ಶುಕ್ರವಾರ, ಸೆಪ್ಟೆಂಬರ್ 28, 2018

ದಾಸ್ಯದಿಂದ ಆಚೆಗೆ: ಮಹಾನ್ ಹೋರಾಟಗಾರನೊಬ್ಬನ ಕಥನ ಕೃತಿ ಕುರಿತು

¸

ಕನ್ನಡ ವಾಜ್ಮಯ ಜಗತ್ತಿನಲ್ಲಿ ಡಾ,ಕೆ.ಪುಟ್ಟಸ್ವಾಮಿಯವರ ಹೆಸರು ಎದ್ದುಕಾಣುವಂತಹ ಹೆಸರು. ಪತ್ರಕರ್ತರಾಗಿ, ಲೇಖಕರಾಗಿ ವಿಭಿನ್ನ ಹಾಗೂ ಆಸಕ್ತಿದಾಯಕದಾಯಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆಯುತ್ತಾ ಬಂದವರಲ್ಲಿ ಮತ್ತು ಅನುವಾದಿಸುವವರಲ್ಲಿ ಮುಖ್ಯರಾದವರು. ಸ್ವಾತಂತ್ರ್ಯ ಪೂರ್ವದದಲ್ಲಿ ಡಿ.ವಿ. ಗುಂಡಪ್ಪ ಮತ್ತು ಸಿದ್ದವನಹಳ್ಳಿ ಕೃಷ್ಣ ಶರ್ಮ ಈ ಇಬ್ಬರು ಮಹನೀಯರು ಹುಟ್ಟು ಹಾಕಿದ ಈ ಭವ್ಯ ಪರಂಪರೆಯನ್ನು  ಪಿ.ಲಂಕೇಶರು ಎತ್ತಿ ಹಿಡಿಯುವುದರ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬೆಸುಗೆ ಹಾಕಿದರು. ಆನಂತರದ ದಿನಗಳಲ್ಲಿ ನನ್ನ ತಲೆಮಾರಿನ ನಡುವೆ ನಮಗೆ ಎನ್.ಎಸ್.ಶಂಕರ್ ಮತ್ತು ಡಾ,ಕೆ,ಪುಟ್ಟಸ್ವಾಮಿ ಗಮನಾರ್ಹ ಬರಹಗಾರರಾಗಿ, ಅನುವಾದಕರಾಗಿ ಕಾಣುತ್ತಾರೆ.
ಮೂಲತಃ ವಿಜ್ಞಾನ ಪದವೀಧರರಾದ ಪುಟ್ಟಸ್ವಾಮಿಯವರು ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಕ್ರೀಡಾ ವರದಿಗಳು,  ಲೇಖನಗಳು ಹಾಗೂ ಸಿನಿಮಾ ಕುರಿತ ವಿಶ್ಲೇಷಣೆಗಳ ಮೂಲಕ  ಪ್ರಭಾವ ಬೀರಿದವರು.  ಕಥೆಗಳನ್ನು ಸಹ ಬರೆಯುತ್ತಿದ್ದ ಪುಟ್ಟಸ್ವಾಮಿಯವರು 1990 ರ ದಶಕದ ಆರಂಭದ ದಿನಗಳಲ್ಲಿ ಚಾರ್ಲ್ಸ್ ಡಾರ್ವಿನ್ನನ " ಅರಿಜನ್ ಆಫ್ ಸ್ಪೈಸಿಸ್' ಕೃತಿಯನ್ನು ಜೀವ ಸಂಕುಲಗಳ ಉಗಮ ಎಂಬ ಹೆಸರಿನಲ್ಲಿ ಅನುವಾದ ಮಾಡುವುದರ ಮೂಲಕ ತಮ್ಮಲ್ಲಿದ್ದ ದೈತ್ಯ ಪ್ರತಿಭೆಯನ್ನು ಕನ್ನಡದ ಜಗತ್ತಿನೆದುರು ಅನಾವರಣ ಮಾಡಿದರು. ಇದರ ಹಿಂದೆ ಬಂದ ಹಾಗೂ ಕೃಪಾಕರ್ ಸೇನಾನಿ ಜೊತೆಗೂಡಿ ರಚಿಸಿದ  ಕೃತಿ ಜೀವ ಜಾಲ ಪುಟ್ಟಸ್ವಾಮಿಯವರನ್ನು