ಭಾರತದ ಇತಿಹಾಸದಲ್ಲಿ ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ 2004 ರ ಡಿಸಂಬರ್ ತಿಂಗಳಲ್ಲಿ ದಕ್ಷಿಣ ಭಾರತದ ಜನತೆ ಸಾಕ್ಷಿಯಾದರು. ಡಿಸಂಬರ್ 25 ರ ನಡುರಾತ್ರಿ ಹಿಂದೂ ಮಹಾಸಾಗರದ ಸುಮಾತ್ರ ಮತ್ತು ಅಂಡಮಾನ್ ದ್ವೀಪಗಳ ನಡುವೆ ಸಮುದ್ರದ ಆಳದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 9 ರಷ್ಟು ದಾಖಲಾಗಿತ್ತು. ಭೂಮಿಯ ಮೇಲೆ ಭೂಕಂಪದ ತೀವ್ರತೆ 5 ಅಥವಾ 6 ರಷ್ಟು ಇದ್ದರೆ, ಕಟ್ಟಡಗಳು ನೆಲಕ್ಕೆ ಉರುಳುವುದು, ಭೂಮಿ ಕಂಪಿಸುವುದು ಸಾಮಾನ್ಯ. 1935 ರಲ್ಲಿ ಭೂಮಿಯ ಕಂಪನವನ್ನು ಅಳೆಯಲು ಅಮೇರಿಕಾದ ಕ್ಯಾಲಿಪೋರ್ನಿಯಾದ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಚಾರ್ಲ್ಸ್ ರಿಕ್ಟರ್ ಮತ್ತು ಗುಟೆನ್ ಬರ್ಗ್ ಎಂಬ ವಿಜ್ಞಾನಿಗಳು ಭೂಕಂಪದ ತೀವ್ರತೆಯನ್ನು ಅಳೆಯುವ ಮಾಪಕವನ್ನು ಕಂಡು ಹಿಡಿದರು. ಮಾಪಕ ಅಳತೆ ಕನಿಷ್ಠ ಶೂನ್ಯದಿಂದ ಒಂಬತ್ತರವರೆಗೆ ಇದ್ದು, 2004 ರಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ಜಗತ್ತಿನ ಇತಿಹಾಸದಲ್ಲಿ ಗರಿಷ್ಠ ಮಟ್ಟವನ್ನು ಅಂದರೆ ಒಂಬತ್ತನ್ನು ತಲುಪಿತ್ತು.
ಸುನಾಮಿ ದುರಂತದಲ್ಲಿ ಅತಿ ಹೆಚ್ಚು ಮಂದಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಸಮುದ್ರದ ಆಳದಿಂದ ಎದ್ದ ಅಲೆಗಳು ನೇರವಾಗಿ ನಾಗಪಟ್ಟಣಂ ಹಾಗೂ ಸುತ್ತ ಮುತ್ತ ಐವತ್ತು ಕಿಲೊಮೀಟರ್ ವ್ಯಾಪ್ತಿಯಲ್ಲಿ ಕಡಲ ತೀರಕ್ಕೆ ಅಪ್ಪಳಿಸಿದ ಪರಿಣಾಮ ಸಮುದ್ರ ತೀರದಲ್ಲಿದ್ದ ಗ್ರಾಮಗಳು ಹಾಗೂ ಮೀನುಗಾರಿಕೆಯನ್ನು ವೃತ್ತಿಯನ್ನಾಗಿಸಿ ಬದುಕಿದ್ದ ಮೀನುಗಾರರ ಕುಟುಂಬಗಳು ಮತ್ತು ಅವರ ದೋಣಿಗಳನ್ನು ಕರಾಳ ಸುನಾಮಿಯು ಬಲಿ ತೆಗೆದುಕೊಂಡಿತು ಸಮುದ್ರ ತೀರದ ಪಟ್ಟಣ ಮತ್ತು ಹಳ್ಳಿಗಳಲ್ಲಿ ಮನೆಯೊಳಗೆ ಇದ್ದವರು ದೈತ್ಯ ಅಲೆಗಳಿಗೆ ಸಿಲುಕಿದರೂ ಸಹ ಅಲೆಯೊಂದಿಗೆ ಕೊಚ್ಚಿ ಹೋಗಲು ಸಾಧ್ಯವಾಗದೆ ಬದುಕುಳಿದ್ದರು. ಬಯಲಿನಲ್ಲಿ ಇದ್ದವರು ಸಮುದ್ರದ ಪಾಲಾಗಿದ್ದರು. ವೆಲಾಂಕಣಿಯ ಪ್ರಸಿದ್ಧ ಏಸು ಮಾತೆಯ ಮಂದಿರ ಎದುರುಗಿನ ಮುಖ್ಯ ರಸ್ತೆಯೊಂದು ಅಲ್ಲಿನ ಸುಂದರ ಕಡಲ ತೀರಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯ ಎಡಬಲದುದ್ದಕ್ಕೂ ಭಿಕ್ಷೆ ಬೇಡುವ ಸಾವಿರಾರು ಅಂಗವಿಕಲರು, ವೃದ್ಧ, ವೃದ್ಧೆಯರು ಅಲ್ಲಿ ಕೂರುವುದು ಸಾಮಾನ್ಯವಾಗಿತ್ತು. ಜೊತೆಗೆ ಯಾತ್ರಿಕರನ್ನು ಸೆಳೆಯುವ ವಿವಿಧ ಆಟಿಕೆ ಸಾಮಾನುಗಳು, ಮಣಿ ಸರ, ಮನೆಯ ಪಾತ್ರೆ ಸಾಮಾನುಗಳ ಅಂಗಡಿಗಳಲ್ಲದೆ ಸಮುದ್ರದ ತರಾವರಿ ಮೀನುಗಳ ನೂರಾರು ಹೋಟೆಲ್‌ಗಳಿದ್ದವು. ಕ್ಷಣಾರ್ಧದಲ್ಲಿ ಅಪ್ಪಳಿಸಿದ ಸುನಾಮಿಯು ವೆಲಾಂಕಣಿ ಕ್ಷೇತ್ರವೊಂದರಲ್ಲಿ ಎಂಟು ಸಾವಿರ ಮಂದಿಯನ್ನು ಅಪೋಶನ ತೆಗೆದುಕೊಂಡಿತ್ತು.
ವೆಲಾಂಕಣಿ ಊರಿನಲ್ಲಿದ್ದ ಜನರು ಹಾಗೂ ಅಲ್ಲಿನ ಚರ್ಚ್ಗಳು ಹಾಗೂ ಕ್ರೈಸ್ತ ಸನ್ಯಾಸಿನಿಯರ ತರಬೇತಿ ಕೇಂದ್ರದ ಕಟ್ಟಡದ ಒಳಗಿದ್ದವರು ಮಾತ್ರ ಸಾವಿನಿಂದ ಪಾರಾಗಿದ್ದರು. ದುರಂತದಲ್ಲಿ ಜೀವ ತೆತ್ತವರ ಬಹುತೇಕ ಮಂದಿಯನ್ನು ನೂರಾರು ಅಡಿಗಳ ಉದ್ದನೆಯ ಕಾಲುವೆ ತೆಗೆದು ಸಾಲಾಗಿ ಮಲಗಿಸಿ ಯಾವುದೇ ಅಂತ್ಯಸಂಸ್ಕಾರದ ವಿಧಿ ವಿದಾನಗಳಿಲ್ಲದೆ ಸಾಮೂಹಿಕವಾಗಿ ಹೂಳಲಾಯಿತು. ನಾಗಪಟ್ಟಣಂ ಮತ್ತು ವೆಲಾಂಕಣಿಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನೂರಾರು ಮಕ್ಕಳು ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡು ಅನಾಥರಾದವು. ಜಿಲ್ಲಾಧಿಕಾರಿ ಡಾ.ಜೆ. ರಾಧಾಕೃಷ್ಣನ್ ತಮ್ಮ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಹದಿಮೂರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹೆಣೆದ ತೆಂಗಿನ ಗರಿಗಳ ಚಪ್ಪರವನ್ನು ಹಾಕಿಸಿದರು. ಬದುಕುಳಿದ ನಿರಾಶ್ರಿತರಿಗೆ ಊಟ, ತಿಂಡಿ, ಸ್ನಾನ, ಶೌಚಾಲಯಕ್ಕೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಅವರಿಗೆ ಹಾಸಲು ಜಮಖಾನ, ಹೊದಿಯಲು ಹೊದಿಕೆಗಳನ್ನು ಹಾಗೂ ಧರಿಸಲು ಹೊಸ ವಸ್ತçಗಳನ್ನು ಪೂರೈಸಲಾಯಿತು. ಪಂಚೆ. ಟವಲ್, ಸೀರೆಗಳು ಹಾಗೂ ಇತರ ವಸ್ತುಗಳು ರಾಜ್ಯದ ಇತರೆ ಮೂಲೆ ಮೂಲೆಗಳಿಂದ ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿಗೆ ರಾಶಿಯ ರೂಪದಲ್ಲಿ ಬಂದು ತಲುಪಿದವು. ಸುಮಾರು ಆರು ಸಾವಿರ ಮಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಗೂ ಎಂಟು ಸಾವಿರ ಮಂದಿಗೆ ನಾಗೂರು ದರ್ಗಾದಲ್ಲಿ ಅಲ್ಲಿನ ಮುಸ್ಲಿಂ ಸಮುದಾಯದ ಜನತೆ ಆಶ್ರಯ ಕಲ್ಪಿಸಿದರು.
