕರ್ನಾಟಕ’ ಪತ್ರಿಕೆಗೆ ಮಧುರಚೆನ್ನ ಹಾಗೂ ಅವರ ಹಲಸಂಗಿ ಗೆಳೆಯರು ಲೇಖನ, ಕವಿತೆ ಬರೆಯತೊಡಗಿದರು. ನಂತರದ ದಿನಗಳಲ್ಲಿ ಬೇಂದ್ರೆಯವರಿಗೆ ಮಾಸ್ತಿಯವರು ತಮ್ಮ ‘ಜೀವನ’ ಪತ್ರಿಕೆಯ ಸಂಪಾದಕನ ಸ್ಥಾನ ವಹಿಸಿದಾಗ, ಈ ಪತ್ರಿಕೆಯಲ್ಲೂ ಹಲಸಂಗಿ ಗೆಳೆಯರು ಲೇಖನ, ಕವಿತೆ, ತಾವು ಸಂಪಾದಿಸಿದ ಜನಪದ ಗೀತೆಗಳನ್ನು ಪ್ರಕಟಿಸಿ, ಕರ್ನಾಟಕದ ಸಾಹಿತ್ಯಾಸಕ್ತರ ಗಮನ ಸೆಳೆದರು.

ಮಧುರಚೆನ್ನರ ಒಳ್ಳೆಯ ಗುಣವೆಂದರೆ, ಅವರು ತಾವು ಬರೆಯುವುದರೊಂದಿಗೆ ತಮ್ಮ ಗೆಳೆಯರನ್ನೂ ಬರೆಯಲು ಪ್ರೇರೇಪಿಸುತ್ತಿದ್ದರು. ಹೀಗಾಗಿ ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ, ದೂಳಸಾಹೇಬ್ ಬೆಳಕಿಗೆ ಬಂದರು. ೧೯೨೦ ರ ದಶಕದಲ್ಲಿ ಮಧುರಚೆನ್ನರ ಪ್ರೇರಣೆಯಿಂದ ಕವಿತೆಗಳ ಸಂಕಲನ ಒಂದನ್ನು ಪ್ರಕಟಿಸಿದ ದೂಳ ಸಾಹೇಬ್ ಆಧುನಿಕ ನವೋದಯ ಕನ್ನಡ ಸಾಹಿತ್ಯದ ಪ್ರಥಮ ಮುಸ್ಲಿಂ ಕವಿ ಎಂಬ ಕೀರ್ತಿಗೆ ಪಾತ್ರರಾದರು.

ಮೂಲತ: ಅನುಭಾವ ಕವಿಯಾಗಿದ್ದರೂ ಕೂಡ, ‘ನಾನು ಕವಿಯಲ್ಲ ಸಂಶೋಧಕ’ ಎಂದೇ ಮಧುರಚೆನ್ನರು ಹೇಳಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಅವರು ಹಲವಾರು ಸಂಶೋಧನೆಗಳನ್ನೂ ಸಹ ಮಾಡಿದ್ದರು. ಅವರ ಮಹತ್ವದ ಸಂಶೋಧನೆಯೆಂದರೆ, ಹನ್ನೊಂದನೇ ಶತಮಾನದ ಅಭಿನವ ಪಂಪನೆಂದೇ ಬಿರುದು ಪಡೆದಿದ್ದ ನಾಗಚಂದ್ರನ ಊರು ಬಿಜಾಪುರ ಎಂಬುದನ್ನು ಶಾಸನಗಳ ಮೂಲಕ ಮಧುರಚೆನ್ನರು ಸಾಬೀತು ಪಡಿಸಿದರು. ಇದಕ್ಕೂ ಮುನ್ನ ನಾಗಚಂದ್ರ ಕೊಡಗಿನವನೆಂದು, ಮಂಗಳೂರಿನವನೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದರು. ‘ಮಲ್ಲಿನಾಥ ಪುರಾಣ’ ಕೃತಿಯ ಮೂಲಕ ಹೆಸರಾದ ನಾಗಚಂದ್ರನ ಕುರಿತಾದ ಶಾಸನದ ಲಿಪಿಯ ‘ಮಲ್ಲಿ ಜಿನೇಂದ್ರ ಗೇ ಹಮಂ ವಿಜಯ ಸರಕ್ಕಲಂಕರಣ ಮಾಗಿರೆ ಮಾಡಿಸಿ. ತಚ್ಛರಿತ ಮಂ.....’ ಎಂಬ ಶಾಸನೋಕ್ತ ಪದ್ಯವನ್ನು ವಿಶ್ಲೇಷಿಸಿ, ನಾಗಚಂದ್ರನ ಸ್ಥಳ ಚರಿತ್ರೆಯ ಗೊಂದಲಕ್ಕೆ ಇತಿಶ್ರೀ ಹಾಡಿದರು. ಮಧುರಚೆನ್ನರ ವಿಶೇಷವೆಂದರೆ, ಟಾಲ್‌ಸ್ಟಾಯ್, ಅರವಿಂದರ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವುದು.

