ಶನಿವಾರ, ಅಕ್ಟೋಬರ್ 26, 2013

ಗಾಂಧಿ ಎಂಬ ಚುಂಬಕ ಶಕ್ತಿ



ಗಾಂಧಿಯ ವ್ಯಕ್ತಿತ್ವದಲ್ಲಿ ನಾವು ಕಾಣಬಹುದಾದ ಜಿಗಟು ಸ್ವಭಾವ, ಹಠಮಾರಿತನ, ಮತ್ತು ಪಾರದರ್ಶಕ ನಡುವಳಿಕೆಗಳ ಜೊತೆ ಅವರಲ್ಲಿ ಇದ್ದ ಅತಿ ದೊಡ್ಡ ಸಾಮರ್ಥ್ಯವೆಂದರೆ, ಅವರಲ್ಲಿದ್ದ ಚುಂಬಕ ಶಕ್ತಿ. ಅವರ ಇಂತಹ ಸಾಮರ್ಥ್ಯದಿಂದಲಲೇ ಅವರು ಅಂದಿನ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶವನ್ನು ಮುನ್ನೆಡೆಸಲು ಸಾಧ್ಯವಾಯಿತು. ಮತ್ತೊಂದು ಸೋಜಿಗದ ಸಂಗತಿಯೆಂದರೆ, ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ, ಇಡೀ ತಮ್ಮ ಬದುಕನ್ನು ಸಮಾಜ ಸೇವೆಗೆ, ದೇಶ ಭಕ್ತಿಗೆ ತಮ್ಮ ಬದುಕನ್ನು ಮುಡಿಪಾಗಿ ಇಟ್ಟ ಅನೇಕ ಜೀವಗಳು, ಭಾರತದ ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಪರಿಣಾಮಕಾರಿಯಾಗಿ ದಾಖಲಾಗದೆ, ತೆರೆಮರೆಯಲ್ಲಿ ಸರಿದುಹೋಗಿದ್ದಾರೆ. ಇವರಲ್ಲಿ ಗಾಂಧೀಜಿಯವರಿಗೆ ಆತ್ಮದಂತೆ ಇದ್ದ ಮಹದೇವ ದೇಸಾಯಿ, ಹಾಗೂ ಗಾಂಧೀಜಿ ಚಿಂತನೆಗೆ ಮಾರುಹೋಗಿ ಇಂಗ್ಲೆಂಡ್ ತೊರೆದು ಬಂದ ಮೆಡಲಿನ್ ಸ್ಲೆಡ್ ( ಮೀರಾ ಬೆಹನ್) ಭಾರತದವರೇ ಆದ ಮೌಲನಾ ಅಜಾದ್, ಆಪ್ಘಾನಿಸ್ಥಾನದ ಖಾನ್ ಅಬ್ದುಲ್ ಗಪರ್ ಖಾನ್ ಮುಖ್ಯವಾದವರು,
ವರ್ತಮಾನದ ಈ ದಿನಗಳಲ್ಲಿ  ಧರ್ಮಗಳನ್ನು ವಿಭಜಿಸಿ, ಅಲ್ಪ ಸಂಖ್ಯಾತರನ್ನು ಅನುಮಾನದಿಂದ ನೋಡುವ ಮಂದಿ, ತಾವು ಅರಿಯದ, ಓದದ ಇತಿಹಾಸವೊಂದು ಭಾರತದಲ್ಲಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಮೊದಲು ಮನಗಾಣಬೇಕಿದೆ. 1941 ರಲ್ಲಿ ಇಂಡಿಯನ್ ಮುಸ್ಲಿಂ ಲೀಗ್, “ನಿನಗೆ ಧರ್ಮ ಮುಖ್ಯವೊ? ಗಾಂಧೀಜಿ ಮುಖ್ಯವೋ? ಎಂಬುದನ್ನು ನಿರ್ಧರಿಸು ಎಂಬ ಸವಾಲನ್ನು ಮೌಲಾನ ಅಜಾದ್ ಮುಂದೆ ಇಟ್ಟಾಗ, ತೀವ್ರವಾಗಿ ಮಾನಸಿಕ ಕ್ಷೋಭೆಗೆ ಒಳಗಾದ ಮೌಲಾನ ಅವರು, ಅಂತಿಮವಾಗಿ ನನಗೆ ಧರ್ಮಕ್ಕಿಂತ ಗಾಂಧೀಜಿ ಮತ್ತು ಭಾರತದ ಕಾಂಗ್ರೇಸ್ ಮುಖ್ಯ ಎಂಬುದಾಗಿ ಘೋಷಿಸಿದರು.  