ಸರ್ಕಾರ ಅಥವಾ ಜಿಲ್ಲಾಡಳಿತದ ಮುಂದೆ ಸುನಾಮಿ ದುರಂತದ ಪರಿಹಾರ ಕಾರ್ಯಗಳ ಜೊತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸುವುದು ಮತ್ತು ಜೀವ ಉಳಿಸಿಕೊಂಡು ಸಮಗ್ರ ಆಸ್ತಿ ಕಳೆದುಕೊಂಡವರಿಗೆ ನೆಲೆ ಒದಗಿಸಿಕೊಡುವುದು ಆದ್ಯತೆಯ ಕೆಲಸವಾಯಿತು. ಕಾರೈಕಲ್ ಮತ್ತು ಕುಂಭಕೋಣಂ ಸುತ್ತ ಮುತ್ತ ನೆಲೆಸಿರುವ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು ಹಾಗೂ ಜಮೀನ್ದಾರರು ಟೆಂಪೋ ಹಾಗೂ ಆಟೋಗಳಲ್ಲಿ ನಾಗಪಟ್ಟಣಂ ಮತ್ತು ನಾಗೂರ್ ದರ್ಗಾಕ್ಕೆ ಅಕ್ಕಿ, ಬೇಳೆ, ತರಕಾರಿ, ಹಾಲು, ಹೀಗೆ ದಿನಸಿ ವಸ್ತುಗಳನ್ನು ಉಚಿತವಾಗಿ ಸರಬರಾಜು ಮಾಡತೊಡಗಿದರು. ಸುನಾಮಿಯ ದುರಂತದಲ್ಲಿ ನಲುಗಿ ಬದುಕುಳಿದವರ ಮನದಲ್ಲಿ ಯಾರು ಯಾವ ಜಾತಿ ಅಥವಾ ಯಾವ ಧರ್ಮ ಎಂಬ ಭಾವನೆಯಿರಲಿಲ್ಲ. ಉಣಬಡಿಸುತ್ತಿದ್ದವರನ್ನು ಕೃತಜ್ಞತೆಯ ಭಾವದಿಂದ ನೋಡುತ್ತಾ, ಒಡಲಾಳದ ಹಸಿವು ಮತ್ತು ಮನದಾಳದ ನೋವನ್ನು ಹಿಂಗಿಸಿಕೊಳ್ಳುತ್ತಿದ್ದರು.
ಜಿಲ್ಲಾಧಿಕಾರಿ ಡಾ.ರಾಧಾಕೃಷ್ಣನ್ ಅವರ ಕ್ರಿಯಾಶೀತೆಯನ್ನು ಕೇವಲ ಎರಡು ದಿನದ ಅವಧಿಯಲ್ಲಿ ಕಂಡು ನಾನು ಬೆರಗಾಗಿದ್ದೆ. ತಂದೆ, ತಾಯಿಯರನ್ನು ಕಳೆದುಕೊಂಡ ನೂರಕ್ಕೂ ಹೆಚ್ಚು ಮಂದಿ ಬಾಲಕ, ಬಾಲಕಿಯರನ್ನು ರಕ್ಷಿಸಿ, ಅವರಿಗೆ ನಾಗಪಟ್ಟಣಂ ಜಿಲ್ಲಾ ಕೇಂದ್ರದ ಅಕ್ಕರೈ ಪೇಟೈ ಎಂಬ ಪ್ರದೇಶದಲ್ಲಿ ಅಣ್ಣೈ ಸತ್ಯಾ ಎಂಬ ತಾತ್ಕಾಲಿಕ ಅನಾಥ ಮಕ್ಕಳ ಆಶ್ರಮವನ್ನು ಸ್ಥಾಪಿಸಿ, ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿದರು. ನಾಲ್ಕು ತಿಂಗಳ ಬಾಲಕಿಯಿಂದ ಹಿಡಿದು ಎಂಟು ವರ್ಷದ ವರ್ಷದ ವಯಸ್ಸಿನ ಮಕ್ಕಳು ಅಲ್ಲಿದ್ದರು. ಯಾವ ಕಾರಣಕ್ಕೂ ಮಕ್ಕಳನ್ನು ಗದರದೆ, ತಂದೆ ತಾಯಿಯ ಪ್ರೀತಿ ತೋರಿಸಬೇಕೆಂದು ಸಿಬ್ಬಂದಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದರು.
