ಶನಿವಾರ, ಮಾರ್ಚ್ 1, 2025

ಆಹಾರ ಸಂಸ್ಕೃತಿ ಆವೇಶದ ಮಾತುಗಳಿಗೆ ನಿಲುಕುವಂತಹದ್ದಲ್ಲ.


ಕಳೆದ 2024 ಡಿಸಂಬರ್ ರ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿಷಯವಾಗಿ ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಬಾಡೂಟವು ಸಮ್ಮೇಳನದಲ್ಲಿ ಇರಬೇಕೆಂಬ ವಿಷಯವು ಮುನ್ನೆಲೆಗೆೆ ಬಂದಿತು ಜೊತೆಗೆ ಪರ ವಿರೋಧಗಳ ಚರ್ಚೆಯೂ ನಡೆಯಿತು. ಪ್ರಾಚೀನ ಭಾರತದಲ್ಲಿ ಬ್ರಾಹ್ಮಣರೂ ಸಹ ಮಾಂಸಹಾರಿಗಳಾಗಿದ್ದರು ಎಂಬುದು ಎಷ್ಟು ಸತ್ಯವೋ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಬಂಗಾಳದ ಬ್ರಾಹ್ಮಣರು ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಇಂದಿನ ಬಾಂಗ್ಲಾ ದೇಶದ ಹಿಂದೂ ಬ್ರಾಹ್ಮಣರು ಪ್ರತಿ ನಿತ್ಯವೂ ಮೀನನ್ನು ಬಳಸುವುದರ ಮೂಲಕ ಮಾಂಸಹಾರಿಗಳಾಗಿರುವುದು ಅಷ್ಟೇ ಸತ್ಯ. ಇಲ್ಲಿ ಪ್ರಮುಖ ಪ್ರಶ್ನೆ ಇರುವುದು ಮಾಂಸಹಾರ ಕೀಳು ಮತ್ತು ಸಸ್ಯಹಾರ ಉತ್ತಮ ಎನ್ನುವ ಎಂಬ ಅಪಕ್ವ ಭಾವನೆ ಅಥವಾ ಪ್ರಜ್ಞೆ ಮಾತ್ರ. ಆಹಾರ ಸಂಸ್ಕೃತಿ ಎನ್ನುವುದು ಬಹು ಸಂಸ್ಕೃತಿಯ ನೆಲವಾದ ಭಾರತದ ನೆಲದಲ್ಲಿ ನಮ್ಮ ಪೂರ್ವಿಕರು ತಮ್ಮ ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ಪ್ರಾಕೃತಿಕ ಕೊಡುಗೆ ಮತ್ತು ಬೆಳೆಯುತ್ತಿದ್ದ ಆಹಾರ ಧಾನ್ಯಗಳ ಮೇಲೆ ಅವಲಂಬಿತವಾಗಿದ್ದ ಇತಿಹಾಸವನ್ನು ನಾವು ಮನಗಾಣಬೇಕಿದೆ.

ಪುರಾತನ ಭಾರತದ ವೇದಗಳ ಕಾಲದಲ್ಲಿ ವೈದಿಕರು ಅಥವಾ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಮತ್ತು ಸೋಮರಸ ಎಂಬ ಮಧ್ಯ ಕುಡಿಯುತ್ತಿದ್ದರು ಎಂದು ಭಾವೋದ್ವೇಗದಲ್ಲಿ ಮಾತನಾಡುವ ನಾವು, ಅದೇ ನೆಲದಲ್ಲಿ ಶೂದ್ರರು ಸೇರಿದಂತೆ ತಳವರ್ಗದ ಜನರು ವಿಶೇಷವಾಗಿ ಭೇಟೆಯಾಡಲು ಸಾಧ್ಯವಾಗದ ಆದಿವಾಸಿಗಳು ಅರಣ್ಯದಲ್ಲಿ ಗೆಡ್ಡೆ ಗೆಣೆಸು ಮತ್ತು ಹಣ್ಣು ಹಂಪಲು ತಿಂದು ಸಸ್ಯಹಾರಿಗಳಂತೆ ಜೀವಿಸಿದ್ದರು ಎಂಬುದನ್ನು ಮರೆಯುತ್ತೆವೆ. ಹಾಗಾಗಿ ಇವರಲ್ಲಿ ಯಾರು ಕೀಳು, ಯಾರು ಮೇಲು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕ್ರಿಸ್ತಪೂರ್ವ ಭಾರತದಲ್ಲಿ. ಹಿಂದೂ ಧರ್ಮದ ವಿರುದ್ಧ ಸಿಡಿದೆದ್ದು ಸೃಷ್ಟಿಯಾದ ಎರಡು ಧರ್ಮಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮ ಪ್ರಮುಖವಾದವು. ಮಹಾವೀರ ಮತ್ತು ಬುದ್ಧ ಇಬ್ಬರೂ ಸಮಕಾಲೀನರಾಗಿರುವುದು ವಿಶೇಷ. (ಬುದ್ಧನಿಗಿಂತ ಮಹಾವೀರನು ಹಿರಿಯ ವ್ಯಕ್ತಿ) ಈ ಎರಡು ಧರ್ಮಗಳ ಆಚರಣೆ ಮತ್ತು ಪ್ರಚಾರದಿಂದ ಪ್ರಸಿದ್ಧಿಗೆ ಬಂದ ಕಾರಣದಿಂದ ಹಿಂದೂ ಧರ್ಮೀಯರು ಬೆಚ್ಚಿ ಬಿದ್ದುದ್ದು ನಿಜ. ಮಹಾವೀರನು ಹಿಂಸೆಯನ್ನು ಪ್ರತಿರೋಧಿಸಿ, ಅಹಿಂಸೆಯನ್ನು ಪ್ರತಿಪಾದಿಸಿದ ಪರಿಣಾಮವಾಗಿ ಜೈನ ಧರ್ಮವನ್ನು ಅಪ್ಪಿಕೊಂಡ ಬಹುತೇಕ ಮಂದಿ ಶುದ್ಧ ಸಸ್ಯಹಾರಿಗಳಾದರು. ಈ ಪ್ರಭಾವವು ಹಿಂದೂ ಧರ್ಮದ ಬ್ರಾಹ್ಮಣರ ಮೇಲೆ ಆಗಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ.
ಹಿಂದೂ ಧರ್ಮದ ಕಡು ವೈರಿಗಳಂತೆ ಇದ್ದ ಜೈನ ಧರ್ಮ ಮತ್ತು ಬೌದ್ಧ ಧರ್ಮಗಳ ಆಚಾರ, ವಿಚಾರಗಳಲ್ಲಿ ಬಹಳಷ್ಟು ವೆತ್ಯಾಸಗಳಿದ್ದವು. ಬುದ್ಧನು ಮಹಾವೀರನ ಅಹಿಂಸೆಯ ಪರಿಕಲ್ಪನೆಯನ್ನು ಅತಿರೇಕದ ಪರಮಾವಧಿ ಎಂದು ಬಣ್ಣಿಸಿದ್ದನು. ಮೂಲತಃ ಈಶಾನ್ಯ ಭಾರತದ ಬುಡುಕಟ್ಟು ಸಮುದಾಯದಿಂದ ಬಂದ ಗೌತಮ ಬುದ್ಧನು ಶಾಕ್ಯ ಕುಲದಲ್ಲಿ ಜನಿಸಿದವನಾಗಿದ್ದು ಪಾರಂಪರಿಕವಾಗಿ ಮಾಂಸಹಾರಿಯಾಗಿದ್ದನು.
