Wednesday, 23 October 2013

ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಹೈಕೋರ್ಟ್ ಕಪಾಳ ಮೋಕ್ಷಭಾರತದಲ್ಲಿ ಬಿ.ಟಿ. ಹತ್ತಿಯನ್ನು ಬೆಳೆದು ರೈತರು ಹೈರಾಣಾಗಿರುವ ಸಂದರ್ಭದಲ್ಲಿ ನಮ್ಮ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ಬದನೆಕಾಯಿಯನ್ನು ಬಿ.ಟಿ.ಬದನೆಯಾಗಿ ಪರಿವರ್ತಿಸಲು   ಅನೈತಿಕವಾಗಿ ಮಾನ್ಸಂಟೊ ಕಪನಿ ಜೊತೆ  ಒಪ್ಪಂಧ ಮಾಡಿಕೊಂಡಿದ್ದ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಕಪಾಳ ಮೋಕ್ಷ ಮಾಡುವುದರ ಜೊತೆಗೆ ಛಡಿ ಏಟು ಭಾರಿಸಿದೆ.
ಈ ವಿಶ್ವ ವಿದ್ಯಾನಿಲಯದ ವಿಜ್ಙಾನಿಗಳಿಗೆ ನೈತಿಕತೆ ಅಥವಾ ಪಾಪಪ್ರಜ್ಙೆ ಎಂಬುದೇನಾದರು ಇದ್ದರೆ, ಮೊದಲು ಈ ನೆಲದ ರೈತರ ಕ್ಷಮೆ ಕೋರಬೇಕು. ನಂತರ ತಮ್ಮ ತಮ್ಮ ಹುದ್ದೆಗಳನ್ನು ತೊರೆಯಬೇಕು. ತನ್ನ ಜೈವಿಕ ಕುಲಾಂತರಿ ತಳಿಗಳ ಮೂಲಕ ಜಗತ್ತಿನ ಆಹಾರ ಭದ್ರತೆಯ ಮೇಲೆ ಸ್ವಾಮ್ಯ ಸಾಧಿಸಲು ಹೊರಟಿರುವ ಮಾನ್ಸಂಟೊ ಕಂಪನಿಯ ಗುಲಾಮರಂತೆ ಎಂಜಲು ಕಾಸಿಗಾಗಿ, ಈ ನೆಲದ ಬೀಜ ಸಂಸ್ಕೃತಿಯನ್ನು ಒತ್ತೆ ಇಡಲು ಹೊರಟ ಎಲ್ಲರಿಗೂ ಇದು ಎಚ್ಚರಿಕೆಯ ಪಾಠವಾಗಿದೆ.
ಭಾರತದಲ್ಲಿ ಆಹಾರ ಬೆಳೆಗಳ ಕುರಿತ ಯಾವುದೇ ಪ್ರಯೋಗ ನಡೆಯ ಬೇಕಾದರೆ, ಕೇಂದ್ರದ ಜೈವಿಕ ವೈವಿಧ್ಯ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ, ಅಮೇರಿಕಾ ಮೂಲದ ಮಾನ್ಸಂಟೊ ಬಹು ರಾಷ್ರೀಯ ಕಂಪನಿಯ ಸಹಭಾಗಿತ್ವದ ಮಹಾರಾಷ್ಟ್ರ ಮೂಲದ ಮಹಿಕೋ ಕಂಪನಿಯ ಜೊತೆ ಒಪ್ಪಂಧ ಮಾಡಿಕೊಂಡ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯ , ಬಿ.ಟಿ ಬದನೆ ಪ್ರಯೋಗವನ್ನು ನಡೆಸಿ ಯಶಸ್ಸು ಸಾಧಿಸಿತ್ತು. ಈ ಪ್ರಯೋಗಕ್ಕೆ ಕೃಷಿ ವಿ.ವಿ.ಯು ಕೇಂದ್ರ ಸರ್ಕಾರದ  ಅನುಮತಿಯನ್ನಾಗಲಿ, ಅಥವಾ ಯು.ಜಿ.ಸಿ.ಯ ಅನುಮತಿ ಪಡೆಯದೆ, ಪ್ರಯೋಗಕ್ಕಾಗಿ ಮಾನ್ಸಂಟೊ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನೂ ಸಹ ಪಡೆದಿತ್ತು.


