Tuesday, 29 October 2013

ರಾಮಕೃಷ್ಣ ಹೆಗ್ಡೆ ಹೇಳಿದ ಗಾಂಧಿ ಕಥನ


ಇದು ಸುಮಾರು ಹನ್ನೆರೆಡು ವರ್ಷಗಳ (2001) ಹಿಂದಿನ ಘಟನೆ. ರಾಮಕೃಷ್ಣಹೆಗ್ಡೆಯವರ ನೇತೃತ್ವದ ಜನತಾ ಸರ್ಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು, ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೇಸ್ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅಧಿಕಾರ ಕಳೆದುಕೊಂಡ ನಂತರ ಹೆಗಡೆಯವರು ಮೇಲಿಂದ ಮೇಲೆ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದರು. ಅವರ ಜೊತೆಯಲ್ಲಿ ಎಂ.ಪಿ. ಪ್ರಕಾಶ್, ಭೈರೇಗೌಡ, ಪಿ.ಜಿ.ಆರ್ ಸಿಂಧ್ಯಾ ಇವರೆಲ್ಲರೂ ಸದಾ ಇರುತ್ತಿದ್ದರಿಂದ ಹುಬ್ಬಳ್ಳಿ ನಗರಕ್ಕೆ ಬಂದರೆ, ಪತ್ರಕರ್ತರ ಜೊತೆ ಒಂದು ಖಾಸಾಗಿ ಚರ್ಚೆ, ಊಟ ಇವೆಲ್ಲವೂ ಆ ದಿನಗಳಲ್ಲಿ ಸಾಮಾನ್ಯವಾಗಿತ್ತು.
ಆ ದಿನಗಳಲ್ಲಿ ಈಗಿನ ಹಾಗೆ ಪತ್ರಕರ್ತರಿಗೆ ಯಾವುದೆ ಧಾವಂತ ಇರಲಿಲ್ಲ. ಹುಬ್ಬಳ್ಳಿಯಲ್ಲಿ ಇದ್ದವರು ನಾವು ನಾಲ್ಕಾರು ಮಂದಿ. ಉದಯ ಟಿ.ವಿ.ಯಿಂದ, ನಾನು, ಈ ಟಿ.ವಿ.ಯಿಂದ ಸಿದ್ದು ಕಾಳೋಜಿ, ಪ್ರಜಾವಾಣಿಯಿಂದ ಸ್ಥಾನಿಕ ಸಂಪಾದಕರಾಗಿದ್ದ ಪ್ರೇಮ್ ಕುಮಾರ್ ಹರಿಯಬ್ಬೆ, ಸಂಯುಕ್ತ ಕರ್ನಾಟಕದಿಂದ ಮೋಹನ ಹೆಗ್ಡೆ, ಕನ್ನಡ ಪ್ರಭದಿಂದ ಮಲ್ಲಿಕಾಜುನ ಸಿದ್ದಣ್ಣ, ಹಿಂದು ಪತ್ರಿಕೆಯಿಂದ ಮತ್ತಿಹಳ್ಳಿ ಮದನ್ ಮೋಹನ್ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಿಂದ ನಿಂದ ಶ್ಯಾಂಸುಂದರ್‍ವಟ್ಟಂ.