ಬುದ್ಧನು ತನ್ನ ತಾರುಣ್ಯದಲ್ಲಿ ತಾನು ನಂಬಿದ ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧನಾಗಿ ಯುದ್ಧವೆಂಬುದು ಮನುಕುಲದ ಕ್ರಾರ್ಯ ಎಂಬ ನಿಲುವಿಗೆ ಅಂಟಿಕೊಂಡ ಕಾರಣದಿಂದಾಗಿ ತಾನು ಜನಿಸಿದ ಸಮುದಾಯದಿಂದ ಗಡಿಪಾರಿನ ಶಿಕ್ಷೆಗೆ ಒಳಗಾದನು. ಕ್ರಿಸ್ತಪೂರ್ವ ಐನೂರು ವರ್ಷದ ಹಿಂದಿನ ಆ ಕಾಲದಲ್ಲಿ ಗಡಿಪಾರಾದ ವ್ಯಕ್ತಿಗೆ ಬದುಕಲು ಇದ್ದ ಏಕೈಕ ಮಾರ್ಗ ಭಿಕ್ಷಾನ್ನ ಮಾತ್ರ. ತನ್ನ ಭಿಕ್ಷಾಪಾತ್ರೆಗೆ ಅನ್ನ ಹಾಕಿದ ವ್ಯಕ್ತಿ ಯಾರು? ಆತ ಅಥವಾ ಆಕೆ ಯಾವ ಸಮುದಾಯದವರು? ಯಾವ ಧರ್ಮದವರು? ಎಂದು ಕೇಳುವ ಪರಿಸ್ಥಿತಿಯಲ್ಲಿ ಬುದ್ಧ ಮಾತ್ರವಲ್ಲದೆ, ಯಾವ ಭಿಕ್ಷಕನೂ ಇರಲಿಲ್ಲ. ಹಾಗಾಗಿ ಭಿಕ್ಷಾಪಾತ್ರೆಗೆ ಬಿದ್ದ ಆಹಾರವು ಮಾಂಸಹಾರವೆ? ಅಥವಾ ಸಸ್ಯಹಾರವೆ? ಎಂದು ಬುದ್ಧನು ಪರೀಕ್ಷಿಸಲಿಲ್ಲ. ನಾವು ತಿನ್ನುವ ಆಹಾರದಲ್ಲಿ ಮಿತಿ ಇರಬೇಕು ಎಂಬುದು ಬುದ್ಧನ ನಿಲುವಾಗಿತ್ತು. ಇದು ಮುಂದಿನ ದಿನಗಳಲ್ಲಿ ಆತನ ಧರ್ಮದ ಪ್ರಮುಖ ಅಂಶಗಳಲ್ಲಿ ಒಂದಾಯಿತು.
ಆಹಾರ ಪದ್ಧತಿ ಅಥವಾ ಸಂಸ್ಕೃತಿಯ ಕುರಿತಾಗಿ ನಮಗೆ ಈ ದೇಶದ ಉದಾಹರಣೆ ಬೇಡ. ಕರ್ನಾಟಕದ ಪ್ರಾದೇಶಿಕತೆಯ ಆಧಾರದ ಮೇಲೆ ನಮ್ಮ ಆಹಾರ ಸಂಸ್ಕೃತಿ ಮಾತ್ರವಲ್ಲದೆ, ಧರಿಸುವ ವಸ್ತç ಸಂಸ್ಕೃತಿಯೂ ಸಹ ಆಚರಣೆಯಲ್ಲಿದೆ. ದಕ್ಷಿಣ ಕರ್ನಾಟಕದ ಬಯಲು ಸೀಮೆಯಲ್ಲಿ ರಾಗಿಮುದ್ದೆ ಪ್ರಮುಖ ಆಹಾರವಾದರೆ, ಉತ್ತರ ಮತ್ತು ಹೈದರಾಬಾದ್ ಕರ್ನಾಕಟದಲ್ಲಿ ಜೋಳದ ರೊಟ್ಟಿಯ ಊಟವು ಪ್ರಮುಖ ಆಹಾರವಾಗಿದೆ. ಜೊತೆಗೆ ಅಲ್ಲಿನ ರಣ ಬಿಸಿಲಿಗೆ ಶ್ವೇತವರ್ಣsದ ವಸ್ತ್ರಗಳು ಮತ್ತು ನೆತ್ತಿ ಸುಡದಂತೆ ತಲೆಯ ಮೇಲೆ ಬಿಳಿಯ ಟೋಪಿ ಧರಿಸುವುದು ಸಾಮಾನ್ಯವಾಗಿದೆ. ಕರಾವಳಿಯಲ್ಲಿ ಮೀನು ಮತ್ತು ಕುಚ್ಚಲಕ್ಕಿ ಅಥವಾ ಕುಸಲಕ್ಕಿ ಅನ್ನ ಮತ್ತು ಗಂಜಿ ಪ್ರಮುಖ ಆಹಾರವಾದರೆ, ಮಲೆನಾಡಿನ ಪ್ರದೇಶದ ಜನರಿಗೆ ಅನ್ನದ ಮುದ್ದೆ, ಅಕ್ಕಿ ರೊಟ್ಟಿ, ಮಾಂಸಹಾರ ಪದಾರ್ಥಗಳು ಮತ್ತು ಮೀನು ಪ್ರಮುಖ ಆಹಾರವಾಗಿದೆ. ಈ ನಾಲ್ಕು ಬಗೆಯ ಆಹಾರ ಸಂಸ್ಕೃತಿಯಲ್ಲಿ ಯಾವುದು ಶ್ರೇಷ್ಠ ಅಥವಾ ಯಾವುದೇ ಕನಿಷ್ಠ ಎಂದು ನಿರ್ಧರಿಸುವುದು ಎಷ್ಟು ತ್ರಾಸದಾಯಕವೋ, ಇವುಗಳಲ್ಲಿ ಒಂದನ್ನು ಕರ್ನಾಟಕದ ಆಹಾರ ಸಂಸ್ಕೃತಿ ಎಂದು ಬಿಂಬಿಸುವುದು ಕೂಡ ಕಷ್ಟಕರವಾದ ಕ್ರಿಯೆ.