ಇದನ್ನು ಗಮನಿಸಿದ ಕೇಂದ್ರ ಜೈವಿಕ ವೈವಿಧ್ಯ ಮಂಡಳಿಯ ಕಾರ್ಯದರ್ಶಿ, ಶ್ರಿ. ಅಚಲೇಂದ್ರ ರೆಡ್ಡಿ ಹಾಗೂ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಸದಸ್ಯ ಮತ್ತುಉಪಅರಣ್ಯಸಂರಕ್ಷಣಾಧಿಕಾರಿ ಶ್ರಿ.ಚಕ್ರಪಾಣಿ ಇವರು 2012 ರ ನವಂಬರ್ ತಿಂಗಳಿನ ಲ್ಲಿ  ಕೃಷಿ ವಿ.ವಿ.ಯ ಉಪಕುಲಪತಿ ಆರ್.ಆರ್. ಹಂಚಿನಾಳ, ರಿಜಿಸ್ಟ್ರಾರ್ ವಿಜಯಕುಮಾರ್,  ಮತ್ತು ಮಾಜಿ ಉಪಕುಲಪತಿ ಎಸ್.ಎ. ಪಾಟೀಲ್ ಇವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.ಏಕೆಂದರೆ, ಧಾರವಾಡ ಕೃಷಿ ವಿ.ವಿ.ಯ  ಪ್ರಯೋಗ ದೇಶದ ಜೈವಿಕ ವೈವಿಧ್ಯ ಮಸೂದೆಗೆ ವಿರುದ್ಧವಾಗಿತ್ತು. ಮೊಕದ್ದಮೆ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ  ಧಾರವಾಡ ಕೃಷಿ ವಿ.ವಿ. ಯ ವಿವಾದಾತ್ಮಕ ಪ್ರಯೋಗ ಕುರಿತು ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ , ಜಸ್ಟೀಸ್ ಪಚಾಪುರೆ, ವಿ.ವಿ. ಪೂರ್ವ ಅನುಮತಿಯನ್ನು ತೆಗೆದುಕೊಳ್ಳದೆ ಪ್ರಯೋಗ ನಡೆಸಿರುವುದನ್ನು ಖಂಡಿಸಿದ್ದಾರೆ ಅಲ್ಲದೆ ವಿ.ವಿ.ಯ ಮೇಲ್ಮನವಿಯನ್ನು ಸಹ ತಳ್ಳಿ ಹಾಕಿದ್ದಾರೆ. ಈಗ ಕೃಷಿ ವಿ.ವಿ.ಯು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗಿದೆ.

