ಗುರುವಾರ, ಜೂನ್ 11, 2026

ಅಭಿವೃದ್ಧಿಯ ಅರ್ಥಶಾಸ್ತ್ರಜ್ಞ ಜೀನ್ ಡೇಕ್ ಅವರ ಭಾರತದ ಅಸಮಾನತೆಯ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಗೌರವ.

 


ಬೆಲ್ಜಿಯಂ ಮೂಲದ ಜೀನ್ ಡೇಕ್ ಅವರು, ಅಭಿವೃದ್ಧಿಯ ಅಥವಾ ಕಲ್ಯಾಣ ಅರ್ಥಶಾಸ್ತ್ರದಲ್ಲಿ( Welfare Econamics ) ಇಂಗ್ಲೆಂಡಿನಲ್ಲಿ ಡಾಕ್ಟರೇಟ್ ಪದವಿ ಪಡೆದು, ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಚಿಂತನೆಗಳಿಂದ ಪ್ರಭಾವಿತರಾದವರು. ಹಾಗಾಗಿ 1977 ರಲ್ಲಿ ಭಾರತಕ್ಕೆ ಆಗಮಿಸಿದ ಇವರು, 2002 ರಲ್ಲಿ ಭಾರತೀಯ ಪೌರತ್ವ ಸ್ವೀಕರಿಸಿ, ಇಂದಿನ ಜಾರ್ಖಂಡ್ ರಾಜ್ಯದ ರಾಂಚಿ ನಗರದಲ್ಲಿ ವಾಸವಾಗಿದ್ದಾರೆ.
ಇಂಗ್ಲೇಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಭಾರತದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿರುವ ಜೀನ್ ಡ್ರೇಜ್ ಇದೀಗ, ರಾಂಚಿ. ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯರ ಬಡತನಕ್ಕೆ ಮೂಲ ಕಾರಣವಾದ, ಇಲ್ಲಿನ ಶ್ರೇಣಿಕೃತ ಸಮಾಜ, ಜಾತಿ ಮತ್ತು ಲಿಂಗ ಅಸಮಾನತೆ. ಆಹಾರ ಪಡಿತರ ವ್ಯವಸ್ಥೆಯ ದೋಷಗಳು ಮತ್ತು ಗ್ರಾಮೀಣ ಉದ್ಯೋಗ ಯೋಜನೆಗಳ ವೈಫಲ್ಯಗಳ ಕುರಿತು ನಿರಂತರವಾಗಿ ಅಧ್ಯಯನ ಮಾಡುತ್ತಾ, ದೇಶದ ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ.
ಪ್ರಧಾನಿಯಾಗಿದ್ದ ಡಾ. ಮನ್ ಮಹೋನ್ ಸಿಂಗ್ ಅವರ ಆಳ್ವಿಕೆಯಲ್ಲಿ ರಾಷ್ಟ್ರೀಯ ಸಲಹೆಗಾರರ ಸಮಿತಿಯ ಸದಸ್ಯರಾಗಿದ್ದ ಜೀನ್ ಡ್ರೇಜ್, ಮನೆರೇಗಾ ಎಂದು ಕರೆಯುತ್ತಿದ್ದ ಗ್ರಾಮೀಣ ಉದ್ಯೋಗ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ತಮ್ಮ ನಿಷ್ಟುರ ಚಿಂತನೆಗಳಿಂದ ಕಳೆದ ಹನ್ನೆರಡು ವರ್ಷಗಳಿಂದ ಇಂದಿನ ಕೇಂದ್ರ ಸರ್ಕಾರದ ಪಾಲಿಗೆ ದೇಶ ದ್ರೋಹಿಯಾಗಿದ್ದಾರೆ. ಅವರಿಗೆ ಭಾರತೀಯ ಪೌರತ್ವ ಇಲ್ಲದಿದ್ದರೆ, ಈ ವೇಳೆಗೆ ಅವರನ್ನು ದೇಶದಿಂದ ಹೊರದಬ್ಬಲಾಗುತ್ತಿತ್ತು.
ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿ ಮತ್ತು ಸಂಶೋಧಕನಾಗಿ ನಾನು ಕಂಡುಕೊಂಡ ಸತ್ಯವೇಂದರೆ, ಕಣ್ಣ ಮುಂದಿನ ವಾಸ್ತವ ಸಂಗತಿಗಳನ್ನು ಮರೆಮಾಚಲು ಯಾವುದೇ ಅರ್ಥಶಾಸ್ತ್ರಜ್ಞನಿಗೆ ಮರೆ ಮಾಚಲು ಸಾಧ್ಯವಾಗುವುದಿಲ್ಲ. ಹೂಸನ್ನು ಪರಿಮಳ ಎಂದು ಬಣ್ಣಿಸುವುದು ಅರ್ಥಶಾಸ್ತ್ರಜ್ಞರ ಕರ್ತವ್ಯವಲ್ಲ. ಇಂತಹ ಕೆಲಸಗಳಿಗೆ ಅವರ ಮನಸಾಕ್ಷಿ ಒಪ್ಪುವುದಿಲ್ಲ.

