ಮಂಗಳವಾರ, ಮಾರ್ಚ್ 18, 2025

ಬ್ಬರು ಶ್ರೇಷ್ಠ ಕಲಾವಿದರ ಆತ್ಮಚರಿತ್ರೆಯ ನೆಪದಲ್ಲಿ ದಾಖಲಾದ ನಾಟಕ ಮತ್ತು ಸಂಗೀತ ಕುರಿತ ಕರ್ನಾಟಕದ ಮಹತ್ವದ ಇತಿಹಾಸದ ಕೃತಿಗಳು.


ಕಳೆದವಾರ ಮನೆಗೆ ಬಂದಿದ್ದ ಪತ್ರಕರ್ತ ಮಿತ್ರ ಗಣೇಶ ಅಮೀನಗಡ ಅವರು ತಾವು ನಿರೂಪಿಸಿರುವ ಹಾಗೂ ತಮ್ಮ ಕವಿತಾ ಪ್ರಕಾಶನದಿಂದ ಪ್ರಕಟಿಸಿರುವ ಧಾರವಾಡದ ಹಿಂದೂಸ್ತಾನಿ ಸಂಗೀತಗಾರ ಫಯಾಜ್ ಖಾನ್ ಅವರ ಸಾರಂಗಿ ನಾದದ ಬೆನ್ನೇರಿ ಹಾಗೂ ಉತ್ತರ ಕರ್ನಾಟಕದ ರಂಗಭೂಮಿಯ ಹಿರಿಯ ಕಲಾವಿದೆ ಮತ್ತು ಈಗ ಹುಬ್ಬಳ್ಳಿಯಲ್ಲಿ ನೆಲೆಸಿರುವ ಜಯಲಕ್ಷ್ಮಿ ಪಾಟೀಲ್ ಅವರ ರಂಗ ಬಾನಾಡಿ ಕೃತಿಗಳನ್ನು ನೀಡಿ ಹೋದರು.
ವಯಸ್ಸು ಮತ್ತು ಕಣ್ಣಿನ ದೃಷ್ಟಿಯ ತೊಂದರೆಯಿಂದಾಗಿ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದೂವರೆ ವರೆಗೆ ಸೂರ್ಯನ ಬೆಳಕಲ್ಲಿ ಕನ್ನಡಕ ಹಾಕಿಕೊಂಡು ಅತ್ಯಂತ ನಿಧಾನವಾಗಿ ಓದಲು ಮಾತ್ರ ಸಾಧ್ಯವಾಗಿದೆ. ಹಾಗಾಗಿ ಕಥೆ, ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ ಈ ಎಲ್ಲಾ ಪ್ರಕಾರಗಳಿಂದ ದೂರ ಉಳಿದು, ವೈಚಾರಿಕ ಬರಹಗಳು ಮತ್ತು ಹಿರಿಯ ಕಲಾವಿದರ ಮತ್ತು ಸಾಹಿತಿಗಳ ಇಂಗ್ಲೀಷ್ ಮತ್ತಿ ಕನ್ನಡದ ಆತ್ಮ ಚರಿತ್ರೆಗಳನ್ನು ಓದುವ ಮಿತಿ ಹಾಕಿಕೊಂಡಿದ್ದೀನಿ.ರಾತ್ರಿ ಲೈಟ್ ಬೆಳಕಿನಲ್ಲಿ ಓದಲು ಸಾಧ್ಯವಾಗುತ್ತಿಲ್ಲ.

