ಮಂಗಳವಾರ, ಮಾರ್ಚ್ 18, 2025

ಬ್ಬರು ಶ್ರೇಷ್ಠ ಕಲಾವಿದರ ಆತ್ಮಚರಿತ್ರೆಯ ನೆಪದಲ್ಲಿ ದಾಖಲಾದ ನಾಟಕ ಮತ್ತು ಸಂಗೀತ ಕುರಿತ ಕರ್ನಾಟಕದ ಮಹತ್ವದ ಇತಿಹಾಸದ ಕೃತಿಗಳು.


ಕಳೆದವಾರ ಮನೆಗೆ ಬಂದಿದ್ದ ಪತ್ರಕರ್ತ ಮಿತ್ರ ಗಣೇಶ ಅಮೀನಗಡ ಅವರು ತಾವು ನಿರೂಪಿಸಿರುವ ಹಾಗೂ ತಮ್ಮ ಕವಿತಾ ಪ್ರಕಾಶನದಿಂದ ಪ್ರಕಟಿಸಿರುವ ಧಾರವಾಡದ ಹಿಂದೂಸ್ತಾನಿ ಸಂಗೀತಗಾರ ಫಯಾಜ್ ಖಾನ್ ಅವರ ಸಾರಂಗಿ ನಾದದ ಬೆನ್ನೇರಿ ಹಾಗೂ ಉತ್ತರ ಕರ್ನಾಟಕದ ರಂಗಭೂಮಿಯ ಹಿರಿಯ ಕಲಾವಿದೆ ಮತ್ತು ಈಗ ಹುಬ್ಬಳ್ಳಿಯಲ್ಲಿ ನೆಲೆಸಿರುವ ಜಯಲಕ್ಷ್ಮಿ ಪಾಟೀಲ್ ಅವರ ರಂಗ ಬಾನಾಡಿ ಕೃತಿಗಳನ್ನು ನೀಡಿ ಹೋದರು.
ವಯಸ್ಸು ಮತ್ತು ಕಣ್ಣಿನ ದೃಷ್ಟಿಯ ತೊಂದರೆಯಿಂದಾಗಿ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದೂವರೆ ವರೆಗೆ ಸೂರ್ಯನ ಬೆಳಕಲ್ಲಿ ಕನ್ನಡಕ ಹಾಕಿಕೊಂಡು ಅತ್ಯಂತ ನಿಧಾನವಾಗಿ ಓದಲು ಮಾತ್ರ ಸಾಧ್ಯವಾಗಿದೆ. ಹಾಗಾಗಿ ಕಥೆ, ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ ಈ ಎಲ್ಲಾ ಪ್ರಕಾರಗಳಿಂದ ದೂರ ಉಳಿದು, ವೈಚಾರಿಕ ಬರಹಗಳು ಮತ್ತು ಹಿರಿಯ ಕಲಾವಿದರ ಮತ್ತು ಸಾಹಿತಿಗಳ ಇಂಗ್ಲೀಷ್ ಮತ್ತಿ ಕನ್ನಡದ ಆತ್ಮ ಚರಿತ್ರೆಗಳನ್ನು ಓದುವ ಮಿತಿ ಹಾಕಿಕೊಂಡಿದ್ದೀನಿ.ರಾತ್ರಿ ಲೈಟ್ ಬೆಳಕಿನಲ್ಲಿ ಓದಲು ಸಾಧ್ಯವಾಗುತ್ತಿಲ್ಲ.

ಸಾರಂಗಿ ಮತ್ತು ತಬಲಾ ವಾದಕ ಹಾಗೂ ಗಾಯಕರಾಗಿರುವ ಫಯಾಜ್ ಖಾನ್ ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಧಾರವಾಡದ ಹಲವಾರು ಸಂಗೀತ ಕಚೇರಿಗಳಲ್ಲಿ ಅವರು ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ ಸಾರಂಗಿ ಮತ್ತು ತಬಲಾ ನುಡಿಸುವುದನ್ನು ನೋಡಿದ್ದೆ. ಅವರ ಆತ್ಮ ಚರಿತ್ರೆಯಲ್ಲಿ ಧಾರವಾಡದ ಆರು ದಶಕಗಳ ಹಿಂದೂಸ್ತಾನಿ ಸಂಗೀತ ವಿವರಗಳು ದಾಖಲಾಗಿರುವುದು ಮಹತ್ವದ ವಿಷಯ. ಇದಕ್ಕಿಂತ ಮಿಗಿಲಾಗಿ ಅಪ್ಪಟ ಧಾರವಾಡ ಭಾಷೆಯಲ್ಲಿ ಮತ್ತು ಮರಾಠಿ ಮಿಶ್ರಿತ ಕನ್ನಡದಲ್ಲಿ ಅವರ ಮಾತುಗಳನ್ನು ನಿರೂಪಕರಾಗಿ ಗಣೇಶ್ ಅಮೀನಗಡ ಮತ್ತು ಡಾ. ಸಿ.ಬಿ.ಚಿಲ್ಕರಾಗಿ ಇವರು ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.
ಫಯಾಜ್ ಖಾನ್ ಅವರು ಆತ್ಮಕಥೆಯ ನೆಪದಲ್ಲಿ ಇಡೀ ಧಾರವಾಡದ ಸಾಂಸ್ಕೃತಿಕ ವಾತಾವರಣ ಮತ್ತು ಅಂದಿನ ಧಾರವಾಡದ ಕೆರೆಗಳು, ಓಣಿಗಳು, ರಸ್ತೆಗಳು, ಸರ್ಕಾರಿ ಶಾಲೆಗಳುಎಲ್ಲವನ್ನೂ ಬಣ್ಣಿಸಿರುವುದು ಧಾರವಾಡದ ಮಣ್ಣು, ನೀರು ಮತ್ತು ಗಾಳಿಯ ಜೊತೆಗೆ ಎರಡು ದಶಕಗಳ ಕಾಲ ಬದುಕಿದ ನನಗೆ ತಕ್ಷಣವೇ ಎದೆಗೆ ನಾಟಿದವು.
ಅವರು ಬಣ್ಣಿಸಿರುವ ಹೋಟೇಲ್ಗಳು, ದೇಗುಲ, ಸ್ಮಶಾನ, ಕಾಲೇಜು, ಆಕಾಶವಾಣಿ, ಕಲಾವಿದರ ನಿವಾಸಗಳು, ಎಲ್ಲಾ ಪ್ರದೇಶಗಳಲ್ಲಿ ಹುಟ್ಟಿದ ಊರಿನ ಕೂಸಿನಂತೆ ಅಲ್ಲೆಲ್ಲಾ ಅಡ್ಡಾಡಿದವನು ನಾನು. ತಮ್ಮ ಕುಂಟುಂದಿಂದ ಪಾರಂಪರಿಕವಾಗಿ ಬಂದ ಸಾರಂಗಿವಾದನವನ್ನು ಆಕಾಶವಾಣಿ ಕಲಾವಿದರಾಗಿದ್ದ ತನ್ನ ತಂದೆಯವರಿಂದ ಕಲಿತ ಫಯಾಜ್ ಖಾನರು, ಸಾರಂಗಿ ವಾದನವನ್ನು ಆಧುನಿಕ ಕಲಾವಿದರು ಪಕ್ಕ ವಾದ್ಯವಾಗಿ ಇಷ್ಟ ಪಡದ ಕಾರಣ, ಜೀವನ ನಿರ್ವಹಣೆಗಾಗಿ ತಬಲಾ ವಾದನವನ್ನು ಕಲಿತರು. ಸಂಗೀತವೇ ವೃತ್ತಿಯಾಗಿದ್ದ ಕಾರಣ, ಸಾರಂಗಿ, ತಬಲಾಗಳ ವಾದನದ ಜೊತೆ ಹಾಡುವುದನ್ನೂ ಸಹ ಕಲಿತರು. ಇದಕ್ಕಾಗಿ ಅವರು ಪಟ್ಟಿರುವ ಶ್ರಮ ಹಾಗೂ ಮುಂಬೈ ನಗರದಲ್ಲಿ ವರ್ಷಗಟ್ಟಲೆ ರೈಲ್ವೆ ನಿಲ್ದಾಣದಲ್ಲಿ ಮಲಗಿ, ಸುಲಭ್ ಶಾಚಾಲಯದಲ್ಲಿ ನಿತ್ಯಕರ್ಮ ಮುಗಿಸಿ, ವಡ ಪಾವ್ ತಿಂದು ಗುರುಗಳ ಮನೆಗೆ ಹಾಜರಾಗುತ್ತಿದ್ದ ಪರಿಯನ್ನು ಅವರು ಹೇಳಿಕೊಂಡಿರುವ ಪರಿ ಓದುಗರ ಮನಸ್ಸನ್ನು ಕದಡುತ್ತದೆ.
ಫಯಾಜ್ ಖಾನರು ಬೆಂಗಳೂರಿಗೆ ಬಂದು, ಹಲವಾರು ಸಿನಿಮಾ ಸಂಗೀತ ನಿರ್ದೇಶಕರ ಜೊತೆಯಲ್ಲಿ ದುಡಿಯುತ್ತಾ, ಧಾರವಾಹಿಗಳ ಶೀರ್ಷಿಕೆಯ ಗೀತೆಯನ್ನು ಹಾಡುತ್ತಾ, ಸಂಗೀತ ನಿರ್ದೇಶನ ಮಾಡಿ ಬದುಕು ಕಟ್ಟಿಕೊಂಡವರು.
ತಮ್ಮ ಎದೆಯೊಳಗೆ ಸದಾ ತುಡಿಯುತ್ತಿದ್ದ ಶುದ್ಧ ಶಾಸ್ತ್ರೀಯ ಸಂಗೀತವನ್ನು ಎಂದಿಗೂ ಅವರು ಮರೆಯಲಿಲ್ಲ. ಈ ಕಾರಣದಿಂದಾಗಿ ತಮ್ಮ ಇಬ್ಬರು ಪುತ್ರರಿಗೂ ತಮ್ಮ ಕೌಟುಂಬಿಕ ಪರಂಪರೆಯನ್ನು ಧಾರೆಯೆರೆದಿದ್ದಾರೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಫಯಾಜ್ ಖಾನ್, ತಮ್ಮ ಮಲತಾಯಿಯಿಂದ ಅನುಭವಿಸಿದ ಹಿಂಸೆ, ಹಸಿವು, ಅಪಮಾನ ಇವುಗಳನ್ನು ಅತ್ಯಂತ ನಿರ್ಭಾವುಕರಾಗಿ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
ಸಂಗೀತಗಾರನಾಗುವುದೆಂದರೆ, ಮೂರು ತಿಂಗಳಲ್ಲಿ ಹಾಡುವುದನ್ನು ಕಲಿತು, ಟಿ.ವಿ. ಚಾನಲ್ ಗಳ ಸ್ಪರ್ಧೆಯಲ್ಲಿ ಹಾಡಿ ಸಂಭ್ರಮಿಸುವ ವೃತ್ತಿ ಅಥವಾ ಹವ್ಯಾಸವಲ್ಲ. ಅದು ಧ್ಯಾನ. ಜಾತಿ, ಧರ್ಮ ಮತ್ತು ಲಿಂಗ ಅಸಮಾನತೆಯನ್ನು ದೂರವಿಟ್ಟು ಮನುಷ್ಯನನ್ನು ಅನುಭಾವಿಯನ್ನಾಗಿ ರೂಪಿಸುವ ಮಹತ್ವದ ಕಲೆ ಎಂಬುದಕ್ಕೆ ಉಸ್ತಾದ್ ಫಯಾಜ್ ಖಾನರ ಸಾರಂಗಿ ನಾದದ ಬೆನ್ನೇರಿ ಕೃತಿಯು ಸಾಕ್ಷಿಯಾಗಿದೆ.
ನಾಡಿನ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲರು ಅರವತ್ತು ವರ್ಷಗಳ ಕಾಲ ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿ, ಓರ್ವ ಶ್ರೇಷ್ಠ ಕಲಾವಿದೆಯಾಗಿ, ರಂಗಭೂಮಿ, ಕನ್ನಡ ಚಿತ್ರರಂಗ ಮತ್ತು ಧಾರವಾಹಿಗಳಲ್ಲಿ ಗುರುತಿಸಿಕೊಂಡವರು. ಜಯಲಕ್ಷ್ಮಿ ಪಾಟೀಲರ ಆತ್ಮಕಥೆ ಅವರ ಜೀವನದ ಕಥೆ ಮಾತ್ರವಲ್ಲ. ಇಡೀ ನಾಡಿನ ರಂಗಭೂಮಿ ಕಲಾವಿದೆಯರ ಕಥನದಂತಿದೆ. ಹನ್ನೆರೆಡು ವರ್ಷಗಳ ಹಿಂದೆ ನಾನು ಓದಿದ್ದ ಉಮಾಶ್ರಿ ಅವರ ಆತ್ಮಕಥೆಯ ಮುಂದುವರಿದ ಭಾಗದಂತೆ ನನಗೆ ಇದು ಭಾಸವಾಯಿತು.
ಎಂಟತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಸಾಹಿತ್ಯದ ಕಾರ್ಯಕ್ರಮದಲ್ಲಿ ನನ್ನನ್ನು ಭೇಟಿಯಾಗಿ, ನಾನು ಅನುವಾದಿಸಿದ್ದ ಮರುಭೂಮಿಯ ಹೂ ಕೃತಿಯ ಬಗ್ಗೆ ತುಂಬಾ ಭಾವನಾತ್ಮಕವಾಗಿ ನನ್ನೊಂದಿಗೆ ಅವರು ಮಾತನಾಡಿದ್ದರು. ನಾನು ಅವರ ಬಗ್ಗೆ ಕೇಳಿದಾಗ, ತಮ್ಮ ಹೆಸರನ್ನು ಹೇಳಿ, ಬೆಂಗಳೂರಿನಲ್ಲಿದ್ದುಕೊಂಡು ಧಾರವಾಹಿಗಳಲ್ಲಿ ನಟಿಸುತ್ತಿದ್ದೀನಿ ಎಂದು ಹೇಳಿದ್ದರು. ಅವರ ನಾಡಿನ ಅಪ್ರತಿಮ ಹಿರಿಯ ಕಲಾವಿದೆ ಎಂಬುದು ಈ ಕೃತಿ ಓದುವವರೆಗೂ ನನಗೆ ಗೊತ್ತಿರಲಿಲ್ಲ.
ಕೇವಲ 128 ಪುಟಗಳಿಷ್ಟು ಇರುವ ತಮ್ಮ ಆತ್ಮಕಥೆಯಲ್ಲಿ 1960 ರಿಂದ 2020 ರ ವರೆಗಿನ ಉತ್ತರ ಕರ್ನಾಟಕದ ನಾಟಕ ಕಂಪನಿಗಳು, ಮಾಲೀಕರು, ಕಲಾವಿದ/ ಕಲಾವಿದೆಯರ ಬದುಕು, ಪ್ರತಿಭೆಯನ್ನು ದಾಖಲಿಸುತ್ತಾ, ಇಡೀ ರಂಗಭೂಮಿಯ ಚರಿತ್ರೆಯನ್ನು ಓದುಗರ ಮುಂದೆ ಇಟ್ಟಿದ್ದಾರೆ. ಅಜ್ಜಿ, ತಾಯಿ ಎಲ್ಲರೂ ಕಲಾವಿದೆಯರಾಗಿದ್ದ ಕಾರಣ, ತಾವು ಬಾಲ್ಯದಲ್ಲಿ ಬಣ್ಣ ಹಚ್ಚಿದ ಕಥನ ಹಾಗೂ ಕುಡುಕ ಗಂಡನೆಂಬ ಕಲಾವಿದನನ್ನು ಕಟ್ಟಿಕೊಂಡು, ಊರೂರು ಅಲೆಯುತ್ತಾ, ನಾಟಕಗಳಿಗೆ ಪ್ರೇಕ್ಷಕರು ಇಲ್ಲದ ದಿನಗಳಲ್ಲಿ ಅರೆ ಹೊಟ್ಟೆಯಲ್ಲಿ ಬದುಕಿದ ದಿನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜಯಲಕ್ಷ್ಮಿಯವರು ದಾಖಲಿಸಿದ್ದಾರೆ.
ಇದು ಜಯಲಕ್ಷ್ಮಿ ಪಾಟೀಲರು ಅನುಭವಿಸಿದ ಕಲಾವಿದೆಯ ಬವಣೆಯ ಬದುಕು ಮಾತ್ರವಾಗಿರದೆ, ರಂಗಭೂಮಿಯ ಬಹುತೇಕ ಕಲಾವಿದೆಯರ ಬದುಕು ಕೂಡಾ ಆಗಿದೆ. ತಮ್ಮ ಆತ್ಮಕಥೆಯಲ್ಲಿ ನಾವು ಈವರೆಗೆ ಕೇಳದೆ ಉಳಿದಿದ್ದ ಅನೇಕ ಕಲಾವಿದರು, ಕಲಾವಿದೆಯರ ಬಗ್ಗೆ ಇವರು ಎದೆ ತುಂಬಿ ಸ್ಮರಿಸಿದ್ದಾರೆ. ಇದು ಈ ಕೃತಿಯ ವಿಶೇಷಗಳಲ್ಲಿ ಒಂದು. ಪ್ರಸಿದ್ಧ ಸಿನಿಮಾ ನಟ ವಿಷ್ಣುವರ್ಧನ್ ಅವರ ತಂದೆ ಹೆಚ್.ಎಲ್. ಸೂರ್ಯನಾರಾಯಣರಾವ್ ಅವರು ಪ್ರಸಿದ್ಧ ನಾಟಕಗಾರರು, ಸಂಭಾಷಣೆಗಾರರು ಮತ್ತು ಸಂಗೀತಗಾರರು ಎಂಬುದು ನನಗೆ ಈ ಕೃತಿಯಿಂದ ತಿಳಿಯಿತು. ವಿಷ್ಣುವರ್ಧನ ಅವರ ಸಹೋದರಿ ರಮಾಮಣಿ ಎಂಬುವರು ನೃತ್ಯ ನಿರ್ದೇಶಕಿಯಾಗಿದ್ದ ವಿಷಯವೂ ಇಲ್ಲಿ ದಾಖಲಾಗಿದೆ.
ನನ್ನೂರು ಸಮೀಪದ ಎಂಟು ಕಿಲೋಮೀಟರ್ ದೂರದಲ್ಲಿರುವ ಮಂಡ್ಯ ತಾಲ್ಲೂಕಿನ ಹಲ್ಲೆಗೆರೆ ಗ್ರಾಮದ ಮೂಲದ ವ್ಯಕ್ತಿ ಸೂರ್ಯನಾರಾಯಣರಾವ್ ಎಂಬುದು ಕಳೆದ ವರ್ಷದ ವರೆಗೆ ನನಗೆ ಗೊತ್ತಿರಲಿಲ್ಲ. ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ವಿಷ್ಣುವರ್ಧನ್ ಮಂಡ್ಯ ಜಿಲ್ಲೆಯವರು ಎಂಬ ವಿಷಯ ಮುನ್ನೆಲೆಗೆ ಬಂದಾಗ ಖಾತರಿಯಾಯಿತು. ಇವರ ಕುಟುಂಬ ಮೈಸೂರು ನಗರದಲ್ಲಿ ಇದ್ದ ಕಾರಣ ವಿಷ್ಣು ವರ್ಧನ್ ಮೈಸೂರು ನಗರದಲ್ಲಿ 1950 ರಲ್ಲಿ ಜನಿಸಿದರು. ಸಂಪತ್ ಕುಮಾರ್ ಎಂಬ ಮೂಲ ಹೆಸರಿನ ವಿಷ್ಣುವರ್ಧನ್ ತಮ್ಮ ತಂದೆಯವರ ಪ್ರಭಾವದಿಂದ 1955 ಮತ್ತು 1956 ರಲ್ಲಿ ಬಾಲನಟನಾಗಿ ಶಿವಶರಣೆ ನಂಬೆಯಕ್ಕ ಮತ್ತು ಕೋಕಿಲವಾಣಿ ಚಿತ್ರಗಳಲ್ಲಿ ನಟಿಸಿದ್ದರು.
ಜಯಲಕ್ಷ್ಮಿ ಪಾಟೀಲರು ನಟಿ ಕಲ್ಪನಾ ಅವರ ಆತ್ಮಹತ್ಯೆ ಘಟನೆಯನ್ನು ಸಹ ಸವಿವರವಾಗಿ ದಾಖಲಿಸಿದ್ದಾರೆ. ಗುಡಗೇರಿ ಬಸವರಾಜರ ಕಂಪನಿ ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ ಕ್ಯಾಂಪ್ ಮಾಡಿತ್ತು. ಕಲ್ಪನಾ ನಿಧನರಾದದ್ದು 1979 ರ ಮೇ ತಿಂಗಳಲ್ಲಿ. ಗೋಟೂರು ಪ್ರವಾಸಿ ಮಂದಿರದಲ್ಲಿ ಕಲ್ಪನಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ನಾಟಕದ ಸನ್ನಿವೇಶದಲ್ಲಿ ಒಂದು ಸಂಭಾಷಣೆಯನ್ನು ತಪ್ಪಾಗಿ ಉಚ್ಛರಿಸಿದ ಕಾರಣಕ್ಕಾಗಿ ಗುಡಗೇರಿ ಬಸವರಾಜ್ ಕಪಾಳಕ್ಕೆ ಹೊಡೆದ ಕಾರಣಕ್ಕಾಗಿ ಆ ದಿನ‌ ಅಪಮಾನ ತಾಳಲಾರದೆ ಕಲ್ಪನಾ ಅವರು ಆತ್ಮಹತ್ಯೆ ಮಾಡಿಕೊಂಡರು. ನಾನು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಮತ್ತು ನಿಪ್ಪಾಣಿ ಕಡೆ ಪ್ರವಾಸ ಹೋದಾಗಲೆಲ್ಲಾ ಪಾಳು ಬಿದ್ದಿರುವ ಗೂಟೂರು ಪ್ರವಾಸಿ ಮಂದಿರವನ್ನು ನೋಡಿದಾಕ್ಷಣ ನನಗೆ ಕಲ್ಪನಾ ನೆನಪಾಗುತ್ತಿದ್ದರು.
ಲೇಖಕ ಮಿತ್ರ ಗಣೇಶ್ ಅಮೀನಗಡ ಅವರು ಜಯಲಕ್ಷ್ಮಿ ಪಾಟೀಲರ ಭಾವನೆಗಳಿಗೆ ಸಮರ್ಥವಾಗಿ ಅಕ್ಷರದ ರೂಪ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮೂಲದವರಾದ ಗಣೇಶ ಅಮೀನಗಡ ಅವರು ಒಂದು ರೀತಿಯಲ್ಲಿ ಕಂಪನಿ ನಾಟಕಗಳ ತವರೂರಿನಲ್ಲಿ ಜನಿಸಿದವರು. ಹಾಗಾಗಿ ಪತ್ರಿಕೋದ್ಯಮದ ನಡುವೆಯೂ ರಂಗಭೂಮಿ ಅವರಿಗೆ ಪ್ರೀತಿಯ ಹಾಗೂ ಆಸಕ್ತಿಯ ಮಾಧ್ಯಮವಾಗಿತ್ತು. ಗಣೇಶ್ ಮಾತ್ರ ಇಂತಹ ಕೃತಿಗಳನ್ನು ರಚಿಸಬಲ್ಲರು ಎಂಬುದಕ್ಕೆ ಅವರ ಏಣಗಿ ಬಾಳಪ್ಪ ಮತ್ತು ಜಯಲಕ್ಷ್ಮಿ ಪಾಟೀಲರ ಈ ಕೃತಿ ನಿರ್ದೇಶನಗಳಾಗಿವೆ.
ಗಣೇಶ್ ಅಮೀನಗಡ ಅವರು ಜಯಲಕ್ಷ್ಮಿ ಪಾಟೀಲರ ಕುರಿತು ಕೃತಿಯ ಬೆನ್ನುಡಿಯಲ್ಲಿ ಹೀಗೆ ದಾಖಲಿಸಿದ್ದಾರೆ.
,, ಅನ್ನ ಬಿಟ್ಟೇನು ಬಣ್ಣ ಬಿಡಲಾರೆ,, ಎನ್ನುವುದು ಇವರ ನಿರಂತರ ಮಾತಾಗಿತ್ತು. ಇದು ಕೇವಲ ಜಯಲಕ್ಷ್ಮಿ ಪಾಟೀಲರ ಆತ್ಮಕಥೆಯಲ್ಲ. ಅವರ ರೀತಿಯಲ್ಲಿ ಬದುಕಿದ ಸಾವಿರಾರು ಬಡ ಕಲಾವಿದೆಯರ ಆತ್ಮಕಥೆ. ಅಸಹಾಯಕತೆಯಿಂದ ರಂಗಭೂಮಿಗೆ ಕಾಲಿಡುವ ಕಲಾವಿದೆಯರು ಬಡತನ, ಅನಕ್ಷರತೆ,ಯ ಕಾರಣದಿಂದ ನಲುಗಿಹೋಗಿ ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದೆ ಒಳಗೊಳಗೆ ಅತ್ತು ತಮ್ಮನ್ನು ತಾವೇ ಸಂತೈಸಿಕೊಂಡವರ ಕಥೆ..
ಇದು ಸತ್ಯವಾದ ಮಾತು.ಇಂತಹ ಕಥನಗಳನ್ನು ಗಣೇಶ್ ಮಾತ್ರ ಬರೆಯಬಲ್ಲರು.
ಈಗ ಅನಾರೋಗ್ಯದ ನಿಮಿತ್ತ ಬಟನೆಗೆ ವಿದಾಯ ಹೇಳಿ ಹುಬ್ಬಳ್ಳಿ ನಗರದಲ್ಲಿ ನೆಲೆ ನಿಂತಿರುವ ಈ ಹಿರಿಯ ಕಲಾವಿದೆಯನ್ನು ಮತ್ತೊಮ್ಮೆ ಭೇಟಿ ಮಾಡಿ ಅವರ ಸಾಧನೆಗೆ ಗೌರವ ಸೂಚಿಸಿ ಬರಬೇಕೆಂದು ನಿರ್ಧರಿದ್ದೀನಿ.
ಫಯಾಜ್ ಖಾನ್ ಮತ್ತು ಜಯಲಕ್ಷ್ಮಿ ಪಾಟೀಲರ ಈ ಎರಡು ಪುಟ್ಟ ಆತ್ಮಕಥೆಗಳು ಕಲಲಾವಿದರ ಹಿಂದಿನ ಶ್ರಮ ಮತ್ತು ಹೋರಾಟದ ಬದುಕನ್ನು ನಮ್ಮ ಮುಂದೆ ತೆರೆದಿಡುವಲ್ಲಿ ಯಶಸ್ವಿಯಾಗಿವೆ.
ಎನ್.ಜಗದೀಶ್ ಕೊಪ್ಪ.