ಕನ್ನಡದ ಅತ್ಯುತ್ತಮ ವಿಜ್ಞಾನ ಲೇಖಕರಲ್ಲಿ ಮುಖ್ಯರು ಎಂಬುದನ್ನು ಸಾಭೀತು ಪಡಿಸಿತು. ಆರ್ಕಿಡ್ ಸಸ್ಯಗಳನ್ನು ಒಳಗೊಂಡತೆ ನಿಸರ್ಗದ ಜೀವ ಜಗತ್ತಿನ ಕುರಿತು ನೂರಾರು ಲೇಖನಗಳನ್ನು ಬರೆದಿರುವ ಇವರು, ತಾವು ಬರೆಯುತ್ತಿರುವ ಕೃತಿಗಳ ಮೂಲಕ ವೈವಿಧ್ಯತೆಯನ್ನೂ ಕಾಪಾಡಿಕೊಂಡವರು.
ವರ್ತಮಾನದ ಈ ದಿನಗಳಲ್ಲಿ ಕೃತಿಗಳ ಸಂಖ್ಯೆಯನ್ನು ಬೆನ್ನಿಗಿಟ್ಟುಕೊಂಡು ಬೀಗುವ ಟೊಳ್ಳು ಲೇಖಕರ ನಡುವೆ ಡಾ,ಕೆ,ಪುಟ್ಟಸ್ವಾಮಿ ಏಕೆ ಗಮನಾರ್ಹ ಲೇಖಕರಾಗಿ ಕಾಣುತ್ತಾರೆ ಎಂದರೆ, ಅವರು ಕನ್ನಡದ ಜಗತ್ತಿಗೆ ನೀಡಿದ ಬಹುತೇಕ ಕೃತಿಗಳು ಅಮೂಲ್ಯ ಕೃತಿಗಳಾಗಿ ಉಳಿದುಕೊಂಡಿವೆ. ಜೀವಸಂಕುಲಗಳ ಉಗಮ, ಕ್ರೀಡಾ ಲೋಕ ಕುರಿತಂತೆ ಬರೆದ " ಭುವನದ ಭಾಗ್ಯ" ಕನ್ನಡ ಸಿನಿಮಾ ಜಗತ್ತಿನ ಇತಿಹಾಸ ಕುರಿತ : ಸಿನಿಮಾ ಯಾನ" ( ಈ ಕೃತಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ) ಗಾಂಧೀಜಿ ಕುರಿತಂತೆ ಕನ್ನಡ ಬಂದಿರುವ ಶ್ರೇಷ್ಟ ಕೃತಿಗಳಲ್ಲಿ ಒಂದಾಗಿರುವ ಸಹಸ್ರಬುದ್ಧೆಯವರ " ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಗಳು" ಎಂಬ ಅನುವಾದಿತ ಕೃತಿ. ಇವೆಲ್ಲವೂ ಪುಟ್ಟಸ್ವಾಮಿಯವರ ಹೆಸರನ್ನು ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಚಿರಸ್ಥಾಯಿಗೊಳಿಸಿವೆ. ಇದೀಗ ಇದೇ ಸಾಲಿನಲ್ಲಿ ನಿಲ್ಲಬಲ್ಲ "ದಾಸ್ಯದಿಂದ ಆಚೆಗೆ" ಎಂಬ ಅಮೇರಿಕಾದ ಕಪ್ಪು ಜನಾಂಗದ ಜನನಾಯಕನೊಬ್ಬನ ಆತ್ಮ ಚರಿತ್ರೆಯ ಕೃತಿಯನ್ನು ನಮ್ಮ ಮುಂದಿರಿಸಿದ್ದಾರೆ. ( ಅಭಿನವ ಪ್ರಕಾಶನದ ಪ್ರಕಟಣೆ)  ಈವರೆಗೆ ನಾವು ಕೇಳದ, ಓದದ ಬೂಕರ್ ಟಿ.ವಾಷಿಂಗ್ ಟನ್ ಎಂಬ ದಾರ್ಶನಿಕ ಮನೋಭಾದ ವ್ಯಕ್ತಿಯ ಈ ಆತ್ಮಕಥೆ ಹಲವು ಕಾರಣಗಳಿಗಾಗಿ ಮುಖ್ಯ ಕೃತಿಯಾಗಿ ನಿಲ್ಲುತ್ತದೆ.

