Wednesday, 27 November 2013

ಬೇಂದ್ರೆ ಮತ್ತು ಮಧುರ ಚನ್ನ ಗೆಳೆತನ ಒಂದು ನೆನಪುhttp://kendasampige.com/images/trans.gif
ಬಿಜಾಪುರ ನಗರದ ಉತ್ತರ ದಿಕ್ಕಿಗೆ ೯೦ ಕಿ. ಮೀ. ದೂರವಿರುವ ಸೊಲ್ಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ೬೫ ಕಿ. ಮೀ. ದೂರದಲ್ಲಿ ಜಳಕಿ ಕ್ರಾಸ್ ಎಂಬ ಹೆಸರಿನ ಪುಟ್ಟ ಊರಿದೆ. ಈ ಊರಿನ ಮದ್ಯಭಾಗದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯ ಎಡಭಾಗಕ್ಕೆ ಚಡಚಣ ಮಾರ್ಗವಾಗಿ ಫಂಡರಾ ಪುರಕ್ಕೆ ಹೋಗುವ ರಾಜ್ಯಹೆದ್ದಾರಿ ಇದೆ. ಹಾಗಾಗಿ ಈ ಸ್ಥಳದಲ್ಲಿ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಮಹಾರಾಷ್ಟ್ರದಿಂದ ಬಂದುಹೋಗುವ ನೂರಾರು ಸರಕು ಸಾಗಾಣಿಕೆ ಲಾರಿಗಳು ಇಲ್ಲಿ ಸದಾ ತಪಾಸಣೆಗೆ ನಿಲ್ಲುವುದರಿಂದ, ಈ ಜಳಕಿ ಕ್ರಾಸ್ ಈಗ ಪುಟ್ಟ ಪಟ್ಟಣವಾಗಿ ಮಾರ್ಪಟ್ಟಿದೆ.

ಜಳಕಿ ಕ್ರಾಸ್‌ನಿಂದ ಸೊಲ್ಲಾಪುರ ದಿಕ್ಕಿನ ೫ ಕಿ. ಮೀ. ದೂರದಲ್ಲಿ ಕರ್ನಾಟಕ - ಮಹಾರಾಷ್ಟ್ರವನ್ನು ಭೌಗೋಳಿಕವಾಗಿ ಬೇಧಿಸಿರುವ ಭೀಮಾನದಿ ಹರಿಯುತ್ತಿದೆ. ಈ ನದಿ ತೀರದ ಅನೇಕ ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ದರೋಡೆಕೋರರಾಗಿ, ಕೊಲೆಗಾರರಾಗಿ, ಭೀಮಾನದಿ ಹಂತಕರೆಂದು ಹೆಸರಾಗಿ ಪೊಲೀಸರ ಗುಂಡಿಗೆ ಬಲಿಯಾದವರ ಕಪ್ಪು ಇತಿಹಾಸವೂ ಈ ಪ್ರದೇಶಕ್ಕಿದೆ. ಭೀಮಾನದಿ ಸೇತುವೆಗೆ ೧ ಕಿ.ಮೀ. ಮುನ್ನವೇ ರಸ್ತೆಯ ಬಲಬದಿಯಲ್ಲಿ ನಮಗೆ ಕಾಣಸಿಗುವ ‘ಹಲಸಂಗಿ ಗ್ರಾಮಕ್ಕೆ ದಾರಿ’ ಎಂಬ ನಾಮ ಫಲಕ ಕನ್ನಡ ಇತಿಹಾಸ ಬಲ್ಲವರಿಗೆ ಪುಳಕ ತರುವ ವಿಚಾರ.

ಕರ್ನಾಟಕದ ಗಡಿಭಾಗದ ಕಟ್ಟಕಡೆಯ ಕುಗ್ರಾಮದಲ್ಲಿ ೧೯೨೦ರ ದಶಕದಲ್ಲಿ, ಅದೂ ಮರಾಠಿ, ಉರ್ದು ಭಾಷೆಯ ಪ್ರಭಾವವಿದ್ದ ವಾತಾವರಣದಲ್ಲಿ ನಾಲ್ಕಾರು ಸಮಾನ ಮನಸ್ಕರು ಕನ್ನಡ ಸಾಹಿತ್ಯವನ್ನು ಧ್ಯಾನಿಸಿದ್ದು, ಉಸಿರಾಡಿದ್ದು, ಅದರಲ್ಲೇ ತಮ್ಮ ಬದುಕನ್ನು ಸವೆಸಿದ್ದು ಸಣ್ಣ ಸಂಗತಿಯೇನಲ್ಲ. ಆಧುನಿಕ ಕನ್ನಡ ಸಾಹಿತ್ಯಕ್ಕೆ (ನವೋದಯ) ಮತ್ತು ಜನಪದ ಸಾಹಿತ್ಯಕ್ಕೆ ಅಪೂರ್ವ ಕಾಣಿಕೆ ನೀಡಿದ ಹಲಸಂಗಿ ಗೆಳೆಯರು ಗುಂಪಿನ ನಿಜವಾದ ರೂವಾರಿ ಅನುಭಾವ ಕವಿ ಮಧುರಚೆನ್ನರು. ಇವರ ಜೊತೆ ಕೈ ಜೋಡಿಸಿ ಕನ್ನಡದ ತೇರನ್ನು ಎಳೆದವರು ಸಿಂಪಿಲಿಂಗಣ್ಣ, ರೇವಪ್ಪ ಕಾಪಸೆ ಮತ್ತು ದೂಳಾಸಾಹಿಬ್.