ಬೇಂದ್ರೆ ಮತ್ತು ಮಧುರಚೆನ್ನ



ಕನ್ನಡ ಕಾವ್ಯ ಲೋಕದಲ್ಲಿ ಕವಿತೆಗೆ ಬೇಂದ್ರೆ ಎಷ್ಟು ಹೆಸರುವಾಸಿಯಾಗಿದ್ದರೊ, ಅಷ್ಟೇ ಹೆಸರನ್ನು ಅವರು ಜಗಳಗಂಟಿತನದಲ್ಲೂ ಪಡೆದಿದ್ದರು. ಬೇಂದ್ರೆಯವರ ಸಿಟ್ಟು -ಪ್ರೀತಿ -ಜಗಳ-ಕವಿತೆ, ಅವರ ಕಾವ್ಯ ವಾಚನ ಸಾಂಸ್ಕೃತಿಕ ನಗರ ಧಾರವಾಡದಲ್ಲಿ ಇಂದಿಗೂ ಲೋಕಪ್ರಸಿದ್ಧಿ. ಪದವಿ ತರಗತಿಗಳಿಗೆ ಅವರ ಕೆಲವು ಕವಿತೆಗಳು ಪಠ್ಯವಾಗಿದ್ದ ಸಂದರ್ಭದಲ್ಲಿ ಪಾಠ ಮಾಡುತ್ತಿದ್ದ ಅಧ್ಯಾಪಕರು, ಬೇಂದ್ರೆಯವರ ಕೆಲವು ಕವಿತೆಗಳನ್ನು ವಾಚನ ಮಾಡುವುದು ಅಥವಾ ಅರ್ಥೈಸುವುದು ಕಠಿಣ ಎಂಬ ಮಾತುಗಳನ್ನು ತರಗತಿಯಲ್ಲಿ ಆಡಿದ ಸುದ್ದಿ ಬೇಂದ್ರೆಯವರ ಕಿವಿಗೆ ಬಿದ್ದ ತಕ್ಷಣ, ಆ ಅಧ್ಯಾಪಕನನ್ನು ಹುಡುಕಿಕೊಂಡು ಹೊರಡುತ್ತಿದ್ದರು. ಆ ಅಧ್ಯಾಪಕನನ್ನು ನಡುರಸ್ತೆಯಲ್ಲೇ ನಿಲ್ಲಿಸಿ, "ಯಾಕ? ಯಾಕಾಂತ? ನನ್ನ ಕವಿತಾ ಅರ್ಥವಾಗೊಲ್ದು ಅಂತಾ ಹೇಳಿದ್ದೀಯಂತಿ ನೀನು? ನಿನಗ ಯಾಕ ಅರ್ಥವಾಗೊಲ್ದು? ನಾಳಿ ನೀನು ನನ್ನ ಮನಿಗೆ ಬಾ. ನಾ ಕವಿತಾ ವಾಚನ ಮಾಡಲಿಕ್ಕೆ ಹತ್ತೀನಿ." ಅಂತ ತಾಕೀತು ಮಾಡಿ ಬರುತ್ತಿದ್ದರು. ಅದೇ ರೀತಿ ಕವಿತೆಗಳ ಬಗ್ಗೆ ಪ್ರಶಂಸೆಯ ಮಾತನಾಡಿದ ಅಧ್ಯಾಪಕರ ಮನೆ ಬಾಗಿಲು ಬಡಿದು, "ತಮ್ಮಾ ನನ್ನ ಕವಿತಾ ಬಗ್ಗಿ ಒಳ್ಳೆ ಪಾಠ ಮಾಡ್ತೀಯಂತಿ ನೀ. ಬೇಷಾಯ್ತು. ತಗೊ ಕಲ್ಲು ಸಕ್ಕರಿ ತಿನ್ನು" ಎಂದು ಹೇಳುತ್ತಾ ತಮ್ಮ ಕೋಟಿನ ಜೇಬಿನಿಂದ ಕಲ್ಲು ಸಕ್ಕರೆ ತೆಗೆದುಕೊಟ್ಟು, ಬೆನ್ನು ತಟ್ಟಿ ಬರುತ್ತಿದ್ದರು. ಇದು ಬೇಂದ್ರೆಯವರ ವ್ಯಕ್ತಿತ್ವ. ಇಂತಹ ಬೇಂದ್ರೆ ತಮ್ಮ ಜೀವಿತದಲ್ಲಿ ಒಮ್ಮೆಯೂ ಜಗಳವಾಡದ ವ್ಯಕ್ತಿ ಇದ್ದರೆ ಅದು ಮಧುರಚೆನ್ನರು ಮಾತ್ರ. ಬೇಂದ್ರೆಯವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಧುರಚನ್ನರು ಅವರನ್ನು ಅಣ್ಣಾ ಎಂದೇ ಸಂಬೋಧಿಸುತ್ತಿದ್ದರು. ಬೇಂದ್ರೆ - ಮಧುರಚೆನ್ನರ ಪ್ರೀತಿಯಾದರೂ ಎಂತಹದ್ದು? ಅದು ಮಧುರಚನ್ನರು ಹಾಡಿದ,

ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ಧಿಯಾಚೆಗಿನ ಮಾತು
ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು.

ಎಂಬ ಈ ಮೇಲಿನ ಕವಿತೆಯಲ್ಲೇ ವ್ಯಕ್ತವಾಗಿದೆ.

ಬೇಂದ್ರೆಯವರ ಜೀವಿತದ ಸುಖದ ದಿನಗಳೆಂದರೆ, ಅವರು ಸೊಲ್ಲಾಪುರದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಹನ್ನೆರಡು ವರ್ಷಗಳು. ಆ ದಿನಗಳಲ್ಲಿ ಬೇಂದ್ರೆ ಮತ್ತು ಹಲಸಂಗಿ ಗೆಳೆಯರು ಪದೇ - ಪದೇ ಭೇಟಿಯಾಗುತ್ತಿದ್ದರು. ಹಲಸಂಗಿಯಿಂದ ಗಡಿಯಾಚೆ ೧೩ ಕಿ.ಮೀ. ದೂರದ ಸೊಲ್ಲಾಪುರಕ್ಕೆ ಗೆಳೆಯರು ಹೋಗುವುದು ಅಥವಾ ಹಲಸಂಗಿಗೆ ಬೇಂದ್ರೆಯವರೇ ಬರುವುದು ವಾಡಿಕೆಯಾಗಿತ್ತು. ಈ ಭೇಟಿಯ ಸಂದರ್ಭದಲ್ಲೆಲ್ಲಾ ಸಾಹಿತ್ಯ ಕುರಿತೇ ಚರ್ಚೆ ನಡೆಯುತ್ತಿತ್ತು. ಈ ಗೆಳೆಯರ ನಡುವೆ ಸರಪಳಿ ಕೊಂಡಿಯಾಗಿ ಕೆಲಸಮಾಡಿದ್ದು ಕೂಡ ಕನ್ನಡ ಸಾಹಿತ್ಯವೇ. ೧೯೪೦ ರ ದಶಕದಲ್ಲಿ ಬೇಂದ್ರೆಯವರು ಮಧುರಚೆನ್ನರಿಗೆ ಬರೆದ ಪತ್ರದ ಸಾಲುಗಳಿವು. "ಹಗಲಿರುಳು ಅವನನ್ನೆ ಹುಡುಕಿಕೊಂಡು ಕೂಡುವವರೆಗೆ ನಾವು ದಣಿವಾರಿಸಿಕೊಳ್ಳಲಾಗದು. ನಮ್ಮ ಗುಂಪಿಗೆ ಗುಂಪನ್ನೆಲ್ಲಾ ಆವರಿಸಿದ ಚಿಂತೆಯು ಆ ವಿರಹದ ಭಾಗ್ಯ ಚಿಹ್ನೆಯಾಗಿದೆ. ಹರಿಹರನ ಪಂಪಾ ಶತಕ ವನ್ನೋದಿರುವೆಯಲ್ಲವೆ? ಆ ವ್ಯಾಕುಲತೆ ನಮ್ಮಲ್ಲಿಬೇಕು. ಬಸವನ ವಚನದ ವ್ಯಾಕುಲತೆ ನಮ್ಮಲ್ಲಿಬೇಕು. ವಾಸು ದೇವಾ! ಒಡೆಯಾ! ಇತ್ತ ನೋಡಾ ಎಂದು ಆರ್ತತೆಯಿಂದ ಒದರಿದ (ಹೇಳಿದ) ದಾಸರಾಯರ ವ್ಯಾಕುಲತೆ ಬೇಕು. ಈ ವ್ಯಾಕುಲತೆಯನ್ನು ಯಾರಾದರೂ ನನ್ನಲ್ಲಿ ಉಂಟುಮಾಡಿದರೆ ಅವರ ದಾಸಾನು ದಾಸನಾಗುವೆನು." ಹಗಲಿರುಳು ಕನ್ನಡ ಸಾಹಿತ್ಯವನ್ನೇ ಧ್ಯಾನಿಸಿದ ಈ ಮನಸ್ಸುಗಳನ್ನು ಅರಿಯಲು ಇನ್ನೇನು ಬೇಕು ಹೇಳಿ?