ಇರುತ್ತಿದ್ದೆವು.  ಯಾವುದೇ ರಾಜಕಾರಣಿ ಹುಬ್ಬಳ್ಳಿಗೆ ಬದರೆ, ಸ್ವತಃ ಫೋನ್ ಮಾಡಿ ಆಹ್ವಾನ ನೀಡುತ್ತಿದ್ದರು. ಭಟ್ಟಂಗಿಗಳ ಕಾಟವಿರಲಿಲ್ಲ. ಜೊತೆಗೆ ಈಗಿನ ಪತ್ರಿಕೋದ್ಯಮದ ಹಾಗೆ ರಾಜಕಾರಣಿ ಅಥವಾ ಸಿನಿಮಾ ನಟನ ಮನೆಗೆ ನುಗ್ಗಿ ಅವರು ಬೆಳಿಗ್ಗೆ ಎದ್ದು, ಟಾಯ್ಲೆಟ್ ರೂಮಿಗೆ ಹೋಗಿ ಬಾಗಿಲು ತೆರೆದು ಹೊರ ಬರುವವಷ್ಟರಲ್ಲಿ ಅವರ ಮುಸುಡಿಗೆ ಮೈಕ್ ಹಿಡಿದು ಅಬಿಪ್ರಾಯ ಕೇಳುವಷ್ಟು ಪತ್ರಿಕೋದ್ಯಮ ಕುಲಗೆಟ್ಟು ಹೋಗಿರಲಿಲ್ಲ. ಒಂದು ಸುದ್ದಿಗೋಷ್ಟಿಯಾಗಲಿ, ಮಾತುಕತೆಯಾಗಲಿ, ಪರಸ್ಪರ ಚರ್ಚೆಯಾಗಲಿ ಪ್ರಶಾಂತ ವಾತಾವರಣದಲ್ಲಿ ನೆರೆವೇರುತ್ತಿತ್ತು. ಎಷ್ಟೋ ಬಾರಿ ರಾಜಕೀಯ ನಾಯಕರು ತಮ್ಮ ಮನದ ಸಂಕಟಗಳನ್ನು, ಮತ್ತು ತಾವು ಅಧಿಕಾರದಲ್ಲಿ ಮಾಡಿದ ತಪ್ಪುಗಳನ್ನು ನಮ್ಮೊಂದಿಗೆ ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು. ಸಲಹೆ ಕೇಳುತ್ತಿದ್ದರು. ಅವರು ಹೇಳಿದ ಮಾತುಗಳನ್ನು ಆಫ್ ದ ರೆಕಾರ್ಡ್ ಎಂಬ ನೈತಿಕ ಗೆರೆಯೊಳಗೆ ನಾವು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿ ಇಡುತ್ತಿದ್ದೆವು. ಈಗಿನ ರೀತಿ ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವೈಯಕ್ತಿಕ ಚಾರಿತ್ರ್ಯದ ವಧೆಗೆ ಇಳಿಯುತ್ತಿರಲಿಲ್ಲ. ಅವರು ಆತ್ಮೀಯ ಬಂಧು ಅಥವಾ  ಗೆಳೆಯ ಎಂದು ಪರಿಗಣಿಸಿ ಹೇಳಿದ ಮಾತುಗಳ ಗೌಪ್ಯ ಕಾಪಾಡಬೇಕಾದ್ದು ನಮ್ಮಗಳ ಕರ್ತವ್ಯವಾಗಿತ್ತು. ಎಂ.ಪಿ. ಪ್ರಕಾಶ್ ನನ್ನೊಂದಿಗೆ ಹಂಚಿಕೊಂಡ ಭಾವನೆಗಳು ಈಗಲೂ ನನ್ನನ್ನು ಕಾಡುತ್ತಿವೆ.