ಇಪ್ಪತ್ತನೇ ಶತಮಾನದ ಆದಿಕಾಲದವರೆಗೆ ನಮ್ಮ ಹಳೆಗನ್ನಡ, ಛಂದಸ್ಸು, ವ್ಯಾಕರಣ, ಅಷ್ಟಾದಶ ವರ್ಣನೆ ಮುಂತಾದ ಅಲಂಕಾರಗಳಿಂದ ಮೂಗಿಗಿಂತ ಮೂಗುತಿ ಭಾರ ಎನ್ನುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯಕ್ಕೆ ಆಧುನಿಕ ಗಾಳಿ ಬೀಸಿದ್ದು ೧೯೨೦ ರ ದಶಕದಲ್ಲಿ. ದಕ್ಷಿಣ ಕರ್ನಾಟಕದಲ್ಲಿ ಬಿ.ಎಂ. ಶ್ರೀ ರವರ ‘ಇಂಗ್ಲೀಷ್ ಗೀತಗಳು’ ಕೃತಿಯಿಂದ ಕನ್ನಡ ಕಾವ್ಯ ಹೊಸ ಸ್ಪರ್ಶ ಪಡೆಯುವುದರೊಂದಿಗೆ, ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯ ಪ್ರೇರಣೆ ಪಡೆಯಿತು. ಇದೇ ಸಂದರ್ಭದಲ್ಲಿ ಕರಾವಳಿ ತೀರದಲ್ಲಿ ಪಂಜೆ ಮಂಗೇಶರಾಯರು, ಗೋವಿಂದಪೈ, ಧಾರವಾಡದಲ್ಲಿ ಬೇಂದ್ರೆ ನೇತೃತ್ವದ ಗೆಳೆಯರ ಗುಂಪು ಕನ್ನಡ ಸಾಹಿತ್ಯಕ್ಕೆ ಹೊಸ-ಹೊಸ ಪ್ರೇರಣೆ ಒದಗಿಸಿದರು. ಕನ್ನಡ ಸಾಹಿತ್ಯ ಆಧುನಿಕ ರೂಪ ಪಡೆಯುವ ಮುನ್ನವೇ, ಅದಕ್ಕಾಗಿ ಹೊಸ ವೇದಿಕೆ ಸೃಷ್ಠಿಯಾಗಿದ್ದನ್ನು ನಾವು ಉತ್ತರ ಕರ್ನಾಟಕದ ತತ್ವಕಾರರ ತತ್ವಪದಗಳಲ್ಲಿ ಹರಿಯಬಹುದು. ಶಿಶುನಾಳ ಷರೀಫರ ತತ್ವ ಪದಗಳು, ಅಭಿವ್ಯಕ್ತಿಯಲ್ಲಿ, ಭಾಷೆಯಲ್ಲಿ, ನವೋದಯ ಸಾಹಿತ್ಯ ಅಸ್ತಿತ್ವಕ್ಕೆ ಬರುವ ಮುನ್ನವೆ ಚಾಲ್ತಿಯಲ್ಲಿದ್ದುದನ್ನು ನಾವು ಕಾಣಬಹುದು.

ಕನ್ನಡ ಸಾಹಿತ್ಯಕ್ಕೆ ಇಂತಹದ್ದೆ ಹೊಸ ರೂಪನೀಡಿದವರು ಹಲಸಂಗಿ ಗೆಳೆಯರು. ಈ ಗೆಳೆಯರು ೧೯೩೧ ರಲ್ಲಿ ಸಂಪಾದಿಸಿ ಪ್ರಕಟಿಸಿದ ‘ಗರತಿಯ ಹಾಡು’ ಸಂಕಲನ ಜಾನಪದ ಕ್ಷೇತ್ರಕ್ಕೆ ಅನನ್ಯ ಕೊಡುಗೆಯಾಯಿತು. ೧೯೩೩ ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಅರ್ಚಕಹಳ್ಳಿಯ ಬಿ. ರಂಗಸ್ವಾಮಿ ಪ್ರಕಟಿಸಿದ ‘ಹುಟ್ಟದ ಹಳ್ಳಿಯ ಹಾಡು’ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿ. ವಿ. ತೊರ್ಕೆ ಯವರು ಪ್ರಕಟಿಸಿದ ‘ಹಳ್ಳಿಯ ಹಾಡುಗಳು’ ಇವೆಲ್ಲವೂ ಜನಪದ ಸಾಹಿತ್ಯ ಮಾತ್ರವಲ್ಲ, ಕನ್ನಡ ಕಾವ್ಯಕ್ಕೆ ಕೂಡ ಪ್ರೇರಣೆಯಾದವು.