ಒಂದು ದಿನ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ನಿರಾಶ್ರಿತರನ್ನು ಉದಯ ಟಿ.ವಿ. ಪರವಾಗಿ ನಾನು ಹಾಗೂ ಚೆನ್ನೈ ನಗರದಿಂದ ಬಂದಿದ್ದ ಸನ್ ಟಿ.ವಿ. ಮುಖ್ಯ ಉಪಸಂಪಾದಕರಾದ ಮಣಿವಣ್ಣನ್ ಮಾತನಾಡಿಸುತ್ತಾ ಇರುವಾಗ, ಡಾ.ಜೆ. ರಾಧಾಕೃಷ್ಣನ್ ಅವರು ತಮ್ಮ ನಿವಾಸಕ್ಕೆ ಚಹಾ ಕುಡಿಯಲು ನಮ್ಮನ್ನು ಆಹ್ವಾನಿಸಿದರು. ಮಣಿವಣ್ಣನ್ ನನ್ನನ್ನು ಅವರಿಗೆ ಪರಿಚಯಿಸುತ್ತಾ, ಇವರು ಬೆಂಗಳೂರು ಉದಯ ಟಿ.ವಿ. ಯಿಂದ ಬಂದಿದ್ದಾರೆ ಎಂದು ಹೇಳಿದಾಕ್ಷಣ, ಡಾ.ರಾಧಾಕೃಷ್ಣನ್ ನನ್ನತ್ತ ತಿರುಗಿ ‘’ ಅರೆ, ನೀವು ಕನ್ನಡದವರು ಎಂದು ನನಗೆ ಹೇಳಲೇ ಇಲ್ಲ, ಕ್ಯಾಮರಾಮನ್‌ಗಳ ಜೊತೆ ತಮಿಳು ಭಾಷೆಯಲ್ಲಿ ನೀವು ಮಾತನಾಡುತ್ತಿದ್ದಿರಿ. ಹಾಗಾಗಿ ನಮ್ಮವರೇ ಇರಬೇಕು’’ ಎಂದು ಭಾವಿಸಿದ್ದೆ ಎನ್ನುತ್ತಾ ಸ್ವಚ್ಛವಾದ ಕನ್ನಡದಲ್ಲಿ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು. ‘’ ಏನ್ಸಾರ್ ನೀವು ಕನ್ನಡಿಗರಾ?’’ ಎಂದು ಪ್ರಶ್ನಿಸಿದೆ. ಇಲ್ಲ ನಾನು ಮೂಲತಃ ತಮಿಳುನಾಡಿನವನು. ನನ್ನ ತಂದೆ ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದ ಕಾರಣ ಬಹುತೇಕ ಬಾಲ್ಯವನ್ನು ಉತ್ತರ ಭಾರತದಲ್ಲಿ ಕಳೆದೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಬಿ.ಎಸ್ಸಿ ಹಾಗೂ ಎಂ.ಎಸ್ಸಿ. ಪದವಿಯನ್ನು ನಿಮ್ಮ ಬೆಂಗಳೂರಿನ ಹೆಬ್ಬಾಳ ಕಾಲೇಜಿನಲ್ಲಿ ಕಲಿತೆ. ಹಾಗಾಗಿ ಐದು ವರ್ಷ ಅಲ್ಲಿದ್ದ ಕಾರಣ ನಾನು ಕನ್ನಡಿಗನಾಗಿದ್ದೆ ಎಂದು ಹೇಳುವುದರ ಮೂಲಕ ಬೆಂಗಳೂರಿನ ಬದುಕನ್ನು ಖಷಿಯಿಂದ ನೆನಪಿಸಿಕೊಂಡರು. ನಂತರ 1992 ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಐ.ಎ.ಎಸ್.ಅಧಿಕಾರಿಯಾಗಿ ತಮಿಳುನಾಡಿಗೆ ಬಂದ ಕಥೆಯನ್ನು ವಿವರಿಸಿದರು.