ಮಧುರಚನ್ನರ ಸಾವು ಮತ್ತು ಬೇಂದ್ರೆ ಪ್ರತಿಕ್ರಿಯೆ



ಮಧುರಚನ್ನರು ೧೯೫೩ರಲ್ಲಿ ತಮ್ಮ ಐವತ್ತನೇ ವಯಸ್ಸಿನಲ್ಲಿಯೇ ತೀರಿಹೋದದ್ದು ಕನ್ನಡ ಸಾಹಿತ್ಯದ ದುರಂತವೇ ಸರಿ. ಈ ವೇಳೆಗೆ ಬೇಂದ್ರೆಯವರು ತಮ್ಮ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡು ಸೊಲ್ಲಾಪುರದಲ್ಲಿ ವಾಸವಾಗಿದ್ದರು. ಜೀವದ ಗೆಳೆಯನನ್ನು ಕಳೆದುಕೊಂಡ ಬೇಂದ್ರೆಯವರು ಕೂಡಲೆ ಹಲಸಂಗಿಗೆ ಆಗಮಿಸಿ ಮಧುರಚನ್ನರ ಅಂತ್ಯಕ್ರಿಯೆ ನಡೆಯುವ ತನಕ ಅಲ್ಲಿಯೇ ಉಳಿದರು. ಮಧುರಚನ್ನರ ಅಂತ್ಯಕ್ರಿಯೆಗೆ ಬಂದಿದ್ದ ನೂರಾರು ಅಭಿಮಾನಿಗಳು, ಗೆಳೆಯರು ಬೇಂದ್ರೆಯವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆಯೊಂದನ್ನು ನಡೆಸಿದರು. ಅತ್ಯಂತ ಭಾವುಕರಾದ ಬೇಂದ್ರೆಯವರು ಅಗಲಿದ ಗೆಳೆಯನ ಬಗ್ಗೆ ಏನು ಮಾತನಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಬೇಂದ್ರೆ ಮಧುರಚನ್ನರ ಬಗ್ಗೆ ಆಡಿದ ನಾಲ್ಕೇ ನಾಲ್ಕು ಮಾತುಗಳು ಎಲ್ಲರಲ್ಲೂ ರೋಮಾಂಚನ ಮೂಡಿಸಿದವು. ಬೇಂದ್ರೆಯವರ ಮಾತು ಹೀಗಿತ್ತು, "ಯಾಕ ಯಾಕಾಂತ ಎಲ್ಲರೂ ಮೋರೆ ಸಪ್ಪಗ ಮಾಡ್ಕಂಡ್ ಕುಂತಿರಿ? ನಾವು ಇವತ್ತು ಚನ್ನಪ್ಪನ್ನ ಹೂತಿಲ್ಲ ಬಿತ್ತೀವಿ, ಭೂಮ್ಯಾಗಿರೊ ಚನ್ನಪ್ಪ ಬೆಳಿ ಆಗ್ತಾನ. ಬೆಳಿಯೊಳಗಿನ ಕಾಳು ಒಂದು ಎರಡಾಗಿ, ಎರಡು ನಾಕಾಗಿ ನಾಡೆಲ್ಲ ತುಂಬ್ತದ ನಾ ಹಂಗ ಭಾವಿಸ್ಕಂಡಿದೀನಿ ನೀವು ಹಂಗನ ತಿಳ್ಕೋರಿ ಮನಸು ಹಗರಾಗ್ತದ."