ವರ್ತಮಾನದ ಕರ್ನಾಟಕದ ಜನಗಣತಿಯ ಅಂಕಿಅಂಶವು ಅಧಿಕೃತವಾಗಿ ಪ್ರಕಟವಾಗದಿದ್ದರೂ ಸಹ, ಇಲ್ಲಿನ ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಇವರುಗಳಿಗಿಂತ ಹಿಂದುಳಿದ ವರ್ಗ ಮತ್ತು ಜಾತಿಗಳು ಅಧಿಕ ಸಂಖ್ಯೆಯಲ್ಲಿರುವುದು ವಾಸ್ತವ ಸಂಗತಿ. ಹಿಂದುಳಿದ ಜಾತಿ ಮತ್ತು ವರ್ಗದವರ ಆಹಾರ ಕ್ರಮದಲ್ಲಿ ಮೀನು ಮತ್ತು ಕೋಳಿ ಅಥವಾ ಕುರಿ, ಮೇಕೆಯ ಮಾಂಸಕ್ಕಿಂತ ದನ ಮತ್ತು ಕೋಣದ ಮಾಂಸ ಸೇವನೆ ಹೆಚ್ಚಾಗಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಅವರ ಆಹಾರ ಸಂಸ್ಕೃತಿಯನ್ನು ಮುನ್ನೆಲೆಗೆ ತಂದು, ಈಗ ಸರ್ಕಾರವು ಸಾರ್ವಜನಿಕವಾಗಿ ಕೋಣದ ಬಲಿಯನ್ನು ನಿಷೇಧಿಸಿರುವುದನ್ನು ಹಿಂಪಡೆಯಲು ಸಾಧ್ಯವೆ? ಇಂತಹ ವಿಷಯವನ್ನು ಆಹಾರ ಸಂಸ್ಕೃತಿಯ ಮೇಲೆ ಹಲ್ಲೆ ಎಂದು ಪುಂಗಿದಾಸರ ಶೈಲಿಯಲ್ಲಿ ಬಿಂಬಿಸಲಾಗದು. ಜಗತ್ತಿನ ಯಾವುದೇ ಸಂಸ್ಕೃತಿಯು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಅಪ್ಪಟ ಸಸ್ಯಹಾರಿಗಳಾಗಿದ್ದ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದ ಇಂದಿನ ಯುವತಲೆಮಾರಿನಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚುಮಂದಿ ಮಾಂಸಹಾರ ಸೇವನೆ ಮಾಡುತ್ತಾರೆ. ಅವರು ಕೆಲಸ ಮಾಡುವ ಪ್ರದೇಶಗಳು, ಪರಿಸರ ಮತ್ತು ನಗರೀಕರಣದ ಪ್ರಭಾವ ಇದಕ್ಕೆ ಮೂಲ ಕಾರಣ. ಇದು ಮಾತ್ರವಲ್ಲದೆ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಮದ್ಯಪಾನ ಕೂಡಾ ಆಹಾರದ ಒಂದು ಭಾಗವಾಗಿದೆ.
ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದಲ್ಲಿ ಜನಿಸಿದ ನಾನು, ಬಾಲ್ಯದಿಂದ ಕಂಡ ಹಾಗೆ ನನ್ನ ಅಜ್ಜನು ದಲಿತರನ್ನು ಮನೆಯ ಜಗುಲಿಗೆ ಹತ್ತಿಸಲಿಲ್ಲ. ನನ್ನಪ್ಪ ಅದೇ ದಲಿತರನ್ನು ಜಗುಲಿಯಲ್ಲಿ ಕೂರಿಸಿ ಊಟ ಹಾಕಿದರು. ಅಜ್ಜ, ಅಪ್ಪ ಇವರಿಬ್ಬರಿಗೂ ಭಿನ್ನವಾಗಿ ನಾನು ದಲಿತರನ್ನು ಮನೆಯೊಳಗೆ ಕೂರಿಸಿಕೊಂಡು ಸಹಭೋಜನೆ ಮಾಡುತ್ತಿದ್ದೀನಿ. ನನ್ನಜ್ಜ ಯಾವ ಕಾರಣದಿಂದಲೂ ಅಪ್ಪನ ಮೇಲೆ ಮತ್ತು ನನ್ನಪ್ಪನನ್ನ ಮೇಲೆ ಈ ವಿಷಯದಲ್ಲಿ ಎಂದಿಗೂ ಸಿಡುಕಲಿಲ್ಲ. ಇದು ಆಯಾ ಕಾಲಘಟ್ಟದಲ್ಲಿ ಸ್ವಾಭಾವಿಕವಾಗಿ ರೂಪುಗೊಳ್ಳುವ ಸಂಸ್ಕೃತಿಯೇ ಹೊರತು, ಕಾನೂನಿನ ಮೂಲಕ ಆಚರಣೆಗೆ ತರುವ ಸಂಸ್ಕೃತಿಯಲ್ಲ. ಜಾತಿಯ ಹೆಸರಿನಲ್ಲಿ ಮನುಷ್ಯ ಜೀವವನ್ನು ಅಪಮಾನಿಸುವುದು, ಜಾತಿಯ ಹಿನ್ನಲ್ಲೆಯಲ್ಲಿ ಕೀಳಾಗಿ ನೋಡುವುದು ಅಥವಾ ದುರ್ಬಲ ಸಮುದಾಯದ ಮೇಲಿನ ದಬ್ಬಾಳಿಕೆಗೆ ಕಾನೂನು ಕ್ರಮ ಅಗತ್ಯವೇ ಹೊರತು, ಸಂಸ್ಕೃತಿಯ ಬದಲಾವಣೆ ತಂತಾನೆ ಜರುಗುವ ಸಹಜ ಪ್ರಕ್ರಿಯೆ.

ನಮ್ಮ ಗ್ರಾಮೀಣ ಪ್ರದೇಶದ ಪೂರ್ವಿಕರು ಆಹಾರ ತಜ್ಞರಾಗಿರಲಿಲ್ಲ ಮತ್ತು ವೈದ್ಯರಾಗಿರಲಿಲ್ಲ. ತಾವು ಬದುಕಿದ್ದ ಪ್ರದೇಶಗಳಲ್ಲಿ ಬೆಳೆಯಬಹುದಾದ ಆಹಾರದ ಧಾನ್ಯಗಳ ಜೊತೆ ಅವರ ಆಹಾರ ಸಂಸ್ಕೃತಿಯು ರೂಪುಗೊಂಡಿತ್ತು. ಜೊತೆಗೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವAತೆ ಇತ್ತು. ಉತ್ತರ ಕರ್ನಾಟಕದ ಜನತೆ ಜೋಳದ ರೊಟ್ಟಿಯ ಜೊತೆಗೆ ಹೇರಳವಾಗಿ ದ್ವಿದಳ ಧಾನ್ಯ ಕಾಳುಗಳ ಪಲ್ಯ ಮತ್ತು ಹಸಿರು ಸೊಪ್ಪು, ಈರುಳ್ಳಿ, ಸೌತೆಕಾಯಿ, ಗಜ್ಜರಿ ಎಂದು ಕರೆಯುವ ಕೆಂಪುಮೂಲಂಗಿಯನ್ನು ಸೇವಿಸುತ್ತಾರೆ. ಅಲ್ಲಿನ ಕಡು ಬಿಸಿಲಿಗೆ ಅವರ ಶರೀರವು ಬೆವರಿನ ಮೂಲಕ ದೇಹನ ನೀರಿನ ಅಂಶವನ್ನು ಕಡಿಮೆ ಮಾಡುವುದರಿಂದ ಅವರು