ಅವರ ನಿವಾಸದಲ್ಲಿ ಚಹಾ ಕುಡಿಯುತ್ತಾ, ತಮಿಳುನಾಡು ಮುಖ್ಯಮಂತ್ರಿ ಕೆ.ಜಯಲಲಿತಾ ಅವರ ಬಗ್ಗೆ ಇಟ್ಟಿರುವ ಅಪಾರವಾದ ವಿಶ್ವಾಸದ ಬಗ್ಗೆ ಪ್ರಶ್ನಿಸಿದೆ. ಡಾ. ಜೆ. ರಾಧಾಕೃಷ್ಣನ್ 1992ರಲ್ಲಿ ಉಪವಿಭಾಗಾಧಿಕಾರಿಯಾಗಿ ತೂತ್ತುಕುಡಿಯಲ್ಲಿ ಸೇವೆ ಸಲ್ಲಿಸಿ, 1994 ರಲ್ಲಿ ಅವರು ಸೇಲಂ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಅಲ್ಲಿ ನಿರಂತರ ನಡೆಯುತ್ತಿದ್ದ ಹೆಣ್ಣು ಶಿಶು ಹತ್ಯೆಯ ವಿರುದ್ಧ ಸಮರ ಸಾರಿದ ಇತಿಹಾಸವನ್ನು ನನ್ನೆದುರು ಬಿಚ್ಚಿಟ್ಟಿರು. ತಮಿಳುನಾಡಿನಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಗತಾನೆ ಜನಿಸಿದ ಹೆಣ್ಣು ಮಕ್ಕಳನ್ನು ಮತ್ತು ವಾಸಿಯಾಗದ ಕಾಯಿಲೆಯಿಂದ ಬಳಲುವ ವೃದ್ಧ ತಂದೆ ತಾಯಿಯರನ್ನು ವಿಷ ನೀಡಿ ಕೊಲ್ಲುವ ಪದ್ಧತಿ ಇದೆ. ಸೇಲಂ ಜಿಲ್ಲೆಯ ಗೌಂಡರ್ ಸಮುದಾಯ (ಒಕ್ಕಲಿಗರು) ವೆಲ್ಲೂರು, ತಿರುವಣಾ ಮಲೈ ಪ್ರದೇಶದಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯ ಹಾಗೂ ಮಧುರೈ ಪ್ರಾಂತ್ಯದ ಉಸಿಲಂಪಟ್ಟಿ ತಾಲ್ಲೂಕಿನ ಕಳ್ಳಾರ್ ಎಂಬ ಭೂಹೀನ ಕೃಷಿ ಕಾರ್ಮಿಕರಲ್ಲಿ ಈ ಅನಿಷ್ಠ ಪದ್ಧತಿ ಆಚರಣೆಯಲ್ಲಿದೆ. ಪ್ರತಿ ಐದಾರು ಹಳ್ಳಿಗಳಲ್ಲಿ ಮಕ್ಕಳನ್ನು ಕೊಲ್ಲುವ ವೃತ್ತಿಯಲ್ಲಿ ಪಳಗಿದ ಮುದುಕಿಯರಿದ್ದು, ಅವರ ಕೈಗೆ ಶಿಶುವನ್ನು ಒಪ್ಪಿಸಿದರೆ, ಊರಾಚೆ ಕೊಂಡೊಯ್ದು ಮಗುವಿನ ಬಾಯಿಗೆ ಕಳ್ಳಿಗಿಡದ ಹಾಲು ಹಾಕಿ ಅಥವಾ ಭತ್ತವನ್ನು ತುಂಬಿ ಕೊಲ್ಲುತ್ತಾರೆ. ಅದೇ ರೀತಿ ವಯಸ್ಸಾದ ತಂದೆ ತಾಯಿಗಳನ್ನು ಕುಟುಂಬದ ಹಿರಿಯರು ಮತ್ತು ಮಕ್ಕಳು ಸಾಮೂಹಿಕವಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡು ಎಳನೀರು ಅಥವಾ ಹಾಲಿಗೆ ವಿಷ ಬೆರೆಸಿ ಕೊಲ್ಲುವುದು ಸಾಮಾನ್ಯ ಸಂಗತಿಯಾಗಿತ್ತು.
ಸರ್ಕಾರಿ ಆಶ್ರಯದಲ್ಲಿ ಇದ್ದ ಬಾಲಕ, ಬಾಲಕಿಯರ ಭವಿಷ್ಯದ ಜವಾಬ್ದಾರಿ ಹೊತ್ತ ಅವರು ಅನೇಕ ದಾನಿಗಳನ್ನು ಹಿಡಿದು ಎಲ್ಲರನ್ನೂ ವಿದ್ಯಾವಂತರನ್ನಾಗಿ ಮತ್ತು ಉದ್ಯೋಗಸ್ಥರಾಗಿ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳುವಲ್ಲಿ ನೆರವಾದರು. 2008 ರಲ್ಲಿ ಅಣ್ಣೈಸತ್ಯಾ ಶಾಲೆಯಲ್ಲಿ ಮಕ್ಕಳ ಪಾಲಿಗೆ ತಾಯಿಯಂತ ಇದ್ದ ಸಮಾಜ ಕಲ್ಯಾಣ ಇಲಾಖೆಯ ಸೂರ್ಯಕಲಾ ಎಂಬ ಮಹಿಳಾ ಅಧಿಕಾರಿ ನಿಧನರಾದಾಗ, ಅವರ ಸ್ಥಾನವನ್ನು ಅದೇ ಅನಾಥ ಮಕ್ಕಳ ಶಾಲೆಯಲ್ಲಿ ಬೆಳೆದು ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಮಾಡಿರುವ ತಮಿಳರಸಿ ಎಂಬ ಹೆಣ್ಣುಮಗಳು ಹೊತ್ತಿದ್ದಾಳೆ. ಆಕೆಯು ಚೆನ್ನೆöÊ ನಗರದಲ್ಲಿ ಐದು ವರ್ಷ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ದುಡಿದಿದ್ದಳು. ಅನೇಕ ದಾನಿಗಳ ನೆರವಿನಿಂದ ರಾಧಾಕೃಷ್ಣನ್ ಅವರು ನಾಗಪಟ್ಟಣಂ ಹೊರವಲಯದ ಸಮಂತನ್ ಪಟ್ಟೈ ಎಂಬ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಅನಾಥ ಮಕ್ಕಳಿಗಾಗಿ ವಸತಿ ಮತ್ತು ಶಾಲೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ವಕೀಲ ಮನೋಜ್ ಎಂಬುವರು ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿದರು. ರಾಧಾಕೃಷ್ಣನ್ ನಾಗಪಟ್ಟಣಂ ಅನ್ನು ತೊರೆದರೂ ಸಹ ಈ ಶಾಲೆಯ ಮಕ್ಕಳನ್ನು ಮರೆಯಲಿಲ್ಲ.
ಅನಾಥಾಶ್ರಮದ ಮಕ್ಕಳು ವಿದ್ಯಾವಂತರಾಗಿ ಅದರಲ್ಲೂ ಬಿ.ಎ. ಬಿ.ಕಾಂ. ಬಿ.ಎಸ್ಸಿ. ಹೀಗೆ ಪದವಿ ಗಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಖಾಸಾಗಿ ಸಂಸ್ಥೆಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಸೌಮ್ಯ ಮತ್ತು ಮೀನಾ ಎಂಬ ಬಾಲಕಿಯರು ಯಾವುದೇ ಪೋಷಕರು ದೊರೆಯದೆ ಶಾಲೆಯಲ್ಲಿ ಉಳಿದಿದ್ದರು. ಇವರಲ್ಲಿ ಸುನಾಮಿ ದುರಂತದಲ್ಲಿ ನಾಲ್ಕು ವರ್ಷದ ಸೌಮ್ಯ ಎಂಬಾಕೆ ಹಾಗೂ ಒಂದು ವರ್ಷದ ಹಸುಳೆ ಮೀನಾ ಎಂಬಾಕೆ ರಾಧಾಕೃಷ್ಣನ್ ಅವರಿಗೆ ವೆಲಾಂಕಣಿಯಲ್ಲಿ ಸಿಕ್ಕಿದ್ದರು. ಇವರಿಬ್ಬರನ್ನು ನಾಗಪಟ್ಟಣಂ ನಲ್ಲಿ ಹಡಗು ಮತ್ತು ದೋಣಿ ನಿರ್ಮಿಸುವ ಉದ್ಯಮಿ ಮಣಿವಣ್ಣನ್ ಮತ್ತು ಅವರ ಪತ್ನಿ ಮಲರ್‌ವಿಳಿ ಎಂಬುವರ ವಶಕ್ಕೆ ಒಪ್ಪಿಸಿದರು. ಆ ದಂಪತಿಗಳು ಈ ಹೆಣ್ಣುಮಕ್ಕಳನ್ನ ತಮ್ಮ ಮನೆಯಲ್ಲಿರಿಸಿಕೊಂಡು ಓದಿ ಬೆಳೆಸಿದರು. ಅರ್ಥಶಾಸ್ತçದಲ್ಲಿ ಬಿ.ಎ. ಪದವಿ ಪಡೆದ ಸೌಮ್ಯಳನ್ನು ಕೆ.ಸುಭಾಷ್ ಎಂಬ ಬಿ.ಇ. ಪದವೀಧರ 2022 ರಲ್ಲಿ ಕೈ ಹಿಡಿದನು. ಈ ದಂಪತಿಗಳಿಗೆ 2024 ರಲ್ಲಿ ಹೆಣ್ಣು ಮಗು ಜನಿಸಿದಾಗ, ಹಸುಗೂಸನ್ನು ಎತ್ತಿಕೊಂಡು ಚೆನ್ನೆöÊ ನಗರದ ರಾಧಾಕೃಷ್ಣನ್ ಮನೆಗೆ ಹೋದ ಸೌಮ್ಯ ನನ್ನ ಪಾಲಿನ ತಂದೆ ತಾಯಿಗಳಾದ ನೀವು ಮೊಮ್ಮಗಳಿಗೆ ಹೆಸರು ಇಡಬೇಕು ಎಂದು ವಿನಂತಿಸಿದಾಗ, ರಾಧಾಕೃಷ್ಣನ್ ಮತ್ತು ಪತ್ನಿ ಕಾರ್ತಿಕಾ ದಂಪತಿಗಳಿಬ್ಬರೂ ಆ ಮಗುವಿಗೆ ‘’ ಸಾರಾ’’ ಎಂದು ನಾಮಕರಣ ಮಾಡಿದರು.
ನರ್ಸಿಂಗ್ ಪದವಿಯನ್ನು ಪಡೆದಿದ್ದ ಮೀನಾಳ ವಿವಾಹವು ಈ ವರ್ಷದ ಪೆಬ್ರವರಿ ತಿಂಗಳಿನಲ್ಲಿ ರಾಷ್ಟಿçÃಯ ಬ್ಯಾಂಕ್ ಉದ್ಯೋಗಿಯ ಜೊತೆ ನಾಗಪಟ್ಟಣದ ಮಾರಿಯಮ್ಮನ್ ದೇವಾಲಯದಲ್ಲಿ ನಡೆಯಿತು. ಈ ವಿವಾಹದಲ್ಲಿಯೂ ಸಹ ರಾಧಾಕೃಷ್ಣನ್ ದಂಪತಿಗಳು ವಧುವಿನ ತಾಯಿ ತಂದೆಗಳಾಗಿ ನಿಂತು ಕನ್ಯಾದಾನ ಮಾಡಿದರು. ನೊಂದವರ ಕಣ್ಣೀರಿಗೆ ಕರವಸ್ತçವಾಗುವುದನ್ನು ಬದುಕಿನ ಗುರಿಯಾಗಿಸಿಕೊಂಡರೆ, ಒಬ ್ಬನಿಷ್ಠಾವಂತ ಅಧಿಕಾರಿ ಹೇಗೆ ಅತಂತ್ರರ ಮತ್ತು ಅನಾಥರ ಬದುಕಿಗೆ ಬೆಳಕಾಗಬಲ್ಲ ಎಂಬುದಕ್ಕೆ 58 ವರ್ಷದ ಡಾ.ಜೆ.ರಾಧಾಕೃಷ್ಣನ್ ನಮ್ಮೆದುರು ಸಾಕ್ಷಿಯಾಗಿದ್ದಾರೆ. ಈಗ ಅವರು ಚೆನ್ನೆöÊ ನಗರದಲ್ಲಿ ತಮಿಳುನಾಡು ಸರ್ಕಾರದ ಆಹಾರ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರೈಕ್ಕಲ್ ಜಿಲ್ಲೆಯ ಆಕಾರೈಪಟ್ಟಿ ಎಬ ಗ್ರಾಮವು ಒಂದು ಬದಿಯಲ್ಲಿ ಸಮುದ್ರ ಮತ್ತು ಮತ್ತೊಂದೆಡ ನದಿಯನ್ನು ಒಳಗೊಂಡಿರುವ ಗ್ರಾಮ. ಈ ಗ್ರಾಮದ ಮಧ್ಯಮ ವರ್ಗದ ವೈಶಾಲಿ ವಿನೋದಿನಿ ಎಂಬಾಕೆ ಹದಿನೈದು ವರ್ಷವಾಗಿದ್ದಾಗ ಸುನಾಮಿ ದುರಂತಕ್ಕೆ ಸಾಕ್ಷಿಯಾದಳು. ಆಕೆಯ ಕುಟುಂಬದ ದೋಣಿ ಮತ್ತು ಮನೆ ನಾಶವಾದರೂ ಸಹ ಕುಟುಂಬದ ಸದಸ್ಯರು ಬದುಕಿಳಿದರು.