ಇದೇ ರೀತಿ ನೆರೆಯ ಆಪ್ಘಾನಿಸ್ಥಾನದಿಂದ ಬಂದ ಖಾನ್ ಅಬ್ದುಲ್ ಗಫಾರ್ ಗಾಂಧೀಜಿ ಜೊತೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ, ನಿರಂತರ ಜೈಲು ವಾಸ ಅನುಭವಿಸಿದರು. ನಿತ್ಯ ಮಾಂಸಹಾರಿಯಾಗಿದ್ದ ಹಾಗೂ ದೈತ್ಯ ದೇಹದ, ಸುಮಾರು ಆರೂವರೆ ಅಡಿ ಎತ್ತರವಿದ್ದ ಅವರು, ಜೈಲಿನಲ್ಲಿ ಎರಡು ಚಪಾತಿ ಮತ್ತು ಒಂದು ಬಟ್ಟಲು ಬೇಳೆ ಯಂತಹ ಸಾಮಾನ್ಯ ಆಹಾರದಲ್ಲಿ ಬದುಕಿದರು. ಇವರ ಸಂಕಟವನ್ನು ನೋಡಲಾರದೆ, ಗಾಂಧೀಜಿಯವರು, ಖಾನ್ ಅವರಿಗೆ ಪ್ರತಿದಿನ ಮೊಟ್ಟೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ದೀನನಾಗಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದರು. ಇಂತಹ ತ್ಯಾಗ ಜೀವಿಗಳ ಸಮರ್ಪಣ ಮನೋಭಾವವನ್ನು ಇತಿಹಾಸದ ಪುಟಗಳಲ್ಲಿ ಗಮನಿಸುವಾಗ ಕಣ್ಣುಗಳು ಒದ್ದೆಯಾಗುತ್ತವೆ.


ಪೂನಾ ನಗರದಲ್ಲಿರುವ ಆಗಖಾನ್ ಅರಮನೆ ಗಾಂಧೀಜಿಯವರ ಪಾಲಿಗೆ ಒಂದು ನೋವಿನ ಸ್ಮರಣೆ. ಏಕೆಂದರೆ, ಅವರ ಆತ್ಮ ಸಂಗಾತಿ ಕಸ್ತೂರಬಾ ಮತ್ತು ಆಪ್ತ ಸಂಗಾತಿ ಮಹದೇವ ದೇಸಾಯಿ ಇಬ್ಬರೂ ಇದೇ ಅರಮನೆಯಲ್ಲಿ ಬ್ರಿಟೀಷ್ ಸರ್ಕಾರದಿಂದ ಗೃಹ ಬಂಧನದಲ್ಲಿ ಇದ್ದ ಸಮಯದಲ್ಲಿ ಮೃತ ಪಟ್ಟರು. ಅಂತಿಮವಾಗಿ, ಗಾಂಧೀಜಿ ಇಚ್ಛೆಯಂತೆ ಅವರಿಬ್ಬರಿಗೂ ಅಲ್ಲಿಯೇ (ಅರಮನೆಯ ಹಿಂಭಾಗ) ಅಂತ್ಯ ಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿದೆ. ಗಾಂಧೀಜಿಯವರ ನಿಧಾನಾ ನಂತರ ಅವರ ಚಿತಾ ಭಸ್ಮವನ್ನು ತಂದು ಅವರಿಗೂ ಸಹ ಒಂದು ಸಮಾಧಿಯನ್ನು ನಿರ್ಮಿಸಲಾಗಿದೆ. ಆಗಖಾನ್ ಅರಮನೆಯಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಅವರನ್ನು ಕೂಡಿ ಹಾಕಿದ್ದ ಕೋಣೆ, ಮಹದೇವ ದೇಸಾಯಿ ಇದ್ದ ಕೋಣೆ ಹೀಗೆ ಎಲ್ಲವನ್ನೂ ಯಥಾವತ್ತಾಗಿ ಕಾಪಾಡಿಕೊಂಡು ಬರಲಾಗಿದೆ. ಅರಮನೆಯನ್ನು ಮಾತ್ರ ನವೀಕರಿಸಿ, ಗಾಂಧಿ ಸ್ಮಾರಕ ಟ್ರಸ್ಟ್ ಗೆ ಒಪ್ಪಿಸಲಾಗಿದೆ.