ಅಸಮಾನತೆ, ಲಿಂಗತಾರತಮ್ಯ, ವರ್ಣತಾರತಮ್ಯ, ಜನಾಂಗೀಯ ದ್ವೇಷ ಇವುಗಳ ನಿವಾಎರಣೆಗೆ ಸಂಘರ್ಷ, ಉಗ್ರ ಹೋರಾಟಗಳು ಆಯುಧ ಎಂದು ನಂಬಿಕೊಂಡಿದ್ದ ಕಾಲಘಟ್ಟದಲ್ಲಿ ತಮ್ಮನ್ನು ತುಳಿಯುತ್ತಿದ್ದ ಬಿಳಿಯರ ಜೊತೆ ಅನುಸಂಧಾನ ನಡೆಸುತ್ತಾ, ಮಾನವೀಯ ಗುಣವುಳ್ಳ ಬಿಳಿಯರನ್ನು ಗುರುತಿಸುತ್ತಾ, ಅವರ ನೆರವು ಪಡೆದು, ಕಪ್ಪು ಜನಾಂಗಕ್ಕೆ ದೊರಕಿಸಿಕೊಡಬಹುದಾದ ಶಿಕ್ಷಣ ಮತ್ತು ಜ್ಞಾನ ಬಹು ದೊಡ್ಡ ಆಯಧ ಎಂದು ಬದುಕಿ ತೋರಿಸಿದ ಈ ಮಹಾತ್ಮನ ಕಥೆ ಕನ್ನಡ ಲೋಕಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಇಡೀ ಮನುಕುಲವೇ ನಾಚಿ ತಲೆತಗ್ಗಿಸುವಂತಹ ಗುಲಾಮರ ವ್ಯಾಪಾರ ಹಾಗೂ ಅವರ ಶೋಷಣೆಯ ಇತಿಹಾಸವು  ಜಗತ್ತಿನ ಚರಿತ್ರೆಯ ಪುಟಗಳಲ್ಲಿ  ಕರಾಳ ಹಾಗೂ ಕಪ್ಪು ಅಧ್ಯಾಯವಾಗಿ ದಾಖಲಾಗಿದೆ. 1492 ರಲ್ಲಿ ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದ ನಂತರ, ಈ ಗುಲಾಮಗಿರಿಯ ವೃತ್ತಿ  ತನ್ನ ಪರಾಕಾಷ್ಟೆಯನ್ನು ಮುಟ್ಟಿತು. ಆಫ್ರಿಕಾದ ಮುಗ್ಧ ಹಾಗೂ ಅನಕ್ಷರಸ್ತ ಕಪ್ಪು ಜನರನ್ನು ಅಮೇರಿಕಾ ಮತ್ತು ಇಂಗ್ಲೇಂಡ್ ರಾಷ್ಟ್ರಗಳು ತಮ್ಮ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ತೋಟಗಳಲ್ಲಿ ಪ್ರಾಣಿಗಳಂತೆ ದುಡಿಸಿಕೊಂಡಿವು. . ಇಂತಹ ನತದೃಷ್ಟರ ನಡುವೆ  ಅಮೇರಿಕಾದ ತೋಟವೊಂದರಲ್ಲಿ ಜೀತದಾಳಾಗಿದ್ದ ನತದೃಷ್ಟ ಕಪ್ಪು ಹೆಣ್ಣು ಮಗಳೊಬ್ಬಳ ಉದರಲ್ಲಿ ಜನಿಸಿದ ಬೂಕರ್ ಟಿ.