ಕನ್ನಡ ಸಾಹಿತ್ಯ ವಲಯದಲ್ಲಾಗುತ್ತಿದ್ದ ಪಲ್ಲಟಗಳ ಬಗ್ಗೆ ಯಾವುದೇ ಅರಿವಿಲ್ಲದೆ, ದೂರದ ಕರ್ನಾಟಕ ಗಡಿಭಾಗದ ಹಳ್ಳಿಯೊಂದರಲ್ಲಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು ಹಲಸಂಗಿ ಗೆಳೆಯರು. ಇವರ ಪಾಲಿಗೆ ಕನ್ನಡವೆಂಬುದು ಕೇವಲ ಭಾಷೆಯಷ್ಟೇ ಅಲ್ಲ, ಅದು ಉಸಿರಾಗಿತ್ತು. ಅವರ ಪಾಲಿನ ಧ್ಯಾನವಾಗಿತ್ತು. ಅದಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ತಮ್ಮ ಬದುಕಿಗಿಂತ ಕನ್ನಡವೇ ಮುಖ್ಯ ಎಂದು ನಂಬಿ ಬದುಕಿದ ಈ ಗೆಳೆಯರ ಗುಂಪಿನ ಸಿಂಪಿ ಲಿಂಗಣ್ಣ ಬಿಜಾಪುರದ ಗುಮ್ಮಟವನ್ನು ಉದ್ದೇಶಿಸಿ-
 


ಏಳು ಗುಮ್ಮಟವೇ
ನೀ ಏಳು
ಏಳು ಮಾತಿನ ಗುಮ್ಮಟವೇ
ನೀ ಏಳು
ನೀ ಎದ್ದರೆ, ಕನ್ನಡವೇ ಎದ್ದೀತು
ಗೋರಿಗಿಷ್ಟು ಬೆಲೆ ಕೊಟ್ಟವರು
ಬಾಳಿಗೆಷ್ಟು ಬೆಲೆ ಕೊಟ್ಟಿದ್ದರು
ಎಂಬುದನ್ನು ನಡೆದು ತೋರಿಸಲು
ನೀ ಏಳು

ಎಂದು ಎದೆ ತುಂಬಿ ಹಾಡಿ, ತಮ್ಮ ಕನ್ನಡದ ಬಗೆಗಿನ ಬದ್ಧತೆಯನ್ನು ತೋರಿಸಿದ್ದರು.

ಹಲಸಂಗಿ ಗೆಳೆಯರ ಗುಂಪಿನ ನೇತಾರ ಮಧುರ ಚೆನ್ನರ ನಿಜವದ ಹೆಸರು ಹಲಸಂಗಿ ಚೆನ್ನಮಲ್ಲಪ್ಪ ಎಂದು. ಅವರು ‘ನನ್ನ ನಲ್ಲ’ ಕಾವ್ಯ ಸಂಕಲನ ಪ್ರಕಟಿಸಿ ಕೀರ್ತಿಗಳಿಸಿದ ನಂತರ ಬರೆದ ‘ಮಧುರ ಗೀತ’ ಖಂಡ ಕಾವ್ಯದ ಸಂದರ್ಭದಲ್ಲಿ ‘ಮಧುರ ಚೆನ್ನ’ ಎಂಬ ಕಾವ್ಯನಾಮ ಇಟ್ಟುಕೊಂಡರು. ಈ ಕುರಿತು ತಮ್ಮ ‘ಮಧುರ ಗೀತ’ ಕಾವ್ಯದಲ್ಲಿ ಅವರೇ ಹೇಳಿಕೊಂಡಿದ್ದಾರೆ-

ಜನರಾಡಿಕೊಳ್ಳಬಹುದು ನನಗೂ ನಿನಗೂ ಕೂಡೆ
ಅವರೇನು ಬಲ್ಲರೋ ಒಳನಿಧಾನ
ನನಗೆ ನೀನತಿ ಮಧುರ, ನಿನಗೆ ನಾ ಬಲು ಚೆನ್ನ
ಹೀಗಂತಲೇ ನಾವು ಮಧುರ ಚೆನ್ನ.

