Wednesday, 3 July 2013

ಉರಿವ ಒಲೆಯೊಳಗೆ ಬೆಂದುಹೋದವರು.ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಈ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರ ರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿಯಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಶಾಹಿ ವರ್ಗಕ್ಕೆ  ನಗರದ ಬವಣೆಗಳ ಚಿಂತೆ ಕಾಡಿದಂತೆ, ಹಳ್ಳಿಗಳ ಬಗೆಗಿನ ಚಿಂತೆಗಳು ಅವರೆನ್ನೆಂದೂ  ಕಾಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷ ಮುಗಿದು 66ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವೊತ್ತಿಗೂ ಭಾರತದಲ್ಲಿ 80 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇಲ್ಲ ಎಂಬುದು,ನಮಗೆ ಅಪಮಾನದ ಸಂಗತಿ ಎನಿಸಲಿಲ್ಲ.

ನಾವು ಭಾರತದ ಮಾಹಿತಿ ತಂತ್ರಜ್ಙಾನದ ಬಗ್ಗೆ ಮಾತನಾಡುತ್ತೀವಿ, ಹಾರಿಬಿಟ್ಟ ಉಪಗ್ರಹಗಳಬಗ್ಗೆ ಮಾತನಾಡುತ್ತೀವಿ. ಕ್ರಿಕೇಟ್ ಕುರಿತು ಮಾತನಾಡುತ್ತಿದ್ದೇವೆ, ಮನುಷ್ಯರನ್ನು ಪ್ರಾಣಿಗಳಂತೆ , ಮನೆಯೆಂಬ ಪಂಜರದೊಳಕ್ಕೆ ಕೂಡಿ ಹಾಕಿ ಅವರ ವಿಕೃತ ವರ್ತನೆಗಳನ್ನು ಮನರಂಜನೆ ಎಂಬ ಹೆಸರಿನಲ್ಲಿ ಉಣಬಡಿಸುವ ಕಾರ್ಯಕ್ರಮಗಳ ಬಗ್ಗೆ ದಿನವಿಡಿ ಚರ್ಚೆಯ ನೆಪದಲ್ಲಿ ತೌಡು ಕುಟ್ಟುತ್ತಾ,  ಬಾಯಲ್ಲಿನ ಉಗುಳು ಒಣಗಿಹೋಗುವತನಕ ಮಾತನಾಡುತ್ತಿದ್ದೇವೆ. ಆದರೆ, ನಾನು ತಿನ್ನುವ ಅನ್ನ, ಮತ್ತು ಕುಡಿಯುವ ನೀರು ಇವುಗಳಿಗಾಗಿ ಇಡೀ ಜೀವಮಾನವನ್ನು ತೇಯುತ್ತಿರುವ ಗ್ರಾಮೀಣ ಮಹಿಳೆಯರ ಬವಣೆಗಳ ಕುರಿತು ಮಾತನಾಡಲು ಮಾತ್ರ ನಮಗೆ ವ್ಯವಧಾನವಿಲ್ಲ.  ನಮ್ಮ ಗ್ರಾಮಾಂತರ ಪ್ರದೇಶಗಳ ಮನೆಗಳಲ್ಲಿ ಶೇಕಡ 75 ರಷ್ಟು ಭಾಗ ಅಡುಗೆ ಸಾಂಪ್ರದಾಯಕ ಒಲೆಗಳಲ್ಲಿ ಉರವಲು ಕಟ್ಟಿಗೆ ಮುಖಾಂತರ ಸಿದ್ದವಾಗುತ್ತಿದೆ ಎಂಬ ಅಂಶ ಯಾವತ್ತೂ ನಮ್ಮೆದೆಯ ಕದವನ್ನು ತಟ್ಟಲಿಲ್ಲ.