ಸೋಮವಾರ, ಮಾರ್ಚ್ 17, 2025

ಒಂದು ಅಪಮಾನವು ರಾಮರಾಜ್ ಪಂಚೆ ಉದ್ಯಮ ಬೆಳೆಯಲು ಕಾರಣವಾಯಿತು.

 



ಇಂದು ರಾಮ್ ರಾಜ್ ಪಂಚೆ ಅಥವಾ ದೋತಿಗಳು, ಶರ್ಟ್ ಗಳು, ಒಳ ಉಡುಪುಗಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧಿಯಾಗಿವೆ.
ಕೊಯಮತ್ತೂರು ಬಳಿಯ ತಿರ್ಪೂರಿನ ಕೆ.ಆರ್. ನಾಗರಾಜನ್ ಇದರ ಸಂಸ್ಥಾಪಕರು.
ಮನೆಗೊಂದು ನಿಕ್ಕರ್ ಬನಿಯನ್ ಉದ್ದಿಮೆ ಇರುವ ತಿರಪೂರ್ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದ ನಾಗರಾಜನ್ ಹತ್ತಿಯ ಪಂಚೆ ನೇಯುವುದರಲ್ಲಿ ಪರಿಣಿತರಾಗಿ 1977 ರಲ್ಲಿ ತಮ್ಮ ತಂದೆ ರಾಮಸ್ವಾಮಿಯವರ ಮೊದಲ ಹೆಸರು ತಮ್ಮ ಹೆಸರಿನ ಕೊನೆಯ ಹೆಸರು ಸೇರಿಸಿ ರಾಮರಾಜ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಪಂಚೆಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.
ಒಮ್ಮೆ ಗೆಳೆಯರೊಂದಿಗೆ ಚೆನ್ನೈ ಪಂಚತಾರಾ ಹೋಟೆಲ್ ಗೆ ಊಟಕ್ಕೆ ಹೋದಾಗ, ಪಂಚೆ ಧರಿಸಿದ ಕಾರಣಕ್ಕಾಗಿ ಇವರನ್ನು ಒಳಗೆ ಬಿಡಲಿಲ್ಲ. ನನ್ನ ನಾಡಿನ ವಸ್ತ್ರ ಸಂಸ್ಕೃತಿಗೆ ಅಪಮಾನವಾಯ್ತು ತೀರ್ಮಾನಿಸಿದ ನಾಗರಾಜ್, ಪಂಚೆ ಅಥವಾ ದೋತಿಯನ್ನು ಮುನ್ನೆಲೆಗೆ ತರಲು ನಿರ್ಧರಿಸಿದರು.
ದಕ್ಷಿಣ ಭಾರತದ ತಮಿಳು, ಕನ್ನಡ, ತೆಲುಗು, ಮಲೆಯಾಳಂ ಭಾಷೆಯ ಪ್ರಸಿದ್ಧ ನಟರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಬಳಸಿಕೊಂಡು ರಾಮರಾಜ್ ಪಂಚೆ ಮತ್ತು ಶರ್ಟ್ ಹಾಗೂ ಒಳ ಉಡುಪುಗಳನ್ನು ದೇಶಾದ್ಯಂತ ಪ್ರಚಾರಗೊಳಿಸಿ ಈಗ ಎರಡೂವರೆ ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಉದ್ಯಮವನ್ನಾಗಿ ಬೆಳಸಿದ್ದಾರೆ.
ಈ ದಿನ ಪ್ರಜಾವಾಣಿ ಯಲ್ಲಿ ಪೂರ್ಣ ಪುಟದ ಜಾಹಿರಾತು ನೋಡಿ ಈ ಕಥೆ ನೆನಪಾಯಿತು. ಬೆಂಗಳೂರು ಟಾಟಾ ಇನ್ಸಿಟ್ಯೂಟ್‌ ನಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ, ಈ ವರ್ಷ ಮೇ ತಿಂಗಳಲ್ಲಿ ನಿವೃತ್ತಿಯಾಗುತ್ತಿರುವ ನನ್ನೂರಿನ ಬಾಲ್ಯದ ಗೆಳೆಯ ದೇವರಾಜ್ ಮುವತ್ತು ವರ್ಷಗಳ ಹಿಂದೆ ತಿರಪ್ಪೂರಿನಲ್ಲಿ ಮದುವೆಯಾದಾಗ ರಾಮರಾಜ್ ಪಂಚೆಯ ಇತಿಹಾಸವನ್ನು ಅಲ್ಲಿ ಕೇಳಿದ್ದೆ.
ಎನ್.ಜಗದೀಶ್ ಕೊಪ್ಪ