೧೯೦೩ ರಲ್ಲಿ ಹಲಸಂಗಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಮಧುರ ಚೆನ್ನರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡರು. ಹೀಗಾಗಿ ಉನ್ನತ ಶಿಕ್ಷಣದ ಕನಸುಗಳಿಗೆ ತಿಲಾಂಜಲಿ ಇತ್ತು, ಸಂಸಾರದ ನೊಗ ಹೊತ್ತು, ಹೆತ್ತ ತಾಯಿಯ ಇಚ್ಛೆಯಂತೆ ೧೯ ನೇ ವಯಸ್ಸಿಗೆ ವಿವಾಹವಾದರು. ಸಂಸಾರದ ಹೊಣೆ ಹಾಗೂ ಕೃಷಿ ಕುಟುಂಬದ ವ್ಯವಹಾರದ ನಡುವೆಯೂ ಇಂಗ್ಲೀಷ್ ಕಲಿಯುವ ಆಸೆಯಿಂದ ಸ್ವಲ್ಪ ಕಾಲ ಬಿಜಾಪುರದಲ್ಲಿ ವಾಸವಾಗಿ ಕೊಣ್ಣೂರ ಹನುಮಂತರಾಯರಿಂದ ಇಂಗ್ಲೀಷ್ ಶಿಕ್ಷಣ ಪಡೆದುಕೊಂಡರು. ಅಂದಿನ ಗ್ರಾಮ ಪರಿಸರದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಕಂದಾಚಾರಗಳ ಬಗ್ಗೆ ಬೇಸತ್ತಿದ್ದ ಮಧುರಚೆನ್ನರು ತಮ್ಮ ಗೆಳೆಯರ ಜೊತೆಗೂಡಿ ೧೯೨೨ ರಲ್ಲಿ ತನ್ನೂರಿನಲ್ಲಿ ಶಾರದಾ ವಾಚನಾಲಯ ಸ್ಥಾಪಿಸಿ, ಗಾಂಧಿ, ವಿವೇಕಾನಂದ, ಅರವಿಂದರು, ರಾಮಕೃಷ್ಣ ಪರಮಹಂಸರ ಕೃತಿಗಳನ್ನು ಕಲೆಹಾಕಿ, ತಾವು ಓದಿದ್ದಲ್ಲದೆ ಜನರಿಗೂ ಓದಿಸಿದರು.

ತಂದೆಯ ಸಾವಿನ ನಂತರ ಆಧ್ಯಾತ್ಮದತ್ತ ಒಲವು ತೋರಿದ ಮಧುರಚೆನ್ನರಿಗೆ, ಅರವಿಂದರ ಚಿಂತನೆಗಳು ಹೆಚ್ಚು ಪ್ರಭಾವ ಬೀರಿ, ಅವರ ಭಕ್ತರಾದರು. ಅರವಿಂದರ ಮೇಲಿನ ಭಕ್ತಿ ಅವರ ಕಡೆಯ ಬದುಕಿನವರೆಗೂ ಮುಂದುವರಿದಿತ್ತು. ಗ್ರಾಮ ಪರಿಸರದಲ್ಲಿ ಕಿವಿಯ ಮೇಲೆ ಬೀಳುತ್ತಿದ್ದ ಜನಪದ ಹಾಡುಗಳಿಂದ ಪ್ರೇರಿತರಾಗಿದ್ದ ಅವರು, ಶಾಲೆಯಲ್ಲಿದ್ದಾಗಲೇ ಕವಿತೆ ಬರೆಯಲು ಪ್ರಾರಂಭಿಸಿದ್ದರು. ಸೊಲ್ಲಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚನಮಾಡಿ (೧೯೧೮ ರಲ್ಲಿ), ಸಮ್ಮೇಳನದಲ್ಲಿ ಭಾಗವಹಿಸಿದ್ದ ಬೇಂದ್ರೆಯವರ ಗಮನ ಸೆಳೆದರು. ಆನಂತರ ಬೇಂದ್ರೆ - ಮಧುರಚೆನ್ನರ ಬಾಂಧವ್ಯ ರಾಮ-ಲಕ್ಷ್ಮಣರ ಬಾಂಧವ್ಯದಂತೆ ಬೆಳೆಯಿತು.