ವಾಷಿಂಗ್ ಟನ್ ಮುಂದಿನ ದಿನಗಳಲ್ಲಿ  ಕಪ್ಪುಜನರ ಘನತೆ, ಸ್ವಾಭಿಮಾನ ಹಾಗೂ ಮಾನವೀತೆಯ ಪ್ರತೀಕವಾಗಿ ಬದುಕಿ ಬಾಳುವುದರ ಮೂಲಕ  ಯಾವುದೋ ಒಂದು ಪುರಾಣ ಮಹಾಕಾವ್ಯದ ನಾಯಕನಂತೆ ಗೋಚರಿಸುತ್ತಾರೆ. ಬೂಕರ್ ವಾಷಿಂಗ್ ಟನ್  ಬದುಕಿದ್ದು 1856ರಿಂದ 1915 ರವರೆಗೆ ಮಾತ್ರ. ಆದರೆ, ತನ್ನ ಐವತ್ತೊಂಬತ್ತು ವರ್ಷಗಳ  ಅವಧಿಯಲ್ಲಿ ಉಪ್ಪಿನ ಗಣಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತನ್ನ ಮಲತಂದೆಯ ಆಶ್ರಯದಲ್ಲಿ ಗಣಿ ಮಾಲಿಕನೊಬ್ಬ  ತಂದೆಗೆ ನೀಡಿದ್ದ 18 ಎಂಬ ಗುಲಾಮಗಿರಿಯ ಸಂಖ್ಯೆಯ ಮೇಲೆ ಮೋಹಗೊಂಡು, ಬಾಲ್ಯದಲ್ಲಿ ತಾನು ಪತ್ರಿಕೆ ಓದುವಷ್ಟು ವಿದ್ಯಾವಂತನಾಗಬೇಕೆಂದು ಕನಸು ಕಾಣುತ್ತಾ ಅಕ್ಷರ ಲೋಕಕ್ಕೆ ಕಾಲಿರಿಸಿದವನು.ನಂತರ 1875 ರ ವೇಳೆಗೆ  ಪದವಿ ಪಡೆದು ನಿಗ್ರೋ ಜನಾಂಹಕ್ಕೆ ಹೆಮ್ಮೆಯ ಪುತ್ರ ಎನಿಸಿದವರು.
ಆ ಕಾಲಘಟ್ಟದಲ್ಲಿ ಪದವಿ ಪಡೆದವರೆಲ್ಲಾ ಅಮೇರಿಕಾದಲ್ಲಿ ಶ್ರೇಷ್ಟ ಹಾಗೂ ಉನ್ನತ ಹುದ್ದೆ ಅಲಂಕರಿಸುತ್ತ ದಿನಗಳು. ವಾಷಿಂಗ್ಟನ್ .ಮನಸ್ಸು ಮಾಡಿದ್ದರೆ, ಬಿಳಿಯರ ಮನವೊಲಿಸಿ ಉನ್ನತ ಹುದ್ದೆಯಲ್ಲಿ ವೈಭವದ ಜೀವನ ನಡೆಸಬಹುದಿತ್ತು. ಆದರೆ, ಅವರು ಹಸಿವು, ಅಪಮಾನ ಮತ್ತು ದಾರಿದ್ರ್ಯ ಕೂಪದಿಂದ ತಾನು ಮತ್ತು ತನ್ನ ಕುಟುಂಬ ಪಾರಾದರೆ ಸಾಲದು, ಇಡೀ ಸಮುದಾಯ ಗುಲಾಮಗಿರಿಯ ದಾಸ್ಯದಿಂದ ಮತ್ತು ಅಜ್ಞಾನದಿಂದ ಆಚೆಗೆ ಬರಬೇಕೆಂದು ಕನಸು ಕಾಣುವುದರ ಮೂಲಕ ತ್ಯಾಗದ ಜೀವನಕ್ಕೆ ಬದುಕನ್ನು ಮುಡಿಪಾಗಿಟ್ಟರು.