ಶುಕ್ರವಾರ, ಮಾರ್ಚ್ 7, 2025

ಸುನಾಮಿ ದುರಂತ, ಅನಾಥ ಮಕ್ಕಳ ಬದುಕಿಗೆ ಹಣತೆ ಹಚ್ಚಿದವರ ಕಥನ


ಭಾರತದ ಇತಿಹಾಸದಲ್ಲಿ ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ 2004 ರ ಡಿಸಂಬರ್ ತಿಂಗಳಲ್ಲಿ ದಕ್ಷಿಣ ಭಾರತದ ಜನತೆ ಸಾಕ್ಷಿಯಾದರು. ಡಿಸಂಬರ್ 25 ರ ನಡುರಾತ್ರಿ ಹಿಂದೂ ಮಹಾಸಾಗರದ ಸುಮಾತ್ರ ಮತ್ತು ಅಂಡಮಾನ್ ದ್ವೀಪಗಳ ನಡುವೆ ಸಮುದ್ರದ ಆಳದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 9 ರಷ್ಟು ದಾಖಲಾಗಿತ್ತು. ಭೂಮಿಯ ಮೇಲೆ ಭೂಕಂಪದ ತೀವ್ರತೆ 5 ಅಥವಾ 6 ರಷ್ಟು ಇದ್ದರೆ, ಕಟ್ಟಡಗಳು ನೆಲಕ್ಕೆ ಉರುಳುವುದು, ಭೂಮಿ ಕಂಪಿಸುವುದು ಸಾಮಾನ್ಯ. 1935 ರಲ್ಲಿ ಭೂಮಿಯ ಕಂಪನವನ್ನು ಅಳೆಯಲು ಅಮೇರಿಕಾದ ಕ್ಯಾಲಿಪೋರ್ನಿಯಾದ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಚಾರ್ಲ್ಸ್ ರಿಕ್ಟರ್ ಮತ್ತು ಗುಟೆನ್ ಬರ್ಗ್ ಎಂಬ ವಿಜ್ಞಾನಿಗಳು ಭೂಕಂಪದ ತೀವ್ರತೆಯನ್ನು ಅಳೆಯುವ ಮಾಪಕವನ್ನು ಕಂಡು ಹಿಡಿದರು. ಮಾಪಕ ಅಳತೆ ಕನಿಷ್ಠ ಶೂನ್ಯದಿಂದ ಒಂಬತ್ತರವರೆಗೆ ಇದ್ದು, 2004 ರಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ಜಗತ್ತಿನ ಇತಿಹಾಸದಲ್ಲಿ ಗರಿಷ್ಠ ಮಟ್ಟವನ್ನು ಅಂದರೆ ಒಂಬತ್ತನ್ನು ತಲುಪಿತ್ತು.

ಸುನಾಮಿ ದುರಂತದಲ್ಲಿ ಅತಿ ಹೆಚ್ಚು ಮಂದಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಸಮುದ್ರದ ಆಳದಿಂದ ಎದ್ದ ಅಲೆಗಳು ನೇರವಾಗಿ ನಾಗಪಟ್ಟಣಂ ಹಾಗೂ ಸುತ್ತ ಮುತ್ತ ಐವತ್ತು ಕಿಲೊಮೀಟರ್ ವ್ಯಾಪ್ತಿಯಲ್ಲಿ ಕಡಲ ತೀರಕ್ಕೆ ಅಪ್ಪಳಿಸಿದ ಪರಿಣಾಮ ಸಮುದ್ರ ತೀರದಲ್ಲಿದ್ದ ಗ್ರಾಮಗಳು ಹಾಗೂ ಮೀನುಗಾರಿಕೆಯನ್ನು ವೃತ್ತಿಯನ್ನಾಗಿಸಿ ಬದುಕಿದ್ದ ಮೀನುಗಾರರ ಕುಟುಂಬಗಳು ಮತ್ತು ಅವರ ದೋಣಿಗಳನ್ನು ಕರಾಳ ಸುನಾಮಿಯು ಬಲಿ ತೆಗೆದುಕೊಂಡಿತು ಸಮುದ್ರ ತೀರದ ಪಟ್ಟಣ ಮತ್ತು ಹಳ್ಳಿಗಳಲ್ಲಿ ಮನೆಯೊಳಗೆ ಇದ್ದವರು ದೈತ್ಯ ಅಲೆಗಳಿಗೆ ಸಿಲುಕಿದರೂ ಸಹ ಅಲೆಯೊಂದಿಗೆ ಕೊಚ್ಚಿ ಹೋಗಲು ಸಾಧ್ಯವಾಗದೆ ಬದುಕುಳಿದ್ದರು. ಬಯಲಿನಲ್ಲಿ ಇದ್ದವರು ಸಮುದ್ರದ ಪಾಲಾಗಿದ್ದರು. ವೆಲಾಂಕಣಿಯ ಪ್ರಸಿದ್ಧ ಏಸು ಮಾತೆಯ ಮಂದಿರ ಎದುರುಗಿನ ಮುಖ್ಯ ರಸ್ತೆಯೊಂದು ಅಲ್ಲಿನ ಸುಂದರ ಕಡಲ ತೀರಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯ ಎಡಬಲದುದ್ದಕ್ಕೂ ಭಿಕ್ಷೆ ಬೇಡುವ ಸಾವಿರಾರು ಅಂಗವಿಕಲರು, ವೃದ್ಧ, ವೃದ್ಧೆಯರು ಅಲ್ಲಿ ಕೂರುವುದು ಸಾಮಾನ್ಯವಾಗಿತ್ತು. ಜೊತೆಗೆ ಯಾತ್ರಿಕರನ್ನು ಸೆಳೆಯುವ ವಿವಿಧ ಆಟಿಕೆ ಸಾಮಾನುಗಳು, ಮಣಿ ಸರ, ಮನೆಯ ಪಾತ್ರೆ ಸಾಮಾನುಗಳ ಅಂಗಡಿಗಳಲ್ಲದೆ ಸಮುದ್ರದ ತರಾವರಿ ಮೀನುಗಳ ನೂರಾರು ಹೋಟೆಲ್‌ಗಳಿದ್ದವು. ಕ್ಷಣಾರ್ಧದಲ್ಲಿ ಅಪ್ಪಳಿಸಿದ ಸುನಾಮಿಯು ವೆಲಾಂಕಣಿ ಕ್ಷೇತ್ರವೊಂದರಲ್ಲಿ ಎಂಟು ಸಾವಿರ ಮಂದಿಯನ್ನು ಅಪೋಶನ ತೆಗೆದುಕೊಂಡಿತ್ತು.
ವೆಲಾಂಕಣಿ ಊರಿನಲ್ಲಿದ್ದ ಜನರು ಹಾಗೂ ಅಲ್ಲಿನ ಚರ್ಚ್ಗಳು ಹಾಗೂ ಕ್ರೈಸ್ತ ಸನ್ಯಾಸಿನಿಯರ ತರಬೇತಿ ಕೇಂದ್ರದ ಕಟ್ಟಡದ ಒಳಗಿದ್ದವರು ಮಾತ್ರ ಸಾವಿನಿಂದ ಪಾರಾಗಿದ್ದರು. ದುರಂತದಲ್ಲಿ ಜೀವ ತೆತ್ತವರ ಬಹುತೇಕ ಮಂದಿಯನ್ನು ನೂರಾರು ಅಡಿಗಳ ಉದ್ದನೆಯ ಕಾಲುವೆ ತೆಗೆದು ಸಾಲಾಗಿ ಮಲಗಿಸಿ ಯಾವುದೇ ಅಂತ್ಯಸಂಸ್ಕಾರದ ವಿಧಿ ವಿದಾನಗಳಿಲ್ಲದೆ ಸಾಮೂಹಿಕವಾಗಿ ಹೂಳಲಾಯಿತು. ನಾಗಪಟ್ಟಣಂ ಮತ್ತು ವೆಲಾಂಕಣಿಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನೂರಾರು ಮಕ್ಕಳು ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡು ಅನಾಥರಾದವು. ಜಿಲ್ಲಾಧಿಕಾರಿ ಡಾ.ಜೆ. ರಾಧಾಕೃಷ್ಣನ್ ತಮ್ಮ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಹದಿಮೂರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹೆಣೆದ ತೆಂಗಿನ ಗರಿಗಳ ಚಪ್ಪರವನ್ನು ಹಾಕಿಸಿದರು. ಬದುಕುಳಿದ ನಿರಾಶ್ರಿತರಿಗೆ ಊಟ, ತಿಂಡಿ, ಸ್ನಾನ, ಶೌಚಾಲಯಕ್ಕೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಅವರಿಗೆ ಹಾಸಲು ಜಮಖಾನ, ಹೊದಿಯಲು ಹೊದಿಕೆಗಳನ್ನು ಹಾಗೂ ಧರಿಸಲು ಹೊಸ ವಸ್ತçಗಳನ್ನು ಪೂರೈಸಲಾಯಿತು. ಪಂಚೆ. ಟವಲ್, ಸೀರೆಗಳು ಹಾಗೂ ಇತರ ವಸ್ತುಗಳು ರಾಜ್ಯದ ಇತರೆ ಮೂಲೆ ಮೂಲೆಗಳಿಂದ ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿಗೆ ರಾಶಿಯ ರೂಪದಲ್ಲಿ ಬಂದು ತಲುಪಿದವು. ಸುಮಾರು ಆರು ಸಾವಿರ ಮಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಗೂ ಎಂಟು ಸಾವಿರ ಮಂದಿಗೆ ನಾಗೂರು ದರ್ಗಾದಲ್ಲಿ ಅಲ್ಲಿನ ಮುಸ್ಲಿಂ ಸಮುದಾಯದ ಜನತೆ ಆಶ್ರಯ ಕಲ್ಪಿಸಿದರು.
ಸರ್ಕಾರ ಅಥವಾ ಜಿಲ್ಲಾಡಳಿತದ ಮುಂದೆ ಸುನಾಮಿ ದುರಂತದ ಪರಿಹಾರ ಕಾರ್ಯಗಳ ಜೊತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸುವುದು ಮತ್ತು ಜೀವ ಉಳಿಸಿಕೊಂಡು ಸಮಗ್ರ ಆಸ್ತಿ ಕಳೆದುಕೊಂಡವರಿಗೆ ನೆಲೆ ಒದಗಿಸಿಕೊಡುವುದು ಆದ್ಯತೆಯ ಕೆಲಸವಾಯಿತು. ಕಾರೈಕಲ್ ಮತ್ತು ಕುಂಭಕೋಣಂ ಸುತ್ತ ಮುತ್ತ ನೆಲೆಸಿರುವ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು ಹಾಗೂ ಜಮೀನ್ದಾರರು ಟೆಂಪೋ ಹಾಗೂ ಆಟೋಗಳಲ್ಲಿ ನಾಗಪಟ್ಟಣಂ ಮತ್ತು ನಾಗೂರ್ ದರ್ಗಾಕ್ಕೆ ಅಕ್ಕಿ, ಬೇಳೆ, ತರಕಾರಿ, ಹಾಲು, ಹೀಗೆ ದಿನಸಿ ವಸ್ತುಗಳನ್ನು ಉಚಿತವಾಗಿ ಸರಬರಾಜು ಮಾಡತೊಡಗಿದರು. ಸುನಾಮಿಯ ದುರಂತದಲ್ಲಿ ನಲುಗಿ ಬದುಕುಳಿದವರ ಮನದಲ್ಲಿ ಯಾರು ಯಾವ ಜಾತಿ ಅಥವಾ ಯಾವ ಧರ್ಮ ಎಂಬ ಭಾವನೆಯಿರಲಿಲ್ಲ. ಉಣಬಡಿಸುತ್ತಿದ್ದವರನ್ನು ಕೃತಜ್ಞತೆಯ ಭಾವದಿಂದ ನೋಡುತ್ತಾ, ಒಡಲಾಳದ ಹಸಿವು ಮತ್ತು ಮನದಾಳದ ನೋವನ್ನು ಹಿಂಗಿಸಿಕೊಳ್ಳುತ್ತಿದ್ದರು.
ಜಿಲ್ಲಾಧಿಕಾರಿ ಡಾ.ರಾಧಾಕೃಷ್ಣನ್ ಅವರ ಕ್ರಿಯಾಶೀತೆಯನ್ನು ಕೇವಲ ಎರಡು ದಿನದ ಅವಧಿಯಲ್ಲಿ ಕಂಡು ನಾನು ಬೆರಗಾಗಿದ್ದೆ. ತಂದೆ, ತಾಯಿಯರನ್ನು ಕಳೆದುಕೊಂಡ ನೂರಕ್ಕೂ ಹೆಚ್ಚು ಮಂದಿ ಬಾಲಕ, ಬಾಲಕಿಯರನ್ನು ರಕ್ಷಿಸಿ, ಅವರಿಗೆ ನಾಗಪಟ್ಟಣಂ ಜಿಲ್ಲಾ ಕೇಂದ್ರದ ಅಕ್ಕರೈ ಪೇಟೈ ಎಂಬ ಪ್ರದೇಶದಲ್ಲಿ ಅಣ್ಣೈ ಸತ್ಯಾ ಎಂಬ ತಾತ್ಕಾಲಿಕ ಅನಾಥ ಮಕ್ಕಳ ಆಶ್ರಮವನ್ನು ಸ್ಥಾಪಿಸಿ, ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಿದರು. ನಾಲ್ಕು ತಿಂಗಳ ಬಾಲಕಿಯಿಂದ ಹಿಡಿದು ಎಂಟು ವರ್ಷದ ವರ್ಷದ ವಯಸ್ಸಿನ ಮಕ್ಕಳು ಅಲ್ಲಿದ್ದರು. ಯಾವ ಕಾರಣಕ್ಕೂ ಮಕ್ಕಳನ್ನು ಗದರದೆ, ತಂದೆ ತಾಯಿಯ ಪ್ರೀತಿ ತೋರಿಸಬೇಕೆಂದು ಸಿಬ್ಬಂದಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದರು.
ಒಂದು ದಿನ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ನಿರಾಶ್ರಿತರನ್ನು ಉದಯ ಟಿ.ವಿ. ಪರವಾಗಿ ನಾನು ಹಾಗೂ ಚೆನ್ನೈ ನಗರದಿಂದ ಬಂದಿದ್ದ ಸನ್ ಟಿ.ವಿ. ಮುಖ್ಯ ಉಪಸಂಪಾದಕರಾದ ಮಣಿವಣ್ಣನ್ ಮಾತನಾಡಿಸುತ್ತಾ ಇರುವಾಗ, ಡಾ.ಜೆ. ರಾಧಾಕೃಷ್ಣನ್ ಅವರು ತಮ್ಮ ನಿವಾಸಕ್ಕೆ ಚಹಾ ಕುಡಿಯಲು ನಮ್ಮನ್ನು ಆಹ್ವಾನಿಸಿದರು. ಮಣಿವಣ್ಣನ್ ನನ್ನನ್ನು ಅವರಿಗೆ ಪರಿಚಯಿಸುತ್ತಾ, ಇವರು ಬೆಂಗಳೂರು ಉದಯ ಟಿ.ವಿ. ಯಿಂದ ಬಂದಿದ್ದಾರೆ ಎಂದು ಹೇಳಿದಾಕ್ಷಣ, ಡಾ.ರಾಧಾಕೃಷ್ಣನ್ ನನ್ನತ್ತ ತಿರುಗಿ ‘’ ಅರೆ, ನೀವು ಕನ್ನಡದವರು ಎಂದು ನನಗೆ ಹೇಳಲೇ ಇಲ್ಲ, ಕ್ಯಾಮರಾಮನ್‌ಗಳ ಜೊತೆ ತಮಿಳು ಭಾಷೆಯಲ್ಲಿ ನೀವು ಮಾತನಾಡುತ್ತಿದ್ದಿರಿ. ಹಾಗಾಗಿ ನಮ್ಮವರೇ ಇರಬೇಕು’’ ಎಂದು ಭಾವಿಸಿದ್ದೆ ಎನ್ನುತ್ತಾ ಸ್ವಚ್ಛವಾದ ಕನ್ನಡದಲ್ಲಿ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು. ‘’ ಏನ್ಸಾರ್ ನೀವು ಕನ್ನಡಿಗರಾ?’’ ಎಂದು ಪ್ರಶ್ನಿಸಿದೆ. ಇಲ್ಲ ನಾನು ಮೂಲತಃ ತಮಿಳುನಾಡಿನವನು. ನನ್ನ ತಂದೆ ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದ ಕಾರಣ ಬಹುತೇಕ ಬಾಲ್ಯವನ್ನು ಉತ್ತರ ಭಾರತದಲ್ಲಿ ಕಳೆದೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಬಿ.ಎಸ್ಸಿ ಹಾಗೂ ಎಂ.ಎಸ್ಸಿ. ಪದವಿಯನ್ನು ನಿಮ್ಮ ಬೆಂಗಳೂರಿನ ಹೆಬ್ಬಾಳ ಕಾಲೇಜಿನಲ್ಲಿ ಕಲಿತೆ. ಹಾಗಾಗಿ ಐದು ವರ್ಷ ಅಲ್ಲಿದ್ದ ಕಾರಣ ನಾನು ಕನ್ನಡಿಗನಾಗಿದ್ದೆ ಎಂದು ಹೇಳುವುದರ ಮೂಲಕ ಬೆಂಗಳೂರಿನ ಬದುಕನ್ನು ಖಷಿಯಿಂದ ನೆನಪಿಸಿಕೊಂಡರು. ನಂತರ 1992 ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಐ.ಎ.ಎಸ್.ಅಧಿಕಾರಿಯಾಗಿ ತಮಿಳುನಾಡಿಗೆ ಬಂದ ಕಥೆಯನ್ನು ವಿವರಿಸಿದರು.
ಅವರ ನಿವಾಸದಲ್ಲಿ ಚಹಾ ಕುಡಿಯುತ್ತಾ, ತಮಿಳುನಾಡು ಮುಖ್ಯಮಂತ್ರಿ ಕೆ.ಜಯಲಲಿತಾ ಅವರ ಬಗ್ಗೆ ಇಟ್ಟಿರುವ ಅಪಾರವಾದ ವಿಶ್ವಾಸದ ಬಗ್ಗೆ ಪ್ರಶ್ನಿಸಿದೆ. ಡಾ. ಜೆ. ರಾಧಾಕೃಷ್ಣನ್ 1992ರಲ್ಲಿ ಉಪವಿಭಾಗಾಧಿಕಾರಿಯಾಗಿ ತೂತ್ತುಕುಡಿಯಲ್ಲಿ ಸೇವೆ ಸಲ್ಲಿಸಿ, 1994 ರಲ್ಲಿ ಅವರು ಸೇಲಂ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಅಲ್ಲಿ ನಿರಂತರ ನಡೆಯುತ್ತಿದ್ದ ಹೆಣ್ಣು ಶಿಶು ಹತ್ಯೆಯ ವಿರುದ್ಧ ಸಮರ ಸಾರಿದ ಇತಿಹಾಸವನ್ನು ನನ್ನೆದುರು ಬಿಚ್ಚಿಟ್ಟಿರು. ತಮಿಳುನಾಡಿನಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಗತಾನೆ ಜನಿಸಿದ ಹೆಣ್ಣು ಮಕ್ಕಳನ್ನು ಮತ್ತು ವಾಸಿಯಾಗದ ಕಾಯಿಲೆಯಿಂದ ಬಳಲುವ ವೃದ್ಧ ತಂದೆ ತಾಯಿಯರನ್ನು ವಿಷ ನೀಡಿ ಕೊಲ್ಲುವ ಪದ್ಧತಿ ಇದೆ. ಸೇಲಂ ಜಿಲ್ಲೆಯ ಗೌಂಡರ್ ಸಮುದಾಯ (ಒಕ್ಕಲಿಗರು) ವೆಲ್ಲೂರು, ತಿರುವಣಾ ಮಲೈ ಪ್ರದೇಶದಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯ ಹಾಗೂ ಮಧುರೈ ಪ್ರಾಂತ್ಯದ ಉಸಿಲಂಪಟ್ಟಿ ತಾಲ್ಲೂಕಿನ ಕಳ್ಳಾರ್ ಎಂಬ ಭೂಹೀನ ಕೃಷಿ ಕಾರ್ಮಿಕರಲ್ಲಿ ಈ ಅನಿಷ್ಠ ಪದ್ಧತಿ ಆಚರಣೆಯಲ್ಲಿದೆ. ಪ್ರತಿ ಐದಾರು ಹಳ್ಳಿಗಳಲ್ಲಿ ಮಕ್ಕಳನ್ನು ಕೊಲ್ಲುವ ವೃತ್ತಿಯಲ್ಲಿ ಪಳಗಿದ ಮುದುಕಿಯರಿದ್ದು, ಅವರ ಕೈಗೆ ಶಿಶುವನ್ನು ಒಪ್ಪಿಸಿದರೆ, ಊರಾಚೆ ಕೊಂಡೊಯ್ದು ಮಗುವಿನ ಬಾಯಿಗೆ ಕಳ್ಳಿಗಿಡದ ಹಾಲು ಹಾಕಿ ಅಥವಾ ಭತ್ತವನ್ನು ತುಂಬಿ ಕೊಲ್ಲುತ್ತಾರೆ. ಅದೇ ರೀತಿ ವಯಸ್ಸಾದ ತಂದೆ ತಾಯಿಗಳನ್ನು ಕುಟುಂಬದ ಹಿರಿಯರು ಮತ್ತು ಮಕ್ಕಳು ಸಾಮೂಹಿಕವಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡು ಎಳನೀರು ಅಥವಾ ಹಾಲಿಗೆ ವಿಷ ಬೆರೆಸಿ ಕೊಲ್ಲುವುದು ಸಾಮಾನ್ಯ ಸಂಗತಿಯಾಗಿತ್ತು.