ಧಾರವಾಡದಲ್ಲಿ ಬೇಂದ್ರೆಯವರು ಗೆಳೆಯರ ಗುಂಪು ಹೆಸರಿನಲ್ಲಿ ಪ್ರಕಟಿಸುತ್ತಿದ್ದ ‘ಜಯ ಕರ್ನಾಟಕ’ ಪತ್ರಿಕೆಗೆ ಮಧುರಚೆನ್ನ ಹಾಗೂ ಅವರ ಹಲಸಂಗಿ ಗೆಳೆಯರು ಲೇಖನ, ಕವಿತೆ ಬರೆಯತೊಡಗಿದರು. ನಂತರದ ದಿನಗಳಲ್ಲಿ ಬೇಂದ್ರೆಯವರಿಗೆ ಮಾಸ್ತಿಯವರು ತಮ್ಮ ‘ಜೀವನ’ ಪತ್ರಿಕೆಯ ಸಂಪಾದಕನ ಸ್ಥಾನ ವಹಿಸಿದಾಗ, ಈ ಪತ್ರಿಕೆಯಲ್ಲೂ ಹಲಸಂಗಿ ಗೆಳೆಯರು ಲೇಖನ, ಕವಿತೆ, ತಾವು ಸಂಪಾದಿಸಿದ ಜನಪದ ಗೀತೆಗಳನ್ನು ಪ್ರಕಟಿಸಿ, ಕರ್ನಾಟಕದ ಸಾಹಿತ್ಯಾಸಕ್ತರ ಗಮನ ಸೆಳೆದರು.

ಮಧುರಚೆನ್ನರ ಒಳ್ಳೆಯ ಗುಣವೆಂದರೆ, ಅವರು ತಾವು ಬರೆಯುವುದರೊಂದಿಗೆ ತಮ್ಮ ಗೆಳೆಯರನ್ನೂ ಬರೆಯಲು ಪ್ರೇರೇಪಿಸುತ್ತಿದ್ದರು. ಹೀಗಾಗಿ ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ, ದೂಳಸಾಹೇಬ್ ಬೆಳಕಿಗೆ ಬಂದರು. ೧೯೨೦ ರ ದಶಕದಲ್ಲಿ ಮಧುರಚೆನ್ನರ ಪ್ರೇರಣೆಯಿಂದ ಕವಿತೆಗಳ ಸಂಕಲನ ಒಂದನ್ನು ಪ್ರಕಟಿಸಿದ ದೂಳ ಸಾಹೇಬ್ ಆಧುನಿಕ ನವೋದಯ ಕನ್ನಡ ಸಾಹಿತ್ಯದ ಪ್ರಥಮ ಮುಸ್ಲಿಂ ಕವಿ ಎಂಬ ಕೀರ್ತಿಗೆ ಪಾತ್ರರಾದರು.

ಮೂಲತ: ಅನುಭಾವ ಕವಿಯಾಗಿದ್ದರೂ ಕೂಡ, ‘ನಾನು ಕವಿಯಲ್ಲ ಸಂಶೋಧಕ’ ಎಂದೇ ಮಧುರಚೆನ್ನರು ಹೇಳಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಅವರು ಹಲವಾರು ಸಂಶೋಧನೆಗಳನ್ನೂ ಸಹ ಮಾಡಿದ್ದರು. ಅವರ ಮಹತ್ವದ ಸಂಶೋಧನೆಯೆಂದರೆ, ಹನ್ನೊಂದನೇ ಶತಮಾನದ ಅಭಿನವ ಪಂಪನೆಂದೇ ಬಿರುದು ಪಡೆದಿದ್ದ ನಾಗಚಂದ್ರನ ಊರು ಬಿಜಾಪುರ ಎಂಬುದನ್ನು ಶಾಸನಗಳ ಮೂಲಕ ಮಧುರಚೆನ್ನರು ಸಾಬೀತು ಪಡಿಸಿದರು. ಇದಕ್ಕೂ ಮುನ್ನ ನಾಗಚಂದ್ರ ಕೊಡಗಿನವನೆಂದು, ಮಂಗಳೂರಿನವನೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದರು. ‘ಮಲ್ಲಿನಾಥ ಪುರಾಣ’ ಕೃತಿಯ ಮೂಲಕ ಹೆಸರಾದ ನಾಗಚಂದ್ರನ ಕುರಿತಾದ ಶಾಸನದ ಲಿಪಿಯ ‘ಮಲ್ಲಿ ಜಿನೇಂದ್ರ ಗೇ ಹಮಂ ವಿಜಯ ಸರಕ್ಕಲಂಕರಣ ಮಾಗಿರೆ ಮಾಡಿಸಿ. ತಚ್ಛರಿತ ಮಂ.....’ ಎಂಬ ಶಾಸನೋಕ್ತ ಪದ್ಯವನ್ನು ವಿಶ್ಲೇಷಿಸಿ, ನಾಗಚಂದ್ರನ ಸ್ಥಳ ಚರಿತ್ರೆಯ ಗೊಂದಲಕ್ಕೆ ಇತಿಶ್ರೀ ಹಾಡಿದರು. ಮಧುರಚೆನ್ನರ ವಿಶೇಷವೆಂದರೆ, ಟಾಲ್‌ಸ್ಟಾಯ್, ಅರವಿಂದರ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವುದು.