ಬೇಂದ್ರೆಯವರು ಅಂದು ಆಡಿದ ಮಾತು ಇವತ್ತಿಗೂ ನಿಜವಾಗಿದೆ. ೧೯೪೩ -೪೪ರಲ್ಲಿ ಮಧುರಚನ್ನ ಹಾಗೂ ಗೆಳೆಯರು ಚಡಚಣ, ಹಲಸಂಗಿ, ಅಥರ್ಗ, ಸಾಲೊಟಗಿ ಮುಂತಾದ ಗ್ರಾಮಗಳಲ್ಲಿ ಸ್ಥಾಪಿಸಿದ ಅರವಿಂದ ಭಜನಾ ಮಂಡಳಿಗಳು ಇಂದೂ ಕೂಡ ಕಾರ್ಯ ನಿರ್ವಹಿಸುತ್ತಾ ಹಲಸಂಗಿ ಗೆಳೆಯರ ನೆನಪನ್ನು ಜೀವಂತವಾಗಿರಿಸಿವೆ.
 ( 2009 ರ ಲ್ಲಿ ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದ್ದ ಲೇಖನ)
http://kendasampige.com/images/trans.gif







ಶುಕ್ರವಾರ, ನವೆಂಬರ್ 22, 2013

ತಲ್ಲಣಿಸಿ ಹೋದ ಜೀವವೊಂದರ ಮಾತುಗಳು.