ಸಾರಂಗಿ ಮತ್ತು ತಬಲಾ ವಾದಕ ಹಾಗೂ ಗಾಯಕರಾಗಿರುವ ಫಯಾಜ್ ಖಾನ್ ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಧಾರವಾಡದ ಹಲವಾರು ಸಂಗೀತ ಕಚೇರಿಗಳಲ್ಲಿ ಅವರು ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ ಸಾರಂಗಿ ಮತ್ತು ತಬಲಾ ನುಡಿಸುವುದನ್ನು ನೋಡಿದ್ದೆ. ಅವರ ಆತ್ಮ ಚರಿತ್ರೆಯಲ್ಲಿ ಧಾರವಾಡದ ಆರು ದಶಕಗಳ ಹಿಂದೂಸ್ತಾನಿ ಸಂಗೀತ ವಿವರಗಳು ದಾಖಲಾಗಿರುವುದು ಮಹತ್ವದ ವಿಷಯ. ಇದಕ್ಕಿಂತ ಮಿಗಿಲಾಗಿ ಅಪ್ಪಟ ಧಾರವಾಡ ಭಾಷೆಯಲ್ಲಿ ಮತ್ತು ಮರಾಠಿ ಮಿಶ್ರಿತ ಕನ್ನಡದಲ್ಲಿ ಅವರ ಮಾತುಗಳನ್ನು ನಿರೂಪಕರಾಗಿ ಗಣೇಶ್ ಅಮೀನಗಡ ಮತ್ತು ಡಾ. ಸಿ.ಬಿ.ಚಿಲ್ಕರಾಗಿ ಇವರು ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.
ಫಯಾಜ್ ಖಾನ್ ಅವರು ಆತ್ಮಕಥೆಯ ನೆಪದಲ್ಲಿ ಇಡೀ ಧಾರವಾಡದ ಸಾಂಸ್ಕೃತಿಕ ವಾತಾವರಣ ಮತ್ತು ಅಂದಿನ ಧಾರವಾಡದ ಕೆರೆಗಳು, ಓಣಿಗಳು, ರಸ್ತೆಗಳು, ಸರ್ಕಾರಿ ಶಾಲೆಗಳುಎಲ್ಲವನ್ನೂ ಬಣ್ಣಿಸಿರುವುದು ಧಾರವಾಡದ ಮಣ್ಣು, ನೀರು ಮತ್ತು ಗಾಳಿಯ ಜೊತೆಗೆ ಎರಡು ದಶಕಗಳ ಕಾಲ ಬದುಕಿದ ನನಗೆ ತಕ್ಷಣವೇ ಎದೆಗೆ ನಾಟಿದವು.
ಅವರು ಬಣ್ಣಿಸಿರುವ ಹೋಟೇಲ್ಗಳು, ದೇಗುಲ, ಸ್ಮಶಾನ, ಕಾಲೇಜು, ಆಕಾಶವಾಣಿ, ಕಲಾವಿದರ ನಿವಾಸಗಳು, ಎಲ್ಲಾ ಪ್ರದೇಶಗಳಲ್ಲಿ ಹುಟ್ಟಿದ ಊರಿನ ಕೂಸಿನಂತೆ ಅಲ್ಲೆಲ್ಲಾ ಅಡ್ಡಾಡಿದವನು ನಾನು. ತಮ್ಮ ಕುಂಟುಂದಿಂದ ಪಾರಂಪರಿಕವಾಗಿ ಬಂದ ಸಾರಂಗಿವಾದನವನ್ನು ಆಕಾಶವಾಣಿ ಕಲಾವಿದರಾಗಿದ್ದ ತನ್ನ ತಂದೆಯವರಿಂದ ಕಲಿತ ಫಯಾಜ್ ಖಾನರು, ಸಾರಂಗಿ ವಾದನವನ್ನು ಆಧುನಿಕ ಕಲಾವಿದರು ಪಕ್ಕ ವಾದ್ಯವಾಗಿ ಇಷ್ಟ ಪಡದ ಕಾರಣ, ಜೀವನ ನಿರ್ವಹಣೆಗಾಗಿ ತಬಲಾ ವಾದನವನ್ನು ಕಲಿತರು. ಸಂಗೀತವೇ ವೃತ್ತಿಯಾಗಿದ್ದ ಕಾರಣ, ಸಾರಂಗಿ, ತಬಲಾಗಳ ವಾದನದ ಜೊತೆ ಹಾಡುವುದನ್ನೂ ಸಹ ಕಲಿತರು. ಇದಕ್ಕಾಗಿ ಅವರು ಪಟ್ಟಿರುವ ಶ್ರಮ ಹಾಗೂ ಮುಂಬೈ ನಗರದಲ್ಲಿ ವರ್ಷಗಟ್ಟಲೆ ರೈಲ್ವೆ ನಿಲ್ದಾಣದಲ್ಲಿ ಮಲಗಿ, ಸುಲಭ್ ಶಾಚಾಲಯದಲ್ಲಿ ನಿತ್ಯಕರ್ಮ ಮುಗಿಸಿ, ವಡ ಪಾವ್ ತಿಂದು ಗುರುಗಳ ಮನೆಗೆ ಹಾಜರಾಗುತ್ತಿದ್ದ ಪರಿಯನ್ನು ಅವರು ಹೇಳಿಕೊಂಡಿರುವ ಪರಿ ಓದುಗರ ಮನಸ್ಸನ್ನು ಕದಡುತ್ತದೆ.