ಮಾನವೀಯ ಮುಖದ ನಿಷ್ಟಾವಂತ ಅಧಿಕಾರಿಯಾಗಿದ್ದ ಡಾ.ರಾಧಾಕೃಷ್ಣನ್ ಅವರು ಹೆಣ್ಣು ಮಕ್ಕಳ ಶಿಶು ಹತ್ಯೆಯ ವಿರುದ್ಧ ಸಮರ ಸಾರುವುದರ ಜೊತೆಗೆ ಹಳ್ಳಿ ಹಳ್ಳಿಗಳನ್ನು ತಿರುಗಿ ಜನತೆಗೆ ಎಚ್ಚರಿಸಿದರು. ತಮಿಳುನಾಡಿನಲ್ಲಿ 1980 ರ ದಶಕದಲ್ಲಿ ಪ್ರತಿ ಸಾವಿರ ಗಂಡುಮಕ್ಕಳಿಗೆ 972 ಹೆಣ್ಣುಮಕ್ಕಳ ಲಿಂಗಾನುಪಾತ ಇದ್ದುದ್ದು 1994ರಲ್ಲಿ 932 ಕ್ಕೆ ಕುಸಿದಿತ್ತು. ರಾಧಾಕೃಷ್ಣನ್ ಅವರ ಕಠಿಣ ಕ್ರಮ ಮತ್ತು ಜಾರಿಗೆ ತಂದ ಕಾನೂನು ಇಡೀ ರಾಜ್ಯಾದಂತ ಪ್ರಚಾರವಾಯಿತು. ಸಹಜವಾಗಿ ಹೆಣ್ಣುಮಗಳಾಗಿದ್ದ ಮುಖ್ಯಮಂತ್ರಿ ಕೆ.ಜಯಲಿತಾ ಅವರಿಗೆ ರಾಧಾಕೃಷ್ಣನ್ ಓರ್ವ ನಿಷ್ಠಾವಂತ ನಂಬಿಕೆಯ ಅಧಿಕಾರಿಯಾದರು. ಯಾವುದೇ ಜಿಲ್ಲೆಯ ಏನೇ ಸಮಸ್ಯೆಗಳಿದ್ದರೂ ಅಲ್ಲಿಗೆ ವಿಶೇಷ ಕರ್ತವ್ಯದ ಮೇಲೆ ಕಳಿಸಿಕೊಡುತ್ತಿದ್ದರು. ನಾಗಪಟ್ಟಣಂ ಸುನಾಮಿ ದುರಂತದಲ್ಲಿ ಅವರ ಮನಸ್ಸಿನಲ್ಲಿ ಹೊಳೆದ ಮೊದಲ ಹೆಸರು ಡಾ.ಜೆ.ರಾಧಾಕೃಷ್ಣನ್ ಹಾಗಾಗಿ ತಂಜಾವೂರು ಜಿಲ್ಲಾಧಿಕಾರಿಯಾಗಿದ್ದ ಅವರನ್ನು ನಾಗಪಟ್ಟಣಂ ಜಿಲ್ಲೆಗೆ ವರ್ಗಾಯಿಸಲಾಯಿತು. ಮುಖ್ಯಮಂತ್ರಿ ಹಾಗೂ ತಮಿಳುನಾಡು ಜನತೆಯ ನಿರೀಕ್ಷೆಯನ್ನು ಡಾ. ಜೆ. ರಾಧಾಕೃಷ್ಣನ್ ಹುಸಿ ಮಾಡಲಿಲ್ಲ.
ಸರ್ಕಾರಿ ಆಶ್ರಯದಲ್ಲಿ ಇದ್ದ ಬಾಲಕ, ಬಾಲಕಿಯರ ಭವಿಷ್ಯದ ಜವಾಬ್ದಾರಿ ಹೊತ್ತ ಅವರು ಅನೇಕ ದಾನಿಗಳನ್ನು ಹಿಡಿದು ಎಲ್ಲರನ್ನೂ ವಿದ್ಯಾವಂತರನ್ನಾಗಿ ಮತ್ತು ಉದ್ಯೋಗಸ್ಥರಾಗಿ ಸ್ವತಂತ್ರ ಬದುಕನ್ನು ರೂಪಿಸಿಕೊಳ್ಳುವಲ್ಲಿ ನೆರವಾದರು. 2008 ರಲ್ಲಿ ಅಣ್ಣೈಸತ್ಯಾ ಶಾಲೆಯಲ್ಲಿ ಮಕ್ಕಳ ಪಾಲಿಗೆ ತಾಯಿಯಂತ ಇದ್ದ ಸಮಾಜ ಕಲ್ಯಾಣ ಇಲಾಖೆಯ ಸೂರ್ಯಕಲಾ ಎಂಬ ಮಹಿಳಾ ಅಧಿಕಾರಿ ನಿಧನರಾದಾಗ, ಅವರ ಸ್ಥಾನವನ್ನು ಅದೇ ಅನಾಥ ಮಕ್ಕಳ ಶಾಲೆಯಲ್ಲಿ ಬೆಳೆದು ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಮಾಡಿರುವ ತಮಿಳರಸಿ ಎಂಬ ಹೆಣ್ಣುಮಗಳು ಹೊತ್ತಿದ್ದಾಳೆ. ಆಕೆಯು ಚೆನ್ನೆöÊ ನಗರದಲ್ಲಿ ಐದು ವರ್ಷ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ದುಡಿದಿದ್ದಳು. ಅನೇಕ ದಾನಿಗಳ ನೆರವಿನಿಂದ ರಾಧಾಕೃಷ್ಣನ್ ಅವರು ನಾಗಪಟ್ಟಣಂ ಹೊರವಲಯದ ಸಮಂತನ್ ಪಟ್ಟೈ ಎಂಬ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಅನಾಥ ಮಕ್ಕಳಿಗಾಗಿ ವಸತಿ ಮತ್ತು ಶಾಲೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ವಕೀಲ ಮನೋಜ್ ಎಂಬುವರು ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿದರು. ರಾಧಾಕೃಷ್ಣನ್ ನಾಗಪಟ್ಟಣಂ ಅನ್ನು ತೊರೆದರೂ ಸಹ ಈ ಶಾಲೆಯ ಮಕ್ಕಳನ್ನು ಮರೆಯಲಿಲ್ಲ.
ಅನಾಥಾಶ್ರಮದ ಮಕ್ಕಳು ವಿದ್ಯಾವಂತರಾಗಿ ಅದರಲ್ಲೂ ಬಿ.ಎ. ಬಿ.ಕಾಂ. ಬಿ.ಎಸ್ಸಿ. ಹೀಗೆ ಪದವಿ ಗಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಖಾಸಾಗಿ ಸಂಸ್ಥೆಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಸೌಮ್ಯ ಮತ್ತು ಮೀನಾ ಎಂಬ ಬಾಲಕಿಯರು ಯಾವುದೇ ಪೋಷಕರು ದೊರೆಯದೆ ಶಾಲೆಯಲ್ಲಿ ಉಳಿದಿದ್ದರು. ಇವರಲ್ಲಿ ಸುನಾಮಿ ದುರಂತದಲ್ಲಿ ನಾಲ್ಕು ವರ್ಷದ ಸೌಮ್ಯ ಎಂಬಾಕೆ ಹಾಗೂ ಒಂದು ವರ್ಷದ ಹಸುಳೆ ಮೀನಾ ಎಂಬಾಕೆ ರಾಧಾಕೃಷ್ಣನ್ ಅವರಿಗೆ ವೆಲಾಂಕಣಿಯಲ್ಲಿ ಸಿಕ್ಕಿದ್ದರು. ಇವರಿಬ್ಬರನ್ನು ನಾಗಪಟ್ಟಣಂ ನಲ್ಲಿ ಹಡಗು ಮತ್ತು ದೋಣಿ ನಿರ್ಮಿಸುವ ಉದ್ಯಮಿ ಮಣಿವಣ್ಣನ್ ಮತ್ತು ಅವರ ಪತ್ನಿ ಮಲರ್‌ವಿಳಿ ಎಂಬುವರ ವಶಕ್ಕೆ ಒಪ್ಪಿಸಿದರು. ಆ ದಂಪತಿಗಳು ಈ ಹೆಣ್ಣುಮಕ್ಕಳನ್ನ ತಮ್ಮ ಮನೆಯಲ್ಲಿರಿಸಿಕೊಂಡು ಓದಿ ಬೆಳೆಸಿದರು. ಅರ್ಥಶಾಸ್ತçದಲ್ಲಿ ಬಿ.ಎ. ಪದವಿ ಪಡೆದ ಸೌಮ್ಯಳನ್ನು ಕೆ.ಸುಭಾಷ್ ಎಂಬ ಬಿ.ಇ. ಪದವೀಧರ 2022 ರಲ್ಲಿ ಕೈ ಹಿಡಿದನು. ಈ ದಂಪತಿಗಳಿಗೆ 2024 ರಲ್ಲಿ ಹೆಣ್ಣು ಮಗು ಜನಿಸಿದಾಗ, ಹಸುಗೂಸನ್ನು ಎತ್ತಿಕೊಂಡು ಚೆನ್ನೆöÊ ನಗರದ ರಾಧಾಕೃಷ್ಣನ್ ಮನೆಗೆ ಹೋದ ಸೌಮ್ಯ ನನ್ನ ಪಾಲಿನ ತಂದೆ ತಾಯಿಗಳಾದ ನೀವು ಮೊಮ್ಮಗಳಿಗೆ ಹೆಸರು ಇಡಬೇಕು ಎಂದು ವಿನಂತಿಸಿದಾಗ, ರಾಧಾಕೃಷ್ಣನ್ ಮತ್ತು ಪತ್ನಿ ಕಾರ್ತಿಕಾ ದಂಪತಿಗಳಿಬ್ಬರೂ ಆ ಮಗುವಿಗೆ ‘’ ಸಾರಾ’’ ಎಂದು ನಾಮಕರಣ ಮಾಡಿದರು.