ಕಳೆದ ಮೂರು ದಶಕಗಳಿಂದ ನನ್ನ ಪಾಲಿನ ಹಿರಿಯಣ್ಣನಂತಿರುವ ಮಹಾದೇವು ಜೊತೆ ಒಡನಾಡಿದ ನನಗೆ ಅವರಲ್ಲಿ ಕಂಡ ಅತ್ಯಂತ ಮಹತ್ವದ ಗುಣವೆಂದರೆ, ಬರೆದಂತೆ ಬದುಕುವುದು, ಮತ್ತು ಬದುಕಿದಂತೆ ಬರೆಯುವ ಗುಣ. ಅವರಎದೆಗೆ ಬಿದ್ದ ಅಕ್ಷರಕೃತಿಯ ಬಹುತೇಕ ಬರಹಗಳನ್ನು ಮತ್ತು ಅವರ ಮಾತುಗಳನ್ನು ಈಗಾಗಲೇ ಓದಿ, ಕೇಳಿಸಿಕೊಂಡಿದ್ದ ನನಗೆ, ಅವುಗಳನ್ನು ಮತ್ತೆ ಪುಸ್ತಕ ರೂಪದಲ್ಲಿ ಓದುವಾಗ, ಪದೇ ಪದೇ  ಕಣ್ಣಾಲಿಗಳು ತುಂಬಿ ಬಂದವು. ಇವು ಮಹಾದೇವು ಮಾತ್ರ ಬರೆಯಬಹುದಾದ ಅಕ್ಷರಗಳು ಮತ್ತು ಆಡಬಹುದಾದ ಮಾತುಗಳು ಎಂದು ಅನಿಸತೊಡಗಿದವು.
ಯಾವುದೇ ಮುಖವಾಡವಿಲ್ಲದೆ ಬದುಕುತ್ತಾ, ತಣ್ಣಗೆ ಒಳಗೊಳಗೆ ಉರಿಯುವ ಸಂತನ ಹಾಗೆ ಕಾಣುವ ಮಹಾದೇವು ಅವರ ವ್ಯಕ್ತಿತ್ವಕ್ಕೆ ಒಂದು ಪ್ರಸಂಗದ ಉದಾಹರಣೆ ಸಾಕು ನಾನು ಭಾವಿಸಿದ್ದೇನೆ. ಸುಮಾರು 26 ಅಥವಾ 27 ವರ್ಷಗಳ ಹಿಂದೆ ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ ಮಹಾದೇವು, ಕಾಲದಲ್ಲಿ ಮೈಸೂರಿನ ಹೊರವಲಯವಾಗಿದ್ದ ಆಲನಹಳ್ಳಿಯಲ್ಲಿ ಒಂದಿಷ್ಟು ಜಮೀನು ಖರೀದಿಸಿ ತೋಟ ಮಾಡಿದರು. ಪ್ರತಿ ದಿನ ತಮ್ಮ ಲೂನಾದಲ್ಲಿ ತೋಟಕ್ಕೆ ಹೋಗಿ ಆಗ ತಾನೆ ನೆಟ್ಟಿದ್ದ ತೆಂಗಿನ ಸಸಿಗಳ ನೆರಳಲ್ಲಿ ಕುಳಿತು ಸಂಜೆ ಮನೆಗೆ ಬರುತ್ತಿದ್ದರು. ಅವರನ್ನು ಬೇಟಿ ಮಾಡಲು ಫೋನ್ ಮಾಡಿದಾಗ ಅವರ ಬಾಯಿಂದ ಬರುತ್ತಿದ್ದ ಮಾತುಗಳಿವು. “ ಜಗದೀಶ್ ನಾನು ಭೂಮಿ ಹತ್ತಿರ ಹೋಗ್ತಾ ಇದ್ದೀನಿ, ಇಲ್ಲವೆ, ನಾನು ಭೂಮಿಯಲ್ಲಿ ಇದ್ದೀನಿ ಬಾಎನ್ನುತ್ತಿದ್ದರು. ಒಮ್ಮೆಯೂ ಅವರ ಬಾಯಿಂದ ತೋಟ ಎಂಬ ಶಬ್ಧವನ್ನು ನಾನು ಕೇಳಲಿಲ್ಲ. ಒಬ್ಬ ಅಪ್ಪಟ ಬೇಸಾಯಗಾರನ ಮಗನಾಗಿ ಹುಟ್ಟಿದ ನಾನು, ಭೂಮಿಯನ್ನು ಹೊಲ, ಗದ್ದೆ, ತೋಟ ಎಂದು ವಿಂಗಡಿಸಿ ನೋಡುವ ಕ್ರಮಕ್ಕೂ, ಭೂಮಿ ಕುರಿತಂತೆ ಮಹಾದೇವು ಅವರ ಆಲೋಚನಾ ಕ್ರಮಕ್ಕೂ ಎಷ್ಟೊಂದು ಅಂತರ?  ಅವರ ಇಂತಹ  ಮಾತೃಹೃದಯದ ಗುಣದಿಂದಾಗಿ  ಅವರನ್ನು ಪ್ರೀತಿಸುವಂತೆ,  ಗೌರವಿಸುವಂತೆ ಮಾಡಿದೆ.