ಫಯಾಜ್ ಖಾನರು ಬೆಂಗಳೂರಿಗೆ ಬಂದು, ಹಲವಾರು ಸಿನಿಮಾ ಸಂಗೀತ ನಿರ್ದೇಶಕರ ಜೊತೆಯಲ್ಲಿ ದುಡಿಯುತ್ತಾ, ಧಾರವಾಹಿಗಳ ಶೀರ್ಷಿಕೆಯ ಗೀತೆಯನ್ನು ಹಾಡುತ್ತಾ, ಸಂಗೀತ ನಿರ್ದೇಶನ ಮಾಡಿ ಬದುಕು ಕಟ್ಟಿಕೊಂಡವರು.
ತಮ್ಮ ಎದೆಯೊಳಗೆ ಸದಾ ತುಡಿಯುತ್ತಿದ್ದ ಶುದ್ಧ ಶಾಸ್ತ್ರೀಯ ಸಂಗೀತವನ್ನು ಎಂದಿಗೂ ಅವರು ಮರೆಯಲಿಲ್ಲ. ಈ ಕಾರಣದಿಂದಾಗಿ ತಮ್ಮ ಇಬ್ಬರು ಪುತ್ರರಿಗೂ ತಮ್ಮ ಕೌಟುಂಬಿಕ ಪರಂಪರೆಯನ್ನು ಧಾರೆಯೆರೆದಿದ್ದಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಫಯಾಜ್ ಖಾನ್, ತಮ್ಮ ಮಲತಾಯಿಯಿಂದ ಅನುಭವಿಸಿದ ಹಿಂಸೆ, ಹಸಿವು, ಅಪಮಾನ ಇವುಗಳನ್ನು ಅತ್ಯಂತ ನಿರ್ಭಾವುಕರಾಗಿ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
ಸಂಗೀತಗಾರನಾಗುವುದೆಂದರೆ, ಮೂರು ತಿಂಗಳಲ್ಲಿ ಹಾಡುವುದನ್ನು ಕಲಿತು, ಟಿ.ವಿ. ಚಾನಲ್ ಗಳ ಸ್ಪರ್ಧೆಯಲ್ಲಿ ಹಾಡಿ ಸಂಭ್ರಮಿಸುವ ವೃತ್ತಿ ಅಥವಾ ಹವ್ಯಾಸವಲ್ಲ. ಅದು ಧ್ಯಾನ. ಜಾತಿ, ಧರ್ಮ ಮತ್ತು ಲಿಂಗ ಅಸಮಾನತೆಯನ್ನು ದೂರವಿಟ್ಟು ಮನುಷ್ಯನನ್ನು ಅನುಭಾವಿಯನ್ನಾಗಿ ರೂಪಿಸುವ ಮಹತ್ವದ ಕಲೆ ಎಂಬುದಕ್ಕೆ ಉಸ್ತಾದ್ ಫಯಾಜ್ ಖಾನರ ಸಾರಂಗಿ ನಾದದ ಬೆನ್ನೇರಿ ಕೃತಿಯು ಸಾಕ್ಷಿಯಾಗಿದೆ.