ಬಿ.ಟಿ. ಹತ್ತಿ ಬಗ್ಗೆ  ಪುಂಗಿದಾಸರು ಮತ್ತು ಮಾನ್ಸಂಟೊ ಭಜನಾ ಮಂಡಳಿಯ ಸದಸ್ಯರು ದಶಕದಿಂದ ಏನೆಲ್ಲಾ ಡಂಗೂರ ಸಾರಿದರೂ ಸಹ, ಹತ್ತಿಯ ಕಾಂಡ ಕೊರೆಯುವ ಹುಳುಗಳು ಹೊಸ ಹೊಸ ರೂಪದಲ್ಲಿ ಸೃಷ್ಟಿಯಾಗುತ್ತಿವೆ ಎಂಬುದು ದೃಢ ಪಟ್ಟಿದೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಿ.ಟಿ. ಚನ್ನೇಶ್ ಎಂಬುವರು ಬಿ.ಟಿ. ಹತ್ತಿಯ ಕರ್ಮಕಾಂಡದ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ. ಆದರೆ, ನಮ್ಮ ವಿಜ್ಙಾನಿಗಳಿಗೆ ಕುರುಡು ಕಾಂಚಾಣದ ಮುಂದೆ ಯಾವುದು ಲೆಕ್ಕವಿಲ್ಲದಂತಾಗಿದೆ.
ಸದ್ಯ ನಮ್ಮ ಕನ್ನಡ ಭಾಷೆಯಲ್ಲಿ ನೆಲ-ಜಲ-ಕೃಷಿ ಕುರಿತು ಬರೆಯುತ್ತಿರುವ ಪತ್ರಕರ್ತರು ಮತ್ತು ಲೇಖಕರಾದ ರಾಧಾಕೃಷ್ಣ ಭಡ್ತಿ, ಮಲ್ಲಿಕಾರ್ಜುನ ಹೊಸಪಾಳ್ಯ, ಜಿ.ಕೃಷ್ಣಪ್ರಸಾದ್, ಗಾಣದಾಳು ಶ್ರೀಕಂಠ, ಆನಂದತೀರ್ಥ ಪ್ಯಾಟಿ. ಅನಿತಾ ಪೈಲೂರು, ಮೊದಲಾದವರು ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವ ನಾಗೇಶ್ ಹೆಗ್ಗಡೆ, ಶ್ರೀಪಡ್ರೆ ಇಂತಹವರಿಗೆ ಇರುವ ಕಾಳಜಿಯ ಶೇಕಡ ಹತ್ತರಷ್ಟು ಭಾಗ ನಮ್ಮ ಕೃಷಿ ವಿಜ್ಙಾನಿಗಳಿಗೆ ಇದ್ದರೆ, ಈ ನೆಲದ ರೈತರು ಎಂದೋ ಉದ್ಧಾರವಾಗುತ್ತಿದ್ದರು.
ಅದೇ ಹೈಬ್ರಿಡ್ ತಳಿಗಳು, ಅದೇ ಕೀಟನಾಶಕ, ಅದೇ ರಸಾಯಿನಿಕ ಗೊಬ್ಬರಗಳ ಕುರಿತು ಗಿಳಿ ಪಾಠ ಒಪ್ಪಿಸುವ ಈ ಕೂಚುಭಟ್ಟರಿಗೆ ಅದರಿಂದಾಚೆಗೆ ಏನನ್ನೂ ಯೋಚಿಸಲು ಸಾದ್ಯವಾಗಿಲ್ಲ. ಈಗ ನಮ್ಮ ರೈತರು ತಾವಾಗಿ ಕಂಡುಕೊಂಡ  ಸುಸ್ಥಿರ ಕೃಷಿ ಕುರಿತು ಅ ಆ ಇ ಈ ಗೊತ್ತಿಲ್ಲ. ಕಳೆದ ಒಂದು ದಶಕದಿಂದ ತೆಂಗಿನ ಬೆಳೆಗೆಗೆ ಕಾಡುತ್ತಿರುವ ನುಸಿ ಪೀಡೆ ರೋಗಕ್ಕೆ ಇವರ ಬತ್ತಳಿಕೆಯಲ್ಲಿ ಯಾವ ಬಾಣಗಳಿಲ್ಲ ಎಂದ ಮೇಲೆ , ಯಾವ ಪುರುಷಾರ್ಥಕ್ಕೆ ಈ ಕೃಷಿ ವಿಶ್ವ ವಿದ್ಯಾನಿಲಯಗಳು? ಯಾರಿಗೆ ಬೇಕು ಈ ಕೃಷಿ ವಿಜ್ಙಾನಿಗಳು? ಕಡೂರು, ಬೀರೂರು, ಅರಸಿಕೆರೆ, ತಿಪಟೂರು, ತುಮಕೂರು, ಮಂಡ್ಯ, ನಾಗಮಂಗಲ ಹಾಸನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಳಿ ಒಣಗಿ ನಿಂತಿರುವ ತೆಂಗಿನ ಮರಗಳನ್ನು ನೋಡಿದರೆ, ಕಣ್ಣಲ್ಲಿ ನೀರು ಬರುತ್ತದೆ. ಹತ್ತಾರು ವರ್ಷ ಬೆಳೆಸಿದ ತೆಂಗಿನ ಮರ ರೈತನ ಪಾಲಿಗೆ ಒಣಗುವುದು ಒಂದೇ, ಅದೇ ರೈತ ಎದೆಯುದ್ದ ಬೆಳೆದ ಮಗನನ್ನು ಕಳೆದುಕೊಳ್ಳುವುದೂ ಒಂದೇ. ಈ ಎರಡು ನೋವಿಗೆ ವೆತ್ಯಾಸವೇನಿಲ್ಲ.

( ಮಾನ್ಸಂಟೊ ಕಂಪನಿಯ ಹೀನ ಇತಿಹಾಸ ಕುರಿತ ಬರೆದ ಮೂರು ಲೇಖನಗಳು ಇದೇ ಬ್ಲಾಗ್ ನಲ್ಲಿ ಮೇ ತಿಂಗಳಿನಲ್ಲಿ ಪ್ರಕಟವಾಗಿವೆ. ಆಸಕ್ತರು ಗಮನಿಸಬಹುದು)

No comments:

Post a Comment