ನರ್ಸಿಂಗ್ ಪದವಿಯನ್ನು ಪಡೆದಿದ್ದ ಮೀನಾಳ ವಿವಾಹವು ಈ ವರ್ಷದ ಪೆಬ್ರವರಿ ತಿಂಗಳಿನಲ್ಲಿ ರಾಷ್ಟಿçÃಯ ಬ್ಯಾಂಕ್ ಉದ್ಯೋಗಿಯ ಜೊತೆ ನಾಗಪಟ್ಟಣದ ಮಾರಿಯಮ್ಮನ್ ದೇವಾಲಯದಲ್ಲಿ ನಡೆಯಿತು. ಈ ವಿವಾಹದಲ್ಲಿಯೂ ಸಹ ರಾಧಾಕೃಷ್ಣನ್ ದಂಪತಿಗಳು ವಧುವಿನ ತಾಯಿ ತಂದೆಗಳಾಗಿ ನಿಂತು ಕನ್ಯಾದಾನ ಮಾಡಿದರು. ನೊಂದವರ ಕಣ್ಣೀರಿಗೆ ಕರವಸ್ತçವಾಗುವುದನ್ನು ಬದುಕಿನ ಗುರಿಯಾಗಿಸಿಕೊಂಡರೆ, ಒಬ ್ಬನಿಷ್ಠಾವಂತ ಅಧಿಕಾರಿ ಹೇಗೆ ಅತಂತ್ರರ ಮತ್ತು ಅನಾಥರ ಬದುಕಿಗೆ ಬೆಳಕಾಗಬಲ್ಲ ಎಂಬುದಕ್ಕೆ 58 ವರ್ಷದ ಡಾ.ಜೆ.ರಾಧಾಕೃಷ್ಣನ್ ನಮ್ಮೆದುರು ಸಾಕ್ಷಿಯಾಗಿದ್ದಾರೆ. ಈಗ ಅವರು ಚೆನ್ನೆöÊ ನಗರದಲ್ಲಿ ತಮಿಳುನಾಡು ಸರ್ಕಾರದ ಆಹಾರ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರೈಕ್ಕಲ್ ಜಿಲ್ಲೆಯ ಆಕಾರೈಪಟ್ಟಿ ಎಬ ಗ್ರಾಮವು ಒಂದು ಬದಿಯಲ್ಲಿ ಸಮುದ್ರ ಮತ್ತು ಮತ್ತೊಂದೆಡ ನದಿಯನ್ನು ಒಳಗೊಂಡಿರುವ ಗ್ರಾಮ. ಈ ಗ್ರಾಮದ ಮಧ್ಯಮ ವರ್ಗದ ವೈಶಾಲಿ ವಿನೋದಿನಿ ಎಂಬಾಕೆ ಹದಿನೈದು ವರ್ಷವಾಗಿದ್ದಾಗ ಸುನಾಮಿ ದುರಂತಕ್ಕೆ ಸಾಕ್ಷಿಯಾದಳು. ಆಕೆಯ ಕುಟುಂಬದ ದೋಣಿ ಮತ್ತು ಮನೆ ನಾಶವಾದರೂ ಸಹ ಕುಟುಂಬದ ಸದಸ್ಯರು ಬದುಕಿಳಿದರು.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ವೈಶಾಲಿ ವಿದ್ಯಾರ್ಥಿ ವೇತನ ಪಡೆದು ಮದ್ರಾಸ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಎಂ.ಟೆಕ್ ಪದವಿ ಪಡೆದ ನಂತರ ಯಾವುದೇ ಉದ್ಯೋಗಕ್ಕೆ ಹೋಗದೆ ತನ್ನೂರಿಗೆ ಆಗಮಿಸಿ ‘’ಕಡಲ ಮುತ್ತು’’ ಹೆಸರಿನಲ್ಲಿ ಕಡಲ ತೀರದ ಮಕ್ಕಳಿಗೆ ಕೋಚಿಂಗ್ ಕ್ಲಾಸ್ ಆರಂಭಿಸಿದಳು. ಆರಂಭದಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿಗಳಿಂದ ಪ್ರಾರಂಭವಾದ ತರಬೇತಿ ಶಾಲೆಯಲ್ಲಿ ಈಗ ಇನ್ನೂರು ಮಕ್ಕಳು ಕಲಿಯುತ್ತಿದ್ದಾರೆ. 2024 ರಲ್ಲಿ ವೈಶಾಲಿ ವಿನೋಧಿನಿಯಿಂದ ತರಬೇತಿ ಪಡೆದವರಲ್ಲಿ 64 ಮಂದಿ ವಿದ್ಯಾರ್ಥಿಗಳು ತಮಿಳುನಾಡಿನ ಸಾರ್ವಜನಿಕ ಸೇವಾ ಆಯೋಗದಲ್ಲಿ ಉತ್ತೀರ್ಣರಾಗಿ ಗುಮಾಸ್ತ, ಪೊಲೀಸ್ ಹಾಗೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈಗ ವೈಶಾಲಿ ಪದವೀಧರರನ್ನು ಐ.ಎ.ಎಸ್. ಪರೀಕ್ಷೆಗೆ ತಯಾರು ಮಾಡುತ್ತಿದ್ದಾಳೆ ಹಣತೆ ಹಚ್ಚುವ ಕ್ರಿಯೆಯು ಹೇಗೆ ಅರ್ಥಪೂರ್ಣವಾಗಿರಬೇಕು ಎಂಬುದಕ್ಕೆ ಡಾ.ಜೆ.ರಾಧಾಕೃಷ್ಣನ್ ಮತ್ತು ವೈಶಾಲಿ ವಿನೋದಿನಿ ನಮಗೆ ಮಾದರಿಯಾಗಿದ್ದಾರೆ.
ಚಿತ್ರ ಒಂದು- ಡಾ.ಜೆ.ರಾಧಾಕೃಷ್ಣನ್

ಚಿತ್ರಎರಡು - ಸೌಮ್ಯಳ ಮಗುವಿಗೆ ರಾಧಾಕೃಷ್ಣನ್ ದಂಪತಿಗಳು ನಾಮಕರಣ ಮಾಡುತ್ತಿರುವುದು
ಚಿತ್ರ ಮೂರು- ಮೀನಾಳ ವಿವಾಹದಲ್ಲಿ ವಧುವಿನ ತಂದೆ-ತಾಯಿಗಳಾಗಿ ರಾಧಾಕೃಷ್ಣನ್ ದಂಪತಿಗಳು.
ಚಿತ್ರ ನಾಲ್ಕು- ವೈಶಾಲಿ ಬಿನೋದಿನಿ
( ಮಾರ್ಚ್ ತಿಂಗಳ ಹೊಸತು ,ಮಾಸಪತ್ರಿಕೆಯ ಬಹುಸಂಸ್ಕೃತಿ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ

ಶನಿವಾರ, ಮಾರ್ಚ್ 1, 2025

ಆಹಾರ ಸಂಸ್ಕೃತಿ ಆವೇಶದ ಮಾತುಗಳಿಗೆ ನಿಲುಕುವಂತಹದ್ದಲ್ಲ.


ಕಳೆದ 2024 ಡಿಸಂಬರ್ ರ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿಷಯವಾಗಿ ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಬಾಡೂಟವು ಸಮ್ಮೇಳನದಲ್ಲಿ ಇರಬೇಕೆಂಬ ವಿಷಯವು ಮುನ್ನೆಲೆಗೆೆ ಬಂದಿತು ಜೊತೆಗೆ ಪರ ವಿರೋಧಗಳ ಚರ್ಚೆಯೂ ನಡೆಯಿತು. ಪ್ರಾಚೀನ ಭಾರತದಲ್ಲಿ ಬ್ರಾಹ್ಮಣರೂ ಸಹ ಮಾಂಸಹಾರಿಗಳಾಗಿದ್ದರು ಎಂಬುದು ಎಷ್ಟು ಸತ್ಯವೋ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಬಂಗಾಳದ ಬ್ರಾಹ್ಮಣರು ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಇಂದಿನ ಬಾಂಗ್ಲಾ ದೇಶದ ಹಿಂದೂ ಬ್ರಾಹ್ಮಣರು ಪ್ರತಿ ನಿತ್ಯವೂ ಮೀನನ್ನು ಬಳಸುವುದರ ಮೂಲಕ ಮಾಂಸಹಾರಿಗಳಾಗಿರುವುದು ಅಷ್ಟೇ ಸತ್ಯ. ಇಲ್ಲಿ ಪ್ರಮುಖ ಪ್ರಶ್ನೆ ಇರುವುದು ಮಾಂಸಹಾರ ಕೀಳು ಮತ್ತು ಸಸ್ಯಹಾರ ಉತ್ತಮ ಎನ್ನುವ ಎಂಬ ಅಪಕ್ವ ಭಾವನೆ ಅಥವಾ ಪ್ರಜ್ಞೆ ಮಾತ್ರ. ಆಹಾರ ಸಂಸ್ಕೃತಿ ಎನ್ನುವುದು ಬಹು ಸಂಸ್ಕೃತಿಯ ನೆಲವಾದ ಭಾರತದ ನೆಲದಲ್ಲಿ ನಮ್ಮ ಪೂರ್ವಿಕರು ತಮ್ಮ ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ಪ್ರಾಕೃತಿಕ ಕೊಡುಗೆ ಮತ್ತು ಬೆಳೆಯುತ್ತಿದ್ದ ಆಹಾರ ಧಾನ್ಯಗಳ ಮೇಲೆ ಅವಲಂಬಿತವಾಗಿದ್ದ ಇತಿಹಾಸವನ್ನು ನಾವು ಮನಗಾಣಬೇಕಿದೆ.