ನಾಡಿನ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲರು ಅರವತ್ತು ವರ್ಷಗಳ ಕಾಲ ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿ, ಓರ್ವ ಶ್ರೇಷ್ಠ ಕಲಾವಿದೆಯಾಗಿ, ರಂಗಭೂಮಿ, ಕನ್ನಡ ಚಿತ್ರರಂಗ ಮತ್ತು ಧಾರವಾಹಿಗಳಲ್ಲಿ ಗುರುತಿಸಿಕೊಂಡವರು. ಜಯಲಕ್ಷ್ಮಿ ಪಾಟೀಲರ ಆತ್ಮಕಥೆ ಅವರ ಜೀವನದ ಕಥೆ ಮಾತ್ರವಲ್ಲ. ಇಡೀ ನಾಡಿನ ರಂಗಭೂಮಿ ಕಲಾವಿದೆಯರ ಕಥನದಂತಿದೆ. ಹನ್ನೆರೆಡು ವರ್ಷಗಳ ಹಿಂದೆ ನಾನು ಓದಿದ್ದ ಉಮಾಶ್ರಿ ಅವರ ಆತ್ಮಕಥೆಯ ಮುಂದುವರಿದ ಭಾಗದಂತೆ ನನಗೆ ಇದು ಭಾಸವಾಯಿತು.
ಎಂಟತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಸಾಹಿತ್ಯದ ಕಾರ್ಯಕ್ರಮದಲ್ಲಿ ನನ್ನನ್ನು ಭೇಟಿಯಾಗಿ, ನಾನು ಅನುವಾದಿಸಿದ್ದ ಮರುಭೂಮಿಯ ಹೂ ಕೃತಿಯ ಬಗ್ಗೆ ತುಂಬಾ ಭಾವನಾತ್ಮಕವಾಗಿ ನನ್ನೊಂದಿಗೆ ಅವರು ಮಾತನಾಡಿದ್ದರು. ನಾನು ಅವರ ಬಗ್ಗೆ ಕೇಳಿದಾಗ, ತಮ್ಮ ಹೆಸರನ್ನು ಹೇಳಿ, ಬೆಂಗಳೂರಿನಲ್ಲಿದ್ದುಕೊಂಡು ಧಾರವಾಹಿಗಳಲ್ಲಿ ನಟಿಸುತ್ತಿದ್ದೀನಿ ಎಂದು ಹೇಳಿದ್ದರು. ಅವರ ನಾಡಿನ ಅಪ್ರತಿಮ ಹಿರಿಯ ಕಲಾವಿದೆ ಎಂಬುದು ಈ ಕೃತಿ ಓದುವವರೆಗೂ ನನಗೆ ಗೊತ್ತಿರಲಿಲ್ಲ.
ಕೇವಲ 128 ಪುಟಗಳಿಷ್ಟು ಇರುವ ತಮ್ಮ ಆತ್ಮಕಥೆಯಲ್ಲಿ 1960 ರಿಂದ 2020 ರ ವರೆಗಿನ ಉತ್ತರ ಕರ್ನಾಟಕದ ನಾಟಕ ಕಂಪನಿಗಳು, ಮಾಲೀಕರು, ಕಲಾವಿದ/ ಕಲಾವಿದೆಯರ ಬದುಕು, ಪ್ರತಿಭೆಯನ್ನು ದಾಖಲಿಸುತ್ತಾ, ಇಡೀ ರಂಗಭೂಮಿಯ ಚರಿತ್ರೆಯನ್ನು ಓದುಗರ ಮುಂದೆ ಇಟ್ಟಿದ್ದಾರೆ. ಅಜ್ಜಿ, ತಾಯಿ ಎಲ್ಲರೂ ಕಲಾವಿದೆಯರಾಗಿದ್ದ ಕಾರಣ, ತಾವು ಬಾಲ್ಯದಲ್ಲಿ ಬಣ್ಣ ಹಚ್ಚಿದ ಕಥನ ಹಾಗೂ ಕುಡುಕ ಗಂಡನೆಂಬ ಕಲಾವಿದನನ್ನು ಕಟ್ಟಿಕೊಂಡು, ಊರೂರು ಅಲೆಯುತ್ತಾ, ನಾಟಕಗಳಿಗೆ ಪ್ರೇಕ್ಷಕರು ಇಲ್ಲದ ದಿನಗಳಲ್ಲಿ ಅರೆ ಹೊಟ್ಟೆಯಲ್ಲಿ ಬದುಕಿದ ದಿನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜಯಲಕ್ಷ್ಮಿಯವರು ದಾಖಲಿಸಿದ್ದಾರೆ.