ಈ ಕಾರಣದಿಂದ, ದೇಶದ ಅನೇಕ ಜನಪರ ಚಳುವಳಿಗಳ ಜೊತೆ ಗುರುತಿಸಿಕೊಂಡಿರುವ ಡ್ರೇಜ್, ಆಹಾರ ಪಡಿತರ ವ್ಯವಸ್ಥೆಗೆ ಆಧಾರ್ ಕಡ್ಡಾಯ ಮಾಡಿದಾಗ ಪ್ರಭಲವಾಗಿ ವಿರೋಧಿಸಿದರು. ಹಲವಾರು ಬಾರಿ ಬಂಧನಕ್ಕೆ ಒಳಗಾಗಿದ್ದರು. ಸದಾ ಸೈಕಲ್ ನಲ್ಲಿ ಓಡಾಡುವ ಇವರು ದೂರದ ಕಾಡಂಚಿನ ಊರಿಗೆ ಮೊಟಾರ್ ಬೈಕ್ ನಲ್ಲಿ ಹೋಗುವಾಗ ರಾಂಚಿ ಪೊಲೀಸರು ಇವರ ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಬಿಡುಗಡೆಗೆ ಐನೂರು ರೂಪಾಯಿ ಲಂಚ ಕೇಳಿದಾಗ, ಜೀನ್ ಡ್ರೇಜ್ ಈ ಸಂಗತಿಯನ್ನ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು.
ಇವರು ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞ ಎಂದು ಅರಿತುಕೊಂಡಿರುವ ಜಾರ್ಖಂಡ್ ರಾಜ್ಯದ ಪೊಲೀಸರು ಈಗ ಡ್ರೇಜ್ ಹತ್ತಿರ ಸುಳಿಯುವುದಿಲ್ಲ. ಕಳೆದವಾರ ಜೂನ್ 5 ರಂದು ಪ್ರಾರಿಸ್ ಸ್ಕೂಲ್ ಆಫ್ ಎಕನಾಮಿಸ್ಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಾಗತಿಕ ಅಸಮಾನತೆಯ ಕುರಿತ ಸಮಾವೇಶದಲ್ಲಿ ಇವರಿಗೆ ಬಡತನ ಮತ್ತು ಅಸಮಾನತೆಯ ಕುರಿತು ನಡೆಸಿದ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಯಾವುದೇ ಹಣದ ಪ್ರಶಸ್ತಿಯಾಗಿರದೆ, ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞನನ್ನು ಗೌರವಿಸುವ ಸಂಪ್ರದಾಯವಾಗಿದೆ. ಆದರೆ, ನಮ್ಮ ಗೊದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ.

ಜೀನ್ ಡ್ರೇಜ್ ಅವರು ಅಮಾರ್ತ್ಯಸೇನ್ ಜೊತೆಗೂಡಿ ರಚಿಸಿರುವ ಇಂಡಿಯಾ; ಡೆವಲಪ್ ಮೆಂಟ್ ಕೃತಿಯಲ್ಲದೆ, ಸ್ವತಃ ಅಧ್ಯಯನ ಮಾಡಿರುವ ಸೆನ್ಸ್ ಅಂಡ್ ಸಾಲಿಡಾರಿಟಿ ಹಾಗೂ ಹ್ಯಾನ್ ಅನ್ ಸರ್ಟೈನ್ ಗ್ಲೋರಿ; ಇಂಡಿಯಾ ಅಟ್ ಕನ್ಟ್ರಾಡ್ರಿಕ್ಷನ್ ಈ ಮೂರು ಕೃತಿಗಳು ನಾವು ನೋಡುತ್ತಿರುವ ಭಾರತ ಮತ್ತು ಗ್ರಹಿಸಬೇಕಾದ ಭಾರತದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತವೆ.

ಸಧ್ಯದಲ್ಲೇ ಜೀನ್ ಡ್ರೇಜ್ ಅವರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಿಗಲಿದೆ ಎಂಬ ವಿಶ್ವಾಸ ನನಗಿದೆ.
ಜಗದೀಶ್ ಕೊಪ್ಪ. ಮೈಸೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