ಇಂತಹದ್ದೇ ಒಂದು ದಿನ ರಾಮಕೃಷ್ಣ ಹೆಗ್ಡೆಯವರ ಹುಬ್ಬಳ್ಳಿಗೆ ಬಂದರು. ಆ ದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಾತೃ ಸಂಸ್ಥೆಯಾದ ಲೋಕ ಶಿಕ್ಷಣ ಟ್ರಸ್ಟ್, ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ತಾನೆ ಲೇಖಕಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಾಗೂ ಮೂಲತಃ ಹುಬ್ಬಳ್ಳಿಯವರಾದ ಇನ್‍ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿಯವರ ಪ್ರವಾಸ ಕಥನ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿಯ ಇತಿಹಾಸ ಕುರಿತ ಎರಡು ಪುಸ್ತಕಗಳನ್ನು ಹೆಗ್ಡೆಯವರು  ಬಿಡುಗಡೆ  ಮಾಡುವ ಕಾರ್ಯಕ್ರಮ ವಿತ್ತು. ಸಂಜೆ ಆರು ಗಂಟೆಗೆ ಇದ್ದ ಕಾರ್ಯಕ್ರಮಕ್ಕೆ . ಐದು ಗಂಟೆಗೆ ಬನ್ನಿ, ನಿಮ್ಮ ಜೊತೆ ಒಂದಿಷ್ಟು ಖಾಸಾಗಿಯಾಗಿ ಮಾತನಾಡುವ ಕಾರ್ಯಕ್ರಮವಿದೆ ಎಂದು ಹೆಗ್ಡೆಯವರು ಸ್ವತಃ ಪತ್ರಕರ್ತ ಮಿತ್ರರಿಗೆ ಸಂದೇಶ ರವಾನಿಸಿದ್ದರು. ನಾವು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಛೇರಿಗೆ ಹೋದಾಗ, ಲೋಕಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರ ಕಛೇರಿಯಲ್ಲಿ ಹೆಗ್ಡೆಯವರು ನಮಗಾಗಿ ಕಾಯುತ್ತಿದ್ದರು. ನಾವು ಯಾವುದೋ ರಾಜಕೀಯ ಬಾಂಬ್ ಸಿಡಿಸಬಹುದೆಂದು ಲೆಕ್ಕಾಚಾರ ಹಾಕಿದ್ದೆವು. ಇದಕ್ಕೆ ತದ್ವಿರುದ್ಧವಾಗಿ ತಮ್ಮ ತಣ್ಣನೆಯ ಶಾಂತ ದ್ವನಿಯಲ್ಲಿ ಮಾತನಾಡಿದ ಹೆಗ್ಡೆಯವರು, ಈ ದಿನ ನನ್ನ ನೆಲದ ಕರ ನಿರಾಕರಣೆ ಚಳುವಳಿಯ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ನನ್ನದೊಂದು ಬಾಲ್ಯದ ನೆನಪು ಎಡಬಿಡದೆ ಕಾಡುತ್ತಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕರೆದೆ ಎಂದರು. ನಮಗೆ ಉಪ್ಪಿಟ್ಟು, ಕಾಫಿ ತರಿಸಿ, ಅವರು ತಮ್ಮ ಬಾಲ್ಯಕ್ಕೆ ಜಾರಿದರು. ಮುಂದಿನ ಮಾತುಗಳನ್ನು ಹೆಗ್ಡೆಯವರ ಮಾತುಗಳಲ್ಲಿ ಕೇಳಿ...