ಪುರಾತನ ಭಾರತದ ವೇದಗಳ ಕಾಲದಲ್ಲಿ ವೈದಿಕರು ಅಥವಾ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಮತ್ತು ಸೋಮರಸ ಎಂಬ ಮಧ್ಯ ಕುಡಿಯುತ್ತಿದ್ದರು ಎಂದು ಭಾವೋದ್ವೇಗದಲ್ಲಿ ಮಾತನಾಡುವ ನಾವು, ಅದೇ ನೆಲದಲ್ಲಿ ಶೂದ್ರರು ಸೇರಿದಂತೆ ತಳವರ್ಗದ ಜನರು ವಿಶೇಷವಾಗಿ ಭೇಟೆಯಾಡಲು ಸಾಧ್ಯವಾಗದ ಆದಿವಾಸಿಗಳು ಅರಣ್ಯದಲ್ಲಿ ಗೆಡ್ಡೆ ಗೆಣೆಸು ಮತ್ತು ಹಣ್ಣು ಹಂಪಲು ತಿಂದು ಸಸ್ಯಹಾರಿಗಳಂತೆ ಜೀವಿಸಿದ್ದರು ಎಂಬುದನ್ನು ಮರೆಯುತ್ತೆವೆ. ಹಾಗಾಗಿ ಇವರಲ್ಲಿ ಯಾರು ಕೀಳು, ಯಾರು ಮೇಲು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕ್ರಿಸ್ತಪೂರ್ವ ಭಾರತದಲ್ಲಿ. ಹಿಂದೂ ಧರ್ಮದ ವಿರುದ್ಧ ಸಿಡಿದೆದ್ದು ಸೃಷ್ಟಿಯಾದ ಎರಡು ಧರ್ಮಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮ ಪ್ರಮುಖವಾದವು. ಮಹಾವೀರ ಮತ್ತು ಬುದ್ಧ ಇಬ್ಬರೂ ಸಮಕಾಲೀನರಾಗಿರುವುದು ವಿಶೇಷ. (ಬುದ್ಧನಿಗಿಂತ ಮಹಾವೀರನು ಹಿರಿಯ ವ್ಯಕ್ತಿ) ಈ ಎರಡು ಧರ್ಮಗಳ ಆಚರಣೆ ಮತ್ತು ಪ್ರಚಾರದಿಂದ ಪ್ರಸಿದ್ಧಿಗೆ ಬಂದ ಕಾರಣದಿಂದ ಹಿಂದೂ ಧರ್ಮೀಯರು ಬೆಚ್ಚಿ ಬಿದ್ದುದ್ದು ನಿಜ. ಮಹಾವೀರನು ಹಿಂಸೆಯನ್ನು ಪ್ರತಿರೋಧಿಸಿ, ಅಹಿಂಸೆಯನ್ನು ಪ್ರತಿಪಾದಿಸಿದ ಪರಿಣಾಮವಾಗಿ ಜೈನ ಧರ್ಮವನ್ನು ಅಪ್ಪಿಕೊಂಡ ಬಹುತೇಕ ಮಂದಿ ಶುದ್ಧ ಸಸ್ಯಹಾರಿಗಳಾದರು. ಈ ಪ್ರಭಾವವು ಹಿಂದೂ ಧರ್ಮದ ಬ್ರಾಹ್ಮಣರ ಮೇಲೆ ಆಗಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ.
ಹಿಂದೂ ಧರ್ಮದ ಕಡು ವೈರಿಗಳಂತೆ ಇದ್ದ ಜೈನ ಧರ್ಮ ಮತ್ತು ಬೌದ್ಧ ಧರ್ಮಗಳ ಆಚಾರ, ವಿಚಾರಗಳಲ್ಲಿ ಬಹಳಷ್ಟು ವೆತ್ಯಾಸಗಳಿದ್ದವು. ಬುದ್ಧನು ಮಹಾವೀರನ ಅಹಿಂಸೆಯ ಪರಿಕಲ್ಪನೆಯನ್ನು ಅತಿರೇಕದ ಪರಮಾವಧಿ ಎಂದು ಬಣ್ಣಿಸಿದ್ದನು. ಮೂಲತಃ ಈಶಾನ್ಯ ಭಾರತದ ಬುಡುಕಟ್ಟು ಸಮುದಾಯದಿಂದ ಬಂದ ಗೌತಮ ಬುದ್ಧನು ಶಾಕ್ಯ ಕುಲದಲ್ಲಿ ಜನಿಸಿದವನಾಗಿದ್ದು ಪಾರಂಪರಿಕವಾಗಿ ಮಾಂಸಹಾರಿಯಾಗಿದ್ದನು.
ಬುದ್ಧನು ತನ್ನ ತಾರುಣ್ಯದಲ್ಲಿ ತಾನು ನಂಬಿದ ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧನಾಗಿ ಯುದ್ಧವೆಂಬುದು ಮನುಕುಲದ ಕ್ರಾರ್ಯ ಎಂಬ ನಿಲುವಿಗೆ ಅಂಟಿಕೊಂಡ ಕಾರಣದಿಂದಾಗಿ ತಾನು ಜನಿಸಿದ ಸಮುದಾಯದಿಂದ ಗಡಿಪಾರಿನ ಶಿಕ್ಷೆಗೆ ಒಳಗಾದನು. ಕ್ರಿಸ್ತಪೂರ್ವ ಐನೂರು ವರ್ಷದ ಹಿಂದಿನ ಆ ಕಾಲದಲ್ಲಿ ಗಡಿಪಾರಾದ ವ್ಯಕ್ತಿಗೆ ಬದುಕಲು ಇದ್ದ ಏಕೈಕ ಮಾರ್ಗ ಭಿಕ್ಷಾನ್ನ ಮಾತ್ರ. ತನ್ನ ಭಿಕ್ಷಾಪಾತ್ರೆಗೆ ಅನ್ನ ಹಾಕಿದ ವ್ಯಕ್ತಿ ಯಾರು? ಆತ ಅಥವಾ ಆಕೆ ಯಾವ ಸಮುದಾಯದವರು? ಯಾವ ಧರ್ಮದವರು? ಎಂದು ಕೇಳುವ ಪರಿಸ್ಥಿತಿಯಲ್ಲಿ ಬುದ್ಧ ಮಾತ್ರವಲ್ಲದೆ, ಯಾವ ಭಿಕ್ಷಕನೂ ಇರಲಿಲ್ಲ. ಹಾಗಾಗಿ ಭಿಕ್ಷಾಪಾತ್ರೆಗೆ ಬಿದ್ದ ಆಹಾರವು ಮಾಂಸಹಾರವೆ? ಅಥವಾ ಸಸ್ಯಹಾರವೆ? ಎಂದು ಬುದ್ಧನು ಪರೀಕ್ಷಿಸಲಿಲ್ಲ. ನಾವು ತಿನ್ನುವ ಆಹಾರದಲ್ಲಿ ಮಿತಿ ಇರಬೇಕು ಎಂಬುದು ಬುದ್ಧನ ನಿಲುವಾಗಿತ್ತು. ಇದು ಮುಂದಿನ ದಿನಗಳಲ್ಲಿ ಆತನ ಧರ್ಮದ ಪ್ರಮುಖ ಅಂಶಗಳಲ್ಲಿ ಒಂದಾಯಿತು.
ಆಹಾರ ಪದ್ಧತಿ ಅಥವಾ ಸಂಸ್ಕೃತಿಯ ಕುರಿತಾಗಿ ನಮಗೆ ಈ ದೇಶದ ಉದಾಹರಣೆ ಬೇಡ. ಕರ್ನಾಟಕದ ಪ್ರಾದೇಶಿಕತೆಯ ಆಧಾರದ ಮೇಲೆ ನಮ್ಮ ಆಹಾರ ಸಂಸ್ಕೃತಿ ಮಾತ್ರವಲ್ಲದೆ, ಧರಿಸುವ ವಸ್ತç ಸಂಸ್ಕೃತಿಯೂ ಸಹ ಆಚರಣೆಯಲ್ಲಿದೆ. ದಕ್ಷಿಣ ಕರ್ನಾಟಕದ ಬಯಲು ಸೀಮೆಯಲ್ಲಿ ರಾಗಿಮುದ್ದೆ ಪ್ರಮುಖ ಆಹಾರವಾದರೆ, ಉತ್ತರ ಮತ್ತು ಹೈದರಾಬಾದ್ ಕರ್ನಾಕಟದಲ್ಲಿ ಜೋಳದ ರೊಟ್ಟಿಯ ಊಟವು ಪ್ರಮುಖ ಆಹಾರವಾಗಿದೆ. ಜೊತೆಗೆ ಅಲ್ಲಿನ ರಣ ಬಿಸಿಲಿಗೆ ಶ್ವೇತವರ್ಣsದ ವಸ್ತ್ರಗಳು ಮತ್ತು ನೆತ್ತಿ ಸುಡದಂತೆ ತಲೆಯ ಮೇಲೆ ಬಿಳಿಯ ಟೋಪಿ ಧರಿಸುವುದು ಸಾಮಾನ್ಯವಾಗಿದೆ. ಕರಾವಳಿಯಲ್ಲಿ ಮೀನು ಮತ್ತು ಕುಚ್ಚಲಕ್ಕಿ ಅಥವಾ ಕುಸಲಕ್ಕಿ ಅನ್ನ ಮತ್ತು ಗಂಜಿ ಪ್ರಮುಖ ಆಹಾರವಾದರೆ, ಮಲೆನಾಡಿನ ಪ್ರದೇಶದ ಜನರಿಗೆ ಅನ್ನದ ಮುದ್ದೆ, ಅಕ್ಕಿ ರೊಟ್ಟಿ, ಮಾಂಸಹಾರ ಪದಾರ್ಥಗಳು ಮತ್ತು ಮೀನು ಪ್ರಮುಖ ಆಹಾರವಾಗಿದೆ. ಈ ನಾಲ್ಕು ಬಗೆಯ ಆಹಾರ ಸಂಸ್ಕೃತಿಯಲ್ಲಿ ಯಾವುದು ಶ್ರೇಷ್ಠ ಅಥವಾ ಯಾವುದೇ ಕನಿಷ್ಠ ಎಂದು ನಿರ್ಧರಿಸುವುದು ಎಷ್ಟು ತ್ರಾಸದಾಯಕವೋ, ಇವುಗಳಲ್ಲಿ ಒಂದನ್ನು ಕರ್ನಾಟಕದ ಆಹಾರ ಸಂಸ್ಕೃತಿ ಎಂದು ಬಿಂಬಿಸುವುದು ಕೂಡ ಕಷ್ಟಕರವಾದ ಕ್ರಿಯೆ.
ವರ್ತಮಾನದ ಕರ್ನಾಟಕದ ಜನಗಣತಿಯ ಅಂಕಿಅಂಶವು ಅಧಿಕೃತವಾಗಿ ಪ್ರಕಟವಾಗದಿದ್ದರೂ ಸಹ, ಇಲ್ಲಿನ ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಇವರುಗಳಿಗಿಂತ ಹಿಂದುಳಿದ ವರ್ಗ ಮತ್ತು ಜಾತಿಗಳು ಅಧಿಕ ಸಂಖ್ಯೆಯಲ್ಲಿರುವುದು ವಾಸ್ತವ ಸಂಗತಿ. ಹಿಂದುಳಿದ ಜಾತಿ ಮತ್ತು ವರ್ಗದವರ ಆಹಾರ ಕ್ರಮದಲ್ಲಿ ಮೀನು ಮತ್ತು ಕೋಳಿ ಅಥವಾ ಕುರಿ, ಮೇಕೆಯ ಮಾಂಸಕ್ಕಿಂತ ದನ ಮತ್ತು ಕೋಣದ ಮಾಂಸ ಸೇವನೆ ಹೆಚ್ಚಾಗಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಅವರ ಆಹಾರ ಸಂಸ್ಕೃತಿಯನ್ನು ಮುನ್ನೆಲೆಗೆ ತಂದು, ಈಗ ಸರ್ಕಾರವು ಸಾರ್ವಜನಿಕವಾಗಿ ಕೋಣದ ಬಲಿಯನ್ನು ನಿಷೇಧಿಸಿರುವುದನ್ನು ಹಿಂಪಡೆಯಲು ಸಾಧ್ಯವೆ? ಇಂತಹ ವಿಷಯವನ್ನು ಆಹಾರ ಸಂಸ್ಕೃತಿಯ ಮೇಲೆ ಹಲ್ಲೆ ಎಂದು ಪುಂಗಿದಾಸರ ಶೈಲಿಯಲ್ಲಿ ಬಿಂಬಿಸಲಾಗದು. ಜಗತ್ತಿನ ಯಾವುದೇ ಸಂಸ್ಕೃತಿಯು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಅಪ್ಪಟ ಸಸ್ಯಹಾರಿಗಳಾಗಿದ್ದ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದ ಇಂದಿನ ಯುವತಲೆಮಾರಿನಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚುಮಂದಿ ಮಾಂಸಹಾರ ಸೇವನೆ ಮಾಡುತ್ತಾರೆ. ಅವರು ಕೆಲಸ ಮಾಡುವ ಪ್ರದೇಶಗಳು, ಪರಿಸರ ಮತ್ತು ನಗರೀಕರಣದ ಪ್ರಭಾವ ಇದಕ್ಕೆ ಮೂಲ ಕಾರಣ. ಇದು ಮಾತ್ರವಲ್ಲದೆ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಮದ್ಯಪಾನ ಕೂಡಾ ಆಹಾರದ ಒಂದು ಭಾಗವಾಗಿದೆ.
ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದಲ್ಲಿ ಜನಿಸಿದ ನಾನು, ಬಾಲ್ಯದಿಂದ ಕಂಡ ಹಾಗೆ ನನ್ನ ಅಜ್ಜನು ದಲಿತರನ್ನು ಮನೆಯ ಜಗುಲಿಗೆ ಹತ್ತಿಸಲಿಲ್ಲ. ನನ್ನಪ್ಪ ಅದೇ ದಲಿತರನ್ನು ಜಗುಲಿಯಲ್ಲಿ ಕೂರಿಸಿ ಊಟ ಹಾಕಿದರು. ಅಜ್ಜ, ಅಪ್ಪ ಇವರಿಬ್ಬರಿಗೂ ಭಿನ್ನವಾಗಿ ನಾನು ದಲಿತರನ್ನು ಮನೆಯೊಳಗೆ ಕೂರಿಸಿಕೊಂಡು ಸಹಭೋಜನೆ ಮಾಡುತ್ತಿದ್ದೀನಿ. ನನ್ನಜ್ಜ ಯಾವ ಕಾರಣದಿಂದಲೂ ಅಪ್ಪನ ಮೇಲೆ ಮತ್ತು ನನ್ನಪ್ಪನನ್ನ ಮೇಲೆ ಈ ವಿಷಯದಲ್ಲಿ ಎಂದಿಗೂ ಸಿಡುಕಲಿಲ್ಲ. ಇದು ಆಯಾ ಕಾಲಘಟ್ಟದಲ್ಲಿ ಸ್ವಾಭಾವಿಕವಾಗಿ ರೂಪುಗೊಳ್ಳುವ ಸಂಸ್ಕೃತಿಯೇ ಹೊರತು, ಕಾನೂನಿನ ಮೂಲಕ ಆಚರಣೆಗೆ ತರುವ ಸಂಸ್ಕೃತಿಯಲ್ಲ. ಜಾತಿಯ ಹೆಸರಿನಲ್ಲಿ ಮನುಷ್ಯ ಜೀವವನ್ನು ಅಪಮಾನಿಸುವುದು, ಜಾತಿಯ ಹಿನ್ನಲ್ಲೆಯಲ್ಲಿ ಕೀಳಾಗಿ ನೋಡುವುದು ಅಥವಾ ದುರ್ಬಲ ಸಮುದಾಯದ ಮೇಲಿನ ದಬ್ಬಾಳಿಕೆಗೆ ಕಾನೂನು ಕ್ರಮ ಅಗತ್ಯವೇ ಹೊರತು, ಸಂಸ್ಕೃತಿಯ ಬದಲಾವಣೆ ತಂತಾನೆ ಜರುಗುವ ಸಹಜ ಪ್ರಕ್ರಿಯೆ.