ನಿಗ್ರೊ ಮಕ್ಕಳ ಶಿಕ್ಷಣಕ್ಕೆ ಟೆಸ್ಕಜೀ ಎಂಬಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕನ್ನು ಬುದುಕುವ ಮಾರ್ಗವನ್ನು ತೋರಿದರು. ನಿಗ್ರೋ ಸಮುದಾಯದ ಅಭ್ಯುದಯಕ್ಕಾಗಿ ಉದಾರ ಮನಸ್ಸಿನ ಬಿಳಿಯರ ಮನವೊಲಿಸಿ ಅವರ ಸಹಕಾರದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದರು. ದಾಸ್ಯದಿಂದ ಬಿಡುಗಡೆಗಾಗಿ ಹಿಂಸೆಯ ಹಾದಿ ತುಳಿದಿದ್ದ ಹಲ ಕಪ್ಪು ಜನಾಂಗದ ನಾಯಕರಿಗೆ ಬೂಕರ್ ವಾಷಿಂಗ್ ಟನ್ ಅವರ ನಿಲುವುಗಳ ಬಗ್ಗೆ ಸಹಮತವಿರಲಿಲ್ಲ. ಆದರೆ, ಸಂಘರ್ಷವಿದ್ದಲ್ಲಿ ಮನುಷ್ಯ-ಮನುಷ್ಯ ನಡುವೆ ಸಂವಹನ ಮತ್ತು ಸಂಬಂಧ ಸಾಧ್ಯವಿಲ್ಲ ಎಂಬಿದ್ದ ಅವರು ತಮ್ಮ ಜನಾಂಗದ ಏಳಿಗೆಗಾಗಿ ದುಡಿಯುತ್ತಾ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ ಕಥನ ಈ ಕೃತಿಯಲ್ಲಿ ರೋಚಕವಾಗಿ ಮೂಡಿ ಬಂದಿದೆ.

ಅಂದಿನ ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ ವಾಷಿಂಗ್ ಟನ್ ಅಧ್ಯಕ್ಷರ ಶ್ವೇತಭವನಕ್ಕೆ ಅತಿಥಿಯಾಗಿ ಆಹ್ವಾನ ಪಡೆದ ಪ್ರಥಮ ಕರಿಯ ಜನಾಂಗದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದರು. ವಾಷಿಂಗ್ ಟನ್ ಅವರ ಪ್ರಭಾವ ಅಮೇರಿಕಾದಲ್ಲಿ ಹೇಗಿತ್ತು ಎಂಬುದಕ್ಕೆ ಅವರು ತಮ್ಮ ಆತ್ಮಕಥೆಯ ಕೊನೆಯ ಪುಟದಲ್ಲಿ ದಾಖಲಿಸಿರುವ ಮಾತುಗಳಿವು.