ಪಿ.ಲಂಕೇಶ್, ತೇಜಸ್ವಿ, ರಾಮದಾಸ್, ಪ್ರೊ.ನಂಜುಂಡಸ್ವಾಮಿ ಮುಂತಾದವರ ಪ್ರಭಾವ ಮತ್ತು ಚಿಂತನೆಯ ಮೂಸೆಯಲ್ಲಿ ಬೆಳೆದ ನನ್ನ ತಲೆಮಾರಿಗೆ ಅವರೆನ್ನೆಲ್ಲಾ ಕಳೆದುಕೊಂಡ ನಂತರ ಆಸರೆಗಾಗಿ, ಮಹಾದೇವು, ಜಿ.ಹೆಚ್, ನಾಯಕರಂತಹವರನ್ನು ಅಪ್ಪಿಕೊಳ್ಳುವಂತೆ ಮಾಡಿತು. ಅಕ್ಷರದ ಹೆಸರಿನಲ್ಲಿ ತಲೆಮಾರಿನ ಎದೆಗೆ ವಿಷಬೀಜಗಳನ್ನು ಬಿತ್ತಲು ಹೊರಟಿರುವ ಅನೇಕ ಮಹಾನುಭಾವರ ನಡುವೆ, ಮಹಾದೇವುರವರಎದೆಗೆ ಬಿದ್ದ ಅಕ್ಷರಕೃತಿ, ದಿಕ್ಕೆಟ್ಟ ಯುವಜನತೆಯ ಪಾಲಿಗೆÉ ದಾರಿ ದೀಪದಂತಿದೆ. ಕೃತಿಯ ಏಳನೆಯ ಪುಟದಲ್ಲಿ ಅವರು ದಾಖಲಿಸಿರುವದಿನ ಸೆವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಖಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ.” ಎಂಬ ಮಾತುಗಳು ಒಬ್ಬ ಅಪ್ಪಟ ಮನುಷ್ಯ ಮಾತ್ರ ಯೋಚಿಸಬಲ್ಲ ಸಂಗತಿಗಳು ಎಂದು ನನಗನಿಸಿಬಿಟ್ಟಿವೆ.
ತಮ್ಮ ಸುಧೀರ್ಘ ನಾಲ್ಕು ದಶಕಗಳ ಬರೆವಣಿಗೆ ಮತ್ತು ಸಾರ್ವಜನಿಕ ಬದುಕನ್ನು ಕುರಿತಂತೆ ತಮ್ಮ ಅನಿಸಿಕೆಗಳನ್ನು ದಾಖಲಿಸಿರುವ ಮಹಾದೇವು ಅವರ ಚಂತನೆಗಳು ಇವೊತ್ತಿಗೂ ಪ್ರಸ್ತುತ ಎನಿಸುತ್ತವೆ. ಪೇಜಾವರ ಮಠಾಧೀಶರೆಂಬ ಎಂಬ ಆರೋಪ ಹೊತ್ತು, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವ  ಹಿರಿಯ ಮಠಾಧೀಶರೊಬ್ಬರು ಇತ್ತೀಚೆಗೆಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ನಾನು ಸಿದ್ಧಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಅವರ ಭೌದ್ಧಿಕ ಮಿತಿಯನ್ನು ಮೊದಲೇ ಅರಿತಂತೆ ಮಾತನಾಡಿರುವ ದೇವನೂರು ಮಹಾದೇವು, ತಮ್ಮ ಕೃತಿಯ ಪುಟ ಸಂಖ್ಯೆ 113 ರಲ್ಲಿಬೇಕಾದದು- ವೈಷ್ಣವ ದೀಕ್ಷೆಯಲ್ಲ; ತ್ರಿಜ ದೀಕ್ಷೆಎಂಬ ಲೇಖನ ಬರೆದಿದ್ದಾರೆ.
ಇಡೀ ಕೃತಿಯಲ್ಲಿ ಕಾಣಬರುವ ಮಹಾದೇವು ಅವರ ಚಿಂತನೆಗಳನ್ನು ಗಮನಿಸುವಾಗ, ನೆಲದ ಸಂಸ್ಕತಿಯ ಬಗ್ಗೆ, ಬಾಯಿಲ್ಲದ ದೀನ ದಲಿತರ ಬಗ್ಗೆ ಮತ್ತು  ತಾಂಡವವಾಡುತ್ತಿರವ ಮೌಡ್ಯದ ಬಗ್ಗೆ ಹಾಗೂ ನಮ್ಮ ದೈನಂದಿನ ಬದುಕಿನ ಒಂದು ಭಾಗವೇ ಆಗಿ ಹೋಗಿರುವ ಭ್ರಷ್ಟಾಚಾರದ ಕುರಿತ ಅವರ ಸಿಟ್ಟು ಮತ್ತು ಕಾಳಜಿಗಳನ್ನು ನೋಡುತ್ತಿದ್ದರೆ, ಅವರದೇ ಒಡಲಾಳ ಕೃತಿಯ ಸಾಕವ್ವ ನೆನಪಿಗೆ ಬರುತ್ತಾಳೆ. ತನ್ನ ವೃದ್ಧಾಪ್ಯ ಮತ್ತು ಅಸಹಾಯಕತೆಗಳ ನಡುವೆ ತನ್ನ ಕುಟುಂಬದ ಮಕ್ಕಳನ್ನು, ಮೊಮ್ಮಕ್ಕಳನ್ನು ಪೊರೆಯುವ ಸಾಕಮ್ಮನಂತೆ ಮಹಾದೇವು ನನಗೆ ಕಾಣುತ್ತಾರೆ.