ಅವು ಸ್ವಾತಂತ್ರ್ಯ ಹೋರಾಟದ ದಿನಗಳು. 1930 ರಲ್ಲಿ ಗಾಂಧೀಜಿ ಬೆಳಗಾವಿ ನಗರಕ್ಕೆ ಬಂದು ಹೋದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೊರಾಟದ ಕಿಚ್ಚು ಪ್ರತಿ ಮನೆ ಮತ್ತು ಮನಕ್ಕೂ ಕಾಡ್ಗಿಚ್ಚಿನಂತೆ ಹರಡಿತ್ತು. ನನಗಾಗ ಸುಮಾರು ಏಳು ಅಥವಾ ಎಂಟು ವರ್ಷ. ಸಿದ್ದಾಪುರದ ಬಳಿಯ ಗದ್ದೆಯಲ್ಲಿದ್ದ ನಮ್ಮ ಹೆಂಚಿನ ಮನೆ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಅಡಗುತಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಇದ್ದ ಕಾರಣ, ನಮ್ಮ ಮನೆ ಏಕ ಕಾಲಕ್ಕೆ ಎರಡು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರ ಮೆಚ್ಚಿನ ತಾಣವಾಗಿತ್ತು. ಶಿವಮೊಗ್ಗ ಪೊಲೀಸರು ಬೆನ್ನಟ್ಟಿದರೆ, ಗಡಿ ದಾಟಿ ನಮ್ಮ ಮನೆಗೆ ಬರುತ್ತಿದ್ದರು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬೆನ್ನಟ್ಟಿದರೆ, ನಮ್ಮ ಜಿಲ್ಲೆಯ ಹೊರಾಟಗಾರರು ನಮ್ಮ ಗದ್ದೆಯ ಬೇಲಿ ನೆಗೆದು ಶಿವಮೊಗ್ಗ ಗಡಿ ಪ್ರವೇಶ ಮಾಡಿ ಓಡಿ ಹೋಗುತ್ತಿದ್ದರು. ನಮ್ಮ ಮನೆಯ ಮೇಲೆ ಅಪ್ಪ ( ಮಹಾಬಲೇಶ್ವರ ಹೆಗ್ಡೆ) ಇವರಿಗಾಗಿ ಒಂದು ಅಟ್ಟ ಸಿದ್ಧಪಡಿಸಿದ್ದರು. ಯಾರೇ ನಮ್ಮ ಮನೆಗೆ ಬಂದರೂ ಅಟ್ಟದ ಮೇಲಿನ ಕಿಟಕಿಯಿಂದ ದೂರದಿಂದ ಅವರು ಬರುತ್ತಿರುವಾಗಲೆ ತಿಳಿದು ಹೋಗುತ್ತಿತ್ತು. ಈಗಾಗಿ ನಮ್ಮ ಮನೆ ಆಗಿನ ಬ್ರಿಟೀóಷ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ಧಾರವಾಡದಲ್ಲಿ ಇದ್ದ ಬ್ರಿಟೀಷ್ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ, ಒಂದು ದಿನ ಏಕಾ ಏಕಿ ಮನೆಗೆ ನುಗ್ಗಿದ ಪೊಲೀಸರು ಇಡೀ ಮನೆಯನ್ನು ಧ್ವಂಸಗೊಳಿಸಿ, ಧವಸ ಧಾನ್ಯಗಳನ್ನು ಹೊತ್ತೊಯ್ದರು. ನಾನು, ನನ್ನ ಅಣ್ಣ ಗಣೇಶ, ಅಪ್ಪ, ಅಮ್ಮ ( ಸರಸ್ವತಿ ಹೆಗ್ಡೆ)ಅಕ್ಷರಶಃ ಬಟಾ ಬಯಲಿನಲ್ಲಿ ಅನಾಥರಾಗಿ ನಿಂತಿದ್ದೆವು. ಸುದ್ಧಿ ತಿಳಿದ ಸುತ್ತ ಮುತ್ತಲಿನ ಊರಿನ ಜನ ಅಕ್ಕಿ, ಬೇಳೆ, ಉಪ್ಪು, ಕಾರದಪುಡಿ, ಹುಣೆಸು ಹಣ್ಣು ತಂದುಕೊಟ್ಟರು. ಅಪ್ಪ ನನ್ನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ಅಮ್ಮ ಬಯಲಿನಲ್ಲಿ ಕಲ್ಲುಗಳ ಮೇಲೆ ಮಡಕೆಗಳನ್ನು ಇಟ್ಟು ಅನ್ನ ಬೇಯಿಸಿ, ತರಕಾರಿ ಇಲ್ಲದ ಬೇಳೆ ಸಾರು ಮಾಡಿದರು. ಆ ದಿನ ನಮ್ಮ ಇಡೀ ಕುಟುಂಬ ನಮ್ಮ ಜನ ತಂದು ಕೊಟ್ಟ ದಿನಸಿಯಲ್ಲಿ ಊಟ ಮಾಡಿ ಬಯಲಿನಲ್ಲಿ ಮಲಗಿತು. ಅಕ್ಕಿ ತಂದುಕೊಟ್ಟವರು ಯಾವ ಜಾತಿ? ಬೇಳೆ ಕೊಟ್ಟವರು ಯಾವ ಜಾತಿ? ಎಂದು ನಾವ್ಯಾರು ಪ್ರಶ್ನಿಸಿಕೊಳ್ಳಲಿಲ್ಲ, ಅಥವಾ ಚಿಂತಿಸಲಿಲ್ಲ. ನನ್ನ ಕುಟುಂಬ ಹೀಗೆ ಬೀದಿಗೆ ಬಿದ್ದು ಹೊಯಿತಲ್ಲ ಎಂದು ಅಪ್ಪನ ಮುಖದಲ್ಲಾಗಲಿ. ಅಮ್ಮನ ಮುಖದಲ್ಲಾಗಲಿ ಯಾವ ನೋವಿನ ಎಳೆಗಳಿರಲಿಲ್ಲ. ಊರಿನ ಜನ ತಂದು ಕೊಟ್ಟ ಕಂಬಳಿ ಹೊದ್ದು ಮಲಗುವಾಗ, ಅಪ್ಪ ಗಾಂಧೀಜಿ ಅರ ಬೆತ್ತಲಾಗಿ ದೇಶ ತಿರುಗುವ ಕತೆ ಹೇಳುತ್ತಾ ನಮ್ಮನ್ನು ತಟ್ಟಿ ಮಲಗಿಸುತ್ತಿದ್ದರು
ರಾಮಕೃಷ್ಣ ಹೆಗ್ಡೆಯವರು ತೀರಾ ಭಾವುಕರಾಗಿ ಈ ಕಥೆ ಹೇಳುತ್ತಿದ್ದಾಗ, ಧಾರಾಕಾರವಾಗಿ ಅವರ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಅವರ ಮುಖದ ಮೇಲಿನ ಗಡ್ಡದಲ್ಲಿ ಲೀನವಾಗುತ್ತಿದ್ದವು. ಅವರ ಕಥೆ ಕೇಳಿದ ನಮ್ಮ ಕಣ್ಣುಗಳಲ್ಲೂ ನೀರು ಹರಿಯುತ್ತಿದ್ದವು.


ಇದು ರಾಮಕೃಷ್ಣ ಹೆಗ್ಡೆಯವರ ಕುಟುಂಬದ ಕಥೆ ಮಾತ್ರ ವಲ್ಲ, ಉತ್ತರ ಕರ್ನಾಟಕದ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರತಿ ಮನೆಗಳಲ್ಲೂ ಇಂತಹ ನೂರಾರು ಕಥನಗಳಿವೆ. ಹಿರಿಯ ವಿಮರ್ಶಕ ಪ್ರೊ. ಜಿ.ಎಚ್. ನಾಯಕರ ಬಾಳುಎಂಬ ಆತ್ಮ ಕಥನದಲ್ಲಿ ಅಂಕೋಲಾ ತಾಲ್ಲೂಕಿನಲ್ಲಿ ಅವರ ಕುಟುಂಬವೂ ಸೇರಿದಂತೆ, ನೂರಾರು ಕುಟುಂಬಗಳು ಬ್ರಿಟೀಷ್ ಸರ್ಕಾರಕ್ಕೆ ಕಂದಾಯ ಪಾವತಿಸಲು ನಿರಾಕರಿಸಿ, ಜೈಲು ಸೇರಿ, ಕುಟುಂಬವನ್ನು ಬೀದಿ ಪಾಲು ಮಾಡಿ, ತಾವು ಬೀದಿ ಪಾಲಾದ ತ್ಯಾಗಮಯ ಹೋರಾಟದ ಕಥನಗಳಿವೆ. ತಾವೆಂದೂ ನೋಡದ, ತಾವೆಂದೂ ಕೇಳದ ಗಾಂಧಿ ಎಂಬ ವ್ಯಕ್ತಿಯ ಸಂದೇಶವನ್ನು ಮತ್ತು  ಅವರ ಹೋರಾಟದ ಕರೆಯನ್ನು ತಮ್ಮ ಎದೆಗಿಳಿಸಿಕೊಂಡು ಹೋರಾಡಿದ ಈ ಮಹಾ ಮಹಿಮರನ್ನು ನೆನದಾಗ, ಗಾಂಧೀಜಿಯ ಅಂತಃಶಕ್ತಿ ಎಂತಹದ್ದು ಎಂದು ತಣ್ಣಗೆ ಕುಳಿತು ಯೋಚಿಸುತ್ತಿದ್ದೇನೆ.