" ಈಗ ರಿಚ್ಮಂಡ್ ನಗರಕ್ಕೆ ಅತಿಥಿಯಾಗಿ ಬಂದಿದ್ದೇನೆ.ನಗರದ ಅತಿ ದೊಡ್ಡ ಹಾಗೂ ಸುಂದರವಾದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಸಭಾಂಗಣದಲ್ಲಿ ನನ್ನ ಎರಡು ಜನಾಂಗವಿದ್ದ  ಸಭೆಯನ್ನು ಉದ್ದೇಶಿಸಿ ಉಪನ್ಯಾಸ ಮಾಡಿದೆ. ಕರಿಯರಿಗೆ ಈ ಸಭಾಂಗಣಕ್ಕೆ ಪ್ರವೇಶ ದೊರೆತದ್ದು ಇದೇ ಮೊದಲ ಬಾರಿ. ನಾನು ಇಲ್ಲಿಗೆ ಬರುವ ಹಿಂದಿನ ದಿನ ನಗರ ಸಭೆಯ ಎಲ್ಲಾ ಸದಸ್ಯರೆಲ್ಲರೂ ಹಾಜರಿರಬೇಕೆಂದು ನಿರ್ಣಯವಾಗಿತ್ತು.  ಅದೇ ರೀತಿ ರಾಜ್ಯ ಶಾಸನ ಸಭೆ ಮತ್ತು ಸೆನೆಟ್ ಸದಸ್ಯರು ಭಾಗವಹಿಸಬೇಕೆಂದು ಠರಾವು ನೀಡಲಾಗಿತ್ತು. ನೂರಾರು ಕರಿಯರಿದ್ದ, ಅನೇಕ ಬಿಳಿಯ ಪ್ರತಿಷ್ಟಿತರಿದ್ದ ನಗರ ಸಭೆ, ಶಾಸನಸಭೆಯ ಸೆನೆಟ್ ನ ಸದಸ್ಯರು ಉಪಸ್ಥಿತರಿದ್ದ ಸಭೆಯಲ್ಲಿ ನಾನು ಭರವಸೆ ಮತ್ತು ಸಂತೋಷವನ್ನು ಬಿತ್ತುವ ಸಂದೇಶದ ಉಪನ್ಯಾಸ ನೀಡಿದೆ. ನನಗೆ ಜನ್ಮ ನೀಡಿದ ರಾಜ್ಯಕ್ಕೆ, ವಾಪಸ್ ಕರೆಸಿದ ಎರೆಡೂ ಜನಾಂಗದ ಸಜ್ಜನರಿಗೆ ನಾನು ಹೃದಯತುಂಬಿದ ವಂದನೆಗಳನ್ನು ಸಲ್ಲಿಸಿದೆ"

ವಾಷಿಂಗ್ ಟನ್ ತನ್ನ ಬಡತನ, ಅಪಮಾನಗಳನ್ನು ಮೀರಿ ಸಂಯಮದ ದೃಷ್ಟಿಕೋನದಿಂದ ಬದುಕನ್ನು ಸ್ವೀಕರಿಸಿ ಯಶಸ್ವಿಯಾದ ಒಂದು ಶತಮಾನದ ಹಿಂದಿನ ಆತ್ಮಕಥನವನ್ನು ಲೇಖಕ ಮಿತ್ರ ಪುಟ್ಟಸ್ವಾಮಿಯವರು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಈ ಕೃತಿ ಒಬ್ಬ ಕೇವಲ  ಕಪ್ಪು ಜನಾಂಗದ ನಾಯಕನೊಬ್ಬನ ಕಥೆಯಾಗಿರದೆ, ಅಮೇರಿಕಾದಲ್ಲಿ ನಡೆದ ಕಪ್ಪು ವರ್ಣಿಯರ ಹೋರಾಟದ ಕಥನವನ್ನು ಸಹ ಒಳಗೊಂಡಿದೆ. ಇಲ್ಲಿನ ಅನೇಕ ಮಹನೀಯರ ಭಾವಚಿತ್ರಗಳೊಂದಿಗೆ ಇರುವ ವಿವರಗಳು ಇಡೀ ಹೋರಾಟದ ಇತಿಹಾಸಕ್ಕೆ ಪೂರಕವಾಗಿವೆ. ಈ ಮಾಹಿತಿ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಕನ್ನಡದ ಜಗತ್ತಿಗೆ ಇಂತಹ ಅಪರೂಪದ ಕೃತಿ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