ನಾವು ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ಯಾವುದು ಕನಿಷ್ಟ? ಯಾವುದು ಗರಿಷ್ಟ? ಎಂಬ ತಾರತಮ್ಯವಾಗಲಿ, ಯಾವುದು ನೈತಿಕತೆ? ಯಾವುದು ಅನೈತಿಕತೆ ಎಂಬುದರ ಬಗೆಗಿನ ಗಡಿ ರೇಖೆಗಳಾಗಲಿ ಎಲ್ಲವೂ ಅಳಿಸಿ ಹೋಗಿರುವಾಗ, ಮಹಾದೇವು ಅವರ ಚಿಂತನೆಗಳು ದಿಕ್ಕೆಟ್ಟ ಮನುಷ್ಯನ ಎದೆಗೆ ಒಂದಿಷ್ಟು ತಂಪನ್ನು ಮತ್ತು ಸ್ಪಷ್ಟತೆಯನ್ನು  ತರಬಲ್ಲವು ಎಂದು ನಾನು ನಂಬಿದ್ದೇನೆ. ಒಬ್ಬ ಅಪ್ಪಟ ಅಂಬೇಡ್ಕರ್ವಾದಿಯಾಗಬೇಕಾದರೆ, ಗಾಂಧಿಯನ್ನು ನಖಶಿಖಾಂತ ದ್ವೇಷಿಸಬೇಕು, ಒಬ್ಬ ಹಿಂದೂ ರಾಷ್ಟ್ರವಾದಿಯಾಗಬೇಕಾದರೆ, ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದ ಅಲ್ಪ ಸಂಖ್ಯಾತರನ್ನು ದ್ವೇಷಿಸಬೇಕು ಎಂಬ ಅಪಕ್ವ ಚಂತನೆಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಮಹಾದೇವು ದಾಖಲಿಸಿರುವಗಾಂಧಿ- ಕಾಠಿಣ್ಯದ ತಂದೆಯಂತೆ, ಜೆ.ಪಿ.-ಅಸಹಾಯಕ ತಾಯಿಯಂತೆ, ವಿನೋಭಾ- ಮದುವೆಯಾದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ- ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ . ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?” ಮಾತುಗಳನ್ನು ಗಮನಿಸುವಾಗ ಮಹಾದೇವ ಮಾತ್ರ ಆಡಬಹುದಾದ ಮಾತುಗಳು ಮತ್ತು ಬರೆಯಬಹುದಾದ ಅಕ್ಷರಗಳು ಎನಿಸಿಬಿಟ್ಟಿದೆ. ಜೊತೆಗೆ ಇವುಗಳನ್ನು ಅಳಿಸಿ ಹೋಗದ ಹಾಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎದೆಯ ಮೇಲೆ ಶಿಲಾ ಶಾಸನದತೆ ತಾನೆ ಸ್ವತಃ ಕೆತ್ತಿಕೊಳ್ಳಬೇಕಿದೆ. ಇದನ್ನು ನೀವು ಮಹಾದೇವು ಅವರ ತಾಕತ್ತು, ಅಂತಃಶಕ್ತಿ,  ಅಥವಾ ಮಾನವೀಯ ಗುಣ, ಇಲ್ಲವೇ ಸಮಷ್ಟಿ ಪ್ರಜ್ಙೆ ಎಂದೆಲ್ಲಾ ಕರೆಯಬಹುದು.

(ಎದೆಗೆ ಬಿದ್ದ ಅಕ್ಷರ ಕೃತಿಯು ಹತ್ತನೆಯ ಮುದ್ರಣ ಕಾಣುತ್ತಿರುವ ಸಂದರ್ಭದಲ್ಲಿ ಮಿತ್ರರಾದ ಚಂದ್ರಶೇಖರ ಐಜೂರು   ಮತ್ತು ಅಭಿನವ ರವಿ ಇವರಿಗೆ  ನೀಡಿದ ಪ್ರತಿಕ್ರಿಯೆ)