ಬೇಂದ್ರೆ ಮತ್ತು ಮಧುರಚೆನ್ನಕನ್ನಡ ಕಾವ್ಯ ಲೋಕದಲ್ಲಿ ಕವಿತೆಗೆ ಬೇಂದ್ರೆ ಎಷ್ಟು ಹೆಸರುವಾಸಿಯಾಗಿದ್ದರೊ, ಅಷ್ಟೇ ಹೆಸರನ್ನು ಅವರು ಜಗಳಗಂಟಿತನದಲ್ಲೂ ಪಡೆದಿದ್ದರು. ಬೇಂದ್ರೆಯವರ ಸಿಟ್ಟು -ಪ್ರೀತಿ -ಜಗಳ-ಕವಿತೆ, ಅವರ ಕಾವ್ಯ ವಾಚನ ಸಾಂಸ್ಕೃತಿಕ ನಗರ ಧಾರವಾಡದಲ್ಲಿ ಇಂದಿಗೂ ಲೋಕಪ್ರಸಿದ್ಧಿ. ಪದವಿ ತರಗತಿಗಳಿಗೆ ಅವರ ಕೆಲವು ಕವಿತೆಗಳು ಪಠ್ಯವಾಗಿದ್ದ ಸಂದರ್ಭದಲ್ಲಿ ಪಾಠ ಮಾಡುತ್ತಿದ್ದ ಅಧ್ಯಾಪಕರು, ಬೇಂದ್ರೆಯವರ ಕೆಲವು ಕವಿತೆಗಳನ್ನು ವಾಚನ ಮಾಡುವುದು ಅಥವಾ ಅರ್ಥೈಸುವುದು ಕಠಿಣ ಎಂಬ ಮಾತುಗಳನ್ನು ತರಗತಿಯಲ್ಲಿ ಆಡಿದ ಸುದ್ದಿ ಬೇಂದ್ರೆಯವರ ಕಿವಿಗೆ ಬಿದ್ದ ತಕ್ಷಣ, ಆ ಅಧ್ಯಾಪಕನನ್ನು ಹುಡುಕಿಕೊಂಡು ಹೊರಡುತ್ತಿದ್ದರು. ಆ ಅಧ್ಯಾಪಕನನ್ನು ನಡುರಸ್ತೆಯಲ್ಲೇ ನಿಲ್ಲಿಸಿ, "ಯಾಕ? ಯಾಕಾಂತ? ನನ್ನ ಕವಿತಾ ಅರ್ಥವಾಗೊಲ್ದು ಅಂತಾ ಹೇಳಿದ್ದೀಯಂತಿ ನೀನು? ನಿನಗ ಯಾಕ ಅರ್ಥವಾಗೊಲ್ದು? ನಾಳಿ ನೀನು ನನ್ನ ಮನಿಗೆ ಬಾ. ನಾ ಕವಿತಾ ವಾಚನ ಮಾಡಲಿಕ್ಕೆ ಹತ್ತೀನಿ." ಅಂತ ತಾಕೀತು ಮಾಡಿ ಬರುತ್ತಿದ್ದರು. ಅದೇ ರೀತಿ ಕವಿತೆಗಳ ಬಗ್ಗೆ ಪ್ರಶಂಸೆಯ ಮಾತನಾಡಿದ ಅಧ್ಯಾಪಕರ ಮನೆ ಬಾಗಿಲು ಬಡಿದು, "ತಮ್ಮಾ ನನ್ನ ಕವಿತಾ ಬಗ್ಗಿ ಒಳ್ಳೆ ಪಾಠ ಮಾಡ್ತೀಯಂತಿ ನೀ. ಬೇಷಾಯ್ತು. ತಗೊ ಕಲ್ಲು ಸಕ್ಕರಿ ತಿನ್ನು" ಎಂದು ಹೇಳುತ್ತಾ ತಮ್ಮ ಕೋಟಿನ ಜೇಬಿನಿಂದ ಕಲ್ಲು ಸಕ್ಕರೆ ತೆಗೆದುಕೊಟ್ಟು, ಬೆನ್ನು ತಟ್ಟಿ ಬರುತ್ತಿದ್ದರು. ಇದು ಬೇಂದ್ರೆಯವರ ವ್ಯಕ್ತಿತ್ವ. ಇಂತಹ ಬೇಂದ್ರೆ ತಮ್ಮ ಜೀವಿತದಲ್ಲಿ ಒಮ್ಮೆಯೂ ಜಗಳವಾಡದ ವ್ಯಕ್ತಿ ಇದ್ದರೆ ಅದು ಮಧುರಚೆನ್ನರು ಮಾತ್ರ. ಬೇಂದ್ರೆಯವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಧುರಚನ್ನರು ಅವರನ್ನು ಅಣ್ಣಾ ಎಂದೇ ಸಂಬೋಧಿಸುತ್ತಿದ್ದರು. ಬೇಂದ್ರೆ - ಮಧುರಚೆನ್ನರ ಪ್ರೀತಿಯಾದರೂ ಎಂತಹದ್ದು? ಅದು ಮಧುರಚನ್ನರು ಹಾಡಿದ,

ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ಧಿಯಾಚೆಗಿನ ಮಾತು
ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು.

ಎಂಬ ಈ ಮೇಲಿನ ಕವಿತೆಯಲ್ಲೇ ವ್ಯಕ್ತವಾಗಿದೆ.

ಬೇಂದ್ರೆಯವರ ಜೀವಿತದ ಸುಖದ ದಿನಗಳೆಂದರೆ, ಅವರು ಸೊಲ್ಲಾಪುರದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಹನ್ನೆರಡು ವರ್ಷಗಳು. ಆ ದಿನಗಳಲ್ಲಿ ಬೇಂದ್ರೆ ಮತ್ತು ಹಲಸಂಗಿ ಗೆಳೆಯರು ಪದೇ - ಪದೇ ಭೇಟಿಯಾಗುತ್ತಿದ್ದರು. ಹಲಸಂಗಿಯಿಂದ ಗಡಿಯಾಚೆ ೧೩ ಕಿ.ಮೀ. ದೂರದ ಸೊಲ್ಲಾಪುರಕ್ಕೆ ಗೆಳೆಯರು ಹೋಗುವುದು ಅಥವಾ ಹಲಸಂಗಿಗೆ ಬೇಂದ್ರೆಯವರೇ ಬರುವುದು ವಾಡಿಕೆಯಾಗಿತ್ತು. ಈ ಭೇಟಿಯ ಸಂದರ್ಭದಲ್ಲೆಲ್ಲಾ ಸಾಹಿತ್ಯ ಕುರಿತೇ ಚರ್ಚೆ ನಡೆಯುತ್ತಿತ್ತು. ಈ ಗೆಳೆಯರ ನಡುವೆ ಸರಪಳಿ ಕೊಂಡಿಯಾಗಿ ಕೆಲಸಮಾಡಿದ್ದು ಕೂಡ ಕನ್ನಡ ಸಾಹಿತ್ಯವೇ. ೧೯೪೦ ರ ದಶಕದಲ್ಲಿ ಬೇಂದ್ರೆಯವರು ಮಧುರಚೆನ್ನರಿಗೆ ಬರೆದ ಪತ್ರದ ಸಾಲುಗಳಿವು. "ಹಗಲಿರುಳು ಅವನನ್ನೆ ಹುಡುಕಿಕೊಂಡು ಕೂಡುವವರೆಗೆ ನಾವು ದಣಿವಾರಿಸಿಕೊಳ್ಳಲಾಗದು. ನಮ್ಮ ಗುಂಪಿಗೆ ಗುಂಪನ್ನೆಲ್ಲಾ ಆವರಿಸಿದ ಚಿಂತೆಯು ಆ ವಿರಹದ ಭಾಗ್ಯ ಚಿಹ್ನೆಯಾಗಿದೆ. ಹರಿಹರನ ಪಂಪಾ ಶತಕ ವನ್ನೋದಿರುವೆಯಲ್ಲವೆ? ಆ ವ್ಯಾಕುಲತೆ ನಮ್ಮಲ್ಲಿಬೇಕು. ಬಸವನ ವಚನದ ವ್ಯಾಕುಲತೆ ನಮ್ಮಲ್ಲಿಬೇಕು. ವಾಸು ದೇವಾ! ಒಡೆಯಾ! ಇತ್ತ ನೋಡಾ ಎಂದು ಆರ್ತತೆಯಿಂದ ಒದರಿದ (ಹೇಳಿದ) ದಾಸರಾಯರ ವ್ಯಾಕುಲತೆ ಬೇಕು. ಈ ವ್ಯಾಕುಲತೆಯನ್ನು ಯಾರಾದರೂ ನನ್ನಲ್ಲಿ ಉಂಟುಮಾಡಿದರೆ ಅವರ ದಾಸಾನು ದಾಸನಾಗುವೆನು." ಹಗಲಿರುಳು ಕನ್ನಡ ಸಾಹಿತ್ಯವನ್ನೇ ಧ್ಯಾನಿಸಿದ ಈ ಮನಸ್ಸುಗಳನ್ನು ಅರಿಯಲು ಇನ್ನೇನು ಬೇಕು ಹೇಳಿ?