ಮಹದೇವ ದೇಸಾಯಿ ಕೂಡ ಗಾಂಧಿ ನಾಡಾದ ಗುಜರಾತಿನವರು. 1892 ರ ಜನವರಿ ಒಂದರಂದು, ಸೂರತ್ ಬಳಿಯ ಸರಸ್ ಎಂಬ ಹಳ್ಳಿಯಲ್ಲಿ ಓರ್ವ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ಇವರು, ತನ್ನ ಏಳನೆಯ ವಯಸ್ಸಿನಲ್ಲಿ ಹೆತ್ತ ತಾಯಿಯನ್ನು ಕಳೆದು ಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದವರು. ಗಾಂಧೀಜಿಯವರಂತೆ ತನ್ನ ಹದಿಮೂರನೇ ವಯಸ್ಸಿಗೆ ಹನ್ನೆರೆಡು ವಯಸ್ಸಿನ ದುರ್ಗಾದೇವಿ ಎಂಬುವರನ್ನು ವಿವಾಹವಾದವರು. ಅಹಮದಾಬಾದ್ ನಗರದಲ್ಲಿ ಪದವಿ ಓದುತ್ತಿದ್ದ ಸಮಯದಲ್ಲಿ ಪ್ರತಿ ದಿನ ಸಬರಮತಿ ಅಶ್ರಮದ ಮುಂದೆ ಓಡಾಡುತ್ತಾ, ಗಾಂಧೀಜಿಯವರ ಚಟುವಟಿಕೆಗಳನ್ನು ಗಮನಿಸುತ್ತಾ, ಅಂತಿಮವಾಗಿ 1917 ರಲ್ಲಿ ಗುಜರಾತಿನ ಕೇಂದ್ರ ಸಹಕಾರ ಬ್ಯಾಂಕಿನ ಇನ್ಸ್‍ಪೆಕ್ಟರ್ ಹುದ್ದೆ ತೊರೆದು, ಗಾಂಧೀಜಿ ಜೊತೆ ಗುರುತಿಸಿಕೊಂಡು, ಮಹಾತ್ಮನ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.