ಸೇವಿಸಿದ ಆಹಾರವು ಸುಲಭವಾಗಿ ಜೀರ್ಣವಾಗಲು ಅವರ ಈ ಆಹಾರ ಸಂಸ್ಕೃತಿಯು ಸೂಕ್ತವಾಗಿದೆ. ಅಷ್ಟೇ ಅಲ್ಲದೆ, ಕಡಲೆ ಹಿಟ್ಟು ಮತ್ತು ಹಸಿರು ಮೆಣಸಿನಕಾಯಿಯಿಂದ ತಯಾರಿಸಿದ ಮಿರ್ಚಿ, ಬೋಡಾ ಮತ್ತು ಹುರಿದ ಶೇಂಗಾ, ಒಗ್ಗರಣೆ ಹಾಕಿದ ಅವಲಕ್ಕಿ ಇವೆಲ್ಲವೂ ಅವರ ಮೆಚ್ಚಿನ ತಿನಿಸುಗಳು. ಎರಡು ದಶಕಗಳ ಕಾಲ ಉತ್ತರ ಕರ್ನಾಟಕದಲ್ಲಿ ಬದುಕಿದ ನನ್ನ ಅನುಭವದ ಪ್ರಕಾರ ಕಡಲೆ ಹಿಟ್ಟಿನಿಂದ ತಯಾರಿಸಿದ ಬೋಂಡ ಅಥವಾ ಮಿರ್ಚಿ ಇವುಗಳು ಮಲಬದ್ಧತೆಗೆ ರಾಮಬಾಣ. ಕುಡಿಯುವ ನೀರಿನ ಕೊರತೆಯಿಂದಾಗಿ ಕಡಿಮೆ ಪ್ರಮಾಣದ ನೀರು ಕುಡಿಯುವ ಅಲ್ಲಿನ ಜನರು ಆಹಾರ ಕ್ರಮದಲ್ಲಿ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲವರಾಗಿದ್ದಾರೆ.
ಬಯಲು ಸೀಮೆಯ ಜನರು ಇಂದಿನ ನೀರಾವರಿಗೆ ಮುನ್ನ ಮಳೆಯಾಶ್ರಯದಲ್ಲಿ ಬೆಳೆಯುತ್ತಿದ್ದ ರಾಗಿ, ಅವರೆ, ಹಲಸಂದೆ, ಹುರುಳಿಕಾಳು, ಆರ್ಕ, ನವಣೆ, ಎಳ್ಳು, ಹುಚ್ಚೆಳ್ಳು ಇವುಗಳಿಗೆ ತಕ್ಕಂತೆ ತಮ್ಮ ಆಹಾರ ಕ್ರಮವನ್ನು ರೂಪಿಸಿಕೊಂಡಿದ್ದರು. ರಾಗಿ ಮುದ್ದೆಯ ಜೊತೆಗೆ ಅವರೆ, ಹಲಸಂದೆ, ಹುರುಳಿಕಾಳಿನ ಸಾರು, ಸೊಪ್ಪು ಸಾರು ಸಾಮಾನ್ಯವಾಗಿತ್ತು. ನನ್ನ ಬಾಲ್ಯದಲ್ಲಿ ಹಬ್ಬದ ದಿನಗಳನ್ನು ಹೊರತು ಪಡಿಸಿದರೆ, ಹತ್ತಿರದ ನೆಂಟರು ಮನೆ ಬಂದಾಗ ಮಾತ್ರ ಕೋಳಿಸಾರಿನ ಊಟ. ಅಂದರೆ, ವರ್ಷಕ್ಕೆ ಎಂಟತ್ತು ಬಾರಿ ಮಾತ್ರ ಮಾಂಸಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಈಗಿನಂತೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಾಂಸ ತಿನ್ನುವ ಆಚರಣೆ ಅಸ್ತಿತ್ವದಲ್ಲಿ ಇರಲಿಲ್ಲ. ಕಾಲ ಕ್ರಮೇಣ ಎಲ್ಲವೂ ಬದಲಾಗುತ್ತಾ ಬಂದಿದೆ. ಮ್ಯಾಗಿ ನ್ಯೂಡಲ್, ಕೆಂಟಕಿ ಚಿಕನ್ ಮತ್ತು ಗೋಬಿ ಮಂಚೂರಿಗೆ ಒಲಿದಿರುವ ನಮ್ಮ ಮಕ್ಕಳಿಗೆ ಈಗ ಮುದ್ದೆ ಎಂದರೆ, ಮನೆಯಲ್ಲಿನ ಮುದುಕರ ಹಳೆಯ ಆಹಾರ ಎಂಬ ನಂಬಿಕೆ ಬೇರೂರಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾವ ಆಹಾರ ಸಂಸ್ಕೃತಿಯನ್ನು ಶ್ರೇಷ್ಠ ಎನ್ನುವುದು? ಇದು ನಮ್ಮ ಮುಂದಿರುವ ಪ್ರಶ್ನೆ. ಪಟ್ಟಾ ಪಟ್ಟಿ ಚಡ್ಡಿಯೂ ಮಂಡ್ಯ ನೆಲದ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿತ್ತು. ಈಗ ಊರಿಗೆ ನಾಲ್ಕು ಮಂದಿ ಇರಲಿ, ಒಬ್ಬನೇ ಒಬ್ಬ ಚಡ್ಡಿ ಹಾಕಿದ ವ್ಯಕ್ತಿ ಸಿಗುವುದಿಲ್ಲ. ಇದು ನನ್ನ ಸಂಸ್ಕೃತಿಯ ಅವಸಾನ ಎಂದು ನಾನು ಊಳಿಡಲು ಸಾಧ್ಯವೆ?
ಭಿನ್ನ ಧರ್ಮಗಳ ಸಮುದಾಯಕ್ಕೆ ಅನುಸಾರವಾಗಿ ಆಹಾರ ಸಂಸ್ಕೃತಿ ಆಚರಣೆಯಲ್ಲಿದ್ದರೂ ಸಹ, ಬಹು ಧರ್ಮಿಯರೂ ಸಾರ್ವಜನಿಕವಾಗಿ ಒಪ್ಪಿಕೊಂಡ ಹಣ್ಣು, ಸಿಹಿ, ವಿವಿಧ ತರಕಾರಿಗಳನ್ನು ಒಳಗೊಂಡ ಸಸ್ಯಹಾರಿ ಆಹಾರವು ಸಾಮಾನ್ಯವಾದ ಆಹಾರ ಪದ್ಧತಿಯಾಗಿದೆ. ಕೊಡವರು ಮತ್ತು ಮುಸ್ಲಿಂರು ತಮ್ಮ ಕುಟುಂಭದ ವಿವಾಹಗಳಲ್ಲಿ ಮಾಂಸಹಾರ ಮಾಡುತ್ತಾರೆ. ಆದರೆ, ಸಾರ್ವಜನಿಕ ಸಮಾರಂಭಗಳಲ್ಲಿ ಕ್ರೈಸ್ತರು ಸೇರಿದಂತೆ ಎಲ್ಲರೂ ಸಸ್ಯಹಾರಕ್ಕೆ ಒಲಿಯುತ್ತಾರೆ. ಸರ್ವಧರ್ಮಿಯರಿಗೆ ತೆರೆದಿಟ್ಟಿರುವ ಮಸೀದಿಗಳಿಗೆ ಹಿಂದೂಗಳು ಹೋದಾಗ, ನಮ್ಮ ಆಹಾರ ಪದ್ಧತಿ ಎಂದು ಅವರು ನಮಗೆ ದೊನ್ನೆ ಬಿರಿಯಾನಿ ಅಥವಾ ಕಬಾಬ್ ನೀಡುವುದಿಲ್ಲ ಬದಲಾಗಿ ಪ್ರೀತಿಯಿಂದ ಅಲ್ಲಿನ ಧರ್ಮಗುರುಗಳು ಕಲ್ಲುಸಕ್ಕರೆ, ಬಾದಾಮಿ ಮತ್ತು ಖರ್ಜೂರವನ್ನು ನಮ್ಮ ಕೈಗೆ ಇಡುತ್ತಾರೆ. ಅದೇ ರೀತಿಯಲ್ಲಿ ಕ್ರೆöÊಸ್ತ ಧರ್ಮದ ಚರ್ಚುಗಳಲ್ಲಿ ಸಿಹಿ ಪದಾರ್ಥ ಅಥವಾ ಕೇಕ್ ಅನ್ನು ನೀಡುವುದು ವಾಡಿಕೆ. ಈ ಕಾರಣದಿಂದಾಗಿ ಹಿಂದೂಧರ್ಮದ ಬಹುತೇಕ ಎಲ್ಲಾ ದೇವಾಲಯಗಳು ಅನ್ನ ಸಂತರ್ಪಣೆಯ ಹೆಸರಿನಲ್ಲಿ ಎಲ್ಲರಿಗೂ ಸಲ್ಲುವ ಸಸ್ಯಹಾರದ ಊಟವನ್ನು ನೀಡುತ್ತಿವೆ.