ನಗರ ಪ್ರದೇಶಗಳಲ್ಲಿ ಶೇಕಡ 22 ರಷ್ಟು ಮಂದಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 75 ರಷ್ಟು ಮಂದಿ ಉರವಲು ಕಟ್ಟಿಗೆ ಮತ್ತು ಸಗಣಿಯಿಂದ ತಯಾರಾದ ಬೆರಣಿಗಳನ್ನು ಉಪಯೋಗಿಸುತ್ತಿದ್ದಾರೆ. ಶೇಕಡ ನಾಲ್ಕರಷ್ಟು ಮಂದಿ ಮಾತ್ರ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಉಪಯೋಗಿಸುತ್ತಿದ್ದಾರೆ. 1992 ರ ಸಮೀಕ್ಷೆಯಲ್ಲಿ ದೇಶದ 25 ಕೋಟಿ ಜನ ಉರುವಲು ಕಟ್ಟಿಗೆ ಮತ್ತು ಹತ್ತುಕೋಟಿ ಅರವತ್ತು ಲಕ್ಷ ಜನ ಸಗಣಿಯಿಂದ ತಯಾರಾದ ಬೆರಣಿಗಳನ್ನು ಬಳಸುತ್ತಿದ್ದರು. ನಾವು ದೆಹಲಿಯ ಹೊರಭಾಗದಲ್ಲಿ ಉತ್ತರ ಪ್ರಧೇಶಕ್ಕೆ ಸೇರಿದ ಗಜಿಯಾಬಾದ್ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದರೆ, ಇಡೀ ರಾಜ್ಯದ ಬಹುತೇಕ ಗ್ರಾಮಗಳ ಮನೆಯೆದುರು ಸಗಣಿಯಿಂದ ತಯರಾದ ಬೆರಣಿಗಳ ರಾಶಿಯನ್ನು ನೋಡಬಹುದು. ಕಟ್ಟಿಗೆ ಮತ್ತು ಬೆರಣಿಯ ಬಳಕೆಯಿಂದ ಹೊರ ಬರುವ ಹೊಗೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ತೀವ್ರ ಗತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. 1970 ಮತ್ತು 1980ರ ದಶಕಗಳಲ್ಲಿ ಆಧುನಿಕ ತಂತ್ರಜ್ಙಾನದಿಂದ ತಯಾರಿಸಿದ ಹೆಚ್ಚು ಹೊಗೆಯುಗುಳದ ಮತ್ತು ಉರುವಲು ಬೇಡದ ಸುಧಾರಿತ ಒಲೆಗಳು ಅಸ್ತಿತ್ವಕ್ಕೆ ಬಂದಿದ್ದರೂ ಸಹ ಅವುಗಳು ಸಮರ್ಪಕವಾಗಿ ಬಡಕುಟುಂಬಗಳಿಗೆ ವಿತರಣೆಯಾಗಿಲ್ಲ. ಇನ್ನೂ ವಿದ್ಯುತ್ ಒಲೆಗಳಂತೂ ಹಳ್ಳಿಗಳ ಜನರ ಪಾಲಿಗೆ ಕನಸಿನ ಮಾತು. ಏಕೆಂದರೆ, ದೇಶದಲ್ಲಿ ಉತ್ಪಾದನೆಯಾಗುತ್ತಿರು  ವಿದ್ಯುತ್ ಪ್ರಮಾಣದಲ್ಲಿ ಶೇಕಡ 52 ರಷ್ಟು ಮಾತ್ರ ಹಳ್ಳಿಗಳಿಗೆ ಸಮರ್ಪವಾಗಿ ಸರಬರಾಜಾಗುತ್ತಿದೆ. ಅದು ಎಂಟರಿಂದ ಹನ್ನೆರೆಡು ಗಂಟೆಗಳವರೆಗೆ ಮಾತ್ರ.

ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.


2 comments:

  1. ಸ್ವಾರಸ್ಯಕರ ಲೇಖನ

    ReplyDelete
    Replies
    1. idu ಸ್ವಾರಸ್ಯಕರ ಲೇಖನ alla. karula balli midiva daridra stitiya anaavarana ....

      Delete