ಅತ್ಯುತ್ತಮ ಅನುವಾದಕರಾಗಿದ್ದ ಮಹಾದೇವ ದೇಸಾಯಿ ಗಾಂಧೀಜಿಯವರ ಆತ್ಮಕಥೆಯನ್ನು ಪ್ರಥಮವಾಗಿ ಗುಜರಾತಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಜೊತೆಗೆ ನವಜೀವನ ಪತ್ರಿಕೆಯಿಂದ ಹಿಡಿದು, ಗಾಂಧೀಜಿ ಹೊರ ತರುತ್ತಿದ್ದ ಹರಿಜನ ಮತ್ತು ಯಂಗ್ ಇಂಡಿಯ ಪತ್ರಿಕೆಯನ್ನು ಗಾಂಧಿ ಅನುಪ ಸ್ಥಿತಿಯಲ್ಲಿ ಸಂಪಾದಿಸುತ್ತಿದ್ದರು. ತಮ್ಮ ಬದುಕಿನುದ್ದಕ್ಕು ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಮಹದೇವ ದೇಸಾಯಿ, ಗಾಂಧೀಜಿ ಜೊತೆ ನಿರಂತರ ಸರೆಮನೆ ವಾಸ ಅನುಭವಿಸಿದರು. ಅವರಂತೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಪ್ರಾರ್ಥನೆ, ಚರಕದಲ್ಲಿ ನೂಲು ತೆಗೆಯುವ ಕ್ರಿಯೆಯಲ್ಲಿ ತಲ್ಲೀನರಾಗುತ್ತಿದ್ದರು. 1929 ರಿಂದ ಭಾರತದಲ್ಲಿ ನಡೆದ ಬಹುತೇ ಗಾಂಧೀಜಿಯವರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮಹದೇವದೇಸಾಯಿ, 1942 ರಲ್ಲಿ ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧೀಜಿü ಆರಂಭಿಸಿದ ಭಾರತ ಬಿಟ್ಟು ತೊಲಗಿಚಳುವಳಿಯಲ್ಲಿ ಪಾಲ್ಗೊಂಡು ಪೆಬ್ರವರಿ ತಿಂಗಳಿನಲ್ಲಿ ಮುಂಬೈ ನಗರದಲ್ಲಿ ಗಾಂಧೀಜಿ ಜೊತೆ ಬಂದನಕ್ಕೆ ಒಳಗಾದರು. 1942 ರ ಪೆಬ್ರವರಿ 9 ರಂದು ಗಾಂಧೀಜಿ, ಕಸ್ತೂರಬಾ, ಮಹದೇವ ದೇಸಾಯಿ ಎಲ್ಲರನ್ನೂ ಮುಂಬೈನಿಂದ ಪೂನಾದ ಆಗಖಾನ್ ಅರಮನೆಗೆ ಸ್ಥಳಾಂತರಿಸಿದ ಬ್ರಿಟೀಷ್ ಸರ್ಕಾರ ಗೃಹಬಂಧನದಲ್ಲಿರಿಸಿತು. ಅದೇ ವರ್ಷ (1942) ಆಗಸ್ಟ್ 15 ರಂದು ತಮ್ಮ ಐವತ್ತನೇಯ ವಯಸ್ಸಿನಲ್ಲಿ ಮಹದೇವ ದೇಸಾಯಿ ಆಗಖಾನ್ ಅರಮನೆಯ ಗೃಹ ಬಧನದಲ್ಲಿದ್ದಾಗ ಅಕಾಲ ಸಾವಿಗೆ ಈಡಾದರು. ಮಹಾದೇವ ದೇಸಾಯಿ ಅವರ ಸಾವು ಗಾಂಧೀಜಿಯ ಮೇಲೆ ತೀವ್ರ ಪರಿಣಾಮ ಬೀರಿತು. ಅವರು ಎಷ್ಟೊಂದು ಜರ್ಜಿತರಾದರೆಂದರೆ, ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ದೇಸಾಯಿ ಯವರ ಅಂತ್ಯ ಕ್ರಿಯೆಯನ್ನು ಅರಮನೆ ಆವರಣದಲ್ಲಿ ನೆರವೇರಿಸಿ, ತನ್ನ ಶಿಷ್ಯನನ್ನು “ “ಮಹದೇವದೇಸಾಯಿ ನನ್ನ ಗುರುಎಂದು ಕರೆದರು. ಅಲ್ಲದೆ, ಪ್ರತಿ ದಿನ ಬೆಳಿಗ್ಗೆ ಶಿಷ್ಯನ ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. 1944 ರ ಪೆಬ್ರವರಿ 22 ರಂದು ತಮ್ಮ ಪತ್ನಿ ಕಸ್ತೂರಭಾ ಗಾಂಧಿ ಮೃತಪಟ್ಟಾಗ, ಅವರಿಗೂ ಸಹ  ತಮ್ಮ ಶಿಷ್ಯನ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮಹದೇವ ದೇಸಾಯಿಯಂತೆ ಗಾಂಧೀಜಿ ಚಿಂತನೆಗೆ ಒಳಗಾದ ವಿದೇಶದ ಹೆಣ್ಣು ಮಗಳೆಂದರೆ, ಮೆಡಲಿನ್ ಸ್ಲೆಡ್. ಇಂಗ್ಲೇಂಡಿನ ಓರ್ವ ನೌಕಾ ಅಧಿಕಾರಿಯ ಪುತ್ರಿಯಾಗಿ ಜನಿಸಿದ ಈಕೆ (1892) ಒಮ್ಮೆ ನೆರೆಯ ಪ್ರಾನ್ಸಿನ ರಾಜಧಾನಿ ಪ್ಯಾರಿಸ್ ನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ಗಾಂಧಿ ಕುರಿತ ಪುಸ್ತಕದಿಂದ ಪ್ರಭಾವಗೊಂಡವರು. ತನ್ನ 23 ನೆಯ ವಯಸ್ಸಿನಲ್ಲಿ  ತಾತ ಹುಟ್ಟು ಹಬ್ಬು ಉಡೂಗರೆಯಾಗಿ ನೀಡಿದ್ದ 23 ಪೌಂಡ್ ಹಣವನ್ನು ಗಾಂಧಿ ಸ್ಥಾಪಿಸಿದ್ದ ನಿಧಿಗೆ ದಾನವಾಗಿ ನೀಡಿದವರು. ಆನಂತರ 1925 ರ ನವಂಬರ್ ತಿಂಗಳಿನಲ್ಲಿ ತನ್ನ ಪಾಶ್ಚಿಮಾತ್ಯ ಸಂಸ್ಕಾರವನ್ನು ತೊರೆದು ಭಾರತಕ್ಕೆ ಬಂದು ಗಾಂಧೀಜಿ ಜೊತೆ ಗುರುತಿಸಿಕೊಂಡರು. ಗಾಂಧೀಜಿ ಇವರಿಗೆ ಮೀರಾ ಎಂದು ನಾಮಕರಣ ಮಾಡಿದರು ಆನಂತರ ಇವರು ಭಾರತದಲ್ಲಿ ಮೀರಾ ಬೆಹನ್ ಎಂದು ಪ್ರಸಿದ್ಧಿಯಾದರು. ಮಹಾದೇವ ದೇಸಾಯಿಯಂತೆ, ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಇವರು, ಉಪ್ಪಿನ ಸತ್ಯಾಗ್ರಹ, ಲಂಡನ್ ನಗರದಲ್ಲಿ ನಡೆದ ದುಂಡು ಮೇಜಿನ ಪರಿಷತ್ತು, ಚಲೇ ಜಾವ್ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು. 1947 ರ ಲ್ಲಿ ಗಾಂಧೀಜಿ ಅಣತಿ ಮೇರೆಗೆ ಹೃಷಿಕೇಶಕ್ಕೆ ತೆರಳಿ ಪಶುಲೋಕ್ ಎಂಬ ಆಶ್ರಮ ಸ್ಥಾಪಿಸಿ, ಗೋವುಗಳ ರಕ್ಷಣೆ, ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು.