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ವೈಶಾಲಿ ವಿದ್ಯಾರ್ಥಿ ವೇತನ ಪಡೆದು ಮದ್ರಾಸ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಎಂ.ಟೆಕ್ ಪದವಿ ಪಡೆದ ನಂತರ ಯಾವುದೇ ಉದ್ಯೋಗಕ್ಕೆ ಹೋಗದೆ ತನ್ನೂರಿಗೆ ಆಗಮಿಸಿ ‘’ಕಡಲ ಮುತ್ತು’’ ಹೆಸರಿನಲ್ಲಿ ಕಡಲ ತೀರದ ಮಕ್ಕಳಿಗೆ ಕೋಚಿಂಗ್ ಕ್ಲಾಸ್ ಆರಂಭಿಸಿದಳು. ಆರಂಭದಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿಗಳಿಂದ ಪ್ರಾರಂಭವಾದ ತರಬೇತಿ ಶಾಲೆಯಲ್ಲಿ ಈಗ ಇನ್ನೂರು ಮಕ್ಕಳು ಕಲಿಯುತ್ತಿದ್ದಾರೆ. 2024 ರಲ್ಲಿ ವೈಶಾಲಿ ವಿನೋಧಿನಿಯಿಂದ ತರಬೇತಿ ಪಡೆದವರಲ್ಲಿ 64 ಮಂದಿ ವಿದ್ಯಾರ್ಥಿಗಳು ತಮಿಳುನಾಡಿನ ಸಾರ್ವಜನಿಕ ಸೇವಾ ಆಯೋಗದಲ್ಲಿ ಉತ್ತೀರ್ಣರಾಗಿ ಗುಮಾಸ್ತ, ಪೊಲೀಸ್ ಹಾಗೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈಗ ವೈಶಾಲಿ ಪದವೀಧರರನ್ನು ಐ.ಎ.ಎಸ್. ಪರೀಕ್ಷೆಗೆ ತಯಾರು ಮಾಡುತ್ತಿದ್ದಾಳೆ ಹಣತೆ ಹಚ್ಚುವ ಕ್ರಿಯೆಯು ಹೇಗೆ ಅರ್ಥಪೂರ್ಣವಾಗಿರಬೇಕು ಎಂಬುದಕ್ಕೆ ಡಾ.ಜೆ.ರಾಧಾಕೃಷ್ಣನ್ ಮತ್ತು ವೈಶಾಲಿ ವಿನೋದಿನಿ ನಮಗೆ ಮಾದರಿಯಾಗಿದ್ದಾರೆ.
ಚಿತ್ರ ಒಂದು- ಡಾ.ಜೆ.ರಾಧಾಕೃಷ್ಣನ್
ಚಿತ್ರಎರಡು - ಸೌಮ್ಯಳ ಮಗುವಿಗೆ ರಾಧಾಕೃಷ್ಣನ್ ದಂಪತಿಗಳು ನಾಮಕರಣ ಮಾಡುತ್ತಿರುವುದು
ಚಿತ್ರ ಮೂರು- ಮೀನಾಳ ವಿವಾಹದಲ್ಲಿ ವಧುವಿನ ತಂದೆ-ತಾಯಿಗಳಾಗಿ ರಾಧಾಕೃಷ್ಣನ್ ದಂಪತಿಗಳು.
ಚಿತ್ರ ನಾಲ್ಕು- ವೈಶಾಲಿ ಬಿನೋದಿನಿ
( ಮಾರ್ಚ್ ತಿಂಗಳ ಹೊಸತು ,ಮಾಸಪತ್ರಿಕೆಯ ಬಹುಸಂಸ್ಕೃತಿ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