ಖಾಸಾಗಿ ಸಮಾರಂಭಗಳು ಅಥವಾ ಔತಣಕೂಟಗಳು ಅವುಗಳನ್ನು ಏರ್ಪಡಿಸುವ ವ್ಯಕ್ತಿಗಳ ಅಭಿರುಚಿಗೆ ತಕ್ಕಂತೆ ಇರುತ್ತವೆ. ಅದನ್ನು ನಾವು ಪ್ರಶ್ನಿಸಲಾಗದು. ಆದರೆ, ಸಾರ್ವಜನಿಕವಾಗಿ ಎಲ್ಲಾ ಜಾತಿ ಮತ್ತು ಧರ್ಮೀಯರು ಪಾಲ್ಗೊಳ್ಳುವ ಸಮಾರಂಭಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಬ್ರಾಹ್ಮಣ, ಶೂದ್ರ, ದಲಿತ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸೇವಿಸುವ ಸಸ್ಯಹಾರದ ಆಹಾರಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಇದು ಮುಂದಿನ ದಿನಮಾನಗಳಲ್ಲಿ ಬದಲಾದರೂ ಆಶ್ಚರ್ಯಪಡಬೇಕಿಲ್ಲ. ಸಾಹಿತ್ಯ ಸಮ್ಮೇಳನಗಳು ನಡೆಯುವುದು ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಕುರಿತಾದ ಗಂಭೀರ ಚರ್ಚೆಗಳಿಗಾಗಿಯೇ ಹೊರತು, ನಾವು ಇಷ್ಟಪಡುವ ಆಹಾರವನ್ನು ಉಣ್ಣುವುದಕ್ಕಾಗಿ ಅಲ್ಲ. ಈವರೆಗೆ ನಡೆದಿರುವ ಅಥವಾ ನಡೆಯುತ್ತಿರುವ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಊಟ, ಉಪಹಾರ ಇವೆಲ್ಲವೂ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಹಸಿವು ತಣಿಸುವ ಔಪಚಾರಿಕ ಕ್ರಮವೇ ಹೊರತು, ಯಾರೊಬ್ಬರೂ ಉಣ್ಣುವುದಕ್ಕಾಗಿ ಅಲ್ಲಿ ಭಾಗವಹಿಸುವುದಿಲ್ಲ. ಮನುಷ್ಯನ ಆಹಾರ ಪದ್ಧತಿಗೆ ಜಾತಿ, ಧರ್ಮದ ಹೆಸರಿನ ಲೇಪನ ಅಂಟಿಸಿ ಬೋರ್ಗೆರೆಯುವುದು ಕ್ಷÄಲ್ಲಕ ಸಂಗತಿ. ಏಕೆಂದರೆ, ಎಲ್ಲಾ ಮಾಂಸಹಾರಿಗಳ ಆಹಾರ ಕ್ರಮದಲ್ಲಿ ಸಸ್ಯಹಾರವು ಸಹ ಒಂದು ಭಾಗವಾಗಿದೆ ಎಂಬುದನ್ನು ನಾವು ಮರೆಯಬಾರದು.
( ಮಾರ್ಚ್ ತಿಂಗಳ ಸಮಾಜ ಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಎನ್.ಜಗದೀಶ್ ಕೊಪ್ಪ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