ಸ್ವಾತಂತ್ಯಾನಂತರ ಹೃಷಿಕೇಷದಿಂದ ಹಿಮಾಲಯಯದ ತಪ್ಪಲಿನತ್ತ ತೆರಳಿದ ಮೀರಾ ಬೆಹನ್ ತೆಹ್ರಿ ಹಾಗೂ ಚಮೋಲಿ, ಘರವಾಲ್ ಪ್ರದೇಶಗಳಲ್ಲಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ವಿರುದ್ಧ ಜನತೆಗೆ ಎಚ್ಚರಿಸಿದರು. ಓಕ್ ಮತ್ತು ಫೈನ್ ಮರಗಳು ನೆಲಸಮವಾಗುವುದನ್ನು ಕಂಡು, ಇದಕ್ಕೆ  ಮುಂದೆ ಬೆಲೆ ತೆರಬೇಕಾಗ ಬಹುದೆಂದು ಎಚ್ಚರಿಸಿದ್ದರು. ಅವರ ಮಾತು ಇದೇ ವರ್ಷ ನಡೆದ ಉತ್ತರಕಾಂಡ ನೈಸರ್ಗಿಕ ವಿಕೋಪದಲ್ಲಿ ನಿಜವಾಯಿತು. 1959 ರಲ್ಲಿ ಭಾರತ ಬಿಟ್ಟು ಇಂಗ್ಲೆಂಡಿಗೆ ವಾಪಾಸ್ಸಾದದ ಅವರು, ನಂತರ ವಿಯನ್ನಾ ಕ್ಕೆ ತೆರಳಿ, ಗಾಂಧೀಜಿ ಚಿಂತನೆಗಳ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1982 ರ ಜುಲೈ 20 ರಂದು ನಿಧನರಾದರು.


ಗಾಂಧೀಜಿಯ ನಡುವಳಿಕೆ ಕುರಿತು ಮಾತನಾಡುವ ಅನೇಕ ಮಂದಿ ತಿಳಿಯಬೇಕಾದ ಮಹತ್ವದ ವಿಷಯವೆಂದರೆ, ಗಾಂಧಿ ಎಂಬ ವ್ಯಕ್ತಿತ್ವ ಕೇವಲ ಮಾತಿಗೆ, ಅಥವಾ ಟೀಕೆಗೆ ಅರ್ಥವಾಗುವದಂತಹದಲ್ಲ. ಅದು ಮನಸ್ಸಿನೊಳಕ್ಕೆ ಇಟ್ಟುಕೊಂಡು ಮಂಥಿಸುವಂತಹ ವ್ಯಕ್ತಿತ್ವ. ಆವಾಗ ಮಾತ್ರ ಗಾಂಧಿ ನಮಗೆ ಅರ್ಥವಾಗಬಲ್ಲರು, ಅವರ ಚಿಂತನೆಗಳು ನಮ್ಮ ಬುದ್ಧಿ ಮತ್ತೆಗೆ ನಿಲುಕಬಲ್ಲವು.

1 ಕಾಮೆಂಟ್‌:

  1. ಗಾಂಧೀಜಿಯ ನಡುವಳಿಕೆ ಕುರಿತು ಮಾತನಾಡುವ ಅನೇಕ ಮಂದಿ ತಿಳಿಯಬೇಕಾದ ಮಹತ್ವದ ವಿಷಯವೆಂದರೆ, ಗಾಂಧಿ ಎಂಬ ವ್ಯಕ್ತಿತ್ವ ಕೇವಲ ಮಾತಿಗೆ, ಅಥವಾ ಟೀಕೆಗೆ ಅರ್ಥವಾಗುವದಂತಹದಲ್ಲ. ಅದು ಮನಸ್ಸಿನೊಳಕ್ಕೆ ಇಟ್ಟುಕೊಂಡು ಮಂಥಿಸುವಂತಹ ವ್ಯಕ್ತಿತ್ವ. ಆವಾಗ ಮಾತ್ರ ಗಾಂಧಿ ನಮಗೆ ಅರ್ಥವಾಗಬಲ್ಲರು, ಅವರ ಚಿಂತನೆಗಳು ನಮ್ಮ ಬುದ್ಧಿ ಮತ್ತೆಗೆ ನಿಲುಕಬಲ್ಲವು.
    well said sir.. your blog gives us so many new information :-)
    thank you
    with regards
    Dr Ashok K R

    ಪ್ರತ್ಯುತ್ತರಅಳಿಸಿ