ಮಧುರಚನ್ನರ ಸಾವು ಮತ್ತು ಬೇಂದ್ರೆ ಪ್ರತಿಕ್ರಿಯೆಮಧುರಚನ್ನರು ೧೯೫೩ರಲ್ಲಿ ತಮ್ಮ ಐವತ್ತನೇ ವಯಸ್ಸಿನಲ್ಲಿಯೇ ತೀರಿಹೋದದ್ದು ಕನ್ನಡ ಸಾಹಿತ್ಯದ ದುರಂತವೇ ಸರಿ. ಈ ವೇಳೆಗೆ ಬೇಂದ್ರೆಯವರು ತಮ್ಮ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡು ಸೊಲ್ಲಾಪುರದಲ್ಲಿ ವಾಸವಾಗಿದ್ದರು. ಜೀವದ ಗೆಳೆಯನನ್ನು ಕಳೆದುಕೊಂಡ ಬೇಂದ್ರೆಯವರು ಕೂಡಲೆ ಹಲಸಂಗಿಗೆ ಆಗಮಿಸಿ ಮಧುರಚನ್ನರ ಅಂತ್ಯಕ್ರಿಯೆ ನಡೆಯುವ ತನಕ ಅಲ್ಲಿಯೇ ಉಳಿದರು. ಮಧುರಚನ್ನರ ಅಂತ್ಯಕ್ರಿಯೆಗೆ ಬಂದಿದ್ದ ನೂರಾರು ಅಭಿಮಾನಿಗಳು, ಗೆಳೆಯರು ಬೇಂದ್ರೆಯವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆಯೊಂದನ್ನು ನಡೆಸಿದರು. ಅತ್ಯಂತ ಭಾವುಕರಾದ ಬೇಂದ್ರೆಯವರು ಅಗಲಿದ ಗೆಳೆಯನ ಬಗ್ಗೆ ಏನು ಮಾತನಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಬೇಂದ್ರೆ ಮಧುರಚನ್ನರ ಬಗ್ಗೆ ಆಡಿದ ನಾಲ್ಕೇ ನಾಲ್ಕು ಮಾತುಗಳು ಎಲ್ಲರಲ್ಲೂ ರೋಮಾಂಚನ ಮೂಡಿಸಿದವು. ಬೇಂದ್ರೆಯವರ ಮಾತು ಹೀಗಿತ್ತು, "ಯಾಕ ಯಾಕಾಂತ ಎಲ್ಲರೂ ಮೋರೆ ಸಪ್ಪಗ ಮಾಡ್ಕಂಡ್ ಕುಂತಿರಿ? ನಾವು ಇವತ್ತು ಚನ್ನಪ್ಪನ್ನ ಹೂತಿಲ್ಲ ಬಿತ್ತೀವಿ, ಭೂಮ್ಯಾಗಿರೊ ಚನ್ನಪ್ಪ ಬೆಳಿ ಆಗ್ತಾನ. ಬೆಳಿಯೊಳಗಿನ ಕಾಳು ಒಂದು ಎರಡಾಗಿ, ಎರಡು ನಾಕಾಗಿ ನಾಡೆಲ್ಲ ತುಂಬ್ತದ ನಾ ಹಂಗ ಭಾವಿಸ್ಕಂಡಿದೀನಿ ನೀವು ಹಂಗನ ತಿಳ್ಕೋರಿ ಮನಸು ಹಗರಾಗ್ತದ."


ಬೇಂದ್ರೆಯವರು ಅಂದು ಆಡಿದ ಮಾತು ಇವತ್ತಿಗೂ ನಿಜವಾಗಿದೆ. ೧೯೪೩ -೪೪ರಲ್ಲಿ ಮಧುರಚನ್ನ ಹಾಗೂ ಗೆಳೆಯರು ಚಡಚಣ, ಹಲಸಂಗಿ, ಅಥರ್ಗ, ಸಾಲೊಟಗಿ ಮುಂತಾದ ಗ್ರಾಮಗಳಲ್ಲಿ ಸ್ಥಾಪಿಸಿದ ಅರವಿಂದ ಭಜನಾ ಮಂಡಳಿಗಳು ಇಂದೂ ಕೂಡ ಕಾರ್ಯ ನಿರ್ವಹಿಸುತ್ತಾ ಹಲಸಂಗಿ ಗೆಳೆಯರ ನೆನಪನ್ನು ಜೀವಂತವಾಗಿರಿಸಿವೆ.
 ( 2009 ರ ಲ್ಲಿ ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದ್ದ ಲೇಖನ)
http://kendasampige.com/images/trans.gifNo comments:

Post a Comment