ಇದು ಜಯಲಕ್ಷ್ಮಿ ಪಾಟೀಲರು ಅನುಭವಿಸಿದ ಕಲಾವಿದೆಯ ಬವಣೆಯ ಬದುಕು ಮಾತ್ರವಾಗಿರದೆ, ರಂಗಭೂಮಿಯ ಬಹುತೇಕ ಕಲಾವಿದೆಯರ ಬದುಕು ಕೂಡಾ ಆಗಿದೆ. ತಮ್ಮ ಆತ್ಮಕಥೆಯಲ್ಲಿ ನಾವು ಈವರೆಗೆ ಕೇಳದೆ ಉಳಿದಿದ್ದ ಅನೇಕ ಕಲಾವಿದರು, ಕಲಾವಿದೆಯರ ಬಗ್ಗೆ ಇವರು ಎದೆ ತುಂಬಿ ಸ್ಮರಿಸಿದ್ದಾರೆ. ಇದು ಈ ಕೃತಿಯ ವಿಶೇಷಗಳಲ್ಲಿ ಒಂದು. ಪ್ರಸಿದ್ಧ ಸಿನಿಮಾ ನಟ ವಿಷ್ಣುವರ್ಧನ್ ಅವರ ತಂದೆ ಹೆಚ್.ಎಲ್. ಸೂರ್ಯನಾರಾಯಣರಾವ್ ಅವರು ಪ್ರಸಿದ್ಧ ನಾಟಕಗಾರರು, ಸಂಭಾಷಣೆಗಾರರು ಮತ್ತು ಸಂಗೀತಗಾರರು ಎಂಬುದು ನನಗೆ ಈ ಕೃತಿಯಿಂದ ತಿಳಿಯಿತು. ವಿಷ್ಣುವರ್ಧನ ಅವರ ಸಹೋದರಿ ರಮಾಮಣಿ ಎಂಬುವರು ನೃತ್ಯ ನಿರ್ದೇಶಕಿಯಾಗಿದ್ದ ವಿಷಯವೂ ಇಲ್ಲಿ ದಾಖಲಾಗಿದೆ.
ನನ್ನೂರು ಸಮೀಪದ ಎಂಟು ಕಿಲೋಮೀಟರ್ ದೂರದಲ್ಲಿರುವ ಮಂಡ್ಯ ತಾಲ್ಲೂಕಿನ ಹಲ್ಲೆಗೆರೆ ಗ್ರಾಮದ ಮೂಲದ ವ್ಯಕ್ತಿ ಸೂರ್ಯನಾರಾಯಣರಾವ್ ಎಂಬುದು ಕಳೆದ ವರ್ಷದ ವರೆಗೆ ನನಗೆ ಗೊತ್ತಿರಲಿಲ್ಲ. ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ವಿಷ್ಣುವರ್ಧನ್ ಮಂಡ್ಯ ಜಿಲ್ಲೆಯವರು ಎಂಬ ವಿಷಯ ಮುನ್ನೆಲೆಗೆ ಬಂದಾಗ ಖಾತರಿಯಾಯಿತು. ಇವರ ಕುಟುಂಬ ಮೈಸೂರು ನಗರದಲ್ಲಿ ಇದ್ದ ಕಾರಣ ವಿಷ್ಣು ವರ್ಧನ್ ಮೈಸೂರು ನಗರದಲ್ಲಿ 1950 ರಲ್ಲಿ ಜನಿಸಿದರು. ಸಂಪತ್ ಕುಮಾರ್ ಎಂಬ ಮೂಲ ಹೆಸರಿನ ವಿಷ್ಣುವರ್ಧನ್ ತಮ್ಮ ತಂದೆಯವರ ಪ್ರಭಾವದಿಂದ 1955 ಮತ್ತು 1956 ರಲ್ಲಿ ಬಾಲನಟನಾಗಿ ಶಿವಶರಣೆ ನಂಬೆಯಕ್ಕ ಮತ್ತು ಕೋಕಿಲವಾಣಿ ಚಿತ್ರಗಳಲ್ಲಿ ನಟಿಸಿದ್ದರು.
ಜಯಲಕ್ಷ್ಮಿ ಪಾಟೀಲರು ನಟಿ ಕಲ್ಪನಾ ಅವರ ಆತ್ಮಹತ್ಯೆ ಘಟನೆಯನ್ನು ಸಹ ಸವಿವರವಾಗಿ ದಾಖಲಿಸಿದ್ದಾರೆ. ಗುಡಗೇರಿ ಬಸವರಾಜರ ಕಂಪನಿ ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ ಕ್ಯಾಂಪ್ ಮಾಡಿತ್ತು. ಕಲ್ಪನಾ ನಿಧನರಾದದ್ದು 1979 ರ ಮೇ ತಿಂಗಳಲ್ಲಿ. ಗೋಟೂರು ಪ್ರವಾಸಿ ಮಂದಿರದಲ್ಲಿ ಕಲ್ಪನಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ನಾಟಕದ ಸನ್ನಿವೇಶದಲ್ಲಿ ಒಂದು ಸಂಭಾಷಣೆಯನ್ನು ತಪ್ಪಾಗಿ ಉಚ್ಛರಿಸಿದ ಕಾರಣಕ್ಕಾಗಿ ಗುಡಗೇರಿ ಬಸವರಾಜ್ ಕಪಾಳಕ್ಕೆ ಹೊಡೆದ ಕಾರಣಕ್ಕಾಗಿ ಆ ದಿನ‌ ಅಪಮಾನ ತಾಳಲಾರದೆ ಕಲ್ಪನಾ ಅವರು ಆತ್ಮಹತ್ಯೆ ಮಾಡಿಕೊಂಡರು. ನಾನು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಮತ್ತು ನಿಪ್ಪಾಣಿ ಕಡೆ ಪ್ರವಾಸ ಹೋದಾಗಲೆಲ್ಲಾ ಪಾಳು ಬಿದ್ದಿರುವ ಗೂಟೂರು ಪ್ರವಾಸಿ ಮಂದಿರವನ್ನು ನೋಡಿದಾಕ್ಷಣ ನನಗೆ ಕಲ್ಪನಾ ನೆನಪಾಗುತ್ತಿದ್ದರು.
ಲೇಖಕ ಮಿತ್ರ ಗಣೇಶ್ ಅಮೀನಗಡ ಅವರು ಜಯಲಕ್ಷ್ಮಿ ಪಾಟೀಲರ ಭಾವನೆಗಳಿಗೆ ಸಮರ್ಥವಾಗಿ ಅಕ್ಷರದ ರೂಪ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮೂಲದವರಾದ ಗಣೇಶ ಅಮೀನಗಡ ಅವರು ಒಂದು ರೀತಿಯಲ್ಲಿ ಕಂಪನಿ ನಾಟಕಗಳ ತವರೂರಿನಲ್ಲಿ ಜನಿಸಿದವರು. ಹಾಗಾಗಿ ಪತ್ರಿಕೋದ್ಯಮದ ನಡುವೆಯೂ ರಂಗಭೂಮಿ ಅವರಿಗೆ ಪ್ರೀತಿಯ ಹಾಗೂ ಆಸಕ್ತಿಯ ಮಾಧ್ಯಮವಾಗಿತ್ತು. ಗಣೇಶ್ ಮಾತ್ರ ಇಂತಹ ಕೃತಿಗಳನ್ನು ರಚಿಸಬಲ್ಲರು ಎಂಬುದಕ್ಕೆ ಅವರ ಏಣಗಿ ಬಾಳಪ್ಪ ಮತ್ತು ಜಯಲಕ್ಷ್ಮಿ ಪಾಟೀಲರ ಈ ಕೃತಿ ನಿರ್ದೇಶನಗಳಾಗಿವೆ.