3 comments:

 1. ಮಾತು ಬರುತ್ತಿಲ್ಲ... ಆಗ ಜಾತಿ ಮತ ಈ ಭೇದಗಳೇ ಇಲ್ಲದೆ ಜನರು ಬದುಕುತ್ತಿದ್ದರು.. ವಿಷಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್

  ReplyDelete
 2. ಮಾನ್ಯರೇ, ಸಾಮಾನ್ಯವಾಗಿ ನಮ್ಮ ಹಿಂದಿನ ದೀಮಂತ ರಾಜಕಾರಣಿಗಳು ಮೊದಲು ಜನತೆಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಜನಸೇವೆಗಾಗಿ ರಾಜಕೀಯಕ್ಕೆ ಬರುತ್ತಿದ್ದರು. ಈಗ ಅದೆಲ್ಲಾ ಕನಸು. ಶ್ರೀ ರಾಮಕೃಷ್ಣ ಹೆಗಡೆಯವರನ್ನು ಮರೆಯುತ್ತಾಬರುತ್ತಿದ್ದೇವೆ. ಅಂತಹವರನ್ನು ಕೃತಜ್ಣತೆಯಿಂದ ನೀವು ನೆನಪು ಮಾಡಿಕೊಂಡಿರುವುದು ನಮಗೂ ಹಿಂದಿನದನ್ನು ನೆನೆಯುವಂತೆ ಮಾಡಿತು. ಅಂಥಹ ರಾಜಕಾರಣಿಗಳನ್ನು ಕಾಣಲು ಸಾಧ್ಯವೇ? ಈ ಲೇಖನ ಬರೆದು ಒಳ್ಳೆಯ ವ್ಯಕ್ತಿಯನ್ನು ಸ್ಮರಿಸಿದಂತಾಯಿತು. ನಿಮ್ಗೆ ಧನ್ಯವಾದಗಳು.

  ReplyDelete
 3. ಸರ್,
  ಈಗಿನ ತಲೆಮಾರಿನವನಾದ ನನಗೆ ಈ ಬರಹದ "ಪತ್ರಕರ್ತನ ನೈತಿಕತೆ" ಎಂಬುದು ದಂತಕಥೆಯಂತೆ ತೋರತೊಡಗಿತು.
  " ಅಕ್ಕಿ ತಂದುಕೊಟ್ಟವರು ಯಾವ ಜಾತಿ? ಬೇಳೆ ಕೊಟ್ಟವರು ಯಾವ ಜಾತಿ? ಎಂದು... " ಸಾಲು ಓದುವಾಗಲಂತೂ ಕಣ್ಣಾಲಿಗಳು ಒದ್ದೆಯಾದ ಅರಿವಾಗಿ, ಕರ್ಚಿಫ್ ಗಾಗಿ ಹುಡುಕತೊಡಗಿದೆ ...

  ನೆನಪಿನಾಳದಿಂದ ಇಂತಹದೊಂದು ಘಟನೆಗೆ ಮರು ಜೀವ ಕೊಟ್ಟಿದ್ದಕ್ಕಾಗಿ, ಧನ್ಯವಾದಗಳೊಂದಿಗೆ
  -ಗಿರಿ

  ReplyDelete