ನಮ್ಮ ಗ್ರಾಮೀಣ ಪ್ರದೇಶದ ಪೂರ್ವಿಕರು ಆಹಾರ ತಜ್ಞರಾಗಿರಲಿಲ್ಲ ಮತ್ತು ವೈದ್ಯರಾಗಿರಲಿಲ್ಲ. ತಾವು ಬದುಕಿದ್ದ ಪ್ರದೇಶಗಳಲ್ಲಿ ಬೆಳೆಯಬಹುದಾದ ಆಹಾರದ ಧಾನ್ಯಗಳ ಜೊತೆ ಅವರ ಆಹಾರ ಸಂಸ್ಕೃತಿಯು ರೂಪುಗೊಂಡಿತ್ತು. ಜೊತೆಗೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವAತೆ ಇತ್ತು. ಉತ್ತರ ಕರ್ನಾಟಕದ ಜನತೆ ಜೋಳದ ರೊಟ್ಟಿಯ ಜೊತೆಗೆ ಹೇರಳವಾಗಿ ದ್ವಿದಳ ಧಾನ್ಯ ಕಾಳುಗಳ ಪಲ್ಯ ಮತ್ತು ಹಸಿರು ಸೊಪ್ಪು, ಈರುಳ್ಳಿ, ಸೌತೆಕಾಯಿ, ಗಜ್ಜರಿ ಎಂದು ಕರೆಯುವ ಕೆಂಪುಮೂಲಂಗಿಯನ್ನು ಸೇವಿಸುತ್ತಾರೆ. ಅಲ್ಲಿನ ಕಡು ಬಿಸಿಲಿಗೆ ಅವರ ಶರೀರವು ಬೆವರಿನ ಮೂಲಕ ದೇಹನ ನೀರಿನ ಅಂಶವನ್ನು ಕಡಿಮೆ ಮಾಡುವುದರಿಂದ ಅವರು ಸೇವಿಸಿದ ಆಹಾರವು ಸುಲಭವಾಗಿ ಜೀರ್ಣವಾಗಲು ಅವರ ಈ ಆಹಾರ ಸಂಸ್ಕೃತಿಯು ಸೂಕ್ತವಾಗಿದೆ. ಅಷ್ಟೇ ಅಲ್ಲದೆ, ಕಡಲೆ ಹಿಟ್ಟು ಮತ್ತು ಹಸಿರು ಮೆಣಸಿನಕಾಯಿಯಿಂದ ತಯಾರಿಸಿದ ಮಿರ್ಚಿ, ಬೋಡಾ ಮತ್ತು ಹುರಿದ ಶೇಂಗಾ, ಒಗ್ಗರಣೆ ಹಾಕಿದ ಅವಲಕ್ಕಿ ಇವೆಲ್ಲವೂ ಅವರ ಮೆಚ್ಚಿನ ತಿನಿಸುಗಳು. ಎರಡು ದಶಕಗಳ ಕಾಲ ಉತ್ತರ ಕರ್ನಾಟಕದಲ್ಲಿ ಬದುಕಿದ ನನ್ನ ಅನುಭವದ ಪ್ರಕಾರ ಕಡಲೆ ಹಿಟ್ಟಿನಿಂದ ತಯಾರಿಸಿದ ಬೋಂಡ ಅಥವಾ ಮಿರ್ಚಿ ಇವುಗಳು ಮಲಬದ್ಧತೆಗೆ ರಾಮಬಾಣ. ಕುಡಿಯುವ ನೀರಿನ ಕೊರತೆಯಿಂದಾಗಿ ಕಡಿಮೆ ಪ್ರಮಾಣದ ನೀರು ಕುಡಿಯುವ ಅಲ್ಲಿನ ಜನರು ಆಹಾರ ಕ್ರಮದಲ್ಲಿ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲವರಾಗಿದ್ದಾರೆ.
ಬಯಲು ಸೀಮೆಯ ಜನರು ಇಂದಿನ ನೀರಾವರಿಗೆ ಮುನ್ನ ಮಳೆಯಾಶ್ರಯದಲ್ಲಿ ಬೆಳೆಯುತ್ತಿದ್ದ ರಾಗಿ, ಅವರೆ, ಹಲಸಂದೆ, ಹುರುಳಿಕಾಳು, ಆರ್ಕ, ನವಣೆ, ಎಳ್ಳು, ಹುಚ್ಚೆಳ್ಳು ಇವುಗಳಿಗೆ ತಕ್ಕಂತೆ ತಮ್ಮ ಆಹಾರ ಕ್ರಮವನ್ನು ರೂಪಿಸಿಕೊಂಡಿದ್ದರು. ರಾಗಿ ಮುದ್ದೆಯ ಜೊತೆಗೆ ಅವರೆ, ಹಲಸಂದೆ, ಹುರುಳಿಕಾಳಿನ ಸಾರು, ಸೊಪ್ಪು ಸಾರು ಸಾಮಾನ್ಯವಾಗಿತ್ತು. ನನ್ನ ಬಾಲ್ಯದಲ್ಲಿ ಹಬ್ಬದ ದಿನಗಳನ್ನು ಹೊರತು ಪಡಿಸಿದರೆ, ಹತ್ತಿರದ ನೆಂಟರು ಮನೆ ಬಂದಾಗ ಮಾತ್ರ ಕೋಳಿಸಾರಿನ ಊಟ. ಅಂದರೆ, ವರ್ಷಕ್ಕೆ ಎಂಟತ್ತು ಬಾರಿ ಮಾತ್ರ ಮಾಂಸಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಈಗಿನಂತೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಾಂಸ ತಿನ್ನುವ ಆಚರಣೆ ಅಸ್ತಿತ್ವದಲ್ಲಿ ಇರಲಿಲ್ಲ. ಕಾಲ ಕ್ರಮೇಣ ಎಲ್ಲವೂ ಬದಲಾಗುತ್ತಾ ಬಂದಿದೆ. ಮ್ಯಾಗಿ ನ್ಯೂಡಲ್, ಕೆಂಟಕಿ ಚಿಕನ್ ಮತ್ತು ಗೋಬಿ ಮಂಚೂರಿಗೆ ಒಲಿದಿರುವ ನಮ್ಮ ಮಕ್ಕಳಿಗೆ ಈಗ ಮುದ್ದೆ ಎಂದರೆ, ಮನೆಯಲ್ಲಿನ ಮುದುಕರ ಹಳೆಯ ಆಹಾರ ಎಂಬ ನಂಬಿಕೆ ಬೇರೂರಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾವ ಆಹಾರ ಸಂಸ್ಕೃತಿಯನ್ನು ಶ್ರೇಷ್ಠ ಎನ್ನುವುದು? ಇದು ನಮ್ಮ ಮುಂದಿರುವ ಪ್ರಶ್ನೆ. ಪಟ್ಟಾ ಪಟ್ಟಿ ಚಡ್ಡಿಯೂ ಮಂಡ್ಯ ನೆಲದ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿತ್ತು. ಈಗ ಊರಿಗೆ ನಾಲ್ಕು ಮಂದಿ ಇರಲಿ, ಒಬ್ಬನೇ ಒಬ್ಬ ಚಡ್ಡಿ ಹಾಕಿದ ವ್ಯಕ್ತಿ ಸಿಗುವುದಿಲ್ಲ. ಇದು ನನ್ನ ಸಂಸ್ಕೃತಿಯ ಅವಸಾನ ಎಂದು ನಾನು ಊಳಿಡಲು ಸಾಧ್ಯವೆ?
ಭಿನ್ನ ಧರ್ಮಗಳ ಸಮುದಾಯಕ್ಕೆ ಅನುಸಾರವಾಗಿ ಆಹಾರ ಸಂಸ್ಕೃತಿ ಆಚರಣೆಯಲ್ಲಿದ್ದರೂ ಸಹ, ಬಹು ಧರ್ಮಿಯರೂ ಸಾರ್ವಜನಿಕವಾಗಿ ಒಪ್ಪಿಕೊಂಡ ಹಣ್ಣು, ಸಿಹಿ, ವಿವಿಧ ತರಕಾರಿಗಳನ್ನು ಒಳಗೊಂಡ ಸಸ್ಯಹಾರಿ ಆಹಾರವು ಸಾಮಾನ್ಯವಾದ ಆಹಾರ ಪದ್ಧತಿಯಾಗಿದೆ. ಕೊಡವರು ಮತ್ತು ಮುಸ್ಲಿಂರು ತಮ್ಮ ಕುಟುಂಭದ ವಿವಾಹಗಳಲ್ಲಿ ಮಾಂಸಹಾರ ಮಾಡುತ್ತಾರೆ. ಆದರೆ, ಸಾರ್ವಜನಿಕ ಸಮಾರಂಭಗಳಲ್ಲಿ ಕ್ರೈಸ್ತರು ಸೇರಿದಂತೆ ಎಲ್ಲರೂ ಸಸ್ಯಹಾರಕ್ಕೆ ಒಲಿಯುತ್ತಾರೆ. ಸರ್ವಧರ್ಮಿಯರಿಗೆ ತೆರೆದಿಟ್ಟಿರುವ ಮಸೀದಿಗಳಿಗೆ ಹಿಂದೂಗಳು ಹೋದಾಗ, ನಮ್ಮ ಆಹಾರ ಪದ್ಧತಿ ಎಂದು ಅವರು ನಮಗೆ ದೊನ್ನೆ ಬಿರಿಯಾನಿ ಅಥವಾ ಕಬಾಬ್ ನೀಡುವುದಿಲ್ಲ ಬದಲಾಗಿ ಪ್ರೀತಿಯಿಂದ ಅಲ್ಲಿನ ಧರ್ಮಗುರುಗಳು ಕಲ್ಲುಸಕ್ಕರೆ, ಬಾದಾಮಿ ಮತ್ತು ಖರ್ಜೂರವನ್ನು ನಮ್ಮ ಕೈಗೆ ಇಡುತ್ತಾರೆ. ಅದೇ ರೀತಿಯಲ್ಲಿ ಕ್ರೆöÊಸ್ತ ಧರ್ಮದ ಚರ್ಚುಗಳಲ್ಲಿ ಸಿಹಿ ಪದಾರ್ಥ ಅಥವಾ ಕೇಕ್ ಅನ್ನು ನೀಡುವುದು ವಾಡಿಕೆ. ಈ ಕಾರಣದಿಂದಾಗಿ ಹಿಂದೂಧರ್ಮದ ಬಹುತೇಕ ಎಲ್ಲಾ ದೇವಾಲಯಗಳು ಅನ್ನ ಸಂತರ್ಪಣೆಯ ಹೆಸರಿನಲ್ಲಿ ಎಲ್ಲರಿಗೂ ಸಲ್ಲುವ ಸಸ್ಯಹಾರದ ಊಟವನ್ನು ನೀಡುತ್ತಿವೆ.
ಖಾಸಾಗಿ ಸಮಾರಂಭಗಳು ಅಥವಾ ಔತಣಕೂಟಗಳು ಅವುಗಳನ್ನು ಏರ್ಪಡಿಸುವ ವ್ಯಕ್ತಿಗಳ ಅಭಿರುಚಿಗೆ ತಕ್ಕಂತೆ ಇರುತ್ತವೆ. ಅದನ್ನು ನಾವು ಪ್ರಶ್ನಿಸಲಾಗದು. ಆದರೆ, ಸಾರ್ವಜನಿಕವಾಗಿ ಎಲ್ಲಾ ಜಾತಿ ಮತ್ತು ಧರ್ಮೀಯರು ಪಾಲ್ಗೊಳ್ಳುವ ಸಮಾರಂಭಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಬ್ರಾಹ್ಮಣ, ಶೂದ್ರ, ದಲಿತ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸೇವಿಸುವ ಸಸ್ಯಹಾರದ ಆಹಾರಕ್ಕೆ ಆದ್ಯತೆಯನ್ನು ನೀಡಲಾಗುತ್ತದೆ. ಇದು ಮುಂದಿನ ದಿನಮಾನಗಳಲ್ಲಿ ಬದಲಾದರೂ ಆಶ್ಚರ್ಯಪಡಬೇಕಿಲ್ಲ. ಸಾಹಿತ್ಯ ಸಮ್ಮೇಳನಗಳು ನಡೆಯುವುದು ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಕುರಿತಾದ ಗಂಭೀರ ಚರ್ಚೆಗಳಿಗಾಗಿಯೇ ಹೊರತು, ನಾವು ಇಷ್ಟಪಡುವ ಆಹಾರವನ್ನು ಉಣ್ಣುವುದಕ್ಕಾಗಿ ಅಲ್ಲ. ಈವರೆಗೆ ನಡೆದಿರುವ ಅಥವಾ ನಡೆಯುತ್ತಿರುವ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಊಟ, ಉಪಹಾರ ಇವೆಲ್ಲವೂ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಹಸಿವು ತಣಿಸುವ ಔಪಚಾರಿಕ ಕ್ರಮವೇ ಹೊರತು, ಯಾರೊಬ್ಬರೂ ಉಣ್ಣುವುದಕ್ಕಾಗಿ ಅಲ್ಲಿ ಭಾಗವಹಿಸುವುದಿಲ್ಲ. ಮನುಷ್ಯನ ಆಹಾರ ಪದ್ಧತಿಗೆ ಜಾತಿ, ಧರ್ಮದ ಹೆಸರಿನ ಲೇಪನ ಅಂಟಿಸಿ ಬೋರ್ಗೆರೆಯುವುದು ಕ್ಷÄಲ್ಲಕ ಸಂಗತಿ. ಏಕೆಂದರೆ, ಎಲ್ಲಾ ಮಾಂಸಹಾರಿಗಳ ಆಹಾರ ಕ್ರಮದಲ್ಲಿ ಸಸ್ಯಹಾರವು ಸಹ ಒಂದು ಭಾಗವಾಗಿದೆ ಎಂಬುದನ್ನು ನಾವು ಮರೆಯಬಾರದು.
( ಮಾರ್ಚ್ ತಿಂಗಳ ಸಮಾಜ ಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಎನ್.ಜಗದೀಶ್ ಕೊಪ್ಪ)

ಮಂಗಳವಾರ, ಫೆಬ್ರವರಿ 18, 2025

ಕಾಂಗ್ರೇಸ್ ಗುಜರಿ ಅಂಗಡಿಯಲ್ಲಿ ಕೊಳೆಯುತ್ತಿರುವ ಪ್ರತಿಭಾವಂತರು.



ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಒಬ್ಬ ನಾಯಕನ ಅನಿವಾರ್ಯತೆ ತಾತ್ಕಾಲಿಕವೇ ಹೊರತು, ಆತನನ್ನು ಶಾಶ್ವತವಾಗಿ ಬಿಂಬಿಸಲಾಗದು. ಈ ದೇಶದ ದುರಂತವೆಂದರೆ ಒಬ್ಬ ರೈತ ಎನಿಸಿಕೊಂಡವನಿಗೆ ಕನಿಷ್ಠ ನೇಗಿಲು, ಗುದ್ದಲಿ ಹಿಡಿಯುವ ಅರ್ಹತೆ ಇರುತ್ತದೆ. ಅದೇ ರೀತಿಯಲ್ಲಿ ಚಮ್ಮಾರನಿಗೆ ಚರ್ಮದ ಹದ ಮಾಡುವ ಮತ್ತು ಪಾದರಕ್ಷೆಗಳನ್ನು ಹೊಲಿಯುವ ಅರ್ಹತೆ ಇರುತ್ತದೆ. ಆದರೆ, ಇಲ್ಲಿ ರಾಜಕಾರಣಿ ಮತ್ತು ಪತ್ರಕರ್ತ ಎನಿಸಿಕೊಂಡ ವ್ಯಕ್ತಿಗಳಿಗೆ ಯಾವ ಅರ್ಹತೆಯ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲದೆ ನಿವೃತ್ತಿಯ ಪ್ರಶ್ನೆಯೇ ಇಲ್ಲ. ಅವನ ಹೆಣ ಕೊಳೆಯದಿದ್ದರೆ, ಅದನ್ನು ಅಧಿಕಾರದ ಕುರ್ಚಿಯಲ್ಲಿಟ್ಟು ಅಧಿಕಾರ ನಡೆಸಲು ಇಂದಿನ ರಾಜಕಾರಣದ ಅಯೋಗ್ಯರು ಸಿದ್ಧರಿದ್ದಾರೆ.
ಇಂದಿನ ದಿನಗಳಲ್ಲಿ ಪಕ್ಷಗಳಲ್ಲಿ ಮತ್ತು ಅಧಿಕಾರದಲ್ಲಿ ಮಿಂಚುವುದು ಎಂದರೆ, ತಮ್ಮ ನಾಲಿಗೆಯನ್ನು ಹಳೆಯ ಎಕ್ಕಡಗಳಾಗಿ ಪರಿವರ್ತಿಸಿಕೊಂಡು ಪಕ್ಷದ ಶಿಸ್ತನ್ನು ಮೀರಿ ವರ್ತಿಸುವುದು ಎಂಬಂತಾಗಿದೆ. ಇದಕ್ಕೆ ಉದಾಹರಣೆ ಎಂದರೆ, ಈಗಿನ ಕಾಂಗ್ರೇಸ್ ಪಕ್ಷದ ಸಚಿವ ಕೆ.ಎನ್. ರಾಜಣ್ಣ ಮತ್ತು ಬಿ.ಜೆ.ಪಿ.ಯ ಬಸವನಗೌಡ ಯತ್ನಾಳ್ ಎಂಬ ಅಯೋಗ್ಯ ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರದ 34 ಸಚಿವರಲ್ಲಿ ಐದಾರು ಮಂದಿ ಹೊರತು ಪಡಿಸಿದರೆ, ಉಳಿದವರು ನಡೆದಾಡುವ ಶವಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈಶ್ವರ ಖಂಡ್ರೆ, ಹೆಚ್.ಕೆ.ಪಾಟೀಲ್, , ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳಕರ. ಸಂತೋಷ್ ಲಾಡ್ ಇಂತಹವರು ತಮ್ಮ ನಡೆ ನುಡಿ ಮತ್ತು ವಹಿಸಿದ ಖಾತೆಗಳಲ್ಲಿ ಕ್ರಿಯಾಶೀಲರಾಗಿರುವುದನ್ನು ಹೊರತು ಪಡಿಸಿದರೆ, ಉಳಿದವರು ಅಧಿಕಾರಕ್ಕೆ ಜಾತಿ ಬೆಂಬಲವನ್ನು ನೆಚ್ಚಿ ಕೂತಿದ್ದಾರೆ. ಮುಖ್ಯಮಂತ್ರಿಯ ಹುದ್ದೆಗೆ ಹಾತೊರೆಯುವ ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಇಲ್ಲ ಸಲ್ಲದ ಹೇಳಿಕೆ ನೀಡುವ ಈ ದಂಡಪಿಂಡಗಳು ಒಮ್ಮೆ ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಬೇಕು.
ಕರ್ನಾಟಕದ ಅತಿ ಕಡಿಮೆ ಇರುವ ಜಾತಿ ಸಮುದಾಯದಿಂದ ಬಂದ ದೇವರಾಜ ಅರಸು, ಧರ್ಮಸಿಂಗ್, ವೀರಪ್ಪಮೊಯ್ಲಿ ಇಂತಹವರು ಕಾಂಗ್ರೇಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾದರೆ, ರಾಮಕೃಷ್ಣ ಹೆಗ್ಡೆ ಜನತಾ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಇವರು ಜಾತಿ ಸಂಘಟನೆಯ ಬಲದಿಂದ ಮುಖ್ಯಮಂತ್ರಿಯಾದವರಲ್ಲ.
ತಾವು ಪ್ರತಿನಿಧಿಸುವ ಕ್ಷೇತ್ರದಿಂದ ಜಾತಿ ಮತ್ತು ಹಣ ಹಾಗೂ ತೋಳ್ಬಲದಿಂದ ಗೆದ್ದು ಬಂದವರೆಲ್ಲಾ ನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲು ಅರ್ಹರಾಗುವುದಿಲ್ಲ. ಕೆ.ಎನ್.ರಾಜಣ್ಣ, ಜಿ.ಪರಮೇಶ್ವರ, ಕೆ.ಹೆಚ್. ಮುನಿಯಪ್ಪ ಇವರ ಸಾಧನೆ ಮತ್ತು ವಹಿಸಿದ ಖಾತೆಗಳಲ್ಲಿ ತೋರಿದ ನೈಪುಣ್ಯತೆಯನ್ನು ಯಾರಾದರೂ ಬಲ್ಲವರು ಹೇಳಲಿ ನೋಡೋಣ.
ಬಸ್ ಡ್ರೈವರ್ ಆಗಿದ್ದವನು ಕ್ಲೀನರ್ ಹುದ್ದೆ ಬಯಸಿದಂತೆ, ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಹೆಚ್. ಮುನಿಯಪ್ಪ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮಗೆ ಮತ್ತು ಪುತ್ರಿಗೆ ಟಿಕೇಟ್ ಪಡೆದುದಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಳಿಯನಿಗೆ ಕೋಲಾರ ಕ್ಷೇತ್ರದಿಂದ ಟಿಕೇಟ್ ಗಾಗಿ ಹೋರಾಟ ನಡೆಸಿದ್ದರು. ಇವರ ಯೋಗ್ಯತೆ ಏನೆಂಬುದನ್ನು ಅಲ್ಲಿನ ಮತದಾರರು ಜೆ.ಡಿ.ಎಸ್. ನ ಹೊಸ ಯುವಕ ಮಹೇಶ್ ಬಾಬುವನ್ನು ಆಯ್ಕೆ ಮಾಡುವುದರ ಮೂಲಕ ತೋರಿಸಿಕೊಟ್ಟರು.
ಕಾಂಗ್ರೇಸ್ ಪಕ್ಷದ ಕುರಿತಾಗಿ ಭಜನೆ ಮಾಡುವುದು ಚಿಂತನೆಯ ಲಕ್ಷಣ ಎಂದುಕೊಂಡಿರುವ ವೈಚಾರಿಕ ಹಾಗೂ ಪ್ರಗತಿಪರರು ಎಂಬ ಬೃಹಸ್ಪತಿಗಳಿಗೆ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿ ಕಾಂಗ್ರೇಸ್ ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೆ ಸಚಿವ ಸ್ಥಾನ ಏಕೆ ದೊರೆಯಲಿಲ್ಲ ಎಂಬುದು ಗೊತ್ತಿಲ್ಲವೆ? ಈಡಿಗ ಜಾತಿಯ ಕೋಟಾದಲ್ಲಿ ನೀಡಿದ ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಅವರಿಗಿಂತ, ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪ ಹೇಗೆ ಅರ್ಹರಾದರು ಎಂಬುದರ ಬಗ್ಗೆ ಇವರು ಉತ್ತರಿಸಬೇಕಾಗಿದೆ ಮತ್ತು ಈವರೆಗೆ ಅತ್ಯಂತ ಕಳಪೆಯಾಗಿ ನಿರ್ವಹಿಸಿದ ಪ್ರಾಥಮಿಕ ಶಿಕ್ಷಣ ಖಾತೆಯ ಬಗ್ಗೆ ಇವರೆಲ್ಲರೂ ಯೋಚಿಸಬೇಕಾಗಿದೆ.
ಈಗಾಗಲೇ ಇಪ್ಪತ್ತು ತಿಂಗಳು ಮುಗಿಸಿದ ಸಿದ್ಧರಾಮಯ್ಯನವರ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಹೊರತು ಪಡಿಸಿದರೆ, ಅಭಿವೃದ್ಧಿ ಮತ್ತು ಇತರೆ ಯೋಜನೆಗಳಲ್ಲಿ ಸಾಧನೆ ಶೂನ್ಯ. ಇಂದಿನ ಮಾಧ್ಯಮಗಳು ಈಗಿನ ಸರ್ಕಾರದ ಸಚಿವರ ಖಾತೆಗಳ ಪ್ರಗತಿ ಕುರಿತು ಸರಣಿಯೋಪಾದಿಯಲ್ಲಿ ಸಮೀಕ್ಷಾ ವರದಿ ಪ್ರಕಟಿಸಿದರೆ, ಸಚಿವರೆಂಬ ಗುಜರಿ ಮಾಲುಗಳ ಬಣ್ಣ ಸಾರ್ವಜನಿಕವಾಗಿ ಬಯಲಾಗಬಲ್ಲದು. ಪ್ರಜಾವಾಣಿ ಬಳಗ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ.
ಅಯೋಗ್ಯರು ತುಂಬಿ ತುಳುಕಾಡುವ ಕಾಂಗ್ರೇಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಎಂಬ ನಿಷ್ಠಾವಂತ ಪ್ರತಿಬೆಗಳು ಅವಕಾಶ ವಂಚಿತರಾಗಿದ್ದಾರೆ. ಬಿ.ಎಲ್. ಶಂಕರ್ ಮತ್ತು ಕೋಲಾರ ಮೂಲದ ವಿ.ಆರ್. ಸುದರ್ಶನ್ ಅವರನ್ನು ಕಳೆದ ನಲವತ್ತು ವರ್ಷಗಳಿಂದ ತೀರಾ ಹತ್ತಿರದಿಂದ ನೋಡಿದವನು ನಾನು. ಅವರ ಓದು, ವಿದ್ವತ್ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಯ ನಡೆ ನುಡಿ ಹೇಗಿರಬೇಕೆಂದು ತೋರಿಸಿಕೊಟ್ಟವರು ಅವರು. ಇಬ್ಬರೂ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಹುದ್ದೆಯನ್ನು ಅತ್ಯಂತ ಘನತೆಯಿಂದ ನಿರ್ವಹಿಸಿದವರು. ಇವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆ ಕಾಂಗ್ರೇಸ್ ಗೆ ಇಲ್ಲವಾಗಿದೆ.
ಇದು ಕರ್ನಾಟಕ ಕಾಂಗ್ರೇಸ್ ಕಥೆಯಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿಯೂ ಇದೆ ಧಾರುಣ ಕಥೆ ಇದೆ. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಎಂಬ ಮುದಿ ಗೂಬೆಗಾಗಿ ಸಚಿನ್ ಪೈಲೆಟ್ ಎಂಬ ಯುವಕನ ಭವಿಷ್ಯವನ್ನು ಹಾಳುಗೆಡವಲಾಯಿತು. ಮಧ್ಯಪ್ರದೇಶದಲ್ಲಿ ದಿಗ್ವಿಜಯ ಸಿಂಗ್ ಮತ್ತು ಕಮಲನಾಥ್ ಎಂಬ ಗುಜರಿ ಸರಕುಗಳಿಗಾಗಿ ಜ್ಯೋತಿರಾಧ್ಯ ಸಿಂಧೆ ಭವಿಷ್ಯ ಮಸುಕಾದಾಗ, ಆ ಯುವಕ ಪಕ್ಷ ತ್ಯೆಜಿಸಿ ಬಿ.ಜೆ.ಪಿ. ಸೇರುವುದರೊಂದಿಗೆ ಕೇಂದ್ರ ಸಚಿವರಾದರು. ಒಂದು ಕಾಲದಲ್ಲಿ ಕಾಂಗ್ರೇಸ್ ಪಕ್ಷದ ರಾಜ್ಯವಾಗಿದ್ದ ಮಧ್ಯಪ್ರದೇಶವನ್ನು ಈ ಶತಮಾನದಲ್ಲಿ ಬಿ.ಜೆ.ಪಿ.ಯಿಂದ ವಶಪಡಿಸಿಕೊಳ್ಳುವುದು ಕಾಂಗ್ರೇಸ್ ಗೆ ಕಷ್ಟ.
ದೆಹಲಿ ಜವಹರಲಾಲ್ ವಿ.ವಿ.ಯ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಪ್ರಚಂಡ ವಾಗ್ಮಿಯಾಗಿ ಮೋದಿಯನ್ನು ಮತ್ತು ಬೆ.ಜೆ.ಪಿ. ಸರ್ಕಾರವನ್ನು ತರ್ಕಬದ್ಧವಾಗಿ ಮಾಧ್ಯಮಗಳ ಮುಂದೆ ತರಾಟೆಗೆ ತಗೆದುಕೊಳ್ಳುವ ಕನ್ಹಯ ಕುಮಾರ್ ನಂತಹ ಪ್ರತಿಭಾವಂತ ಯುವಕ ಇಂದು ರಾಜ್ಯಸಭೆಯಲ್ಲಿ ಇರಬೇಕಿತ್ತು. ಮೋದಿಯವರನ್ನು ನಿರ್ಧಾಕ್ಷಿಣ್ಯವಾಗಿ ಎದುರಿಸುವ ತಾಕತ್ತು ಇಂದು ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಮತ್ತು ಪ್ರಿಯಾಂಕ ವಾರ್ಧಗೆ ಮಾತ್ರ ಇದೆ. ಅವರಿಗೆ ಪರ್ಯಾಯವಾಗಿ ರಾಜ್ಯಸಭೆಯಲ್ಲಿ ಕನ್ಹಯ್ಯ ಕುಮಾರ್ ಎಂಬ ಬಿಹಾರ ಮೂಲದ ದಲಿತ ಹುಡುಗ ಇರಬೇಕಿತ್ತು ಎಂದು ಕಾಂಗ್ರೇಸ್ ಪಕ್ಷಕ್ಕೆ ಏಕೆ ಅನಿಸುತ್ತಿಲ್ಲ? ಆ ಯುವಕ ಇಂದು ದೆಹಲಿಯ ಹಿಂದುಳಿದ ಪ್ರದೇಶವೊಂದರ ಕೊಠಡಿಯೊಂದರಲ್ಲಿ ವಾಸ ಮಾಡುತ್ತಿದ್ದಾನೆ. ಭಾರತ ಜೋಡೋ ಯಾತ್ರೆಯ ನಂತರ ಪಕ್ಷ ಈತನನ್ನು ಮರೆತಂತಿದೆ.
ಒಂದು ಪಕ್ಷಕ್ಕೆ ಹಿನ್ನಡೆ ಅಥವಾ ಮುನ್ನಡೆ ಎಲ್ಲವೂ ತಾತ್ಕಾಲಿಕ. ಪಕ್ಷ ಬಲಿಷ್ಠವಾಗಬೇಕಾದರೆ ತಳಮಟ್ಟದ ಸಂಘಟನೆ ಮುಖ್ಯವಾಗಿರಬೇಕು. ಎಪ್ಪತ್ತು ತುಂಬಿದ ಮುದಿ ಹೋರಿಗಳನ್ನು ಕಸಾಯಿಖಾನೆಗೆ ಅಟ್ಟುವುದರ ಮೂಲಕ ಯುವ ಪ್ರತಿಭಾವಂತರಿಗೆ ಮತ್ತು ಸಜ್ಜನರಿಗೆ ಕಾಂಗ್ರೇಸ್ ಪಕ್ಷದಲ್ಲಿ ಸ್ಥಾನ ದೊರೆಯಬೇಕಿದೆ. ಇಂದಿನ ಯುವ ತಲೆಮಾರು ಕಾಂಗ್ರೇಸ್ ಪಕ್ಷದತ್ತ ಆಸಕ್ತಿ ತೋರುತ್ತಿಲ್ಲ. ಏಕೆಂದರೆ, ಅವರು ಪಕ್ಷ ಸೇರಿದರೆ, ಸಾಯುವತನಕ ಸಾಮ್ ( ವ್ಯಾಯಾಮ) ಮಾಡಬೇಕೇ ಹೊರತು ಭೀಮನಾಗಲು ಸಾಧ್ಯವಿಲ್ಲ.ಇಂದಿನ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ನಿಗಮ ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲು ಈವರೆಗೂ ಸಾಧ್ಯವಾಗಿಲ್ಲ.
ಕತ್ತೆ ಕಾಯುವ ವೃತ್ತಿಯ ಹೆಸರು ಈಗ ಕರ್ನಾಟಕ ರಾಜಕೀಯದಿಂದ ಬದಲಾಗಿದೆ. ಅದನ್ನು ಮುಖ್ಯಮಂತ್ರಿಗಳ ಸಲಹೆಗಾರರು ಎಂದು ಕರೆಯಲಾಗುತ್ತದೆ. ಹದಿನಾರು ಮಂದಿ ಸಲಹೆಗಾರರು ಏನನ್ನು ಕಿಸಿದು ಕಟ್ಟೆ ಹಾಕುತ್ತಿದ್ದಾರೆ ಎಂಬುದಕ್ಕೆ ಸಿದ್ಧರಾಮಯ್ಯನವರು ಉತ್ತರಿಸಬೇಕು. ಕಾಂಗ್ರೇಸ್ ಪಕ್ಷಕ್ಕೆ ದಲಿತರು, ಅಲ್ಪಸಂಖ್ಯಾರು, ಹಿಂದುಳಿದವರು ಆಸ್ತಿ ಎನ್ನುವ ಪರಿಕಲ್ಪನೆ ಈಗ ಬದಲಾಗಿದೆ. ದೆಹಲಿಯಲ್ಲಿ ನಡೆದ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಲಿತರು ಮತ್ತು ಮುಸ್ಲಿಂರು ಪ್ರಾಬಲ್ಯವಿದ್ದ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಅಮ್ ಆದ್ಮಿ ಪಕ್ಷ, ಹಾಗೂ ಒಂದನ್ನು ಬಿ.ಜೆ.ಪಿ. ವಶಪಡಿಸಿಕೊಂಡಿವೆ. ಎಪ್ಪತ್ತು ಸ್ಥಾನಗಳ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಗ್ರೇಸ್ ಪಕ್ಷ ಶೂನ್ಯ. ಶತಮಾನದ ಗುಜರಿ ಅಂಗಡಿಯನ್ನು ವಿಸರ್ಜಿಸಿ ಹೊಸದಾಗಿ ಪಕ್ಷವನ್ನು ಸಂಘಟಿಸಬೇಕಿದೆ
ದೇಶದ ಹಿಂದುಳಿದ ಹಾಗೂ ಅತ್ಯಂತ ಹೆಚ್ಚು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗ ಇರುವ ಉತ್ತರ ಪ್ರದೇಶ ರಾಜ್ಯದಲ್ಲಿ ಮೇಲ್ಜಾತಿ ಸಂಘಟಕರಿಂದ ಕೂಡಿದ ಬಿ.ಜೆ.ಪಿ. ಹೇಗೆ ಒಂದು ದಶಕದಿಂದ ಅಧಿಕಾರದಲ್ಲಿದೆ ಹಾಗೂ ಗದ್ದುಗೆಯನ್ನು ಶಾಶ್ವತವಾಗಿರಿಸಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಕುರಿತು ಚಿಂತಿಸಬೇಕಿದೆ. ಇದಕ್ಕೆ ವೈಚಾರಿಕ ಚಿಂತನೆಯ ಹೆಸರಿನಲ್ಲಿ ತೌಡು ಕುಟ್ಟುವ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಗ್ಗೆ ನಮ್ಮ ವಿರೋಧವಿದ್ದರೂ ತಳ ಮಟ್ಟದ ಸಂಘಟನೆ ಹೇಗಿರಬೇಕು ಎಂಬುದನ್ನು ಸಂಘ ಪರಿವಾರದಿಂದ ಕಾಂಗ್ರೇಸ್ ಒಳಗೊಂಡು ಇತರೆ ಎಲ್ಲಾ ಪಕ್ಷಗಳು ಕಲಿಯಬೇಕಿದೆ.
ಎನ್.ಜಗದೀಶ್ ಕೊಪ್ಪ
See insights and ads
All reactions:
Giridhar Karkala, Srinivas Kakkilaya and 247 others