ಗಣೇಶ್ ಅಮೀನಗಡ ಅವರು ಜಯಲಕ್ಷ್ಮಿ ಪಾಟೀಲರ ಕುರಿತು ಕೃತಿಯ ಬೆನ್ನುಡಿಯಲ್ಲಿ ಹೀಗೆ ದಾಖಲಿಸಿದ್ದಾರೆ.
,, ಅನ್ನ ಬಿಟ್ಟೇನು ಬಣ್ಣ ಬಿಡಲಾರೆ,, ಎನ್ನುವುದು ಇವರ ನಿರಂತರ ಮಾತಾಗಿತ್ತು. ಇದು ಕೇವಲ ಜಯಲಕ್ಷ್ಮಿ ಪಾಟೀಲರ ಆತ್ಮಕಥೆಯಲ್ಲ. ಅವರ ರೀತಿಯಲ್ಲಿ ಬದುಕಿದ ಸಾವಿರಾರು ಬಡ ಕಲಾವಿದೆಯರ ಆತ್ಮಕಥೆ. ಅಸಹಾಯಕತೆಯಿಂದ ರಂಗಭೂಮಿಗೆ ಕಾಲಿಡುವ ಕಲಾವಿದೆಯರು ಬಡತನ, ಅನಕ್ಷರತೆ,ಯ ಕಾರಣದಿಂದ ನಲುಗಿಹೋಗಿ ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದೆ ಒಳಗೊಳಗೆ ಅತ್ತು ತಮ್ಮನ್ನು ತಾವೇ ಸಂತೈಸಿಕೊಂಡವರ ಕಥೆ..
ಇದು ಸತ್ಯವಾದ ಮಾತು.ಇಂತಹ ಕಥನಗಳನ್ನು ಗಣೇಶ್ ಮಾತ್ರ ಬರೆಯಬಲ್ಲರು.
ಈಗ ಅನಾರೋಗ್ಯದ ನಿಮಿತ್ತ ಬಟನೆಗೆ ವಿದಾಯ ಹೇಳಿ ಹುಬ್ಬಳ್ಳಿ ನಗರದಲ್ಲಿ ನೆಲೆ ನಿಂತಿರುವ ಈ ಹಿರಿಯ ಕಲಾವಿದೆಯನ್ನು ಮತ್ತೊಮ್ಮೆ ಭೇಟಿ ಮಾಡಿ ಅವರ ಸಾಧನೆಗೆ ಗೌರವ ಸೂಚಿಸಿ ಬರಬೇಕೆಂದು ನಿರ್ಧರಿದ್ದೀನಿ.
ಫಯಾಜ್ ಖಾನ್ ಮತ್ತು ಜಯಲಕ್ಷ್ಮಿ ಪಾಟೀಲರ ಈ ಎರಡು ಪುಟ್ಟ ಆತ್ಮಕಥೆಗಳು ಕಲಲಾವಿದರ ಹಿಂದಿನ ಶ್ರಮ ಮತ್ತು ಹೋರಾಟದ ಬದುಕನ್ನು ನಮ್ಮ ಮುಂದೆ ತೆರೆದಿಡುವಲ್ಲಿ ಯಶಸ್ವಿಯಾಗಿವೆ.
ಎನ್.ಜಗದೀಶ್ ಕೊಪ್ಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